

ಕಣ್ಣ ಮುಂದೆ ಭರವಸೆಗಳೆಂಬ ನಕ್ಷತ್ರಗಳ ಸರಮಾಲೆ ತೋರಿಸಿ ಗೆದ್ದು ಬೀಗುವ ನಮ್ಮ ನಾಯಕರಿಗೆ, ಸದಾ ತಮ್ಮ ಮೂಗಿನ ನೇರಕ್ಕೇ ಆಲೋಚಿಸುತ್ತ ಸರ್ಕಾರದ ದಾರಿ ತಪ್ಪಿಸುವ ಅಧಿಕಾರಶಾಹಿಗೆ ಫ್ಲೋರೋಸಿಸ್ ಪೀಡಿತರ ಗೋಳು ಕೇಳುವುದೇ ಇಲ್ಲ.
ಈ ವಾರವೂ ಅನಿವಾರ್ಯವಾಗಿ ಫ್ಲೋರೈಡ್, ಫ್ಲೋರೊಸಿಸ್ ಬಗ್ಗೆಯೇ ಬರೆಯಬೇಕಾಗಿದೆ. ಬರೆಯುತ್ತೇನೆ ಸಹ. ಏಕೆಂದರೆ ಹತ್ತುಬಾರಿ ಕೂಗಿದರೆ ಆಡಳಿತಕ್ಕೆ ಒಂದು ಬಾರಿಯಾದರೂ ಕೇಳೀತೆಂಬ ಆಶಾಭಾವ. ಕಾಕತಾಳೀಯವೆಂಬಂತೆ ಇಂದು (ಫೆ.28) ಅಪರೂಪದ ಕಾಯಿಲೆಗಳ ಜಾಗತಿಕ ದಿನ. ಕೆಲವು ಅಪರೂಪದ ಕಾಯಿಲೆಗಳಿಗೆ ಮದ್ದಾದರೂ ಇದೆ. ಆದರೆ ಫ್ಲೋರೋಸಿಸ್ ಎನ್ನುವ ಮಾರಿ ಇದೆಯಲ್ಲ, ಇದು ದೈಹಿಕವಾಗಿಯೂ ಹಿಂಡಿ ಹಿಪ್ಪೆ ಮಾಡುವುದಷ್ಟೇ ಅಲ್ಲ, ಆರ್ಥಿಕವಾಗಿಯೂ ಚೇತರಿಸಿಕೊಳ್ಳಲಾಗದಷ್ಟು ನಿತ್ರಾಣಗೊಳಿಸಿಬಿಡುತ್ತದೆ. ಚಿಕಿತ್ಸೆ ಪಡೆದರೆ ಗುಣಮುಖರಾಗಿ ಎಂದಿನ ಸಹಜ ಬದುಕು ಸಾಗಿಸಬಹುದು ಎಂದು ಯಾರೊಬ್ಬರೂ ಹೇಳಲು ಸಾಧ್ಯವಿಲ್ಲ. ಜೀವಮಾನವಿಡೀ ದುಡಿಯಲೂ ಆಗದೆ, ಯಾರನ್ನೂ ಅವಲಂಬಿಸದೆ ಸ್ವತಂತ್ರವಾಗಿ ಬದುಕಲೂ ಆಗದೆ ದಿನ ನೂಕುವುದು ಇದೆಯಲ್ಲ, ಅದಕ್ಕಿಂತ ಘೋರ ನರಕ ಇನ್ನೊಂದಿಲ್ಲ. ಪುರಾಣಗಳಲ್ಲಿ ಕೇಳಿದ್ದ ನರಕದ ಕಥೆ ಇದರ ಮುಂದೆ ಏನೇನೂ ಅಲ್ಲ ಬಿಡಿ. ಅವರ ನರಳಾಟವನ್ನು ಕಣ್ಣಾರೆ ಕಂಡವರು ನೆಮ್ಮದಿಯಿಂದ ನಿದ್ದೆ ಮಾಡಲು ಸಾಧ್ಯವೇ ಇಲ್ಲ. ಅದಕ್ಕಿಂತ ಮುಖ್ಯವಾಗಿ ಫ್ಲೋರೈಡ್, ಫ್ಲೋರೊಸಿಸ್ ವಿಚಾರದಲ್ಲಿ ನಮ್ಮ ಪ್ರಭುತ್ವ ಏನೊಂದೂ ಮಾತನಾಡದೆ ಸುಮ್ಮನೆ ಕುಳಿತಿದೆಯಲ್ಲ? ಇದು ನಿಜವಾಗಲೂ ದುರಂತವೇ.
ದಿನದಿಂದ ದಿನಕ್ಕೆ ಹೆಚ್ಚುತ್ತ ಹೋದ ಜಲಮಾಲಿನ್ಯ, ಕುಸಿಯುತ್ತ ಸಾಗಿದ ಅಂತರ್ಜಲ ಮಟ್ಟ ಇಂದು ಒಂದು ಗುಟುಕು ನೀರನ್ನು ಗಂಟಲಿಗೆ ಹೊಯ್ದುಕೊಳ್ಳುವ ಮುನ್ನ ಹತ್ತು ಬಾರಿ ಯೋಚಿಸುವಂತೆ ಮಾಡಿದೆ. ನೀರಿನ ಸಮಸ್ಯೆ ಮಡುಗಟ್ಟುತ್ತಲೇ ಬಂದಿದೆ. ಯಾವ ಜಲಮೂಲವನ್ನು ನೋಡಿದರೂ ರಾಸಾಯನಿಕಗಳ ಕೂಪ, ಬ್ಯಾಕ್ಟೀರಿಯಾಗಳ ತವರು. ತತ್ತರಿಸಿ ಹೋಗಿವೆ ದೇಶದ ಹಳ್ಳಿಗಳು. ವಿಶ್ವಬ್ಯಾಂಕ್, ಯುನಿಸೆಫ್‌ಗಳ 'ಉದಾರ' ನೆರವಿನಲ್ಲಿ 80ರ ದಶಕದ ಬಳಿಕ ಅಂತರ್ಜಲಕ್ಕೆ ಕನ್ನ ಹಾಕಲಾರಂಭಿಸಿದ ಮೇಲಂತೂ ಬರೀ ದುರಂತ ಚಿತ್ರಣಗಳೇ. ಬೋರ್‌ವೆಲ್‌ಗಳ ಸಂಖ್ಯೆಯನ್ನು ಸರಕಾರ ಲಕ್ಷಗಳಲ್ಲಿ ಬರೆದಿಡಲು ಆರಂಭಿಸಿದಾಗಲೇ
ಸಾಮೂಹಿಕ ವಿಷ ಪ್ರಾಶನ ಆರಂಭವಾಗಿದೆ. ಇಂದು ಫ್ಲೋರೋಸಿಸ್‌ನ ಪರಿಣಾಮ ಅಂದಾಜಿಗೆ ಸಿಗದೇ ಹೋಗುತ್ತಿದೆ. ಸದ್ಯದ ಅಂಕಿ ಅಂಶದ ಪ್ರಕಾರ ದೇಶದ 66.62 ದಶಲಕ್ಷ ಮಂದಿ ಫ್ಲೋರೋಸಿಸ್ ಬಾಧೆಗೆ ತುತ್ತಾಗಿದ್ದಾರೆ. ಈ ಪೈಕಿ 6 ದಶಲಕ್ಷ ಮಂದಿ 14 ವರ್ಷಕ್ಕಿಂತಲೂ ಕೆಳಗಿನವರು ಎಂಬುದು ಆತಂಕಾರಿ.
ಕಣ್ಣ ಮುಂದೆ ಭರವಸೆಗಳೆಂಬ ನಕ್ಷತ್ರಗಳ ಸರಮಾಲೆ ತೋರಿಸಿ ಗೆದ್ದು ಬೀಗುವ ನಮ್ಮ ನಾಯಕರಿಗೆ, ಸದಾ ತಮ್ಮ ಮೂಗಿನ ನೇರಕ್ಕೇ ಆಲೋಚಿಸುತ್ತ ಸರ್ಕಾರದ ದಾರಿ ತಪ್ಪಿಸುವ ಅಧಿಕಾರಶಾಹಿಗೆ ಫ್ಲೋರೋಸಿಸ್ ಪೀಡಿತರ ಗೋಳು ಕೇಳುವುದೇ ಇಲ್ಲ. ರಾಯಚೂರು ಜಿಲ್ಲೆಯನ್ನೇ ತೆಗೆದುಕೊಳ್ಳಿ. ಇದು 'ದೋ ಅಬ್' ಅಂದರೆ ಎರಡು ನದಿಗಳ ನಾಡು ಎಂದೇ ಖ್ಯಾತ. ಕೃಷ್ಣೆ, ತುಂಗಭದ್ರೆಗಳ ಮಡಿಲಿನಲ್ಲಿ ಇದ್ದರೂ ಇಲ್ಲಿ ಅಂತರ್ಜಲ ದಿನದಿಂದ ದಿನಕ್ಕೆ ಪಾತಾಳ ಕಾಣುತ್ತಿದೆ. ನೀರಿನಲ್ಲಿ ಫ್ಲೋರೈಡ್ ಅಂಶ ಅಪಾಯಕಾರಿ ಮಟ್ಟವನ್ನೂ ಮೀರಿದೆ. ತುಮಕೂರು, ಕೋಲಾರ, ಚಿತ್ರದುರ್ಗ, ಈಶಾನ್ಯ ಕರ್ನಾಟಕದ ರಾಯಚೂರು, ಗುಲ್ಬರ್ಗ, ಬಳ್ಳಾರಿ ಜಿಲ್ಲೆಗಳಲ್ಲಂತೂ ಫ್ಲೋರೈಡ್‌ಮುಕ್ತ ಹಳ್ಳಿಗಳು ಸಿಗುವುದೇ ಇಲ್ಲ. ಕರ್ನಾಟಕದ 8,900 ಚದರ ಕಿ.ಮೀ. ಪ್ರದೇಶದಲ್ಲಿ ಫ್ಲೋರೈಡ್ ಅಪಾಯಕಾರಿ ಮಟ್ಟದಲ್ಲಿದೆ ಎಂದು ಭೂಗರ್ಭ ಶಾಸ್ತ್ರಜ್ಞರು ಗುರುತಿಸಿದ್ದಾರೆ. ಇದು ರಾಜ್ಯದ ಭೌಗೋಳಿಕ ವಿಸ್ತೀರ್ಣದ ಶೇ.4.4ರಷ್ಟು ಪ್ರದೇಶ ಅಷ್ಟೆ ಎಂದು ಕಣ್ಣುಮುಚ್ಚಿ ಕೂರುವಂತಿಲ್ಲ.
ಫ್ಲೋರೈಡ್ ಮತ್ತು ಅಂತರ್ಜಲದ ವಿಚಾರದಲ್ಲಿ ನಾವು ಅಂದರೆ ಜನತೆ ಮತ್ತು ನಮ್ಮ ಸರ್ಕಾರ ಹೀಗೆಯೇ ಕಣ್ಣಿಚ್ಚಿ ಕುಳಿತರೆ ಭವಿಷ್ಯ ಏನಾದೀತು ಎಂದು ಎಂದಾದರೂ ಊಹಿಸಿಕೊಂಡಿದ್ದೀರಾ? ಮಲೆನಾಡಿನ ತಪ್ಪಲಿನಲ್ಲಿಯೂ ಮಳೆಗಾಲ ಮುಗಿಯುತ್ತಿದ್ದಂತೆ ನೀರಿಗೆ ತತ್ವಾರ ಶುರುವಾಗುತ್ತದೆ, ಕೊಳವೆಬಾವಿಗಳು ಎಲ್ಲೆಡೆ ಎಗ್ಗಿಲ್ಲದೇ ಎಲ್ಲೆಡೆ ಹರಡಿಕೊಳ್ಳುತ್ತಿವೆ, ರಾಸಾಯನಿಕಗಳು ಭೂತಾಯಿಯ ಒಡಲನ್ನು ನಿರಂತರವಾಗಿ ಸೇರುತ್ತಲೇ ಇವೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಕೆಲವು ಗ್ರಾಮಾಂತರ ಪ್ರದೇಶಗಳಲ್ಲಿ ನೀರಿನ ಬವಣೆ ತಲೆದೋರುವುದಷ್ಟೇ ಅಲ್ಲ, ಅಂತರ್ಜಲವೇ ಸಿಗದಿರಬಹುದು. ನೀರೇ ಇಲ್ಲದ ಬದುಕನ್ನು, ಸಿಗುವ ಫ್ಲೋರೈಡ್‌ಯುಕ್ತ ನೀರು ಕುಡಿದು ನಿಶ್ಯಕ್ತರಾಗುವುದನ್ನು ಮನಸ್ಸಿನಲ್ಲಿ ಚಿತ್ರಿಸಿಕೊಂಡರೆ ಪೆಡಂಭೂತ ಸದ್ದೇ ಮಾಡದೆ ನಮ್ಮ ಕಾಲಬುಡದವರೆಗೂ ಬಂದು ನಿಂತಿರುವುದು ಅರಿವಾಗುತ್ತದೆ.
ಸಮಾಧಾನ ಎಂದರೆ ಪರಿಸ್ಥಿತಿ ಸಂಪೂರ್ಣವಾಗಿ ನಮ್ಮ ಕೈ ಮೀರಿಯೇನೂ ಹೋಗಿಲ್ಲ. ಸರ್ಕಾರದ ನಿರ್ಲಕ್ಷ್ಯ ಧೋರಣೆ ಮುಂದುವರಿದರೆ ಪರಿಸ್ಥಿತಿ ಕೈ ಮೀರುವ ದಿನಗಳು ಜಾಸ್ತಿ ದೂರದಲ್ಲಿಯೂ ಇಲ್ಲ ಎನ್ನುವುದು ಬೇರೆ ವಿಚಾರ. ತುರ್ತಾಗಿ ಆಗಬೇಕಾದದ್ದು ಎಂದರೆ ಅಂತರ್ಜಲ ಬರಿದಾಗಿರುವ ಸ್ಥಳಗಳನ್ನು ಗುರುತಿಸಿ, ಅಂತರ್ಜಲ ಮರುಭರ್ತಿಗೆ ನೀಲನಕ್ಷೆ ಸಿದ್ಧಪಡಿಸಬೇಕು. ಆ ಪ್ರದೇಶದ ಶಿಲಾರಚನೆ, ಮಣ್ಣಿನ ಗುಣ, ಭೂ ಮೇಲ್ಮೈ ಲಕ್ಷಣ, ಇಳಿಜಾರು ಮುಂತಾದ ವಿವಿಧ ತಾಂತ್ರಿಕತೆ ಸಮೀಕ್ಷೆ ನಡೆಸಿ ಆ ಸ್ಥಳವನ್ನು ಒಂದು ಜಲಾನಯನ ಪ್ರದೇಶವೆಂದು ಗುರ್ತಿಸಬೇಕು. ಅಲ್ಲಿ ನೀರು ಇಂಗಿಸುವ ಕೆಲಸ ಆಗಬೇಕು. ಆ ಜಮೀನಿನ ಇಳಿಜಾರಿಗೆ ವಿರುದ್ಧವಾಗಿ ನೆಲದೊಳಗೆ ಸುಮಾರು 15-20 ಮೀಟರ್ ಆಳದಲ್ಲಿ ಒಂದೆರಡು ಮೀಟರ್ ದಪ್ಪದ ಗೋಡೆಯನ್ನು ನೆಲದೊಳಗೆ ಅಡ್ಡವಾಗಿ ನಿರ್ಮಿಸಬೇಕು. ಇದರ ಉದ್ದ ಹರಿಯುವ ನೀರಿನ ಕಡೆಗೆ ಅನುಗುಣವಾಗಿ ಹಲವಾರು ಮೀಟರ್‌ನಷ್ಟು ದೂರ ಇದ್ದರೆ ಸಾಕು. ಹಾಗೆ ಕಟ್ಟಿದ ನೆಲದಾಳದ ಗೋಡೆಗೆ ಪಾಲಿಥಿನ್ ಕವರ್ ಅಥವಾ ಸಿಮೆಂಟ್ ಲೇಪನದಿಂದ ಮುಚ್ಚಬೇಕು. ಹೀಗೆ ನಿರ್ಮಿಸಿದ ಭೂತಳದ ಒಡ್ಡುಗಳು ತಗ್ಗಿನತ್ತ ಜಿನುಗಿ ಹರಿಯುವ ಮಳೆಯ ನೀರನ್ನು ಹಿಡಿದು ಒಂದೆಡೆ ನಿಲ್ಲಿಸುತ್ತದೆ. ಭೂಜಲವೇ ಲಭ್ಯವಿಲ್ಲದಿದ್ದ ಸ್ಥಳಗಳಲ್ಲಿ ಇಂತಹ ಕಾರ್ಯ ಅಳವಡಿಸಿದರೆ ಅಲ್ಲಿ ಕೊರೆದ ಕೊಳವೆಬಾವಿಗಳಲ್ಲಿ ಕುಡಿಯುವಷ್ಟು ನೀರನ್ನು ಜನರಿಗೆ ನೀಡಬಹುದು.
ನಮ್ಮ ಗ್ರಾಮೀಣ ಪ್ರದೇಶಗಲ್ಲಿ ಹಳ್ಳ, ಕಾಲುವೆ ಮತ್ತು ಉಪನದಿಗಳಿಗೆ ಬರವಿಲ್ಲ. ಅವುಗಳಲ್ಲಿ ಈಗ ನೀರಿನ ಹರಿವು ಇಲ್ಲದಿರಬಹುದು, ಆದರೆ ಹರಿವಿನ ಪಥವಂತೂ ಇದೆ. ಅಂಥ ಸ್ಥಳಗಳನ್ನು ಗುರುತಿಸಿ ಅಲ್ಲಿನ ಶಿಲಾ ಮತ್ತು ಮಣ್ಣಿನ ರಚನೆ ಬಗ್ಗೆ ಅಧ್ಯಯನ ನಡೆಸಬೇಕು. ನೀರು ಹರಿಯುವ ಹಳ್ಳಗಳಿಗೆ ಅಡ್ಡವಾಗಿ ಹಳ್ಳದಲ್ಲಿ ನಾಲ್ಕೈದು ಮೀಟರ್ ಆಳದ ಮತ್ತು ಸುಮಾರು ಎರಡು ಮೂರು ಮೀಟರ್ ಉದ್ದಗಲದ ಗುಂಡಿಯನ್ನು ತೋಡಬೇಕು. ಗುಂಡಿಯ ಕೆಳಗೆ ಅನುಕ್ರಮವಾಗಿ ದಪ್ಪ ಕಲ್ಲು ಅದರ ಮೇಲೆ ದಪ್ಪ ಜಲ್ಲಿ, ನಂತರ ಮೀಡಿಯಂ ಜಲ್ಲಿ, ನಂತರ ಬಟಾವಣಿ ಜಲ್ಲಿ ಭರ್ತಿ ಮಾಡಿ ಅದರ ಮೇಲೆ ಒಂದೆರಡು ಅಡಿ ಮರಳನ್ನು ಮುಚ್ಚಬೇಕು. ಹೀಗೆ ಮಾಡಿದಾಗ ಹರಿಯುವ ನೀರು ಇಂಗುಗುಂಡಿಗೆ ಧುಮುಕಿ ನೆಲದಾಳಕ್ಕೆ ಬಹಳ ಬೇಗ ಇಂಗುತ್ತದೆ. ಇಂತಹ ರಚನೆಗಳನ್ನು ನದಿ, ಹಳ್ಳ, ಕಾಲುವೆಗಳ ಉದ್ದಕ್ಕೂ ಅಲ್ಲಲ್ಲಿ ನಿರ್ಮಾಣ ಮಾಡಬೇಕು. ಈ ರಚನೆ ಅಂತರ್ಜಲ ಮರುಭರ್ತಿಗೆ ಪರಿಣಾಮಕಾರಿ ಫಲಿತಾಂಶ ನೀಡುತ್ತದೆ. ಹರಿಯುವ ಹಳ್ಳಕ್ಕೆ ಎದುರಾಗಿ ಪುಟ್ಟಪುಟ್ಟ ಅಣೆಕಟ್ಟೆಗಳನ್ನು, ಒಡ್ಡುಗಳನ್ನು ಕಟ್ಟಿ ನೀರನ್ನು ನೆಲದ ಮೇಲೆ ನಿಲ್ಲಿಸಬೇಕು. ಈಗಾಗಲೇ ಹಾಗೆ ನಿಂತ ನೀರು ನೆಲದಾಳಕ್ಕೆ ಸರಾಗವಾಗಿ ಜಿನುಗಿ ಸುತ್ತಮುತ್ತಲಿನ ಬಾವಿಗಳಲ್ಲಿ (ಕೊಳವೆ ಬಾವಿಗಳು) ಅಂತರ್ಜಲ ಮರುಪೂರೈಕೆಯಾದ ಉದಾಹರಣೆ ನಮ್ಮ ಕಣ್ಣಮುಂದಿದೆ.
ಯಾವುದೇ ಸರ್ಕಾರ ಬರಲಿ, ಶುರುವಿನಲ್ಲಿ ಸಣ್ಣ ನೀರಾವರಿ ಸಚಿವರು ಕೆರೆ, ಕೊಳ, ಹೊಂಡಗಳ ಪುನಶ್ಚೇತನದ ಮಾತನಾಡುತ್ತಾರೆ. ಅವರ ಉತ್ಸಾಹ ಹೇಗಿರುತ್ತದೆ ಎಂದರೆ ಹಸಿರಿನಿಂದ ನಲಿಯುವ ಸಮೃದ್ಧ ಹಳ್ಳಿಗಳ ಚಿತ್ರಣ ಮನದಲ್ಲಿ ತಾನಾಗಿಯೇ ಮೂಡಿಬಿಡುತ್ತದೆ. ಆಮೇಲಿನ ಕಥೆ ಅಷ್ಟೆ. ಈ ಇಲಾಖೆ ಮನಸ್ಸು ಮಾಡಿದರೆ
ಕೆರೆ, ಕೊಳ, ಹೊಂಡಗಳಲ್ಲಿ ಸಂಗ್ರಹವಾಗಿರುವ ಜೇಡಿಮಣ್ಣು, ಹೂಳು ತೆಗೆಸುವುದು ದೊಡ್ಡ ಮಾತೇ ಅಲ್ಲ. ಜೇಡಿಮಣ್ಣು ಖಾಲಿಯಾದ ಸ್ಥಳದಲ್ಲಿ ನಿಂತ ನೀರು ನೆಲದಾಳಕ್ಕೆ ಸರಾಗವಾಗಿ ಜಿನುಗುತ್ತದೆ. ರೈತರ ಜಮೀನುಗಳಲ್ಲಿ ನಿರ್ಮಿಸಿದ ಬಾವಿಗಳು ಬತ್ತಿದ್ದರೆ ಮತ್ತು ಕೊಳವೆಬಾವಿಗಳು ವಿಫಲವಾಗಿದ್ದರೆ ಮಳೆಯ ನೀರನ್ನು ಈ ರಚನೆಯ ಒಳಗೆ ನುಗ್ಗುವಂತೆ ಮಾಡುವುದೇನು ಕಷ್ಟವೆ? ಕೆರೆಕುಂಟೆಗಳಲ್ಲಿ ಅಲ್ಲಲ್ಲಿ ಕಡಿಮೆಯಾಳದ ಕೊಳವೆಬಾವಿಗಳನ್ನು ನಿರ್ಮಿಸಿ ನಿಂತ ನೀರು ನೆಲದಾಳಕ್ಕೆ ಇಂಗುವಂತೆ ಪ್ರಯತ್ನಿಸಬೇಕು. ಅಣೆಕಟ್ಟೆಗಳಿಂದ ಕಾಲುವೆ ಮೂಲಕ ನೀರನ್ನು ಹರಿಸಿ ಗ್ರಾಮಾಂತರದ ಎಲ್ಲ ಕೆರೆಗಳನ್ನು ತುಂಬಿಸುವುದು, ಹರಿಯುವ ನೀರಿಗೆ ಎದುರಾಗಿ ಜಾಕ್‌ವೆಲ್, ಚೆಕ್‌ಡ್ಯಾಂ, ಗಲ್ಲಿಪ್ಲಗ್ ಇತ್ಯಾದಿ ನೀರು ಇಂಗಿಸಬಲ್ಲ ರಚನೆಗಳನ್ನು ನಿರ್ಮಿಸುವ ಯೋಜನೆಗಳು
ಬೊಕ್ಕಸಕ್ಕೆ ಭಾರವಾಗುವಂತೆ ಭಾರಿ ಮೊತ್ತವನ್ನೇನೂ ಬೇಡುವುದಿಲ್ಲ.
ಸಾಮಾನ್ಯವಾಗಿ ರೈತರ ಜಮೀನಿನ ಉಳುಮೆ ನೆಲದಲ್ಲಿ ಬಿದ್ದ ಮಳೆಯ ನೀರು ಸ್ವಲ್ಪ ಭಾಗ ಇಂಗಬಹುದು. ಆದರೆ ಉಳುಮೆ ಮಾಡದ ಬಹುತೇಕ ಹೊಲಗಳಲ್ಲಿ ಮಳೆಯ ನೀರು ನಿಲ್ಲದೆ ತಗ್ಗಿನತ್ತ ಓಟ ಕೀಳುತ್ತದೆ. ರೈತನ ಜಮೀನುಗಳಲ್ಲಿ ಮಳೆಯ ನೀರು ಇಂಗುವಂತಾಗಬೇಕಾದರೆ ಸರ್ಕಾರ ಸೂಕ್ತ ಯೋಜನೆ ರೂಪಿಸಬೇಕು. ರೈತನ ಜಮೀನಿನಲ್ಲಿ ಅಲ್ಲಲ್ಲೇ ಬುದುಗಳನ್ನು, ಹುದಿಗಳನ್ನು ನಿರ್ಮಾಣ ಮಾಡಲು ಪ್ರೋತ್ಸಾಹಧನ ನೀಡಬೇಕು. ಹಾಗೆ ಹುದಿ-ಬುದುಗಳ ಬಳಿ ನಿಲ್ಲುವ ನೀರು ಬೆಳೆದ ಬೆಳೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಹೊಣೆ ಬೆಳೆದ ರೈತನದ್ದಾಗಿರಬೇಕು. ಹೀಗೆ ವ್ಯವಸಾಯಕ್ಕೆ ತೊಂದರೆಯಾಗದಂತೆ ಹೊಲಗಳಲ್ಲಿ ಮಳೆಯ ನೀರು ನಿಲ್ಲಲು ಅಡ್ಡಲಾಗಿ ಕಟ್ಟೆ ಕಟ್ಟಿದರೆ ನೀರು ವ್ಯರ್ಥವಾಗಿ ಹರಿದುಹೋಗುವ ಬದಲು ನೆಲದೊಳಕ್ಕೆ ಇಂಗುತ್ತದೆ. ಇದೆಲ್ಲವನ್ನೂ ಸರ್ಕಾರ ಏಕಾಂಗಿಯಾಗಿ ಮಾಡಬೇಕು ಅಂತೇನೂ ಹೇಳುತ್ತಿಲ್ಲ. ಸಂಘ-ಸಂಸ್ಥೆಗಳ ಸಹಕಾರ ಪಡೆಯಬಹುದು. ಇಂಥ ಕ್ರಮಗಳಿಂದ ತಮಗೇ ಅನುಕೂಲ ಎಂದು ಜನರಲ್ಲಿ ಅರಿವು ಮೂಡಿಸಿದರೆ ಅವರು ತಾವಾಗಿಯೇ ಕೈ ಜೋಡಿಸುತ್ತಾರೆ.
ಗ್ರಾಮೀಣ ಪ್ರದೇಶಗಳಷ್ಟೇ ಅಲ್ಲ, ಅಂತರ್ಜಲ ಮರುಭರ್ತಿ ಮಾಡುವ ನಿಟ್ಟಿನಲ್ಲಿ ನಗರ ಪ್ರದೇಶಗಳಲ್ಲೂ ಕೈಗೊಳ್ಳಬಹುದಾದ ಸಾಕಷ್ಟು ಉಪಾಯಗಳಿವೆ. ಉದ್ಯಾನಗಳಲ್ಲಿ ನೀರು ಹೆಚ್ಚಾಗಿ ಹರಿಯುವ ದಿಕ್ಕಿನಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಿ, ಈ ಇಂಗುಗುಂಡಿಗೆ ಕೊಳಚೆ ನೀರು ಹರಿಯದಂತೆ ಎಚ್ಚರವಹಿಸಬೇಕು. ರಸ್ತೆಯ ಇಳಿಜಾರಿನಲ್ಲಿ, ಸರ್ಕಾರಿ ಸ್ವಾಮ್ಯದ ಪ್ರದೇಶಗಳಲ್ಲಿ ಹರಿಯುವ ನೀರಿಗೆ ಅಡ್ಡಲಾಗಿ ಅಲ್ಲಲ್ಲೇ ಇಂಗುಗುಂಡಿಗಳನ್ನು ತೋಡಿಸಿ ಅದರ ಮೇಲೆ ಯಾವ ನಿರ್ಬಂಧವಿಲ್ಲದೆ ಜನ ಓಡಾಡುವಂತೆ ಎಚ್ಚರವಹಿಸಬೇಕು. ಇನ್ನು ನಗರವಾಸಿಗಳು ತಮ್ಮತಮ್ಮ ಮನೆಯ ಛಾವಣಿಯ ಮೇಲೆ ಬಿದ್ದ ಮಳೆಯ ನೀರು ಮನೆ ಆವರಣ ದಾಟದಂತೆ ನೋಡಿಕೊಳ್ಳಬೇಕು. ಅಂದರೆ ಮನೆಯ ಯಾವುದೇ ಭಾಗದಲ್ಲಿ ಇಂಗುಗುಂಡಿ ನಿರ್ಮಿಸಿ ಅಲ್ಲಿಗೆ ನೀರನ್ನು ಹಾಯಿಸಿ ಇಂಗಿಸುವ ಅಥವಾ ಮಳೆಯ ಕೊಯ್ಲು ಪದ್ಧತಿಯನ್ನು ಅನುಸರಿಸಿ ಮಳೆ ನೀರನ್ನು ತೊಟ್ಟಿ, ಸಂಪುಗಳಲ್ಲಿ ಶೇಖರಿಸಿ ಉಪಯೋಗಿಸುವಂಥ ವ್ಯವಸ್ಥೆ ರೂಢಿಸಿಕೊಳ್ಳಬೇಕು. ಜಲಮಂಡಳಿ ಸಕಾಲದಲ್ಲಿ ಸಾಕಷ್ಟು ನೀರನ್ನು ಒದಗಿಸದಿದ್ದಾಗ ಇಂತಹ ಮಳೆಕೊಯ್ಲು ಉಪಯೋಗಕ್ಕೆ ಬರುತ್ತದೆ. ಮಳೆಕೊಯ್ಲು ಪದ್ಧತಿಯನ್ನು ಪಟ್ಟಣದ ನಾಗರಿಕರು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ಸರ್ಕಾರ ಆದೇಶ ಹೊರಡಿಸಬೇಕು. ಮಳೆನೀರನ್ನು ಇಂಗಿಸುವ ನಿಟ್ಟಿನಲ್ಲಿ ಯಾವುದೇ ರೈತರು, ನಾಗರಿಕರು ಪ್ರಯತ್ನಕ್ಕೆ ಮುಂದಾಗದಿದ್ದರೆ ಅವರ ಮೇಲೆ ಕ್ರಮ ಜರುಗಿಸುವ ಕಟ್ಟುನಿಟ್ಟಿನ ಕಾನೂನು ಜಾರಿಗೆ ಬರಬೇಕು. ಈ ತಂತ್ರವನ್ನು ಸರ್ಕಾರ, ಸಾರ್ವಜನಿಕರು ಅನುಸರಿಸಿದ್ದೇ ಆದರೆ ಭೂಗರ್ಭದ ಸೆಲೆ ಬತ್ತುವುದೇ ಇಲ್ಲ. ಫ್ಲೋರೈಡ್‌ನಂಥ ಹೆಮ್ಮಾರಿಯನ್ನು ನಮ್ಮ ನೆಲದಿಂದ ಓಡಿಸುವುದು ಕಷ್ಟವೂ ಅಲ್ಲ.
- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in