ದೆಹಲಿಯಲ್ಲಿ ಸಬ್ಸಿಡಿ ನೀರು ಎಂಬ ಗಿಮಿಕ್
ಸಬ್ಸಿಡಿ ಎಂದರೆ ಒಂದು ವರ್ಗದ ಜನರಿಗೆ ನೀಡಲಾಗುವ ಅನಿಗದಿತ ನಗದು ಮೊತ್ತ. ಸಬ್ಸಿಡಿಯ ಮೂಲಕ ಸರ್ಕಾರವು ಬೆಲೆಯಲ್ಲಿ ಇಳಿಕೆಯನ್ನೇನೂ ತರುವುದಿಲ್ಲ. ಚಾಲ್ತಿಯಲ್ಲಿರುವ ದರ ಮತ್ತು ಶುಲ್ಕಗಳೇ ಮುಂದುವರಿದಿರುತ್ತವೆ. ಸರ್ಕಾರ ಮಾಡುವುದೇನೆಂದರೆ ತೆರಿಗೆದಾರರ ಹಣವನ್ನು ಬಳಸಿ ವರ್ಗವೊಂದಕ್ಕೆ ಸಬ್ಸಿಡಿಯನ್ನು ನೀಡುತ್ತದೆ. ನೀವು ಸಬ್ಸಿಡಿಗಳನ್ನು ಹೆಚ್ಚಿಸುತ್ತ ಹೋದಷ್ಟೂ ತೆರಿಗೆಗಳನ್ನು ಹೆಚ್ಚು ಹೆಚ್ಚು ವಸೂಲು ಮಾಡಬೇಕಾಗುತ್ತದೆ. ಇದುವೇ ವಾಸ್ತವ.
ಸಬ್ಸಿಡಿಗಳನ್ನು ನೀಡುವುದರ ಮೂಲಕ ಸರ್ಕಾರವು ಅಲ್ಪಾವಧಿ ಲಾಭದ ಮೇಲೆ ಕಣ್ಣಿಟ್ಟಂತಾಗುತ್ತದೆ ಅಷ್ಟೆ. ಅದು ನಾಳೆಗಳಿಗೆ ಸಾಲವನ್ನು ನಿರ್ಮಿಸಿಡುವ ಮಾರ್ಗ. ಮೀಟರ್ ವ್ಯವಸ್ಥೆಯಲ್ಲಿದ್ದುಕೊಂಡು 20 ಕಿಲೊಕ್ಕಿಂತ ಕಡಿಮೆ ನೀರು ಬಳಸುವವರಿಗೆ ಸಬ್ಸಿಡಿ ನೀರನ್ನು ಕೊಡುವ ಯೋಜನೆಯನ್ನೇ ಉದಾಹರಣೆಯನ್ನಾಗಿ ತೆಗೆದುಕೊಳ್ಳೋಣ. ಇಂಥ ಸಬ್ಸಿಡಿಗಳು ಪೂರೈಕೆ ಸಂಘಟನೆಯ ಆರೋಗ್ಯವನ್ನೇ ಹದಗೆಡಿಸುತ್ತವೆ. ನಿಜವಾದ ಸವಾಲು ಇರುವುದು ಈ ನೀರು ಪೂರೈಕೆ ವ್ಯವಸ್ಥೆಯ ಹೊರಗಡೆ ಒಂದಿಷ್ಟು ಜನ ಉಳಿದುಕೊಂಡುಬಿಟ್ಟಿದ್ದಾರಲ್ಲ, ಅವರಿಗೆ ಪೂರೈಕೆ ವ್ಯವಸ್ಥೆಯನ್ನು ಬೆಸೆಯುವುದು. ಪ್ರತಿ ಪ್ರದೇಶಗಳಲ್ಲೂ ಪೈಪ್ಲೈನ್ಗಳನ್ನು ಜೋಡಿಸುವುದು, ಪ್ರತಿ ಮನೆಗೂ ನಲ್ಲಿಯನ್ನು ಒದಗಿಸುವುದು ಇವಕ್ಕೆಲ್ಲ ಒಂದು ಆರೋಗ್ಯಕರ ಬೋರ್ಡ್ ಬೇಕಾಗುತ್ತದೆ. ಹಣಕಾಸಿನ ಸ್ಥಿತಿ ಹದಗೆಡಿಸಿಕೊಂಡಿರುವ ದೆಹಲಿ ಜಲ ಬೋರ್ಡ್ನಿಂದ ಇವೆಲ್ಲ ಸಾಧ್ಯವಾಗುವ ಮಾತಲ್ಲ.
ನೀರಿನ ಸಬ್ಸಿಡಿ ಎಂಬುದು ವಾಸ್ತವದಲ್ಲಿ ದೆಹಲಿಯ ದುರ್ಬಲ ವರ್ಗವನ್ನು ಸಂಪೂರ್ಣ ಕಡೆಗಣಿಸಿದೆ. ಪೈಪ್ಲೈನ್ಗಳಿಲ್ಲದ ಪ್ರದೇಶಗಳು, ನಲ್ಲಿಗಳಿಲ್ಲದ ಮನೆಗಳು, ಮೀಟರ್ಗಳನ್ನು ಅಳವಡಿಸಿಕೊಳ್ಳದ ಸಮುಚ್ಛಯಗಳು, ದೋಷಪೂರಿತ ಮೀಟರ್ಗಳನ್ನು ಹೊಂದಿರುವವರು, ಇವರ್ಯಾರಿಗೂ ಸಬ್ಸಿಡಿ ಸಿಗುವುದೇ ಇಲ್ಲ. ಎನ್ಡಿಎಮ್ಸಿ ಪ್ರದೇಶದಲ್ಲಿರುವ ಕಡಿಮೆ ವೇತನದ ನೌಕರರು, ದೆಹಲಿ ಕಂಟೋನ್ಮೆಂಟ್ ಪ್ರದೇಶದಲ್ಲಿರುವ ಮನೆಗಳು ನೀರಿನ ಸಬ್ಸಿಡಿಯನ್ನು ಪಡೆಯುವುದೇ ಇಲ್ಲ. ಹೀಗೆ ದುರ್ಬಲ ವರ್ಗದವರಿಗೆ ಸಿಗದಾಗುವ ಸಬ್ಸಿಡಿ, ಮೀಟರ್ಬದ್ಧ ನೀರಿನ ಬಳಕೆ ಮಾಡುತ್ತಿರುವ ಚಿಕ್ಕ ಸಮೂಹವೊಂದಕ್ಕೆ ಮಾತ್ರ ಲಭಿಸುವಂತಾಗುತ್ತದೆ.
ದೆಹಲಿಯಲ್ಲಿ 18 ಲಕ್ಷದ ಸಂಖ್ಯೆಯಲ್ಲಿ ಜಲ ಸಂಪರ್ಕವಿದೆ. ಈ ಪೈಕಿ 8.5 ಲಕ್ಷ ಜಲ ಸಂಪರ್ಕಗಳಲ್ಲಿ ಮಾತ್ರವೇ ಕ್ರಮಬದ್ಧ ಮೀಟರ್ ಇದೆ. ಸುಮಾರು 5 ಲಕ್ಷ ಮೀಟರ್ಗಳು ದೋಷಪೂರಿತ. ಇನ್ನುಳಿದ ಸಂಖ್ಯೆಯ ಜಲ ಸಂಪರ್ಕ ವ್ಯವಸ್ಥೆಗೆ ಮೀಟರ್ ಇಲ್ಲವೇ ಇಲ್ಲ. ದೆಹಲಿಯ ವ್ಯಾಪಕ ಪ್ರದೇಶವನ್ನು ಆವರಿಸಿರುವ ಜೋಪಡಿಗಳಿಗೆ ನೀರಿನ ಸಂಪರ್ಕ ವ್ಯವಸ್ಥೆಯೇ ಇಲ್ಲವಾದ್ದರಿಂದ ಅವರು ಉಚಿತ ನೀರಿನ ಯೋಜನೆ ಅಡಿ ಬರುವುದಿಲ್ಲ. ಅವರುಗಳ ಬದುಕು ಅವಲಂಬಿತವಾಗಿರುವುದು ನೀರಿನ ಟ್ಯಾಂಕರ್ಗಳ ಮೇಲೆ. ಬಹಳ ದೊಡ್ಡ ಪ್ರಮಾಣದ ಅನಧಿಕೃತ ಕಾಲೋನಿಗಳಿಗೆ ನೀರಿನ ಪೈಪ್ಲೈನ್ ಒದಗಿಸುವ ಕಾರ್ಯ ಇನ್ನಷ್ಟೇ ಆಗಬೇಕಿದೆ. ಹೀಗೆಒಟ್ಟಾರೆ ಬಡವರ್ಗ ಎಂದು ಯಾರನ್ನು ಗುರುತಿಸುತ್ತೇವೋ ಅವರೆಲ್ಲ ನೀರಿನ ಸಬ್ಸಿಡಿ ವ್ಯವಸ್ಥೆಗೆ ಒಳಪಡುವುದಕ್ಕೆ ಆಗದ ಸ್ಥಿತಿಯಲ್ಲಿದ್ದಾರೆ. ಕೋಆಪರೇಟಿವ್ ಹೌಸಿಂಗ್ ಸೊಸೈಟಿಗಳು ದೊಡ್ಡ ಪ್ರಮಾಣದಲ್ಲಿ ನೀರಿನ ಸಂಪರ್ಕ ಪಡೆದುಕೊಂಡಿವೆ. ಆದರೆ ಪ್ರತಿ ಫ್ಲಾಟ್ಗೂ ಮೀಟರ್ ವ್ಯವಸ್ಥೆ ಇಲ್ಲ. ಆದ್ದರಿಂದ ಅವರನ್ನು ಉಚಿತ ನೀರಿನ ಯೋಜನೆಗೆ ಒಳಪಡಿಸಲಾಗುವುದಿಲ್ಲ. ದೆಹಲಿಯ ಮಧ್ಯಮ ವರ್ಗದ ಕೆಲಮಂದಿ ನೀರಿನ ಸಂಪರ್ಕವನ್ನು ಪಡೆದಿದ್ದು ಪ್ರತಿದಿನ 666 ಲೀಟರ್ಗಳಿಗಿಂತ ಕಡಿಮೆ ನೀರು ಉಪಯೋಗಿಸುತ್ತಾರಾದ್ದರಿಂದ ಸಬ್ಸಿಡಿ ಸ್ಕೀಮ್ಗೆ ಬರುತ್ತಾರೆ. ಇನ್ನು, ಈ ಮೇಲಿನ ನಿಗದಿಯನ್ನು ದಾಟುವ, 20 ಕಿಲೋಗಿಂತ ಹೆಚ್ಚಿನ ನೀರು ಉಪಯೋಗಿಸುವವರಿಗೆ ಅವರ ಒಟ್ಟಾರೆ ಉಪಭೋಗಕ್ಕೆ ಶೇ. 10ರ ಹೆಚ್ಚುವರಿ ಶುಲ್ಕದೊಂದಿಗೆ ವಸೂಲು ಮಾಡಲಾಗುತ್ತದೆ.
ಒಟ್ಟಿನಲ್ಲಿ ದೆಹಲಿ ನಾಲ್ಕು ವಿಭಾಗಗಳಲ್ಲಿ ವಿಭಜನೆಯಾಗುತ್ತದೆ. ಪೈಪ್ಲೈನ್ಗಳೇ ಇಲ್ಲದೇ ಆ ಕಾರಣದಿಂದ ಸಬ್ಸಿಡಿಯಿಂದ ಹೊರಗೆ ಉಳಿಯುವ ಜನರದ್ದು ಒಂದು ವರ್ಗ. ಮೀಟರ್ಗಳು ದೋಷಪೂರಿತವಾದ್ದರಿಂದ ಸಬ್ಸಿಡಿಯಿಂದ ಹೊರಗುಳಿದು ಹಣ ತೆರುವ ಮತ್ತೊಂದು ವರ್ಗ. ಮೀಟರ್ಗಳು ಸರಿ ಇದ್ದು ನಿಗದಿತ 20 ಕಿಲೋದಷ್ಟೇ ನೀರು ಬಳಕೆ ಮಾಡುವ ವರ್ಗಕ್ಕೆ ಮಾತ್ರವೇ ಸಬ್ಸಿಡಿಯ ಪ್ರಯೋಜನ. ಮೀಟರ್ ಇದ್ದುಕೊಂಡು ನಿಗದಿತ ಮಿತಿಗಿಂತ ಹೆಚ್ಚು ನೀರು ಬಳಸಿದ್ದಕ್ಕೆ ಎಂದಿನ ಶುಲ್ಕಕ್ಕೆ ಶೇ. 10ರ ದಂಡ ಸೇರಿಸಿ ಹಣ ತೆರಬೇಕಾದ ಇನ್ನೊಂದು ವರ್ಗ! ಅಂದರೆ, ಪುಕ್ಕಟೆ ನೀರು ನಿಜಕ್ಕೂ ಸಿಗುವುದು ಯಾರಿಗೆ ಹಾಗೂ ಆ ಸಮೂಹ ಎಷ್ಟು ಚಿಕ್ಕದು ಎಂಬುದನ್ನು ನೀವೇ ಅಂದಾಜು ಮಾಡಿ.
- ಅರುಣ್ ಜೇಟ್ಲಿ
ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

