ಅಂಕಣಗಳು

ಬೆಂಗಳೂರಿಗೆ ಬರಲಿರುವ ಬೆನ್ನಿ ಹಿನ್ ಮೌಢ್ಯವಿರೋಧಿ ಬುದ್ಧಿಜೀವಿಗಳೆಲ್ಲಿಹರು?

ಬೆಂಗಳೂರಿಗೆ ಬರಲಿರುವ ಬೆನ್ನಿ ಹಿನ್ ಮೌಢ್ಯವಿರೋಧಿ ಬುದ್ಧಿಜೀವಿಗಳೆಲ್ಲಿಹರು?
Published On :

ಜನವರಿ 21 2005.. ಪ್ರಪಂಚಕ್ಕೇ ಟೋಪಿ ಹಾಕುತ್ತಿರುವ ವ್ಯಕ್ತಿ ಭಾರತಕ್ಕೆ ಬಂದಿದ್ದ. ಅವನನ್ನು ಭಾರತೀಯರು ಬರಮಾಡಿಕೊಳ್ಳದಿದ್ದರೂ ರಾಜಕಾರಣಿಗಳು ಮಾತ್ರ ತಮ್ಮ ಹತ್ತಿರದ ಸಂಬಂಧಿಕನೇ ಬಂದಿರುವ ಹಾಗೆ ಖುದ್ದಾಗಿ ಸ್ವಾಗತಿಸಿದರು. ಅವನೇ ಬೆನ್ನಿ ಹಿನ್ ಅಲಿಯಾಸ್ ತೌಫಿಕ್ ಬೆನೆಡಿಕ್ಟ್. ಪ್ರಪಂಚದಲ್ಲಿ ಎಷ್ಟೋ ಜನ ಅವನನ್ನು ನಂಬಿ ಮೋಸ ಹೋಗಿದ್ದಾರೆ. ಅವರು ಕಣ್ಣೀರಿಡುತ್ತಾ ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ. 9 ವರ್ಷಗಳ ಹಿಂದೆಯೇ ಇಂತಹ ಘೋರ ಉದಾಹರಣೆಗಳು ನಮ್ಮ ಕಣ್ಣು ಮುಂದಿದ್ದರೂ ಕಾಂಗ್ರೆಸ್, ಬೆನ್ನಿ ಹಿನ್‌ಗೆ ಮಾತ್ರ ವಿಶೇಷ ವೀಸಾದ ಮೇಲೆ ಭಾರತಕ್ಕೆ ಬಂದು ಮತಾಂತರದ ಮುಖವಾಡ ಹೊತ್ತಿರುವ 'ಪ್ರೇಯರ್ ಮೀಟ್‌' ನಡೆಸಲು ಒಂದೂವರೆ ತಿಂಗಳ ಮೊದಲೇ ಪರವಾನಗಿ ಕೊಟ್ಟಿತ್ತು ಎಂಬುದು ಬಯಲಾಗಿದೆ. ಅದಿರಲಿ, ಆತ 2005ರಲ್ಲಿ ಭಾರತಕ್ಕೆ ಬರುವ ಮೂರ್ನಾಲ್ಕು ದಿನ ಮೊದಲು ಇಲ್ಲಿ ಏನೇನು ಅವಘಡಗಳಾಗುತ್ತಿತ್ತು ಎಂಬುದನ್ನು ಒಮ್ಮೆ ಸೂಕ್ಷ್ಮವಾಗಿ ಅವಲೋಕಿಸಿದ್ದರೆ ಸಾಕು ಎಲ್ಲವೂ ತಿಳಿದು ಬಿಡುತ್ತಿತ್ತು.
ಮಾಧ್ಯಮಗಳಲ್ಲಿ ಬೆಳಕು ಕಾಣದ ವಿವರವೊಂದು ಇಲ್ಲಿದೆ. ಅಂದು ಜನವರಿ 19 2005. ದೇವ ಮಾನವನೆಂದು ಕಾಸು ಕೊಟ್ಟು ಕರೆಸಿಕೊಳ್ಳುವ ಬೆನ್ನಿ ಹಿನ್ ಬರುವ ಎರಡು ದಿನಗಳ ಮುಂಚೆ. 7 ಪಾದ್ರಿಗಳ ಗುಂಪೊಂದು ತಮಿಳುನಾಡಿನ ಮೀನಾಕ್ಷಿಪುರಂನಲ್ಲಿ ಎಲ್ಲಾ ದಲಿತ ಹಿಂದೂಗಳನ್ನು ಮತ್ತು ಹಿಂದುಳಿದ ಮುಸಲ್ಮಾನ ಕುಟುಂಬಗಳಿಗೆ ಹಣ, ಮೊಟಾರ್ ಬೈಕ್ ಮತ್ತು ಇನ್ನಿತರ ಆಮಿಷಗಳನ್ನೊಡ್ಡಿ ಮತಾಂತರ ಮಾಡಲಾಗುತ್ತಿತ್ತು. ಏಕಾಏಕಿ ಶ್ರೀಮಂತರಾದ ಹಿಂದೂಗಳು ಮತ್ತು ಮುಸಲ್ಮಾನರು ಪಕ್ಕದೂರಿನ ತಮ್ಮ ಸಂಬಂಧಿಕರಿಗೂ ತಿಳಿಸಿದರು. ಹೀಗೆ ಮತಾಂತರದ ಬಗ್ಗೆ ತಿಳಿದ ಪ್ರಜ್ಞಾವಂತ ಹಿಂದೂಗಳು ಆ ಪಾದ್ರಿಗಳನ್ನು ಹಿಡಿಯಲು ಪ್ಲಾನ್ ಮಾಡಿ ದಲಿತ ಹಿಂದೂಗಳ ವೇಷದಲ್ಲಿ ಹೋದಾಗ ಅವರಿಗೆ ಆಶ್ಚರ್ಯ ಕಾದಿತ್ತು. ಆ 7 ಪಾದ್ರಿಗಳ ಗುಂಪು ಮತಾಂತರ ಮಾಡುವುದಕ್ಕೆ ಬಂದದ್ದು ಜನವರಿ 19ಕ್ಕೆ ಅಲ್ಲ. 8 ದಿನಗಳ ಮುಂಚಿತವಾಗಿಯೇ ಬಂದು ಟೆಂಟ್ ಹಾಕಿದ್ದರು. ಪಕ್ಕದ ಹಳ್ಳಿಯಿಂದ ಆ ಪ್ರಜ್ಞಾವಂತ ಹಿಂದೂಗಳು ಬರುವುದರೊಳಗಾಗಿ ಅದಾಗಲೆ ಸರಿಸುಮಾರು 200 ಜನ ಹಿಂದೂಗಳು ಮತ್ತು 56 ಮುಸಲ್ಮಾನರನ್ನು ಮತಾಂತರ ಮಾಡಿಯಾಗಿತ್ತು. ಇದೂ ಸಾಲದೆ, ಬೆಂಗಳೂರಿನಲ್ಲಿ ನಡೆಯುವ ಪ್ರಾರ್ಥನಾ ಸಭೆಗೆ ಬರುವಂತೆ ಹಣವನ್ನೂ ಕೊಟ್ಟು ಬುಕ್ ಮಾಡಿಕೊಳ್ಳಲಾಗಿತ್ತು. ಆ ಹಣ ನೋಡಿ ದಲಿತ ಹಿಂದೂಗಳ ಮತ್ತು ಮುಸಲ್ಮಾನರ ಮುಖದಲ್ಲಿ ಅದೇನೋ ಜಗತ್ತನ್ನೇ ಗೆದ್ದ ಭಾವ ಕಾಣುತ್ತಿತ್ತು ಆದರೆ ಅಲ್ಲಿ ಮೋಸ ಹೋದವರು ಅವರೇ ಎಂಬುದು ಆ ಮುಗ್ಧ ಜನರಿಗೆ ತಿಳಿದಿರಲಿಲ್ಲ.
ಅಂದು ಕರ್ನಾಟಕದಲ್ಲಿದ್ದ ಧರ್ಮಸಿಂಗ್ ಸರ್ಕಾರ ಇಂತಹ  ಯಾವ ಪ್ರಕರಣಗಳ ಬಗ್ಗೆಯೂ ತಲೆ ಕೆಡಿಸಿಕೊಳ್ಳದೇ ಬೆನ್ನಿ ಹಿನ್ ಬೆಂಗಳೂರಿಗೆ ಬರುವುದನ್ನು ನಿರೀಕ್ಷಿಸುತ್ತಿತ್ತು. ಕನಿಷ್ಠ ಪಕ್ಷ ಆ ಮತಾಂತರದ ಕೇಸನ್ನು ತನಿಖೆ ಮಾಡಲು ತಮಿಳುನಾಡು ಸರ್ಕಾರಕ್ಕೂ ಮನವಿ ಮಾಡಿಕೊಂಡಿರಲಿಲ್ಲ. ಇನ್ನು ತಮಿಳುನಾಡಿನಲ್ಲಿ ಇಷ್ಟೆಲ್ಲಾ ರಾದ್ಧಾಂತ ನಡೆಯುತ್ತಿದ್ದರೂ ಯಾವ ಮಾಧ್ಯಮಗಳಿಗೂ ಈ ವಿಷಯ ಗೊತ್ತೇ ಇರಲಿಲ್ಲವಂತೆ!   
ಬೆನ್ನಿ ಹಿನ್ ಬಂದಿದ್ದರಿಂದ ದೇಶದ, ಬೇಡ.. ಬೆಂಗಳೂರಿನ ಅದೆಷ್ಟು ಜನರ ಖಾಯಿಲೆ ಗುಣವಾಯಿತು? ಉದಾಹರಣೆ ತೋರಿಸಿ ನೋಡೋಣ. ಅಸಲಿಗೆ ಅಲ್ಲಿ ಖಾಯಿಲೆ ಎಂದು ಹೋದ ಒಂದೇ ಒಂದು ಮನುಷ್ಯನಿಗೂ ಯಾವ ಖಾಯಿಲೆಯನ್ನೂ ದೇವ ಮಾನವ ಬೆನ್ನಿ ಹಿನ್ ಗುಣ ಮಾಡಲೇ ಇಲ್ಲ. ಎಲ್ಲ ಅಂಗವಿಕಲರು ಅಂದು ಬಿನ್ನಿ ಹಿನ್ ಬಾಡಿ ಗಾರ್ಡ್‌ಗಳಿಂದ ಬೂಟಿನಲ್ಲಿ ಏಟು ತಿಂದು ಅಳುತ್ತಾ ವಾಪಸ್ ಬಂದವರೇ. ಬೇರೆ ಧರ್ಮದವರ ಕಥೆ ಹಾಗಿರಲಿ, ಸ್ವತಃ ಅವನ ಕ್ರೈಸ್ತ ಧರ್ಮದವರಿಗೇ ಅವನಿಂದ ಒಂದು ಬಿಡಿಗಾಸೂ ಪ್ರಯೋಜನವಾಗಲಿಲ್ಲ. ಬೆನ್ನಿ ಹಿನ್ ಅದೇ ಹಳೆಯ ಡೈಲಾಗ್ N‌o ‌one w‌ill ‌g‌o ba‌c‌k S‌i‌c‌k f‌r‌om ‌he‌re,​​ be‌c​a‌u​se Jes‌us L‌oves y‌o‌u all ಎಂದು ಹೇಳುತ್ತಾ ಮೂರು ದಿನ ಬೇಳೆ ಬೇಯಿಸಿಕೊಂಡ. ಮೋಸ ಹೋದವರು ಕೇವಲ ಸಾಮಾನ್ಯ ಜನರಷ್ಟೇ ಅಲ್ಲ. ಬದಲಿಗೆ ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್ ಕೂಡ ಎಂಬುದು ನಮ್ಮ ದುರದೃಷ್ಟ. ಕರ್ನಾಟಕದಾದ್ಯಂತ ತೀವ್ರವಾಗಿ ಪ್ರತಿಭಟನೆಯಾಗುತ್ತಿದ್ದರೂ ತಲೆಕೆಡಿಸಿಕೊಳ್ಳದೇ ತಾವೂ ಸಹ ಜಕ್ಕೂರ್ ಮೈದಾನಕ್ಕೆ ಹೋಗಿ ಭೇಟಿ ನೀಡಿ ಆಶೀರ್ವಾದ ಪಡೆದು ಬಂದದ್ದು. ಬೇರೆ ಧರ್ಮದವರು ಬೇಡ ಸ್ವಾಮಿ, ಹೊರದೇಶದಲ್ಲಿ ಕ್ರಿಶ್ಚಿಯನ್ನರೇ ಆತನಿಗೆ ಥೂ ಎಂದು ಉಗಿಯುತ್ತಿದ್ದಾರೆ. ಆತ ಮಾಡಿದ ಮೋಡಿಯಿಂದ ಯಾರೂ ಸರಿ ಹೊಗಲಿಲ್ಲವೆಂದು ಪ್ರಪಂಚದ ಪ್ರತಿಷ್ಠಿತ ವೈದ್ಯರುಗಳೇ ರೋಗಿಗಳನ್ನು ತಪಾಸಣೆಗೆ ಒಳಪಡಿಸಿ ವರದಿ ನೀಡಿದ್ದಾರೆ. ಭಾರತದಲ್ಲಿ ಎಷ್ಟೋ ಮಂದಿ ಮುಗ್ಧರು, ಬೆನ್ನಿ ಹಿನ್ ಕೇವಲ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವುದಕ್ಕೆ ಬರುತ್ತಿದ್ದಾನೆ ಮತ್ತು ಕಾರ್ಯಕ್ರಮಗಳಿಂದ ಕಾಸು ಮಾಡಲು ಬರುತ್ತಿದ್ದಾನೆ ಎಂದು ಭಾವಿಸುತ್ತಿದ್ದರು. ಆದರೆ ಆತ ಬರುತ್ತಿರುವುದನ್ನು ನೋಡಿಯೂ ಆಡಳಿತದ ಚುಕ್ಕಾಣಿ ಹಿಡಿದಿರುವ ಕೆಲ ಭ್ರಷ್ಟ ರಾಜಕಾರಣಿಗಳು ಸುಮ್ಮನಿರುವುದಕ್ಕೆ ಕಾರಣ ಸ್ಪಷ್ಟವೇ. ಇಂಥವರ ಆಗಮನದಿಂದ ಎಷ್ಟೋ ಮತಾಂತರ ಸಂಸ್ಥೆಗಳಿಗೆ ಮೂಟೆಗಟ್ಟಲೆ ಹಣ ಸಿಗುವುದಲ್ಲದೇ ಕೆಲ ಭ್ರಷ್ಟ ರಾಜಕಾರಣಿಗಳಿಗೆ ಲಾಭದ ಸಾಧ್ಯತೆಗಳೂ ಜೋರಾಗಿವೆ.
ಅವತ್ತೇ ಈ ಭೂಪ ಒಂದು ಮಾತನ್ನು ಹೇಳಿದ್ದ. I L‌ove Ind‌ia and I w‌ill ‌c‌ome ba‌c‌k s‌o‌on  ಎಂದು. ಅದರಂತೆ ಈಗ 2014 ಜನವರಿ 15ರಿಂದ 19ರವರೆಗೆ ಆತ ಬೆಂಗಳೂರಿಗೆ ಬರುತ್ತಿದ್ದಾನೆ. ಮಾಡುವುದಕ್ಕೆ ಬೇರೆ ಬೆಟ್ಟದಷ್ಟು ಕೆಲಸವಿದ್ದರೂ ರಾಜ್ಯದ ಜನರ ಮೂಢನಂಬಿಕೆಯನ್ನು ಓಡಿಸಿಬಿಡುತ್ತೇನೆ ಎಂದು ಕುಣಿಯುತ್ತಿರುವ ಮುಖ್ಯಮಂತ್ರಿಗಳಿಗೆ ಅದ್ಯಾವುದೋ ಒದ್ದು ಓಡಿಸಿದ ದೇಶದಿಂದ ಇಲ್ಲಿಗೆ ಬಂದು ಕ್ಯಾನ್ಸರ್, ಏಡ್ಸ್‌ನಂತಹ ಕಾಯಿಲೆಯನ್ನು ಕೇವಲ ಮೈ ಮುಟ್ಟಿ ಗುಣಮುಖರನ್ನಾಗಿಸುತ್ತೇನೆ ಎನ್ನುತ್ತಿರುವುದರ ಬಗ್ಗೆ ಏನೂ ಅನ್ನಿಸುತ್ತಿಲ್ಲ. ಬೆನ್ನಿ ಹಿನ್ ಮುಟ್ಟಿದರೆ ಸಾಕು ಕಾಯಿಲೆಗಳೆಲ್ಲಾ ಏಳೇಳು ಜನುಮದಲ್ಲೂ ಹತ್ತಿರ ಸುಳಿಯುವುದಿಲ್ಲ ಎಂದೇ ಇಟ್ಟುಕೊಳ್ಳೋಣ. ಆದರೆ ಖಾಯಿಲೆ ವಾಸಿ ಮಾಡುವವನು ದೊಡ್ಡ ಸ್ಟೇಜಿನ ಮೇಲೆ, ಮಾಧ್ಯಮದವರ ಮುಂದೆಯೇ, ಆತ ಆರಿಸಿದ ಜನರನ್ನೇ ಏಕೆ ಗುಣ ಮಾಡಬೇಕು? ಇಲ್ಲೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಮಲಗಲೂ ಮಂಚವಿಲ್ಲದೇ ನೆಲದ ಮೇಲೆ ಡ್ರಿಪ್ ಹಾಕಿಸಿಕೊಂಡು ಮಲಗಿರುತ್ತಾರೆ. ಅಲ್ಲಿಗೆ ಬಂದು ಎಲ್ಲರನ್ನೂ ಮುಟ್ಟಿ.. ಮುಟ್ಟಿ.. ಏಕೆ ಗುಣ ಪಡಿಸುವುದಿಲ್ಲ?  ಇದರಿಂದ ಅಲ್ಲಿನ ವೈದ್ಯರಿಗೂ ಸಹ ಸ್ವಲ್ಪ ನಿರಾಳವಾಗುತ್ತದೆ ಅಲ್ಲವೇ?  ಬೆನ್ನಿ ಹಿನ್ ಪ್ರಪಂಚದ ಯಾವುದೇ ಆಸ್ಪತ್ರೆಗಳಿಗೂ ಹೋಗಿ ಒಬ್ಬ ಜ್ವರ ಬಂದಿರುವವನನ್ನೂ ಸಹ ಗುಣ ಪಡಿಸಲಿಲ್ಲ. ಇನ್ನು ಏಡ್ಸ್ ಗುಣಪಡಿಸುವುದು ಮತ್ತು ಹುಟ್ಟು ಕುರುಡರಿಗೆ ಕಣ್ಣು ಬರುವಂತೆ ಮಾಡುವುದೆಲ್ಲಾ ಹಾಸ್ಯಾಸ್ಪದ. ಕೀನ್ಯಾದಲ್ಲಿ ಸುಮಾರು ದಿನಗಳ ಕಾಲ ಸಖತ್ತಾಗಿಯೇ ಪ್ರಚಾರ ಮಾಡಿ ಬೆನ್ನಿ ಹಿನ್ ಒಂದು ಆಸ್ಪತ್ರೆಯನ್ನು ಕಟ್ಟಿದ್ದಾನೆ. ಆದರೆ 2012ರ ಮೇ ತಿಂಗಳಿನಲ್ಲಿ ಕೀನ್ಯಾದ ನೈರೋಬಿಯಲ್ಲಿರುವ ಬೆನ್ನಿ ಹಿನ್‌ನ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗಳಲ್ಲಿ 3 ಪುರುಷರು, ಒಬ್ಬಳು ಮಹಿಳೆ, ಇಬ್ಬರು ಪುಟ್ಟ ಮಕ್ಕಳು ಸಾವನ್ನಪ್ಪಿದ್ದಾರೆ. ಆಗ ಎಲ್ಲಿ ಹೋಗಿದ್ದ ಈ ಬೆನ್ನಿ ಹಿನ್  ಮುಟ್ಟಿ ಅವರನ್ನು ಬದುಕುಳಿಯುವಂತೆ ಮಾಡಬಹುದಿತ್ತಲ್ಲ ಅಥವಾ ವೈದ್ಯರಾದರೂ ಅವರನ್ನು ಉಳಿಸಿಕೊಳ್ಳಬಹುದಿತ್ತಲ್ಲ?
ಸ್ವೀಡನ್‌ನಲ್ಲಿ ಬೆನ್ನಿ ಹಿನ್ ಸ್ಟೇಜ್ ಶೋ ಮಾಡುತ್ತಿರುವಾಗ ಆಗಷ್ಟೇ ಹಾರ್ಟ್ ಅಟ್ಯಾಕ್‌ನಿಂದ ಸತ್ತಿದ್ದ ವ್ಯಕ್ತಿಯನ್ನು ಬದುಕಿಸಿದ್ದೇನೆ ಎಂದು ನಾಟಕವಾಡಿ ಬೊಗಳೆ ಬಿಡುತ್ತಿದ್ದ. ಇದಕ್ಕೆ ಸರಿಯಾಗಿ ಸ್ಟೇಜ್ ಮೇಲೆ ಇರುವ ಬೆನ್ನಿ ಹಿನ್ ಕಡೆಯ ವೈದ್ಯರೂ ಸಹ ಹೌದೆಂದು ತೆಲೆ ಅಲ್ಲಾಡಿಸಿದರು. ಆದರೆ ಆ ರೋಗಿಯನ್ನು ಹಿಡಿದು ತಪಾಸಣೆ ಮಾಡಿದ ಸ್ವೀಡನ್‌ನ ವೈದ್ಯರ ತಂಡ, ಸತ್ತು ಬದುಕಿದ ಆ ರೋಗಿಗೆ ಹುಟ್ಟಿದಾಗಿನಿಂದ ಯಾವುದೇ ಖಾಯಿಲೆಯಿಲ್ಲ ಮತ್ತು ಮೇಲಾಗಿ ಅವನಿಗೆ ಹಾರ್ಟ್ ಅಟ್ಯಾಕೇ ಆಗಿಲ್ಲ ಎಂದು ವರದಿ ನೀಡಿದರು.
ಆತ 2005ರಲ್ಲಿ ಬೆಂಗಳೂರಿನಲ್ಲಿ  ಕಾರ್ಯಕ್ರಮ ಕೊಡುತ್ತಿದ್ದಾಗ ಎಲ್ಲಿಂದಲೋ ಗೇಟ್ ಹಾರಿ ಬಂದ ವ್ಯಕ್ತಿಯೊಬ್ಬ ಕಿರುಚಾಡುತ್ತಾ “I’m C‌u‌red By Benny H‌inn (ನಾನು ಬೆನ್ನಿ ಹಿನ್‌ನಿಂದ ಗುಣಮುಖನಾಗಿದ್ದೇನೆ) ಎಂದು ಓಡಿ ಬರುತ್ತಿದ್ದ. ಆತನನ್ನು ಸ್ಟೇಜ್ ಮೇಲೆ ಬರಮಾಡಿಕೊಂಡ ಬೆನ್ನಿ ಹಿನ್ ಅಲ್ಲೇ ಇದ್ದ ವೈದ್ಯರ ಬಳಿ ಅವನನ್ನು ತಪಾಸಣೆ ಮಾಡಿದಂತೆ ನಾಟಕವಾಡಿಸಿ 'ಹೌದು, ಈತ ಗುಣಮುಖನಾಗಿದ್ದಾನೆ' ಎಂದು ಘೋಷಿಸಿಯೇಬಿಟ್ಟ. ಇಲ್ಲಿ ಮಜಾ ಎಂದರೆ ಇದರ ನಿಜವಾದ ರಹಸ್ಯವೇ ಬೇರೆ ಇತ್ತು.  ಬೆನ್ನಿ ಹಿನ್‌ನನ್ನು ಪರೀಕ್ಷಿಸುವ ಸಲುವಾಗಿ ಭಾರತದ ಪ್ರತಿಷ್ಟಿತ ಪತ್ರಿಕೆಯೊಂದು ಆರೋಗ್ಯ ಸರಿಯಾಗಿಯೇ ಇದ್ದ ವ್ಯಕ್ತಿಯನ್ನು ಹಾಗೆ ಕಿರುಚಾಡಿ ನಾಟಕವಾಡುವಂತೆ ಮೊದಲೇ ಹೇಳಿ ತಯಾರು ಮಾಡಿ ಕಳುಹಿಸಲಾಗಿತ್ತು. ಆ ವ್ಯಕ್ತಿ ಅಲ್ಲಿ ಯಥಾವತ್ತಾಗಿ ಅಭಿನಯಿಸಿದ. ಇದರಿಂದ ಪುಳಕಿತಗೊಂಡ ಬೆನ್ನಿ ಹಿನ್ ತನಗೊಂದು ಮಿಕ ಸಿಕ್ಕಿತು ಎಂದುಕೊಂಡ. ಆದರೆ ಸ್ವತಃ ಬೆನ್ನಿ ಹಿನ್‌ನೇ ಮಿಕ ಆಗಿದ್ದ ಎಂದು ಅವನಿಗೆ ತಿಳಿದಿರಲಿಲ್ಲ. ಈ ಸ್ಟಿಂಗ್ ಆಪರೇಷನ್ ಅನ್ನು ಆ ಪತ್ರಿಕೆ ಪ್ರಕಟಿಸಿದ್ದರೂ ಯಾರೂ ತಲೆ ಕೆಡಿಸಿಕೊಳ್ಳಲಿಲ್ಲವೆಂಬುದು ನಮ್ಮ ದುರದೃಷ್ಟ.   
ಇದಿಷ್ಟೇ ಅಲ್ಲ. ಬೆನ್ನಿ ಹಿನ್ ಬರುವ ಮುಂಚೆ ಬೆಂಗಳೂರಿನ ಶಿವಾಜಿನಗರದ ಗಲ್ಲಿಗಲ್ಲಿಗಳಲ್ಲಿ ಬಿತ್ತಿ ಪತ್ರಗಳು ಎಲ್ಲರ ಕೈಲೂ ಹರಿದಾಡುತ್ತಾ ಇದ್ದವು. ಅದರಲ್ಲಿ ಹೀಗೆಂದು ಬರೆದಿತ್ತು: Id‌ol w‌o‌rs‌h‌ip and p‌r‌os​t‌i​t‌ut‌i‌on a‌re ‌g‌rave s‌ins. ಇದನ್ನು ಅಂದು ಪತ್ರಿಕಾಗೋಷ್ಠಿಯಲ್ಲಿ ಪೊಲೀಸರಿಗೆ ಮತ್ತು ರಾಜಕಾರಣಿಗಳಿಗೆ ಪ್ರಶ್ನೆ ಮಾಡಿದಾಗ ಬಂದ ಉತ್ತರ- ಆ ಪತ್ರ ಸಾರ್ವಜನಿಕರಿಗಲ್ಲ, ಕೇವಲ ಚರ್ಚ್‌ಗಳಿಗೆ ಮಾತ್ರ ಹಂಚಲೆಂದು ಇಟ್ಟಿದ್ದು ಎಂದು. ಆದರೆ ಇದು ಕೋಮುಗಲಭೆಯ ಪ್ರಯತ್ನವಲ್ಲವೇ? ಈ ಬಗ್ಗೆ ಯಾರೂ ಚರ್ಚಿಸಲಿಲ್ಲ.
ವಾಸ್ತವದಲ್ಲಿ ಬೆನ್ನಿಹಿನ್ ಕ್ರೈಸ್ತನ ಅನುಯಾಯಿಯೂ ಅಲ್ಲ. ಜೀಸಸ್ ಕುರಿತೂ ಆಕ್ಷೇಪಾರ್ಹ ಎಂಬಂಥ ಮಾತುಗಳನ್ನಾಡಿರುವುದಕ್ಕೆ ಕ್ರೈಸ್ತ ಸಂಪ್ರದಾಯಸ್ಥರೂ ಆತನನ್ನು ವಿರೋಧಿಸುತ್ತಾರೆ. ಇನ್ನು ಭಾರತದಲ್ಲಿರುವ ಮುಗ್ಧ ಕ್ರೈಸ್ತರಿಗೆ ಎಲ್ಲಿ ಅರ್ಥವಾಗಬೇಕು? ಸಮೂಹ ಸನ್ನಿಗೆ ಒಳಗಾದವರಂತೆ ಎಲ್ಲರೂ ಬೆನ್ನಿ ಹಿಂದೆ ಕುರಿಗಳ ರೀತಿ ಹೆಜ್ಜೆ ಹಾಕುತ್ತಿದ್ದಾರೆ ಆಷ್ಟೆ. ಅದೇನೆ ಇರಲಿ, ಬೆನ್ನಿ ಹಿನ್ ಇದೇ ಜನವರಿ 15ರಿಂದ 19ರವರೆಗೆ ಬೆಂಗಳೂರಿಗೆ ಕೇವಲ ಪ್ರಾರ್ಥನೆ ಮಾಡುವುದಕ್ಕಾಗಿಯೇ ಬರುತ್ತಿದ್ದಾನೆ ಎಂಬುದನ್ನು ನಂಬಲು ಯಾರೂ ತಯಾರಿಲ್ಲ. ಅಷ್ಟಕ್ಕೂ ಕೇವಲ ಪ್ರಾರ್ಥನೆ ಮಾಡುವುದಕ್ಕೆ ದೇಶದಿಂದ ದೇಶ ಸುತ್ತುತ್ತಿದ್ದಾನೆ ಎಂದರೆ ನಂಬುವುದಕ್ಕೆ ಇದು 2005 ಅಲ್ಲ. 2014. ಜನರು ಎಚ್ಚೆತ್ತುಕೊಂಡಿದ್ದಾರೆ. ದೇಶದ ಭ್ರಷ್ಟ ಸರ್ಕಾರವನ್ನೇ ಕಿತ್ತೊಗೆಯುವ ತಯಾರಿಯಲ್ಲಿದ್ದಾರೆ. ಸಾಮಾಜಿಕ ಜವಾಬ್ದಾರಿ ಸಾಮರಸ್ಯದ ಒಟ್ಟೂ ಗುತ್ತಿಗೆ ತಮ್ಮ ಬಳಿಯೇ ಇದೆ ಎಂಬಂತೆ ಭಾಷಣ ಬಿಗಿದುಕೊಂಡಿರುವ ಬುದ್ಧಿಜೀವಿಗಳಿಗೆ ಬೆನ್ನಿ ಹಿನ್ ಎಂಬ ಪವಾಡ ಪುರುಷನ ಬಗ್ಗೆ ಜನಜಾಗೃತಿ ಮೂಡಿಸುವುದಕ್ಕೆ ಪುರಸೊತ್ತಾದಂತಿಲ್ಲ. ನಾವಾದರೂ ಜಾಗೃತಗೊಳ್ಳೋಣ.

- ಚಿರಂಜೀವಿ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.