ಬದುಕಿನ ಕ್ಷುಲ್ಲಕ ಥ್ರಿಲ್ಲುಗಳನ್ನು ನೋಡಿ ನಕ್ಕಿಹುದು ಸಾವು

2014 ಜನವರಿ 1. ಹೀಗೆ ದಿನಾಂಕ ಬದಲಾಗಿ ಅರ್ಧಗಂಟೆ ಕಳೆದಿರಬಹುದಷ್ಟೆ...
ಬದುಕಿನ ಕ್ಷುಲ್ಲಕ ಥ್ರಿಲ್ಲುಗಳನ್ನು ನೋಡಿ ನಕ್ಕಿಹುದು ಸಾವು
Updated on: 

2014 ಜನವರಿ 1. ಹೀಗೆ ದಿನಾಂಕ ಬದಲಾಗಿ ಅರ್ಧಗಂಟೆ ಕಳೆದಿರಬಹುದಷ್ಟೆ. ಬೆಂಗಳೂರಿನ ಟೌನ್ಹಾಲ್ ಬಳಿ ನಶೆಯ ಉನ್ಮಾದದಲ್ಲಿ ಸ್ಕೂಟರ್ನಲ್ಲಿ ಸರ್ಕಸ್ ಮಾಡಿಕೊಂಡುಬಂದ ಹುಡುಗ, ಮೊಟಾರ್ ಸೈಕಲ್ ಒಂದಕ್ಕೆ ಗುದ್ದಿ ಮೂವರನ್ನು ಗಾಯಗೊಳಿಸಿ ತಾನೂ ಪಲ್ಟಿ ಹೊಡೆದು ಸತ್ತುಹೋಗುತ್ತಾನೆ. ಇನ್ನೂ ಇಪ್ಪತ್ನಾಲ್ಕರ ಆ ಜೀವ ಇನ್ನಿಲ್ಲವಾಗುವುದರೊಂದಿಗೆ ಹೊಸವರ್ಷವು ಆ್ಯಂಬುಲೆನ್ಸ್ನ ಕುಂಯ್ಯೋ ಸದ್ದಿನ ರೂಪದಲ್ಲಿ ಬಂದು ಆ ರಾತ್ರಿ ಚೀರಿಕೊಂಡಂತಿತ್ತು.
-----
ಬೆಳಗ್ಗೆ ಸುದ್ದಿ ಓದಿಕೊಂಡ ನಡುವಯಸ್ಕನೊಬ್ಬ 'ನನ್ನ ಶಾಪವೇನೂ ಆತನಿಗೆ ತಟ್ಟಿರಲಿಕ್ಕಿಲ್ಲ' ಅಂತ ತನಗೆ ತಾನೇ ಸಮಾಧಾನ ಹೇಳಿಕೊಳ್ಳುತ್ತಿದ್ದ. ಮೃದು ಮನಸ್ಸಿನವರ ತಾಕಲಾಟವೇ ಅಂಥದ್ದು. ಅವರು ಆ ಕ್ಷಣದ ಸಾತ್ವಿಕ ಸಿಟ್ಟಿನಲ್ಲಿ ಭಯಂಕರವಾಗಿ ಶಪಿಸಿಬಿಡುತ್ತಾರೆ. ನಂತರ ತಮ್ಮ ಕಟು ಯೋಚನೆ ತಮಗೇ ಘಾಸಿ ಮಾಡಿದಂತಾಗಿ ಚಡಪಡಿಸುತ್ತಾರೆ. ಈ ವ್ಯಕ್ತಿ ಅದೇ ಸಾಲಿನವನು.
ವೈಯಕ್ತಿಕ ನೆಲೆಯಲ್ಲಿ ಯಾವ ರೀತಿಯಲ್ಲೂ ಸಂಬಂಧಪಡದ ಘಟನೆ ಅದು. ಬೆಂಗಳೂರಿನ ಜನಭರಿತ, ವಾಹನಭರಿತ ರಸ್ತೆಗಳಲ್ಲಿ ವೀಲಿಂಗ್, ವಕ್ರ ನುಗ್ಗಾಟಗಳ ರೇಸ್ಗೆ ಬೀಳುವ ಯುವಕರು ಆಗಾಗ ಕಾಣುತ್ತಿದ್ದರು. ಆಗೆಲ್ಲ ಈತ, ಇವರು ಆದಷ್ಟು ಬೇಗ ಬಿದ್ದು ಸಾಯಲಿ ಎಂದು ಶಪಿಸುತ್ತಿದ್ದ. ತಮ್ಮ ವಿಚಿತ್ರ ಆರ್ಭಟಗಳಿಂದ ಅಕ್ಕಪಕ್ಕದ ಅಮಾಯಕರನ್ನು ದಿಗಿಲಿಗೆ ಬೀಳಿಸಿ ಅವಘಡಕ್ಕೆ ಕಾರಣವಾಗುವ ಇಂಥ ಉನ್ಮಾದಿತರು ಸತ್ತರೆ ದೇಶಕ್ಕೆ ಲಾಭವೇ ಎಂಬುದವನ ನಿಲುವು. ಆದರೂ ಚೂರಾಗಿ ಬಿದ್ದಿರುವ ಸ್ಕೂಟರಿನ ಚಿತ್ರ, ಹೊಸವರ್ಷದ ಹೊಸ್ತಿಲಲ್ಲೇ ಆರಿಹೋದ ಎಳೆಜೀವ ಆತನಲ್ಲಿ ಮರುಕ ಹುಟ್ಟಿಸಿದ್ದವು. ಅದೇಕೆ ಈ ಹುಡುಗರು ಕುಡಿಯುವುದನ್ನು ಪೌರುಷವೆಂದುಕೊಳ್ಳುತ್ತಾರೆ? ತಮ್ಮ ಜೀವವನ್ನಷ್ಟೇ ಅಲ್ಲ, ಇತರರ ಪ್ರಾಣಗಳನ್ನು ಜೂಜಿಗೆ ಇಡುವ ಹಕ್ಕು ತಮ್ಮದೆಂಬಂತೆ ಅಪಾಯಕಾರಿಯಾಗಿ, ಆಕ್ರಮಣಕಾರಿಯಾಗಿ ಬೈಕು ಓಡಿಸುವುದೇ ಥ್ರಿಲ್ ಎಂದು ಇವರಿಗೆ ಏಕಾದರೂ ಅನ್ನಿಸಬೇಕು? ವಿಷಯ ಅರ್ಥವಾಗುವುದಕ್ಕೂ ಮುಂಚೆ ತೋಳೇರಿಸುವುದರಲ್ಲಿ, ಧ್ವನಿ ಏರಿಸಿ ನಿಂದಿಸುವುದರಲ್ಲಿ ತಮ್ಮ ಐಡೆಂಟಿಟಿ ಕಂಡುಕೊಳ್ಳುವುದಕ್ಕೇಕೆ ಅವರು ತಮ್ಮ ತಾಕತ್ತನ್ನು ವ್ಯಯಿಸುತ್ತಾರೆ? ಇವುಗಳಿಂದೆಲ್ಲ ಏನು ಸಾಧಿಸಿದಂತಾಗುತ್ತದೆ ಅಥವಾ ಅದುವೇ ಸಾಧನೆ ಅಂತ ಬಿಸಿರಕ್ತದ ದೊಡ್ಡ ಸಮೂಹವೊಂದು ಏಕೆ ರೋಮಾಂಚನಗೊಳ್ಳುತ್ತಿದೆ? ಹೀಗೆಲ್ಲ ಉತ್ತರವಿಲ್ಲದ ಪ್ರಶ್ನೆಗಳೊಂದಿಗೆ ಆತ ನಿದ್ದೆಗೆ ಜಾರಿದ್ದ.
----
ಆ ಹೊಡೆತದ ಆಘಾತಕ್ಕೆ ಆತ ಧಿಗಿಲ್ಲನೇ ಎದ್ದು ಕುಳಿತ. 'ಯಾರು ನೀನು? ಏ...ಏಕೆ ಹೊಡೆದೆ' ತಡವರಿಸಿದ. 'ನೀನಾಗ ಯುವಕರ ಥ್ರಿಲ್ಗಳನ್ನು ಪ್ರಶ್ನಿಸುತ್ತ ನನಗೆ ಮಾತಿನಲ್ಲಿ ಹೊಡೆದೆ. ಸ್ವಲ್ಪ ವಿಚಾರಿಸಿಕೊಂಡು ಹೋಗೋಣ ಅಂತ ಬಂದೆ.'
'ಯಾರು ನೀನು?'
'ಅವೆಲ್ಲ ಚೌಕಾಶಿಗೆ ಸಮಯವಿಲ್ಲ. ನಿನ್ನಂಥವರಿಂದ ಶಪಿಸಿಕೊಂಡು ಸತ್ತ ದುಸ್ಸಾಹಸಿಗಳ ಪಟ್ಟಿಯಲ್ಲಿ ಯಾರೋ ಒಬ್ಬನ ಆತ್ಮ ಎಂದುಕೊ. ನೀನು ಬಯ್ದಿದ್ದಕ್ಕೇನೂ ಬೇಜಾರಿಲ್ಲ. ಆದರೆ ನೀನು ಕೇಳಿಕೊಂಡ ಹಲವು ಪ್ರಶ್ನೆಗಳಿಗೆ ಸತ್ತಮೇಲೆ ಜ್ಞಾನೋದಯವಾದಂತೆ ಅಸ್ಪಷ್ಟ ಉತ್ತರ ಸಿಕ್ಕಿದೆ. ಕೇಳುವಂಥವನಾಗು...
ಈ ಒಳ್ಳೆಯತನ ಅನ್ನೋದಿದೆಯಲ್ಲ? ಅದು ಏಕಾಏಕಿ ಉದ್ಭವಿಸಿಬಿಡುವುದಿಲ್ಲ. ಹಲಸನ್ನೋ, ಮಾವನ್ನೋ ನೆಟ್ಟ ಹಾಗೆ. ಫಲ ಕೊಡುವುದಕ್ಕೆ ಒಂದಿಷ್ಟು ವರ್ಷಗಳು ಬೇಕು. ಫಲ ಕೊಡುವುದಕ್ಕೆ ಶುರುವಾದ ಮೇಲೆ ತಲೆಮಾರುಗಳನ್ನು ತಂಪಾಗಿ ಇಡುತ್ತದೆ. ಪೀಳಿಗೆಗಳ ಲೆಕ್ಕ ಇಡುವುದಕ್ಕೆ ಪುರಸೊತ್ತು ಯಾರಿಗಿದೆ? ಹುಟ್ಟುತ್ತಲೇ ನೀವು ಕನಸಿನ ಸಮವಸ್ತ್ರವೊಂದನ್ನು ತೋರಿಸುತ್ತೀರಿ. ನಾವು ಮೈಗೆಳೆದುಕೊಳ್ಳಬೇಕಾದ ಆ ಬಟ್ಟೆಯಲ್ಲಿ ಮನೆ, ಕಾರು, ಐಷಾರಾಮದ ಚಿತ್ರ ಕೆತ್ತಿದೆ. ಅದನ್ನು ಸಾಧಿಸಬೇಕಾದ ಕೋರ್ಸುಗಳ, ಅವಕ್ಕೆ ಬರೆಯಬೇಕಾದ ಪರೀಕ್ಷೆಗಳ ಹೆಸರುಗಳು ಹೆದರಿಸುತ್ತಲೇ ಹತ್ತಿರ ಕರೆದಿವೆ. ಯಶಸ್ಸು ಇಲ್ಲಿ ಸಾಧ್ಯತೆಯ ಪ್ರಶ್ನೆ ಅಲ್ಲ, ಅಸ್ತಿತ್ವದ ಪ್ರಶ್ನೆ! ಆ ಯಶಸ್ಸು ಬಾಚಬೇಕೆಂದರೆ ಅಗ್ರೆಸ್ಸಿವ್ ಆಗಬೇಕು, ಇತರರನ್ನು ಹಿಂದಿಕ್ಕಬೇಕು. ವ್ಯಾವಹಾರಿಕ ಯಶಸ್ಸೇ ಅಸ್ತಿತ್ವ ಸೂಚಕವಾಗಿರುವುದರಿಂದ ಅದನ್ನು ಪಡೆಯಲು ಎಲ್ಲರೂ ಆಕ್ರಮಣದ ಆವೇಶಕ್ಕೆ ಮೊರೆ ಹೋಗಿದ್ದಾರೆ. ಇದೊಂದು ಸೈಕಾಲಜಿ ಆಟ. ಈ ಆಟ ಹುಟ್ಟುಹಾಕಿದವರ ಅಂದಾಜಿಗೂ ನಿಲುಕದ್ದು ಅದು. ಗುರಿ ತಲುಪಲಿದ್ದೇವೆಂಬ ಡೌಲಿಗೆ ಕೆಲವರು, ತಲುಪಲಾಗದ ಹತಾಶೆಗೆ ಹಲವರು ಹೀಗೆ ಎಲ್ಲರೂ ಅಗ್ರೆಸ್ಸಿವ್ ಆಗಿದ್ದಾರೆ. ಟ್ರಾಫಿಕ್ನಲ್ಲಿ ಎರಡು ವಾಹನದ ನಡುವೆ ತಿಕ್ಕಾಟವಾದರೆ ಸರಿ-ತಪ್ಪುಗಳ ತರ್ಕಕ್ಕೂ ಮೊದಲು ಇಬ್ಬರಿಂದಲೂ ಓತಪ್ರೋತ ಬೈಯ್ಗುಳವೇ ಮೊದಲಾಗುತ್ತದೆ. ಏಕೆಂದರೆ ಬದುಕಿನ ಪ್ರತಿಹಂತದಲ್ಲಿ ಆಕ್ರಮಕವಾಗಿದ್ದರೆ ಮಾತ್ರ ನೀನು ಈ ಜಗತ್ತಿನಲ್ಲಿ ಬದುಕಬಲ್ಲೆ ಅಂತ ಈ ಸಮಾಜ ಹುಟ್ಟುತ್ತಲೇ ನಮ್ಮಲ್ಲೊಂದು ದಿಗಿಲನ್ನು ತುಂಬಿಬಿಟ್ಟಿದೆ. ಎಲ್ಲರಲ್ಲೂ ಅಸುರಕ್ಷತಾ ಭಾವ. ಇದ್ದವರಿಗೆ ಉಳಿಸಿಕೊಳ್ಳುವ ಆಕ್ರಮಣಶೀಲತೆ, ಇಲ್ಲದವರಿಗೆ ನಿಸ್ಸಹಾಯಕ ಆಕ್ರಮಣಶೀಲತೆ.
ನಮ್ಮ ಥ್ರಿಲ್ಲುಗಳನ್ನು ನಾವು ಸಿಗರೇಟು, ಕುಡಿತ, ಬೈಕ್ ಸರ್ಕಸ್ಸು, ಬಸ್ಸಿನಲ್ಲಿ ಸೀಟಿದ್ದರೂ ಬಾಗಿಲಲ್ಲಿ ಅಡ್ಡವಾಗಿ ನಿಲ್ಲುವುದು ಇಂಥ ಕ್ಷುಲ್ಲಕ ವಿಷಯಗಳಲ್ಲಿ ಹುಡುಕಿಕೊಂಡಿರುವುದೇಕೆಂದರೆ ಅವೆಲ್ಲ ಆಕ್ರಮಣಶೀಲತೆಯ, ನಾನು ದಕ್ಕಿಸಿಕೊಳ್ಳಬಲ್ಲೆ ಎಂಬ ಅಭಿವ್ಯಕ್ತಿಯ ಸಂಕೇತಗಳು. ಯುವ ಜನತೆ ಹುಚ್ಚಾಟಕ್ಕೆ ಬಿದ್ದಿದೆ ಅಂತ ಭಾರಿ ಗಾಬರಿ ತೋರಿಸಿಕೊಳ್ಳುತ್ತಿರುವ ದೊಡ್ಡವರ್ಯಾರೂ ನಮಗೆ ಬೇರೆ ರೋಮಾಂಚನಗಳ ರುಚಿ ಹತ್ತಿಸಲಿಲ್ಲ. ನೂರರ ವೇಗದಲ್ಲಿ ಬೈಕು ನುಗ್ಗಿಸಿಕೊಂಡಾಗ ಸಿಗುವ ಥ್ರಿಲ್ಗಿಂತ ಅನುಪಮವಾದ ರೋಮಾಂಚನವೊಂದು ಸುಮ್ಮನೇ ಆಸ್ಪತ್ರೆಯೊಂದಕ್ಕೆ ಸಾಗಿ ಅಲ್ಲಿ ತಲೆಮೇಲೆ ಕೈಹೊತ್ತು ಕುಳಿತವನಿಗೆ ಔಷಧ ಕೊಳ್ಳುವಲ್ಲಿ ಸಹಾಯ ಮಾಡುವುದರಲ್ಲಿದೆ ಅಂತ ನೀವೇಕೆ ಹೇಳಿಕೊಡಲಿಲ್ಲ? ಏಕೆಂದರೆ ಹಿರಿಯರೆನಿಸಿಕೊಂಡ ನಿಮಗೆಲ್ಲ ಭಯ! ಬದುಕಿನ ಸಣ್ಣ ಸಂಗತಿಗಳ ಅನನ್ಯ ಥ್ರಿಲ್ಗಳನ್ನು ತೋರಿಸಿಬಿಟ್ಟರೆ ಅದು ತನ್ನ ಮಕ್ಕಳ 'ಯಶಸ್ಸಿನ ಹಾದಿ'ಗೆ ತೊಡಕಾಗಿ ಬಿಡುತ್ತದೆ ಅಂತ. ಅದರ ರುಚಿ ಹತ್ತಿ ಆತ ವ್ಯಾವಹಾರಿಕ ಯಶಸ್ಸನ್ನು ತುಸು ಕಡೆಗಣಿಸಿಬಿಟ್ಟರೆ? ಹಾಗೆಂದೇ ಪ್ರತಿ ಪಾಲಕನೂ ತನ್ನ ಸಂತಾನಕ್ಕೆ ಆಕ್ರಮಕವಾಗುವುದನ್ನು, 'ಗಂಡಸಾಗುವುದನ್ನು' ಮಾತ್ರ ಕಲಿಸುತ್ತಿದ್ದಾನೆ. ಈ ಯಶಸ್ಸಿನ ಮಾನದಂಡವನ್ನು ಪೂರೈಸಿ 'ಸೆಟಲ್' ಆದಮೇಲೆ ಬೇಕಾದರೆ ಮೌಲ್ಯ ಮತ್ತು ಸಮಾಜದ ಬಗ್ಗೆ ಯೋಚಿಸು.
ಯಾವಾಗ ನೈತಿಕತೆಯಿಂದಿರುವುದು ರೋಮಾಂಚನದ ಸಂಗತಿ ಆಗುವುದಿಲ್ಲವೋ, ಮೌಲ್ಯ ಎಂಬುದು ಬೆಲೆಯಿಲ್ಲದ್ದಾಗುತ್ತದೆಯೋ ಆಗ ಸಮಾಜ ಆಲ್ಕೋಹಾಲ್, ಬಲಪ್ರದರ್ಶನಗಳಲ್ಲಿ ಥ್ರಿಲ್ ಹುಡುಕಿಕೊಳ್ಳುತ್ತದೆ. ಮುಂದಿರುವವರು, ನಮಗಿಂತ ಆಧುನಿಕರು ಎಂದೆಲ್ಲ ನಾವು ಬೆರಗಿನಿಂದ ನೋಡುವ ಪಾಶ್ಚಾತ್ಯ ದೇಶಗಳಲ್ಲಿ ಆಲ್ಕೋಹಾಲ್ ಹಾಗೂ ಡ್ರಗ್ಸ್ಗಳಿಗೆ ಇಲ್ಲಿಗಿಂತ ನೂರುಪಟ್ಟು ತೀವ್ರತೆಯಲ್ಲಿ ಯುವಜನತೆ ದಾಸರಾಗುತ್ತಿದ್ದಾರೆ. ಹೀಗೆ ಮುಂದುವರಿದರೆ ಇನ್ನು ಇಪ್ಪತ್ತು ವರ್ಷಗಳಲ್ಲಿ ದೇಶದ ಭವಿಷ್ಯವೇನು ಅಂತ ಅಲ್ಲಿನವರು ಆತಂಕದಿಂದ ಕುಸಿದಿದ್ದಾರೆ. ಸಂಪತ್ತನ್ನು ಹುಟ್ಟಿಸದ ಎಲ್ಲ ಕ್ರಿಯೆಗಳೂ ಅನುಪಯುಕ್ತ ಎಂದು ನಂಬಿಕೊಂಡಿದ್ದ ಆ ದೇಶಗಳ ಸಮೃದ್ಧಿ ಅಡಿಯಲ್ಲೇ ಹೀಗೊಂದು ನೋವಿನ ಸೆಳಕು ಅತಿಯಾಗಿ ಹಿಂಡುತ್ತಿದೆ...'
ಅಲ್ಲಿಯವರೆಗೂ ಸುಮ್ಮನೇ ಕೇಳುತ್ತಿದ್ದವ, 'ದೇಶ- ವಿದೇಶ ಅಂತ ಏನೇನೊ ಕತೆ ಸುತ್ತುತ್ತಿದ್ದೀಯಲ್ಲ. ಸತ್ತಮೇಲೆ ಇಷ್ಟೆಲ್ಲ ಹೆಂಗೆ ತಿಳಕೊಂಡೆ' ಅಂತ ಅಸಹನೆಯಿಂದ ಪ್ರಶ್ನಿಸಿದ.
'ದಟ್ಸ್ ಇಂಟರೆಸ್ಟಿಂಗ್. ಆತ್ಮಗಳ ನಾಡಲ್ಲಿ ಗಡಿ-ವೀಸಾ ಎಂಥದೂ ಇಲ್ಲ. ವಿಲಕ್ಷಣ ಥ್ರಿಲ್ಗಳ ಬೆನ್ನುಹತ್ತಿ ಪ್ರಾಣ ಕಳೆದುಕೊಂಡ ಎಲ್ಲರೂ ಇಲ್ಲಿ ಸೇರಿದ್ದೇವೆ. ಯದ್ವಾತದ್ವಾ ಕುಡಿದು ಹೋಟೆಲ್ ಮಹಡಿಯ ಬಾಲ್ಕನಿಯಿಂದ ಸ್ವಿಮ್ಮಿಂಗ್ಪೂಲ್ಗೆ ಹಾರುವ ತಿಕ್ಕಲುತನದಲ್ಲಿ ತಲೆ ಒಡೆದುಕೊಂಡು ಭರ್ತಿಯಾಗಿರುವ ಐರೋಪ್ಯ ರಾಷ್ಟ್ರಗಳ ಯುವಕರು ಎಷ್ಟೆಲ್ಲ ಇದ್ದಾರೆ ಗೊತ್ತಾ ಇಲ್ಲಿ? ಹಾಗೆ ನೋಡಿದರೆ ಭಾರತೀಯರಾದ ನಾವೇ ಆ ವಿಷಯದಲ್ಲಿ ತುಂಬ ಹಿಂದುಳಿದುಕೊಂಡಿದ್ದೇವೆ. ನಿರಾಸೆ ಬೇಡ, ಕೆಲವೇ ವರ್ಷಗಳಲ್ಲಿ ಅವರಂತಾಗುತ್ತೇವೆ...' ಹೀಗಂದ ಆತ್ಮ ಒಂದೇ ಸಮನೆ ಪಕಪಕನೆ ನಗತೊಡಗಿತು.
ಆ ವಿಕಟಹಾಸಕ್ಕೆ ಬೆಚ್ಚಿಬಿದ್ದ ಈತ ಈ ಬಾರಿ ನಿದ್ರೆಯಿಂದಲೂ ಕನಸಿನಿಂದಲೂ ಏಕಕಾಲಕ್ಕೆ ಹೊರಬಂದ ಎಂಬಲ್ಲಿಗೆ ಈ ಕತೆ ಮುಗಿದುಹೋಯಿತು.
------
ಉದ್ಯೋಗದ ಕಾರಣದಿಂದ ನಿರಂತರ ಪ್ರವಾಸದಲ್ಲಿರುವ, ಅವೆಲ್ಲದರ ನಡುವೆ ಕನ್ನಡ ಜಗತ್ತಿನಲ್ಲೇನಾಗುತ್ತಿದೆ ಎಂದು ಓದಿಕೊಳ್ಳುವ, ಯಾವುದೇ ದೇಶವನ್ನು ಅದರ ಮೇಲ್ಪದರದಲ್ಲಿ ಮಾತ್ರ ಗಮನಿಸದೆ ಅದರ ಆಳ ತಲ್ಲಣಗಳನ್ನು ಗ್ರಹಿಸುತ್ತ, ಇಲ್ಲಿಗೆ ಬಂದಾಗ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ, ಬರಹಗಳಿಗೆ ಸ್ಪಂದಿಸುವ ಸಹೃದಯರು ರಂಗಸ್ವಾಮಿ ಮೂಕನಹಳ್ಳಿ. ಸ್ಪೇನ್ನ ಬಾರ್ಸಿಲೋನಾ ನಿವಾಸಿಯಾಗಿರುವ ಅವರು, ವಿಮಾನ ಪ್ರಯಾಣದಲ್ಲಿ ಸಹಪ್ರಯಾಣಿಕರಾಗಿ ಬಂದ ಇಂಡಿಯನ್ ಪೀಸ್ ಕೀಪಿಂಗ್ ಫೋರ್ಸ್ನ ಯೋಧರೊಬ್ಬರ ಜತೆ ತಮ್ಮ ಮಾತುಕತೆಯ ಬಗ್ಗೆ ಹೇಳುತ್ತಿದ್ದರು. 'ದಕ್ಷಿಣ ಸುಡಾನ್ನಂಥ ಹೆಚ್ಚಿನವರು ಹೆಸರು ಕೇಳಿರದ ದೇಶಕ್ಕೆ ಹೋಗಿ ನಮ್ಮ ಯೋಧನೊಬ್ಬ ಮೌಲ್ಯವೊಂದಕ್ಕೆ ಸೆಣೆಸಿ ಸಾಯುತ್ತಾನೆಂದರೆ ಅದು ಸುಮ್ಮನೆ ಆಗುವ ಮಾತಲ್ಲ. ಮಾಡುವ ಕೆಲಸಕ್ಕೆ ಅವರಿಗೆ ಸಂಬಳ ಸಿಗುತ್ತದೆ ಎಂದೋ, ಅದವರ ಅನಿವಾರ್ಯ ಕರ್ಮ ಎಂದೋ ಉಡಾಫೆ ಮಾಡಲಾಗದಂತೆ ಅವರ ಬದುಕಲ್ಲಿ ಅಚ್ಚರಿಯ ಅಂಶಗಳಿವೆ...' ಅಂತ ಅವರು ಹೇಳುತ್ತ ಹೋದರು. ಆ ಕಥಾನಕವನ್ನು ಇದೇ ಅಕ್ಷರಪಥದಲ್ಲಿ ಮುಂದೆ ಎದುರುಗೊಳ್ಳೋಣ.
ಅಯ್ಯೋ, ಎಲ್ಲವೂ ಹಾಳಾಯಿತು ಎಂದು ಕೂಗಿಕೊಳ್ಳುವುದಕ್ಕಿಂತ ಹಾಳಾಗದೇ ಉಳಿದಿರುವುದರ ಹೆಚ್ಚುಗಾರಿಕೆಯನ್ನು ಹೇಳುವುದೇ ಬಹುಶಃ ಬದುಕಿನ ಕ್ಷುಲ್ಲಕ ಥ್ರಿಲ್ಲುಗಳಿಗೆ ಉತ್ತರ ಕೊಡುವ ಬಗೆಯಾಗಬಹುದೇನೋ. ಸಾವಿನ ಜತೆ ಆ ಯೋಧರ ಸರಸವೇಕೆ ನಮ್ಮ ಥ್ರಿಲ್ಗಳಿಗಿಂತ ಭಿನ್ನವಾಗುತ್ತದೆ? ಆ ಬಗ್ಗೆ ಬರೆಯಲೇಬೇಕಿದೆ...

-ಚೈತನ್ಯ ಹೆಗಡೆ
cchegde@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com