ಅಂಕಣಗಳು

ಕಣ್ಣಿದ್ದವರು ಕನಕಗಿರಿ ನೋಡಬೇಕು, ಕಾಲಿದ್ದವರು ಹಂಪಿಗೆ ಹೋಗಬೇಕು!

ಕಣ್ಣಿದ್ದವರು ಕನಕಗಿರಿ ನೋಡಬೇಕು, ಕಾಲಿದ್ದವರು ಹಂಪಿಗೆ ಹೋಗಬೇಕು!
Published On :

ಕಳೆದ ಎರಡು ವಾರದಿಂದ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಪ್ರವಾಸಿ ತಾಣಗಳ ಪರಿಚಯವನ್ನು ನಿಮಗೆ ಮಾಡಿಕೊಡುತ್ತಿದ್ದೇನೆ. ಈ ಪ್ರವಾಸಿ ತಾಣಗಳಿಗೆಲ್ಲ ನಾನು ಮತ್ತು ಪತಿ ರಜನೀಶ್ ಭೇಟಿ ಕೊಟ್ಟಿದ್ದೇವೆ. ಪ್ರವಾಸಿಗಳು ಅಲ್ಲಿಗೆ ಹೋಗಿ ಬರಲು ಏನು ಅಪೇಕ್ಷೆ ಮಾಡುತ್ತಾರೆ? ಅಲ್ಲೆಲ್ಲಾ ಯಾವ ಕೊರತೆಗಳಿವೆ? ಅದನ್ನು ನೀಗಿಸಲು ಯಾವ ಯೋಜನೆಯಿಂದ ಹಣ ಪಡೆಯಬಹುದು ಎಂಬುದನ್ನು ನೋಡೋಣ...
***
ಈಗ ರಾಯಚೂರು ಜಿಲ್ಲೆಗೆ ಪ್ರವೇಶಿಸೋಣ. ರಾಜರ ಊರು ರಾಯಚೂರು. ಇದು ಜಾತ್ರೆಗಳ ಜಿಲ್ಲೆ. ಹರಿದಾಸರ ವಿದ್ವತ್ತು, ವಿವೇಕದ ಜೊತೆಗೆ ವಿದ್ಯುತ್ ಸ್ಥಾವರ ಹೊಂದಿರುವ ಜಿಲ್ಲೆ. ಇಲ್ಲಿಂದ ಹರಿದಾಸ ಸಾಹಿತ್ಯದ ಪರಂಪರೆಯನ್ನು ಇಡೀ ಜಗತ್ತಿಗೆ ಸಾರಲಾಗಿದೆ. ರಾಯಚೂರು ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತಜಿಲ್ಲೆಯಾಗಿದೆ. ಇಲ್ಲಿ ಬಂಗಾರದ ನಿಕ್ಷೇಪವಿರುವ ಹಟ್ಟಿ ಚಿನ್ನದ ಗಣಿ ಇದೆ. ರಾಯಚೂರು ನಗರದಲ್ಲಿರುವ ಭವ್ಯಕೋಟೆ ಹಾಗೂ ವಸ್ತು ಸಂಗ್ರಹಾಲಯ ಪ್ರವಾಸಿಗರ ಆಕರ್ಷಣೀಯ ಸ್ಥಳವಾಗಿವೆ.
ಇನ್ನು ಲಿಂಗಸೂಗೂರು ತಾಲೂಕಿನಲ್ಲಿನ ಇತಿಹಾಸ ಪ್ರಸಿದ್ಧ ಮಸ್ಕಿ ಶಾಸನವನ್ನು ನಾವು ವೀಕ್ಷಿಸೋಣ. ಸಾಮ್ರಾಟ್ ಅಶೋಕನ ಇತಿಹಾಸ ತಿಳಿಯಲು ಈ ಶಾಸನ ತುಂಬಾ ಪ್ರಾಮುಖ್ಯ ಪಡೆದಿದೆ. ಕ್ರಿ.ಪೂ 250 ರಲ್ಲಿ ಅಶೋಕನನ್ನು ಪ್ರಥಮಬಾರಿಗೆ ದೇವನಾಂಪ್ರಿಯ ಅಶೋಕ ಎಂಬ ಹೆಸರಿನಿಂದ ಗುರುತಿಸಲಾಯಿತು ಎಂಬುದನ್ನು ಈ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಭಾರತೀಯ ಪ್ರಾಚ್ಯವಸ್ತು ಇಲಾಖೆಯಿಂದ ಸಂರಕ್ಷಿಸಲ್ಪಟ್ಟ ಇದು ರಾಷ್ಟ್ರೀಯ ಸ್ಮಾರಕವಾಗಿದೆ.
ಲಿಂಗಸೂಗೂರು ತಾಲೂಕಿನಲ್ಲಿರುವ ಮುದಗಲ್ ಕೋಟೆ, ಕ್ರಿ.ಶ. ಹದಿನಾಲ್ಕನೇ ಶತಮಾನದ ವಿಜಯನಗರದ ಅರಸರ ಕಾಲದಲ್ಲಿ ನಿರ್ಮಿತವಾಗಿರುವ ತುಂಬಾ ವಿಶಾಲವಾದ ಕೋಟೆ. ಇದು ಹೈದ್ರಾಬಾದ್ ಕರ್ನಾಟಕದ ಹೆಮ್ಮೆಯ ಕೋಟೆಗಳಲ್ಲೊಂದು.
ಈಗ ಕೊಪ್ಪಳ ಜಿಲ್ಲೆಗೆ ಹೋಗೋಣ. 'ಮಹಾಕೋಪಣನಗರ' ಎಂಬುದು ಕೊಪ್ಪಳದ ಪುರಾತನ ಹೆಸರು. ಇದು ಮಹಾಕಾವ್ಯ ರಾಮಾಯಣದಲ್ಲಿ ಬರುವ 'ಆಂಜನೇಯನಿಗೆ' ಜನ್ಮ ನೀಡಿದ ಜಿಲ್ಲೆ ಎಂದು ಖ್ಯಾತಿ ಪಡೆದಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿರುವ 'ಇಟಗಿ' ಒಂದು ಚಿಕ್ಕ ಗ್ರಾಮವಾದರೂ ಅದ್ಭುತವಾದ ತಾಣ. ಶಿಲ್ಪಕಲೆಗೆ ಹೆಸರಾಗಿ ದೇವಾಲಯಗಳ ಚಕ್ರವರ್ತಿ ಎನಿಸಿಕೊಂಡಿರುವ ಮಹಾದೇವನ ದೇವಾಲಯ ಇರುವುದು ಇಲ್ಲಿಯೇ. ರಾಷ್ಟ್ರೀಯ ಸ್ಮಾರಕವಾದ ಈ ದೇವಾಲಯ ಚಾಲುಕ್ಯರ ಶೈಲಿಯಲ್ಲಿ ನಿರ್ಮಾಣಗೊಂಡಿತು.  ಹನ್ನೊಂದನೇ ಶತಮಾನದಲ್ಲಿ ಆರನೇ ವಿಕ್ರಮಾದಿತ್ಯನ ಮಂತ್ರಿ ಮಹಾದೇವ ಎಂಬ ದಂಡನಾಯಕನು ಇದನ್ನು ನಿರ್ಮಿಸಿದನು. ಕುಸರಿ ಕಂಬಗಳು, ಸುಂದರ ಮೇಲ್ಫಾವಣಿ, ಗರ್ಭಗೃಹ ಪ್ರದಕ್ಷಿಣಾ ಪಥ ಮತ್ತು ಅತ್ಯದ್ಭುತ ಕೆತ್ತನೆಯ ಶಿಲ್ಪಗಳು ಮೌನ ರೂಪದ ರೂಪದರ್ಶಿಗಳಾಗಿ ನಿಂತಿವೆ. ಇಡೀ ದೇವಾಲಯವೇ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದೆ. ಈ ದೇವಾಲಯವು ಬೇಲೂರು ಹಾಗೂ ಹಳೆಬೀಡಿನ ಶಿಲ್ಪಕಲೆಗೆ ಸಮವಾಗಿದೆ ಎಂದರೆ ತಪ್ಪಾಗಲಾರದು. ಕುಕನೂರು "ಗವಿಮಠ"ದಂತಹ ವಾಸ್ತುಶಿಲ್ಪ ಕೇಂದ್ರಗಳನ್ನು ನಾವು ಕೊಪ್ಪಳ ಜಿಲ್ಲೆಯಲ್ಲಿ ಕಾಣಬಹುದು. ಇದು  ದೊಡ್ಡ ಗುಹೆಯಲ್ಲಿ ಪ್ರಾಚೀನ ಕಾಲದಿಂದಲೂ ಇರುವುದರಿಂದ ಇದನ್ನು "ಗವಿಮಠ"ವೆಂದು ಕರೆಯುತ್ತಾರೆ.
ಇದೇ ಜಿಲ್ಲೆಯ ಇನ್ನೊಂದು ಪ್ರಮುಖ ಪಟ್ಟಣ ಕನಕಗಿರಿ. ಕಣ್ಣಿದ್ದವರು ಕನಕಗಿರಿ ನೋಡಬೇಕು ಮತ್ತು ಕಾಲಿದ್ದವರು ಹಂಪಿಯನ್ನು ನೋಡಬೇಕು ಎಂಬ ನಾಣ್ಣುಡಿಯಿದೆ. ಇಲ್ಲಿಗೆ ಬೇಟಿ ಕೊಟ್ಟಾಗ ಆ ನಾಣ್ಣುಡಿ ಎಷ್ಟು ಸತ್ಯವಾದದ್ದು ಎನ್ನುವುದು ಅರಿವಾಗುತ್ತದೆ. ಇಲ್ಲಿರುವ ಲಕ್ಷ್ಮೀನರಸಿಂಹಸ್ವಾಮಿ ಅಥವಾ ಕನಕಾಚಲ ದೇವಸ್ಧಾನ ಅತಿ ಸುಂದರವಾದ ಶಿಲ್ಪಕಲಾ ವೈಭವದಿಂದ ಕೂಡಿದೆ. ಈ ದೇವಾಲಯವನ್ನು ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಶ್ರೀ ಕೃಷ್ಣದೇವರಾಯರ ಸಹಕಾರದಿಂದ ನವಾಬ ಉಡಚ ನಾಯಕನು ನಿರ್ಮಿಸಿದನು. ವಿಶಾಲವಾದ ಪ್ರದಕ್ಷಿಣಾಪಥ, ಅದ್ಭುತ ಶಿಲ್ಪಕಲೆಗಳಿಂದ ಕೂಡಿದ ಸ್ಥಂಭಗಳು, ಹೊರಗಡೆ ಇರುವ ಬೃಹತ್ ಆಂಜನೇಯ ಮೂರ್ತಿ ಇಲ್ಲಿನ ವೈಶಿಷ್ಟ್ಯ.
ಇವುಗಳಲ್ಲದೆ ವಿಶ್ವ ಪರಂಪರೆಯ ಸ್ಥಳಗಳಲ್ಲಿ ಒಂದಾದ ಬ್ರಿಟನ್ನಿನ ವಿಲ್ಟಷೈರ್‌ನಲ್ಲಿರುವ ಅಸಂಖ್ಯಾತ ಪ್ರವಾಸಿಗರ ಮನಸೆಳೆಯುವ ಸ್ಟೋನ್ ಹಾಝಸ್‌ಗಳನ್ನು ಹೋಲುವ ಅವಶೇಷಗಳನ್ನು ನಾವು ಗಂಗಾವತಿ ತಾಲೂಕಿನ ಹಿರೇಬೆನಕಲ್ಲು ಗ್ರಾಮದಲ್ಲಿ ಕಾಣಬಹುದು. ಇವು  ಸುಮಾರು ಮೂರು ಸಾವಿರ ವರ್ಷಗಳಷ್ಟು ಹಳೆಯದಾದ ಆದಿ ಮಾನವರ ಅವಶೇಷಗಳು. ಈ ಗ್ರಾಮದ ಹತ್ತಿರ ಸುಮಾರು ಹತ್ತು ಸಾವಿರ ಹೆಕ್ಟೇರ್ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಹಬ್ಬಿಕೊಂಡಿರುವ ಬೆಟ್ಟದ ತುದಿಯಲ್ಲಿ ಇವನ್ನು ನಾವು ಕಾಣಬಹುದು. ಆ ಕಾಲದಲ್ಲಿ ಯಾವುದೇ ಭಾರ ಎತ್ತುವ ಯಂತ್ರಗಳ ಸಹಾಯವಿಲ್ಲದೇ ನಮ್ಮ ಪೂರ್ವಜರು ಅತಿ ದೊಡ್ಡ ಬಂಡೆಗಲ್ಲುಗಳನ್ನು ಕೊರೆದು ಹತ್ತ್ಢುಹತ್ತು ಅಳತೆಯ ಕಲ್ಲುಗಳನ್ನು ಜೋಡಿಸಿ ಶಿಲಾಸಮಾಧಿಗಳನ್ನು ನಿರ್ಮಾಣ ಮಾಡಿದ್ದು ಅವರ ತಂತ್ರಜ್ಞಾನ ಪ್ರಾವಿಣ್ಯಕ್ಕೆ ಸಾಕ್ಷಿಯಾಗಿದೆ. ಇದೊಂದು ಅದ್ಭುತವಾದ, ಕಲ್ಪನಾತೀತವಾದ, ನಿಬ್ಬೆರಗಾಗಿಸುವಂತಹ ಜಾಗ. ಇದು ಪ್ರಾಚೀನ ಕಾಲದ ಜನಜೀವನವನ್ನು ಬಿಂಬಿಸುವ ಸ್ಥಳವಾಗಿದೆ. ಈ ಶಿಲಾ ಸಮಾಧಿಗಳನ್ನು ಸ್ಥಳೀಯರು 'ಮೊರೆರ' ಮನೆಗಳೆಂದೂ ಮತ್ತು ಅಲ್ಲಿರುವ ಬೆಟ್ಟಕ್ಕೆ ನಗಾರಿಗುಡ್ಡವೆಂದೂ ಕರೆಯುತ್ತಾರೆ. ಇಲ್ಲಿರುವ ಬಂಡೆಗಲ್ಲುಗಳು ಸಾವಿರಾರು ವರ್ಷಗಳಿಂದಲೂ ಬೀಳದಂತೆ ತಮ್ಮ ಸಮತೋಲನವನ್ನು ಕಾಪಾಡಿಕೊಂಡು ನಿಂತಿರುವುದು ಅದ್ಭುತವಲ್ಲವೇ? ಅಲ್ಲದೆ ಇಲ್ಲಿನ ಕೆಲವು ಬಂಡೆಗಲ್ಲುಗಳನ್ನು ಬಾರಿಸಿ ನೋಡಿದರೆ ನಗಾರಿ ಬಾರಿಸಿದ ಶಬ್ದ ಬರುತ್ತದೆ. ವ್ಹಾ ಎಂತಹ ಅದ್ಭುತ! ನಾವು ಈ ಗುಡ್ಡ ಹತ್ತಿದಾಗ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಅಲ್ಲಿ ಸಂಶೋಧನೆಯನ್ನು ನಡೆ ಸಲು ಬಂದಿದ್ದರು. ಸ್ಥಳೀಯರು ವಿಶೇಷವಾಗಿ ಅಮಾವಾಸ್ಯೆಯ ದಿನ ಇಲ್ಲಿಂದ ಕಲ್ಲುಗಳನ್ನು ಅಗೆದು ಹಳೆ ನಿಧಿಯನ್ನು ಹುಡುಕಲು ಪ್ರಯತ್ನ ಮಾಡಿರುವುದರಿಂದ ಈ ಪುರಾತನ ಆಸ್ತಿ ಹಾಳಾಗುತ್ತಿದೆ ಎಂದು ವಿಷಾದಿಸಿದರು. ಆಗ ನಾವು ಭಾರತೀಯ ಪ್ರಾಚ್ಯವಸ್ತು ಇಲಾಖೆಯವರನ್ನು ಕೋರಿ ಸಂರಕ್ಷಣೆ ಒದಗಿಸಿದ್ದೆವು. ಅಲ್ಲದೆ ಜಿಲ್ಲಾ ಪಂಚಾಯತ್ ವತಿಯಿಂದ ರಸ್ತೆ ಅಭಿವೃದ್ಧಿ ಪಡಿಸಿದ್ದೆವು.
ಈ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಎಂಬಲ್ಲಿ 'ಅಂಜನಾದ್ರಿ' ಬೆಟ್ಟವಿದೆ. ಇದನ್ನು ಕಿಷ್ಕಿಂದಾ ನಗರಿ ಎಂತಲೂ ಕರೆಯುತ್ತಾರೆ. ಇಲ್ಲಿಯೇ ಹನುಮಂತನು ಜನಿಸಿದನೆಂದು ನಂಬಲಾಗಿದೆ. ರಾಮಾಯಣದ ಅನೇಕ ಪ್ರಮುಖ ಘಟನೆಗಳಾದ 'ಸುಂದರಕಾಂಡ', 'ಸುಗ್ರೀವ-ಹನುಮಂತರೊಡನೆ ರಾಮನ ಭೇಟಿ' ಮುಂತಾದ ಘಟನೆಗಳು ಜರುಗಿದ ಸ್ಧಳವಾಗಿದೆ. ಸುಮಾರು ಆರು ನೂರು ಮೆಟ್ಟಿಲುಗಳನ್ನೇರಿ ಹೋದರೆ ಅಲ್ಲಿ ಮಗು ಆಂಜನೇಯನನ್ನು ಎತ್ತಿಕೊಂಡ ಅಂಜನಾದೇವಿಯ ದೇವಸ್ಧಾನವಿದೆ. ಆ ನಯನ ಮನೋಹರವಾದ ದೃಶ್ಯ ಮನಸ್ಸಿಗೆ ಮುದ ನೀಡುತ್ತದೆ. ಇದು ನಿಜಕ್ಕೂ ಹೈದ್ರಾಬಾದ್ ಕರ್ನಾಟಕದ ಅದ್ಭುತ ಪ್ರದೇಶವೇ ಸರಿ. ಆನೆಗೊಂದಿಯಿಂದ ದೋಣಿ ವಿಹಾರದ ಮೂಲಕ ಕೇವಲ ಹತ್ತು ನಿಮಿಷದಲ್ಲಿ ತುಂಗಭದ್ರೆಯನ್ನು ದಾಟಿ ಹಂಪಿಯನ್ನು ತಲುಪಬಹುದು. ಹೆಚ್ಚಾಗಿ ಜನ ಇಲ್ಲಿಗೆ ಬರುವುದು ಕಡಿಮೆ. ಅದುದರಿಂದ ಹಂಪಿಗೆ ಬಂದವರನ್ನು ಇಲ್ಲಿಗೆ ಬರುವಂತೆ ಮಾಡುವುದು ನಮ್ಮ ಗುರಿ ಆಗಿತ್ತು.
ಬಳ್ಳಾರಿ ಜಿಲ್ಲೆ ಅಂದಾಕ್ಷಣ ನಮ್ಮೆಲ್ಲರಿಗೂ ನೆನಪಾಗುವುದು ವಿಶ್ವ ವಿಖ್ಯಾತ ಹಂಪಿ.  ಕ್ರಿ.ಶ.1336 ರಿಂದ 1565ರವರೆಗೆ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದು ಭಾರತದ ಇತಿಹಾಸದಲ್ಲಿ ರಾರಾಜಿಸುತ್ತಿರುವ ಹಂಪೆಯ ವೈಭವ ವರ್ಣನಾತೀತವಾಗಿದೆ.
ಇದು ವಿಶ್ವ ಪಾರಂಪರಿಕ ಸ್ಥಳಗಳಲ್ಲಿ ಒಂದು. ಹಂಪಿಯಲ್ಲಿನ ಪ್ರತಿಯೊಂದು ಶಿಲೆಯೂ ಒಂದೊಂದು ಕಥೆಯನ್ನು ಹೇಳುತ್ತವೆ. ವಿರೂಪಾಕ್ಷ ದೇವಸ್ಧಾನ, ಹಜಾರರಾಮನ ಗುಡಿ, ಮಹಾನವಮಿ ದಿಬ್ಬ, ಕಲ್ಲಿನರಥ, ಸಂಗೀತ ಶಿಲೆಗಳು, ಕಮಲ್ ಮಹಲ್, ಉಗ್ರ ನರಸಿಂಹರ ಮೂರ್ತಿ, ಸಾಸಿವೆ ಕಾಳು ಮತ್ತು ಕಡಲೆಕಾಳು ಗಣಪತಿ, ಹೀಗೆ ಹಂಪಿಯ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಹಂಪೆಯ ಶಿಲ್ಪಕಲಾ ವೈಭವವನ್ನು ಅನೇಕ ವಿದೇಶಿ ಪ್ರವಾಸಿಗರೂ ಸಹ ಹಾಡಿ ಹೊಗಳಿದ್ದಾರೆ. ಭಾರತದ ಶಿಲ್ಪಕಲಾ ಕೇಂದ್ರಗಳಲ್ಲಿ ಒಂದು ವಿಶಿಷ್ಟ ಸ್ಥಾನವನ್ನು ಪಡೆದಿರುವ ಹಂಪಿ ನಮ್ಮ ಹೈದ್ರಬಾದ್ ಕರ್ನಾಟಕ ಪ್ರದೇಶದಲ್ಲಿ ಇರುವುದು ಅತ್ಯಂತ ಹೆಮ್ಮೆಯ ಸಂಗತಿ. ವರ್ಷವಿಡೀ ಅಸಂಖ್ಯಾತ ಪ್ರವಾಸಿಗರು ಹಂಪಿಯನ್ನು ವೀಕ್ಷಿಸಲು ಬರುತ್ತಾರೆ.
ಇದೀಗ ನಾವು ನೋಡಿದ್ದು ಕೆಲವು ಸ್ಥಳಗಳನ್ನು ಮಾತ್ರ. ನಮ್ಮ ಭಾಗದಲ್ಲಿ ಇನ್ನೂ ಬೆಳಕಿಗೆ ಬಾರದೆ ಇರುವ ಅನೇಕ ಸ್ಥಳಗಳಿವೆ. ಅವುಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ...



- ಶಾಲಿನಿ ರಜನೀಶ್, ಐಎಎಸ್
anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.