ಅಂಕಣಗಳು

ಡಬ್ಬಿಂಗ್ ವಿರೋಧಿಗಳ ಸಂಸ್ಕೃತಿ ಪ್ರೇಮ ಇದೇನಾ?

Published On :

ಕನ್ನಡದಲ್ಲಿ ಡಬ್ಬಿಂಗಿಗೆ ಅವಕಾಶ ಬೇಕೇ ಬೇಡವೇ ಎಂಬ ವಿವಾದ ಈಗ ತಾರ್ಕಿಕ ಹಂತಕ್ಕೆ ತಲುಪುತ್ತಿದೆ. ಭಾರತದ ಸಂವಿಧಾನವಾಗಲಿ, ಕರ್ನಾಟಕದ ಯಾವುದೇ ಕಾನೂನುಗಳಾಗಲಿ ಡಬ್ಬಿಂಗ್ ಅನ್ನು ನಿಷೇಧಿಸಿಲ್ಲವಾದರೂ, ಹಲವಾರು ವರುಷಗಳಿಂದ ಕನ್ನಡದಲ್ಲಿ ಡಬ್ಬಿಂಗ್ ಮೇಲೆ ಖಾಸಗಿ ನಿಷೇಧವೊಂದು ಜಾರಿಯಲ್ಲಿದೆ. ಈ ಖಾಸಗಿ ನಿರ್ಬಂಧದಿಂದಾಗಿ ಜಗತ್ತಿನ ಅತ್ಯುತ್ತಮ ಮನರಂಜನೆಯ ಚಿತ್ರಗಳನ್ನಾಗಲಿ, ಡಿಸ್ಕವರಿ, ಹಿಸ್ಟರಿ ಥರದ ಜ್ಞಾನವಾಹಿನಿಗಳನ್ನಾಗಲಿ ಇಲ್ಲವೇ ಮಕ್ಕಳ ಮೆಚ್ಚಿನ ಪೋಗೊ, ಕಾರ್ಟೂನ್ ನೆಟ್‌ವರ್ಕ್‌ನಂತಹ ವಾಹಿನಿಗಳನ್ನು ಕನ್ನಡದಲ್ಲಿ ನೋಡುವ ಆಯ್ಕೆ ಸ್ವಾತಂತ್ರ್ಯದಿಂದ ಕನ್ನಡಿಗರು ವಂಚಿತರಾಗಿದ್ದಾರೆ. ಜ್ಞಾನ, ಮನರಂಜನೆಯನ್ನು ಅರಸಿ ಇನ್ನೊಂದು ನುಡಿಯನ್ನು ಆಶ್ರಯಿಸುವಂತಹ ಸ್ಥಿತಿ ಹುಟ್ಟು ಹಾಕಿರುವುದರಿಂದಾಗಿ ಕರ್ನಾಟಕದಲ್ಲಿ ಪರನುಡಿಗಳು ಬೇರೂರುತ್ತಿರುವುದಲ್ಲದೇ ಕನ್ನಡವು ಜ್ಞಾನ, ಮನರಂಜನೆಯ ವಿಷಯಗಳಲ್ಲಿ ಮೊದಲ ಆಯ್ಕೆಯ ನುಡಿಯಾಗಿ ತನ್ನ ಸ್ಥಾನ ಕಳೆದುಕೊಂಡು ಸೊರಗುತ್ತಿದೆ. ಮೊದ ಮೊದಲು ಗಡಿ ಭಾಗಕ್ಕೆ ಸೀಮಿತವಾಗಿದ್ದ ಪರನುಡಿಗಳ ಅಬ್ಬರ ಈಗ ಮಲೆನಾಡು, ಬಯಲುಸೀಮೆ, ಕರಾವಳಿಯೆನ್ನದೇ ಎಲ್ಲ ಭಾಗಕ್ಕೂ ವ್ಯಾಪಿಸುತ್ತಾ ಕನ್ನಡದ ಬುಡವನ್ನೇ ಅಲುಗಾಡಿಸುತ್ತಿದೆ. ವಿಶ್ವಸಂಸ್ಥೆಯು ಡಬ್ಬಿಂಗ್ ಅನ್ನು ಒಂದು ಭಾಷೆಯನ್ನು ಪಸರಿಸುವ ಸಾಧನವೆಂದೇ ಕರೆದಿದೆ. ಜಗತ್ತಿನ ಹಲವು ದೇಶಗಳು ಡಬ್ಬಿಂಗ್ ಅನ್ನು ಭಾಷೆ ಪಸರಿಸುವ ಸಾಧನವೆಂದು ನೋಡುತ್ತಿದ್ದರೂ ಕರ್ನಾಟಕ ಮಾತ್ರ ಇನ್ನೊಂದು ದಿಕ್ಕಿನಲ್ಲಿ ನಡೆಯುತ್ತ ಸಾಮಾನ್ಯ ಕನ್ನಡಿಗರ ಆಯ್ಕೆ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಾ, ಕನ್ನಡದ ಸಾಧ್ಯತೆಯನ್ನು ಕುಗ್ಗಿಸುತ್ತಾ ಬರುತ್ತಿರುವುದು ದುರಂತವೇ ಸರಿ.
ಇವತ್ತು ಕನ್ನಡ ಗ್ರಾಹಕನ ಮುಂದೆ ಎಲ್ಲ ವಿಷಯಕ್ಕೂ ಹತ್ತಾರು ಆಯ್ಕೆಗಳಿವೆ. ಆದರೆ ಜ್ಞಾನ, ಮನರಂಜನೆಯ ಸಿನೆಮಾ ಮತ್ತು ವಾಹಿನಿಗಳ ವಿಷಯದಲ್ಲಿ ಮಾತ್ರ ಆತ ಯಾವ ನುಡಿಯಲ್ಲಿ ನೋಡಬೇಕು, ಏನು ನೋಡಬೇಕು, ಏನು ನೋಡಬಾರದು ಅನ್ನುವುದನ್ನು ಕೆಲವೇ ಕೆಲವು ಖಾಸಗಿ ಸಂಸ್ಥೆಗಳು ನಿರ್ಧರಿಸುವ ಹಾಗಾಗಿರುವುದು ಪ್ರಜಾಪ್ರಭುತ್ವಕ್ಕೆ ಸಲ್ಲದ ನಡೆಯಾಗಿದೆ. ಪರ ಭಾಷೆಯ ಚಿತ್ರಗಳನ್ನು ಯಥಾವತ್ ಭಟ್ಟಿ ಇಳಿಸಿದಾಗ ಹಾಳಾಗದ ಕನ್ನಡ ಸಂಸ್ಕೃತಿ ಡಬ್ಬಿಂಗ್ ಬಂದರೆ ಹಾಳಾಗುತ್ತದೆ ಅನ್ನುವುದು ಅತಿರೇಕದ ತರ್ಕವೇ ಸರಿ. ಕನ್ನಡ ಚಿತ್ರಗಳಿಂದ ಕನ್ನಡ ಸಂಸ್ಕೃತಿಯ ಉಳಿವು ಅನ್ನುವುದಾಗಿದ್ದರೆ ಇಷ್ಟೊತ್ತಿಗೆ ಕನ್ನಡದ ಯುವಕರು, ಮಕ್ಕಳೆಲ್ಲ ಮಚ್ಚು, ಕೊಚ್ಚು ಎಂದು ಓಡಾಡಬೇಕಿತ್ತು. ಪರ ಭಾಷೆಯ ಕಲಾವಿದರು, ಹಾಡುಗಾರರು, ತಂತ್ರಜ್ಞರು, ನಿರ್ದೇಶಕರನ್ನು ಕರೆತಂದು ಕನ್ನಡ ಸಿನೆಮಾ ಮಾಡಿದಾಗ ಇಲ್ಲವೇ ಕನ್ನಡ ಚಿತ್ರಗಳನ್ನು ಪರ ಭಾಷೆಗೆ ಡಬ್ ಮಾಡಿ ಹಣ ಮಾಡುವಾಗ ಕಾಡದ ಸಂಸ್ಕೃತಿ, ಉದ್ಯೋಗದ ಪ್ರಶ್ನೆ ಡಬ್ಬಿಂಗ್ ವಿಷಯದಲ್ಲಿ ಮಾತ್ರ ಕಾಣುತ್ತಿರುವುದು ಕನ್ನಡ ಚಿತ್ರೋದ್ಯಮದ ಇಬ್ಬಗೆಯ ನೀತಿಗೆ ಹಿಡಿದ ಕನ್ನಡಿಯೆನ್ನಬಹುದು. ಕನ್ನಡಿಗ ಗ್ರಾಹಕರಿಗೆ ಕನ್ನಡದಲ್ಲಿ ಜಗತ್ತನ್ನು ಕಾಣಲಾಗುವಂತೆ ಡಬ್ಬಿಂಗ್ ಮೇಲಿನ ನಿಷೇಧವನ್ನು ಹೋಗಲಾಡಿಸುವುದು ಈಗಿನ ಅಗತ್ಯವಾಗಿದೆ. ಈ ವಿಷಯ ಸಿಸಿಐ ನ್ಯಾಯಾಲಯದಲ್ಲಿದ್ದು, ನ್ಯಾಯಾಲಯ ಕನ್ನಡಿಗರಿಗೆ ನ್ಯಾಯ ಕಲ್ಪಿಸಲಿದೆ ಅನ್ನುವ ನಿರೀಕ್ಷೆ ಎಲ್ಲರದ್ದಾಗಿದೆ.
ಈ ಸಂದರ್ಭದಲ್ಲಿ ಕನ್ನಡಿಗರೆಲ್ಲರ ಪ್ರತಿನಿಧಿಯಾದ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ, ಸಾಮಾನ್ಯ ಜನರ ಅನಿಸಿಕೆಯನ್ನು ಅವರಿಗೆ ತಿಳಿಸಲೆಂದು ಅಂತರ್ಜಾಲದಲ್ಲಿ ಒಂದು ಸಹಿ ಸಂಗ್ರಹ ಅಭಿಯಾನ ನಡೆಸಲಾಗುತ್ತಿದೆ. ಸಂವಿಧಾನವು ಯಾವುದೇ ರೀತಿಯಲ್ಲೂ ಮಾನ್ಯ ಮಾಡದಿರುವ, ಡಬ್ಬಿಂಗ್ ಮೇಲಿನ ನಿಷೇಧವನ್ನು ತೆರವುಗೊಳಿಸುವಂತೆ ಮುಖ್ಯಮಂತ್ರಿಗಳನ್ನು ಕೋರುವ ಅಭಿಯಾನಕ್ಕೆ ಜನಸಾಮಾನ್ಯರು ಈ ಕೊಂಡಿಯಲ್ಲಿ ಸಹಿ ಮಾಡಬಹುದು  ಡಿಡಿಠ://ಝಛಟಿ.್ಜಜ/ಓ9ಋಠ8. ಕನ್ನಡಿಗರ ಆಯ್ಕೆ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಹೊಣೆ ಸಂವಿಧಾನಬದ್ಧವಾದ ಕರ್ನಾಟಕ ಸರ್ಕಾರದ್ದಾಗಿದ್ದು, ಅಸಂವಿಧಾನಿಕವಾದ ಡಬ್ಬಿಂಗ್ ನಿಷೇಧವನ್ನು ಅವರು ತೆರವುಗೊಳಿಸಲಿ ಅನ್ನುವ ಈ ಸಹಿ ಸಂಗ್ರಹ ಅಭಿಯಾನಕ್ಕೆ ಪ್ರಜಾಪ್ರಭುತ್ವ, ಕಾನೂನು ಮತ್ತು ಆಯ್ಕೆ ಸ್ವಾತಂತ್ರ್ಯದಲ್ಲಿ ನಂಬಿಕೆ ಇರುವ ಕನ್ನಡಿಗರು ಸಹಿ ಮಾಡಿ ಬೆಂಬಲ ಸೂಚಿಸಬೇಕೆಂದು ಈ ಮೂಲಕ ಕೋರಿಕೊಳ್ಳುತ್ತೇವೆ.


 -ಪ್ರಿಯಾಂಕ್ ಕತ್ತಲಗಿರಿ,
ಆನಂದ್. ಜಿ., ಇನ್ನಿತರರು


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.