ಬಾಂಗ್ಲಾ ಹಿಂದುಗಳ ಯಾತನೆಗೆ ಭಾರತ ಮೌನ

ಬಾಂಗ್ಲಾದೇಶದಲ್ಲಿ ಮತ್ತೊಂದು ಹಿಂಸಾತ್ಮಕ ಚುನಾವಣೆ ಮುಗಿದಿದೆ. ಹಿಂಸೆಗೆ ಕಾರಣ ಏನೇ ಇದ್ದರೂ, ಎಂದಿನಂತೆ ಹಿಂಸೆಗೊಳಗಾದವರು ಅಲ್ಲಿನ ಅಲ್ಪಸಂಖ್ಯಾತ ಹಿಂದುಗಳೇ. ಪ್ರಧಾನಮಂತ್ರಿಯಾಗಿ ಆವಾಮಿ ಲೀಗ್ ಪಕ್ಷದ ಶೇಖ್ ಹಸೀನಾ ಸತತ ಎರಡನೆಯ ಬಾರಿಗೆ ಅಧಿಕಾರ ವಹಿಸಿಕೊಂಡಿದ್ದಾರಾದರೂ, ಅವರ ಗೆಲುವನ್ನು ನೋಡಿ ಸಂಭ್ರಮಿಸಲಾಗದಂಥ ದುರಂತ ಸನ್ನಿವೇಶದಲ್ಲಿ ಅಲ್ಲಿನ ಅಲ್ಪಸಂಖ್ಯಾತ ಹಿಂದುಗಳು ಸಿಲುಕಿದ್ದಾರೆ. ಈಗಂತೂ ಅಲ್ಲಿ ಚುನಾವಣೆಗಳು ಶುರುವಾಗುತ್ತವೆ ಎಂದರೆ ಸಾಕು ಹಿಂದುಗಳು ಥರಗುಟ್ಟಿ ಹೋಗುತ್ತಾರೆ. ಕಳೆದ 20 ವರ್ಷಗಳಿಂದ ಆ ರಾಷ್ಟ್ರದ ನಿಯಂತ್ರಣ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷದ ಖಲೀದಾ ಜಿಯಾ ಮತ್ತು ಆವಾಮಿ ಲೀಗ್ನ ಶೇಖ್ ಹಸೀನಾ ಅವರ ಕೈಗಳಲ್ಲಿ ಹಸ್ತಾಂತರವಾಗುತ್ತಾ ಬಂದಿದೆ. ಜಾತ್ಯತೀತ ನಿಲುವಿನ ಶೇಖ್ ಹಸೀನಾ ಅವರ ಪಕ್ಷವನ್ನು ಅಲ್ಪಸಂಖ್ಯಾತ ಹಿಂದುಗಳು ಬೆಂಬಲಿಸುತ್ತಲೇ ಬಂದಿದ್ದರೆ, ಕಟ್ಟರ್ಪಂಥಿ ಮುಸಲ್ಮಾನರು ಮಣೆ ಹಾಕುವುದು ಖಲೀದಾ ಜಿಯಾ ಅವರ ಪಕ್ಷಕ್ಕೆ. ಏಕೆಂದರೆ, ಬಾಂಗ್ಲಾದೇಶದಲ್ಲಿ ಮುಸಲ್ಮಾನರಷ್ಟೇ ಬದುಕಬೇಕು ಎನ್ನುವ ಧರ್ಮಾಂಧ ಸಿದ್ಧಾಂತವೇ ಬಿಎನ್ಪಿಯ ಪ್ರಮುಖ ಬುನಾದಿ.
2001-2006ರಲ್ಲಿ ಮತಾಂಧ ಜಮಾತೆ ಇಸ್ಲಾಮಿ ಪಕ್ಷದೊಂದಿಗೆ ಕೈ ಜೋಡಿಸಿದ್ದ ಬಿಎನ್ಪಿ, ಹಿಂದು ವಿರೋಧಿ ಮನಸ್ಥಿತಿಗಳನ್ನು ಮತ್ತು ಭಾರತ ವಿರೋಧಿ ಉಗ್ರ ಸಂಘಟನೆಗಳನ್ನು ಆ ಸಮದಲ್ಲಿ ದಂಡಿಯಾಗಿಯೇ ಬೆಳೆಸಿತ್ತು. 2006ರಲ್ಲಿ ಜಿಯಾ ಅಧಿಕಾರ ಕಳೆದುಕೊಂಡರಾದರೂ, ಮುಂದಿನ ಎರಡು ವರ್ಷಗಳ ಕೇರ್ಟೇಕರ್(ಉಸ್ತುವಾರಿ) ಸರ್ಕಾರದ ಅಡಿಯಲ್ಲಿಯೂ ಹಿಂದುಗಳ ಹತ್ಯಾಕಾಂಡ ಎಗ್ಗಿಲ್ಲದೇ ಸಾಗಿತು. 2008ರಲ್ಲಿ ಶೇಖ್ ಹಸೀನಾ ಬಂದ ನಂತರ ಬಾಂಗ್ಲಾದ ಹಿಂದುಗಳು ತುಸು ನೆಮ್ಮದಿಯ ಉಸಿರು ಬಿಟ್ಟರು.
ಆದರೆ ಜಮಾತೆ ಇಸ್ಲಾಮಿ, ಬಿಎನ್ಪಿಯಂಥ ಮತಾಂಧ ಪಕ್ಷಗಳು ಮಾತ್ರ ಅವರನ್ನು ಹಿಂಸಿಸಲು ಏನಾದರೊಂದು ಕಾರಣ ಹುಡುಕುತ್ತಲೇ ಇದ್ದವು. ಕಳೆದ ಡಿಸೆಂಬರ್ನಲ್ಲಿ 1971ರ ಯುದ್ಧಾಪರಾಧದ ಪ್ರಮುಖ ಆರೋಪಿ, ಜಮಾತೆ ಇಸ್ಲಾಮಿಯ ನಾಯಕ ಅಬ್ದುಲ್ ಕಾದರ್ ಮುಲ್ಲಾನನ್ನು ನೇಣಿಗೇರಿಸಿದಾಗ, ಇದನ್ನೇ ನೆಪವಾಗಿಟ್ಟುಕೊಂಡ ಜಮಾತೆಯ ಮತಾಂಧ ಮನಸ್ಸುಗಳ ಕ್ರೌರ್ಯಕ್ಕಳಿದವು. ಅವುಗಳ ಹಸಿವಿಗೆ ಆಹಾರವಾದದ್ದು ಅಮಾಯಕ ಹಿಂದುಗಳು! ಈ ಬಾರಿಯ ಚುನಾವಣೆಯಿಂದ ಹಿಂದೆ ಸರಿದಿದ್ದ ಬಿಎನ್ಪಿ, 'ಹಿಂದುಗಳು ಆವಾಮಿ ಲೀಗ್ಗೆ ಮತ ಹಾಕುತ್ತಾರೆ' ಎನ್ನುವ ಕಾರಣಕ್ಕೆ, ಜಮಾತೆಯ ಜೊತೆ ಸೇರಿಕೊಂಡು ಕಳೆದ ವಾರ ಮತಗಟ್ಟೆಗೆ ತೆರಳುತ್ತಿದ್ದ 19 ಹಿಂದುಗಳನ್ನು ಕೊಂದುಹಾಕಿದೆ! ಅದರಲ್ಲೂ ಅಲ್ಲಿನ ಪ್ರಮುಖ ರಾಜಕೀಯ ಪಕ್ಷವಾದ ಜಮಾತೆ ಅಲ್ ಇಸ್ಲಾಮಿಯಂತೂ, ಇಸ್ಲಾಂನ ಹೆಸರಲ್ಲಿ ನಡೆಸಿದ ಹುಚ್ಚಾಟಕ್ಕೆ ಎಣೆಯೇ ಇಲ್ಲ. ಕಾಫಿರರನ್ನು ಕೊನೆಗಾಣಿಸುವುದನ್ನೇ ತಮ್ಮ ಏಕೈಕ ಗುರಿಯಾಗಿಸಿಕೊಂಡಿರುವ ಈ ಮತಾಂಧರಿಂದಾಗಿ 1941ರಲ್ಲಿ 28 ಪ್ರತಿಶತದಷ್ಟಿದ್ದ ಬಾಂಗ್ಲಾದೇಶಿ ಹಿಂದುಗಳ ಸಂಖ್ಯೆ 2011ರ ವೇಳೆಗೆ 6 ಪ್ರತಿಶತಕ್ಕೆ ಬಂದಿಳಿಯಿತು!
ಕಳೆದ ವರ್ಷದ ಫೆಬ್ರವರಿ ತಿಂಗಳೊಂದರಲ್ಲೇ ಚಿತ್ತಗಾಂಗ್ನ ಖೇತ್ರಪಾಲ್ ಮತ್ತು ಲಕ್ಷ್ಮೀ ಮಾತಾ ಮಂದಿರ ಸೇರಿದಂತೆ ಸುಮಾರು 31 ಮಂದಿರಗಳನ್ನು ಜಮಾತೆಯ ಮಂದಿ ಸುಟ್ಟುಹಾಕಿದ್ದಾರೆ. ಖೇತ್ರಪಾಲ್ ಮಂದಿರದ ಪೂಜಾರಿಯನ್ನು ಅಟ್ಟಾಡಿಸಿ ಕೊಚ್ಚಿಹಾಕಿ ಕೇಕೆ ಹಾಕಿದ್ದರು. ಒಟ್ಟಿನಲ್ಲಿ ಬಾಂಗ್ಲಾ ದೇಶದಲ್ಲಿ ಏನೇ ನಡೆಯಲಿ, ಅಲ್ಲಿ ಹಿಂದುಗಳ ರಕ್ತ ಮಾತ್ರ ಹರಿದೇ ಹರಿಯುತ್ತದೆ! ಇಷ್ಟೇಅಲ್ಲ, ಪ್ರತಿವರ್ಷ ದುರ್ಗಾಪೂಜೆಯ ದಿನದಂದು ಅಲ್ಲಿನ ಹಿಂದು ದೇವಾಲಯಗಳ ಮೇಲೆ ದಾಳಿಗಳಾಗುತ್ತವೆ, ಹೆಣ್ಣುಮಕ್ಕಳು ಕಾಮುಕರಿಗೆ ಬಲಿಯಾಗುತ್ತಾರೆ.
ಇನ್ನು ನೆರೆಯ ಪಾಕಿಸ್ತಾನದಲ್ಲಿನ ಹಿಂದುಗಳ ಪಾಡಂತೂ ಹೇಳುವುದೇ ಬೇಡ. ಹಾಡಹಗಲೇ ಮುಸ್ಲಿಂ ಯುವಕರು ಹಿಂದು ಯುವತಿಯರನ್ನು ಅಪಹರಿಸಿ ಅತ್ಯಾಚಾರವೆಸಗುತ್ತಾರೆ, ಅವರನ್ನು ವಿರೋಧಿಸಿದರೆ "ದೈವನಿಂದನೆ"ಯ ಕತ್ತಿಯಿಂದ ಕೊಚ್ಚಿಸಿಕೊಳ್ಳಬೇಕಾದ ಅಪಾಯ!
ಪ್ರತಿವರ್ಷ ಸಾವಿರಾರು ಬಾಂಗ್ಲಾದೇಶಿ ಮುಸಲ್ಮಾನರು ಭಾರತದೊಳಗೆ ನುಸುಳುತ್ತಿದ್ದಾರೆ. ಅಸ್ಸಾಂನಂಥ ಆಯಕಟ್ಟಿನ ಜಾಗಗಳನ್ನು ಆಕ್ರಮಿಸಿಕೊಂಡು ಸ್ಥಳೀಯ ಹಿಂದುಗಳನ್ನು ಓಡಿಸುತ್ತಿದ್ದಾರೆ. ಅವರಿಗೆ ಮಾತ್ರ ಸಕಲ ಸರ್ಕಾರಿ ಗೌರವಗಳನ್ನು ಕೇಂದ್ರ ಸರ್ಕಾರ ಕೊಡುತ್ತಿದೆ.
ವ್ಯಂಗ್ಯವೆಂದರೆ ಅಸ್ಸಾಂನಲ್ಲಿ ಬಾಂಗ್ಲಾದೇಶಿ ಮುಸಲ್ಮಾನರಿಗೆ ಎಷ್ಟು ಅನ್ಯಾಯವಾಗಿದೆ ಎಂದು ಬಿಕ್ಕಿ ಬಿಕ್ಕಿ ಸುದ್ದಿ ಬಿತ್ತರಿಸಿದ ನಮ್ಮ ಮಾಧ್ಯಮಗಳಿಗೆ ಒಂದು ಕಾಲದಲ್ಲಿ ನಮ್ಮ ಭಾಗವೇ ಆಗಿದ್ದ ಬಾಂಗ್ಲಾದೇಶದಲ್ಲಿ ಏನಾಗುತ್ತಿದೆ ಎನ್ನುವುದು ಕಾಣಿಸುತ್ತಿಲ್ಲ. ಕಂಡರೂ ಅವು ಜಾಣಕುರುಡು ಪ್ರದರ್ಶಿಸುತ್ತಿವೆ. ಪಶ್ಚಿಮ ಬಂಗಾಳದ ಖ್ಯಾತ ಪತ್ರಿಕೆ 'ಎಬಿಪಿ'(ಆನಂದ ಬಜಾರ್ ಪತ್ರಿಕಾ) ಬಾಂಗ್ಲಾದೇಶದ ಮಲಪೊರಾ ಮತ್ತು ಚಂಪತಲಾ ಗ್ರಾಮಗಳಲ್ಲಿ ಆದ ಹಿಂಸಾಚಾರದ ಬಗ್ಗೆ ಇತ್ತೀಚೆಗೆ ವರದಿ ಪ್ರಕಟಿಸಿತ್ತು. ಅದರಲ್ಲಿ ಮಗುವೊಂದನ್ನು ಎತ್ತಿಕೊಂಡು ರೋದಿಸುತ್ತಿರುವ ಮುಸ್ಲಿಂ ಮಹಿಳೆಯ ಚಿತ್ರವೂ ಇತ್ತು. ಅಂದರೆ ಆ ಹಳ್ಳಿಗಳಲ್ಲಿ ಮುಸಲ್ಮಾನರಿಗೂ ಹಾನಿಯಾಗಿದೆ ಎಂದು ಬ್ಯಾಲೆನ್ಸ್ ಮಾಡುವ ವರದಿಯದು. ಇದೇ ಫೋಟೋ ಎಲ್ಲಾ ಜಾಲತಾಣಗಳಲ್ಲಿ, ಫೇಸ್ಬುಕ್ನಲ್ಲಿ ಪತ್ರಿಕೆಗಳಲ್ಲಿ ಹರಿದಾಡಿತು. ಆದರೆ ನಡೆದದ್ದೇ ಬೇರೆ. ಅದು ಸಂಚಿತಾ ಬರ್ಮನ್ ಎನ್ನುವ ಹಿಂದು ಮಹಿಳೆಯ ಚಿತ್ರವಾಗಿತ್ತು! ಬಾಂಗ್ಲಾದ ಜಮಾತೆಯ ಕಾರ್ಯಕರ್ತರು ಆಕೆಯ ಮನೆಯನ್ನು ಸುಟ್ಟುಹಾಕಿದ್ದರು. ಆ ಸಮಯದಲ್ಲಿ ಅಳುತ್ತಾ ನಿಂತಿದ್ದ ಆಕೆಯ ಚಿತ್ರವನ್ನು ಪತ್ರಕರ್ತ ಎಹಸಾನ್ ಉದ್ ದೌಲಾ ಎನ್ನುವವರು ತೆಗೆದಿದ್ದರು. ಆ ಚಿತ್ರದಲ್ಲಿ ಆ ಮಹಿಳೆ ಹಣೆಗೆ ಕುಂಕುಮವಿಟ್ಟುಕೊಂಡಿದ್ದಳು! ಬಾಂಗ್ಲಾದೇಶದ ಪತ್ರಿಕೆಗಳಲ್ಲಿ ಆ ಚಿತ್ರ ಯಥಾವತ್ ಪ್ರಕಟವಾಯಿತು. ಆದರೆ ಅದು ಭಾರತಕ್ಕೆ ಬರುತ್ತಿದ್ದಂತೆಯೇ ಅದೇಕೋ ಕುಂಕುಮ ಕಳೆದುಕೊಂಡಿತು...
ಇದಕ್ಕೆ ಸ್ಪಷ್ಟ ಕಾರಣವೇನೆಂದು ತಿಳಿದಿಲ್ಲವಾದರೂ, ಅಬ್ದುಲ್ ಕಾದರ್ ಮುಲ್ಲಾನನ್ನು ನೇಣಿಗೇರಿಸಬಾರದು ಎಂದು ಕೋಲ್ಕತ್ತಾದಲ್ಲಿ ಹಿಂದೆ ಪ್ರತಿಭಟನೆ ನಡೆಸಿದ್ದ ಆಲ್ ಬೆಂಗಾಲ್ ಮೈನಾರಿಟಿ ಕೌನ್ಸಿಲ್, ಮೈನಾರಿಟಿ ಯುತ್ ಫೆಡರೇಷನ್, ಮದರಾಸಾ ಸ್ಟೂಡೆಂಟ್ಸ್ ಯೂನಿಯನ್, ಮುಸ್ಲಿಂ ಥಿಂಕ್ ಟ್ಯಾಂಕ್, ಇಮಾಮ್ ಮುವಾಜ್ಜಿನ್ ಅಸೋಶಿಯೇಷನ್ ಸಂಘಟನೆಗಳೊಂದಿಗೆ ಆ ಪತ್ರಿಕೆಗೆ ಬಹಳ ಗೆಳೆತನವಿದೆ ಎನ್ನಲಾಗುತ್ತಿದೆ.
ಇಂಥವರಿಂದಾಗಿಯೇ ಪಾಕಿಸ್ತಾನವನ್ನು ಪರಮ ಪವಿತ್ರ ಸ್ಥಳವೆನ್ನುವಂತೆ ನೋಡುವ, ಸದ್ದಾಂ ಹುಸೇನ್ನನ್ನು ನೇಣಿಗೇರಿಸಿದಾಗ ತಮಗೇ ಉರುಲು ಹಾಕಿದಂತೆ ಒದ್ದಾಡುವ, ಎಮ್.ಎಫ್. ಹುಸ್ಸೇನ್ರನ್ನು ಭುಜದ ಮೇಲೆ ಹೊತ್ತು ಕುಣಿದಾಡಿದ, ಆದರೆ ಸಲ್ಮಾನ್ ರಶ್ದಿ ಮತ್ತು ತಸ್ಲೀಮಾ ನಸ್ರೀನ್ರ ಹೆಸರು ಕೇಳಿದರೇ ಉರಿದುರಿದು ಬೀಳುವ ಮತಾಂಧರೇ ನಮ್ಮಲ್ಲಿ ಹೆಚ್ಚಾಗುತ್ತಿರುವುದು. ಕಳೆದ ವರ್ಷ ಅಸ್ಸಾಂನ ಬೋಡೋ ಜನರು ಬಾಂಗ್ಲಾದೇಶಿ ಮುಸಲ್ಮಾನರ ವಿರುದ್ಧ ತಿರುಗಿ ಬಿದ್ದರು ಮತ್ತು ಮ್ಯಾನ್ಮಾರ್ನಲ್ಲಿ ಮುಸ್ಲಿಮರನ್ನು ಕೊಲ್ಲಲಾಗುತ್ತಿದೆ ಎನ್ನುವ ಕಾರಣಕ್ಕೆ ನಮ್ಮ ಕೆಲವು "ಭಾಯ್"ಗಳು ಎಷ್ಟು ನೊಂದುಕೊಂಡರೆಂದರೆ ಮುಂಬೈನಲ್ಲಿ ಸೈನಿಕರ ಸ್ಮಾರಕಕ್ಕೆ ಬೂಟುಗಾಲಿನಿಂದ ಒದ್ದು ತಮ್ಮ ನೋವನ್ನು ಹೊರಹಾಕಿದರು. ಬೆಂಗಳೂರಿನಲ್ಲಿದ್ದ ಅಸ್ಸಾಮಿಯರಿಗೆ ಜೀವ ಬೆದರಿಕೆ ಎದುರಾಯಿತು! ಅಸ್ಸಾಂ ಹಿಂಸಾಚಾರದ ನಂತರ ಭಾರತದಲ್ಲಿ ನಡೆದ ಕೋಮುಗಲಭೆಗಳನ್ನೇ ಒಮ್ಮೆ ನೋಡಿ-
ಮುಂಬೈ(ಆಗಸ್ಟ್ 11), ರಾಂಚಿ(ಆಗಸ್ಟ್11), ಪುಣೆ (ಆಗಸ್ಟ್ 11-12), ಬರೇಲಿ (ಆಗಸ್ಟ್ 11-13), ಶಿರೋಹಿ(ಆಗಸ್ಟ್ 15), ಲಕ್ನೋ, ಕಾನ್ಪುರ್, ಅಲಹಾಬಾದ್(ಆಗಸ್ಟ್ 17), ಇಲ್ಲೆಲ್ಲ ನಡೆದ ಹಿಂಸಾಚಾರಗಳಿಗೆ ಮ್ಯಾನ್ಮಾರ್ ಮತ್ತು ಅಸ್ಸಾಂನಲ್ಲಿ ಮುಸಲ್ಮಾನರ ವಿರುದ್ಧ ದೌರ್ಜನ್ಯವೆಸಗಲಾಗುತ್ತಿದೆ ಎನ್ನುವ ನೆಪವೇ ಕಾರಣವಾಯಿತು. ನಿಜವಾಗಲು ಭಾರತೀಯರ ಮನಸ್ಸು ಯಾರಿಗಾಗಿ ಮಿಡಿಯಬೇಕು? ಯಾರಿಗಾಗಿ ಮಿಡಿಯುತ್ತಿದೆ? ನಮ್ಮಲ್ಲೇ ಇಂಥ ಜನರಿರುವಾಗ, ಇನ್ನು ಇಸ್ಲಾಂ ರಾಷ್ಟ್ರವಾದ ಬಾಂಗ್ಲಾದೇಶದ ಮತಾಂಧ ಮನಸ್ಥಿತಿಗಳ ಬಗ್ಗೆ ಏನಂದರೇನು ಪ್ರಯೋಜನ?
ಬಾಂಗ್ಲಾದೇಶಿ ಹಿಂದುಗಳು ಅನುಭವಿಸುತ್ತಿರುವ ಯಾತನೆಯನ್ನು ಇಡೀ ಪ್ರಪಂಚವೇ ನೋಡುತ್ತಿದೆ. ದುರಂತವೆಂದರೆ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಭಾರತಕ್ಕೆ ಮಾತ್ರ ಅಲ್ಲಿನ ಹಿಂದುಗಳ ಸ್ವಾತಂತ್ರ್ಯಕ್ಕಾಗಿ ಮಾತನಾಡಲು ಮನಸ್ಸು ಬರುತ್ತಿಲ್ಲ.
-ರಾಘವೇಂದ್ರ ಆಚಾರ್ಯ
ಕನ್ನಡಪ್ರಭ
raghu.bioastra@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


