ನಶೆ ಬಿಡಿಸುವ ನಿಟ್ಟಿನಲ್ಲೊಂದು 'ವಿಶಾಲ' ಪಯಣ

ಗೋಪಾಲಕೃಷ್ಣ ಗೋಖಲೆ ನಮ್ಮ ದೇಶದ ಹಿರಿಯ ನಾಯಕರಲ್ಲಿ ಪ್ರಮುಖರು. ಮಹಾತ್ಮ ಗಾಂಧಿಜೀರವರ ರಾಜಕೀಯ ಪ್ರೇರಕರು ಹಾಗೂ ಮಾರ್ಗದರ್ಶಕರು. ಗಾಂಧಿಜೀಯವರು ದಕ್ಷಿಣ ಆಫ್ರಿಕದಿಂದ ಮರಳಿಬಂದ ಮೇಲೆ ಇಡೀ ದೇಶವನ್ನು ಸುತ್ತಿ ಅರ್ಥ ಮಾಡಿಕೊಳ್ಳುವ ಪಯತ್ನ ಮಾಡಬೇಕೆಂದು ತಿಳಿವಳಿಕೆ ಕೊಟ್ಟವರು ಗೋಖಲೆಯವರು. ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ಮೂಲಕ ಸಮಾಜ ಸೇವಕರನ್ನು ತಯಾರು ಮಾಡಿ ರಚನಾತ್ಮಕ ಕಾರ್ಯಗಳಲ್ಲಿ ತೊಡಗುವಂತೆ ಮಾಡಿದವರು. ಅವರು ಬ್ರಿಟಿಷ್ ಸಾಮ್ರಾಜ್ಯದ ಅಂದಿನ ಲೆಜಿಸ್ಲೇಟಿವ್ ಕೌನ್ಸಿಲ್ನ ಸದಸ್ಯರಾಗಿದ್ದವರು. ಗೌರ್ನರ್ ಜನರಲ್ ಪರಿಷತ್ನ ಸದಸ್ಯರಾಗಿ ಅವರು ನೀಡಿದ ಅಭಿಪ್ರಾಯ ಎಂದೆಂದಿಗೂ ಮನನೀಯ. ಪರಿಷತ್ನ ಒಂದು ಸಭೆಯಲ್ಲಿ ಭಾರತದ ಗಡಿ ಪ್ರದೇಶದಲ್ಲಿ ಅಂದಿನ ದಿನಗಳಲ್ಲಿ ಹೇರಳವಾಗಿ ಬೆಳೆಯುತ್ತಿದ್ದ ಅಫೀಮನ್ನು ಚೀನಾ ದೇಶಕ್ಕೆ ರಫ್ತುಮಾಡಿ ನಮ್ಮ ದೇಶದ ಆದಾಯ ಹೆಚ್ಚಿಸಿಕೊಳ್ಳುವ ವಿಷಯ ಪ್ರಸ್ತಾಪವಾಗಿತ್ತು. ಗೋಪಾಲ ಕೃಷ್ಣ ಗೋಖಲೆಯವರು ಆ ಪ್ರಸ್ತಾವನೆಯನ್ನು ಖಂಡತುಂಡವಾಗಿ ವಿರೋಧಿಸಿ, ಮತ್ತೊಂದು ದೇಶದ ಜನತೆಯನ್ನು ಅಮಲಿನಲ್ಲಿಟ್ಟು ನಾವು ಹಣ ಸಂಪಾದಿಸುವುದು ಅತ್ಯಂತ ಹೇಯಕರ, ದುಷ್ಟ ಕಾರ್ಯ ಎಂದು ಆ ಪ್ರಯತ್ನಕ್ಕೆ ತಡೆ ಹಾಕಿದರು. ಇದು ಎಲ್ಲಾ ಕಾಲಕ್ಕೂ ಎಲ್ಲಾ ನಾಯಕರೂ ನೆನಪಿನಲ್ಲಿಡಬೇಕಾದ ಮಾತು.
ತಂಬಾಕು ಸೇವನೆ ಕ್ಯಾನ್ಸರ್ ಮಾರಿಗೆ ಅತ್ಯಂತ ಪ್ರಶಸ್ತ ಹಾದಿ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಈ ಮಾರಿಯ ಮೂಲಕ ಅತಿ ಹೆಚ್ಚು ಜನರನ್ನು ಬಲಿ ತೆಗೆದು ಕೊಳ್ಳುತ್ತಿರುವುದು ತಂಬಾಕು. ಭಾರತವೊಂದರಲ್ಲಿಯೇ ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದ್ರೋಗ, ಶ್ವಾಸಕೋಶ ಕಾಯಿಲೆಗಳಿಗೆ ತುತ್ತಾಗಿ ಪ್ರತಿವರ್ಷ ಲಕ್ಷಾಂತರ ಮಂದಿ ಸಾವನ್ನಪ್ಪುತ್ತಿದ್ದಾರೆ. ಕುಟುಂಬಗಳಿಗೆ, ಸಮಾಜಕ್ಕೆ ಆಸ್ತಿಯಾಗಬೇಕಿದ್ದ ಯುವಕರು ಇಂದು ಸಂಪೂರ್ಣ ಅಶಕ್ತರಾಗಿ ಕುಟುಂಬಗಳಿಗೆ ಹೊರೆಯಾಗುತ್ತಿದ್ದಾರೆ. ತಂಬಾಕು ಸಂಬಂಧಿ ರೋಗಗಳಿಗೆ ಚಿಕಿತ್ಸೆ ನೀಡುವುದಕ್ಕೆ ಸರ್ಕಾರ ಪ್ರತಿವರ್ಷ ಹತ್ತಾರು ಸಾವಿರ ಕೋಟಿ ರೂಪಾಯಿಗಳನ್ನು ನೇರವಾಗಿ ಹಾಗೂ ಪರೋಕ್ಷವಾಗಿ ಖರ್ಚು ಮಾಡುತ್ತಿದೆ. ನಮ್ಮ ರಾಜ್ಯದಲ್ಲಿ ಆರೋಗ್ಯವಲಯದ ಬಹುತೇಕ ಆಸ್ಪತ್ರೆಗಳು ಖಾಸಗಿ ಒಡೆತನದಲ್ಲಿ ಇರುವುದರಿಂದ ರೋಗಿಗಳು ಮತ್ತು ಅವರ ಕುಟುಂಬ ಕಷ್ಟಪಟ್ಟು ದುಡಿದ ಸ್ವಂತ ಹಣವನ್ನೇ ಖರ್ಚು ಮಾಡಬೇಕಾಗುತ್ತದೆ. ಇದರ ಜೊತೆಗೆ ಸರ್ಕಾರ ಪ್ರಾದೇಶಿಕ ಕ್ಯಾನ್ಸರ್ ಆಸ್ಪತ್ರೆಗಳು, ಹೃದ್ರೋಗ ಹಾಗೂ ಶ್ವಾಸಕೋಶ ಆಸ್ಪತ್ರೆಗಳನ್ನು ತೆರೆದು ಅಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಕೋಟ್ಯಂತರ ರುಪಾಯಿಗಳನ್ನು ವ್ಯಯಿಸುತ್ತಿದೆ. ಮುನ್ನೆಚ್ಚರಿಕೆ ಕೈಗೊಂಡರೆ ಈ ಆರ್ಥಿಕ ನಷ್ಟವನ್ನು ಹಾಗೂ ಅಪಾರವಾಗಿ ವ್ಯರ್ಥವಾಗುತ್ತಿರುವ ಮಾನವ ಸಂಪನ್ಮೂಲವನ್ನು, ಅದರಲ್ಲಿಯೂ ವಿಶೇಷವಾಗಿ ಯುವ ಸಂಪನ್ಮೂಲವನ್ನು ಉಳಿಸಬಹುದು.
ವಿಶ್ವ ಮಟ್ಟಕ್ಕೆ ಹೋಲಿಸಿದರೆ ಭಾರತದಲ್ಲಿಯೇ ಅತೀ ಹೆಚ್ಚು ಬಾಯಿ ಕ್ಯಾನ್ಸರ್ ರೋಗಿಗಳಿದ್ದಾರೆ. ಪ್ರತಿವರ್ಷ 75 ಸಾವಿರದಿಂದ 80 ಸಾವಿರ ಮಂದಿ ಬಾಯಿ ಕ್ಯಾನ್ಸರ್ಗೆ ಬಲಿಯಾಗುತ್ತಿದ್ದಾರೆ. ಜಗಿಯುವ ತಂಬಾಕಿನಿಂದಲೇ ದೇಶದ ಶೇಕಡ 90 ರಷ್ಟು ಬಾಯಿ ಕ್ಯಾನ್ಸರ್ ರೋಗಗಳು ಪತ್ತೆಯಾಗುತ್ತಿವೆ. ಸಿಗರೇಟಿನಲ್ಲಿ ಸುಮಾರು 4000 ಬಗೆಯ ರಾಸಾಯನಿಕ ಹಾನಿಕಾರಕಗಳಿದ್ದು ಅವುಗಳಲ್ಲಿ 69 ಕ್ಯಾನ್ಸರ್ಕಾರಕ ಅಂಶಗಳಿವೆ. ಜಗಿಯುವ ತಂಬಾಕಿನಲ್ಲಿ 3095 ಬಗೆಯ ರಾಸಾಯನಿಕ ಹಾನಿಕಾರಕ ಅಂಶಗಳಿದ್ದು, ಅದರಲ್ಲಿ 28 ಅಂಶಗಳು ಕ್ಯಾನ್ಸರ್ ಉಂಟುಮಾಡುತ್ತವೆ. ನಮ್ಮ ರಾಜ್ಯದಲ್ಲಿ 1.28 ಕೋಟಿ ಜನ ತಂಬಾಕು ಸೇವನೆಯಲ್ಲಿ ತೊಡಗಿದ್ದಾರೆ ಎಂದು ಇತ್ತೀಚಿನ ಅಂಕಿಅಂಶಗಳು ಹೇಳುತ್ತವೆ. ಇದರಿಂದ ಆಗುವ ಆರ್ಥಿಕ ನಷ್ಟ ತಂಬಾಕಿನಿಂದ ಬರುವ ಆದಾಯಕ್ಕೆ ಹೋಲಿಸಿದರೆ ಹಲವು ಪಟ್ಟು ಹೆಚ್ಚು. ಜೊತೆಗೆ ತಂಬಾಕು ಉದ್ಯಮ ಸೃಷ್ಟಿಸುವ ಉದ್ಯೋಗಗಳಿಗಿಂತ ಬಹಳ ಹೆಚ್ಚು. ಆದರೆ ಅತಿ ದೊಡ್ಡ ಹೊರೆಯೆಂದರೆ ಅದು ನಮ್ಮ ಯುವಕರನ್ನು ಕೊಲ್ಲುತ್ತಿರುವ ಪರಿ. ಬಹಳಷ್ಟು ಪ್ರಕರಣಗಳಲ್ಲಿ ಯುವಕರು ಜೀವಂತ ಶವಗಳಾಗಿರುವುದನ್ನು ನಾವು ಕಂಡಿದ್ದೇವೆ.
ಒಂದು ದಿನ ಬೆಳಿಗ್ಗೆ ನಾನು ನಮ್ಮ ಕ್ಷೇತ್ರದ ಜನತೆಯ ಕುಂದುಕೊರತೆ ಆಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ನನ್ನ ಮುಂದೆ ಒಬ್ಬ ಯುವಕ ಮೂರ್ನಾಲ್ಕು ವ್ಯಕ್ತಿಗಳೊಂದಿಗೆ ಬಂದು ಕುಳಿತರು. ಅವರು ಈ ತಂಬಾಕಿನಿಂದ ಆಗುತ್ತಿರುವ ಹಾನಿಯನ್ನು ವಿವರಿಸಿದಾಗ ನಾನು ಒಂದು ಕ್ಷಣ ನಡುಗಿದೆ. ಅವರ ಜೊತೆ ಬಂದಿದ್ದ ಮೂವರನ್ನು ಪರಿಚಯ ಮಾಡಿಕೊಟ್ಟರು. ಒಬ್ಬ ದುರ್ಗಯ್ಯ. ರೈತನಾಗಿರುವ ದುರ್ಗಯ್ಯ ಇಂದು ಅತಿಯಾದ ತಂಬಾಕು ಸೇವನೆಯಿಂದ ತನ್ನ ಧ್ವನಿಪೆಟ್ಟಿಗೆಯನ್ನು ಕಳೆದುಕೊಂಡಿದ್ದಾನೆ. ಅವನ ಗಂಟಲ ಕೆಳಗಡೆ ಮಾಡಲಾಗಿರುವ ವಿಶೇಷ ವ್ಯವಸ್ಥೆಯ ಮೂಲಕ ಬಹಳ ಕಷ್ಟಪಟ್ಟು ಉಚ್ಚರಿಸಬಲ್ಲ. ಇನ್ನೊಬ್ಬ ನತದೃಷ್ಟ ವ್ಯಕ್ತಿಯ ಹೆಸರು ರಮೇಶ್. ಆಟೋಚಾಲಕನಾಗಿದ್ದ ಈತ ಕಪ್ಪು ಕನ್ನಡಕ ಧರಿಸಿ ಕೂತಿದ್ದ. ಅವನನ್ನು ಕರೆದುಕೊಂಡು ಬಂದಿದ್ದ ಯುವಕ ಆ ಕನ್ನಡಕವನ್ನು ತೆಗೆಸಿದಾಗ ಬಲಕಣ್ಣು ಇರಬೇಕಾದ ಕಡೆ ನನಗೆ ಕಂಡಿದ್ದು ಒಂದು ದೊಡ್ಡ ರಂಧ್ರ. ಕಣ್ಣುಗುಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಇನ್ನೊಬ್ಬ ಮಹಿಳೆ ತಂಬಾಕು ಸೇವನೆಯಿಂದ ತನ್ನ ಜೀರ್ಣ ವ್ಯವಸ್ಥೆಯನ್ನೇ ಸಂಪೂರ್ಣ ಕಳೆದುಕೊಂಡಿದ್ದಾಳೆ. ನಂತರ ಆ ಯುವಕ ಈ ಪಿಡುಗಿನ ವಿರುದ್ಧ ಮಾಡುತ್ತಿರುವ ಹೋರಾಟವನ್ನು ವಿವರಿಸಿದಾಗ ಅಂದಿನಿಂದ ನಾನು ಆ ಯುವಕನ ಬಲವಾದ ಸಮರ್ಥಕನಾದೆ. ಆತನ ಕಾರ್ಯ ಚಟುವಟಿಕೆಯಲ್ಲಿ ಭಾಗವಹಿಸಲು ತೊಡಗಿದೆ. ನಮ್ಮ ರಾಜ್ಯದಲ್ಲಿ ನಡೆದ ಅತ್ಯಂತ ವಿನೂತನ ಪ್ರಯೋಗ ಒಂದರಲ್ಲಿ ನಾನು ಒಬ್ಬ ಮಂತ್ರಿಯಾಗಿ, ಕ್ಯಾನ್ಸರ್ಗೆ ಬಲಿಯಾಗಿರುವ ವ್ಯಕ್ತಿಗಳನ್ನು ಎರಡು ಗಂಟೆಗಳ ಕಾಲ ಸುವರ್ಣವಾಹಿನಿಯಲ್ಲಿ ಸಂದರ್ಶನ ಸಹ ಮಾಡಿದೆ.
ಆ ಉತ್ಸಾಹಿ ಯುವಕನ ನಿರಂತರ ಪ್ರಯತ್ನದ ಕಾರಣ ಇಂದು ಸರ್ಕಾರ ಗುಟ್ಕಾವನ್ನು ನಿಷೇಧಿಸಿದೆ. ಇದು ತಂಬಾಕು ನಿಯಂತ್ರಣ ಮಾಡುವ ರೀತಿಯ ಒಂದು ಮಹತ್ತರ ಹೆಜ್ಚೆ. ಆ ಯುವಕ ಬೇರೆ ಯಾರೂ ಅಲ್ಲ. ಕ್ಯಾನ್ಸರ್ ತಜ್ಞರಾಗಿರುವ, ಬಿ ಜಿ ಎಸ್ ಆಸ್ಪತ್ರೆಯ ವೈದ್ಯರಾದ ಡಾ. ವಿಶಾಲ್ ರಾವ್. ಕ್ಯಾನ್ಸರ್ ಹೆಚ್ಚಾದಷ್ಟು ತನಗೆ ಬರಬಹುದಾದ ಹೆಚ್ಚಿನ ಆದಾಯದ ಕಡೆ ಒಂದಿಷ್ಟೂ ಗಮನಕೊಡದೆ ವೈದ್ಯನಾಗಿ ಕ್ಯಾನ್ಸರ್ ಪೀಡಿತರಿಗೆ ಚಿಕಿತ್ಸೆ ನೀಡುವುದಷ್ಟೇ ಕರ್ತವ್ಯವಲ್ಲ, ಕ್ಯಾನ್ಸರ್ ಬರದಂತೆ ತಡೆಯುವುದು ಸಹ ಅಷ್ಟೇ ಮಹತ್ತರ ಜವಾಬ್ದಾರಿ ಎಂಬ ಮಂತ್ರದೀಕ್ಷೆಯನ್ನು ತೊಟ್ಟಿದ್ದಾರೆ ಡಾ. ವಿಶಾಲ್ ರಾವ್. ನಮಗೆಲ್ಲ ಗೊತ್ತಿರುವಂತೆ ಲಕ್ಷಾಂತರ ಕೋಟಿ ರು. ಆದಾಯ ಇರುವ ಯಾವುದೇ ದಂಧೆಯ ಹಿಂದೆ ಒಂದು ಬಲಿಷ್ಟವಾದ ಲಾಬಿ ಇರುತ್ತದೆ. ಆ ಲಾಬಿ ತನ್ನ ದಂಧೆಗೆ ತೊಂದರೆ ಕೊಡುವ ಯಾವ ವ್ಯಕ್ತಿಯನ್ನೂ, ಯಾವ ಸಂಸ್ಥೆಯನ್ನೂ ಸುಲಭವಾಗಿ ಬಿಡುವುದಿಲ್ಲ. ಡಾ ವಿಶಾಲ್ ರಾವ್ ಆ ತಂಬಾಕು ಲಾಬಿಯ ಎಲ್ಲಾ ರೀತಿಯ ಪ್ರಭಾವವನ್ನು. ಬೆದರಿಕೆಯನ್ನು, ಒತ್ತಡವನ್ನು ಲೆಕ್ಕಿಸದೇ ಸಮಾಜದ ಆರೋಗ್ಯ ಕಾಪಾಡುವತ್ತ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ.
ಕ್ಯಾನ್ಸರ್ ಸರ್ಜನ್ ಆಗಿ ದಿನಪೂರ್ತಿ ಶಸ್ತ್ರ ಚಿಕಿತ್ಸೆ, ರೋಗಿಗಳೊಂದಿಗೆ ಸಮಾಲೋಚನೆ ಇವುಗಳಲ್ಲಿ ಮುಳುಗಿ ಹೋಗಿರುವ ಈ ವೈದ್ಯರು ಈ ಸಮಾಜಮುಖಿ ಆಂದೋಲನಕ್ಕೆ ಹೇಗೆ ಸಮಯ ಕೂಡಿಸಿಕೊಳ್ಳುತ್ತಾರೆ ಎಂಬುದು ಇದುವರೆವಿಗೂ ನನಗೆ ಅರ್ಥವಾಗಿಲ್ಲ. ಡಾ ವಿಶಾಲ್ ರಾವ್ ಸ್ನಾತಕೋತ್ತರ ಪದವಿ ಗಳಿಸಲು ಮುಂಬೈ ಟಾಟಾ ಮೆಮೋರಿಯಲ್ ಕ್ಯಾನ್ಸರ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಅಲ್ಲಿನ ಪ್ರಮುಖರೊಬ್ಬರು ಇವರಿಗೆ ಹೇಳಿದ ಮಾತು ಅತ್ಯಂತ ಗಮನಾರ್ಹ. ಕ್ಯಾನ್ಸರ್ ಚಿಕಿತ್ಸೆಗಾಗಿ ದೇಶಾದ್ಯಂತ ನೂರಾರು ಆಸ್ಪತ್ರೆಗಳನ್ನು ತೆರೆಯುವುದಕ್ಕಿಂತ ಮುನ್ನ, ನಾವು ಗಮನಹರಿಸ ಬೇಕಾದದ್ದು ಕ್ಯಾನ್ಸರ್ ತಡೆಗೆ ನಾವೇನು ಮಾಡಬೇಕೆಂದು, ತನ್ನ ಬಳಿ ಬರುತ್ತಿದ್ದ, ತಂಬಾಕಿಗೆ ಸಂಪೂರ್ಣ ದಾಸರಾಗಿ ಕ್ಯಾನ್ಸರ್ ಪೀಡಿತರಾದ ನಿಸ್ತೇಜ ರೋಗಿಗಳನ್ನು ಕಂಡಾಗ ಗುಟ್ಕಾ ವಿರುದ್ಧ ಆಂದೋಲನವನ್ನು ಪರಿಣಾಮಕಾರಿಯಾಗಿ ಮುಂದುವರೆಸಲು ಡಾ ವಿಶಾಲ್ ರಾವ್ ತೀರ್ಮಾನಿಸಿದರು. ಇವರೆಂದೂ ಸರ್ಕಾರದ ವಿರುದ್ಧ ಹೋರಾಟ, ಪ್ರತಿಭಟನೆ, ಜೈಕಾರ-ಧಿಕ್ಕಾರ ಕೂಗುವ ಮನೋಭಾವದವರಾಗಿರಲಿಲ್ಲ. ಬದಲಿಗೆ ಸರ್ಕಾರದ ಜೊತೆಗೂಡಿ, ಸರ್ಕಾರದಲ್ಲಿರುವ ಪೊಲೀಸ್-ಆರೋಗ್ಯ-ಶಿಕ್ಷಣ ಇಲಾಖೆಗಳ ಒಳ್ಳೆಯ ಮನಸ್ಸುಗಳನ್ನು ಜೊತೆಗೂಡಿಸಿಕೊಂಡು ಕಾರ್ಯ ಸಾಧಿಸುವಲ್ಲಿ ಯಶಸ್ವಿಯಾದವರು. ಇವರ ನಿರಂತರ ಪರಿಶ್ರಮದಿಂದ ಇಂದು ರಾಜ್ಯದಲ್ಲಿ ಪೊಲೀಸ್ ಇಲಾಖೆ ತಂಬಾಕು ತಡೆಯುವ ಅಭಿಯಾನದಲ್ಲಿ ದೊಡ್ಡ ಪಾತ್ರವಹಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠರಿಂದ ಹಿಡಿದು ಸಬ್ಇನ್ಸ್ಪೆಕ್ಟರ್ವರೆಗೆ ರಾಜ್ಯದ ಎಲ್ಲಾ ರೇಂಜ್ಗಳಲ್ಲಿ ತಂಬಾಕು ಪಿಡುಗಿನ ವಿರುದ್ಧ ಕ್ರಮಕೈಗೊಂಡು ವಿವಿಧ ರೀತಿಯ ಜಾಗೃತಿ ಕಾರ್ಯಗಳನ್ನು ನಡೆಸುವಲ್ಲಿ ಡಾ ವಿಶಾಲ್ ರಾವ್ ಪ್ರಮುಖ ಪಾತ್ರವಹಿಸಿದ್ದಾರೆ. ಪ್ರತಿ ತಿಂಗಳು ಪ್ರಕಟವಾಗುವ ಪೊಲೀಸ್ ಇಲಾಖೆಯ ಮಾಸಿಕ ಅಪರಾಧ ವರದಿಯಲ್ಲಿ ರಾಜ್ಯದ ಎಲ್ಲೆಡೆಯಿಂದ ತಂಬಾಕು ನಿಯಂತ್ರಣ ಕಾರ್ಯ ಉಲ್ಲಂಘನೆ ಪ್ರಕರಣ ಎಷ್ಟು, ಸಂಗ್ರಹವಾದ ದಂಡದ ಮೊತ್ತವೆಷ್ಟು ಈ ಅಂಶಗಳನ್ನು ಪ್ರಧಾನವಾಗಿ ಕಾಣಿಸುವಲ್ಲಿ ಈ ಯುವ ವೈದ್ಯರು ಯಶಸ್ವಿಯಾಗಿದ್ದಾರೆ.
Tobacco free Bangalore, Voice of Tobacco Victims, Freedom from Tobacco-Bangalore unites ಮುಂತಾದ ಕಾರ್ಯಕ್ರಮಗಳನ್ನು ಮತ್ತು ಚಟುವಟಿಕೆಗಳನ್ನು ಪ್ರಾರಂಭಿಸಿರುವ ಡಾ. ವಿಶಾಲ್ ರಾವ್, ಗುಟ್ಕಾ ನಿಷೇಧಕ್ಕಾಗಿ ಒಂದು ಸಾವಿರ ವೈದ್ಯರ ಸಹಿ ಸಂಗ್ರಹ ಮಾಡುವುದರಲ್ಲಿ ಸಹ ಯಶಸ್ವಿಯಾಗಿದ್ದಾರೆ. 10 ವರ್ಷಗಳ ಹಿಂದಿನ ಸಿಗರೇಟು ಮತ್ತಿತರ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯಿದೆಯನ್ನು ಇಂದು ಬಲವಾಗಿ ಅನುಷ್ಠಾಗೊಳಿಸುವಲ್ಲಿ ಇವರ ಪಾತ್ರ ಗಣನೀಯವಾಗಿದೆ. ಒಬ್ಬ ವ್ಯಕ್ತಿ ಗುರಿಯೊಂದನ್ನು ಇಟ್ಟುಕೊಂಡು ತಾನು ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಲ್ಲಿ ಏನೇನೂ ಮಾಡಲು ಸಾಧ್ಯ ಎಂಬುದನ್ನು ಈ ಯುವ ವೈದ್ಯರು ತೋರಿಸಿಕೊಟ್ಟಿದ್ದಾರೆ. ವೈಯಕ್ತಿಕವಾಗಿ ಆಧ್ಯಾತ್ಮಿಕ ತತ್ವಗಳನ್ನು ನಂಬುವ ಡಾ. ವಿಶಾಲ್ ರಾವ್ ತಾನು ಈ ಕಾರ್ಯದಲ್ಲಿ ತೊಡಗಿರುವುದು ದೈವಿ ಸಂಕಲ್ಪ ಎಂದು ಸ್ವಂತ ಸುಖವನ್ನು ಮರೆತು ಕಾರ್ಯ ಮಗ್ನರಾಗಿದ್ದಾರೆ. ನಮಗೆ ಗೊತ್ತಿರುವ ಒಬ್ಬ ಆಪ್ತನನ್ನು, ಒಬ್ಬ ಬಂಧುವನ್ನು, ಒಬ್ಬ ಸ್ನೇಹಿತನನ್ನು ತಂಬಾಕು ವ್ಯಸನದಿಂದ ಬಿಡಿಸಿದರೆ ನಾವು ಡಾ. ವಿಶಾಲ್ ರಾವ್ ಅವರ ಉತ್ಸಾಹದ ಈ ಕಾರ್ಯಕ್ಕೆ ಕೈ ಜೋಡಿಸಿದಂತಾಗುತ್ತದೆ. ಆ ದಿಕ್ಕಿನಲ್ಲಿ ಇಂದಿನಿಂದಲೇ ನಮ್ಮ ಪ್ರಯತ್ನ ಆರಂಭವಾಗಲಿ.
- ಎಸ್. ಸುರೇಶ್ ಕುಮಾರ್
ಶಾಸಕರು, ಮಾಜಿ ಸಚಿವರು
nimmasuresh.2009@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


