ಅಂಕಣಗಳು

ಇದು ಹೊಸ 'ಎಡ'ವಟ್ಟಾ?

ಇದು ಹೊಸ 'ಎಡ'ವಟ್ಟಾ?
Published On :

ನಿಜಕ್ಕೂ ಆ ಪಕ್ಷವೇನಾದರೂ ಉಳಿದ ಪಕ್ಷಗಳಿಗಿಂತ ಭಿನ್ನವಾಗಿದ್ದರೆ, ದೆಹಲಿಯಲ್ಲಿನ ವಿದ್ಯುತ್ ಮತ್ತು ನೀರಿನ ಮೂಲ ಸಮಸ್ಯೆಯ ಬಗ್ಗೆ ಮೊದಲೇ ಅಧ್ಯಯನ ನಡೆಸಿ ಸರಿಯಾದ ನಿರ್ಧಾರವನ್ನೇ ತೆಗೆದುಕೊಳ್ಳಬಹುದಿತ್ತು. ಆದರೆ ಕೇಜ್ರೀವಾಲರ ತಂಡ ಜನಪ್ರಿಯ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಆಸೆ ತೋರಿಸಿ ಅಖಾಡಕ್ಕಿಳಿಯಿತು.
ಆಮ್ ಆದ್ಮಿ ಪಕ್ಷವೀಗ ನಿರ್ಣಾಯಕ ಹಂತವನ್ನು ತಲುಪಿದೆ. ಮಾಧ್ಯಮಗಳು  ಆ ಪಕ್ಷದ ಪ್ರಾಮಾಣಿಕತೆಯನ್ನು ಕೊಂಡಾಡುತ್ತಿವೆ. ಆದಾಗ್ಯೂ ಆಪ್ ದಾಖಲೆ ಸಮಯದಲ್ಲೇ ತಾನು ನೀಡಿದ ಕೆಲವು ಭರವಸೆಗಳನ್ನೂ ಈಡೇರಿಸಿದೆ.  ಮೊದಲ ನೋಟಕ್ಕೆ, ಆಪ್‌ಗೆ ರಾಷ್ಟ್ರೀಯ ಅಖಾಡದಲ್ಲಿ ಯಶಸ್ವಿಯಾಗುವ ಎಲ್ಲಾ ಅವಕಾಶಗಳೂ ಇವೆ ಎಂದು ಕಾಣಿಸುತ್ತದೆ. ಹಾಗಿದ್ದರೆ ಸಮಸ್ಯೆಯಿರುವುದೆಲ್ಲಿ?
ಈಗ ಆ ಪಕ್ಷ ಪ್ರಮುಖ ಆಯ್ಕೆಯೊಂದನ್ನು ಮಾಡಿಕೊಳ್ಳಬೇಕಿದೆ. ಇದರಿಂದ ಮುಂದೆ ಅದು ಸೋತು ಸುಸ್ತಾಗುವುದೇ ಅಥವಾ ಭಾರತೀಯ ರಾಜಕೀಯದಲ್ಲಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮುವುದೇ ಎನ್ನುವುದು ನಿರ್ಧರಿತವಾಗಲಿದೆ. ಆದರೆ ಅದು ತಪ್ಪು ಆಯ್ಕೆಯನ್ನೇ ಮಾಡಿಕೊಂಡಿದೆ ಎಂದನಿಸುತ್ತಿದೆ. ಒಂದೋ ಆಪ್ ಜನಾದೇಶವನ್ನು ತಪ್ಪಾಗಿ ಅರ್ಥಮಾಡಿಕೊಂಡಿದೆ ಅಥವಾ ಪಟ್ಟಭದ್ರ ಹಿತಾಸಕ್ತಿಗಳು ಅದರ ಜನಾದೇಶವನ್ನು ಹೈಜಾಕ್ ಮಾಡಿವೆ.
ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಆಂದೋಲನದಿಂದಾಗಿಯೇ ಆಮ್ ಆದ್ಮಿ ಪಕ್ಷ ಅಸ್ತಿತ್ವಕ್ಕೆ ಬಂದಿತು. ಜನರು ಅದರತ್ತ ಆಕರ್ಷಿತರಾದರು. ನಂತರ ದೆಹಲಿಯಲ್ಲಿ ಚುನಾವಣೆಗಳು ನಡೆದು, ಗೆಲುವಿಗೆ ಅತಿ ಸಮೀಪದಲ್ಲಿ ಅದು ಬಂದು ನಿಂತಿತು. ಸಾಮಾನ್ಯವಾಗಿ ಹೊಸ ರಾಜಕೀಯ ಪಕ್ಷವೊಂದನ್ನು ಎಲ್ಲರೂ ಕೂಲಂಕಷವಾಗಿ ಪರಿಶೀಲಿಸಿ, ಮುಂದಿನ ನಿರ್ಧಾರ ಕೈಗೊಳ್ಳುತ್ತಾರೆ.
ಕಾಂಗ್ರೆಸ್‌ನಿಂದ ರೋಸಿಹೋಗಿ, ತ್ವರಿತ ಬದಲಾವಣೆ ಮತ್ತು ಹೊಸ ಮುಖಗಳ ಅನ್ವೇಷಣೆಯಲ್ಲಿದ್ದ ಜನಕ್ಕೆ ಆಪ್ ಎದುರಾದಾಗ, ಅದನ್ನವರು ಸರಿಯಾಗಿ ಪರೀಕ್ಷಿಸಲು ಮುಂದಾಗಲಿಲ್ಲ. ಭ್ರಷ್ಟಾಚಾರದ ವಿಷಯವನ್ನು ಬಿಟ್ಟು ಉಳಿದೆಲ್ಲಾ ಸಮಸ್ಯೆಗಳನ್ನು ಕಡೆಗಣಿಸಲಾಯಿತು. ಇದು ಆಪ್‌ಗೆ ಸರಿಯಾಗಿಯೇ ಹೊಂದಿಕೆಯಾಯಿತು. ಏಕೆಂದರೆ ಅದಕ್ಕೆ ಅನೇಕ ವಿಭಾಗಗಳ ಜನರ ಬೆಂಬಲ ಬೇಕಾಗಿತ್ತು.
ಆಪ್ ಅನ್ನು ಬೆಂಬಲಿಸಿದ ಬಹುತೇಕ ಜನರು, ಆ ಪಕ್ಷ, ಭ್ರಷ್ಟಾಚಾರವನ್ನು ವಿರೋಧಿಸುವ ಮತ್ತು ಉತ್ತಮ ಆಡಳಿತವನ್ನು ಬಯಸುವ ಸಾಮಾನ್ಯ ಜನರನ್ನು ಪ್ರತಿನಿಧಿಸುತ್ತದೆ ಎಂದು ಭಾವಿಸಿದರು. ಅಂದರೆ, ಭ್ರಷ್ಟಾಚಾರ ಮುಕ್ತವಾದ ಪ್ರಗತಿಪರ ಮತ್ತು ಬೆಳವಣಿಗೆ ಆಧರಿತ ನೀತಿಗಳು, ಸಾಮಾಜದಲ್ಲಿ ತುಳಿತಕ್ಕೊಳಗಾದ ಜನರಿಗೆ ಅವಕಾಶಗಳನ್ನು ಕೊಟ್ಟು ಮೇಲಕ್ಕೆತ್ತುವುದು ಎಂದು. ಆದರೆ, ಆಪ್ ಇದುವರೆಗೂ ಈ ಕೆಲಸಕ್ಕೆ ಮುಂದಾಗಿಲ್ಲ. ಆಪ್‌ನ ನಡವಳಿಕೆ ಎರಡು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮೊದಲನೆಯದು, ಅದರ ಸಿದ್ಧಾಂತದ ಬಗ್ಗೆ ಮತ್ತು ಎರಡನೆಯದು ಅದರ ಪ್ರಾಮಾಣಿಕತೆಯ ಬಗ್ಗೆ.
ವಿದ್ಯುತ್ ಮತ್ತು ನೀರಿನ ವಿಚಾರದಲ್ಲಿ ಅದು ತೆಗೆದುಕೊಂಡ ನಿರ್ಧಾರದಿಂದಾಗಿ, ಅದರ ಸಿದ್ಧಾಂತ ಮತ್ತು ರಾಜಕೀಯ ಮಾರ್ಗ ಚರ್ಚೆಗೆ ಗ್ರಾಸವಾಗಿದೆ. ಹಿಂದೆ ಸಮಾಜವಾದಿ ಪಕ್ಷಗಳು ಮತ್ತು ಕಮ್ಯುನಿಸ್ಟ್ ಪಕ್ಷಗಳು ಅನುಸರಿಸಿದ ಮಾರ್ಗದಲ್ಲೇ(ಒಬ್ಬರಿಂದ ಹಣ ಪಡೆದು, ಇನ್ನೊಬ್ಬರಿಗೆ ವಿತರಿಸುವುದು) ಆಪ್ ನಡೆಯುತ್ತಿದೆ. ಇದನ್ನು ಯಾರು ಬೇಕಾದರೂ ಮಾಡಬಲ್ಲರು. ಇಂಥ ಜನಪ್ರಿಯ ಉಪಾಯಗಳನ್ನು ಮಾಡುವುದರಲ್ಲಿ ಸಾಂಪ್ರದಾಯಿಕ ಪಕ್ಷಗಳದ್ದು ಎತ್ತಿದ ಕೈ. ಹಾಗಿದ್ದರೆ ಆಪ್ ಎಲ್ಲಾ ಪಕ್ಷಗಳಿಗಿಂತ ಭಿನ್ನ ಹೇಗಾಯಿತು? 'ಭ್ರಷ್ಟಾಚಾರ ವಿರೋಧ' ಎಂಬುದೇ ಮಾನದಂಡವಾಗಿದ್ದರೆ, ಇಂದಿಗೂ ನಮ್ಮ ಎಲ್ಲಾ ಪಕ್ಷಗಳಲ್ಲೂ ಕೆಲವು ಪ್ರಾಮಾಣಿಕ ರಾಜಕಾರಣಿಗಳಿದ್ದಾರೆ, ಅವರೇಕೆ ಆಪ್‌ನಷ್ಟು ಸದ್ದು ಮಾಡಲಿಲ್ಲ? ಏಕೆಂದರೆ, ಜನರು ಕೇವಲ ಭ್ರಷ್ಟಾಚಾರದ ಬಗ್ಗೆಯಷ್ಟೇ ತಲೆಕೆಡಿಸಿಕೊಂಡಿಲ್ಲ. ಅವರು ಉತ್ತಮ ಆಡಳಿತ ಮತ್ತು ಅತ್ಯುತ್ತಮ ನೀತಿಗಳಿಗಾಗಿ ಕಾಯುತ್ತಿದ್ದಾರೆ ಎಂದಂತಾಯಿತು. ಇದನ್ನು ಆ ಪಕ್ಷ ಅರ್ಥಮಾಡಿಕೊಳ್ಳಬೇಕಿದೆ.
ಈಗ ಪ್ರಾಮಾಣಿಕತೆಯ ವಿಷಯಕ್ಕೆ ಬರೋಣ. ಚುನಾವಣೆಗಳಲ್ಲಿ ಗೆಲ್ಲಬೇಕೆಂಬ ಆತುರದಲ್ಲಿ ಆಮ್ ಆದ್ಮಿ ಪಕ್ಷ, ಕೆಲವು ಭಾರೀ ಭರವಸೆಗಳನ್ನು ನೀಡಿತು. ಜನಪ್ರಿಯ ಭರವಸೆಗಳನ್ನು ನೀಡಿ, ಭವಿಷ್ಯದಲ್ಲಿ ಅವುಗಳನ್ನು ಈಡೇರಿಸುವುದಾಗಿ ಹೇಳಿತು.
ನಿಜಕ್ಕೂ ಆ ಪಕ್ಷವೇನಾದರೂ ಉಳಿದ ಪಕ್ಷಗಳಿಗಿಂತ ಭಿನ್ನವಾಗಿದ್ದರೆ, ದೆಹಲಿಯಲ್ಲಿನ ವಿದ್ಯುತ್ ಮತ್ತು ನೀರಿನ ಮೂಲ ಸಮಸ್ಯೆಯ ಬಗ್ಗೆ ಮೊದಲೇ ಅಧ್ಯಯನ ನಡೆಸಿ ಸರಿಯಾದ ನಿರ್ಧಾರವನ್ನೇ ತೆಗೆದುಕೊಳ್ಳಬಹುದಿತ್ತು. ಆದರೆ ಕೇಜ್ರೀವಾಲರ ತಂಡ ಜನಪ್ರಿಯ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಆಸೆ ತೋರಿಸಿ ಅಖಾಡಕ್ಕಿಳಿಯಿತು. ಅಲ್ಲ, ಎಲ್ಲಾ ಪಕ್ಷಗಳೂ ಇದನ್ನೇ ಮಾಡುತ್ತಾ ಬಂದಿವೆಯಲ್ಲವೇ? ಈಗ ದೆಹಲಿಯ ಬಹಳಷ್ಟು ಮತದಾರರಿಗೆ ಮೋಸ ಹೋದ ಭಾವ ಕಾಡುತ್ತಿರಬಹುದು. ಅವರು ಮತನೀಡಿದ್ದು 'ಎಡ'ಪಥಕ್ಕೆ ತಿರುಗುತ್ತಿರುವ ಸರ್ಕಾರಕ್ಕೆ ಅಲ್ಲವಲ್ಲ? 'ಪ್ರಮಾಣಿಕತೆ'ಯೊಂದೇ ವ್ಯಕ್ತಿಗೆ, ಆಳ್ವಿಕೆ ನಡೆಸಲು ಜನ್ಮಸಿದ್ಧ ಹಕ್ಕಾಗಿ ಬಿಡದು. ಆದರೆ ಆಮ್ ಆದ್ಮಿ ಪಕ್ಷದ ವಿಚಾರದಲ್ಲಿ ಅದು ಉತ್ತಮ ಆಡಳಿತ ನಡೆಸಲು, ತನ್ನ ಹೊಸ ದೃಷ್ಟಿಯನ್ನು ಹರಡಲು ಅವಕಾಶ ನೀಡಿದೆ. ನಮ್ಮ ಹೊಸ ಮಧ್ಯಮ ವರ್ಗದ ಭುಜದ ಮೇಲೆ ಈಗ ಆಪ್ ಸವಾರಿ ಮಾಡುತ್ತಿದೆ. ಆದರೆ ಈ ವರ್ಗಕ್ಕೆ ಮತ್ತೊಂದು ಎಡಪಕ್ಷ ಬೇಕಾಗಿಲ್ಲ, ಏಕೆಂದರೆ ಆ ಪಕ್ಷಗಳ ಹಣೆಬರಹವನ್ನು ಅವರಾಗಲೇ ನೋಡಿಯಾಗಿದೆ. ಆಪ್‌ನ ಮತದಾರರನ್ನೂ ಒಳಗೊಂಡಂತೆ ದೇಶಾದ್ಯಂತ ಜನರ ಮೇಲೆ ನರೇಂದ್ರ ಮೋದಿಯವರು ಬೀರಿರುವ ಪ್ರಭಾವ ಈ ವಾದಕ್ಕೆ ಪುಷ್ಠಿ ಕೊಡುತ್ತದೆ.
ಆಮ್ ಆದ್ಮಿ ಪಕ್ಷ ಕೂಡಲೇ ತನ್ನ ಆಂತರಿಕ ಸೈದ್ಧಾಂತಿಕ ಗೊಂದಲವನ್ನು ಬಗೆಹರಿಸಿಕೊಂಡು ಏಕಧ್ವನಿಯಲ್ಲಿ ಮಾತನಾಡಬೇಕು. ಒಂದೆಡೆ ಯೋಗೇಂದ್ರ ಯಾದವ್ ಪ್ರಾಯೋಗಿಕ ದೃಷ್ಟಿಕೋನದ ಬಗ್ಗೆ ಮಾತನಾಡಿದರೆ, ಇನ್ನೊಂದೆಡೆ ಪ್ರಶಾಂತ್ ಭೂಷಣ್ ನಿರ್ದಿಷ್ಟ ಅಜೆಂಡಾದೊಂದಿಗೆ ಮಾತನಾಡುತ್ತಾರೆ. ಜನತೆ ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ಬಯಸುತ್ತಾರೆ ಎನ್ನುವ ಕಾರಣಕ್ಕೆ, ಉತ್ತಮ ಆರ್ಥಿಕತೆ ಮತ್ತು ಬೆಳವಣಿಗೆಯನ್ನು ಆಪ್ ಕಡೆಗಣಿಸಬಾರದು. ಆಪ್ 'ಎಡ' ಮಗ್ಗುಲಿಗೆ ಹೊರಳಬಹುದು ಅಥವಾ ಕಾಂಗ್ರೆಸ್ ವೇಗವಾಗಿ ಕಳೆದುಕೊಳ್ಳುತ್ತಿರುವ ಜಾಗದಲ್ಲಿ ಬಂದು ಕೂಡಬಹುದು. ಆಯ್ಕೆ ಅದರ ಮುಂದಿದೆ.
ಭಾರತಕ್ಕಿಂದು ಬಲಿಷ್ಠ, ತತ್ವ-ಬೆಳವಣಿಗೆ ಆಧಾರಿತ, ಜಾತ್ಯತೀತ ಸರ್ಕಾರದ ಅಗತ್ಯವಿದೆ. ಮುಖ್ಯವಾಹಿನಿ ಭಾರತದ ಈ ಆಕಾಂಕ್ಷೆಗಳನ್ನು ಈಡೇರಿಸಬಲ್ಲ ಪಕ್ಷವಾಗುವ ಅವಕಾಶ ಆಪ್ ಎದುರಿಗಿದೆ. ಅಥವಾ ಅದೆಲ್ಲವನ್ನೂ ಬಿಟ್ಟು ಕೆಲವೇ ಕೆಲವು ಎಡಪಂಥೀಯ ಮತಗಳನ್ನು ಬಾಚಿಕೊಂಡು ಅದು ತೃಪ್ತಿಪಟ್ಟುಕೊಳ್ಳಬೇಕಾಗುತ್ತದಷ್ಟೆ.  ಮೊದಲನೆಯ ಆಯ್ಕೆಯನ್ನು ಅಪ್ಪಿಕೊಂಡರೆ ಭಾರತದ ರಾಜಕೀಯದಲ್ಲಿ ಅದು ಬಲಿಷ್ಠ ಆಟಗಾರನಾಗಿ ಹೊರಹೊಮ್ಮಲಿದೆ, ಎರಡನೆಯ ಆಯ್ಕೆಗೆ ಅಂಟಿಕೊಂಡಿತೆಂದರೆ ಅಂದು ಅದಕ್ಕೆ ಅತ್ಯುತ್ಸಾಹದಿಂದ ಬೆಂಬಲಿಸಿದ ಮಧ್ಯಮ ವರ್ಗದ ಮತದಾರರು ಅದರ ಕೈ ಬಿಡಲಿದ್ದಾರೆ. ಇಲ್ಲಿಯವರೆಗಂತೂ  ಅದು ತಪ್ಪು ಆಯ್ಕೆಯನ್ನೇ ಆಯ್ದುಕೊಳ್ಳುತ್ತಾ ಬಂದಿದೆ.
(ಲೇಖಕರ ಅನುಮತಿಯೊಂದಿಗೆ)


 -ಸಿದ್ದಾರ್ಥ್ ಶೇಖರ್ ಸಿಂಗ್
Siddharth_Singh@isb.edu


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.