ನಿಮ್ಮ ಮನೆಯವರನ್ನೂ ಕನ್ನಡ ಮಾಧ್ಯಮಕ್ಕೆ ಕಳಿಸಿ, ಸಾಹಿತಿಗಳೇ!
ಬಿಟ್ಟಿ ಸಲಹೆ ಕೊಡುವುದರಲ್ಲಿ ಯಾರೂ ಹಿಂದೆ ಬೀಳುವುದಿಲ್ಲ. ಇಂತಹ ಬಿಟ್ಟಿ ಸಲಹಾ ಮಂಡಳಿಗಳಲ್ಲಿ ಸಾಹಿತಿಗಳ ಪಾತ್ರ ಸ್ವಲ್ಪ ದೊಡ್ಡದೇ ಇರುತ್ತದೆ. ಯಾವುದೇ ವಿಚಾರಕ್ಕೆ ಸಂಬಂಧಿಸಿ ತಮ್ಮದೊಂದು ಬಿಟ್ಟಿ ಸಲಹೆ ನೀಡಿ ಸುಮ್ಮನಾಗುವ ಜನರಿವರು. ಸಮಸ್ಯೆಗೆ ಪರಿಹಾರ ನೀಡುವುದರ ಬಗ್ಗೆ ಎಂದೂ ತಲೆಕೆಡಿಸಿಕೊಳ್ಳುವುದಿಲ್ಲ. ಬದಲಾಗಿ ಸುಮ್ಮನೇ ಕಲ್ಲೆಸೆಯುವ ಕೆಲಸ ಮಾಡುತ್ತಾರೆ.
ಮೊನ್ನೆ ಜ.18ರಂದು ಜ್ಞಾನಪೀಠ ಸಾಹಿತಿಗಳಾದ ಡಾ.ಯು.ಆರ್.ಅನಂತಮೂರ್ತಿ ಹಾಗೂ ಡಾ.ಚಂದ್ರಶೇಖರ ಕಂಬಾರ ಅವರ ಮುಂದಾಳತ್ವದಲ್ಲಿ ಭಾಷಾ ಮಾಧ್ಯಮದ ಕುರಿತಂತೆ ಮುಖ್ಯಮಂತ್ರಿಗೊಂದು ಪತ್ರ ಬರೆದಿದ್ದಾರೆ. ಮೂರೂವರೆ ಪುಟಗಳ ಪತ್ರದುದ್ದಕ್ಕೂ ಕನ್ನಡದ ಮೇಲಿನ ಗಾಂಧಾರ ಪ್ರೇಮವನ್ನು ಸಾಹಿತಿಗಳು ವ್ಯಕ್ತಪಡಿಸಿದ್ದಾರೆ. ಕನ್ನಡ ಸಾಹಿತ್ಯ ಹಾಗೂ ಅಕ್ಷರ ಲೋಕದಿಂದಲೇ ಹೊಟ್ಟೆ ತುಂಬಿಸಿಕೊಳ್ಳುತ್ತಿರುವಾಗ ಇಂತಹ 'ಪ್ರೇಮ' ಪತ್ರ ಬರೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಪಾಲಕರು ಅಥವಾ ಮಕ್ಕಳಿಗೆ ಅವರ ಶೈಕ್ಷಣಿಕ ಮಾಧ್ಯಮವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನೀಡಬಾರದು ಎಂದು ಘಂಟಾಘೋಷವಾಗಿ ಈ ಸಾಹಿತಿಗಳು ಹೇಳಿದ್ದಾರೆ.
ಸಾಹಿತಿಗಳಿಗೆ ಇರುವ ಹಾಗೆ ಈ ರಾಜ್ಯದ ಪ್ರತಿಯೊಬ್ಬರಿಗೂ ಕನ್ನಡ ಭಾಷೆಯ ಮೇಲೆ ಗೌರವವಿದೆ, ಜತೆಗೆ ಕಿಂಚಿತ್ ಆದರೂ ಪ್ರೀತಿಯಿದೆ. ಆದರೆ ಅವರ್ಯಾರು ಕೇವಲ ಬಿಟ್ಟಿ ಸಲಹೆಗಳನ್ನು ನೀಡಿ ಭಾಷಣ ಮಾಡಿ ಮನೆ ಸೇರುವುದಿಲ್ಲ. ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಕನ್ನಡದ ತೇರು ಎಳೆಯುತ್ತಾರೆ. ತಮ್ಮ ಪಂಗಡಕ್ಕೆ ಸೇರದ ವ್ಯಕ್ತಿ ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ ಎಂದು ಮನೆಯಲ್ಲೇ ಶಾಪ ಹಾಕುತ್ತ ಕೂರುವುದಿಲ್ಲ.
ಯುನೆಸ್ಕೋ ಹೇಳುವ ಪ್ರಕಾರ ಮಕ್ಕಳು ಪ್ರಾಥಮಿಕ ಶಿಕ್ಷಣವನ್ನು ತಮ್ಮ ಮಾತೃ ಭಾಷೆಯಲ್ಲಿಯೇ ಓದಿದರೆ ಒಳ್ಳೆಯದು. ಆದರೆ ಈ ವಾದವನ್ನು ತಮ್ಮ ಮನಸಿಗೆ ತೋಚಿದಂತೆ ಪರಿವರ್ತಿಸಿಕೊಂಡು ಮಾತನಾಡಬಾರದು. ಮಂಡಿಸುವಾಗ ತುಸು ರಚನಾತ್ಮಕವಾಗಿ ಮಾತನಾಡಬೇಕು. ಪಕ್ಕಾ ರಾಜಕಾರಣಿಗಳ ಶೈಲಿಯಲ್ಲಿ ವಾದ ಮಾಡುತ್ತಾ ಸಾಗಿದರೆ ಸುಪ್ರೀಂ ಕೋರ್ಟ್ನ ಪೂರ್ಣ ಪೀಠದ ಮುಂದೂ ರಾಜ್ಯ ಸರ್ಕಾರ ಸೋಲಬೇಕಾಗಬಹುದು. ಈ ಸಾಹಿತಿಗಳು ಹಾಗೂ ಬುದ್ಧಿಜೀವಿಗಳು ಹೇಳುವ ಪ್ರಕಾರ 10ನೇ ತರಗತಿಯವರೆಗೂ ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡಬೇಕು. ಆದರೆ ಕೇವಲ ಇಂತಹ ಪತ್ರ ಬರೆಯುತ್ತ, ಇಲ್ಲ ಸಲ್ಲದ ರಾಜಕೀಯಗಳಲ್ಲಿ ತಲೆ ತೂರಿಸುತ್ತ ಕಂಡೋರ ಮಕ್ಕಳನ್ನು ದಾರಿ ತಪ್ಪಿಸಿ ತಾವು ಮಜಾ ನೋಡುವ ಕೆಲಸವನ್ನು ಇವರು ಮಾಡುತ್ತಿದ್ದಾರೆ.
ಒಮ್ಮೆ ಆಲೋಚಿಸಿ.......
ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿರುವಂತೆ ರಾಜ್ಯದಲ್ಲಿ ಕನ್ನಡ ಶಾಲೆಗಳು ಮುಚ್ಚುತ್ತಿವೆ, ಕೇವಲ ಬಡವರು ಹಾಗೂ ಸಮಾಜದ ಕಟ್ಟಕಡೆಯ ಜನರು ಮಾತ್ರ ಹೋಗುವ ನಿರ್ಗತಿಕ ಕೇಂದ್ರಗಳಾಗಿವೆ, ಶ್ರೀಮಂತರ ಮಕ್ಕಳೆಲ್ಲ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಹೋಗುತ್ತಿದ್ದಾರೆ. ಹೀಗಾದರೆ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ಸಂಪೂರ್ಣವಾಗಿ ಮುಚ್ಚುತ್ತವೆ ಎಂಬೆಲ್ಲ ವಾದಗಳನ್ನು ಬೆಂಗಳೂರು ಕೇಂದ್ರೀತವಾಗಿ ಆಲೋಚಿಸಿ ಒಂದು ಕ್ಷಣದ ಮಟ್ಟಿಗೆ ಒಪ್ಪಿಕೊಳ್ಳೋಣ. ಇದರ ಜತೆಗೆ ಪಾಲಕರು ಇಂದು ಇಂಗ್ಲಿಷ್ ವ್ಯಾಮೋಹಕ್ಕೆ ತುತ್ತಾಗಿದ್ದಾರೆ ಎನ್ನುವುದನ್ನೂ ಪುರಸ್ಕರಿಸೋಣ.
ಆದರೆ ಸ್ವಾಮಿ ನೀವೆಲ್ಲ ಏನು ಮಾಡುತ್ತಿದ್ದೀರಿ? ನಿಮ್ಮ ಮಕ್ಕಳನ್ನು ಯಾವ ಮಾಧ್ಯಮದಲ್ಲಿ ಓದಿಸಿದ್ದೀರಿ ಮತ್ತುಯಾಕೆ ಓದಿಸಿದ್ದೀರಿ ಎಂಬುದನ್ನು ಬಹಿರಂಗಗೊಳಿಸಿ. ನಿಮ್ಮ ಮೊಮ್ಮಕ್ಕಳು ಬೆಂಗಳೂರಿನ ಯಾವ್ಯಾವ ಪ್ರತಿಷ್ಠಿತ ಶಾಲೆಗಳಲ್ಲಿ ಓದುತ್ತಿದ್ದಾರೆ, ಎಷ್ಟೆಷ್ಟು ಲಕ್ಷ ಶುಲ್ಕ ನೀಡುತ್ತಿದ್ದೀರಿ ಎನ್ನುವುದನ್ನೂ ಹೇಳಿ. ನಮ್ಮ ಕನ್ನಡ ಹೋರಾಟ ಹೇಗಾಗಿದೆಯೆಂದರೆ ಕನ್ನಡಕ್ಕಾಗಿ ಹೋರಾಟ ಮಾಡಿ ಫೋಟೋ ಹಾಕಿಸಿಕೊಳ್ಳುವವರೆಲ್ಲ ಬೆಂಗಳೂರಿನ ಪ್ರತಿಷ್ಠಿತ ಇಂಗ್ಲಿಷ್ ಶಾಲೆಗಳಲ್ಲಿ ಓದಿಸುತ್ತಾರೆ. ಇವರನ್ನು ನಂಬಿ ಗೋಪಿಯಂತಹ ಅಮಾಯಕರು ಕನ್ನಡದ ಹೋರಾಟ ಮಾಡಿ ಮಕ್ಕಳನ್ನು ಅದೇ ಮಾಧ್ಯಮದಲ್ಲಿ ಓದಿಸಿ ಆಮೇಲೆ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಪತ್ರ ಹಾಗೂ ಭಾಷಣದಲ್ಲಿ ಉಕ್ಕಿ ಹರಿಯುವ ಕನ್ನಡದ ವ್ಯಾಮೋಹ, ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸುವಾಗ ಮರೆಯುವುದೇಕೆ ಎಂದು ರಾಜ್ಯದ ಜನತೆಗೆ ಸ್ಪಷ್ಟನೆ ನೀಡಿ. ನಿಮ್ಮ ಮನೆಯಲ್ಲಿ ಹೆಂಡತಿ, ಮಕ್ಕಳು, ಸೊಸೆ, ಅಳಿಯಂದಿರೇ ಮಾತುಗಳನ್ನು ಕೇಳದೇ ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸುತ್ತಿದ್ದಾರೆ. ಮಕ್ಕಳು ಕನ್ನಡದಲ್ಲಿಯೇ ಓದಬೇಕು, ಯುನೆಸ್ಕೋ ಕೂಡ ಇದನ್ನೇ ಸಮರ್ಥಿಸುತ್ತಿದೆ. ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಕಲಿತರೆ ಮಗುವಿನ ಅಭಿವೃದ್ಧಿಗೆ ಒಳ್ಳೆಯದು ಎಂದೆಲ್ಲ ಹೇಳುತ್ತೀರಿ. ರಾಜ್ಯದ ಮಕ್ಕಳ ಬಗ್ಗೆ ಅಷ್ಟು ಕಾಳಜಿ ವಹಿಸುವ, ಅಷ್ಟು ಒಳ್ಳೆಯವರಾದ ನೀವು ನಿಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳಿಗೂ ಒಳ್ಳೆಯದು ಸಿಗಬೇಕು, ಅವರಿಗೂ ಒಳ್ಳೆಯದಾಗಬೇಕು ಎಂಬ ಕಾಳಜಿ ಯಾಕಿಲ್ಲ?
ಇನ್ನು ಬೆಂಗಳೂರಿನಲ್ಲಿರುವ ಸರ್ಕಾರಿ ಕನ್ನಡ ಶಾಲೆ ಉತ್ತಮವಾಗಿಲ್ಲ, ಇಲ್ಲಿಯ ಶಿಕ್ಷಕರಿಗೆ ಕನ್ನಡ ಬರುವುದಿಲ್ಲ ಎಂಬೆಲ್ಲ ನೆಪಗಳನ್ನು ನೀಡುತ್ತಾ ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳ ಮಾಧ್ಯಮಕ್ಕೆ ಸಂಬಂಧಿಸಿ ಈ ಸಾಹಿತಿಗಳು ನುಣುಚಿಕೊಳ್ಳುತ್ತಾರೆ. ಆದರೆ ಇವರ್ಯಾರು ನೆಪ ಮಾತ್ರಕ್ಕೆ ಒಂದು ದಿನವೂ ಈ ಶಾಲೆಗಳಿಗೆ ಭೇಟಿ ನೀಡಿ ಪಾಠ ಮಾಡುವ ಅಥವಾ ಶಿಕ್ಷಕರಲ್ಲಿ ಉತ್ಸಾಹ ಮೂಡಿಸುವ ಕೆಲಸವನ್ನು ಮಾಡಿಲ್ಲ. ಇನ್ನು ಇವರು ಜಗತ್ತಿಗೆ ಬೋಧನೆ ಮಾಡುವಂತೆ ಬೆಂಗಳೂರಿನಲ್ಲಿ ಒಂದಿಷ್ಟು ಉತ್ತಮವಾದ ಕನ್ನಡ ಮಾಧ್ಯಮ ಶಾಲೆಗಳನ್ನು ಕಟ್ಟುವ ಅಗತ್ಯವಿದೆ. ಇದೇ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸಾಹಿತಿಗಳು ಮಾಡಬಹುದಲ್ಲವೇ? ಇಂತಹ ಉತ್ತಮ ಕೆಲಸವನ್ನು ಮಾಡಲು ಮುಂದಾದರೆ ರಾಜ್ಯ ಸರ್ಕಾರ ಭೂಮಿ ಹಾಗೂ ಅನುಮತಿಯನ್ನು ನೀಡಲಾರದಷ್ಟು ಸಂವೇದನೆ ಕಳೆದುಕೊಂಡಿಲ್ಲ. ಪ್ರತಿವರ್ಷ ಇಂತಹ ಶಾಲೆಗಳಿಂದ ಸಾವಿರಾರು ಕನ್ನಡದ ಸೇನಾನಿಗಳನ್ನು ಕಟ್ಟುವ ಕೆಲಸ ಮಾಡಬಹುದಲ್ಲ. ಇದರೊಂದಿಗೆ ಇತರರಿಗೆ ಶಿಕ್ಷಣ ಮಾಧ್ಯಮದ ಬಗ್ಗೆ ಬೋಧನೆ ಮಾಡುವವರ ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಕಳುಹಿಸಲು ಒಂದು ಶಾಲೆಯೂ ದೊರೆತಂತಾಗುತ್ತದೆ.
ಸಾಹಿತ್ಯ ಪರಿಷತ್ ಇಂತಹ ಕೆಲಸ ಮಾಡಿದರೆ ಈ ಸಾಹಿತಿಗಳೇ ಕನ್ನಡ ಪಾಠ ಮಾಡಲು ಖಂಡಿತ ಒಪ್ಪಿಕೊಂಡಾರು. ಆಗ ಮಕ್ಕಳು ಕೂಡ ಇಂತಹ ಶ್ರೇಷ್ಠ ಸಾಹಿತಿಗಳೆಲ್ಲ ನಮಗೆ ಪಾಠ ಮಾಡುತ್ತಾರೆ ಎಂದು ಕನ್ನಡ ಮಾಧ್ಯಮದತ್ತ ವಾಲಬಹುದು. ನಮ್ಮ ಕನ್ನಡಿಗರು ಎಂತಹ ಪುಣ್ಯ ಮಾಡಿದ್ದಾರೆ ನೋಡಿ, ಜ್ಞಾನಪೀಠ ಪ್ರಶಸ್ತಿ ಪಡೆದ ಮೂವರು ಸಾಹಿತಿಗಳು ನಮಗೆ ಲಭ್ಯವಿದ್ದಾರೆ. ಇವರೆಲ್ಲ ಕೇವಲ ಗೌರವ ಧನ ಹಾಗೂ ಸಾರಿಗೆ ವೆಚ್ಚ ನೀಡಿದರೆ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಅವರೇ ಪತ್ರದಲ್ಲಿ ಹೇಳಿರುವಂತೆ ಕೊಳ್ಳುಬಾಕ ಹಾಗೂ ವ್ಯವಹಾರಿಕ ಸಂಸ್ಕೃತಿ ಕೈ ಬಿಟ್ಟು ಅಕ್ಷರ ಸಂಸ್ಕೃತಿಗೆ ಅವರಿಂದವಲೇ ಚಾಲನೆ ಸಿಗಲಿ.
ತಮ್ಮ ಆಸುಪಾಸಿನ ಕನ್ನಡ ಶಾಲೆಗಳಿಗೆ ಭೇಟಿ ನೀಡಿ ವಾರಕ್ಕೊಂದು ತಾಸು ಪುಕ್ಕಟೆ ಪಾಠ ಮಾಡಿ ಬರಲಿ. ಕಾರ್ಯಕ್ರಮಗಳಿಗೆ ಬೇರೆ ಊರುಗಳಿಗೆ ಹೋದಾಗ ಅಲ್ಲಿನ ಶಾಲೆಗಳಿಗೂ ಒಂದರ್ಧ ಗಂಟೆ ಸಮಯ ನೀಡಲಿ. ಈ ಮೂಲಕ ಕನ್ನಡ ಶಾಲೆಗಳ ಉಳಿವಿಗೆ ಅಳಿಲು ಸೇವೆ ನಮ್ಮ ಸಾಹಿತಿಗಳಿಂದಲೂ ಆಗಲಿ. ಸಾಹಿತಿಗಳು ಇಂತಹ ಕೆಲಸವನ್ನು ಕುವೆಂಪು, ಬೇಂದ್ರೆ, ಕಾರಂತ್ ಅವರ ಕಾಲದಲ್ಲಿ ಮಾಡುತ್ತಿದ್ದರಂತೆ ಎಂದು ಪುಸ್ತಕದಲ್ಲಿ ಮಾತ್ರ ನೋಡಿದ್ದೇವೆ. ಆದ್ದರಿಂದಲೇ ಆಗಿನ ಕನ್ನಡ ಶಾಲೆಗಳ ಮೇಷ್ಟ್ರುಗಳು ಅಷ್ಟೊಂದು ಉತ್ತಮವಾಗಿದ್ದಿರಬೇಕು.
ಇಂಗ್ಲಿಷ್ ಶಿಕ್ಷಣಕ್ಕಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ತಂತ್ರ ಮಾಡುತ್ತಿದ್ದಾರೆ, ವ್ಯಾಪಾರ ಮಾಡುತ್ತಿದ್ದಾರೆ ಎನ್ನುವುದು ಸತ್ಯವಾದರೇ ಪ್ರತಿತಂತ್ರ ಹೆಣೆಯಲು ನಮಗೇನು ಸಮಸ್ಯೆ? ಕೇವಲ ಸಾಹಿತ್ಯ ಜಾತ್ರೆಯೊಳಗೆ ಮುಳುಗಿಹೋಗುವ ಬದಲು ಶಾಲೆ ಕಟ್ಟುವ ಮಾತನಾಡಿ. ನೀವೆ ಹೇಳುವ ಹಾಗೆ ಉತ್ತಮ ಕನ್ನಡ ಶಾಲೆ ಕಟ್ಟುವುದು ಕೂಡ ಒಂದು ಅಕ್ಷರ ಜಾತ್ರೆಯೇ ತಾನೆ?
ನಿಮ್ಮ ಕನ್ನಡದ ಪ್ರೀತಿ ಅಷ್ಟೊಂದಾಗಿದ್ದರೇ ಮಕ್ಕಳನ್ನು ಕನ್ನಡ ಮಾಧ್ಯಮ ಉತ್ತಮವಾಗಿರುವ ಊರಿನಲ್ಲಿ ಇರಿಸಿ ಓದಿಸುವ ಕೆಲಸ ಮಾಡಬಹುದು. ಈಗಾಗಲೇ ಅದೆಷ್ಟೋ ಜನ ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮ ಓದಿಸಬೇಕು ಎಂದು ನಗರ ಪ್ರದೇಶಗಳಿಗೆ ಮಕ್ಕಳನ್ನು ಕಳುಹಿಸಿಕೊಡುತ್ತಿದ್ದಾರೆ. ಈ ರೀತಿ ಮಾಡುವ ಪಾಲಕರನ್ನು ತೆಗಳುವ ಉದ್ಧಟತನ ಸಾಹಿತಿಗಳಿಗಿದೆ. ಆದರೆ ತಮ್ಮ ಮಕ್ಕಳನ್ನು ಹಾಗೆಯೇ ಓದಿಸಿ ದೇಶಕ್ಕೆ ಬುದ್ದಿ ಹೇಳುವ ಸಾಹಸ ಮಾಡಲು ಇವರಿಗೇನು ಕಮ್ಮಿಯಾಗಿದೆ?
ಮಾತೆತ್ತಿದರೇ ಕನ್ನಡವೇ ನಮ್ಮ ಉಸಿರು, ಕನ್ನಡದಲ್ಲಿ ಉದ್ಯೋಗ ಸೃಷ್ಟಿಯಾಗಬೇಕು ಎನ್ನುತ್ತಾರೆ. ಇವರೆಲ್ಲ ನಾನಾ ವಿಶ್ವವಿದ್ಯಾಲಯಗಳ ಕುಲಪತಿ ಪಟ್ಟವನ್ನು ಹೊಂದಿದ್ದವರಾಗಿದ್ದಾರೆ. ಇನ್ನು ಕೆಲವರು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸರ್ಕಾರದ ಕೆಲ ಮಹತ್ವದ ಹುದ್ದೆಗಳನ್ನು ಅಲಂಕರಿಸಿದವರಾಗಿದ್ದಾರೆ. ಇವರೆಲ್ಲ ಆಯಾ ವಿವಿಗಳಲ್ಲಿ ಸ್ಥಳೀಯ ಭಾಷೆಯಲ್ಲಿಯೇ ಸ್ನಾತಕೋತ್ತರ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಎಷ್ಟರ ಮಟ್ಟಿಗೆ ಅದೇ ಕ್ಷೇತ್ರದಲ್ಲಿ ಉದ್ಯೋಗ ಪಡೆಯುವಷ್ಟು ಅವಕಾಶ ಕಲ್ಪಿಸಿದ್ದಾರೆ. ಕಲಿಕೆ ಬಿಟ್ಟು ಮತ್ಯಾವುದಾದರೂ ಕ್ಷೇತ್ರದಲ್ಲಿ ನಾನು ಉದ್ಯೋಗ ಪಡೆಯಬಹುದು ಎಂಬ ವಿಶ್ವಾಸವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಿದ್ದಾರೆಯೇ? ಇಂದಿನ ಯುವಜನರ ಕೈನಲ್ಲಿ ಕುಣಿದಾಡುತ್ತಿರುವ ಮೊಬೈಲ್, ಟ್ಯಾಬ್ಲೆಟ್ ಹಾಗೂ ಇತರ ತಂತ್ರಜ್ಞಾನಗಳಲ್ಲಿ ಕನ್ನಡದ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸುವ ಕೆಲಸವನ್ನು ಕಸಾಪ ಅಥವಾ ಕನ್ನಡ ರಕ್ಷಣೆಯ ಗುತ್ತಿಗೆ ಪಡೆದಿರುವ ಸಂಘಟನೆಗಳು ಮಾಡಬಹುದು. ಇದರಿಂದ ಉದ್ಯೋಗವಕಾಶವು ದೊರೆಯುತ್ತದೆ. ನೀವು ಹೇಳುವ ಕನ್ನಡದ ರಕ್ಷಣೆ ನೈಜ ಅರ್ಥದಲ್ಲಿ ಆಗುತ್ತದೆ. ಸರ್ಕಾರಕ್ಕೆ ಬುದ್ದಿ ಹೇಳುವ ಮುನ್ನ ನಾವು ಹೀಗೆ ಮಾಡಿದ್ದೇವೆ ಸ್ವಾಮಿ, ನೀವು ಮಾಡಿ ಎಂದು ಎದೆಯುಬ್ಬಿಸಿ ಸರ್ಕಾರಕ್ಕೆ ಹೇಳುವ ಸನ್ನಿವೇಶ ನಿರ್ಮಿಸಿ. ಆಗ ನಮಗೂ ನಿಮ್ಮ ಮೇಲೆ ಹೆಮ್ಮೆಯಾಗುತ್ತದೆ. ನಿಮ್ಮ ಮಾತಿನಲ್ಲಿ ನಂಬಿಕೆ ಬರುತ್ತದೆ.
'ಸಮಸ್ಯೆಯನ್ನು ಸೃಷ್ಟಿಸಿರುವ ಪ್ರಜ್ಞೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಲಾಗದು. ಸಮಸ್ಯೆಯನ್ನು ಬಗೆಹರಿಸಲು ನಾವು ಹೊಸದಾಗಿ ಚಿಂತಿಸಬೇಕಾಗುತ್ತದೆ' ಎಂದು ಮುಖ್ಯಮಂತ್ರಿಗೆ ಬರೆದ ಪತ್ರದ ಮೊದಲ ಸಾಲಿನಲ್ಲಿ ಸಾಹಿತಿಗಳು ಉಲ್ಲೇಖಿಸಿದ್ದಾರೆ. ಈ ಹೊಸತನದ ಮೂಲಕ ಕನ್ನಡವನ್ನು ಕಟ್ಟುವ ಗಟ್ಟಿತನವನ್ನು ಸಾಹಿತಿಗಳು ತಮ್ಮ ಜೀವನದಲ್ಲಿಯೂ ಅಳವಡಿಸಿಕೊಳ್ಳಲಿ. ಈ ಕನ್ನಡ ಪ್ರೇಮದ ಜ್ಯೋತಿ ಸಾಹಿತಿಗಳ ಮನೆಗಳಿದಂಲೇ ಪ್ರಜ್ವಲಿಸಲಿ.
-ರಾಜೀವ ಹೆಗಡೆ
ಕನ್ನಡಪ್ರಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

