

ಆ ಹೆದ್ದಾರಿಯಲ್ಲಿ ಲಕ್ಷಾಂತರ ಮಂದಿ ಬೆಳಗಾಗುವುದರೊಳಗೆ ಜಮಾಯಿಸಿಬಿಟ್ಟಿದ್ದರು. ಬೆಂಗಳೂರು- ತುಮಕೂರು ಹೆದ್ದಾರಿಯುದ್ದಕ್ಕೂ ಅವತ್ತು ಕೋಲಾಹಲವೋ ಕೋಲಾಹಲ. ಸಂಚಾರ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿತ್ತು. ವೈಯಕ್ತಿಕ ಕೆಲಸದ ನಿಮಿತ್ತ ಬೆಂಗಳೂರಿನಿಂದ ಸರಿಸುಮಾರು ಮೂವತ್ತು ಕಿ.ಮೀ. ದೂರದ ಸೊಂಡೇಕೊಪ್ಪಕ್ಕೆ ಹೊರಟಿದ್ದ ನನಗೆ ರಸ್ತೆಯಲ್ಲೇ ತಾಸುಗಟ್ಟಲೇ ನಿಲ್ಲಬೇಕಿದ್ದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಕಿರಿಕಿರಿ ಆಗುತ್ತಿದ್ದರೂ ಅಭೂತಪೂರ್ವ ಪ್ರತಿಭಟನೆಯನ್ನು ಕಂಡು ಕುತೂಹಲ ಮೂಡಿತು. ಪ್ರತಿಭಟನೆಗೆ ಬಂದಿದ್ದವರೆಲ್ಲರೂ ಬಹುತೇಕ ಕೃಷಿ ಹಿನ್ನೆಲೆಯವರೇ ಆಗಿದ್ದರು. ಮೇಲ್ನೋಟಕ್ಕೆ ಹಳ್ಳಗರಂತೆಯೇ ಕಾಣುತ್ತಿದ್ದರು. ಅರ್ಕಾವತಿ ನದಿ ಪಾತ್ರದ ಒಂದು ಕಿ.ಮೀ. ವ್ಯಾಪ್ತಿಯ ಎಲ್ಲ ನಿರ್ಮಾಣಗಳನ್ನೂ ತೆರವುಗೊಳಿಸುವಂತೆ ಹೊರಡಿಸಿರುವ ಆದೇಶದ ವಿರುದ್ಧ ಬೀದಿಗಿಳಿದ ಮಂದಿ ಅವರಾಗಿದ್ದರು. ನಿರ್ವಸತಿಯ ಭೀತಿ ಅವರನ್ನು ಹೋರಾಟಕ್ಕೆ ಪ್ರೇರೇಪಿಸಿತ್ತು. ದಶಕಗಳ ಹಿಂದೆಯೇ ಬತ್ತಿ ಬಯಲಾಗಿ ಹೋಗಿರುವ ನದಿ ಪಾತ್ರದ ಜಮೀನಿನಲ್ಲಿ ಅವರೆಲ್ಲರೂ ಮನೆ, ವ್ಯಾಪಾರ-ವಹಿವಾಟು ಸ್ಥಳಗಳನ್ನು ಕಂಡುಕೊಂಡಿದ್ದರು. ಇದೀಗ ಅರ್ಕಾವತಿಯ ಪುನಶ್ಚೇತನದ ಬಗೆಗೆ ಸರ್ಕಾರ ಒಂದಷ್ಟು ಆಸಕ್ತಿಯನ್ನು ತಳೆದ ಹಿನ್ನೆಲೆಯಲ್ಲಿ, ನದಿ ಜಲಾನಯನ ಪ್ರದೇಶದಲ್ಲಿನ ಇಂಥ ಜನವಸತಿಯನ್ನು ತೆರವುಗೊಳಿಸುವುದು ಅನಿವಾರ್ಯವಾಗಿದೆ. ಹಾಗೆಂದು ಅವರದ್ದೆಲ್ಲವೂ ಅಕ್ರಮ ನಿರ್ಮಾಣಗಳೇನಲ್ಲ. ಅಧಿಕೃತವಾಗಿ ನಿವೇಶನಗಳನ್ನು ಕೊಂಡೇ ಮನೆಗಳನ್ನು ನಿರ್ಮಿಸಿಕೊಂಡಿದ್ದವರು. ಬಹುತೇಕ ಸರ್ಕಾರದ ಅಂಗೀಕೃತ ನಿವೇಶನಗಳೇ. ಆದರೆ ನದಿಯ ಪಾತ್ರದಲ್ಲಿ ಇಂಥ ನಿರ್ಮಾಣಗಳನ್ನು ತೆರವುಗೊಳಿಸದೇ ನದಿಯನ್ನು ಪುನಶ್ಚೇತನಗೊಳಿಸುವುದು ಅಸಾಧ್ಯದ ಮಾತು. ಏಕೆಂದರೆ ನದಿಯೆಂಬುದು ಏಕಾಏಕಿ ಯಾವುದೇ ಒಂದು ನಿರ್ದಿಷ್ಟ ಸ್ಥಳದಲ್ಲಿ ಬುಗ್ಗೆಯಾಗಿ ಉಕ್ಕಿ ಹರಿಯುವಂಥದ್ದಲ್ಲ. ಅದರಲ್ಲೂ ಅರ್ಕಾವತಿಯಂಥ ನದಿಗಳು ತನ್ನ ಹರಿವಿನುದ್ದಕ್ಕೂ ಇರುವ ನೂರಾರು ಜಲ ಸೆಲೆಗಳಿಂದಲೇ ಅಸ್ತಿತ್ವ ಪಡೆದಿರುವಂಥದ್ದು. ಜನವಸತಿಗಳಿಂದಾಗಿ, ಕೃಷಿ, ಕೈಗಾರಿಕಾ ಚಟುವಟಿಕೆಗಳಿಂದಾಗಿ ಇಂಥ ನೂರಾರು ಸೆಲೆಗಳ ಬಾಯಿ ಬಂದಾಗಿ ನದಿ ಅವಸಾನ ಕಂಡಿದೆ ಎಂಬುದು ಸತ್ಯ.
ಕಳೆದು ನಾಲ್ಕಾರು ವರ್ಷಗಳಿಂದ ಅರ್ಕಾವತಿ ಪುನಶ್ಚೇತನದ ಕೂಗು ಬಲಗೊಂಡಿದೆ. ಬೆಂಗಳೂರು ಬೆಳೆಯುತ್ತ ಬಂದಂತೆಲ್ಲಾ ನದಿಯ ಅನಿವಾರ್ಯತೆಯ ಅರಿವು ಆಗುತ್ತಿದೆ. ನಗರ ಅಭಿವೃದ್ಧಿ, ಕೈಗಾರಿಕೆ, ಆರ್ಥಿಕ ದೃಷ್ಟಿಕೋನದಲ್ಲಿ ಪರಿಸರದ ಮೌಲ್ಯವನ್ನು ನಾವು ಮರೆತುಬಿಟ್ಟಿದ್ದರ ಬಿಸಿ ಈಗ ತಟ್ಟುತ್ತಿದೆ. ಬೆಂಗಳೂರಿನ ಸುತ್ತಲಿದ್ದ ಮೂರು ಪ್ರಮುಖ ನದಿಗಳ ಅವಸಾನ ಆದದ್ದು ಅದರ ಜಲ ಸೆಲೆಯ ಮೇಲಿನ ದೌರ್ಜನ್ಯದಿಂದಲೇ. ಅದರಲ್ಲೂ ಕುಮುದ್ವತಿ ಮತ್ತು ಅರ್ಕಾವತಿಯರು ಹುಟ್ಟಿ ಹರಿದು ಬರುತ್ತಿದ್ದ ಪಾತ್ರದುದ್ದಕ್ಕೂ ಇದ್ದ ವಿಶಾಲ ಕೆರೆಗಳು, ಅದಕ್ಕೆ ಹೊಂದಿಕೊಂಡಂತೆ ಸಮೃದ್ಧ ಸಸ್ಯ ವೈವಿಧ್ಯ, ಜೀವಪ್ರಭೇದ ನಾಶಗೊಂಡಿವೆ. ಸಂಪದ್ಭರಿತ ಗೋಮಾಳಗಳು ಕೃಷಿ ಭೂಮಿಯಾಗಿವೆ. ಬಯಲುಗಳು, ಬೆಟ್ಟ ಪ್ರದೇಶಗಳು ಬಡಾವಣೆಗಳಾಗಿವೆ. ಕೆರೆಯಂಗಳ ಕೈಗಾರಿಕೆಗಳ ಪಾಲಾಗಿವೆ.
ಹಸಿರ ಸಮೃದ್ಧಿಯಿಂದ ಕೂಡಿದ, ಸಂಪದ್ಭರಿತ ಗೋಮಾಳಗಳೆಂದರೆ ಅವು ಆರೋಗ್ಯಕರ, ಆಹ್ಲಾದಕರ ಜೀವನದ ಪ್ರತೀಕ. ಯಾವುದೇ ಜನ ಸಮುದಾಯದ ಯಶೋಗಾಥೆಯ ಮತ್ತೊಂದು ಮಗ್ಗುಲು ಬಿಚ್ಚಿಕೊಳ್ಳುವುದು ಈ ಸ್ವತಂತ್ರ, ಹಸ್ತಕ್ಷೇಪರಹಿತ ನದಿ ಬಯಲಿನಿಂದಲೇ. ಇಡೀ ಗ್ರಾಮದ ನೈಜ ಅಭಿವೃದ್ಧಿಯ ಗುಟ್ಟು ಅಡಗಿರುವುದೇ ಇಂಥ ಗೋಮಾಳಗಳಿಂದ. ಜಾನುವಾರು, ಸೇರಿದಂತೆ ಪ್ರಾಣಿ ಸಂಕುಲ ಸ್ವಚ್ಚಂದವಾಗಿ ಓಡಾಡುವ ಗೋಮಾಳಗಳು ಇವತ್ತು ಬೆಂಗಳೂರಿನ ಸುತ್ತಮುತ್ತ ಸದ್ದಿಲ್ಲದೇ ಕರಗಿ ಹೋಗುತ್ತಿವೆ. ಗೋಮಾಳಗಳ ಹಸಿರಿನ ಗೊಡವೆಗೆ ನಾವು ಹೋಗದೇ ಉಳಿದರಷ್ಟೇ ಸಾಕು. ಮಾನವ ಹಸ್ತಕ್ಷೇಪದಿಂದ ಅವನ್ನು ದೂರವಿಟ್ಟರೆ ಅದೇ ದೊಡ್ಡದು. ಬದುಕು-ನಿಸರ್ಗ-ಜೀವ ಸಂಕುಲ, ಭುವನದ ಮೇಲಿನ ಈ ಮೂರು ಸಂಗತಿಗಳ ನಡುವಿನ ಬಾಂಧವ್ಯ ತನ್ನಿಂದ ತಾನೇ ಗಟ್ಟಿಗೊಳ್ಳುತ್ತದೆ. ಸಂಪತ್ತಿನ ಹೆಚ್ಚಳಕ್ಕೆ ನಾವೇನೂ ಮಾಡುವುದೇ ಬೇಕಿಲ್ಲ- ಇದು ಯಾವುದೇ ಜಲ ಮೂಲದ ಪುನಶ್ಚೇತನದ ಬಲವಾದ ನಂಬಿಕೆ. ಇದನ್ನೇ ಆಧಾರವಾಗಿಟ್ಟುಕೊಂಡು ನಿರೂಪಿಸಿದ ನೀತಿ ದೂರದ ರಾಜಸ್ಥಾನದ ಲಾಪೋಡಿಯಾದಲ್ಲಿ ಲಕ್ಷ್ಮಣ್ ಸಿಂಗ್ ಎಂಬ ಜಲಯೋಧನ ಯಶೋಗಾಥೆಗೆ ಆಧಾರವಾಗಿತ್ತು. ಅಲ್ಲಿ ನೀರ ನೆಮ್ಮದಿಯನ್ನು ನಿಲ್ಲಿಸಿದ್ದೂ ಅದೇ. ಮಾತ್ರವಲ್ಲ ಕೃಷಿ ಸಮೃದ್ಧಿಯನ್ನು ಕಟ್ಟಿಕೊಟ್ಟಿತು. ಬದುಕು ಬಂಗಾರವಾಗಿಸಿತು.
90ರ ದಶಕದ ಆರಂಭದ ಅವಧಿಯಲ್ಲಿ ಅತ್ಯಪೂರ್ವ ಜೀವ ಸಂಸ್ಕೃತಿಯೊಂದಕ್ಕೆ ಧಕ್ಕೆ ತರುವ ಕಾಯಕಕ್ಕೆ ಬೆಂಗಳೂರು ಸುತ್ತಮುತ್ತಲು ನಾಂದಿ ಹಾಡಲಾಯಿತು. 'ಜೀವ ಸಂಸ್ಕೃತಿ'ಯೆಡೆಗಿನ ಪಯಣ ಎಂಬುದನ್ನೇ ಮರೆತು ನಗರ ಅಭಿವೃದ್ಧಿಯೊಂದನ್ನೇ ಗುರಿಯಾಗಿಸಿಕೊಂಡು ಹೊರಟೆವು. ಇದು ಪರಿಣಾಮಕಾರಿ ಸಮುದಾಯ ಆಧಾರಿತ ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ತಂತ್ರದ ತಂತುವನ್ನು ಕಡಿಯಿತು. ಹಿಂದಿನ ದಿನಗಳಲ್ಲಿ ಇಂಥದ್ದೊಂದು ತಂತ್ರ ರೂಪಿಸುವ ಅಗತ್ಯವೇ ಇರಲಿಲ್ಲ. ಆಗ ಜನಸಂಖ್ಯೆ ಕಡಿಮೆ ಇತ್ತು. ಜಾನುವಾರುಗಳ ಬಾಹುಳ್ಯ ಹೆಚ್ಚಿತ್ತು. ಹೀಗಾಗಿ ಒಂದು ಜಲ ಮೂಲ (ಅದು ಕೆರೆ, ಕಟ್ಟೆ ಯಾವುದೇ ಇರಬಹುದು) ಎಲ್ಲರ ಅಗತ್ಯವನ್ನು ಪೂರೈಸಲು ಸಮರ್ಥವಾಗಿತ್ತು. ಮಾತ್ರವಲ್ಲ, ಅವುಗಳ ನಿರ್ವಹಣೆಯೂ ಅಷ್ಟೇ ನಿಯಮಿತವಾಗಿ ಸಾಗಿತ್ತು. ತೇವಾಂಶಯುಕ್ತ ನೆಲದಲ್ಲಿ ಗೋ ತ್ಯಾಜ್ಯ ಹೂತಿಡಲಾಗಿಡುತ್ತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಜನ ನಿಸರ್ಗದ ಸಾಮೀಪ್ಯದಲ್ಲಿ ನಿಸರ್ಗದೊಂದಿಗೇ ಬದುಕುತ್ತಿದ್ದರು. ಆದರೆ ಯಾವತ್ತೂ ನಿಸರ್ಗವನ್ನು ಕಬಳಿಸಿ ಬದುಕುತ್ತಿರಲಿಲ್ಲ. ಈಗದು ಎಲ್ಲ ರೀತಿಯಿಂದಲೂ ತಿರುವುಮುರುವಾಗಿದೆ. ಇಂಥ ಆತಂಕವನ್ನು ನಾವು ಮೊದಲೇ ಗ್ರಹಿಸಬೇಕಿತ್ತು.
ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯ ತಂತ್ರಜ್ಞಾನಗಳು ಮಾತ್ರವೇ ಪರಿಹಾರವನ್ನು ದೊರಕಿಸಿಕೊಡಬಲ್ಲುದು ಎಂಬುದು ಅಧ್ಯಯನಗಳ ಮೂಲಕ ಕಂಡುಕೊಂಡ ಸತ್ಯ. ಅದಕ್ಕಾಗಿ ವ್ಯಾಪಕ ಅಧ್ಯಯನ ಪ್ರವಾಸ ಕೈಗೊಂಡವರು ಲಕ್ಷ್ಮಣ್ ಸಿಂಗ್. ಸಮುದಾಯ ಸಂಘಟನೆಯಲ್ಲಿ ಹೀಗೆ ಮಾದರಿಯಾಗಿ ನಿಂತವರು ರಾಜಸ್ಥಾನದ ಇನ್ನೊಬ್ಬ ಭಗೀರಥ ರಾಜೇಂದ್ರ ಸಿಂಗ್. ಅರಾವರಿ ಸೇರಿದಂತೆ ಐದು ನದಿಗಳನ್ನು ಪುನಶ್ಚೇತನಗೊಳಿಸಿದ ಮಹತ್ ಕಾರ್ಯಕ್ಕಾಗಿ 2001ನೇ ಸಾಲಿಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರಾದ ರಾಜೇಂದ್ರ ಸಿಂಗ್ ಅವರ ಕೆಲಸದ ಗುಟ್ಟೇ ಇದು. ನಮ್ಮ ಹಳ್ಳಿ ಹಾಗೂ ಸುತ್ತಮುತ್ತಲ ಪರಿಸರವನ್ನು ಸಮಗ್ರವಾಗಿ ಪುನರುಜ್ಜೀವನಗೊಳಿಸದೇ ಬಾವಿಗಳು ಮತ್ತು ಕೆರೆಗಳು ನಳನಳಿಸಲು ಸಾಧ್ಯವಿಲ್ಲ. ಇದು ಪರಿಣಾಮಕಾರಿ ಫಲವನ್ನು ದೊರಕಿಸಿಕೊಡಬೇಕಿದ್ದರೆ ಗೋಮಾಳಗಳಲ್ಲಿ ನೀರಿನ ಚಟುವಟಿಕೆಗಳಿಗೆ ಚಾಲನೆ ನೀಡಲೇಬೇಕು. ಹಾಗಾಗುವ ಮೊದಲು ಅಂಥ ಸ್ಥಳಗಳಲ್ಲಿ ಈಗಾಗಲೇ ತಲೆ ಎತ್ತಿ ನಿಂತಿರುವ ನಿರ್ಮಾಣಗಳನ್ನು ತೆರವುಗೊಳಿಸುವುದು ಅನಿವಾರ್ಯ. ಅದಿಲ್ಲದೇ ನದಿ ಪುನಶ್ಚೇತನದ ಯಾವ ಕೆಲಸಗಳೂ ಸಮಗ್ರ ಅರ್ಥವನ್ನು ಪಡೆದುಕೊಳ್ಳುವುದಿಲ್ಲ.
ಹಾಗೆಂದು ಈಗಾಗಲೇ ಅಲ್ಲಿ ವಾಸಿಸುತ್ತಿರುವವರನ್ನು ಏಕಾಏಕಿ ಒಕ್ಕಲೆಬ್ಬಿಸಬೇಕೆಂಬ ಪ್ರತಿಪಾದನೆ ಮಾಡುತ್ತಿಲ್ಲ. ಅವರ ಪುನರ್ವಸತಿಯ ಬಗ್ಗೆ ಮೊದಲು ಯೋಚಿಸಬೇಕು. ಅದು ಸುಲಭದ ಕೆಲಸವಲ್ಲ. ಏಕೆಂದರೆ 1980ರಿಂದಲೂ ಅಂದರೆ ಮೂರು ಮೂರೂವರೆ ದಶಕಗಳಿಂದಲೂ ಜನರು ಅಲ್ಲಿ ವಾಸ ಮಾಡುತ್ತಿದ್ದಾರೆ. ಅವರೀಗ ಬೀದಿಪಾಲಾಗುವುದರಿಂದ ನದಿ ಪುನಶ್ಚೇತನ ಕಾರ್ಯ ಅರ್ಥ ಪಡೆಯುವುದಿಲ್ಲ. ಏಕೆಂದರೆ ನೀರಿನ ಕೆಲಸವೆಂಬುದು ಸಮುದಾಯದಿಂದಲೇ ಆಗಬೇಕಿರುವುದು. ಪ್ರತಿ ಹಂತದಲ್ಲೂ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ನದಿ ಸಂರಕ್ಷಣೆ ಆಗಲು ಸಾಧ್ಯವೇ ಇಲ್ಲ. ತೆರವು ಆದೇಶದ ವಿರುದ್ಧ ಪ್ರತಿಭಟನೆಗೆ ಇಳಿದವರಿಗೂ ಅರ್ಕಾವತಿ ಬೇಕು. ಮತ್ತು ಅರ್ಕಾವತಿ ಕೆಲಸಕ್ಕೂ ಅವರು ಬೇಕು. ಇದರಿಂದ ಎರಡು ರೀತಿಯ ಪ್ರಯೋಜನಗಳಿವೆ. ಮೊದಲನೆಯದಾಗಿ ಮಾಡುವ ಕೆಲಸ ನಮ್ಮದು ಎನ್ನುವ ಪ್ರೀತಿ ಜನರಲ್ಲಿ ಮೂಡುತ್ತದೆ. ಅದಕ್ಕಿಂತ ಹೆಚ್ಚಾಗಿ ಒತ್ತುವರಿ ತೆರವಿನಂಥ ಸಂದರ್ಭದಲ್ಲಿ ಬರುವ ವಿರೋಧ ಎದುರಿಸುವುದು ಸುಲಭ.
ನದಿ, ಜಲ ಮೂಲದ ಅಭಿವೃದ್ಧಿಯಲ್ಲಿ ಮೊದಲು ಮಾಡಬೇಕಿರುವ ಕೆಲಸವೇ ಒತ್ತುವರಿ ತೆರವು. ಜತೆಗೆ ಸ್ಥಳೀಯ, ಪಾರಂಪರಿಕ ತಂತ್ರಜ್ಞಾನಗಳು ಸಮುದಾಯದೊಳಗೆ ಹುದುಗಿರುತ್ತವೆ. ಬೇರೆಲ್ಲಿಂದಲೋ ಕಂಡು ತರುವ ಉಪಾಯಗಳು ಸ್ಥಳೀಯ ಸಮಸ್ಯೆಗಳನ್ನು ಅಷ್ಟು ಸಮರ್ಥವಾಗಿ ಪರಿಹರಿಸಲು ಸಾಧ್ಯವೇ ಇಲ್ಲ. ಹೀಗಾಗಿ ಸ್ಥಳೀಯ ತಂತ್ರಜ್ಞಾನವನ್ನು ಹೆಕ್ಕಿ ತೆಗೆಯಬೇಕು. ಇದಕ್ಕಾಗಿ ಸ್ಥಳೀಯ ಭೂಮಿ, ಜಲ, ಕೃಷಿಯ ಬಗ್ಗೆ ಅವುಗಳ ಗುಣ ಲಕ್ಷಣದ ಬಗ್ಗೆ ಖಚಿತ ಮಾಹಿತಿಯನ್ನು ಹೊಂದಿರುವ, ವಂಶಪಾರಂಪರ್ಯವಾಗಿ ಬಂದಿರುವ ಗ್ರಾಮೀಣ ಜನರನ್ನು ಸಂಘಟನೆಯಲ್ಲಿ ಒಳಗೊಳಿಸಿಕೊಳ್ಳಬೇಕು. ಅವರ ಜ್ಞಾನದ ನೆರವಿನ ಮೇಲೆ ಗೋಮಾಳಗಳಂಥ ಸ್ಥಳಗಳ ಅಭಿವೃದ್ಧಿಯ ಕಾರ್ಯಕ್ಕೆ ಅಡಿಯಿಡಬೇಕು. ಭೂಮಿಯ ಸ್ವರೂಪ, ಅದರ ನೀರಿಂಗುವ ಸಾಮರ್ಥ್ಯ, ಮಳೆ ಸರಾಸರಿ, ಭೂಮಿಯಲ್ಲಿನ ತೇವಾಂಶದ ಪ್ರಮಾಣ, ಇಳಿಜಾರಿನ ಮಟ್ಟ ಇತ್ಯಾದಿಗಳ ಬಗ್ಗೆ ಅವರಲ್ಲಿ ನಿಖರವಾದ ಅಂಕಿ ಅಂಶಗಳ ಸಮೇತ ಮಾಹಿತಿಗಳಿದ್ದರೆ ಅದು ಹಳ್ಳಿಗರಿಗೆ ಮಾತ್ರ. ಇದನ್ನು ಆಧರಿಸಿಯೇ ಊರಿನ ತ್ಯಾಜ್ಯ ನೀರು ಹಾಗೂ ಮಳೆನೀರಿನ ಮರು ಬಳಕೆಯ ಬಗ್ಗೆ ಯೋಜನೆ ರೂಪಿಸಲು ಸಾಧ್ಯ.
ಜಲನಕ್ಷೆ ಇಲ್ಲಿ ಇನ್ನೊಂದು ಗಮನಾರ್ಹ ಸಂಗತಿ. ಬಿದ್ದ ಮಳೆ ನೀರು ಹಾಗೂ ತ್ಯಾಜ್ಯ ಎತ್ತಲಿಂದ ಎತ್ತ ಹರಿಯುತ್ತದೆ? ಅದು ಕೊನೆಯಲ್ಲಿ ಹೋಗಿ ಸೇರುವುದೆಲ್ಲಿಗೆ? ನಿಜವಾಗಿ ಕಾಲದ ಗತಿಯಲ್ಲಿ ಅವು ಹಾದಿ ತಪ್ಪಿದ್ದೆಲ್ಲಿ ಎಂಬಿಇತ್ಯಾದಿಗಳ ಕುರಿತು ಕೂಲಂಕಷ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯ ಮೊದಲಾಗಬೇಕು. ಇದನ್ನು ಒಳಗೊಂಡ ಸಮಗ್ರ ಜಲ ನಕ್ಷೆಯನ್ನು ರೂಪಿಸಬೇಕು. ಇದಕ್ಕನುಗುಣವಾಗಿ ಊರಿನ ಗೋಮಾಳಗಳು ಸೇರಿದಂತೆ ಸುತ್ತಲಿನ ಜಲಸೂರಿ(ಜಲಾನಯನ)ನತ್ತ ನೀರನ್ನು ಹರಿಸಿಕೊಂಡು ಹೋಗಿ ಅಲ್ಲಿ ಎಲ್ಲವೂ ಇಂಗುವಂತೆ ಮಾಡಬೇಕು. ಹಾಗೆ ಹರಿದು ಹೋಗುವ ನೀರಿಗೆ ಕೃಷಿ ಜಮೀನುಗಳಲ್ಲಿ ಹಾದಿ ಮಾಡಿಕೊಡುವುದರಿಂದ ವಿಶೇಷ ಫಲಿತಾಂಶವನ್ನು ನಿರೀಕ್ಷಿಸಲು ಸಾಧ್ಯ.
ಅರ್ಕಾವತಿಯಂಥ ಜಲಮೂಲದ ಬಗ್ಗೆ ಹೇಳುವುದಾದರೆ ಅತ್ಯಂತ ಒತ್ತು ಕೊಡಬೇಕಿರುವ ಅಂಶವೆಂದರೆ ಸುತ್ತಲಿನ ಹಳ್ಳಿಗಳ ಎಲ್ಲ ಭೂಮಿಯನ್ನೂ ಬಳಕೆಗೆ ತಂದುಕೊಳ್ಳಬೇಕಿರುವುದು. ನಿಜವಾಗಿ ನದಿಯ ಭಾಗದಲ್ಲಿ ವಾಸಿಸುವವರೆಲ್ಲರಿಗೂ ತಮ್ಮ ಸುತ್ತಲಿನ ನೀರು, ಭೂಮಿ ಸೇರಿದಂತೆ ಒಟ್ಟಾರೆ ನಿಸರ್ಗದ ಬಗ್ಗೆ ಸಮಗ್ರ ಮಾಹಿತಿ ಬೇಕು. ಏನು ಮಾಡಿದರೆ ಏನಾದೀತು ಎಂಬುದರ ಬಗ್ಗೆ ಸ್ಪಷ್ಟ ಪರಿಕಲ್ಪನೆ ದೊರೆಯಬೇಕು. ಆದರೆ ಅರ್ಕಾವತಿ ಬಯಲಿನಲ್ಲಿ ಈಗಿರುವವರೆಲ್ಲರೂ ಮೂಲ ನಿವಾಸಿಗಳಲ್ಲ. ಕೆಲವರು ಹೊರಗಿನಿಂದ ಬಂದು ಭೂಮಿ ಖರೀದಿಸಿ ಮನೆಕಟ್ಟಿಕೊಂಡವರು. ಅಲ್ಲದೇ ಅಲ್ಲಿನ ಸುತ್ತಲಿನ ರೈತರಿಗೂ ನದಿಯ ಪರಿಸರದ ಪ್ರಜ್ಞೆ ಬೇಕು. ತಾನು ತನ್ನ ಭೂಮಿಯಲ್ಲಿ ಏನು ಬೆಳೆಯಬೇಕು, ಅದರ ನಿರ್ವಹಣೆಗೆ ಎಷ್ಟು ನೀರು ಬೇಕಾದೀತು... ಯಾವುದು ತನಗೆ ನಷ್ಟ ತರಲಿದೆ...ಹೀಗೆ ಪ್ರತಿಯೊಬ್ಬ ರೈತನೂ ವೈಜ್ಞಾನಿಕವಾಗಿ ವಿಶ್ಲೇಷಣೆಗಿಳಿಯುವ ಮಟ್ಟಕ್ಕೆ ಬೆಳೆದು ನಿಲ್ಲಬೇಕು. ಆತನೇ ಸ್ವತಂತ್ರವಾಗಿ ಕಾಲುವೆಗಳ ಮೂಲಕ ತ್ಯಾಜ್ಯ, ಹೆಚ್ಚುವರಿ ನೀರನ್ನು ಹರಿಸಿಕೊಂಡು ಹೋಗಬಲ್ಲವನಾಗಬೇಕು. ಮಳೆ ನೀರನ್ನು ಜಮೀನಿನಲ್ಲಿಯೇ ಹೇಗೆ ಇಂಗಿಸಿಕೊಳ್ಳಬೇಕು, ಹೆಚ್ಚಿನ ನೀರನ್ನು ಎಲ್ಲಿಗೆ ಕೊಂಡೊಯ್ದು ಬಿಡಬೇಕು ಎಂಬುದರ ಬಗ್ಗೆ ಸಮಗ್ರವಾದ ನೀತಿಯನ್ನು ರೈತರೇ ನಿರ್ಧರಿಸಿಕೊಳ್ಳಬೇಕು. ಈ ಹಂತದಲ್ಲಿ ಸಾಕಷ್ಟು ಎಚ್ಚರವನ್ನೂ ಪಾಲಿಸಬೇಕು. ಮತ್ತೆಂದೂ ಅಂತರ್ಜಲಕ್ಕಾಗಲೀ, ಭೂಮಿಯ ಮೇಲಿನ ಜಲಮೂಲಕ್ಕಾಗಿಯಾಗಲೀ ಧಕ್ಕೆ ತಾರದಂತೆ ಜಾಗೃತಿ ಮೂಡಿಸಬೇಕು. ಇದು ಸುಸ್ಥಿರ ಅಭಿವೃದ್ಧಿಗೆ ಸಹಾಯಕವಾದೀತು. ಅದು ಬಿಟ್ಟು ಜನರನ್ನು ಒಕ್ಕಲೆಬ್ಬಿಸುವುದರಿಂದ ಮಾತ್ರವೇ ಅರ್ಕಾವತಿ ಪುನಶ್ಚೇತನ ಸಾಧ್ಯವಾಗಲು ಸಾಧ್ಯವೇ ಇಲ್ಲ.
'ಜೀವ ಸಂಸ್ಕೃತಿ'ಯೆಡೆಗಿನ ಪಯಣದಲ್ಲಿ ಪ್ರಾಣಿ-ಪಕ್ಷಿಗಳ ಸಹಜ ಬದುಕು, ಪರಿಸರ ವ್ಯವಸ್ಥೆ, ಜಲ ಸಂರಕ್ಷಣೆ ಹಾಗೂ ಕೃಷಿಯನ್ನು ಪ್ರಧಾನವಾಗಿ ಗಮನದಲ್ಲಿಟ್ಟುಕೊಂಡಾಗ ಮಾತ್ರವೇ ನಮ್ಮ ನದಿಗಳು ಪುನಃ ಜೀವ ತಳೆಯಲು ಸಾಧ್ಯ. ನಮ್ಮ ಸುತ್ತಲಿನ ಭೂಮಿಯನ್ನು ಪ್ರಮುಖವಾಗಿ ಮೂರು ವಿಭಾಗಗಳಾಗಿ ವಿಂಗಡಿಸಿಕೊಳ್ಳಬೇಕು. ಮೊದಲನೆಯದ್ದು ನೀರಾವರಿ ಹಾಗೂ ಮಾನವ ಬದುಕಿಗೆ ಮೀಸಲಾದರೆ ಇನ್ನೊಂದನ್ನು ಕಡ್ಡಾಯವಾಗಿ ಗೋಮಾಳವನ್ನಾಗಿ ಪರಿವರ್ತಿಸುವ ನಿರ್ಧಾರ ಕೈಗೊಳ್ಳಬೇಕು. ಗ್ರಾಮದ ಇನ್ನೊಂದು ಪಾರ್ಶ್ವದಲ್ಲಿ ಸಹಜ ನಿಸರ್ಗದ ಅಭಿವೃದ್ಧಿಯನ್ನೇ ಗುರಿಯಾಗಿಸಿಕೊಳ್ಳಬೇಕು. ಅಲ್ಲಿ ಮಾನವ ಪ್ರವೇಶವನ್ನೇ ನಿರ್ಬಂಧಿಸಬೇಕು. ಪ್ರಮುಖವಾಗಿ ವಿಕೃತಿಗಳೆಲ್ಲ ಮಾಯವಾಗಿ ನಿಜವಾದ ಸಂಸ್ಕೃತಿ ಎಂಬುದು ಮೊಳೆಯಲಾರಂಭಿಸಿದರೆ ಆವಾಗ ನದಿ ಮತ್ತೆ ಜೀವ ತಳೆಯಲು ಸಾಧ್ಯ.
ಆದರೆ ಅರ್ಕಾವತಿಯಲ್ಲಿ ಇದಾವುದೂ ಆಗುತ್ತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಜನಪ್ರತಿನಿಧಿಗಳೆನಿಸಿಕೊಂಡವರ ಅಜ್ಞಾನ ಮತ್ತು ದ್ವಿಮುಖ ನೀತಿ ನದಿ ಅಭಿವೃದ್ಧಿಗೆ ಪ್ರಮುಖ ಅಡ್ಡಿಯಾಗಿದೆ. ಶಾಸಕ ಎಸ್.ಆರ್. ವಿಶ್ವನಾಥ್ ಸೇರಿದಂತೆ ಅರ್ಕಾವತಿ ಪುನಶ್ಚೇತನಕ್ಕಾಗಿ ಹೋರಾಟಕ್ಕಿಳಿದು ಹೆಸರು ಮಾಡಿದ್ದವರೇ, ಮೊನ್ನಿನ ಪ್ರತಿಭಟನೆಯಲ್ಲೂ ಕಾಣಿಸಿಕೊಂಡಿದ್ದರು. ಅವರಲ್ಲಿನ ಉದ್ದೇಶ ಸ್ಪಷ್ಟತೆಯನ್ನು ಖಂಡಿತಾ ಜನರು ಅರಿಯಬೇಕಿದೆ. ಇವರಿಂದ ಯಾವ ಅಭಿವೃದ್ಧಿಯನ್ನು ನಿರೀಕ್ಷಿಸಲು ಸಾಧ್ಯ?
- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in