ಅಂಕಣಗಳು

ವಿದ್ವತ್ತಿನ ವಿನಮ್ರ ಪರ್ವತ ರಂಗನಾಥ ಶರ್ಮ

ವಿದ್ವತ್ತಿನ ವಿನಮ್ರ ಪರ್ವತ ರಂಗನಾಥ ಶರ್ಮ
Published On :

ಇತ್ತೀಚೆಗೆ ನಮ್ಮನ್ನು ಅಗಲಿದ ವಿದ್ವಾನ್ ರಂಗನಾಥಶರ್ಮ ಅವರದ್ದು ಹಲವು ಪೀಳಿಗೆಗಳು ನೆನಪಿನಲ್ಲಿ ಇಡಬೇಕಾದ ಮೇರು ವ್ಯಕ್ತಿತ್ವ. ಶತಾವಧಾನಿ ಡಾ. ಆರ್. ಗಣೇಶ್ ಅವರು ಶರ್ಮರ ಕುರಿತು 'ವಾಣೀ ವಾಹನ' ಎಂಬ ಪುಸ್ತಕವನ್ನೇ ಬರೆದಿದ್ದಾರೆ. ಲೇಖಕರ ಅನುಮತಿಯೊಂದಿಗೆ ಆ ಕೃತಿಯ ಕೆಲಭಾಗಗಳನ್ನು ಸಂಗ್ರಹಿಸಿ, ಆ ಹಿರಿಯ ಚೇತನಕ್ಕೊಂದು ನುಡಿ ನಮನ...

ಶರ್ಮರ ದೈವಶ್ರದ್ಧೆ-ತತ್ವನಿಷ್ಠೆಗಳನ್ನು ಮನಗಾಣಲು ಅವರೊಮ್ಮೆಹೇಳಿದ್ದ ಮಾತನ್ನು ನೆನೆಯಬಹುದು: 'ತಲೆದೆಸೆಗೆ ಶಂಕರಭಾಷ್ಯ, ಕೈಯಲ್ಲಿ ಮಹಾಭಾಷ್ಯ ಮತ್ತು ಎದೆಯ ಮೇಲೆ ವಾಲ್ಮೀಕಿ ರಾಮಾಯಣಗಳು ಇರುವಂತೆಯೇ ಪ್ರಾಣ ಬಿಡಬೇಕು. ಇದೇ ನನ್ನ ಹಿರಿದಾದ ಬಯಕೆ.' ಹಿರಿಯರ ಬಯಕೆಗಳು ಮತ್ತಿನ್ನೆಂತು ತಾನೆ ಇರಬಲ್ಲವು? ಅವರನ್ನು ಒಂದು ಸಂದರ್ಭದಲ್ಲಿ 'ನಿಮಗೆ ಮಿಗಿಲಾಗಿ ಆರಾಧ್ಯರಾದ ದೇವರು-ಗುರುಗಳು ಯಾರೆಂದು ಕೇಳಿದ್ದೆ. ಆಗ ಅವರು 'ಶ್ರೀರಾಮನು ನನ್ನ ಇಷ್ಟದೈವ, ಶಂಕರಭಗವತ್ಪಾದರು ನನ್ನ ಇಷ್ಟಗುರುಗಳು. ಒಬ್ಬರು ಜೀವನಧರ್ಮದರ್ಶನಕ್ಕೆ,  ಮತ್ತೊಬ್ಬರು ಮೋಕ್ಷಮಾರ್ಗದರ್ಶನಕ್ಕೆ. ಇದರಾಚೆಗೆ ನನಗೇನೂ ಇಲ್ಲ' ಎಂದಿದ್ದರು. ವಾಲ್ಮೀಕಿ ರಾಮಾಯಣದ ಬಗೆಗೆ ಅವರಲ್ಲಿ ಆಸಕ್ತಿಯನ್ನು ಹುಟ್ಟಿಸಿದವರು ಡಿ.ವಿ.ಜಿ. ಜೊತೆಗೆ ಬೆಳೆದಿದ್ದು ವ್ಯಾಸರ ಭಾರತದ ಬಗೆಗೆ ಪ್ರೀತಿ. ಗೀತೆಯಿಂದಾಗಿ ಶ್ರೀಕೃಷ್ಣನು ಆತ್ಮೀಯನಾದ. ಆಚಾರ್ಯ ಶಂಕರರಂತೂ ಶಿವನೇ ಆದರಲ್ಲ! ಹೀಗೆ ಶರ್ಮರಿಗೆ ದೇವತಾಸಮನ್ವಯವಾಯಿತು. ರಾಮ-ಕೃಷ್ಣರ ಬಗೆಗಾಗಲಿ, ಶಂಕರರ ಬಗೆಗಾಗಲಿ ಇಲ್ಲದ್ದು-ಸಲ್ಲದ್ದು ಬರೆದು ಬಿಂಕಮಾಡುವವರ ಬಗೆಗೂ ಹಳಿದು ಭಾಷಣ ಮಾಡುವವರಿಗೂ ಶರ್ಮರು ತಕ್ಕ ಉತ್ತರಗಳನ್ನು ಕೊಡುತ್ತಲೇ ಬಂದಿದ್ದಾರೆ. ಈ ಬಗೆಗೆ ಅವರಿಗೆ ದಣಿವೇ ಇಲ್ಲ. ಸಂಸ್ಕೃತ ಭಾಷೆ-ಸಂಸ್ಕೃತಿ-ಸಾಹಿತ್ಯಗಳ ಬಗೆಗೂ ಅಷ್ಟೇ. ಹೀಗಾಗಿಯೇ ಅವರ ಹೆಚ್ಚಿನ ಬರೆಹಗಳಲ್ಲಿ ಈ ಅವಧಾರಣೆ, ಪುನರುಕ್ತಿ ಪ್ರೀತಿಗಳು ಎದ್ದು ತೋರುತ್ತವೆ.
ಶ್ರೀಯುತರು ಜ್ಯೋತಿಷ್ಯವನ್ನು ಅಭ್ಯಾಸಮಾಡಿದ್ದರೂ ಅದರ ಗೀಳಿದ್ದವರಲ್ಲ. ಮಾತ್ರವಲ್ಲ, ಅಲ್ಲಿ ಫಲವನ್ನು ಹೇಳುವಾಗ ಉಂಟಾಗುವ ಉತ್ಸರ್ಗಾಪವಾದಗಳ ವಿಪುಲತೆ ಮತ್ತು ವಿಷಮತೆಗಳು ಉಂಟುಮಾಡುವ ಸಂದಿಗ್ಧ್ದತೆಯು ಅವರನ್ನು ಆ ಶಾಸ್ತ್ರದಿಂದ ದೂರ ಸರಿಯುವಂತೆ ಮಾಡಿತೆಂದು ಹೇಳಿದ್ದರು. ಇಷ್ಟಾಗಿಯೂ ಆ ಶಾಸ್ತ್ರವು ಸುಳ್ಳಲ್ಲ, ಅದಕ್ಕೆ ಅದರದೇ ಆದ ಸ್ಥಾನ-ಮಾನಗಳಿವೆಯೆಂಬುದನ್ನೂ ಸ್ಪಷ್ಟವಾಗಿ ತಿಳಿಸಿದ್ದರು. ನನ್ನ ಒಬ್ಬ ಜ್ಯೋತಿರ್ವಿದ ಗೆಳೆಯರೊಬ್ಬರನ್ನು ಅವರಲ್ಲಿ ಕರೆದೊಯ್ದಿದ್ದಾಗ, ಜ್ಯೋತಿಷ್ಯದ ಬಗೆಗೆ ಸಾಕಷ್ಟು ಚರ್ಚಿಸಿ, ಕಡೆಗೆ ತೀರ ಕಿರಿಯ ವಯಸ್ಸಿನ ಅವರಿಗೆ ತಮ್ಮದೊಂದು ಪುಸ್ತಕವನ್ನು ಹಸ್ತಾಕ್ಷರ ಹಾಕಿ ನೀಡುವಾಗ, 'ನಮಸ್ಕಾರಪೂರ್ವಕ' ಎಂದೇ ಒಕ್ಕಣಿಸಿದ್ದರು. ಯಾರಿಗಾದರೂ ಅಷ್ಟೇ; 'ನಮಸ್ಕಾರಪೂರ್ವಕ' ಇಲ್ಲವೇ ವಿಶ್ವಾಸಪೂರ್ವಕ' ಎಂದು ಬರೆದು ತಮ್ಮ ಪುಸ್ತಕಗಳನ್ನು ನೀಡುವರಲ್ಲದೆ ಹಿರಿತನದ ಹೆಮ್ಮೆಯನ್ನು ಮೆರೆಸುವಂತೆ 'ಆಶೀರ್ವಾದಪೂರ್ವಕ' ಎನ್ನಲಾರರು. ಇದೇ ಸಂದರ್ಭದಲ್ಲಿ ಅವರು 'ಸಾವಿಗೆ ಅಂಜಬೇಕಿಲ್ಲ, ಬದುಕಿದ್ದಾಗ ಬರುವ ಪೀಡೆಗಳಿಗಾಗಿ ಅಂಜಬೇಕು; ದೀರ್ಘಾಯುಷ್ಯವೂ ಒಂದು ಹೊರೆ ಎನ್ನುತ್ತಾ, 'ಅತಿಧೀರ್ಘೇ ಜೀವಿತೇ ಕೋ ರಮೇತ' ಎಂಬ ಕಠೋಪನಿಷದ್ವಾಕ್ಯವನ್ನು ಉದ್ಧರಿಸಿ 'ಮುಗಿವೇ ಭಾಗ್ಯ' ಎಂಬುದನ್ನು ಪೋಷಿಸುವಂಥ ಹಲಕೆಲವು ಕಥೆ-ದೃಷ್ಟಾಂತಗಳನ್ನೂ ಹೇಳಿದ್ದರು.
ಗುರು-ಹಿರಿಯರಲ್ಲಿ ಶರ್ಮರಿಗೆ ಮಿಗಿಲಾದ ಭಕ್ತಿ. ಶೃಂಗೇರಿಯ ಶ್ರೀ ಶ್ರೀ ಭಾರತೀತೀರ್ಥರ ಪಾಂಡಿತ್ಯವನ್ನು ತುಂಬ ಮೆಚ್ಚಿ ಆದರಿಸುತ್ತಾರೆ. ತಮಗಿಂತ ತೀರ ಕಿರಿಯ ವಯಸ್ಸಿನವರಾದ ಸನ್ಯಾಸಿಗಳಿಗೂ ಒಂದೊಮ್ಮೆ ತಮ್ಮಲ್ಲಿ ವಿದ್ಯೆಯನ್ನು ಕಲಿತು, ಇಂದೂ ಕಲಿಕೆಯ ಹಂತದಲ್ಲಿದ್ದು ತಮ್ಮಲ್ಲಿ ಪ್ರಾಂಜಲವಾಗಿ ಗುರುಭಾವವನ್ನು ಹೊಂದಿರುವಂಥ ಪೀಠಾಧಿಪತಿಗಳಿಗೂ ತಮ್ಮ ಮುಪ್ಪು-ನಿಶ್ಶಕ್ತಿಗಳನ್ನು ಲೆಕ್ಕಿಸದೆ ದಂಡವತ್ಪ್ರಣಾಮ ಮಾಡುತ್ತಾರೆ. ಹಿರಿಯರಾದ ಪಂಡಿತರನ್ನು -ನವೀನಂ ವೆಂಕಟೇಶಶಾಸ್ತ್ರಿ, ಮಾಗಡಿ ಲಕ್ಷ್ಮೀನರಸಿಂಹಶಾಸ್ತ್ರಿ, ಪೇರಿಸೂರ್ಯನಾರಾಯಣಶಾಸ್ತ್ರಿ, ಚತುರ್ವೇದಿ ರಾಮಚಂದ್ರಾಚಾರ್, ಮಾಗಡಿ ರಂಗನಾಥಾಚಾರ್ ಮುಂತಾದ ಉದ್ದಂಡವಾಕ್ಯಾರ್ಥ ಪರಿಚಿತರ ಮನೆಗಳಲ್ಲಿ ಸಂಭವಿಸುವ ನೋವು-ನಲಿವುಗಳಿಗೆ, ಮದುವೆ-ಮುಂಜಿ-ಸಾವುಗಳಿಗೆ ಯುಕ್ತವಾಗಿ ಸ್ಪಂದಿಸುವುದಲ್ಲದೇ, ತಮ್ಮೆಲ್ಲ ಕಷ್ಟಗಳನ್ನು ಮರೆತು ಆಯಾ ಸಂದರ್ಭಗಳಲ್ಲಿ ಅಲ್ಲಲ್ಲಿಗೆ ಹೋಗಿ ಹಾರೈಸಿ, ಸಾಂತ್ವನ  ಹೇಳಿ ಬರುತ್ತಾರೆ. ಅವರ ಆಸ್ತಿಕ್ಯ-ಶ್ರದ್ಧೆ-ಸಹಾನುಭೂತಿಗಳೂ ಅಸಮಾನ.
ರಂಗನಾಥಶರ್ಮರು ದೇಶಭಕ್ತಾಗ್ರಣಿಗಳು. ಅವರ ಬದುಕು-ಬರೆಹಗಳ ಎಲ್ಲ ಮುಖಗಳೂ ರಾಷ್ಟ್ರಭಕ್ತಿಯನ್ನು ನೇರವಾಗಿಯೋ ಪರ್ಯಾಯವಾಗಿಯೋ ಬಿಂಬಿಸುತ್ತಿವೆಯೆಂದರೆ ಅತಿಶಯವಲ್ಲ. ಪ್ರಾಯಶಃ ಹಿರಿಯ ಸಾಂಪ್ರದಾಯಿಕ ಪಂಡಿತರ ಪೈಕಿ ಇವರಂಥ ದೇಶಭಕ್ತರೂ ರಾಷ್ಟ್ರಹಿತಚಿಂತಕರೂ ಹೆಚ್ಚಿನವರಿಲ್ಲ. ಅವರು ಸ್ವಾತಂತ್ರ್ಯ ಸಂಗ್ರಾಮದ ಸವಾಲುಗಳನ್ನು ಸಂಕಟಗಳನ್ನೂ ಕಂಡವರು; ಗಾಂಧಿತತ್ವದ ಇತಿ-ಮಿತಿಗಳನ್ನೂ ಗುಣ-ದೋಷಗಳನ್ನೂ ಅರಿತವರು. ಹೀಗಾಗಿ, ಅವರ ರಾಷ್ಟ್ರಕವ್ಯಕ್ತಿತ್ವವು ಮತ್ತಷ್ಟು ಪ್ರಖರವಾಗಿ ಸನಾತನಧರ್ಮದ ಮೌಲ್ಯಗಳ ಪ್ರತಿಪಾದಕವಾಗಿದೆ; ಇಂಥ ತತ್ವಗಳನ್ನು ಅರಿತು ಅನುಷ್ಠಿಸುವವರತ್ತ ಸಹಜವಾಗಿ ಸಹಾನುಭೂತಿಯಿಂದ ಕೂಡಿದೆ. ಇದೇ ಕಾರಣದಿಂದಲೇ ಆರ್ಯ ಸಮಾಜ, ಹಿಂದುಸೇವಾ ಪ್ರತಿಷ್ಠಾನ, ಸಂಸ್ಕೃತ ಭಾರತೀ, ರಾಷ್ಟ್ರೋತ್ಥಾನ ಪರಿಷತ್ತು, ರಾ.ಸ್ವ.ಸಂಘ ಮುಂತಾದ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಗಳು ಭಾರತೀಯ ಮೌಲ್ಯಗಳನ್ನೂ ರಾಷ್ಟ್ರಭಕ್ತಿ ಪ್ರಕಲ್ಪಗಳನ್ನೂ ಉಜ್ಜೀವಿಸುವಂಥ ಕೆಲಸಗಳನ್ನು ಕಯ್ಕೊಂಡಾಗ, ತಮ್ಮ ಪ್ರಾಂಜಲ ಮನಸ್ಸಿನ ಯೋಗದಾನವನ್ನು ನಿರ್ವಂಚನೆಯಿಂದ ಮಾಡುತ್ತಾ ಬಂದಿದ್ದಾರೆ. ರಾಷ್ಟ್ರವು ತುರ್ತು ಪರಿಸ್ಥಿತಿಯ ಕರಾಳ ಬಾಹುಗಳಲ್ಲಿ ಸಿಲುಕಿದ್ದಾಗ, ರಾಷ್ಟ್ರೋತ್ಥಾನ ಪರಿಷತ್ತು ಸರ್ಕಾರದ ಅವಕೃಪೆಗೆ ತುತ್ತಾಗಿ ಅದಕ್ಕೆ ಬೀಗಮುದ್ರೆ ಬಿತ್ತು. ಆಗ ಆ ದುಷ್ಕರ್ಮವನ್ನು ವಿರೋಧಿಸಿದವರಲ್ಲಿ ಮೊತ್ತಮೊದಲಿಗರು ರಂಗನಾಥಶರ್ಮರು. ಅವರು ಆಗಿನ್ನೂ ಸರ್ಕಾರಿ ಉದ್ಯೋಗದಲ್ಲಿದ್ದರು. ತಿಂಗಳ ಸಂಬಳವಲ್ಲದೇ ಮತ್ತಾವುದೇ ಉಪಪತ್ತಿಯಿಲ್ಲ. ದೊಡ್ಡ ಕುಟುಂಬದ ಪೋಷಣೆಯ ಹೊಣೆಯಂತೂ ಇದ್ದೇ ಇತ್ತು. ಇಂತಿದ್ದರೂ ಸಂಭಾವ್ಯ ಪರಿಣಾಮಗಳಿಗೆ ಅಂಜದೆ ಧೀರತೆಯಿಂದ ರಾಷ್ಟ್ರಕತೆಯನ್ನು ಮೆರೆದರು.
ಎಂದಿನಿಂದಲೂ ಶರ್ಮರು ವೃತ್ತಪತ್ರಿಕಾವಾಚನ, ಆಕಾಶವಾಣೀ ವಾರ್ತೆಗಳ ಶ್ರವಣ ಹಾಗೂ ರಾಷ್ಟ್ರಹಿತ ಪ್ರತಿಪಾದಕ ವಿಚಾರಗಳ ಮನನ ಮಾಡುತ್ತಲೇ ಬಂದಿದ್ದಾರೆ. ಈಗ ದೂರದರ್ಶನವೂ ಸೇರಿದೆ.  ಇವೆಲ್ಲ ಇನ್ನೂ ತಪ್ಪಿಲ್ಲ. ಮೊನ್ನೆ ಮೊನ್ನೆ ಗುಜರಾತಿನ ಚುನಾವಣೆಯ ಮತ ಎಣಿಕೆ ಆಗುತ್ತಿದ್ದಾಗ, ತಮ್ಮ ಮನೆಯ ಆಸುಪಾಸಿನಲ್ಲಿ ದಿನವೆಲ್ಲ ವಿದ್ಯುತ್ತಿನ ಕಡಿತವಿದ್ದ ಕಾರಣ ರೇಡಿಯೋ-ದೂರದರ್ಶನ ವಾರ್ತೆಗಳಿಲ್ಲದೇ ಕಸಿವಿಸಿಗೊಂಡಿದ್ದ ಶರ್ಮರು, ಅಂದು ಸಂಜೆ ನಾನವರ ಮನೆಗೆ ಹೋದಾಗ ಮೊದಲು ಕೇಳಿದ್ದು ಮೋದಿಯ ಭವಿಷ್ಯವನ್ನು. ಆನಂತರ ಗುಜರಾತಿನ ಪ್ರಸಕ್ತ ಪರಿಸ್ಥಿತಿ, ಅಭಿವೃದ್ಧಿಶೀಲತೆ ಹಾಗೂ ಅನಿವಾಸಿ ಗುಜರಾತಿ ಜನಗಳ ಯೋಗದಾನ ಇತ್ಯಾದಿ ಸಂಗತಿಗಳನ್ನು ಸಾಕಷ್ಟು ಹೇಳಿ ಚರ್ಚಿಸಿದರು. ನಮ್ಮ ಸಾಂಪ್ರದಾಯಿಕ ಪಂಡಿತರಲ್ಲಿ ನೂರಕ್ಕೆ ತೊಂಬತ್ತೈದರಷ್ಟು ಮಂದಿ ದಿನಪತ್ರಿಕೆಗಳನ್ನು ಓದುವುದಿಲ್ಲ, ಆಕಾಶವಾಣಿ -ದೂರದರ್ಶನಗಳ ವಾರ್ತೆಗಳತ್ತ ಮನಗೊಡುವುದಿಲ್ಲ. ಅವರದೊಂದು ಬಗೆಯ ತಾಮಸ ನಿರ್ಲಕ್ಷ್ಯ. ಕೆಲವರು ಇದಕ್ಕೆ ಸಾತ್ವಿಕ ಉದಾಸೀನತೆಯ ಸೋಗನ್ನೂ ಹಾಕುವುದುಂಟು. ಆದರೆ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ಪ್ರಜೆಯೂ ದೇಶದ ಆಗು-ಹೋಗುಗಳನ್ನು ಗಮನಿಸುತ್ತಿದ್ದು, ತನ್ನ ಮಟ್ಟದಲ್ಲಿ ತನ್ನದೇ ಆದ ಪ್ರಾಮಾಣಿಕ ವಿಮರ್ಶನ ಫಲಿತವಾದ ನಿಲವನ್ನು ತೆಗೆದುಕೊಳ್ಳಬೇಕು ಹಾಗೂ ಅದರಂತೆ ನಡೆದು, ನುಡಿದು, ಸಾರ್ವಜನಿಕ ಜೀವನದಲ್ಲಿ ಮೌಲ್ಯ ಜಾಗರಣವನ್ನು ತರಬೇಕು. ಇದಿಲ್ಲದಿದ್ದರೆ ಪ್ರಜಾಪ್ರಭುತ್ವಕ್ಕಿಂತ ಹೀನವಾದ ವ್ಯವಸ್ಥೆ ಮತ್ತೊಂದಿಲ್ಲ. ಶರ್ಮರು ಈ ತತ್ವಕ್ಕೆ ಬದ್ಧರಾದವರು. ಅಂತೆಯೇ ಯಾವುದೇ ರೀತಿಯ ರಾಜಕೀಯ ವ್ಯಕ್ತಿಗಳ, ರಾಷ್ಟ್ರನಾಯಕರ ವಿಶ್ವಾಸ-ಪರಿಚಯಗಳನ್ನೂ ತಮ್ಮ ಸ್ವಾರ್ಥಕ್ಕೆ ಎಂದೂ ಬಳಸಿಕೊಂಡದ್ದಿಲ್ಲ. ರಾಷ್ಟ್ರಮಟ್ಟದ ಎಷ್ಟೋ ಪ್ರಶಸ್ತಿಗಳಿಗೆ ಆಯಾಚಿತವಾಗಿ ಅವರು ಭಾಜನರಾದವರು; ಇಂತಿದ್ದೂ ಅವುಗಳಿಂದ ವಿಶೇಷವಾದ ಸವಲತ್ತುಗಳನ್ನು ಗಳಿಸಿಲ್ಲ.
-----
ವಿದ್ವಾಂಸರೊಡನೆ ಅಭಿಪ್ರಾಯ ಭೇದಗಳು ಬಂದಾಗ ಖಂಡ-ತುಂಡವಾಗಿ ಶಾಸ್ತ್ರ ವೈಷಯಿಕವಾದ ಚರ್ಚೆಗಳನ್ನು ಮಾಡಿದ್ದರೂ ವ್ಯಕ್ತಿ ಗೌರವಗಳನ್ನಾಗಲಿ, ಪ್ರತಿಪಾದನಕಾಲದ ವಾಜ್ಞಯಮ-ನಯಗಳನ್ನಾಗಲಿ ಶರ್ಮರು ಮರೆತದ್ದಿಲ್ಲ. ಕೆ. ಕೃಷ್ಣಮೂರ್ತಿ, ಸೇಡಿಯಾಪು, ಮುಳಿಯ ತಿಮ್ಮಪ್ಪಯ್ಯರಂಥವರ ಅಭಿಪ್ರಾಯಗಳೊಡನೆ ತೀವ್ರವಾಗಿ ಭಿನ್ನೈಸಿದಾಗಲೂ, ಅವರ ವಿದ್ವತ್ತೆಯ ಮಹತ್ವವನ್ನು ಕಡೆಗಣಿಸಿದವರಲ್ಲ. ಅವರೊಂದಿಗೆ ತುಂಬ ಪ್ರೀತಿ ಗೌರವಗಳಿಂದ ಕಡೆಯವರೆಗೂ ವರ್ತಿಸಿದರು.
ಢಢಢ
ಕೇವಲ ಮಿತ್ರವರ್ಗ, ಬಂಧುವರ್ಗದವರಿಗಷ್ಟೇ ಅಲ್ಲ, ಹಿರಿಯ ವಿದ್ಯಾವಂತರ ಬಗೆಗಷ್ಟೇ ಅಲ್ಲ, ಸರ್ವತ್ರ ಶರ್ಮರ ಶರ್ಮದ-ನರ್ಮದ ಭಾವನದಿಯು ಪ್ರವಹಿಸುತ್ತದೆ. ನಿತ್ಯದ ಸಂಚಾರದ ವೇಳೆ ರಸ್ತೆಯಲ್ಲಿ ಕಂಡ ಆತ್ಮೀಯರಿಗೆಲ್ಲ ಇವರ ಕುಶಲಪ್ರಶ್ನಾವಳಿ-ಹಸನ್ಮುಖ ಶುಭಾಶಂಸೆ ಸಲ್ಲುತ್ತದೆ. ಮನೆಗೆಲಸದವರು, ಬೀದಿ ಕಸ ಗುಡಿಸುವವರು, ಅಂಚೆಯಾಳುಗಳು, ದಿನಸಿಯಂಗಡಿಯವರು, ಜೆರಾಕ್ಸ್ -ಟೈಪ್ ಉದ್ಯೋಗದವರು, ಔಷಧ ಅಂಗಡಿಯವರು- ಹೀಗೆ ಎಲ್ಲ ವರ್ಗದವರನ್ನೂ ತಮ್ಮ ಅನನ್ಯಸ್ನಿಗ್ಧಸ್ಮೇರಸಂಪನ್ನವಾದ ಹೃದಯಂಗಮ ವಾಕ್ಕಿನೊಡನೆ, ಸಮಯೋಚಿತ ನೀತಿ-ತತ್ವಗಳೊಡನೆ ಸಂತೋಷಪಡಿಸುತ್ತಾರೆ. ತಾವೊಬ್ಬ ವಿದ್ವನ್ಮೂರ್ಧನ್ಯರೆಂಬ ಸ್ಮರಣೆಯೂ ಅವರಿಗಾಗ ಉಳಿದಿರುವುದಿಲ್ಲ. ಅವರ ಪಾಂಡಿತ್ಯವು ಅವರಿಗೆಂದೂ ಅಹಂಕಾರದ ವಿಸ್ತರಣವಲ್ಲ, ಆನಂದದ ಅಸ್ತರಣ, ಆತ್ಮೀಯತೆಯ ಸಂತರಣ.
----
ಶರ್ಮರು, ಅವರದೇ ಮಾತಿನಲ್ಲಿ ಹೇಳುವುದಾದರೆ 'ಹತ್ತರಲ್ಲಿ ಹನ್ನೊಂದೆಂಬಂತೆ  ಮತ್ತೂ ಒಬ್ಬ ಹಳೆಯ ಪಂಡಿತನಾಗಿ' ಕಳೆದು ಹೋಗಿ ಬಿಡುತ್ತಿದ್ದರು. ಅಂಥ ವಿಪತ್ತು ತಪ್ಪಿ ಶ್ರೀಯುತರು ಕನ್ನಡಕ್ಕೂ ಕನ್ನಡ ಜನತೆಗೂ ದಕ್ಕಿದ್ದು ಡಿ.ವಿ.ಜಿ.ಯವರಿಂದ. ದಿಟವೇ, ಡಿ.ವಿ.ಜಿ.ಯವರ ಪ್ರಭಾವ-ಸ್ನೇಹಾದರಗಳ ಸವಿ ರಂಗನಾಥ ಶರ್ಮರಲ್ಲಿ ಫಲಿಸದಿದ್ದ ಪಕ್ಷದಲ್ಲಿ ಅವರ ಸಂಸ್ಕೃತ ವ್ಯಾಕರಣಾಲಂಕಾರ ವೇದಾಂತ ಶಾಸ್ತ್ರ ಪಾಂಡಿತ್ಯಕ್ಕೆ ಯಾವ 'ಕೊರೆತೆಯೂ' ಆಗುತ್ತಿರಲಿಲ್ಲ. ಇಂದೂ ಸಹ ಡಿ.ವಿ.ಜಿ.ಯಂಥವರ ಪ್ರಭಾವ ವಲಯದೊಳಗೆ ಬಾರದ ಸಾಂಪ್ರದಾಯಿಕ ಪಂಡಿತರಿಲ್ಲವೇ? ಅವರ ಶಾಸ್ತ್ರ ವೈದುಷ್ಯಕ್ಕಾಗಲಿ, ಇಂಥ ವಿದ್ವತ್ತೆಗಾಗಿ ಮಠ-ಮಂದಿರಗಳೂ ರಾಜ್ಯ-ಕೇಂದ್ರ ಸರ್ಕಾರಗಳೂ ಸಲ್ಲಿಸುವ ಸತ್ಕಾರ-ಗೌರವಗಳಿಗಾಗಲಿ ಯಾವುದೇ ಕುಂದು ಕೊರತೆ ಬಂದಿಲ್ಲವಷ್ಟೆ! ಆಯಾ ಮತೀಯರ ಅಥವಾ ಲೋಕಸಾಮಾನ್ಯ ಶ್ರದ್ಧಾಳುಗಳ ವರ್ಗವು ಅಂಥ ಪಂಡಿತರ ಪ್ರವಚನೋಪನ್ಯಾಸಗಳಿಗೆ ಬಂದು ಕೊಂಡಾಡಿ ಕಾಣಿಕೆ ಸಲ್ಲಿಸುವ ಕೋಲಾಹಲವೂ ಸೊರಗಿಯೂ ಇಲ್ಲವಷ್ಟೇ. ನಿಜ, ಕೆಲವರು ಪಾಪ, ಅನಾಮಧೇಯರಾಗಿ, ಮೂಲೆಗುಂಪಾಗಿ ಮೆರೆವೆಗೆ ಸಲ್ಲುತ್ತಾರೆ. ಆದರೂ ಗಾತ್ರಾತ್ಮಕವಾದ ನಷ್ಟವೇನೂ ಹೆಚ್ಚಾಗಿ ಕಾಣಿಸದೆಂದರೆ ಒಪ್ಪಬಹುದು. ಹೀಗಿರಲು ಡಿ.ವಿ. ಗುಂಡಪ್ಪನವರ ಪರಿಚಯ-ಪ್ರಭಾವಗಳು ಶ್ರೀ ರಂಗನಾಥಶರ್ಮರಲ್ಲಿ ಹೇಗೆ ಪರಿಣಮಿಸಿತೆಂಬ ಪ್ರಶ್ನೆ ಬರಬಹುದು.
ಇದು ಸಂಪೂರ್ಣವಾಗಿ ನಿರ್ವಚಿಸಲಾಗದ, ಕೇವಲ ಸಂವೇದ್ಯವಾದ ಸಂಗತಿ. ಆದರೂ ಕಥಂಚಿತ್ ಹೇಳುವುದಾದರೆ ಶರ್ಮರ ಪಾಂಡಿತ್ಯ-ವೈದುಷ್ಯಗಳಿಗೆ ಪರಿಪಾಕ ಬಂದದ್ದು, ವೈಶಾಲ್ಯ ಸಂದದ್ದು, ಹತ್ತಾರು ಪಾರ್ಶ್ವಗಳಿಂದ ಗಮನಿಸಿ ಪರಿಶೀಲಿಸಬಲ್ಲ ಒಳನೋಟದ ಬೆಳಕು ಬಂದದ್ದು, ವ್ಯಾಪಕ ಲೋಕಾನುಭವಕ್ಕೂ ವಿವಿಧಾಧ್ಯಯನ ಕ್ಷೇತ್ರಗಳ ಮತ್ತು ಅವುಗಳ ವಿದ್ವಾಂಸರ ರೀತಿ-ನೀತಿಗಳಿಗೂ ಹೊಳಹು ಸಂದದ್ದು ಡಿ.ವಿ.ಜಿ.ಯವರಿಂದ. ಒಂದು ಮಾತಿನಲ್ಲಿ ಸಂಗ್ರಹಿಸಬಹುದಾದರೆ, ಗುಂಡಪ್ಪನವರೆಂಬ ಗವಾಕ್ಷದ ಮೂಲಕ ಶರ್ಮರಿಗೆ ಹೊಸತಾದ ವಿಶ್ವವೇ ಕಂಡಿತೆನ್ನಬೇಕು. ಜೊತೆಗೆ ಡಿ.ವಿ.ಜಿ.ಯವರ ವ್ಯಕ್ತಿತ್ವ-ವಿದ್ವತ್ತು, ಸಹೃದಯತೆ-ಸ್ವಾರಸ್ಮ, ಎತ್ತರ -ಬಿತ್ತರ ಹಾಗೂ ಔದಾರ್ಯ-ದಾರ್ಶನಿಕತೆಗಳು ಶ್ರೀಯುತರ ಮೇಲೆ ಮಾಸಲಾಗದಂಥ ಪರಿಣಾಮವನ್ನು ಬೀರಿದವು. ಇದು ಅವರ ಇಡಿಯ ಜೀವಮಾನವೆಲ್ಲ ಆವರಿಸಿ, ಅತ್ಯತಷ್ಠದ್ದಶಾಂಗುಲಂ ಎಂಬಂಥ ಸಂಸ್ಕಾರವಾಯಿತು.

- ಶತಾವಧಾನಿ ಡಾ. ಆರ್ ಗಣೇಶ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.