ದಡಕ್ಕೊಲಿದ ಧೈರ್ಯ ವಿಕ್ರಮಾದಿತ್ಯ

ಅಮೆರಿಕ, ಚೀನಾ ಹಾಗೂ ಪಾಕಿಸ್ತಾನಗಳ ಸಂಭವನೀಯ ದಾಳಿ, ಅರಬ್ಬಿ ಸಮುದ್ರದಿಂದ ಬಂದೆರಗುವ ಭಯೋತ್ಪಾದಕರು, ಅರಬ್ಬಿಯಲ್ಲಿ ಉಂಟಾಗುತ್ತಿರುವ ಕಡಲ್ಗಳ್ಳರ ಉಪಟಳ ಮತ್ತಿತರ ಆತಂಕವನ್ನು ಸಮರ್ಥವಾಗಿ ಎದುರಿಸಲು ಐಎನ್ಎಸ್ ವಿಕ್ರಮಾದಿತ್ಯ ದೇಶದ ನೌಕಾಪಡೆಗೆ ಸೇರ್ಪಡೆಯಾಗಿದೆ. ಅರಬ್ಬಿ ಸಮುದ್ರದಲ್ಲಿ ಉಂಟಾಗಿದ್ದ ಆತಂಕದ ಅಲೆಗಳನ್ನು ನಿವಾರಿಸಲು ವಿಕ್ರಮಾದಿತ್ಯ ಬಹು ದೊಡ್ಡ ಕೊಡುಗೆ ನೀಡಲಿದೆ.
ಐಎನ್ಎಸ್ ವಿಕ್ರಮಾದಿತ್ಯ ಸೇರ್ಪಡೆಯಿಂದ ಕಾರವಾರ ಸಮೀಪದ ಸೀಬರ್ಡ್ ನೌಕಾನೆಲೆ ಈಗ ಅರಬ್ಬಿ ಸಮುದ್ರದ ರಕ್ಷಣೆಯ ಹೊಣೆ ಹೊತ್ತಿದೆ. ದೇಶದ ಅತಿದೊಡ್ಡ ವಿಮಾನ ವಾಹಕ ಯುದ್ಧನೌಕೆ ವಿಕ್ರಮಾದಿತ್ಯ ಅರಬ್ಬಿ ಸಮುದ್ರಕ್ಕೆ ಭದ್ರತೆಯ ಬೇಲಿ ಹಾಕಲಿದೆ. ವೈರಿ ರಾಷ್ಟ್ರಗಳ ಕ್ಷಿಪಣಿ ದಾಳಿಗೆ ಸಿಲುಕದೆ ಸುರಕ್ಷಿತ ಪ್ರದೇಶದಲ್ಲಿದ್ದು ಇತರ ರಾಷ್ಟ್ರಗಳ ದಾಳಿ, ಭಯೋತ್ಪಾದನೆ, ಕಡಲ್ಗಳ್ಳರ ಹಾವಳಿಯನ್ನು ಮಟ್ಟ ಹಾಕಲು ವಿಕ್ರಮಾದಿತ್ಯ ಕಾರ್ಯಾಚರಣೆ ನಡೆಸಲಿದೆ.
ಅರಬ್ಬಿ ಸಮುದ್ರದ ಬಿಗೆಸಿಯೋ ಗಾರ್ಸಿಯಾ ಎಂಬ ದ್ವೀಪ ಅಮೆರಿಕಕ್ಕೆ ಸೇರಿದ್ದಾಗಿದ್ದು ಅಮೆರಿಕ ಇಲ್ಲಿ ನೌಕಾನೆಲೆ ಸ್ಥಾಪಿಸಿದೆ. ಅಫ್ಘಾನಿಸ್ತಾನದೊಂದಿಗಿನ ಯುದ್ಧದಲ್ಲೂ ಈ ನೌಕಾನೆಲೆಯನ್ನೇ ಅಮೆರಿಕ ಬಳಸಿಕೊಂಡಿದೆ. ಅಮೆರಿಕವೇನೂ ನಮ್ಮ ಶತ್ರುರಾಷ್ಟ್ರಗಳ ಸಾಲಿನಲ್ಲಿ ಇರದಿದ್ದರೂ ಅದು ಯಾರ ಮಿತ್ರನೂ ಅಲ್ಲ ಎಂಬುದು ಜಗತ್ತಿಗೇ ಗೊತ್ತಿರುವ ಸಂಗತಿ. ಇದರಿಂದ ಭಾರತಕ್ಕೂ ಅಪಾಯ ಇದ್ದೇ ಇದೆ. ಪಾಕಿಸ್ತಾನದ ಬಂದರನ್ನು ಚೀನಾ ಅಭಿವೃದ್ಧಿಗೊಳಿಸುತ್ತಿದೆ. ಚೀನಾ ದೇಶದ ಯುದ್ಧನೌಕೆಗಳು ಅಲ್ಲಿ ಓಡಾಡುತ್ತಿವೆ. ಭಾರತದ ದೇಶದ ಮೇಲೆ ಈ ಯುದ್ಧ ನೌಕೆಗಳು ಒಂದು ಕಣ್ಣನ್ನು ನೆಟ್ಟಿರುವುದನ್ನು ಅಲ್ಲಗಳೆಯುವಂತಿಲ್ಲ. ಮಾಲ್ಡೀವ್ಸ್ನಲ್ಲಿ ವಿವಿಧ ಕಾಮಗಾರಿಗಳ ಗುತ್ತಿಗೆಯನ್ನು ಚೀನಾ ನಿರ್ವಹಣೆ ಮಾಡುತ್ತಿದೆ. ಇದು ಅರಬ್ಬಿ ಸಮುದ್ರದಲ್ಲಿ ಇನ್ನಷ್ಟು ಆತಂಕದ ಅಲೆ ಎಬ್ಬಿಸಲು ಕಾರಣವಾಗಿದೆ.
ಒಂದೆಡೆ ಚೀನಾ, ಪಾಕಿಸ್ತಾನ ನಡುವೆ ಸೌಹಾರ್ದಯುತ ಸಂಬಂಧ ಇದೆ. ಪಾಕಿಸ್ತಾನ ಹಾಗೂ ಅಮೆರಿಕ ನಡುವೆ ಉತ್ತಮ ಸಂಬಂಧ ಇದೆ. ಚೀನಾ ಹಾಗೂ ಭಾರತ ಅಮೆರಿಕಕ್ಕೆ ಸಾಕಷ್ಟು ದೂರ ಇದ್ದರೂ ಚೀನಾ ಹಾಗೂ ಭಾರತದ ನಡುವೆ ಉತ್ತಮ ಸಂಬಂಧವೇನೂ ಇಲ್ಲ. ಹೀಗಾಗಿ ಭಾರತದ ಮೇಲೆ ಯಾರು ಯಾವಾಗ ಎರಗಲಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ.
ಇನ್ನು ಮುಂಬಯಿ ದಾಳಿ ತರುವಾಯ ಅರಬ್ಬಿ ಸಮುದ್ರ ಇನ್ನಷ್ಟು ಸೂಕ್ಷ್ಮವಾಗಿದೆ. ಭಯೋತ್ಪಾದನಾ ದಾಳಿ ನಡೆದಾಗಲೆಲ್ಲ ಕಾರವಾರ ಸಮೀಪದ ಕೈಗಾ ಅಣು ಸ್ಥಾವರ ಸುದ್ದಿಯಾಗಿ ಕಳವಳ ಹುಟ್ಟಿಸುತ್ತದೆ. ಅರಬ್ಬಿಯಲ್ಲಿ ನೌಕಾಪಡೆ, ಕರಾವಳಿ ಕಾವಲು ಪಡೆ, ಕರಾವಳಿ ಕಾವಲು ಪೊಲೀಸ್ ಪಡೆ ಎಷ್ಟೇ ಗಸ್ತು ನಡೆಸಿದರೂ ಸಂಭವನೀಯ ದಾಳಿ ತಡೆಯುವಲ್ಲಿ ಸರ್ವಶಕ್ತವಾಗಿರಲಿಲ್ಲ.
ಪಾಕಿಸ್ತಾನ ಹಾಗೂ ಚೀನಾ ದೇಶಗಳೊಂದಿಗೆ ಆಗಾಗ ಬಿಗುವಿನ ವಾತಾವರಣ ಉಂಟಾಗುತ್ತಿದೆ. ಸೋಮಾಲಿಯಾದ ಕಡಲ್ಗಳ್ಳರ ಹಾವಳಿ ಅರಬ್ಬಿ ಸಮುದ್ರಕ್ಕೂ ಕಾಲಿಟ್ಟಿದೆ. ಡಿಸೆಂಬರ್ 2009ರಲ್ಲಿ ಕುವೈತ್ನಿಂದ ವಿಶಾಖಪಟ್ಟಣಕ್ಕೆ ಬರುತ್ತಿದ್ದ ತೈಲ ಹಡಗಿನ ಮೇಲೆ ಕಡಲ್ಗಳ್ಳರು ದಾಳಿ ನಡೆಸಿದ್ದರು. ಪ್ರಮುಖವಾಗಿ ಪಾಕಿಸ್ತಾನಕ್ಕೆ ಭಾರತಕ್ಕಿರುವ ರಹದಾರಿ ಅರಬ್ಬಿ ಸಮುದ್ರವೇ ಆಗಿದೆ. ಹೀಗಾಗಿ ಅರಬ್ಬಿ ಸಮುದ್ರದಲ್ಲಿ ಭದ್ರತೆಗೆ ಎದುರಾಗುವ ಸವಾಲನ್ನು ಎದುರಿಸಲು ಭಾರತ ಸಜ್ಜಾಗಿರಲೇಬೇಕಾದದ್ದು ಅನಿವಾರ್ಯವಾಗಿದೆ. ಇದೆ ಕಾರಣಕ್ಕಾಗಿ ಭಾರತ ಐಎನ್ಎಸ್ ವಿಕ್ರಮಾದಿತ್ಯದ ಮೊರೆ ಹೋಗಿದ್ದು. ವಿಕ್ರಮಾದಿತ್ಯ ಈಗ ಎಲ್ಲ ವಿಧದ ಆತಂಕಕ್ಕೂ ಪರಿಹಾರ ಒದಗಿಸಲಿದೆ.
1971ರಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧ ನಡೆದಾಗ ಭಾರತ ಅರಬ್ಬಿ ಸಮುದ್ರದ ತೀರ ಪ್ರದೇಶದಲ್ಲಿ ಭದ್ರತಾ ಸಂಬಂಧಿ ಸಮಸ್ಯೆಯನ್ನು ತೀವ್ರವಾಗಿ ಎದುರಿಸಿತು. ಅಲ್ಲಿ ನೌಕಾಪಡೆಗಾಗಿಯೇ ಪ್ರತ್ಯೇಕ ಬಂದರು ಇರಲಿಲ್ಲ. ಅದೆ ಬಂದರಿನಲ್ಲಿ ವಾಣಿಜ್ಯ ಹಡಗುಗಳು, ಮೀನುಗಾರಿಕೆ ಬೋಟುಗಳು, ಪ್ರವಾಸಿ ಬೋಟುಗಳು ತುಂಬಿರುವುದರಿಂದ ಭದ್ರತೆಗೆ ಭಾರಿ ಸಮಸ್ಯೆ ಉಂಟಾಗಿತ್ತು. ಆಗ ರೂಪುಗೊಂಡಿದ್ದು ಕಾರವಾರ ಬಳಿ ನೌಕಾನೆಲೆ ಸ್ಥಾಪಿಸುವ ಯೋಜನೆ. ಪಾಕಿಸ್ತಾನ ಹಾಗೂ ಚೀನಾ ದೇಶಗಳ ಕ್ಷಿಪಣಿ ದಾಳಿಗೆ ನಿಲುಕದ ಸುರಕ್ಷಿತ ಪ್ರದೇಶ ಕಾರವಾರ. ಇಲ್ಲಿ ನೌಕಾನೆಲೆ ಸ್ಥಾಪಿಸಿ ಅರಬ್ಬಿ ಸಮುದ್ರದ ಮೂಲಕ ಉಂಟಾಗುವ ಸಂಭವನೀಯ ದಾಳಿಯನ್ನು ತಡೆಗಟ್ಟಲು ನೌಕಾನೆಲೆ ತಲೆ ಎತ್ತಿತು. ಎಲ್ಲ ದಾಳಿಯನ್ನು ಸಮರ್ಥವಾಗಿ ತಡೆದು, ಪ್ರತ್ಯುತ್ತರ ನೀಡಬಲ್ಲ ಐಎನ್ಎಸ್ ವಿಕ್ರಮಾದಿತ್ಯವನ್ನೂ ಇಲ್ಲೇ ನೆಲೆಗೊಳಿಸಲು ತೀರ್ಮಾನಿಸಲಾಯಿತು.
1,491,130 ಚದರ ಕೀ.ಮೀ. ವಿಸ್ತೀರ್ಣ ಹೊಂದಿರುವ ವಿಶಾಲವಾದ ಅರಬ್ಬಿ ಸಮುದ್ರದಲ್ಲಿ ಭದ್ರತೆಯ ಉಸ್ತುವಾರಿ ನೋಡಿಕೊಳ್ಳುವುದು ತುಂಬ ಕಷ್ಟದ ಕೆಲಸ. ಐಎನ್ಎಸ್ ವಿಕ್ರಮಾದಿತ್ಯ ಜಲ ಹಾಗೂ ವಾಯು ಮಾರ್ಗದ ದಾಳಿಯನ್ನು ತಡೆಯಲು ಸಮರ್ಥವಾಗಿದೆ. ಏಕೆಂದರೆ ಈ ಯುದ್ಧ ನೌಕೆಯಲ್ಲಿ 20 ಯುದ್ಧ ವಿಮಾನಗಳು, 10 ವಿವಿಧ ಬಗೆಯ ಹ್ಯಾಲಿಕಾಪ್ಟರ್ಗಳ ನಿಲುಗಡೆಗೆ ವ್ಯವಸ್ಥೆ ಇದೆ. ಯುದ್ಧ ನೌಕೆಯಲ್ಲಿ ಕ್ಷಿಪಣಿಗಳು, ಬಾಂಬ್ಗಳು ಮತ್ತಿತರ ಅತ್ಯಾಧುನಿಕ ಶಸ್ತ್ರಾಸ್ತ್ರಗಳೂ ಇರಲಿವೆ. ಇದರಿಂದ ಅರಬ್ಬಿ ಸಮುದ್ರ ತೀರದ ಜನಜೀವನದ ನೆಮ್ಮದಿಗೆ ವಿಕ್ರಮಾದಿತ್ಯ ಕಾರಣ ವಾಗಲಿದೆ.
ಬೃಹತ್ ಹಡಗು ವಿಕ್ರಮಾದಿತ್ಯದಲ್ಲಿ ಏರ್ಪೋರ್ಟ್ ಇರುವುದರಿಂದ ಅದು ಯುದ್ಧ ಭೂಮಿಯನ್ನೇ ಶತ್ರುವಿದ್ದಲ್ಲಿ ಕೊಂಡೊಯ್ಯುತ್ತದೆ. ಶತ್ರು ದೇಶದ ಸಮೀಪ ದೇಶವನ್ನೇ ಕೊಂಡೊಯ್ದಂತೆ ಆಗಲಿದೆ. ಪಾಕಿಸ್ತಾನದ ಜೊತೆ ಹೋರಾಡಬೇಕಾದಲ್ಲಿ ಪಾಕಿಸ್ತಾನದ ಸಮೀಪಕ್ಕೆ ಹೋಗಿ ದಾಳಿ ನಡೆಸಬಹುದಾಗಿದೆ. 1,40,000 ಅಶ್ವಶಕ್ತಿ ಸಾಮರ್ಥ್ಯದ ವಿಕ್ರಮಾದಿತ್ಯ ಗಂಟೆಗೆ 54.3 ಕಿ.ಮೀ.ವೇಗದಲ್ಲಿ ಸಂಚರಿಸಲಿದೆ. ನಿರಂತರವಾಗಿ 25 ಸಾವಿರ ಕಿ.ಮೀ.ಚಲಿಸುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಅರಬ್ಬಿ ಸಮುದ್ರದಿಂದ ಎದುರಾಗುವ ಯಾವುದೆ ವಿಪತ್ತನ್ನೂ ಇದು ಎದುರಿಸುವ ಸಾಮರ್ಥ್ಯ ಇದಕ್ಕಿದೆ. ಹೀಗಾಗಿ ವಿಕ್ರಮಾದಿತ್ಯ ಕಾರವಾರದಲ್ಲಿ ನೆಲೆಯಾಗಲಿರುವುದು ನೆಮ್ಮದಿಯ ಸಂಗತಿಯಾಗಿದೆ.
ಕಳೆದ ಡಿಸೆಂಬರ್ 7ರಂದು ವಿಕ್ರಮಾದಿತ್ಯ ಕಾರವಾರ ನೌಕಾನೆಲೆಗೆ ಬಂದು ಲಂಗರು ಹಾಕಿದಾಗ ಇಡಿ ಜಗತ್ತು ಭಾರತದತ್ತ ಹೊರಳಿತು. ನಿರ್ಮಾಣ ಕಾಮಗಾರಿ ಪೂರ್ಣವಾದಾಗ ಏಷ್ಯಾದಲ್ಲೇ ಅತಿದೊಡ್ಡದಾದ ನೌಕಾನೆಲೆಯಾಗಿ ಸೀಬರ್ಡ್ ನೌಕಾನೆಲೆ ಹೊರಹೊಮ್ಮಲಿದೆ.
ಈ ನೌಕಾನೆಲೆಯಲ್ಲಿ ಯುದ್ಧ ಹಡಗುಗಳನ್ನು ಭೂಮಿಯ ಮೇಲಕ್ಕೆ ತಂದು ದುರಸ್ತಿ ಮಾಡುವ ತಂತ್ರಜ್ಞಾನವನ್ನು 150 ಕೋಟಿ ರು.ವೆಚ್ಚದಲ್ಲಿ ಅಳವಡಿಸಲಾಗಿದೆ. ಈಗ ಐಎನ್ಎಸ್ ವಿಕ್ರಮಾದಿತ್ಯ ಸೇರ್ಪಡೆಯಿಂದ ನೌಕಾನೆಲೆ ಹಾಗೂ ದೇಶದ ರಕ್ಷಣೆ ಇನ್ನಷ್ಟು ಬಲಯುತವಾದಂತಾಗಿದೆ.
ವಸಂತಕುಮಾರ್ ಕತಗಾಲ
ಕನ್ನಡಪ್ರಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


