ಅಂಕಣಗಳು

30 ದಿನದಲ್ಲಿ ಮೋದಿ ಸರ್ಕಾರ ಮಾಡಿದ್ದೇನು?

30 ದಿನದಲ್ಲಿ ಮೋದಿ ಸರ್ಕಾರ ಮಾಡಿದ್ದೇನು?
Published On :

ಸಮಸ್ಯೆಗಳ ಅಗಾಧ ಸಾಗರ, ಆಸೆ-ಆಕಾಂಕ್ಷೆಗಳ ಉತ್ತುಂಗ ಹಿಮಾಲಯ!
ನರೇಂದ್ರ ಮೋದಿಯವರು ಪುಟಿನ್ ಮತ್ತು ತಂಗ್ಶ್ಯಾವೋ ಫಂಗ್ ಅವರಂತೆ ಸ್ಪಷ್ಟ ಮತ್ತು ಸಮೃದ್ಧಿ ತರುವಂಥ ನೀತಿಗಳನ್ನು ಹೊತ್ತು ಸಾಗಲಿ ಎಂದು ಇಡೀ ದೇಶ ಆಪೇಕ್ಷಿಸುತ್ತಿದೆ. ಯಾವ ವ್ಯಕ್ತಿ ಮೂರು ಲಕ್ಷ ಕಿಲೋಮೀಟರ್ ಯಾತ್ರೆ ನಡೆಸಿ, ನಾಲ್ಕುನೂರು ಸಭೆಗಳಲ್ಲಿ ಮಾತನಾಡಿದನೋ...ಯಾವ ವ್ಯಕ್ತಿಗೆ ನೂರಿಪ್ಪತ್ತು ಕೋಟಿ ಭಾರತೀಯರು ಆತ್ಮಸಂಗಾತಿಯಾಗಿದ್ದಾರೋ, ಆತ ಕಷ್ಟಗಳ ಬೆಟ್ಟವನ್ನು ಸುಲಭವಾಗಿ ಪಾರು ಮಾಡಬಲ್ಲ ಎನ್ನುವ ವಿಶ್ವಾಸ ಈ ಸರ್ಕಾರದ 30 ದಿನಗಳ ಕೆಲಸವನ್ನು ನೋಡಿದಾಗ ಖಚಿತವಾಗುತ್ತದೆ.
ಮೌನವಾಗಿ ಮಲಗಿದ್ದ ವಿದೇಶಾಂಗ ನೀತಿಯನ್ನು ಬಡಿದೆಬ್ಬಿಸಿ, ನೆರೆ ರಾಷ್ಟ್ರಗಳೊಂದಿಗೆ ಕೈಜೋಡಿಸುವ ಕಾರ್ಯಕ್ಕೆ ಮುಂದಾದದ್ದು ಈ ಕಠಿಣ ಹಾದಿಯಲ್ಲಿನ ಮೊದಲನೆಯ ಹೆಜ್ಜೆ. ಮಾರಿಷಸ್ ಸೇರಿದಂತೆ ನೆರೆ ರಾಷ್ಟ್ರಗಳೊಂದಿಗಿನ ಶಿಖರ ಸಹಭಾಗಿತ್ವದಿಂದಾಗಿ ಭಾರತದ ಭೌಗೋಳಿಕ ರಾಜಕೀಯ ಕ್ಷೇತ್ರದಲ್ಲಿ ನೆಮ್ಮದಿ ಮತ್ತು ಭರವಸೆಯ ಸಂಚಾರವಾಗಿದೆ. ಸಾರ್ಕ್ ದೇಶಗಳ ಅರ್ಥವ್ಯವಸ್ಥೆ ಯುದ್ಧರಹಿತ ಶಾಂತಿಯ ಸ್ಥಿತಿಯಲ್ಲಿ ಏಷಿಯನ್ ಮತ್ತು ಬ್ರಿಕ್ಸ್ನ ಅರ್ಥವ್ಯವಸ್ಥೆಗಳಿಗೆ ಪೈಪೋಟಿಯೊಡ್ಡಬಲ್ಲದು. ಆದರೆ ಅವಕ್ಕೆ ಸಶಕ್ತ ನೇತೃತ್ವದ ಅಗತ್ಯವಿದೆ.
ನಂತರದ ದಿನಗಳಲ್ಲಿ ಮೋದಿ ತಮ್ಮ ವಿದೇಶ ಯಾತ್ರೆಯನ್ನು ಭೂತಾನ್ ಎಂಬ ಚಿಕ್ಕ ರಾಷ್ಟ್ರದಿಂದ ಶುರುಮಾಡಿ, ದೊಡ್ಡ ದೊಡ್ಡ ವಿದೇಶಾಂಗ ನೀತಿ ಪಂಡಿತರನ್ನೂ ದಂಗು ಬಡಿಸಿದರು. ಈಗವರು ಸೆಪ್ಟೆಂಬರ್ ತಿಂಗಳಲ್ಲಿ ಅಮೆರಿಕ ಅಧ್ಯಕ್ಷ ಒಬಾಮಾ ಅವರನ್ನು ಭೇಟಿಯಾಗಲಿದ್ದಾರೆ. ಆದರೆ ಅಷ್ಟರಲ್ಲಾಗಲೇ ಜಪಾನ್ ಪ್ರಧಾನಿ ಶಿಂಜೋ ಅಬೆ, ರಷ್ಯಾ ಅಧ್ಯಕ್ಷ ವ್ಲಾದಿಮೀರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಶೀ ಜಿನ್ ಪಿಂಗ್ರೊಂದಿಗೂ ಮಾತಕತೆಯಾಗಿರುತ್ತದೆ.
ಸರ್ಕಾರ ರಚನೆಯಾಗುತ್ತಿದ್ದಂತೆಯೇ ಮೋದಿಯವರು ಕಪ್ಪು ಹಣವನ್ನು ವಾಪಸ್ ತರುವುದಕ್ಕಾಗಿ ವಿಶೇಷ ತನಿಖಾ ದಳವನ್ನು ರಚಿಸಿ, ಈ ಹಿಂದೆ 67 ವರ್ಷಗಳು ಯಾವ ಸರ್ಕಾರವೂ ಮಾಡದ ಕೆಲಸವನ್ನು ಮಾಡಿದರು. ಇದಕ್ಕೆ ತ್ವರಿತವಾಗಿ ಸ್ವಿಜರ್ಲೆಂಡ್ನ ಸರ್ಕಾರವೂ ಸ್ಪಂದಿಸಿತು. ಕಪ್ಪುಹಣವನ್ನು ಅಲ್ಲಿ ಜಮೆ ಮಾಡಿರುವ ಭಾರತೀಯರ ಪಟ್ಟಿ ಆದಷ್ಟು ಬೇಗ ಭಾರತ ಸರ್ಕಾರಕ್ಕೆ ದೊರಕಲಿದೆ.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬಾಂಗ್ಲಾದೇಶದ ಮಹತ್ವಪೂರ್ಣ ಯಾತ್ರೆಗೂ ಮುನ್ನ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಭೇಟಿಯಾಗಿ ಯಾತ್ರೆಯ ಬಗ್ಗೆ ಅವರೊಂದಿಗೆ ಚರ್ಚೆ ನಡೆಸಿದರು. ಈ ರೀತಿ ಹಿಂದೆ ಯಾವ ವಿದೇಶಾಂಗ ಸಚಿವರೂ ಈ ರೀತಿ ಯೋಚಿಸಿರಲೇ ಇಲ್ಲ.
ಇನ್ನು ರಕ್ಷಣಾ ಕ್ಷೇತ್ರದ ವಿಷಯಕ್ಕೆ ಬಂದರೆ, ಅರುಣ್ ಜೇಟ್ಲಿಯವರು ಸೇನಾಧ್ಯಕ್ಷ ಹುದ್ದೆಗೆ ಜನರಲ್ ದಲ್ಜಿತ್ ಸಿಂಹ ಸುಹಾಗ್ ಅವರ ನಿಯುಕ್ತಿಯ ಪತ್ರಕ್ಕೆ ತಕ್ಷಣವೇ ಮೊಹರು ಒತ್ತಿ ಪರಿಪಕ್ವತೆಯ ಪರಿಚಯ ಮಾಡಿಕೊಟ್ಟರು. ಅದಾದ ಕೂಡಲೇ ಅವರು ಪಶ್ಚಿಮ ನೌಕಾಪಡೆಯನ್ನೂ, ನರೇಂದ್ರ ಮೋದಿಯವರು ವಿಕ್ರಮಾದಿತ್ಯ ಯುದ್ಧನೌಕೆಯನ್ನೂ ಪರಿಶೀಲನೆ ಮಾಡಿದರು. ಇಷ್ಟೇ ಅಲ್ಲದೆ ಅರುಣ್ ಜೇಟ್ಲಿಯವರ ಜಮ್ಮು ಕಾಶ್ಮೀರ ಭೇಟಿಯೂ ರಕ್ಷಣಾ ಕ್ಷೇತ್ರಕ್ಕೆ ಸಿಗಲಿರುವ ಪ್ರೋತ್ಸಾಹಕ್ಕೆ ಪ್ರಮಾಣವಾಗಿ ನಿಲ್ಲುತ್ತದೆ. ಗೃಹ ಮಂತ್ರಿ ರಾಜನಾಥ್ ಸಿಂಗ್ ಅವರು ನಕ್ಸಲ್ ಸಮಸ್ಯೆಯನ್ನು ನಿವಾರಿಸಲು ಏಕೀಕೃತ ಕಮಾಂಡ್ನ ನಿರ್ಣಯ ತೆಗೆದುಕೊಂಡು ಮತ್ತು ಕಾಶ್ಮೀರ ಹಿಂದುಗಳ ಆತ್ಮಾಭಿಮಾನವನ್ನು ಎತ್ತಿಹಿಡಿಯುವ ಹೆಜ್ಜೆಯಿಟ್ಟು ತಮ್ಮ ನಿರ್ಣಾಯಕ ಕ್ಷಮತೆಯನ್ನು ತೋರಿಸಿಕೊಟ್ಟರು. ಇನ್ನೊಂದೆಡೆ ನಿತಿನ್ ಗಡ್ಕರಿ, ಪೀಯೂಶ್ ಗೋಯಲ್, ಉಮಾ ಭಾರತಿ, ನಿರ್ಮಲಾ ಸೀತಾರಾಮನ್, ಸ್ಮೃತಿ ಮತ್ತು ಪ್ರಕಾಶ್ ಜಾವಡೇಕರ್ ತಮ್ಮ ವಿಶಿಷ್ಟ ಹೆಜ್ಜೆಯ ಮೂಲಕ ಮೊದಲ ಹಂತದಲ್ಲೇ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ನದಿ ಮಾರ್ಗಗಳ ಪುನರುಜ್ಜೀವನ, ಗಂಗಾ ಶುದ್ಧೀಕರಣದ ವಿಷಯವೇ ಆಗಿರಲಿ ಅಥವಾ ಕಾರ್ಪೋರೇಟ್ ಮತ್ತು ಇಂಧನ ವಲಯದಲ್ಲಿ ಹೊಸ ಉತ್ಸಾಹ ತುಂಬುವಲ್ಲೇ ಆಗಿರಲಿ ಮೊದಲ ತಿಂಗಳಲ್ಲೇ ನೂತನ ಸರ್ಕಾರದಿಂದ ಗಮನಾರ್ಹ ಪ್ರಯತ್ನಗಳಾಗಿವೆ. ಇಷ್ಟೇ ಅಲ್ಲ, ಸುಮಿತ್ರಾ ಮಹಾಜನ್ರಂಥ ಹಿರಿಮೆಯ ವ್ಯಕ್ತಿಯನ್ನು ಲೋಕಸಭೆಯ ಅಧ್ಯಕ್ಷ ಸ್ಥಾನದಲ್ಲಿ ತಂದು ಕೂಡಿಸಿದ್ದು ಕಡಿಮೆ ಮಾತಾಯಿತೇ? ಇವೆಲ್ಲ ನಡೆದದ್ದು ಇದೇ ಮೂವತ್ತು ದಿನಗಳಲ್ಲೇ!
ಈಗ ದೇಶದ ಎದುರಿಗೆ ನಿಂತಿರುವ ಅತಿದೊಡ್ಡ ಸವಾಲೆಂದರೆ ಅರ್ಥವ್ಯವಸ್ಥೆಯನ್ನು ಬಲಿಷ್ಠಗೊಳಿಸುವುದು. ಇದಕ್ಕಾಗಿ ಭಾರತದ ನಿರ್ಮಾಣ ಕ್ಷೇತ್ರಕ್ಕೆ ವ್ಯಾಪಕ ಆಧಾರವನ್ನು/ಭದ್ರತೆಯನ್ನು ಕೊಡುವುದು ಅತ್ಯವಶ್ಯಕ. ಇನ್ನು ರಕ್ಷಣಾ ಉತ್ಪಾದನೆಯಲ್ಲಿ ಅಮೆರಿಕದೊಂದಿಗೆ ಒಪ್ಪಂದವಾಗುವ ಸಾಧ್ಯತೆಯಿದೆ.  ಹೊಸ ತಂತ್ರಜ್ಞಾನಗಳ ವಿನಿಮಯವಾಗಲಿ ಎಂಬ ಆಧಾರದ ಮೇಲೆಯೇ ಭಾರತದ ರಕ್ಷಣಾ ಉತ್ಪಾದನಾ ಕ್ಷೇತ್ರವನ್ನು ಮುಕ್ತವಾಗಿಸಲಾಗುತ್ತಿದೆ. ಅಂದರೆ ಇದರಿಂದಾಗಿ ಮುಂದೆ ಭಾರತದಲ್ಲೇ ಉತ್ಪಾದನೆ ನಡೆಯುತ್ತದೆ, ಭಾರತದ ಯುವಕರಿಗೆ ಕೆಲಸ ಸಿಗುತ್ತದೆ, ಅಲ್ಲದೇ ಹೊಸ ತಂತ್ರಜ್ಞಾನಗಳೂ ನಮ್ಮ ದೇಶದ ಭಾಗವಾಗುವುದರಿಂದ ಭವಿಷ್ಯದಲ್ಲಿ ಉತ್ಪಾದನೆ ಮತ್ತು ವಿಕಾಸದ ಅವಕಾಶ/ಸಾಧ್ಯತೆಗಳು ಹೆಚ್ಚುತ್ತಲೇ ಸಾಗುತ್ತವೆ.
ಬೆಲೆಯೇರಿಕೆಯ ಮೇಲೆ ನಿಯಂತ್ರಣ ಮತ್ತು ದಿನಬಳಕೆಯ ವಸ್ತುಗಳು ಸುಗಮವಾಗಿ ಲಭಿಸುವಂತೆ ಮಾಡುವ ಜೊತೆಜೊತೆಯಲ್ಲೇ, ಡಾಲರ್ಗೆ ಪೈಪೋಟಿ ನೀಡುವಂತೆ ರುಪಾಯಿ ಮೌಲ್ಯವನ್ನು ಬಲಿಷ್ಠಗೊಳಿಸುವುದು ಮತ್ತು ರೈತರಿಗೆ ಉತ್ತಮ ಭವಿಷ್ಯವನ್ನು ಸುನಿಶ್ಚಿತಗೊಳಿಸುವುದು ಈಗಿನ ಸರ್ಕಾರದ ಮುಂದಿರುವ ಬೆಟ್ಟದಂಥ ಸವಾಲುಗಳು. ಹಿಂದೆ ಅನುಷ್ಠಾನಕ್ಕೆ ಬಂದ ಬಾಲಿಷ ನೀತಿಗಳನ್ನು ('ಅರ್ಥವ್ಯವಸ್ಥೆಯನ್ನು ವಿನಾಶಗೊಳಿಸುವ' ಎಂದು ಓದಿಕೊಳ್ಳಿ) ತೆಗೆದು ಹಾಕಲು ಮತ್ತು ಜಿಎಸ್ಟಿಯ ಬಾಧ್ಯತೆಗಳನ್ನು ಪೂರ್ಣಗೊಳಿಸುವ ಆಶ್ವಾಸನೆಯಿಂದಾಗಿ ವ್ಯಾಪಾರ ಮತ್ತು ಔದ್ಯೋಗಿಕ ಕ್ಷೇತ್ರಗಳಲ್ಲಿ ಹೊಸ ಉತ್ಸಾಹ ಹುಟ್ಟಿಕೊಂಡಿದೆ. ವ್ಯಾಪಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಕೆಲಸ ಮಾಡುವ, ಹಣ ಮತ್ತು ಸಮೃದ್ಧಿಯನ್ನು ಹುಟ್ಟುಹಾಕುವ ಉದ್ಯೋಗಪತಿಗಳನ್ನು ನಮ್ಮ ದೇಶದಲ್ಲಿಂದು ಅಪರಾಧಿಗಳೋ ಅಥವಾ ಕಳ್ಳರೋ ಎನ್ನುವಂತೆ ನೋಡಲಾಗುತ್ತದೆ. ಆದರೆ ಅವರು ಅರ್ಥವ್ಯವಸ್ಥೆಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಮಹತ್ವಪೂರ್ಣ ಸಹಯೋಗಿಗಳು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಭಾರತದ ನಿರ್ಮಾಣ ಕ್ಷೇತ್ರ 60 ಮತ್ತು 70ರ ದಶಕದಲ್ಲಿದ್ದಂತೆಯೇ ಇದ್ದರೆ ಈ ಭಾವನೆಯನ್ನು ಹುಟ್ಟಿಸುವುದು ಬಲುಕಷ್ಟ.
ರೈಲು ದರ ಏರಿಕೆಯ ಕಠೋರ ನಿರ್ಣಯವನ್ನು ತೆಗೆದುಕೊಳ್ಳುವ ಮೂಲಕ ಮೋದಿ ಸರ್ಕಾರ ಮುಂಬರುವ ಒಳ್ಳೆಯ ದಿನಗಳ ಸೂಚನೆಕೊಟ್ಟಿದೆ. ಏಕೆಂದರೆ ದಿವಾಳಿಯೆದ್ದು ಚೀರುತ್ತಾ ಸಾಗಿರುವ ರೇಲ್ವೆ ವ್ಯವಸ್ಥೆಯಲ್ಲಿ ಎಲ್ಲಿಯವರೆಗೂ ಅವಶ್ಯಕ ಹೂಡಿಕೆಯಾಗುವುದಿಲ್ಲವೋ ಅಲ್ಲಿಯವರೆಗೂ ಸಾಧಾರಣ ಯಾತ್ರಿಗಳಿಗೆ ಒಳ್ಳೆಯ ಸೌಲಭ್ಯ ಸಿಗುವುದಿಲ್ಲ ಮತ್ತು ಅಗತ್ಯವಿರುವ ಮಾರ್ಗಗಳಲ್ಲಿ ರೈಲು ಸಂಪರ್ಕ ಕಲ್ಪಿಸುವುದಕ್ಕೆ ಸಾಧ್ಯವಿಲ್ಲ. ಇನ್ನು ಕಾರ್ಮಿಕ ಕಾನೂನಿನಲ್ಲೂ ಪರಿವರ್ತನೆಗಳಾಗಲೇಬೇಕಾದ ಅಗತ್ಯವಿದೆ. ಆದರೆ ಇದು ಸೂಕ್ಷ್ಮ ಸಮಸ್ಯೆ. ಆಡಳಿತಾತ್ಮಕ ಅಧಿಕಾರ ವಲಯ ಮತ್ತು ಪ್ರಭುತ್ವದ ನಡುವೆ ವಿಶ್ವಾಸದ ವಾತಾವರಣ ನಿರ್ಮಾಣವಾಗದಿದ್ದರೆ ಈ ಪರಿವರ್ತನೆ ಕಷ್ಟಸಾಧ್ಯ. ಹೀಗಾಗಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಕೂಡಲೇ ಅನೇಕ ಮಂತ್ರಾಲಯಗಳ ಸಚಿವರನ್ನು ಕರೆಸಿ ಅವರ ಅನಿಸಿಕೆಯನ್ನು ಗಮನವಿಟ್ಟು ಕೇಳಿ, ತಮ್ಮ ನಿಲುವನ್ನು ಸ್ಪಷ್ಟವಾಗಿ ಹೇಳಿದರು. ಆಡಳಿತಾತ್ಮಕ ದಕ್ಷತೆ ಬೆಳೆಯಬೇಕೆಂದರೆ ಸಚಿವರು ತಮ್ಮ ಕೆಲಸಗಳಲ್ಲಿ ಯಾವುದೇ ರೀತಿಯ ರಾಜಕೀಯ ಹಸ್ತಕ್ಷೇಪಕ್ಕೆ ಆಸ್ಪದ ಮಾಡಿಕೊಡಬಾರದು ಎಂದು ಮೋದಿ ಎಚ್ಚರಿಕೆಯ ಮಾತುಗಳನ್ನು ಆಡಿದ್ದಾರೆ.
ಇನ್ನು ತಂತ್ರಜ್ಞಾನದ ಮೂಲಕ ಆಡಳಿತ ಯಂತ್ರವನ್ನು ಪಾರದರ್ಶಕಗೊಳಿಸುವ ವಿರಾಟ ಯೋಜನೆಯೂ ತಯಾರಾಗುತ್ತಿದೆ. ಶಿಕ್ಷಣ, ಸ್ವಾಸ್ಥ್ಯ ಮತ್ತು ರಾಜಮಾರ್ಗಗಳ ಅಭಿವೃದ್ಧಿಗೆ ತಯಾರಾಗುತ್ತಿರುವ ಅಭೂತಪೂರ್ವ ಕಾರ್ಯಯೋಜನೆಗಳು ಮುಂಬರುವ ದಿನಗಳಲ್ಲಿ ದೇಶದ ಅರ್ಥವ್ಯವಸ್ಥೆಯ ನಕಾಶೆಯನ್ನೇ ಬದಲಿಸಲಿವೆ.
ಮೋದಿ ಸರ್ಕಾರದ ಮೂವತ್ತು ದಿನಗಳ ಆಡಳಿತ ಆತ್ಮವಿಶ್ವಾಸವನ್ನು ಮೂಡಿಸುವುದರ ಜೊತೆ ಜೊತೆಗೇ ಬೃಹತ್ ಆಕಾಂಕ್ಷೆಗಳ ಬೆಟ್ಟದ ತುದಿಯನ್ನು ತಲುಪುವ ಮಾರ್ಗದಲ್ಲಿ ಕಲ್ಲುಮುಳ್ಳುಗಳೂ ದಂಡಿಯಾಗಿ ಇರುತ್ತವೆ ಎನ್ನುವುದರ ಸೂಚನೆಯನ್ನೂ ಕೊಡುತ್ತಿದೆ. ಆದರೆ ಕಲ್ಲು ಮುಳ್ಳುಗಳ ಹಾದಿಯನ್ನು ದಾಟಲು ಭಾರತಕ್ಕೆ ಸಾಧ್ಯವೇ ಇಲ್ಲ ಎಂಬ ನಕಾರಾತ್ಮಕ ಮನಸ್ಥಿತಿಗಳಿಗೆ ಏನನ್ನಬೇಕು? ಭಾರತದ ಪರಮ ವೈಭವವನ್ನು ಪುನಃಸ್ಥಾಪಿಸುವುದಕ್ಕಾಗಿ ಕಲ್ಲು ಮುಳ್ಳಿನ ಹಾದಿಯಲ್ಲೂ ನಡೆದು ಯಶಸ್ವಿಯಾಗುವಂತೆ ಮಾಡು ಎಂದು ಸಂಘದಲ್ಲಿ ನಾವು ನಿತ್ಯವೂ ಪ್ರಾರ್ಥಿಸುತ್ತೇವೆ!
=  ತರುಣ್ ವಿಜಯ್
tarunvijay2@yahoo.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.