ಅಂಕಣಗಳು

ಅತ್ಯಾಚಾರ ನಗರಿಯಲ್ಲಿ ಅತಂತ್ರವಾದ ಬದುಕು

ಅತ್ಯಾಚಾರ ನಗರಿಯಲ್ಲಿ ಅತಂತ್ರವಾದ ಬದುಕು
Published On :

ಮೊದಲು ಕಸ ನಗರಿ, ನಂತರ ಗುಂಡಿಗಳ ಆಗರ, ಈಗ ಅತ್ಯಾಚಾರ ನಗರಿ! ಒಂದೊಮ್ಮೆ ಅತ್ಯಂತ ಶಾಂತಿಯುತ ಮತ್ತು ಸುಂದರ ನಗರವಾಗಿದ್ದ ಬೆಂಗಳೂರಿಗೆ ಇಂದೇನಾಗಿದೆ? 22 ವರ್ಷದ ಯುವತಿಯನ್ನು ಆಕೆಯ ಅಪಾರ್ಟ್‌ಮೆಂಟ್ ಮುಂದಿನಿಂದಲೇ ಅಪಹರಿಸಿ ಚಲಿಸುತ್ತಿರುವ ಕಾರಿನಲ್ಲಿ ಅತ್ಯಾಚಾರವೆಸಗಲಾಗುತ್ತದೆ. 6 ವರ್ಷದ ಬಾಲಕಿಯ ಮೇಲೆ ಶಾಲೆಯ ಆವರಣದಲ್ಲಿಯೇ ದೌರ್ಜನ್ಯ ನಡೆಯುತ್ತದೆ. 15 ವರ್ಷದ ಬಾಲಕಿ ಕ್ರೈಸ್ತ ಮಿಶನರಿಯೊಂದರಲ್ಲಿ ಅತ್ಯಾಚಾರಕ್ಕೊಳಗಾಗುತ್ತಾಳೆ. ಬೆಂಗಳೂರಿಗರು ನಿಜಕ್ಕೂ ಆಘಾತಗೊಂಡಿದ್ದಾರೆ, ಆಕ್ರೋಶಗೊಂಡಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಮಂಡಳಿ 2013ರ ತನ್ನ ವರದಿಯಲ್ಲಿ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ದೆಹಲಿ ಮತ್ತು ಮುಂಬೈ ನಂತರ ಬೆಂಗಳೂರಿಗೆ ಮೂರನೆಯ ಸ್ಥಾನ ಕೊಟ್ಟಿತ್ತು. ಆಗ ಆ ವರದಿಯನ್ನು ಸರ್ಕಾರ ಮತ್ತು ಪೊಲೀಸ್ ಇಲಾಖೆ ಅಲ್ಲಗಳೆದವು! "ಇದು ಅತ್ಯಂತ ಸುರಕ್ಷಿತ ನಗರವಾಗಿದ್ದು, ಮುಂದೆಯೂ ಸುರಕ್ಷಿತವಾಗಿರಲಿದೆ" ಎಂದರು ಇವರೆಲ್ಲ. ಆದರೆ ಆ ವರದಿ ಆಘಾತಕಾರಿ ಅಂಕಿ ಅಂಶಗಳನ್ನು ಹೊರಹಾಕಿತ್ತು. 2.5 ಕೋಟಿ ಜನಸಂಖ್ಯೆಯಿರುವ ದೆಹಲಿಯಲ್ಲಿ 11,449 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದರೆ, 2.3 ಕೋಟಿ ಜನಸಂಖ್ಯೆಯ ಮುಂಬೈನಲ್ಲಿ 2,946 ಪ್ರಕರಣಗಳು ದಾಖಲಾದವು. ಇನ್ನು, ಕೇವಲ 85 ಲಕ್ಷ ಜನಸಂಖ್ಯೆ ಹೊಂದಿದ್ದ ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳ ಸಂಖ್ಯೆ 2,608ರಷ್ಟಿತ್ತು! ಬೆಂಗಳೂರಿನ ಚಿಕ್ಕ ವಿಸ್ತಾರ ಮತ್ತು ಜನಸಂಖ್ಯೆಯನ್ನು ಮತ್ತು ಇತ್ತೀಚೆಗೆ ನಡೆದ ಮೂರು ಘೋರ ಘಟನೆಗಳನ್ನು ಹಾಗೂ ಸತ್ಯವನ್ನು ನಿರಾಕರಿಸುತ್ತಿರುವ ಪೊಲೀಸರು-ನಾಯಕರನ್ನು ನೋಡಿದಾಗ ಭವಿಷ್ಯದಲ್ಲಿ ಬೆಂಗಳೂರು ಇನ್ನೆಷ್ಟು ಘೋರ ರೂಪವನ್ನು ತಾಳಲಿದೆಯೋ ಎಂದು ಭಯವಾಗುತ್ತದೆ.
ಜುಲೈ 11 ರಂದು ನಡೆದ ಘಟನೆಯನ್ನೇ ನೋಡಿ. ಸ್ನೇಹಿತರೊಡನೆ ರಾತ್ರಿ ಊಟಕ್ಕೆ ಹೊರಟಿದ್ದೇ 22 ವರ್ಷದ ಯುವತಿಯೊಬ್ಬಳ ಪಾಲಿಗೆ ಮುಳುವಾಯಿತು. ಊಟ ಮುಗಿದ ನಂತರ ಆಕೆಯನ್ನು ಕಾರಿನಲ್ಲಿ ಮನೆಗೆ ಬಿಡಲು ಗೆಳೆಯ ಬಂದಿದ್ದಾನೆ. ಅಷ್ಟರಲ್ಲಿ ಅದೆಲ್ಲಿಂದಲೋ ಬಂದ ಐದು ಮಂದಿ, ಆ ಯುವತಿ ಮತ್ತಾಕೆಯ ಗೆಳೆಯನ ಮೇಲೆ ದಾಳಿ ಮಾಡಿದ್ದಾರೆ. ನಾಲ್ಕು ಜನ ಸೇರಿ ಇವರಿಬ್ಬರನ್ನು ಕಾರಿನ ಹಿಂದಿನ ಸೀಟಿಗೆ ತಳ್ಳಿ ಕಾರು ನಡೆಸಿಕೊಂಡು ಹೊರಟಿದ್ದಾರೆ. ಐದನೆಯವ ಇನ್ನೊಂದು ಕಾರಿನಲ್ಲಿ ಇವರನ್ನು ಹಿಂಬಾಲಿಸಿದ್ದಾನೆ. ಊರಿನ ತುಂಬೆಲ್ಲ ಕಾರನ್ನು ಸುತ್ತಾಡಿಸಲಾಗಿದೆ. ಇದೇ ವೇಳೆಯಲ್ಲೇ ಯುವತಿಯ ಮೇಲೆ ದೌರ್ಜನ್ಯ ನಡೆದಿರುವುದು. ಆಕೆಯ ಮೇಲೆ ಅತ್ಯಾಚಾರವೆಸಗಿದವನು ಸ್ಥಳೀಯ ರಾಜಕಾರಣಿಯೊಬ್ಬನ ಮಗ.
ಯುವತಿಯ ಕಷ್ಟ ಇಲ್ಲಿಗೆ ನಿಲ್ಲಲಿಲ್ಲ. ಧೈರ್ಯ ತಂದುಕೊಂಡು ಆಕೆ ಸ್ಥಳೀಯ ಪೊಲೀಸ್ ಸ್ಟೇಷನ್‌ಗೆ ಹೋದರೆ ಅಲ್ಲಿ ಮಾನವೀಯತೆಯಿಲ್ಲದ ಪೊಲೀಸರನ್ನು ಎದುರಿಸಬೇಕಾಯಿತು. ಹೇಗೆ ತನ್ನ ಅಪಹರಣ ನಡೆಯಿತು, ಅತ್ಯಾಚಾರವಾಯಿತು ಮತ್ತು ತಪ್ಪಿತಸ್ಥರ ಕಾರು ನಂಬರ್ರು ಏನು ಎನ್ನುವ ಮಾಹಿತಿಯನ್ನೆಲ್ಲ ಆಕೆ ಒದಗಿಸಿದರೂ, ಪೊಲೀಸರು ಮಾತ್ರ ಆ ದೂರಿನಲ್ಲಿರುವ ಅಂಶಗಳನ್ನು ಸಡಿಲಗೊಳಿಸಲು ಆಕೆಗೆ ಹೇಳಿದ್ದಾರೆ.
ಇದರಿಂದ ರೋಸಿಹೋದ ಆಕೆಯ ಸ್ನೇಹಿತರು ಅಪರಾಧಿಗಳ ಗುರುತನ್ನು ತಾವೇ ಪತ್ತೆ ಹಚ್ಚಲು ಮುಂದಾಗಿದ್ದಾರೆ. ಒಂದು ಸಮಯದಲ್ಲಿ ಆ ಕಾರು ಪತ್ತೆಯಾಗಿದೆ. ಅವರು ಅದರ ಸನಿಹಕ್ಕೆ ಹೋಗುತ್ತಿದ್ದಂತೆಯೇ ಕಾರು ವೇಗವಾಗಿ ಚಲಿಸಿ ತಪ್ಪಿಸಿಕೊಂಡಿದೆ. ಆದರೂ ಯುವತಿಯ ಸ್ನೇಹಿತರು ಆ ಕಾರಿನ ಹುಡುಕಾಟದಲ್ಲಿ ತೊಡಗಿದ್ದಾರೆ. ಹೋಟೆಲ್ಲೊಂದರ ಎದುರು ಆ ಕಾರು ನಿಂತಿರುವುದು ಕಾಣಿಸಿದೆ. ಅತ್ಯಾಚಾರವೆಸಗಿದ ಪಾಪಿಯೇ ಆ ಕಾರಿನ ಬಳಿ ಬಂದಾಗ ಇವರಿಗೆ ಸಿಕ್ಕಿಬಿದ್ದಿದ್ದಾನೆ. ಪೊಲೀಸರಿಗೆ ಯುವತಿಯ ಸ್ನೇಹಿತರು ಸುದ್ದಿಮುಟ್ಟಿಸಿದ್ದಾರೆ. ಅಪರಾಧಿಯ ಬಂಧನವಾಗಿದೆ. ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತರು ಪೊಲೀಸ್ ಕಮಿಷನರ್‌ರನ್ನು ಭೇಟಿಯಾಗಿದ್ದಾರೆ ಮತ್ತು ಜುಲೈ 11ರ ರಾತ್ರಿ ನಡೆದ ಘಟನೆ ಮತ್ತು ಪೊಲೀಸರ ಸಂವೇದನಾಶೂನ್ಯ ನಡವಳಿಕೆಯ ವಿವರಣೆ ನೀಡಿದ್ದಾರೆ. ಕಮೀಷನರ್ ಅವರು ಕೂಡಲೇ ಸಂಬಂಧಪಟ್ಟ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಿ, ತ್ವರಿತ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.
ಆದರೆ ಯುವತಿಯ ಯಾತನೆ ಮಾತ್ರ ಮುಂದುವರಿಯಿತು. ಸಮವಸ್ತ್ರಧಾರಿ ಪೊಲೀಸನೊಬ್ಬ ಆಕೆಯ ಮನೆಯ ಅಸುಪಾಸಿನವರ ಬಳಿ ವಿಚಾರಣೆ ನಡೆಸಿ, ಯುವತಿಯನ್ನು ಇನ್ನಷ್ಟು ಅವಮಾನಕ್ಕೀಡುಮಾಡಿದ್ದಾನೆ. ಅಷ್ಟೇ ಅಲ್ಲ, ಆಕೆ ಮತ್ತಾಕೆಯ ಸ್ನೇಹಿತರಿಕೆ ಬೆದರಿಕೆಯ ಕರೆಗಳೂ ಬಂದಿವೆ. ಮತ್ತೊಮ್ಮೆ ಇವರೆಲ್ಲ ಸೇರಿ ಪೊಲೀಸ್ ಕಮೀಷನರ್‌ನ್ನು ಭೇಟಿಯಾಗಿ ಹೆಚ್ಚಿನ ಭದ್ರತೆ ಕೋರಿದ್ದಾರೆ.
 ಈ ಘಟನೆಯಿಂದಷ್ಟೇ ಅಲ್ಲ, ಪೊಲೀಸರ ಸಂವೇದನಾಶೂನ್ಯತೆಯೂ ಬೆಂಗಳೂರಿಗರನ್ನು ಘಾಸಿಗೊಳಿಸಿದೆ. ಇಷ್ಟಕ್ಕೂ, ಬೆಂಗಳೂರು ಎತ್ತ ಸಾಗುತ್ತಿದೆ?
ಜುಲೈ 2 ರಂದು ಶಾಲೆಯೊಂದರ ಕೊಠಡಿಯಲ್ಲಿ 6 ವರ್ಷದ ವಿದ್ಯಾರ್ಥಿನಿಯನ್ನು ಶಿಕ್ಷಕಿಯೊಬ್ಬಳು ಕೂಡಿಹಾಕುತ್ತಾಳೆ. ಶಿಕ್ಷಕಿ ಮನೆಗೆ ತೆರಳಿದಾಗ, ಶಾಲೆಯ ಜಿಮ್ ಇನ್ಸ್‌ಟ್ರಕ್ಟರ್‌ಗಳಿಬ್ಬರು ಅಸಹಾಯಕ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ಒಂದು ವಾರದ ನಂತರ ಬೆಳಕಿಗೆ ಬಂದ ಈ ಪ್ರಕರಣ, ಬೆಂಗಳೂರಿನ ಪ್ರತಿಯೊಬ್ಬ ನಾಗರಿಕರ ಬೆನ್ನಹುರಿಯಲ್ಲಿ ನಡುಕ ಹುಟ್ಟಿಸಿದೆ. ಆ ಮಗು ಮತ್ತು ಅದರ ಪೋಷಕರು ಮಾನಸಿಕವಾಗಿ ಜರ್ಜರಿತರಾಗಿದ್ದಾರೆ. ಶಾಲೆಯ ಎದುರು ಬೃಹತ್ ಪ್ರತಿಭಟನೆಗಳಾಗುತ್ತಿವೆ.
ಮಕ್ಕಳ ಮೇಲಿನ ದೌರ್ಜನ್ಯ ಅತ್ಯಂತ ನೀಚ ಮಟ್ಟದ ಅಪರಾಧ. ಒಂದೊಮ್ಮೆ ಇಂಥ ಘಟನೆಗಳು ಶಾಲೆಯಲ್ಲಿ ನಡೆಯುತ್ತವೆಂದರೆ, ಮಕ್ಕಳು ಮತ್ತು ಪೋಷಕರು ಆ ಶಾಲೆ ಮತ್ತು ಶಿಕ್ಷಕರ ಮೇಲಿಟ್ಟ ನಂಬಿಕೆಗೆ ದ್ರೋಹ ಎಸಗಿದಂತೆ ಆಗುವುದಲ್ಲವೇ? ಶಾಲಾ ಆಡಳಿತ ವ್ಯವಸ್ಥೆಯು ಮಕ್ಕಳ ಪ್ರವೇಶಾತಿ ಅರ್ಜಿಯಲ್ಲಿ, 'ಮಕ್ಕಳಿಗೆ ಏನಾದರೂ ತೊಂದರೆಯಾದರೆ ಅದಕ್ಕೆ ಶಾಲೆ ಜವಾಬ್ದಾರಿ ಹೊರುವುದಿಲ್ಲ' ಎನ್ನುವ ಕರಾರಿಗೆ ಹೆತ್ತವರಿಂದ ಒತ್ತಾಯಪೂರ್ವಕವಾಗಿ ಸಹಿ ಹಾಕಿಸುತ್ತವೆ. ಇದರಿಂದಾಗಿ ಬೆಂಗಳೂರಿಗರು ಇನ್ನಷ್ಟು ಕ್ರುದ್ಧಗೊಂಡಿದ್ದಾರೆ. ಇಷ್ಟೇ ಅಲ್ಲ, ಈ ಘಟನೆಯ ನಂತರ ಶಾಲಾ ಆಡಳಿತ ಮಂಡಳಿ, ತಮ್ಮ ಶಾಲೆಯ ಹೆಸರು ಕೆಡುತ್ತದೆ ಎನ್ನುವ ಕಾರಣಕ್ಕೆ ಈ ಘಟನೆಯನ್ನು ಮರೆಮಾಚಲು ಪ್ರಯತ್ನಿಸಿವೆ. ನಿಜಕ್ಕೂ ನಮ್ಮ ಮಕ್ಕಳು ಅಪಾಯದಲ್ಲಿದ್ದಾರಲ್ಲವೇ? ಇದನ್ನೆಲ್ಲ ನೋಡಿಕೊಂಡು ಶಿಕ್ಷಣ ಇಲಾಖೆ ಏನು ಮಾಡುತ್ತಿದೆ? ಶಾಲಾ ಆಡಳಿತ ಮಂಡಳಿಯ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ? ಅದು ಉತ್ತರದಾಯಿಯಾಗಬೇಕಲ್ಲವೇ? ಮಕ್ಕಳನ್ನು ಕಾಪಾಡದ ಶಾಲೆಗಳಿಗೆ ಬೀಗ ಜಡಿಯಬೇಕಲ್ಲವೇ? ಆ ಬಾಲಕಿಯನ್ನು ಕೂಡಿ ಹಾಕಿದ ಶಿಕ್ಷಕಿ ಯಾರು? ಆಕೆಗೆ ಶಿಕ್ಷೆಯಾಗಿದೆಯೇ? ತಪ್ಪಿತಸ್ಥರನ್ನು ಹಿಡಿದು ಜೈಲಿಗೆ ತಳ್ಳಲಾಗಿದೆಯೇ?
ಈ ಎರಡು ಘಟನೆಗಳಿಂದ ಆಘಾತಗೊಂಡಿದ್ದ ನಗರಕ್ಕೆ ಇನ್ನೊಂದು ಭೀಕರ ಸುದ್ದಿ ಬಂದಪ್ಪಳಿಸಿದೆ. ಜುಲೈ 17ರಂದು ಕ್ರೈಸ್ತ ಮಿಷನರಿಯೊಂದರಲ್ಲಿ 15 ವರ್ಷದ ಹುಡುಗಿಯೊಬ್ಬಳನ್ನು ಎಚ್ಚರತಪ್ಪಿಸಿ ಅತ್ಯಾಚಾರ ಮಾಡಲಾಗಿದೆ. ನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈ ಆಂಧ್ರ ಪ್ರದೇಶದ ಹುಡುಗಿಯ ಸ್ಥಿತಿ ಗಂಭೀರವಾಗಿದೆ.
ಅಲ್ಲ, ಸರ್ಕಾರ, ಪೊಲೀಸ್ ಇಲಾಖೆ ಏನು ಮಾಡುತ್ತಿವೆ? ಅತ್ಯಂತ ಪ್ರಚಾರ ಪಡೆದ ಪೊಲೀಸರ ರಾತ್ರಿ ಗಸ್ತು ಪ್ರಕ್ರಿಯೆಗೆ ಏನಾಯಿತು? ಹೊಯ್ಸಳ ಮತ್ತು ಚೀತಾಗಳು ಎಲ್ಲಿ ಅಡಗಿ ಕುಳಿತಿವೆ? ಸಿಸಿಟಿವಿ ಕೆಮೆರಾಗಳು ಎಲ್ಲಿವೆ? ಮಹಿಳೆಯರ ರಕ್ಷಣೆಗಾಗಿ ಮಹಿಳೆಯರನ್ನೇ ನೇಮಿಸಲಾದ 'ಅಭಯ' ವ್ಯವಸ್ಥೆಗೆ ಏನಾಯಿತು?
ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರ. ದುರ್ದೈವವೆಂದರೆ, ಈ ವೇಗದೊಂದಿಗೆ ಸಾಗಲು ಪೊಲೀಸ್ ಪಡೆಗಳಿಗೆ ಸಾಧ್ಯವಾಗಿಲ್ಲ. ಈ ವ್ಯವಸ್ಥೆಗೆ ಹೆಚ್ಚು ಜನರಷ್ಟೇ ಅಲ್ಲ, ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಯಂತ್ರೋಪಕರಣಗಳು ಮತ್ತು ವಾಹನಗಳ ಅವಶ್ಯಕತೆಯೂ ಇದೆ. ಎಲ್ಲಕ್ಕಿಂತಲೂ ಹೆಚ್ಚಾಗಿ, ಪೊಲೀಸ್ ಸಿಬ್ಬಂದಿಯಲ್ಲಿ ಸಂವೇದನೆಯನ್ನು ಬೆಳೆಸುವ ಕೆಲಸ ಆಗಬೇಕಿದೆ. ಇಲ್ಲದಿದ್ದರೆ, ಬೆಂಗಳೂರು ಅಪರಾಧ ಪ್ರಕರಣಗಳಲ್ಲಿ, ಮುಖ್ಯವಾಗಿ ಮಹಿಳೆಯರ ಮೇಲಿನ ದೌರ್ಜನ್ಯದ ವಿಷಯದಲ್ಲಿ ದೆಹಲಿ ಮತ್ತು ಮುಂಬೈನ ಹಾದಿಯನ್ನೇ ಹಿಡಿಯಲಿದೆ.
ಕೊನೆಯ ಗುಟುಕು: "ಕೈಲಾದರೆ ಎದುರಿನ ವ್ಯಕ್ತಿಗೆ ಸಹಾಯ ಮಾಡಿ. ಸಹಾಯ ಮಾಡಲು ಸಾಧ್ಯವಾಗದಿದ್ದರೂ ಪರವಾಗಿಲ್ಲ, ಆದರೆ ತೊಂದರೆ ಮಾತ್ರ ಕೊಡದಿರಿ"
 -ದಲಾಯ್ ಲಾಮಾ


-  ಹೆಚ್.ಎಸ್.ಬಲರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.