ಅಂಕಣಗಳು

ಶಿಕ್ಷಣದಲ್ಲಿ ಲೈಂಗಿಕ ಸಂಗತಿ ಇಲ್ಲಿರುವುದು ಯಾರ ಹಿತಾಸಕ್ತಿ?

ಶಿಕ್ಷಣದಲ್ಲಿ ಲೈಂಗಿಕ ಸಂಗತಿ ಇಲ್ಲಿರುವುದು ಯಾರ ಹಿತಾಸಕ್ತಿ?
Published On :

ಸೆಕ್ಸ್ ಎಜುಕೇಶನ್ ವಿರುದ್ಧವಾಗಿ ಮಾತಾಡೀರೀ ಜೋಕೆ! ಎಂದು ಫರ್ಮಾನು ಹೊರಡಿಸಿದಂತಿವೆ ನಮ್ಮ ಸುದ್ದಿ ಮಾಧ್ಯಮಗಳು. ಏಕೆಂದರೆ ಯಾರಾದರೂ ಶಾಲಾಕಾಲೇಜುಗಳಲ್ಲಿ ಸೆಕ್ಸ್ ಎಜುಕೇಶನ್ ಬೇಡ ಎಂಬ ಹೇಳಿಕೆ ಕೊಟ್ಟರೆ ಸಾಕು ಮೈಯ್ಯೆಲ್ಲಾ ಚೇಳು ಕಡಿದಂತೆ ಆಡುವ ನಮ್ಮ ಮಾಧ್ಯಮಗಳು ಅವರ ಮೇಲೆ ನಂಜನ್ನೇ ಕಕ್ಕುತವೆ.
ಇತ್ತೀಚೆಗೆ ನಮ್ಮ ದೇಶದ ಆರೋಗ್ಯ ಸಚಿವರಾದ ವೃತ್ತಿಯಲ್ಲಿ ವೈದ್ಯರೂ ಆಗಿರುವ ಡಾ. ಹರ್ಷವರ್ಧನ್ ಅವರು ತಮ್ಮ ಬ್ಲಾಗ್‌ನಲ್ಲಿ ಲೈಂಗಿಕ ಶಿಕ್ಷಣದ ಅಗತ್ಯಕ್ಕಿಂತ ನೈತಿಕ ಶಿಕ್ಷಣದ ಅಗತ್ಯ ಹೆಚ್ಚೆಂಬ ಬಗ್ಗೆ ಪ್ರಸ್ತಾಪಿಸಿದರು. ಅದೇ ಮಹಾಪರಾಧವೆಂಬಂತೆ, ಮಾಧ್ಯಮದಲ್ಲಿ ಮುಖ ತೋರಿಸುವುದನ್ನೇ ಬಂಡವಾಳ ಮಾಡಿಕೊಂಡಿರುವ ಬುದ್ಧಿಜೀವಿಗಳನ್ನು ತಮ್ಮ ಸ್ಟುಡಿಯೊಗಳಿಗೆ ಕರೆಸಿಕೊಂಡು ದಿನವೆಲ್ಲ ಚರ್ಚೆಗಳನ್ನು ಮಾಡಿ, ಹಿಗ್ಗಾಮುಗ್ಗಾ ಹೀಗಳೆದು, ಆರೋಗ್ಯ ಮಂತ್ರಿಯಾಗಲು ಅವರು ಅಯೋಗ್ಯರೆಂಬಂತೆ ಬಿಂಬಿಸಿ 'ನಾನು ಲೈಂಗಿಕ ಶಿಕ್ಷಣದ ವಿರೋಧಿಯಲ್ಲ' ಎಂದು ಅವರೇ ಮರುಹೇಳಿಕೆ ಕೊಡುವ ತನಕ ಬಿಡದೆ ಹಣ್ಗಾಯಿ-ನೀರ್ಗಾಯಿ ಮಾಡಿಬಿಟ್ಟವು. ಹೆಣ್ಣು ಮಕ್ಕಳಿಗೆ ಮೈತುಂಬಾ ಬಟ್ಟೆ ಹಾಕಿಕೊಳ್ಳಿ ಎಂದು ಹೇಳುವವರನ್ನು, ಯುವಜನತೆಯ ಮೋಜು ಮಸ್ತಿ ಮನೋಧರ್ಮವನ್ನು ಖಂಡಿಸುವವರನ್ನು ನಖಶಿಖಾಂತ ವಿರೋಧಿಸುವ ಮಾಧ್ಯಮಗಳು ಮತ್ತು ಅವರಿಗೆ ಸಾಥ್ ಕೊಡುವ ಬುದ್ಧಿಜೀವಿ ಎಂದು ಕರೆಸಿಕೊಳ್ಳುವ ವರ್ಗಗಳ ಈ ಲೈಂಗಿಕ ಶಿಕ್ಷಣದ ಮೇಲಿನ ಮಮಕಾರದ ಹಿಂದಿನ ಮರ್ಮವನ್ನು ಭೇದಿಸಲು ಯಾವ 007 ಬಾಂಡ್ ಬರಬೇಕೋ ಗೊತ್ತಿಲ್ಲ. ಒಟ್ಟಿನಲ್ಲಿ ಇವರು ಪ್ರತಿಪಾದಿಸುತ್ತಿರುವ 'ಶಾಲಾ ಕಾಲೇಜುಗಳಲ್ಲಿ ಲೈಂಗಿಕ ಶಿಕ್ಷಣ ಅತ್ಯಗತ್ಯ' ಎಂಬ ವಿಚಾರವನ್ನು ಸಾರ್ವಜನಿಕವಾಗಿ ಚರ್ಚಿಸುವ ಅಗತ್ಯವಂತೂ ಇದೆ.
ಅಮೆರಿಕದಲ್ಲಿ ಸರಿಯಾದ ಮಾರ್ಗದರ್ಶನವಿಲ್ಲದೆ ವರ್ಷಕ್ಕೆ 19 ದಶಲಕ್ಷ ಮಂದಿ ಲೈಂಗಿಕ ಸೋಂಕುಗಳಿಗೆ ತುತ್ತಾಗುತ್ತಿದ್ದು ಅದರಲ್ಲಿ ಐವತ್ತು ಭಾಗ ತಾರುಣ್ಯಾವಸ್ಥೆಯಲ್ಲಿರುವವರೇ ಆಗಿದ್ದಾರಂತೆ(CDC, 2009; Kirby, 2007). ಇನ್ನು ತಾಯಂದಿರಾಗುತ್ತಿರುವವರಲ್ಲಿ ಶೇ. 10ರಷ್ಟು ಹದಿಹರೆಯದ ಹೆಣ್ಣುಮಕ್ಕಳಂತೆ. ಶಾಲಾ ಕಾಲೇಜುಗಳಲ್ಲಿ ಓದುತ್ತಿರುವಾಗಲೇ ಗರ್ಭಿಣಿಯರಾಗಿ ವಿದ್ಯಾಭ್ಯಾಸ ಮುಂದುವರೆಸಲಾಗದ ಸ್ಥಿತಿ ತಲುಪುತ್ತಿದ್ದಾರಂತೆ. ಇಂಥ ಸ್ಥಿತಿ ದಿನೇದಿನೇ ಹೆಚ್ಚುತ್ತಿರುವ ಕಾರಣ ಅದಕ್ಕೆ ಕಡಿವಾಣ ಹಾಕಲು ಶಾಲೆಗಳಲ್ಲಿಯೇ ಸರಿಯಾದ ಲೈಂಗಿಕ ಶಿಕ್ಷಣ ಕೊಟ್ಟು ಲೈಂಗಿಕ ವಿಚಾರಗಳಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುವುದು ಉತ್ತಮ ಎಂಬುದು ನ್ಯಾಷನಲ್ ಅಸೋಸಿಯೇಷನ್ ಆಫ್ ಸ್ಕೂಲ್ ಸೈಕ್ಯಾಟ್ರಿಸ್ಟ್ಸ್(NASP) ಎಂಬ ಸಂಸ್ಥೆಯ ಅಭಿಪ್ರಾಯ. ಇದರಲ್ಲಿ ಕಾಂಟ್ರಾಸೆಪ್ಟಿವ್ ಗಳ ಬಳಕೆಯೇ ಪ್ರಮುಖ ಅಂಶವಂತೆ. ಇದರ ಒಟ್ಟಾರೆ ಸಾರಾಂಶ ಕಾಂಡೋಮ್ ಬಳಸಿ ಲೈಂಗಿಕ ಸೋಂಕು ಸೋಕದಂತೆ, ಬೇಡದ ಗರ್ಭಧಾರಣೆ ಆಗದಂತೆ ತಡೆಯುವ ಪಾಠ ಹೇಳಿಕೊಡುವುದು ಎನ್ನುವುದು ಬಿಟ್ಟರೆ ಇನ್ನಾವ ವಿಶೇಷ ಅರ್ಥಗಳೂ ಇಲ್ಲ. ಪ್ಯೂರ್ ಜಗ್ಗೇಶ್ ಸಿನಿಮಾ ಧಾಟಿಯಲ್ಲಿ ಹೇಳುವುದಾದರೆ "ಕಷ್ಟಕ್ಕೆ ಸಿಕ್ಕಾಕ್ಕೊ ಳ್ದೆನೇ ಪೋಲಿ ಕೆಲ್ಸ ಮಾಡೋ ಪಾಠ" ಅಂತ ಅಷ್ಟೆ! ಸದ್ಯಕ್ಕಿರುವ ಪ್ರಶ್ನೆ ಎಂದರೆ ಇದು ನಮ್ಮ ದೇಶಕ್ಕೆ ಅಗತ್ಯವೇ ಎಂಬುದು.
ಇಂಥಾ ವಿಷಯಗಳಲ್ಲಿ ಅಭಿಪ್ರಾಯ ಮಂಡಿಸಬೇಕಾದವರು ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳುಹಿಸುವ ಪೋಷಕರೇ ಆಗಬೇಕೆ ವಿನಃ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ ಅವರು ಹೂಸಿದ್ದನ್ನೂ ಕಸ್ತೂರಿ ಎಂದು ಭಾವಿಸುವ ಬುದ್ಧಿಜೀವಿಗಳಾಗಲೀ, ವಿದೇಶೀ ಬಂಡವಾಳದಿಂದ ನಡೆದು ಕೆಟ್ಟಕೆಟ್ಟ ಜಾಹೀರಾತುಗಳಿಂದಲೇ ಬದುಕುಳಿಯುವ, ಟಿ.ಆರ್.ಪಿ ಪೈಪೋಟಿಗೆ ಬಿದ್ದು ಎಂಥಾ ನೀಚಮಟ್ಟಕ್ಕೂ ಇಳಿಯುವ ಸುದ್ದಿಮಾಧ್ಯಮಗಳಾಗಲೀ ಅಲ್ಲ. ದಿನನಿತ್ಯ ಮಾರುಕಟ್ಟೆಗೆ ಹೊಸದಾಗಿ ಬರುವ ಸರಕು ಸಾಮಗ್ರಿಗಳಿಗೆ ಬೇಡಿಕೆ ಸೃಷ್ಟಿಸುವುದರಲ್ಲೇ ತಮ್ಮ ಅಸ್ತಿತ್ವ ಕಂಡುಕೊಳ್ಳುವ ಮಾಧ್ಯಮಗಳಿಂದ ಸ್ವಸ್ಥಸಮಾಜ ನಿರ್ಮಾಣದಂಥ ಶ್ರೇಷ್ಠ ಧ್ಯೇಯೋದ್ದೇಶಗಳನ್ನು ನಿರೀಕ್ಷಿಸಲಾಗದು. ಜಾಹೀರಾತುದಾರರು, ಪ್ರಮುಖ ಷೇರುದಾರರು ಬಯಸುವ ವಿಚಾರಗಳ ಪರವಾಗಿ ಅಭಿಪ್ರಾಯ ರೂಪಿಸಬೇಕಾದ್ದು ಇವರ ಕರ್ತವ್ಯವೇ ಆಗಿರುವುದರಿಂದ ಇವರು ಎಂಥ ರಾಜಿಗಳಿಗೂ ಸಿದ್ಧರಿರುತ್ತಾರೆ. ಹಾಗಾಗಿ ಇವರು ಸ್ಟುಡಿಯೋಗಳಲ್ಲಿ ಕೂತು ಚರ್ಚಿಸಿ ಮಂಡಿಸುವ ಅಭಿಪ್ರಾಯಗಳು ಸಾರ್ವಜನಿಕ ಮನ್ನಣೆಗೆ ಪಾತ್ರವಾಗಬೇಕೆಂದೇನೂ ಇಲ್ಲ. ಈ ಕಾರಣ ಸರ್ಕಾರ ಲೈಂಗಿಕ ಶಿಕ್ಷಣದಂಥ ಸೂಕ್ಷ್ಮ ವಿಷಯಗಳ ಬಗ್ಗೆ ನೀತಿ ನಿರೂಪಿಸಲು ಈ ಚರ್ಚೆಗಳನ್ನು ಪರಿಗಣಿಸಬೇಕಾದ ಅಗತ್ಯ ಕಂಡುಬರುವುದಿಲ್ಲ. ಬದಲಾಗಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆಗೆ ಸೂಕ್ತ ಮಾರ್ಗ ಅನುಸರಿಸುವುದು ಒಳಿತು.
ಇನ್ನು ಲೈಂಗಿಕ ಶಿಕ್ಷಣದ ಅಗತ್ಯಕ್ಕೆ ಒತ್ತು ಕೊಡುವವರ ವಾದಗಳನ್ನೊಮ್ಮೆ ಪರಿಶೀಲಿಸೋಣ. ಇತ್ತೀಚೆಗೆ ಹೆಚ್ಚುತ್ತಿರುವ ಲೈಂಗಿಕ ಅಪರಾಧಗಳಿಗೆ (rape-murder) ಲೈಂಗಿಕ ಶಿಕ್ಷಣದ ಕೊರತೆಯೇ ಕಾರಣ ಎಂಬುದು ಅವರ ವಾದ. ಮನರಂಜನೆಯ ಹೆಸರಲ್ಲಿ ಯುವಕರನ್ನು ಕೆರಳಿ ಕೆಂಡವಾಗಿಸುವ ಸಿನಿಮಾಗಳು, ಮಾರ್ಕೆಟಿಂಗ್ ಹೆಸರಿನಲ್ಲಿ ಟಿವಿಗಳಲ್ಲಿ ಕಾಣಬರುವ ಉದ್ರೇಕಕಾರಿ ಜಾಹಿರಾತುಗಳು, ಆಧುನಿಕತೆಯ ಹೆಸರಿನಲ್ಲಿ ಪ್ರೌಢಾವಸ್ತೆಯ ಕುತೂಹಲಗಳನ್ನು ಕೆರಳಿಸುವಂಥ ಹೆಣ್ಣುಮಕ್ಕಳ ಉಡುಗೆತೊಡುಗೆಗಳು...ಹೀಗೆ ಮನೆಯ ಒಳಗೆ ಹೊರಗೆ ಎಲ್ಲೆಲ್ಲೂ ಪ್ರಚೋದನಕಾರೀ ವಾತಾವರಣವನ್ನು ಸೃಷ್ಟಿಮಾಡಿ ಅದರಿಂದ ಸಂಯಮ ಕಾಪಾಡಿಕೊಳ್ಳುವಂಥ ನೈತಿಕ ಶಿಕ್ಷಣವಾಗಲೀ ಅಥವಾ ಅದನ್ನು ಶಮನ ಮಾಡಿಕೊಳ್ಳುವ ಮಾರ್ಗವಾಗಲೀ ಅವನಲ್ಲಿಲ್ಲದಾಗ ಮೃಗದಂತಾಗುವುದು ಸಹಜವೇ ಹೊರತು, ಲೈಂಗಿಕ ಶಿಕ್ಷಣದ ಕೊರತೆಯಿಂದಲ್ಲ. ಅಷ್ಟಕ್ಕೂ ಲೈಂಗಿಕ ಶಿಕ್ಷಣದ ಉದ್ದೇಶ HIV ಸೋಂಕು, Sexually transmitted infections (STD) ಹಾಗೂ ಅನಗತ್ಯ ಗರ್ಭಧಾರಣೆ (Unwanted pregnancy) ತಡೆಯುವುದೇ ಆಗಿರುವುದರಿಂದ ಹಾಗೂ ಅಮೆರಿಕದ ಒಂದು ಸರ್ವೇ ಪ್ರಕಾರ ಶೇಕಡಾ 66 ರಷ್ಟು ಶಾಲಾ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿಬಿಟ್ಟಿರುತ್ತಾರಾದ ಕಾರಣ ವಿವಾಹದ ತನಕ ಸೆಕ್ಸ್ ಬೇಡ ಎಂಬ ನೀತಿ ಪಾಠ ಅವರಿಗೆ ಹೇಳಲಾಗದು. ಹಾಗಾಗಿ ಲೈಂಗಿಕ ಶಿಕ್ಷಣದ ಹೆಸರಿನಲ್ಲಿ ಗರ್ಭ ನಿರೋಧಕಗಳನ್ನು ಬಳಸುವ ತಿಳಿವಳಿಕೆ ಕೊಡುತ್ತಾರಷ್ಟೇ. ಹೀಗಿರುವಾಗ ರೇಪಿಸ್ಟ್‌ಗಳು ಲೈಂಗಿಕ ಶಿಕ್ಷಣದಿಂದ ರೇಪ್ ಮಾಡುವ ಮುನ್ನ ಕಾಂಡೋಮ್ ಧರಿಸಬೇಕೆಂಬ ಪಾಠ ಕಲಿಯಬಹುದೇ ಹೊರತು ರೇಪ್ ಮಾಡಬಾರದೆಂಬ ಪಾಠ ಕಲಿಯಲು ಸಾಧ್ಯವಿಲ್ಲ. ಹಾಗಾಗಿ ಲೈಂಗಿಕ ಶಿಕ್ಷಣದಿಂದ ಲೈಂಗಿಕ ಅಪರಾಧಗಳನ್ನು ತಡೆಗಟ್ಟಬಹುದೆಂಬುದು ಒಪ್ಪಲಾಗದ ವಾದ. ನಮ್ಮ ದೇಶದಲ್ಲಿ ಅಪ್ರಾಪ್ತ ವಯಸ್ಸಿನಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿ ಅದರಿಂದ ಗರ್ಭ ಧರಿಸಿಬಿಟ್ಟರೆ ಮನೆಯವರಿಗೆ ಗೊತ್ತಾಗಿಬಿಡುತ್ತದೆ ಎಂಬ ಹೆದರಿಕೆಯಿಂದಾದರೂ ಕೆಲವರು ಅದರಿಂದ ದೂರ ಇರುತ್ತಾರೆ. ಅಂಥವರನ್ನೂ ಮನೆಯವರಿಗೆ ಗೊತ್ತಾಗದಂತೆ ಅಡ್ಡದಾರಿ ಹಿಡಿಯುವತ್ತ ಪ್ರೇರೇಪಿಸುತ್ತದೆ ಈ ಲೈಂಗಿಕ ಶಿಕ್ಷಣ.
ಇನ್ನು ಈ ಲೈಂಗಿಕ ಶಿಕ್ಷಣದ ಪ್ರತಿಪಾದಕರ ಇನ್ನೊಂದು ವಾದ ಕೇಳಿ. ನಮ್ಮ ದೇಶದಲ್ಲಿ ಲೈಂಗಿಕ ವಿಷಯಗಳನ್ನು ತಂದೆ ತಾಯಿ ಮಕ್ಕಳ ಬಳಿ ಮುಕ್ತವಾಗಿ ಮಾತಾಡುವುದಿಲ್ಲವಂತೆ, ಹಾಗಾಗಿ ಅವರು ಲೈಂಗಿಕ ಜ್ಞಾನ ಪಡೆಯಲು ಸುಲಭವಾಗಿ ದಕ್ಕುವ ಇಂಟರ್‌ನೆಟ್‌ನಲ್ಲಿ ಸರ್ಚ್ ಮಾಡುವಂಥ ಮಾರ್ಗಗಳನ್ನು ಹಿಡಿಯುತ್ತಾರಂತೆ. ಅಲ್ಲಿ ಬೇಕಾದ್ದು ಬೇಡದ್ದು ಎಲ್ಲವನ್ನೂ ನೋಡಿ ಅಡ್ಡದಾರಿ ಹಿಡಿದು ಲೈಂಗಿಕ ರೋಗಗಳಿಗೆ ತುತ್ತಾಗುತ್ತಿದ್ದಾರಂತೆ. ಹಾಗಾಗಿ ಶಾಲಾ ಕಾಲೇಜುಗಳಲ್ಲೇ ಲೈಂಗಿಕ ಶಿಕ್ಷಣ ಕೊಡಬೇಕಂತೆ. ಈ ಮೂಲಕ ಇವರೆಲ್ಲ ಎಷ್ಟು ಅನರ್ಥಕಾರಿ ಸಂದೇಶ ರವಾನೆ ಮಾಡುತ್ತಿದ್ದಾರೆ! ಮಕ್ಕಳು ವಯಸ್ಸಿಗೆ ಬಂದರೆಂದು ಲೈಂಗಿಕ ವಿಷಯಗಳನ್ನು ತಿಳಿದುಕೊಳ್ಳಲು ಆಸಕ್ತರಾಗಿರುತ್ತಾರೆಂದು, ಮನೆಯಲ್ಲಿ ಅದು ಸಿಗದೇ ಹೋದರೆ ಬೇರೆ ಕಡೆ ಹೋಗಿಬಿಡುತ್ತಾರೆಂದು, ಇಂಟರ್‌ನೆಟ್‌ನಲ್ಲಿ ಲಭ್ಯವಿರುವುದನ್ನೆಲ್ಲಾ ಮನೆಯಲ್ಲೇ ನೋಡಿ ತಿಳಿದುಕೊಳ್ಳಲಿ ಎಂದು ತಂದೆತಾಯಿ ಅವರಾಡುವ ಆಟಗಳನ್ನೆಲ್ಲಾ ಮಕ್ಕಳ ಜೊತೆ ಚರ್ಚಿಸಲಾದೀತೇ? ಅಥವಾ ತಾವು ಮಲಗಿಕೊಳ್ಳುವ ಕೋಣೆಯಲ್ಲೇ ಮಲಗಿಸಿಕೊಂಡು ಅವರೆದುರಿಗೇ ಎಲ್ಲ ಕ್ರಿಯೆಗಳನ್ನು ಮಾಡಲಾದೀತೇ? ಶಾಲಾ ಕಾಲೇಜುಗಳಲ್ಲಿ ಲೈಂಗಿಕ ಶಿಕ್ಷಣ ಅಳವಡಿಸಿಕೊಂಡಾಕ್ಷಣ ಇಂಟರ್‌ನೆಟ್‌ನಲ್ಲಿ ನೋಡುವುದನ್ನು ತಡೆಗಟ್ಟಲು ಶಾಲಾ ಕಾಲೇಜುಗಳಲ್ಲೇ ಲೈಂಗಿಕ ಶಿಕ್ಷಕರು ಡೆಮೋ ಕೊಡಲಾದೀತೇ? ಇವೆಲ್ಲಾ ಕುಚೋದ್ಯದ ಸಂಗತಿಗಳು. ಪಶುಪಕ್ಷಿ ಪ್ರಾಣಿಗಳಾದಿಯಾಗಿ ಎಲ್ಲವೂ ತಮ್ಮ ಕಂದಮ್ಮಗಳಿಗೆ ಆಹಾರ ಸಂಪಾದಿಸಿಕೊಳ್ಳುವ ವಿದ್ಯೆಯನ್ನು ಹೇಳಿಕೊಡುತ್ತವಷ್ಟೇ ವಿನಃ ಬೇರೆಲ್ಲಾ ಪ್ರಕೃತಿದತ್ತವಾಗಿ ಬರುವಂಥ ವಿದ್ಯೆಗಳೇ. ಅದಕ್ಕೇ ನಮ್ಮ ಪೂರ್ವಜರು ಹೇಳಿದ್ದು:  
ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತಂ/
ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತಂ//
ಕೆಲವಂ ಸಜ್ಜನಸಂಗದಿಂದಲರಿಯಲ್ ಸರ್ವಜ್ಞನಪ್ಪಂ ನರಂ/
ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀ ಚೆನ್ನ ಸೋಮೇಶ್ವರಾ //
ಕೆಲವನ್ನು ಬಲ್ಲವರಿಂದಲೂ, ಕೆಲವನ್ನು ಶಾಸ್ತ್ರಾಧ್ಯಯನದಿಂದಲೂ, ಕೆಲವನ್ನು ಇನ್ನೊಬ್ಬರು ಮಾಡುವುದನ್ನು ನೋಡುವುದರಿಂದಲೂ ಕೆಲವನ್ನು ಸ್ವಾನುಭವದಿಂದಲೂ ಕೆಲವನ್ನು ಸಜ್ಜನರ ಸಹವಾಸದಿಂದಲೂ ಕಲಿಯಬೇಕು. ಆಗ ಅವನು ಜ್ಞಾನಿಯೆನಿಸಿಕೊಳ್ಳುತ್ತಾನೆ ಎಂದು. ಬದುಕಿನಲ್ಲಿ ಬೇಕಾದ ಎಲ್ಲ ವಿದ್ಯೆಗಳನ್ನೂ ತಂದೆತಾಯಿಯೂ ಕಲಿಸಲಾರರು, ಶಾಲಾಕಾಲೇಜುಗಳೂ ಕಲಿಸಲಾರವು. ಹಾಗೊಂದು ವೇಳೆ ಕಲಿಸುವಂತಾದರೆ ಅವು ವಿದ್ಯಾಕೇಂದ್ರಗಳಾಗಿ ಉಳಿಯುವುದಿಲ್ಲ, ಬೇರೇನೋ ಕೇಂದ್ರಗಳಾಗಿ ಮಾರ್ಪಡುತ್ತವೆ.
ಇನ್ನು ಇವರು ಆತಂಕಪಡುವ ಅಂಕಿ ಅಂಶಗಳನ್ನು ನೋಡಿ: "ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, 15-19 ವರ್ಷದೊಳಗಿನವರಲ್ಲಿ 12 ಪ್ರತಿಶತ ತಾಯಂದಿರಿದ್ದಾರೆ. ಇದಕ್ಕೆ ಕಾರಣ, ಇಂದಿಗೂ ದೇಶದ ಪ್ರಮುಖ ಭಾಗಗಳಲ್ಲಿ ಲೈಂಗಿಕ ಶಿಕ್ಷಣದ ಕೊರತೆಯಿರುವುದು. 15-19 ವಯಸ್ಸಿನ ಪ್ರತಿ ಆರು ಜನರಲ್ಲಿ ಒಬ್ಬಾಕೆ ತಾಯಿಯಾಗುತ್ತಾಳೆ."
ಇಲ್ಲಿ ಗಮನಿಸಬೇಕಾದ ಬಹುಮುಖ್ಯ ಅಂಶವೆಂದರೆ ಇವರು ಯಾರೂ ಅಮೆರಿಕದ ಹೆಣ್ಣುಮಕ್ಕಳಂತೆ ವಿವಾಹಪೂರ್ವ ತಾಯಿಯಾಗುತ್ತಿರುವವರಲ್ಲ. ಬಾಲ್ಯವಿವಾಹ ಕಾನೂನು ರೀತಿ ಅಪರಾಧವೆಂದಾದರೆ ಅದನ್ನು ತಡೆಗಟ್ಟುವಲ್ಲಿ ನಮ್ಮ ಕಾನೂನು ವ್ಯವಸ್ಥೆ ವಿಫಲವಾಗಿದೆಯೆಂದು ಅರ್ಥವೇ ಹೊರತು ಲೈಂಗಿಕ ಶಿಕ್ಷಣದ ಕೊರತೆಗೂ ಅದಕ್ಕೂ ಸಂಬಂಧವಿಲ್ಲ. 18 -19 ನೇ ವಯಸ್ಸಿನಲ್ಲಿ ತಾಯಿಯಾಗುವುದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆಂಬುದು ನಮ್ಮ ದೇಶದ ಮಟ್ಟಿಗೆ ರುಜುವಾತಾಗಿಲ್ಲ. ಏಕೆಂದರೆ ಇಲ್ಲಿ ನಮ್ಮಮ್ಮ ನಿಮ್ಮಮ್ಮ ಎಲ್ಲರ ಅಮ್ಮಂದಿರೂ 12 ನೇ ವಯಸ್ಸಿಗೆ ಹೆರಲು ಶುರು ಮಾಡಿ 40-45 ವರ್ಷದವರೆಗೂ ಮಕ್ಕಳನ್ನು ಹೆತ್ತುಹೆತ್ತು ಹಾಕಿದ್ದರೂ 90-100 ವರ್ಷಗಳಕಾಲ ಆರೋಗ್ಯವಂತರಾಗಿ ಬಾಳಿದ್ದು, ಇನ್ನೂ ಬಾಳುತ್ತಿರುವ ಉದಾಹರಣೆಗಳಿವೆ. ಅದೇ ರೀತಿ ಆಧುನಿಕ ವೈದ್ಯಶಾಸ್ತ್ರ ಪ್ರಸ್ತುತಪಡಿಸುವ ರೀತಿಯಲ್ಲೇ ಬದುಕಿ 35-40 ವರ್ಷಕ್ಕೆಲ್ಲಾ ಗರ್ಭಕೋಶ ತೊಂದರೆ ಮಧುಮೇಹ, ರಕ್ತದೊತ್ತಡ, ಮೊಣಕಾಲು ಸವೆತಗಳಂಥ ತೊಂದರೆಗಳಿಂದ ಬಳಲುತ್ತಿರುವ ಉದಾಹರಣೆಗಳು ನಮ್ಮನಿಮ್ಮ ಕಣ್ಮುಂದೆಯೇ ಇದೆ. ಹಾಗಾಗಿ ಯಾರೋ ಸರ್ವೇ ಮಾಡಿ ನೀಡುವ ಅಂಕಿಅಂಶಗಳು ಹೇಳುವುದೇ ಅಂತಿಮ ಸತ್ಯವಲ್ಲ.
ಇನ್ನು ನಮ್ಮಲ್ಲಿ ಹೆಣ್ಣು ಮಕ್ಕಳಿಗೆ ಸರಿಯಾದ ಲೈಂಗಿಕ ಜ್ಞಾನವಿಲ್ಲದ ಕಾರಣ ಚಿಕ್ಕಮಕ್ಕಳ ಮೇಲೆಯೇ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ, ಹಾಗಾಗಿ ಮಕ್ಕಳಿಗೆ ಕೆಟ್ಟ ನೋಟ ಯಾವುದು, ಕೆಟ್ಟ ಸ್ಪರ್ಶ ಯಾವುದು ಎಂಬ ತಿಳಿವಳಿಕೆಯನ್ನು ಲೈಂಗಿಕ ಶಿಕ್ಷಣದ ಮೂಲಕ ಕೊಟ್ಟುಬಿಟ್ಟರೆ ಅವರನ್ನು ಯಾರೂ ಶೋಷಣೆ ಮಾಡಲಾಗದು ಎಂಬುದು ಇವರು ಕೊಡುವ ಇನ್ನೊಂದು ಕಾರಣ. ಹೆಣ್ಣು ಮಗು ಜನಿಸಿದ ದಿನದಿಂದ ಅವರನ್ನು ವಿವಾಹದ ತನಕ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುವ ನಮ್ಮ ತಾಯಂದಿರನ್ನು ಅವಮಾನಿಸುವ ಹೇಳಿಕೆ ಇದಕ್ಕಿಂತ ಬೇರೆ ಇನ್ನೊಂದಿಲ್ಲ. ಒಳ್ಳೆಯದ್ಯಾವುದು ಕೆಟ್ಟದ್ಯಾವುದು ಎಂದು ಮಕ್ಕಳಿಗೆ ತಿಳಿಯದಿದ್ದರೂ ತಾಯಿಯಾದವಳಿಗೆ ತಿಳಿದೇ ಇರುತ್ತದೆ. ಹಾಗಾಗಿ ಅವಳು ಇಂಥವರ ಸಂಗ ಮಾಡಬೇಡ, ಇಂಥ ಕಡೆಗೆ ಹೋಗಬೇಡ, ಹೊತ್ತು ಮೀರಿ ಎಲ್ಲಿಯೂ ಉಳಿಯಬೇಡ ಎಂಬ ಬುದ್ದಿವಾದ ಹೇಳಿ ಅವಳ ವೇಷಭೂಷಣ, ಇತರರೊಂದಿಗೆ ಬೆರೆಯಬೇಕಾದರೆ ಇರಬೇಕಾದ ಸಲುಗೆಯ ಪ್ರಮಾಣ ಎಲ್ಲವನ್ನೂ ತಾನೇ ನಿಯಂತ್ರಿಸುತ್ತಾಳೆ. ಆದರೆ ಅದೆಲ್ಲವನ್ನೂ ಕಟ್ಟುಪಾಡುಗಳೆಂದು ಜರಿದು ಮಕ್ಕಳ ಮೇಲೆ ಷ್ಟೊಂದು ನಿರ್ಬಂಧ ಹೇರಬಾರದೆಂದೂ, ಅದರಿಂದ ಮಕ್ಕಳಲ್ಲಿ ಕೆಟ್ಟ ಕುತೂಹಲ ಏರ್ಪಟ್ಟು ದಾರಿ ತಪ್ಪುವುದಕ್ಕೆ ಕಾರಣವಾಗುತ್ತದೆ ಎಂದು ವ್ಯಾಖ್ಯಾನಿಸುವವರೂ ಇವರೇ, ಅವರು ಕೊಂಚ ಫ್ರೀ ಬಿಟ್ಟು ಎಲ್ಲೋ ಒಂದು ಕಡೆ ಯಾರೋ ಒಬ್ಬರಿಗೆ ಎಡವಟ್ಟಾಯಿತೆಂದರೆ ಇಡೀ ದೇಶದಲ್ಲಿ ಅದೇ ವಾತಾವರಣವಿದೆ ಎಂದು ಉತ್ಪ್ರೇಕ್ಷೆಯಿಂದ ಕೂಡಿದ ಮಾಹಿತಿ ಕೊಟ್ಟು ಬೊಬ್ಬೆ ಹೊಡೆಯುವವರೂ ಇವರೇ! ಅಲ್ಲ, ತಾಯಿ ಹೇಳುವ ಬುದ್ಧಿವಾದ ಕೆಟ್ಟ ಕುತೂಹಲಕ್ಕೆ ಕಾರಣವಾಗಬಹುದಾದರೆ ಲೈಂಗಿಕ ಶಿಕ್ಷಣದ ಹೆಸರಲ್ಲಿ ಹೀಗೆ ನೋಡಿದರೆ ಅದು ಕೆಟ್ಟ ನೋಟ, ಇಲ್ಲಿ ಮುಟ್ಟಿದರೆ ಅದು ಕೆಟ್ಟ ಸ್ಪರ್ಶ ಎಂದು ಇವರು ಹೇಳುವ ಪಾಠಗಳು ಕುತೂಹಲ ಕೆರಳಿಸುವುದಿಲ್ಲವೇ? ಇದನ್ನೇ ಎಡಬಿಡಂಗಿ ವಾದಗಳೆನ್ನುವುದು.
ಸ್ವಸ್ಥ ಸಮಾಜ ನಿರ್ಮಾಣ ಮಾಧ್ಯಮಗಳಿಗೆ ಬೇಕಿಲ್ಲ ಎಂಬುದಕ್ಕೆ ಇನ್ನೊಂದು ಪುರಾವೆ ಸಿಗುತ್ತದೆ. ಗಂಡುಮಕ್ಕಳು ಪ್ರೌಢಾವಸ್ಥೆಗೆ ಬಂದಾಗ ಹೆಣ್ಣಿನ ಅಂಗರಚನೆಯ ಬಗ್ಗೆ ಕುತೂಹಲ ಏರ್ಪಡುವುದು, ಹೆಣ್ಣಿನ ಅಂಗಸೌಷ್ಠವಗಳನ್ನು ಮನಸಿನಲ್ಲಿ ಕಲ್ಪಿಸಿಕೊಂಡು ಉದ್ರೇಕಗೊಳ್ಳುವುದು ಒಂದು ಸಹಜ ಪ್ರಕ್ರಿಯೆ. ಇದು ಯಾರೇ ಲೈಂಗಿಕ ತಜ್ಞರಾಗಲೀ ಒಪ್ಪುವ ಮಾತು. ಪ್ರೌಢಾವಸ್ಥೆಯ ಆ ಕಲ್ಪನೆಗಳನ್ನು ಇನ್ನಷ್ಟು ಪ್ರಚೋದಿಸುವಂಥ ಉಡುಗೆತೊಡುಗೆಗಳನ್ನು ತೊಟ್ಟ ಆಧುನಿಕ ನಾರೀಮಣಿಗಳು ನಿಜಜೀವನದಲ್ಲಿ ಕಣ್ಣೆದುರಲ್ಲೇ ಓಡಾಡುತ್ತಿದ್ದರೆ ಆ ಮನಸ್ಸುಗಳ ಮೇಲಾಗುವ ಪರಿಣಾಮವಾದರೂ ಏನು? ಇದು ಮಾಧ್ಯಮದವರಿಗೂ ಬುದ್ಧಿಜೀವಿಗಳಿಗೂ ತಿಳಿಯದಿರುವ ವಿಷಯವೇನಲ್ಲ. ಆದರೂ ಇದನ್ನು ಯಾರಾದರೂ ಪರಿಗಣಿಸಿ ಮಹಿಳೆಯರ ವಸ್ತ್ರಸಂಹಿತೆಯ ವಿಷಯದಲ್ಲಿ ಹಾಗೂ ನಡವಳಿಕೆಯ ವಿಷಯದಲ್ಲಿ ಒಂದೆರಡು ಮಾತುಗಳನ್ನಾಡಿದರೆ ಸಾಕು, ಮಾಧ್ಯಮಗಳು ಹಾಗೂ ಬುದ್ಧಿಜೀವಿಗಳು ಅವರ ಗ್ರಹಚಾರ ಬಿಡಿಸಿಬಿಡುತ್ತಾರೆ. ಅದಕ್ಕೆ ಲಿಂಗ ತಾರತಮ್ಯದ ಬಣ್ಣ ಕಟ್ಟಿ 'ಮಹಿಳೆಯರಿಗೆ ಅವರು ಬಯಸುವ ಬಟ್ಟೆ ತೊಡುವ ಸ್ವಾತಂತ್ರವೂ ಇಲ್ಲವೇ? ಇದು ಮಹಿಳೆಯರ ಮೇಲಿನ ಪುರುಷರ ದಬ್ಬಾಳಿಕೆ' ಎಂದು ಬೊಬ್ಬೆ ಹಾಕುತ್ತಾರೆ. ಅವರು ವಾದ ಮಾಡುವಂತೆ ಇದು ಗಂಡು-ಹೆಣ್ಣಿನ ಪ್ರಶ್ನೆಯಲ್ಲ. ವಿರೂಪ-ವಿಕೃತಿಗಳ ಸಂಘರ್ಷವಷ್ಟೆ. ಒಬ್ಬ ಕಳ್ಳ, ದರೋಡೆಕೋರ ತನಗೆ ಬೇಕಿದ್ದನ್ನು ಹೇಗೆ ದೋಚುತ್ತಾನೋ ಹಾಗೆ ಒಬ್ಬ ವಿಕೃತ ಮನಸ್ಸಿನ ಕಾಮುಕ ತನಗೆ ಬೇಕಿದ್ದನ್ನು ದೋಚುತ್ತಾನೆ. ಪುರುಷರಾಗಲೀ ಮಹಿಳೆಯರಾಗಲೀ ಹೇಗೆ ತಮ್ಮಲ್ಲಿರುವ ಒಡವೆ ವಸ್ತುಗಳನ್ನು ಕಳ್ಳಕಾಕರ ಕಣ್ಣಿಗೆ ಬೀಳದಂತೆ ಬಚ್ಚಿಟ್ಟುಕೊಂಡು ರಕ್ಷಿಸಿಕೊಳ್ಳುತ್ತಾರೋ, ಇಲ್ಲಾ ಅಂಥ ಅಪಾಯದ ಸ್ಥಳಗಳಿಗೆ ಹೋಗುವುದನ್ನೇ ಅವಾಯ್ಡ್ ಮಾಡುತ್ತಾರೋ, ಒಂದು ಸಮಯ ಹೋಗಲೇಬೇಕಾದ ಸಂದರ್ಭ ಬಂದರೆ ಸೂಕ್ತಸಮಯ ಸೂಕ್ತ ರಕ್ಷಣೆಯೊಂದಿಗೆ ಹೋಗುತ್ತಾರೋ ಹಾಗೆ ಮಾಡಬೇಕಾದ್ದು ಮತಿಸೂಕ್ಷ್ಮ ವಿಚಾರ. ಅದು ಬಿಟ್ಟು "ನಾನು ಸಂಪಾದಿಸಿರುವ ಒಡವೆಯನ್ನು ನಾನು ಹಾಕಿಕೊಂಡು ನನಗೆ ಬೇಕಾದಲ್ಲಿ ನನ್ನಿಷ್ಟದಂತೆ ಓಡಾಡುವ ಸ್ವಾತಂತ್ರ ನನಗಿಲ್ಲವೇ?" ಎಂದು ಸ್ವೇಚ್ಛೆಯಿಂದ ಓಡಾಡಿದರೆ, ಗ್ರಹಚಾರ ಕೆಟ್ಟಿತ್ತು ಎಂದರೆ ಪರಿಸ್ಥಿತಿಯೂ ಕೆಡುವುದರಲ್ಲಿ ಸಂಶಯವಿಲ್ಲ. ಆಮೇಲೆ ಪೊಲೀಸಿನವರು ಬರಲೂಬಹುದು. ಕೇಸ್ ದಾಖಲಿಸಬಹುದು. ಕಡೆಗೆ ಕಳ್ಳರನ್ನು ಹಿಡಿದು ಶಿಕ್ಷೆಗೂ ಗುರಿಪಡಿಸಬಹುದು. ಬೆಳ್ಳಿ ಬಂಗಾರದ ಒಡವೆಗಳಾದರೆ ವಾಪಸ್ಸೂ ಸಿಗಬಹುದು, ಆದರೆ ಅಮೂಲ್ಯ ಒಡವೆಗಳಾದ ಮಾನ ಮತ್ತು ಪ್ರಾಣ ವಾಪಸ್ ಬರುವುದೆಲ್ಲಿ?
ಲೈಂಗಿಕ ಶಿಕ್ಷಣದಿಂದ ಇಂಥ ಅನಾಹುತಗಳನ್ನು ಹೇಗೆ ತಡೆಯಲಾದೀತು? ರೇಪ್‌ನಿಂದಾಗುವ ಅನಾಹುತಗಳನ್ನು ಲೈಂಗಿಕ ಶಿಕ್ಷಣದಲ್ಲಿ ಹೇಳಿಕೊಡುವುದರಿಂದ ರೇಪಿಸ್ಟ್‌ಗಳು ಪಾಠ ಕಲಿತುಬಿಡುತ್ತಾರೆ ಎನ್ನುವುದು ಕೇವಲ ಭ್ರಮೆ. ಅವರು ಅಪರಾಧ ಮನಸ್ಥಿತಿಯವರು. Smoking is injurious to health ಎಂಬ ಮುನ್ನೆಚ್ಚರಿಕೆ ವಾಕ್ಯ ಸಿಗರೇಟ್ ಪ್ಯಾಕ್ ಮೇಲೆ ಇದ್ದಾಗ್ಯೂ ಪ್ಯಾಕ್‌ಗಟ್ಟಲೆ ಸಿಗರೇಟ್ ಸೇದುವವರು. ಕಳ್ತನ, ಸುಳ್ತನ, ಹಾದರ ಮಾಡಿದರೆ ಪೊಲೀಸಿನವರ ಕೈಗೆ ಸಿಕ್ಕಿಕೊಂಡರೆ ಎಳೆದುಕೊಂಡು ಹೋಗಿ ಬೆಂಡೆತ್ತುತ್ತಾರೆ, ವರ್ಷಗಟ್ಟಲೆ ಜೈಲುಶಿಕ್ಷೆ ಅನುಭವಿಸಬೇಕಾಗುತ್ತದೆ ಎಂಬ ಅರಿವು ಇದ್ದರೂ ಮನೋನಿಗ್ರಹ ಮಾಡಲಾಗದೆ ಎಲ್ಲವನ್ನೂ ಮಾಡುವವರು.
ಇಂದು ಅಂಥ ಮನಸ್ಸುಗಳಿಗೆ ಚಿಕಿತ್ಸೆ ಬೇಕಿದೆ, ಮತ್ತೆ ಮನಸುಗಳು ಅಷ್ಟು ಕಲುಷಿತಗೊಳ್ಳುವುದನ್ನು ತಡೆಯಬೇಕಿದೆ. ನಾವು ಇಂದು ಪರಿಸರವನ್ನೇ ಉದ್ರೇಕಕಾರಿ ಪರಿಸರವಾಗಿಸುತ್ತಿದ್ದೇವೆ. ಮಾಧ್ಯಮಗಳಿಗೆ ಬುದ್ಧಿಜೀವಿಗಳಿಗೆ ನಿಜವಾಗಲೂ ಸ್ವಸ್ಥ ಸಮಾಜ ನಿರ್ಮಾಣದ ಕಾಳಜಿ ಇದ್ದಲ್ಲಿ ನೈತಿಕ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಲಿ. ಸ್ವಚ್ಛಂದ ಬದುಕಿನ ವೈಭವೀಕರಣಕ್ಕೆ ಬ್ರೇಕ್ ಹಾಕಲಿ.  Night Life extension ಅಂಥ ಅಪಾಯಕಾರಿ ಬೆಳವಣಿಗೆಗಳನ್ನು ಖಂಡಿಸಲಿ. ನಮ್ಮ ಹೆಣ್ಣುಮಕ್ಕಳನ್ನು ತೀರಾ ನಿಕೃಷ್ಟವಾಗಿ ಬಿಂಬಿಸುತ್ತಿರುವ ಜಾಹಿರಾತುಗಳ ನಿಯಂತ್ರಣದ ಬಗ್ಗೆ ಅಭಿಪ್ರಾಯ ರೂಪಿಸಲಿ. ಯಾವುದೋ ಒಂದು ಪರ್‌ಫ್ಯೂಮ್ ಪೂಸಿಕೊಂಡರೆ ಹುಡುಗಿಯರೆಲ್ಲಾ ಹಿಂಡುಹಿಂಡಾಗಿ ಬಂದು ಅವರೇ ನಿಮ್ಮನ್ನು ರೇಪ್ ಮಾಡುತ್ತಾರೆಂತಲೂ, ಯಾವುದೋ ಒಂದು ಬ್ರಾಂಡಿನ ಬಿಸ್ಕತ್ತಿಗೆ ಹೆಣ್ಣು ತನ್ನ ದೇಹವನ್ನೇ ಹಂಚಿಕೊಳ್ಳಲು ತಯಾರಿರುತ್ತಾಳೆಂತಲೂ ಬಿಸ್ಕತ್ತು, ಚಾಕಲೇಟು, ಅಂಡರ್‌ವೇರ್, ಶೇವಿಂಗ್ ಕ್ರೀಮ್, ಮೊಬೈಲ್, ಬೈಕು, ಕಾರು ಇದೆಲ್ಲಕ್ಕೂ ಹೆಣ್ಣು ಸುಲಬವಾಗಿ ಬಲೆಗೆ ಬೀಳುತ್ತಾಳೆ ಎಂಬಂತೆ 24X7 ಟಿವಿಗಳಲ್ಲಿ ತೋರಿಸುತ್ತಿದ್ದರೆ ಅಪಕ್ವ ಮನಸುಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು? ಮಾಧ್ಯಮಗಳು ಈ ದಿಸೆಯಲ್ಲಿ ಎಂದಾದರೂ ಯೋಚಿಸುತ್ತವೆಯೇ? ಖಂಡಿತ ಇಲ್ಲ! ಏಕೆಂದರೆ ಅವುಗಳ ಜೀವಾಳವೇ ಅಂಥ ಜಾಹಿರಾತುಗಳು. ನೈತಿಕತೆಗಿಂತ ಲೈಂಗಿಕತೆಯೇ ಅವುಗಳಿಗೆ ಹೆಚ್ಚು ಲಾಭದಾಯಕವಾದ್ದರಿಂದ ನೈತಿಕತೆಯ ಪರವಾದ ವಕಾಲತ್ತು ಅವರಿಂದ ನಿರೀಕ್ಷಿಸಲಾಗದು..

- ಫಣಿರಾಮಚಂದ್ರ
paniramachandra.hs@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.