ಭಾರತಕ್ಕೆ ಬೇಕಿದೆ ಲೈಂಗಿಕ ಶಿಕ್ಷಣ

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರ ಇತ್ತೀಚಿನ ಹೇಳಿಕೆ ಆಧಾರದಲ್ಲಿ ಅವರು ಲೈಂಗಿಕ ಶಿಕ್ಷಣದ ಬಗ್ಗೆ ಪೂರ್ವಗ್ರಹ ಹೊಂದಿದ್ದಾರೆ ಎಂದು ಟೀಕಿಸಲಾಯಿತು. ನಂತರ, 'ಅಶ್ಲೀಲತೆ ಇಲ್ಲದ ಲೈಂಗಿಕ ಶಿಕ್ಷಣ ಸಾಧ್ಯವಾದರೆ ಅದಕ್ಕೆ ತಮ್ಮದೇನೂ ಅಭ್ಯಂತರವಿಲ್ಲ.' ಎಂದು ಸಚಿವರು ಸಮಜಾಯಿಷಿ ನೀಡಿದರು. ಲೈಂಗಿಕ ಶಿಕ್ಷಣದ ಪರ-ವಿರೋಧವಾಗಿ ಲಾಗಾಯ್ತಿನಿಂದ ನಡೆಯುತ್ತಿರುವ ಚರ್ಚೆಗೂ ಇದು ಮತ್ತೆ ಜೀವ ತುಂಬಿದೆ. 'ಭಾರತಕ್ಕೆ ನಮ್ಮದೇ ಪರಂಪರೆ ಆಧರಿತ ಲೈಂಗಿಕ ಶಿಕ್ಷಣ ಬೇಕು. ಆದರೆ ಕಾಂಡೋಮ್ಗಳ ವ್ಯಾಪಾರ ಹೆಚ್ಚುಮಾಡುವ ಉದ್ದೇಶ ಮಾತ್ರವಿರುವ ಶಿಕ್ಷಣ ಬೇಕಿಲ್ಲ' ಎಂಬ ಧಾಟಿಯಲ್ಲಿ ಲೇಖಕರು ಇಲ್ಲಿ ವಾದಿಸಿದ್ದಾರೆ.
ಲೈಂಗಿಕ ಚಟುವಟಿಕೆ (ವೇಶ್ಯಾವಾಟಿಕೆ), ಲೈಂಗಿಕಾಪರಾಧ, ಲೈಂಗಿಕರೋಗ ಹೀಗೆ ಲೈಂಗಿಕತೆಗೆ ಸಂಬಂಧಪಟ್ಟ ವಿದ್ಯಮಾನಗಳು ದಿನದಿಂದ ದಿನಕ್ಕೆ ದೇಶ ವಿದೇಶದಲ್ಲೇ ಹೆಚ್ಚುತ್ತಿವೆ. ಸಂಸ್ಕೃತದಲ್ಲಿರುವ ಮಾತಿನಂತೆ ಆಸಕ್ತಿಯೇ ಈ ವ್ಯವಹಾರಕ್ಕೆ ಕಾರಣ. ಈ ಆಸಕ್ತಿಗೆ ಕುತೂಹಲವೇ ಕಾರಣ. ಈ ಕುತೂಹಲದ ಕಾರಣದಿಂದ ಲೈಂಗಿಕ ದುರಂತಗಳು ಉಂಟಾಗುತ್ತಿವೆ. ಈ ಕದನ ಕುತೂಹಲಕ್ಕೆ ಕಾರಣ ಅಜ್ಞಾನ, ಅವಿದ್ಯೆ ಇತ್ಯಾದಿಗಳು ಎನ್ನಬಹುದು ಅಥವಾ ವಯಸ್ಸಿಗೆ ಮೀರಿದ ಭಾವನೆಗಳು, ಮನಸ್ಸನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದಿರುವುದು, ಚಲನಚಿತ್ರಗಳು, ಮಾಧ್ಯಮಗಳಲ್ಲಿ ಬರುವ ದೃಶ್ಯಗಳು, ಅಂತರ್ಜಾಲದ ವ್ಯವಸ್ಥೆಗಳು, ಆಧುನಿಕ ಯುವಕ ಯುವತಿಯರು, ಸಾರ್ವಜನಿಕ ಪ್ರೇಮದಾಟ -ಹೀಗೆ ಪಟ್ಟಿ ಮಾಡಲು ಹೋದರೆ ಹನುಮಂತನ ಬಾಲದಂತೆ ಬೆಳೆಯುತ್ತದೆ. ದಿನದಿಂದ ದಿನಕ್ಕೆ ಇದು ಏರಿಕೆಯ ಪ್ರಮಾಣದಲ್ಲಿದೆಯೇ ವಿನಾ ಕಡಿಮೆಯಾಗುತ್ತಿಲ್ಲ. ಪೂರ್ತಿಯಾಗಿ ಇದನ್ನು ನಿಯಂತ್ರಣಗೊಳಿಸಲು ಸಾಧ್ಯವಿಲ್ಲದಿದ್ದರೂ, ಸ್ವಲ್ಪ ಮಟ್ಟಿಗೆ ಕಡಿವಾಣ ಹಾಕಬಹುದು. ಅದಕ್ಕಿರುವ ಒಂದೇ ಮಾರ್ಗ ಲೈಂಗಿಕಶಿಕ್ಷಣ. ಅಷ್ಟೇ ಅಲ್ಲದೆ ಇದರ ಬಗ್ಗೆ ನಡೆಯುವ ಸಂಘರ್ಷ, ಹೊಡೆದಾಟ, ಪ್ರತಿಭಟನೆ ಇವೆಲ್ಲವೂ ನಿತ್ಯನೂತನ ಎಂಬಂತೆ ಭಾಸವಾಗುತ್ತಿದೆ.
'ಕಾಮಾತುರಾಣಾಂ ನ ಭಯಂ ನ ಲಜ್ಜಾ' ಎಂಬಂತೆ ಲೈಂಗಿಕ ಅಪರಾಧ ಎಸಗುವವನಿಗೆ (ಳಿಗೆ) ಯಾವುದರ ಭಯವೂ, ನಾಚಿಕೆಯೂ ಇಲ್ಲದಿರುವುದು ಬಹುಷಃ ಸೃಷ್ಟಿಯ ಅದ್ಭುತಗಳಲ್ಲಿ ಒಂದು. ಪುರಾಣ ಕಾಲದಲ್ಲಿ ಜಗತ್ತಿನ ರಕ್ಷಣೆಗಾಗಿ, ಬಳಸಿಕೊಳ್ಳಲಾಯಿತು. ರಾಕ್ಷಸನಾದ ತಾರಕಾಸುರನ ಸಂಹಾರಕ್ಕಾಗಿ ಶಿವ-ಪಾರ್ವತಿಯ ಮಧ್ಯೆ ವೈರಾಗ್ಯ ದೂರವಾಗಿ ಪರಸ್ಪರ ಆಕರ್ಷಣೆಗೊಂಡು ಸತಿ-ಪತಿಗಳಾಗಲು ಕಾಮವನ್ನು ಬಳಸಲಾಗಿತ್ತು. ಅದರ ಹಿಂದೆ ಯಾವ ಕಾಮಲೀಲೆ ಲೋಕವನ್ನು ರಕ್ಷಣೆ ಮಾಡಿತ್ತೋ ಅದೇ ಕಾಮವನ್ನು ಹೊಡೆದೋಡಿಸಿ ಲೋಕವನ್ನು, ಯುವತಿಯರನ್ನು ರಕ್ಷಣೆ ಮಾಡಬೇಕಾದ ಕಾಲಸ್ಥಿತಿಯೊದಗಿ ಬಂದಿರುವುದು ವಿಪರ್ಯಾಸವಲ್ಲದೆ ಮತ್ತೇನು? ಹೀಗೊಂದು ನಿಯಂತ್ರಣ ಸಾಧ್ಯವಾಗಬೇಕಾದರೆ ಇದಕ್ಕೊಂದು ಸಾಧನ ಲೈಂಗಿಕ ಶಿಕ್ಷಣ. ಕೇವಲ ಇದಕ್ಕಾಗಿ ಮಾತ್ರವಲ್ಲ ಉತ್ತಮ ಪ್ರಜೆಗಳ ಸೃಷ್ಟಿಗಾಗಿ, ವಿಚ್ಛೇದನ ನಿಯಂತ್ರಣಕ್ಕಾಗಿಯೂ ಈ ಶಿಕ್ಷಣ ಅನಿವಾರ್ಯವಾಗಿ ಬೇಕಾಗಿದೆ.
ಲೈಂಗಿಕ ಶಿಕ್ಷಣಎಂದ ಕೂಡಲೇ ನಮ್ಮ ಮನಸ್ಸು ಪಶ್ಚಿಮ ದೇಶಗಳ ಕಡೆಗೆ ತಿರುಗುತ್ತದೆ. ಈ ಶಿಕ್ಷಣದ ಕೊಡುಗೆ ಪಾಶ್ಚಿಮಾತ್ಯ ದೇಶಗಳದ್ದು ಎನ್ನುವ ಭಾವನೆ. ಈ ವಿದ್ಯೆ ವಿದೇಶದಲ್ಲಿರುವುದರಿಂದ ಅಲ್ಲಿ ಮುಕ್ತ ಲೈಂಗಿಕ ವ್ಯವಹಾರದ ವಾತಾವರಣ ಸೃಷ್ಟಿಯಾಗಿದೆ. ಏಡ್ಸ್ ಇಂತಹ ಲೈಂಗಿಕ ರೋಗಗಳು ಅಲ್ಲಿಂದ ಹರಡಿದೆ ಎನ್ನುವ ಚಿಂತನೆಗಳು ಇವೆ. ಇದರಲ್ಲಿ ಏಡ್ಸ್ ಮೊದಲಾದ ಲೈಂಗಿಕ ರೋಗಗಳು ವಿದೇಶದಿಂದ ಹರಡಿದೆ ಎನ್ನುವುದು ಮಾತ್ರ ಒಂದು ಅಪ್ಪಟ ಸತ್ಯ. ಮುಕ್ತ ಲೈಂಗಿಕ ವ್ಯವಹಾರಕ್ಕೆ ಅಲ್ಲಿನ ಆರ್ಥಿಕ/ಸಾಮಾಜಿಕ ಸ್ಥಿತಿ ಕಾರಣವೇ ವಿನಾ ಲೈಂಗಿಕ ಶಿಕ್ಷಣ ಕಾರಣವಲ್ಲ. ಆದರೆ ಲೈಂಗಿಕ ಶಿಕ್ಷಣದ ಪ್ರಾರಂಭ ಭಾರತದಿಂದಲೇ ಆಗಿದೆ. ಇದಕ್ಕೆ ಭಾರತೀಯರು ಕೊಟ್ಟ ದೈವಿಕ ಭಾವನೆಯೇ ಕಾರಣ. ಎಲ್ಲಾ ವಿದ್ಯೆಗೆ ಮೂಲ ಪ್ರವರ್ತಕ ಬ್ರಹ್ಮ. ಅದನ್ನು ಶುದ್ಧ ರೀತಿಯಲ್ಲಿ ಶಿಕ್ಷಣಕ್ಕೆ ಅನುಕೂಲವಾಗುವಂತೆ ಕೊಟ್ಟವನು ಮಹರ್ಷಿ ವಾತ್ಸ್ಯಾಯನ. ಇವನೇ ಲೈಂಗಿಕ ಶಿಕ್ಷಣದ ಮೂಲ ಪ್ರವರ್ತಕ. ಈತ ಲೈಂಗಿಕತೆಯನ್ನು ಕ್ರಮಬದ್ಧವಾಗಿ ನಿರೂಪಿಸಿರುವುದೇ ಅಲ್ಲದೇ ತಮ್ಮನ್ನು ದೂರೀಕರಿಸಿ ವೇಶ್ಯಾವಾಟಿಕೆ ಮಾಡದಂತೆ ತಮ್ಮ ಪತಿಯನ್ನು ಸ್ತ್ರೀಯರು ತಡೆಯುವ ಕ್ರಮ, ಪ್ರತಿಯೊಬ್ಬ ಗಂಡಸು ಕೂಡಾ ತನ್ನನ್ನು ಪತ್ನಿಯಾದವಳು ಪ್ರೀತಿಸುವಂತೆ ಮಾಡಿಕೊಳ್ಳುವ ಕ್ರಮ ಎಲ್ಲವನ್ನೂ ವಿವರಿಸಿದ್ದಾನೆ. ತಂದೆ-ತಾಯಿಯಾದವರು ಮಕ್ಕಳಿಗೆ ಈ ಶಿಕ್ಷಣವನ್ನು ಕೊಡಿಸಲೇಬೇಕು ಎಂಬ ವಿಚಾರ, ಅದೇ ರೀತಿ ಯಾರಿಂದ ಕೊಡಿಸಬೇಕು, ಹೇಗೆ ಕೊಡಿಸಬೇಕು ಎನ್ನುವ ಕ್ರಮ, ಲೈಂಗಿಕ ರೋಗಗಳು ಬರದಂತೆ ಸ್ವತಃ ತಡೆಗಟ್ಟಿಕೊಳ್ಳುವ ಕ್ರಮ, ಇತ್ಯಾದಿಗಳನ್ನು ಸಂಶೋಧನಾತ್ಮಕವಾಗಿ ವಿವರಣಾತ್ಮಕವಾಗಿ ತಿಳಿಸಿರುವ ಶಿಕ್ಷಣ ಭಾರತೀಯರ ಲೈಂಗಿಕ ಶಿಕ್ಷಣದ ಪರಂಪರೆಯಲ್ಲಿದೆ. ಎಷ್ಟೋ ಮಂದಿ ಬಂಜೆಯರಾಗಿ, ಸಂತಾನಹೀನರಾಗಿ ಗಂಡಸರು ಪುರುಷ ವಿಹೀನರಾಗಿದ್ದಾರೆ. ಬಂಜೆಯಾಗದಿರುವ, ಪುರುಷತ್ವವನ್ನು ಹೆಚ್ಚಿಸುವ ಕ್ರಮ, ಪುರುಷತ್ವವನ್ನು ರಕ್ಷಿಸುವ ಕ್ರಮ ವೈಜ್ಞಾನಿಕವಾಗಿ ಇಲ್ಲಿ ತಿಳಿಸಲಾಗಿದೆ.
ದೌರ್ಭಾಗ್ಯವಶಾತ್ ಅದನ್ನು ತಿಳಿಯುವ, ಬೇಡ, ನೋಡುವ ಅವಕಾಶವೇ ಇಲ್ಲದಿರುವುದು ದೊಡ್ಡ ದುರಂತವೇ ಸರಿ. ಈ ಕಾರಣದಿಂದ ಹಿಂದೆ ಲೈಂಗಿಕತೆಗೆ ಸಂಬಂಧಪಟ್ಟ ಎಲ್ಲಾ ದುಃಖಾದಿಗಳನ್ನು ಈಗ ಅನುಭವಿಸುತ್ತಾ ಇದ್ದೇವೆ. ಇದಕ್ಕೆ ಕಾರಣ ನಮ್ಮ ಅರೆಬರೆ ಜ್ಞಾನ, ವಿದೇಶಿಯರ ಅಜ್ಞಾನ, ಇವೆರಡೂ ಸೇರಿ ಲೈಂಗಿಕ ದುರಂತಕ್ಕೆ ನಾವು ಒಳಗಾಗುತ್ತಿದ್ದೇವೆ. ಇನ್ನಾದರೂ ಈ ವಿಷಯದಲ್ಲಿ ದೇಶ ಜಾಗೃತಗೊಳ್ಳಬೇಕಾದರೆ ಭಾರತೀಯ ಲೈಂಗಿಕ ವಿದ್ಯೆಯ ಆಧಾರದಲ್ಲಿಯೇ ಲೈಂಗಿಕ ಶಿಕ್ಷಣ ಜಾರಿಗೊಳ್ಳಲೇಬೇಕು .
ಭಾರತೀಯ ವಿದ್ಯೆಯ ಪರಂಪರೆಗಳನ್ನು ಅವಲೋಕನ ಮಾಡಿದಾಗ ಬದಲಾದ ಪ್ರತಿ ಪರಂಪರೆಯಲ್ಲೂ 'ಕಾಮಶಾಸ್ತ್ರ' ಲೈಂಗಿಕ ವಿದ್ಯೆ ಎಂಬುದು ಇದ್ದೇ ಇತ್ತು. ಆದರೆ ಆಧುನಿಕ ವಿದ್ಯಾಕ್ರಮದಲ್ಲಿ ಮಾತ್ರ ಅದಕ್ಕೆ ಮೈಲಿಗೆ ಸಿಕ್ಕಿತು. ಇದಕ್ಕೆ ಕಾರಣ ವಿದೇಶಿಯರು, ವಿದೇಶಿಯರ ವಿದ್ಯೆಯ ಆಕರ್ಷಣೆ. ಆ ವಿದೇಶಿಯರು ಕೇವಲ ತಮ್ಮ ಮೂಗಿನ ನೇರಕ್ಕೆ ಬೇಕಾದಂತಹ ಲೈಂಗಿಕ ವಿಚಾರಗಳನ್ನು ಇಟ್ಟುಕೊಂಡು ಲೈಂಗಿಕ ಶಿಕ್ಷಣನ್ನು ಕೊಡಲು ಪ್ರಾರಂಭಿಸಿದರು. ಪರಾವಲಂಬನ ಜೀವಿಗಳಾದ ನಾವು ಅದೇ ಮೂಲ ಲೈಂಗಿಕ ವಿದ್ಯೆ ಎಂದು ತಿಳಿದು ಇದು ನಮಗೆ ಮಾರಕ ಎಂದು ಬಿಟ್ಟು ಬಿಟ್ಟೆವು. ವಸ್ತುತಃ ವಿದೇಶಿಯರು ತಮ್ಮ ಮೂಗಿನ ನೇರಕ್ಕೆ ತಕ್ಕಂತೆ ಮಾಡಿಕೊಂಡ ಲೈಂಗಿಕ ವಿದ್ಯಾಕ್ರಮ ಭಾರತಕ್ಕಲ್ಲ ಯಾವ ದೇಶಕ್ಕೂ ಮಾರಕವೇ ಆಗಿದೆ. ಆ ಮಾರಕ ವಿದ್ಯೆಯನ್ನು ಓದಿದ ದೇಶಗಳೆಲ್ಲವೂ ಹೆಚ್ಐವಿ/ಏಡ್ಸ್ ಮೊದಲಾದ ಔಷಧ ರಹಿತ ರೋಗಕ್ಕೆ ತುತ್ತಾದವು. ಕಪಿ ತಾನು ಹಾಳಾದದ್ದಲ್ಲದೇ ತೋಟವನ್ನು ಹಾನಿಗೆಡಿಸಿತು ಎಂಬಂತೆ ನಮ್ಮನ್ನು ಹಾಳು ಮಾಡಿದರು.
ಆದರೆ ಈಗಲಾದರೂ ನಿಜವಾದ ಭಾರತೀಯ ಲೈಂಗಿಕ ವಿದ್ಯೆಯನ್ನು ಭಾರತೀಯರಿಗೆ ಕೊಡದೇ ಹೋದರೆ ಪರಿಸ್ಥಿತಿ ಇನ್ನಷ್ಟು ಶೋಚನೀಯವಾದೀತು. ವಿದೇಶಿ ಲೈಂಗಿಕ ವಿದ್ಯೆಯ ಮಂಪರಿನಿಂದ (ಭ್ರಮೆಯಿಂದ) ಹೊರಬಂದು ಭಾರತೀಯ ಶೈಲಿಯ ಲೈಂಗಿಕ ವಿದ್ಯೆಯನ್ನು ಕೊಟ್ಟಾಗ ಪುನಃ ಲೈಂಗಿಕ ಪ್ರವೃತ್ತಿ ಸಾತ್ವಿಕವಾದೀತು. ಭಾರತೀಯರು ಈ ವಿದ್ಯೆಯಿಂದಾಗಿ ಅಕ್ಕ, ತಂಗಿ, ಚಿಕ್ಕಮ್ಮ , ದೊಡ್ಡಮ್ಮ, ಅತ್ತೆ, ಸೊಸೆ, ಮಗಳು ಇವರೆಲ್ಲರೂ ಸ್ತ್ರೀಯರಾಗಿದ್ದರೂ ಕೂಡ ಅವರಲ್ಲಿ ಈ ಭಾವನೆಯಿಂದಾಗಿ ಒಂದೇ ಮನೆಯಲ್ಲಿದ್ದರೂ ಲೈಂಗಿಕತೆ ನಿಯಂತ್ರಣಕ್ಕೆ ಒಳಗಾಗಿದೆಯೋ ಅದೇ ರೀತಿ ಸಮಾಜದ ಪ್ರತಿಯೊಂದು ಹೆಣ್ಣಿನಲ್ಲೂ ಕೂಡಾ ಈ ಭಾವನೆಯನ್ನು ಹೊಂದಿ ನಿಯಂತ್ರಣಕ್ಕೆ ಒಳಗಾಗಬಹುದು. ಈ ಭಾವನೆ ಹಿಂದಿನ ಪೀಳಿಗೆಯವರು ಕೊಟ್ಟಿದ್ದರಿಂದ ಈಗ ಉಂಟು. ಇನ್ನು ಮುಂದಿನವರಿಗೆ ಕೊಡಲು ಎಲ್ಲಿಯೂ ಕೂಡಾ ಜೊತೆಯಾಗಿ ಬದುಕುತ್ತಿಲ್ಲ. ಅವಿಭಕ್ತ ಕುಟುಂಬವಿಲ್ಲ. ಹಿರಿಯರ ಮಾರ್ಗದರ್ಶನವಿಲ್ಲ. ತಂದೆ-ತಾಯಿಯರ ಮಾತು ಕೇಳುವವರಿಲ್ಲ. ಇಂತಹವರಿಗೆ ಈ ಸನಾತನ ವಿದ್ಯೆ ಕೊಡದೇ ಹೋದರೆ ಸಂಬಂಧಿಕರನ್ನೆಲ್ಲಾ ಕೆಟ್ಟ ದೃಷ್ಟಿಯಿಂದ ನೋಡುವ ದಿನಗಳೂ ಬಂದೀತು. (ಪ್ರಾಣಿಗಳ ಹಾಗೆ).
ಅಪಾಯಕ್ಕೊಳಗಾಗುವ ಮೊದಲು ಉಪಾಯ ತಿಳಿದುಕೊಳ್ಳುವುದೇ ಅಪಾಯಕ್ಕೊಳಗಾಗದಿರಲು ಇರುವ ಒಳ್ಳೆಯ ದಾರಿ. ಈ ದಾರಿ ವಿಶೇಷವಾಗಿ ವಿದ್ಯಾರ್ಥಿನಿಯರಿಗೆ, ಯುವತಿಯರಿಗೆ ಬಹಳ ಆವಶ್ಯಕ. ಏಕೆಂದರೆ ಇವರು ಬಾಹ್ಯ ಆಕರ್ಷಣೆಗೆ ಒಳಗಾಗುತ್ತಿರುವುದು ಬೇಗ ಮತ್ತು ಮರಳು ಮಾತಿಗೆ ಸಿಕ್ಕಿ ಬೀಳುವುದೂ ಬೇಗ.
ಇಂತಹವರನ್ನು ಹಾನಿಗೊಳಿಸಲು ಯುವಕರ ದಂಡು ಸದಾ ಸಿದ್ಧವಾಗಿರುತ್ತದೆ. ಇದರಿಂದ ಸ್ತ್ರೀಯರನ್ನು ರಕ್ಷಿಸಲು ಈ ಲೈಂಗಿಕ ವಿದ್ಯೆ ಬಹಳ ಆವಶ್ಯಕ. ಇಂತಹ ರಕ್ಷಣಾ ವಿಚಾರಗಳನ್ನು ಮಹರ್ಷಿ ವಾತ್ಸ್ಯಾಯನ ರಚಿಸಿರುವ ಕಾಮಸೂತ್ರಮ್ ಗ್ರಂಥದಲ್ಲಿ ಕಾಣಬಹುದು. ಈ ಕಾಮಸೂತ್ರಮ್ ಎಂಬ ಗ್ರಂಥವನ್ನು ಭಾರತೀಯ ಎಲ್ಲಾ ಭಾಷೆಗಳಿಗೆ ಅನುವಾದಿಸಿ, ಸ್ವತಃ ಅಧ್ಯಯನಕ್ಕೆ, ವಿಶೇಷ ಶಿಕ್ಷಣದ ಮೂಲಕ ಅಳವಡಿಸಿದರೆ ವಿದ್ಯಾರ್ಥಿನಿ, ಯುವತಿಯರನ್ನು ಆ ಮೂಲಕ ಎಲ್ಲ ಲೈಂಗಿಕ ಕೆಟ್ಟ ಚಟುವಟಿಕೆಗೆ ಒಂದಿಷ್ಟು ತಡೆಯನ್ನು ಹಾಕಬಹುದು. "ವಿದ್ಯೆ ಕಲಿತ ನಾರಿ ಸುಖ ಸಂಸಾರಕ್ಕೆ ದಾರಿ" ಎಂಬಂತೆ ಸ್ತ್ರೀಯರೂ ಸುಖವಾಗಿರಬಹುದು. ಮನೆಯೂ ಭದ್ರವಾಗಿ ಸಮಾಜವೂ ಘನತೆಯಿಂದ ತಲೆಯೆತ್ತಬಹುದು.
ಈ ಹಿಂದಿನವರು ಈ ವಿದ್ಯೆಯನ್ನು ಕಲಿಯದೇ ಇದ್ದುದರಿಂದ ಇಂದು ದೊಡ್ಡ ದೊಡ್ಡ ಸ್ಥಾನಮಾನವುಳ್ಳವರು ಕೂಡಾ ಈ ವಿಷ ವಲಯದಲ್ಲಿ ನಿಯಂತ್ರಣವನ್ನು ಹೊಂದಲಾರದೆ, ಲೈಂಗಿಕಾಪರಾಧಕ್ಕೆ ಬಲಿಯಾಗಿ ದುಃಖಪಡುತ್ತಿರುವುದನ್ನು ಕಾಣಬಹುದು. ಎಷ್ಟೋ ಸಂಸಾರಗಳು ಬೀದಿಗೆ ಬೀಳುವುದನ್ನು ಗಮನಿಸಬಹುದು. ಹಿರಿಯರು ಮಾಡುವ ತಪ್ಪಿನಿಂದಾಗಿ ಚಿಕ್ಕ ಮಕ್ಕಳು ಅನಾಥರಾಗಿ ಬೆಳೆಯುವುದನ್ನು ಕಾಣಬಹುದು. ಈ ಮಕ್ಕಳಿಗೆ ಒಂದು ಕಡೆಯಲ್ಲಿ ರಕ್ಷಣೆಯಿಲ್ಲ. ಇನ್ನೊಂದು ಕಡೆಯಲ್ಲಿ ಸಮಾಜದಲ್ಲಿ ಹೀಯಾಳಿಕೆ ಇದೆ. ಅಷ್ಟೇ ಅಲ್ಲದೇ ಹೆಚ್ಐವಿ/ಏಡ್ಸ್ ನಂತಹ ರೋಗಕ್ಕೆ ಉತ್ತಮ ಸ್ಥಾನಮಾನದವರು ಬಲಿಯಾಗುತ್ತಿರುವುದು ಬಹಿರಂಗ ಸತ್ಯ. ಇದರ ನಿವಾರಣೆಗೆ ವೈಜ್ಞಾನಿಕವಾಗಿರುವ, ಸರ್ವಕಾಲಕ್ಕೂ ಅನ್ವಯವಾಗುವ, ಎಲ್ಲಾ ದೇಶಕ್ಕೂ ಕೂಡ ಸರಿಹೊಂದುವ ಮಹರ್ಷಿ ವಾತ್ಸ್ಯಾಯನನ ಲೈಂಗಿಕ ಜೀವನದ ಸುಖಕ್ಕೆ ಸರಿ ಹೊಂದುವ ಚಿಂತನೆಯುಳ್ಳ ಕಾಮಸೂತ್ರ ಗ್ರಂಥ. ಇನ್ನಾದರೂ ಪರಿಷ್ಕೃತ ರೂಪದಲ್ಲಿ ಲೈಂಗಿಕ ಶಿಕ್ಷಣದಲ್ಲಿ ಬರುವಂತೆ ಸರ್ಕಾರ ಗಮನವೀಯುವುದೇ? ಶಿಕ್ಷಣ ತಜ್ಞರು ಶಿಕ್ಷಣ ವಿಭಾಗದಲ್ಲಿ ಬಳಸಿಕೊಳ್ಳುವರೇ?
- ಡಾ. ಮಹಾಬಲ ಭಟ್ಟ
ಯುಜಿಸಿ ಸಂಶೋಧನಾ ಅಭ್ಯರ್ಥಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


