ಆಧುನಿಕವೆನಿಸಿಕೊಳ್ಳಲು ಲೈಂಗಿಕ ಶಿಕ್ಷಣ ಎಂದಾದರೆ, ಈಗಿನ ತಲ್ಲಣಗಳ ಬೇರೂ ಆಧುನಿಕತೆಯೇ ತಾನೇ?

ಹಿಂದಿನ ದಿನಗಳಲ್ಲಿ ಲೈಂಗಿಕ ಶಿಕ್ಷಣಕ್ಕೆ ವ್ಯಾಖ್ಯಾನ - ವ್ಯಕ್ತಿಗೆ ತನ್ನ ಬಗ್ಗೆ ಮತ್ತು ಅನ್ಯ ಲಿಂಗದ ಬಗ್ಗೆ ಸಮರ್ಪಕವಾದ ತಿಳುವಳಿಕೆ ನೀಡುವುದು ಲೈಂಗಿಕ ಶಿಕ್ಷಣ. ಲೈಂಗಿಕ ಶಿಕ್ಷಣವು ಲೈಂಗಿಕ ಚಟುವಟಿಕೆಯ ಹಿಂದಿರುವ ಸತ್ಯಾಸತ್ಯತೆಗಳನ್ನು ತಿಳಿಸುತ್ತದೆ. ಸಾಮಾನ್ಯವಾಗಿ ವ್ಯಕ್ತಿಗಳಿಗೆ, ಲೈಂಗಿಕ ಸಂಬಂಧಗಳು, ಸಂತಾನೋತ್ಪತ್ತಿಯ ಪ್ರಕ್ರಿಯೆಯ ಬಗ್ಗೆ ಜ್ಞಾನ ನೀಡಿ, ಲೈಂಗಿಕ ವರ್ತನೆಗಳ ಬಗ್ಗೆ ಸ್ಪಷ್ಟ ಮನೋಭಾವಗಳು ಮತ್ತು ಜವಾಬ್ದಾರಿಯುತ ವರ್ತನೆಗಳನ್ನು ಬೆಳೆಸುವ ಶಿಕ್ಷಣ. ಅದು ಸಹ ವ್ಯಕ್ತಿ ಸಾಮಾನ್ಯವಾಗಿ ವಯಸ್ಸಿಗೆ ಬಂದು ಸಾಂಸಾರಿಕ ಜೀವನಕ್ಕೆ ಕಾಲಿಡುವಾಗ ಕೊಡುತ್ತಿದ್ದ ಅರಿವು. ಆದರೆ ಇಂದು ಮಕ್ಕಳಿಗೆ ಲೈಂಗಿಕ ಶಿಕ್ಷಣದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಾಲೆಯಲ್ಲಿ ಲಿಂಗಭೇದವಿಲ್ಲದೆ, ಮಾನವನ ಮಾನವನ ಸೂಕ್ಷ್ಮ ಅಂಗಾಂಗಗಳನ್ನು(ಪಠ್ಯ ಪುಸ್ತಕದ ಪ್ರಕಾರ) ವಿವರಿಸುತ್ತಾರೆ. ಮಕ್ಕಳು ಅದನ್ನು ಪ್ರಾಯೋಗಿಕವಾಗಿ ಸಾಮಾಜಿಕ ತಾಣಗಳಲ್ಲಿ ಅಭ್ಯಸಿಸುತ್ತಾರೆ ಹಾಗೂ ಪ್ರಾಯೋಗಿಕವಾಗಿ ಅದನ್ನು ಕೆಲ ಎಳೆಮನಸುಗಳು ಪಡೆಯಲು ಪ್ರಯತ್ನಿಸುತ್ತವೆ.
ಆ ಎಳೆಮನಸುಗಳ ಮನಸ್ಥಿತಿಯ ಬಗ್ಗೆ ಅವಲೋಕನ ಮಾಡುವುದಾದರೆ, ಒಂದು ಸಂಸ್ಕಾರದ ಕೊರತೆ, ಪೋಷಕರ ಜೊತೆ ಅತ್ಮೀಯತೆಯ ಅಭಾವ, ಶಿಕ್ಷಕರ ಸರಿಯಾದ ಮಾರ್ಗದರ್ಶನವಿಲ್ಲದಿರುವುದು, ನೆರೆಹೊರೆಯವರ ಸರಾಗವಾದ ಸಂಸ್ಕೃತಿ ಬೆಳೆಸುವ ಒಡನಾಟದ ಸೌಲಭ್ಯವಿಲ್ಲದಿರುವುದು. ಇದೆಲ್ಲದರ ಪರಿಣಾಮ ಶಾಲೆಯಲ್ಲಿ ಮಾಡಿದ ಲೈಂಗಿಕ ಶಿಕ್ಷಣದ ಬಗ್ಗೆ, ಸಾಮಾಜಿಕ ತಾಣಗಳಲ್ಲಿ ಹುಡುಕುವ ತಡಕಾಟದಲ್ಲಿರುತ್ತಾರೆ. ಹುಡುಕಿದ ನಂತರ ಅದರ ಅನುಭವಕ್ಕೆ ಆ ಮನಸುಗಳ ಸಹಜವಾಗಿಯೇ ಹಾತೊರೆಯುತ್ತವೆ. ಅದರ ಸರಿ-ತಪ್ಪುಗಳು ಗೊಂದಲದಲ್ಲಿರುವ ಪೋಷಕ ಮನಸ್ಸುಗಳಿಗೆ, ಮಕ್ಕಳ ಮುಂದಿನ ಸ್ಪರ್ಧಾತ್ಮಕ ಭವಿಷ್ಯದ ಬಗ್ಗೆ ಹೆಚ್ಚೆಚ್ಚು ಗಮನವೇ ಹೊರತು ಬೇರೆ ಕಡೆಗೆ ಗಮನ ಇಲ್ಲ. ನಗರಗಳಲ್ಲಿ ಮಧ್ಯಮ ಮತ್ತು ಮೇಲ್ದರ್ಜೆಯ ಕುಟುಂಬಗಳ ಕತೆ ಇದಾದರೆ, ಕೆಳ ವರ್ಗದವರ ಕುಟುಂಬದ ಮಕ್ಕಳು ಸರಿಯಾದ ವಿದ್ಯಾಭ್ಯಾಸದ ಮತ್ತು ತಿಳುವಳಿಕೆಯ ಅರಿವಿಲ್ಲದೆ, ದುಶ್ಚಟಗಳ ಕಡೆ ವಾಲುತ್ತಿರುವುದು.. ಇದೆಲ್ಲದರ ಪರಿಣಾಮವೇ ಬಾಲಾಪರಾಧಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಟಿವಿಯಲ್ಲಿ ತೋರಿಸಿದಂತೆ, 17 ವರುಷದ ಹುಡುಗ 9 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ, 15 ವರುಷದ ಹುಡುಗ 3 ವರುಷದ ಬಾಲಕಿಯನ್ನು ಅತ್ಯಾಚಾರ ಮಾಡಿದ, ವರದಿಯನ್ನು ನೋಡಿ ಮನಸ್ಸು ಮುದುಡುತ್ತದೆ.
ನಾವೆಲ್ಲ ಚಿಕ್ಕವರಿರುವಾಗ ಯಾವುದೇ ಲೈಂಗಿಕ ಶಿಕ್ಷಣವನ್ನು ನಮಗೆ ಕಲಿಸುತ್ತಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಗಂಡು-ಹೆಣ್ಣಿನ ಮದ್ಯೆ ಇರಬೇಕಾದ ಅಂತರವನ್ನು ಸಂಸ್ಕಾರಯುತವಾಗಿ ಹೇಳಿಕೊಡುತ್ತಿದ್ದರು. ಅದರ ಸಾಧಕ ಭಾದಕಗಳನ್ನು ತಿಳಿಸುತ್ತಿದ್ದರು. ಒಂದು ಹಂತದ ನಂತರ ಗಂಡು-ಹೆಣ್ಣು ಕಾಯ್ದುಕೊಳ್ಳಬೇಕಾದ ಮಿತಿಯನ್ನು ವಿವರಿಸುತ್ತಿದ್ದರು. ಅದು ದಿನಚರಿಗಳಲ್ಲಿಯೇ ಒಂದಾಗಿರುತ್ತಿತ್ತು. ಪೋಷಕರ ಈ ಶಿಕ್ಷಣವೇ ಸಾಕಾಗಿತ್ತು, ಒಂದು ಸಂಸ್ಕಾರಯುತ ವ್ಯಕ್ತಿಯಾಗಿ ಬೆಳೆಯಲು. ಅಲ್ಲಿ ಲೈಂಗಿಕ ಶಿಕ್ಷಣದ ಅವಶ್ಯಕತೆಯೇ ಇರಲಿಲ್ಲ. ಇನ್ನು ಶಾಲೆಯಲ್ಲಿ ನಮಗೆ ತಿಳಿಸುತ್ತಿದ್ದ ನೈತಿಕ ಮೌಲ್ಯಗಳು ಜೀವನದುದ್ದಕ್ಕೂ ಅಳವಡಿಸಿಕೊಳ್ಳುವ ಅಂಶಗಳು. ಆಗಿನ ಶಾಲಾ ವೇಳಾಪಟ್ಟಿಯು ಬೆಳಿಗ್ಗೆ 10 ರಿಂದ 5 ಸರಿಯಾಗಿರುತ್ತಿತ್ತು. ರಾತ್ರಿ ಸರಿಯಾದ ನಿದ್ದೆ, ಬೆಳಿಗ್ಗೆ ಅವಸರದಲ್ಲಿ ಏಳುವಂತಿಲ್ಲ, ಗಬಗಬನೆ ತಿನ್ನುವಂತಿಲ್ಲ, ಅವಸರದಲ್ಲಿ ಶಾಲೆಗೆ ಓಡುವಂತಿಲ್ಲ, ಹೊತ್ತಲ್ಲದ ಹೊತ್ತು ಮಧ್ಯಾಹ್ನ 3-30 ಕ್ಕೆ ಮನೆಗೆ ಬಂದು ಕೂರುವಂತಿಲ್ಲ. ಅದು ಊಟದ ಸಮಯವಲ್ಲದಿದ್ದರೂ ಮತ್ತೊಮ್ಮೆ ಮಕ್ಕಳು ಈಗ ಟಿವಿ ನೋಡುತ್ತಾ ಗಂಟೆಗಟ್ಟಲೇ ಊಟ ಮಾಡುವುದು ನಮ್ಮದಾಗಿರಲಿಲ್ಲ. ಅಲ್ಲದೇ ನಾವು ಸಂಜೆ ಬಂದ ಮೇಲೆ ಒಂದೆರೆಡು ಗಂಟೆ ಆಟವಾಡಿ ನಂತರ ಪಾಠ ಮುಗಿಸಿ, ಮನೆಯವರೆಲ್ಲ ಜೊತೆ ಊಟ ಮಾಡಿ ಹೊತ್ತಿಗೆ ಸರಿಯಾಗಿ ಮಲಗುತ್ತಿದ್ದುದು, ಈಗಿನ ಮಕ್ಕಳಿಗಿಲ್ಲ. ಹಾಗೆ ಒಟ್ಟು ಕುಂಟುಂಬಗಳಿಲ್ಲದೇ ಒಂಟಿ ಕುಟುಂಬಗಳಿರುವುದು, ಇದೆಲ್ಲದರ ಕೊರತೆಯ ಮದ್ಯೆ ಮಕ್ಕಳು ಬೆಳೆಯುತ್ತಿದ್ದಾರೆ. ಅದರ ಬಗ್ಗೆ ಚಿಂತಿಸಬೇಕಾದ ಮತ್ತು ಸರಿ ಮಾಡಬೇಕಾದ ಜವಾಬ್ದಾರಿ ಎಲ್ಲರದು. ಪೋಷಕರು, ನೆರೆಹೊರೆಯವರು, ಹಾಗೆ ಕುಟುಂಬದವರ ಜೊತೆಗೆ ಸರ್ಕಾರವೂ.
ಇತ್ತೀಚಿಗೆ ನಡೆಯುತ್ತಿರುವ ಈ ಸರಣಿ ಅತ್ಯಾಚಾರಗಳನ್ನು ನೋಡಿದರೆ ಉತ್ತರವಿಲ್ಲದ ದಿಗಿಲು ಕಾಡುತ್ತದೆ.
ತಂದೆ- ಮಗಳು ಎನ್ನದೇ, ಅಣ್ಣ-ತಂಗಿ ಎನ್ನದೇ, ಶಿಕ್ಷಕ-ಶಿಷ್ಯೆ ಎನ್ನದೇ, ಅಜ್ಜಿ- ಮೊಮ್ಮಗ ಎನ್ನದೇ, ಇಲ್ಲಿ ಯಾವುದೇ ಸಂಬಂಧಗಳಿಗೆ ಬೆಲೆ ಇಲ್ಲವೇ ಎಂಬ ಪ್ರಶ್ನೆ ಮನಸ್ಸಿನಲ್ಲಿ ಕಾಡುತ್ತದೆ. ಸ್ತ್ರೀ ಸೋದರಿಯಾಗಿ, ಮಗಳಾಗಿ, ಪತ್ನಿಯಾಗಿ, ಸೊಸೆಯಾಗಿ, ಮೊಮ್ಮಗಳಾಗಿ, ಸ್ನೇಹಿತಳಾಗಿ ತನ್ನ ಪಾತ್ರವನ್ನು ನಿರ್ವಹಿಸುತ್ತಿದ್ದಾಳೆ. ಭಾವನೆಗಳ ಅರ್ಥವಿಲ್ಲದ ಜೀವನಕ್ಕೊಂದು ಆಧುನಿಕತೆ, ಅಭಿವೃದ್ಧಿಯ ಪಥ, ಸಮಾನತೆ, ಸ್ವಾತಂತ್ರ್ಯ, ಸ್ವೇಚ್ಛೆ, ಇದೆಲ್ಲವನ್ನು ಮುಂದಿಟ್ಟುಕೊಂಡು ಸನ್ನಿ ಹಿಡಿದಂತೆ ಇತ್ತೀಚಿನ ದಿನಗಳಲ್ಲಿ ಅತ್ಯಾಚಾರಗಳು ಹೆಚ್ಚಾಗುತ್ತಿವೆ. ಅದಕ್ಕೆ ಕಾರಣಗಳು ಕಣ್ಣ ಮುಂದೆ ಇವೆ, ಆದರೆ ಅವುಗಳನ್ನು ನಾವು ಒಪ್ಪಲು ಸಿದ್ಧವಿಲ್ಲ.
ನಮ್ಮ ಜೀವನಶೈಲಿಯನ್ನು ಆಧುನಿಕತೆಗೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳುತ್ತಾ ಹೋದಂತೆ, ಈ ಎಲ್ಲ ಅವಘಡಗಳು ಘಟಿಸುತ್ತಾ ಹೋದವು. ತಂದೆ-ತಾಯಿಯ ದುಡಿಯುವ ಹುಚ್ಚು, ನಗರೀಕರಣ ಜೀವನದ ಆಸ್ಥೆ ಇವನ್ನೆಲ್ಲ ಪ್ರಶ್ನಿಸಿಕೊಳ್ಳದೇ ಲೈಂಗಿಕ ಶಿಕ್ಷಣದಲ್ಲಿ ಪರ್ಯಾಯ ಹುಡುಕುತ್ತಿದ್ದೇವೆ. ವಿಬ್ಗಯಾರ್ನಂತಹ ಶಾಲೆಗೆ 2 ಲಕ್ಷ ರು. ಕೊಟ್ಟು ಓದಿಸುವ ಹಾಗೂ ಮಕ್ಕಳಿಗೆ ಸ್ಪರ್ಧಾತ್ಮಕ ವಿದ್ಯಾಭ್ಯಾಸ ಕೊಡಿಸುವ ಹುಚ್ಚು, ನಮ್ಮ ಮಕ್ಕಳು ಐಸಿಎಸ್ಸಿ ಪಠ್ಯಕ್ರಮದಲ್ಲಿಯೇ ಓದಬೇಕು, ರಾಶಿ ರಾಶಿ ಪುಸ್ತಕಗಳನ್ನು ಕತ್ತೆಗಳಂತೆ ಬೆನ್ನಿಗೆ ಹಾಕಿಕೊಂಡು ಹೊರ ಪ್ರಪಂಚದ ಅರಿವಿಲ್ಲದೇ ಸಿಕ್ಕಾಪಟ್ಟೆ ತಲೆಗೆ ತುರುಕುವ ಖಯಾಲಿ. ಮಕ್ಕಳ ಮನಸ್ಸನ್ನು ಅರಿಯದೇ ತಮ್ಮದೇ ಇಷ್ಟದಂತೆ ಓದಬೇಕೆನ್ನುವ (ಅ)ವಿದ್ಯಾವಂತ ಅಪ್ಪ-ಅಮ್ಮರ ಹುಚ್ಚುತನ, ಬೇರೆ ಮಕ್ಕಳ ಜೊತೆ ಹೋಲಿಸಿ ತಮ್ಮ ಮಕ್ಕಳನ್ನೇ ಕೆಳಮಟ್ಟಕ್ಕಿಳಿಸುವ ವಿಕೃತ ಮನಸ್ಸಿನ ಪೋಷಕರು, ಮಕ್ಕಳ ಭವಿಷ್ಯದ ಹೆಸರಿನಲ್ಲಿ, ತಮ್ಮ ಮಕ್ಕಳ ಮೇಲೆ ದೌರ್ಜನ್ಯ ಎಸಗುವ ಇಂತಹದ್ದನ್ನು ನಿಲ್ಲಿಸಿದರೆ ಬಹುಶಃ ಅರ್ಧ ಸಮಸ್ಯೆಗಳು ಕಡಿಮೆಯಾಗುತ್ತವೆ.
ಈ ಎಲ್ಲ ವಿಷಯಗಳ ನಿಟ್ಟಿನಲ್ಲಿ ಯೋಚಿಸುವಾಗ ಎಲ್ಲ ಮುಖಗಳಿಂದಲೂ ಕೆಲವೊಂದು ಅಂಶಗಳ ಅಳವಡಿಕೆ ಪ್ರಸ್ತುತವೆನಿಸುತ್ತದೆ. ಈಗಿನ ಶಾಲೆಗಳಲ್ಲಿ ಮೌಲ್ಯಗಳ ಕಲಿಕೆಗಾಗಿ ಇರುವ ಸ್ಪಷ್ಟ ಆಯಾಮಗಳೇನು ಎಂಬ ಪ್ರಶ್ನೆ ಮೂಲಭೂತವೆನಿಸುತ್ತದೆ. ಶಿಕ್ಷಣದ ಒಟ್ಟಾರೆ ಆಶಯವೇ ಮೌಲ್ಯಗಳ ರೂಪಿಸುವಿಕೆ. ಆದರೆ ಈಗಿರುವ ಪದ್ಧತಿಯಂತೆ ಮೌಲ್ಯಗಳನ್ನು ಬೇರೆ ಬೇರೆ ತರಗತಿಗಳಿಗೆ ಪಟ್ಟಿ ಮಾಡಿ, ಬೋಧನೆಗೆ ಅವಧಿಗಳನ್ನು ನಿಗದಿಪಡಿಸಿ, ತರಗತಿಗಳಲ್ಲಿ ಈ ಮೌಲ್ಯ ಇಂಥದ್ದು ಎಂದು ಬೋಧಿಸುವ ಸನ್ನವೇಶ ಎಷ್ಟು ಸರಿ? ಮೌಲ್ಯಗಳು ಹಾಗೂ ಔಪಚಾರಿಕ ಶಾಲಾ ಶಿಕ್ಷಣ ಬೇರೆ ಬೇರೆಯಲ್ಲ. ಒಂದೇ ನಾಣ್ಯದ ಎರಡು ಮುಖಗಳ ಹಾಗೆ. ಒಟ್ಟಾರೆ ಶಿಕ್ಷಣದ ಪ್ರಭಾವವೇ ಮೌಲ್ಯಗಳ ಮೈಗೂಡಿಸಿಕೊಳ್ಳುವಿಕೆ. ಶಿಕ್ಷಕರು ಸಾಧನೆಯನ್ನು ಮಾಡುತ್ತಿದ್ದಲ್ಲಿ ಅವರು ಸಹಜವಾಗಿ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ಮೂಡಿಸಬಹುದು. ಪ್ರಾಚೀನ ಕಾಲದಲ್ಲಿದ್ದ ಶಿಕ್ಷಣ ಪದ್ಧತಿಯಲ್ಲಿ ಇದನ್ನು ನಾವು ನೋಡಬಹುದಾಗಿತ್ತು, ಆದರೆ ಈಗಿನ ಶಿಕ್ಷಣ ಪದ್ಧತಿಯು ಪಾಶ್ಚಾತ್ಯರ ವಿಚಾರಧಾರೆಯ ಮೇಲೆ ಆಧರಿಸಲಾಗಿದೆ.
ಪೋಷಕರೂ ಮಕ್ಕಳಲ್ಲಿ ಮೌಲ್ಯ ಬೆಳೆಸುವ ಬಗ್ಗೆ ರೂಪುರೇಷೆಗಳನ್ನು ಹೊಂದಿಲ್ಲ ಎಂಬುದು ಸ್ಪಷ್ಟ. ಶಾಲೆಗಳು ಸಹ ಮೌಲ್ಯಗಳ ರೂಪಿಸುವಿಕೆಯಲ್ಲಿ ತಂದೆ ತಾಯಿಗಳನ್ನು ಸಂಪರ್ಕಿಸುವ, ಮಕ್ಕಳ ಬಗ್ಗೆ ಮಾಹಿತಿ ನೀಡಿ ತಂದೆ ತಾಯಿಗಳನ್ನು ಕಾರ್ಯೋನ್ಮುಖ ಮಾಡುವಂತಹ ಪ್ರವೃತ್ತಿ ಬೆಳೆಸಲು ಸಾಧ್ಯವಾಗಿಲ್ಲ. ಪೋಷಕರು ಹಾಗೂ ಶಾಲೆಗಳ ನಡುವೆ ಆಪ್ತ ವಾತಾವರಣ ನಿರ್ಮಾಣ ಮಾಡುವ ಪ್ರಯತ್ನಗಳು (ಖಾಸಗಿ ಶಾಲೆಗಳಲ್ಲಿ ಇಲ್ಲವೇ ಇಲ್ಲ) ಬಹಳ ಕಡೆ ಸಫಲವಾಗಿಲ್ಲ. ಶಾಲೆಗಳಲ್ಲಿ ಜಿಮ್ ಇದೆಯೇ, ಈಜುಕೊಳವಿದೆಯೇ, ಕರಾಟೆ ಇದೆಯೇ ಎನ್ನುವುದಕ್ಕಿಂತ ಪಾಠಗಳ ಜೊತೆ ಸಾಂಸ್ಕೃತಿಕ ಹಿನ್ನಲೆ ವಾತಾವರಣ ಎಷ್ಟಿದೆ, ಅದರ ಭಾಗಗಳೇನು, ನಮ್ಮ ಮಗು ಪಾಠದ ಜೊತೆ ಜೊತೆಗೆ ವ್ಯಕ್ತಿತ್ವ ವಿಕಸನದ ಕಲಿಕೆಗೆ ಸಾಧ್ಯವಾಗುವಂತಹದ್ದು ಅಲ್ಲಿದೆಯೇ... ಇದೆಲ್ಲ ಪೋಷಕರು ಯೋಚಿಸಬೇಕು.
ಲೈಂಗಿಕ ಶಿಕ್ಷಣ ಶಾಲಾ ಮಕ್ಕಳ ನೈತಿಕ ಶಿಕ್ಷಣದ ಅವಿಭಾಜ್ಯ ಅಂತರ್ಗತ ಅಂಶವಾಗಬೇಕಿದೆ ಹೊರತು ಪ್ರತ್ಯೇಕ ಪಠ್ಯವಲ್ಲ. ಮನಶಾಸ್ತ್ರಜ್ಞರು, ಸಮಾಜಸೇವಕರು, ಶಿಕ್ಷಣ ತಜ್ಞರು ಮತ್ತು ಸರ್ಕಾರಗಳೂ ಒಂದಾಗಿ ಶಿಕ್ಷಣದಲ್ಲಿ ಹೊಸದು ಮತ್ತು ಹಳೆಯದರ ಒಂದುಗೂಡಿಸುವಂತೆ, ಹಳೆಯದರಲ್ಲಿ ಒಳ್ಳೆಯದನ್ನು ಉಳಿಸಿಕೊಂಡು ಬದಲಾಗುತ್ತಿರುವ ಸಮಾಜದ ಬೇಡಿಕೆಗೆ ಅವಶ್ಯಕತೆಗೆ ತಕ್ಕಂತೆ ವರ್ತಿಸಬೇಕಿದೆ. ಲೈಂಗಿಕ ಶಿಕ್ಷಣಕ್ಕೆ ಕುರಿತಂತೆ ಇರುವ ಬಹುದೊಡ್ಡ ಸಮಸ್ಯೆ ಎಂದರೆ ಅದನ್ನು ಕರೆಯುವ ರೀತಿಯೇ ಆಗಿದೆ. ಈ ಹೆಸರಿನಲ್ಲಿ ನಕಾರಾತ್ಮಕ ಭಾವ ಇದೆ. ಲೈಂಗಿಕ ಕ್ರಿಯೆ ಹೊಸ ಜನನಕ್ಕೆ ಪ್ರೇರಣೆ ನೀಡುವ ಕಾರಣಕ್ಕೆ, ಇದನ್ನು ಜೀವನ ಶಿಕ್ಷಣ ಎನ್ನಬಹುದು. ಮತ್ತು ಅದಕ್ಕೆ ತಕ್ಕಂತೆ ಬದಲಾವಣೆಯನ್ನು ಪಠ್ಯಕ್ರಮದಲ್ಲಿ ಮಾಡಬಹುದು.
ಹೆಣ್ಣೆಂದರೆ ಕೇವಲ ಕಾಮ ಕಣ್ಣಿಗೆ ಕಾಣಿಸುವ ವಿಕೃತ ಮನಸುಗಳಿಗೆ ಹೇಳಬಯಸುವುದಿಷ್ಟೇ, ವಚನಕಾರ ಜೇಡರದಾಸಿಮಯ್ಯ ಹೇಳಿದಂತೆ, ನಿಸರ್ಗ ಸಹಜವಾಗಿ ಹೆಣ್ಣು ಜೀವ ಹುಟ್ಟುತ್ತದೆ. ನಂತರ ಆ ಹೆಣ್ಣು ಜೀವವನ್ನು ಹಿಚುಕಿ ಹಿಚುಕಿ ಹೆಂಗಸಾಗಿಸುವುದಲ್ಲಿ ನಡೆಯುತ್ತದೆ. ಹುಟ್ಟುವ ಹೆಣ್ಣು ಜೀವ ಹೆಂಗಸಾಗುವುದೆಲ್ಲ ಜೈವಿಕ, ನೈಸರ್ಗಿಕ ಕಾರಣಗಳಿಗಾಗಿಯಲ್ಲ. ಸಾಮಾಜಿಕ, ಸಾಂಸ್ಕೃತಿಕ ಒತ್ತಡಗಳಿಂದ ಹೆಂಗಸಾಗುವುದರಿಂದ ನಿರಂತರ ಅನ್ಯಾಶ್ರಯದಲ್ಲಿ ಬದುಕುವುದೇ ಸುರಕ್ಷಿತವೆಂದು ನಂಬಿಸುತ್ತಾರೆ ಮತ್ತು ನಂಬುತ್ತಾಳೆ. ಜೈವಿಕ ಕಾರಣಕ್ಕಾಗಿ ಹೆಣ್ಣು ಲಿಂಗಿಯಾಗಿ ಹುಟ್ಟುವ ಜೀವ, ಸಮಾಜ ನಿರ್ದೇಶನ ನೀಡಿದ ಸ್ಥಾನದಲ್ಲಿಯೇ ಒಗ್ಗಿಕೊಂಡು ಬೆಳೆಯಬೇಕಾಗುತ್ತದೆ. ಇಂತಹ ಜೈವಿಕ ಸಂಗತಿಗಳನ್ನು ಅಂದೇ ಜೇಡರದಾಸಿಮಯ್ಯ ಅರ್ಥ ಮಾಡಿಕೊಂಡಿದ್ದ. ಆ ಕಾರಣಕ್ಕಾಗಿ ಅತ್ಯಂತ ವೈಜ್ಞಾನಿಕವಾದ ವಿಚಾರವನ್ನು ಧಾರ್ಮಿಕ ಪರಿಭಾಷೆಯಲ್ಲಿ ವೈಚಾರಿಕತೆಯನ್ನು ಮೈ ಗೂಡಿಸಿಕೊಂಡು ಹೇಳಿದ ಮಾತುಗಳು -
ಮೊಲೆ ಮೂಡಿ ಬಂದಡೆ ಹೆಣ್ಣೆಂಬರು
ಗಡ್ಡ ಮೀಸೆ ಬಂದಡೆ ಗಂಡೆಂಬರು
ನಡುವೆ ಸುಳಿವ ಆತ್ಮನು, ಹೆಣ್ಣೂ ಅಲ್ಲಿ ಗಂಡೂ ಅಲ್ಲಿ ಕಾಣಾ ರಾಮನಾಥ/
ಇಂಥ ಅರಿವುಗಳನ್ನು ಯುವ ಮನಸ್ಸಿಗೆ ಮುಟ್ಟಿಸುವಲ್ಲಿ ಶಿಕ್ಷಣ ಸಫಲವಾದರೆ ಅಲ್ಲಿ ಪ್ರತ್ಯೇಕ ಲೈಂಗಿಕ ಶಿಕ್ಷಣದ ಅವಶ್ಯ ಬೀಳದು.
- ಶೋಭಾ ಎಚ್.ಜಿ.
ಸಂಪಾದಕರು, ಸ್ತ್ರೀ ಜಾಗೃತಿ ಮಾಸಪತ್ರಿಕೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


