ಖಾಸಗಿ ಶಾಲೆಗಳ ನಿಯಂತ್ರಣಕ್ಕೆ ಕಾಯ್ದೆ ಬಿಗಿಗೊಳಿಸುವೆವು

ಖಾಸಗಿ ಶಿಕ್ಷಣ ಸಂಸ್ಥೆಗಳ ಬಗ್ಗೆ ಮೃಧು ಧೋರಣೆ ತಾಳುವ ಪ್ರಶ್ನೆಯಿಲ್ಲ. ಕರ್ನಾಟಕ ಶಿಕ್ಷಣ ಕಾಯ್ದೆ-1983ರಿಂದ ಹೊರಗಿರುವ ಐಸಿಎಸ್ಇ ಹಾಗೂ ಸಿಬಿಎಸ್ಇ ಶಾಲೆಗಳನ್ನು ಕಾಯ್ದೆ ವ್ಯಾಪ್ತಿಗೆ ತರುತ್ತೇವೆ ಎಂದಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ರಾಜ್ಯ ಸಚಿವ ಕಿಮ್ಮನೆ ರತ್ನಾಕರ ಅವರು ಶಿಕ್ಷಕರ ಅರ್ಹತಾ ಪರೀಕ್ಷೆ ವಿವಾದ ಕುರಿತಂತೆ ಸ್ಪಷ್ಟ ಉತ್ತರ ನೀಡಿಲ್ಲ.
ಶಾಲಾ ಸುರಕ್ಷೆಗೆ ಸಂಬಂಧಿಸಿ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಕಣ್ಣು ಮುಚ್ಚಾಲೆ ಆಟವೇಕೆ?
ಶಾಲೆಗಳಲ್ಲಿ ಮಕ್ಕಳ ಸುರಕ್ಷೆ ಸರ್ಕಾರದ ಆದ್ಯತೆಯಾಗಿದೆ. 2013ರಲ್ಲಿ ಸುತ್ತೋಲೆ ಹೊರಡಿಸಿರುವುದು ನಿಜ. ಆದರೆ ಮಗುವಿನ ಮೇಲಿನ ದೌರ್ಜನ್ಯದ ಬಳಿಕ ವಿಶೇಷ ನಿಗಾವಹಿಸಿ ಗೃಹ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಹೊಸ ಮಾರ್ಗಸೂಚಿ ಹೊರಡಿಸಲಾಗಿದೆ. 2013ರ ಜೂನ್ನಲ್ಲಿ ಹೊರಡಿಸಿದ್ದ ಸುತ್ತೋಲೆಯಲ್ಲಿ ಈಗಿನ ಸುತ್ತೋಲೆಯಲ್ಲಿರುವ ಎಲ್ಲ ಅಂಶಗಳಿರಲಿಲ್ಲ.
ಹಾಗಿದ್ದರೆ 2013ರ ಸುತ್ತೋಲೆಯಲ್ಲಿನ 20 ಅಂಶಗಳಲ್ಲಿ ಯಾವುದು ಜಾರಿಗೆ ಬಂದಿದೆ, ಸ್ಪಷ್ಟಪಡಿಸಿ?
ಹಂತಹಂತವಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಕೆಳ ಹಂತದ ಅಧಿಕಾರಿಗಳು ಅದನ್ನು ಸಮರ್ಪಕವಾಗಿ ಜಾರಿಗೆ ತಂದಿಲ್ಲ ನಿಜ. ಆದರೆ ದೂರು ಹಾಗೂ ಸಲಹೆಗಳಿಗಾಗಿ 1098 ಸಹಾಯವಾಣಿ ಆರಂಭಿಸಿದ್ದೇವೆ. ಇದಕ್ಕೆ ಪ್ರಚಾರದ ಕೊರತೆಯಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಶಾಲೆಗಳಲ್ಲಿ ಸಹಾಯವಾಣಿ ಸಂಖ್ಯೆ ಕಡ್ಡಾಯವಾಗಿ ಪ್ರದರ್ಶಿಸಲು ಸೂಚಿಸಿದ್ದೇನೆ. ಈ ಸುರಕ್ಷಾ ಮಾರ್ಗಸೂಚಿಗಳನ್ನು ಕರಪತ್ರ ಮಾಡಿ ಪ್ರತಿಯೊಬ್ಬ ವಿದ್ಯಾರ್ಥಿ ಹಾಗೂ ಪಾಲಕರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ. ಈ ಹಿಂದೆ ನಿರ್ಲಕ್ಷ್ಯ ಆಗಿರಬಹುದು. ಆದರೆ ಇನ್ನು ಕರಾರುವಕ್ಕಾಗಿ ಜಾರಿಗೆ ತರುತ್ತೇವೆ. ಸುತ್ತೋಲೆಯನ್ನು ನೆಪ ಮಾತ್ರಗೊಳಿಸುವುದಿಲ್ಲ.
ಸುತ್ತೋಲೆಯಲ್ಲಿನ ಮಾರ್ಗಸೂಚಿಗಳು ಎಲ್ಲ ಸರ್ಕಾರಿ ಶಾಲೆಗೂ ಅನ್ವಯಿಸುತ್ತೀರಾ? ಹೌದಾದರೆ ಅನುದಾನ ಹೇಗೆ ಸರಿದೂಗಿಸುತ್ತೀರಿ?
ಸಿಸಿಟಿವಿ ಅಳವಡಿಸುವಂತಹ ವಿಚಾರಗಳನ್ನು ಸರ್ಕಾರಿ ಶಾಲೆಗೆ ಅಳವಡಿಸುವುದು ಕಷ್ಟಸಾಧ್ಯದ ಕೆಲಸ. ಅಷ್ಟೊಂದು ಪ್ರಮಾಣದ ಹಣ ಹೊಂದಿಸುವುದು ಸರ್ಕಾರಕ್ಕೆ ಕಷ್ಟವಾಗುತ್ತದೆ. ಆದರೆ ಉಳಿದ ಸುರಕ್ಷಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಮುಂದಿನ 3 ತಿಂಗಳೊಳಗೆ ವರದಿ ನೀಡುವಂತೆ ಎಲ್ಲ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆದರೆ ಖಾಸಗಿ ಶಾಲೆಗಳು ಇದನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಸರ್ಕಾರ ಸೂಚಿಸಿರುವ ಮಾರ್ಗಸೂಚಿ ಅಳವಡಿಸಿಕೊಳ್ಳದಿದ್ದರೆ ಮಾನ್ಯತೆ ನವೀಕರಿಸುವಾಗ ತಡೆಹಿಡಿಯುತ್ತೇವೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಾನ್ಯತೆ ಹೊಸದಾಗಿ ಕೊಡುವಾಗ ಈ ಮಾರ್ಗಸೂಚಿ ಪಾಲನೆ ಬಗೆಗೂ ಗಂಭೀರ ಪರಿಶೀಲನೆ ಮಾಡುತ್ತೇವೆ.
ಮಾರ್ಗಸೂಚಿ ಅನುಷ್ಠಾನಕ್ಕೆ ಕಾಲಮಿತಿ ಅಳವಡಿಸದಿದ್ದರೆ, ಮತ್ತೊಂದು ಇಂತಹ ಅಮಾನವೀಯ ಪ್ರಕರಣ ನಡೆಯುವವರೆಗೂ ಇಲಾಖೆ ನಿದ್ದೆ ಮಾಡುತ್ತಿರುವುದಿಲ್ಲವೇ? ಸರ್ಕಾರಿ ಶಾಲೆಗಳಿಗೆ ಸಿಸಿಟಿವಿ ಕಡ್ಡಾಯವಿಲ್ಲ ಎಂದಾದರೆ ಖಾಸಗಿ ಶಾಲೆಗಳು ಸುಮ್ಮಿನಿರುತ್ತವೆಯೇ?
ಸರ್ಕಾರಿ ಶಾಲೆಗಳಲ್ಲಿರುವವರು ಸರ್ಕಾರಿ ಉದ್ಯೋಗಿಗಳಾಗಿರುತ್ತಾರೆ. ಅವರ ಮೇಲೆ ಸರ್ಕಾರದ ಹಿಡಿತವಿದೆ. ಆದರೆ ಖಾಸಗಿ ಶಾಲೆಯವರು ಈಗಾಗಿರುವ ಅವಮಾನ, ತಪ್ಪುಗಳ ನಿಯಂತ್ರಣಕ್ಕೆ ತಮ್ಮ ಮಾನ ಉಳಿಸಿಕೊಳ್ಳಲು ಅನಿವಾರ್ಯವಾಗಿ ಸಿಸಿಟಿವಿ ಅಳವಡಿಸಬೇಕಾಗುತ್ತದೆ. ಸಿಸಿಟಿವಿ ಅಳವಡಿಕೆಗೆ ಆರ್ಥಿಕ ವೆಚ್ಚವಾಗುವುದರಿಂದ ಸ್ವಲ್ಪ ಕಾಲಾವಕಾಶ ನೀಡಬಹುದು. ಆದರೆ ಉಳಿದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಕೂಡಲೇ ಜಾರಿಗೆ ತರಬೇಕು. ಇಲ್ಲವಾದಲಲ್ಲಿ ಸರ್ಕಾರ ಕಠಿಣವಾಗಿ ವರ್ತಿಸಬೇಕಾಗುತ್ತದೆ.
ವಿಬ್ಗ್ಯೊರ್ ಶಾಲೆಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾರ್ಥಿನಿಯನ್ನು ಕತ್ತಲೆ ಕೋಣೆಯಲ್ಲಿ ಕೂಡಿರುವಾಗ ದೌರ್ಜನ್ಯ ನಡೆದಿದೆ ಎಂದು ಗೃಹ ಸಚಿವರು ಲಿಖಿತ ಹೇಳಿಕೆ ನೀಡಿದ್ದಾರೆ. ಆದರೆ ಶಿಕ್ಷಣ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸದೇ ಕೇವಲ ಕರ್ನಾಟಕ ಶಿಕ್ಷಣ ಕಾಯಿದೆ ವ್ಯಾಪ್ತಿಯಲ್ಲಿ ನೋಟಿಸ್ ನೀಡಿರುವುದು ಎಷ್ಟರ ಮಟ್ಟಿಗೆ ಸಮಂಜಸ?
ಗೃಹ ಸಚಿವರು ಯಾವ ಕಾರಣದಿಂದ ಆ ರೀತಿಯ ಉತ್ತರ ನೀಡಿದ್ದಾರೆ ಎನ್ನುವುದು ಗೊತ್ತಿಲ್ಲ. ಇಂತಹ ವಿಚಾರಗಳು ನಮ್ಮೆದುರಿಗೆ ಬಂದಿಲ್ಲ. ಆದರೆ ಕರ್ನಾಟಕ ಶಿಕ್ಷಣ ಕಾಯಿದೆ ಮೂಲಕ ನೋಟಿಸ್ ನೀಡಿದ್ದರೂ ಶಾಲಾ ಆಡಳಿತ ಮಂಡಳಿ ಅಲ್ಲಿ ನಡೆದ ಎಲ್ಲ ಘಟನೆಗಳಿಗೆ ವಿವರಣೆ ನೀಡಬೇಕಾಗುತ್ತದೆ. ಪ್ರತಿಯೊಂದು ತಪ್ಪಿಗೂ ಪ್ರತ್ಯೇಕ ಕಾಯಿದೆ ಮೂಲಕ ನೋಟಿಸ್ ನೀಡುವ ಅಗತ್ಯವಿಲ್ಲ ಎಂದು ನಾವು ಭಾವಿಸಿದ್ದೇವೆ. ಉಳಿದ ಕಾನೂನು ವಿಚಾರಗಳನ್ನು ಪೊಲೀಸರು ನಿರ್ವಹಿಸುತ್ತಾರೆ.
ಇಂತಹ ಶಾಲೆಗಳ ಮೇಲೆ ಸರ್ಕಾರಕ್ಕೆ ನಿಯಂತ್ರಣವಿಲ್ಲ. ರಾಜ್ಯದ ನೆಲ, ಜಲ ಬಳಸಿಕೊಂಡು ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ ಎನ್ನುವುದು ಎಷ್ಟರ ಮಟ್ಟಿಗೆ ಸರಿ? ಇನ್ನೆಷ್ಟು ವರ್ಷಗಳ ಕಾಲ ಇಂತಹ ಅಸಂಬದ್ಧ ಕಾಯ್ದೆ ಮುಂದುವರಿಸಿಕೊಂಡು ಹೋಗುತ್ತೀರಿ?
ಯಾರೋ ಮಾಡಿದ ತಪ್ಪಿಗೆ ನಾವಿಂದು ಕಷ್ಟ ಪಡಬೇಕಿದೆ. ಯಾವ ಸಂದರ್ಭದಲ್ಲಿ ಸಿಬಿಎಸ್ಇ ಹಾಗೂ ಐಸಿಎಸ್ಇ ಶಾಲೆಗಳನ್ನು ಕರ್ನಾಟಕ ಶಿಕ್ಷಣ ಕಾಯಿದೆ-1983ರ ವ್ಯಾಪ್ತಿಯಿಂದ ಹೊರತೆಗೆದರೋ ತಿಳಿದಿಲ್ಲ. ಆದರೆ ಇದನ್ನು ಮರು ಪರಿಶೀಲಿಸಲೇಬೇಕಿದೆ. ಇಲ್ಲವಾದಲ್ಲಿ ಆ ಶಾಲೆಗಳ ಆವರಣಕ್ಕೆ ಇಲಾಖೆ ಅಧಿಕಾರಿಗಳು ಪ್ರವೇಶಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಯ್ದೆಯ ಪ್ರಯೋಜನ ಅವರಿಗೆ ಸಿಗುತ್ತಿರುವುದರಿಂದ ಇಲಾಖೆ ಅಸಹಾಯಕವಾಗಿರಬೇಕಿದೆ. ಆದರೆ ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯದಲ್ಲಿರುವ ಎಲ್ಲ ಶಿಕ್ಷಣ ಸಂಸ್ಥೆಗಳು 1983ರ ಕಾಯ್ದೆ ವ್ಯಾಪ್ತಿಗೆ ತರುತ್ತೇವೆ. ಸಿಬಿಎಸ್ಇ ಹಾಗೂ ಐಸಿಎಸ್ಇ ಶಿಕ್ಷಣ ಸಂಸ್ಥೆಗಳನ್ನು ನಮ್ಮ ನಿಯಂತ್ರಣಕ್ಕೆ ತಂದ ಬಳಿಕ ಇನ್ನಷ್ಟು ಬಿಗಿ ಮಾಡಬಹುದು. ಈಗಾಗಲೇ ಶಿಕ್ಷಣ ಹಕ್ಕು ಕಾಯಿದೆ ಪ್ರಕಾರ ಇವೆಲ್ಲ ರಾಜ್ಯ ಸರ್ಕಾರದ ನಿಯಂತ್ರಣಕ್ಕೆ ಬರುತ್ತವೆ. ಆದರೆ ನಮ್ಮದೇ ಮತ್ತೊಂದು ಕಾನೂನು ಅವರ ರಕ್ಷಣೆಗಿರುವುದು ಸಮಸ್ಯೆಯಾಗಿದೆ.
ಶಿಕ್ಷಕರ ಅರ್ಹತಾ ಪರೀಕ್ಷೆ ಕುರಿತಂತೆ ರಾಜ್ಯ ಸರ್ಕಾರ ಪ್ರತಿಷ್ಠೆ ಮಾಡುತ್ತಿದೆಯೇ?
ಇಲ್ಲ. ಇದರಲ್ಲಿ ಪ್ರತಿಷ್ಠೆಯ ಪ್ರಶ್ನೆ ಬರುವುದಿಲ್ಲ. ಮರು ಪರೀಕ್ಷೆ ನಡೆಸಿ ಎಂದು ಯಾವೊಬ್ಬ ಅಭ್ಯರ್ಥಿಯೂ ನನಗೆ ಅಥವಾ ಶಿಕ್ಷಣ ಇಲಾಖೆಗೆ ದೂರು ನೀಡಿಲ್ಲ. ನೀವು ಹೇಳುತ್ತಿರುವಂತೆ ಇದರಿಂದ ಪರೀಕ್ಷಾ ಪಾವಿತ್ರ್ಯಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ನನಗೆ ಅನ್ಯಾಯವಾಗಿದೆ ಎಂದು ಒಬ್ಬ ವಿದ್ಯಾರ್ಥಿಯೂ ಹೇಳದೆ, ಪ್ರಶ್ನೆ ಪತ್ರಿಕೆ ದೊಡ್ಡ ಪ್ರಮಾಣದಲ್ಲಿ ಸೋರಿಕೆಯಾಗಿರಬಹುದು ಎಂಬ ಅಂದಾಜಿನಲ್ಲಿ ಮರು ಪರೀಕ್ಷೆ ನಡೆಸುವುದು ಎಷ್ಟರ ಮಟ್ಟಿಗೆ ಸರಿ? ನಾಳೆ ಪರೀಕ್ಷೆ ನಡೆಸಿ ಈಗ 90 ಅಂಕ ಪಡೆದವರು ನಾಳೆ 30 ಪಡೆದರೆ ಅವರಿಗೆ ಮಾಡಿ ಅನ್ಯಾಯವಾಗುವುದಿಲ್ಲವೇ? ಅಕ್ರಮವಾಗಿರಬಹುದು ಎಂಬ ಅಂದಾಜಿನಲ್ಲಿ 3.70 ಲಕ್ಷ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಲಾಲು ಸಾಧ್ಯವಿಲ್ಲ. ಆದರೆ ದೊಡ್ಡ ಪ್ರಮಾಣದಲ್ಲಿ ಸೋರಿಕೆಯಾಗಿರುವುದು ಈಗಲೂ ಸಾಬೀತಾದರೆ ಮರು ಪರೀಕ್ಷೆ ನಡೆಸಲು ನಾವು ಬದ್ಧರಾಗಿದ್ದೇವೆ.
ಹಾಗಿದ್ದರೆ ಪರೀಕ್ಷಾ ಅಕ್ರಮದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ರಕ್ಷಿಸುತ್ತಿರುವುದೇಕೆ?
ನಾನು ಯಾವುದೇ ಅಧಿಕಾರಿಯನ್ನು ರಕ್ಷಿಸುತ್ತಿಲ್ಲ. ಇಲಾಖೆಯ ಯಾವುದೇ ಹಿರಿಯ ಅಧಿಕಾರಿ ಅಕ್ರಮದಲ್ಲಿ ಭಾಗಿಯಾದರೂ ನನ್ನ ಅನುಮತಿಯಿಲ್ಲದೇ ಜೈಲಿಗೆ ಹಾಕಿ ಎಂದು ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೆ. ಸಿಸಿಬಿ ಪೊಲೀಸರು ಇಲಾಖೆಗೆ ನೀಡಿದ ವರದಿಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ತಿಳಿಸಿಲ್ಲ. ಆದರೆ ಪತ್ರಿಕೆಗೆ ನೀಡಿರುವ ಹೇಳಿಕೆಯಲ್ಲಿ ನಿರ್ದೇಶಕರು ಭಾಗಿಯಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ನಾವು ಸರ್ಕಾರಕ್ಕೆ ಸಿಸಿಬಿ ಸಲ್ಲಿಸಿದ ವರದಿ ಆಧರಿಸಿ ಕಾರ್ಯನಿರ್ವಹಿಸಬೇಕಾಗುತ್ತದೆ. ಅದರಲ್ಲಿ ನಿರ್ದೇಶಕ ಅಥವಾ 500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸೋರಿಕೆಯಾಗಿದೆ ಎಂಬ ಅಂಶ ಪ್ರಸ್ತಾಪವಾಗಿಲ್ಲ. ಈಗಲೂ ಇಲಾಖೆ ಅಧಿಕಾರಿಗಳ ಬಗ್ಗೆ ಸಾಕ್ಷಿ ದೊರತರೆ ಕೂಡಲೇ ಅಮಾನತು ಮಾಡಿ ಕಠಿಣ ಕಾನೂನು ಶಿಕ್ಷೆ ಕೊಡಿಸುತ್ತೇವೆ. ಇದರಲ್ಲಿ ಯಾವುದೇ ಮುಲಾಜಿಲ್ಲ.
ಸಿಸಿಬಿ ಪೊಲೀಸರು ಹೊರಡಿಸಿದ ಅಧಿಕೃತ ಪತ್ರಿಕಾ ಪ್ರಕಟಣೆ ಹಾಗೂ ಇಲಾಖೆಗೆ ಸಲ್ಲಿಸಿದ ವರದಿಯಲ್ಲಿ ಬದಲಾವಣೆಯಾಗಲು ಕಾರಣವೇನು?
ಯಾವ ಕಾರಣದಿಂದ ಈ ಗೊಂದಲ ಸೃಷ್ಟಿಯಾಗಿದೆ, ನಿರ್ದೇಶಕರ ಹೆಸರು ಸೇರಲು ಹಾಗೂ ತಪ್ಪಲು ಕಾರಣ ಏನೆಂಬುದು ನನಗೆ ಗೊತ್ತಿಲ್ಲ. ಅದನ್ನು ಗೃಹ ಇಲಾಖೆ ಪರಿಶೀಲಿಸಬೇಕು. ಹೆಚ್ಚೆಂದರೆ ಇದಕ್ಕೆ ಸಂಬಂಧಿಸಿ ನಾನು ವಿವರಣೆ ಕೇಳಬಹುದು. ಆ ಕೆಲಸ ಮಾಡುತ್ತೇನೆ.
ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುತ್ತಿರುವ ಆರೋಪಿಗಳ ವಿರುದ್ಧ ಸರ್ಕಾರ ಕ್ರಮ ಜರುಗಿಸುವುದು ಯಾವಾಗ?
ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವವರನ್ನು ಗೂಂಡಾ ಕಾಯ್ದೆ ಮೂಲಕ ಬಂಧಿಸಲು ಚಿಂತಿಸಲಾಗಿದೆ. ಆದರೆ ಗೂಂಡಾ ಕಾಯ್ದೆಗೆ ತಿದ್ದುಪಡಿ ತರಬೇಕಿದೆ. ಈ ಸಂಬಂಧ ಮುಖ್ಯಮಂತ್ರಿ ಹಾಗೂ ಗೃಹ ಸಚಿವರೊಂದಿಗೆ ಚರ್ಚಿಸಿ ಆದಷ್ಟು ಬೇಗ ಕಾಯ್ದೆಗೆ ತಿದ್ದುಪಡಿ ತರುತ್ತೇವೆ. ಜತೆಗೆ ಪರೀಕ್ಷಾ ನೀತಿ ಸಂಹಿತಿ ಜಾರಿಗೆ ಸಂಬಂಧಿಸಿಯೂ ವಿಶೇಷ ಕಾನೂನು ರೂಪಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.
ಸಂಪುಟ ಪುನಾರಚನೆ ಸಂದರ್ಭದಲ್ಲಿ ನಿಮ್ಮನ್ನು ಕೈ ಬಿಡುತ್ತಾರೆ ಅಥವಾ ಇಲಾಖೆ ಬದಲಾಗುತ್ತದೆ ಎಂಬ ಮಾತಿದೆಯಲ್ಲ?
ನನಗೆ ಅನಿರೀಕ್ಷಿತವಾಗಿ ಇಂತಹದೊಂದು ದೊಡ್ಡ ಇಲಾಖೆ ಜವಾಬ್ದಾರಿ ದೊರೆತಿದೆ. ಪ್ರಾಮಾಣಿಕ ಹಾಗೂ ನನ್ನೆಲ್ಲ ಪ್ರಯತ್ನ ಹಾಕಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿದ್ದಷ್ಟು ದಿನ ಹೆಸರು ಉಳಿಸಿಕೊಂಡು ಕೆಲಸ ಮಾಡುತ್ತೇನೆ. ಆದರೆ ಸಂಪುಟ ವಿಸ್ತರಣೆ ಕುರಿತ ವಿಚಾರ ಮುಖ್ಯಮಂತ್ರಿ ಅವಗಾಹನೆಗೆ ಬಿಟ್ಟಿದ್ದು. ಸಚಿವನಾಗಿರಲಿ, ಶಾಸಕನಾಗಿರಲಿ ನನ್ನಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.
-ರಾಜೀವ ಹೆಗಡೆ, ಕನ್ನಡಪ್ರಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


