ಅಂಕಣಗಳು

ಮನುಸ್ಮೃತಿ ಎಂಬ ಕಲ್ಪಿತ ಧರ್ಮಗ್ರಂಥ

ಮನುಸ್ಮೃತಿ ಎಂಬ ಕಲ್ಪಿತ ಧರ್ಮಗ್ರಂಥ
Published On :

ಭಾರತೀಯ ಸಂಸ್ಕೃತಿಯ ಕುರಿತು ಹೇಯವಾಗಿ ಮಾತನಾಡುವವರಿಗೆ ಅದರಲ್ಲಿಯೂ ಪ್ರಗತಿಪರರಿಗೆ ಮನುಸ್ಮೃತಿ ಒಂದು ದೊಡ್ಡ ಆಧಾರ/ನೆಪವಾಗಿದೆ. ಇಡೀ ಸಮಾಜವನ್ನು ತನ್ನ ಸುಪರ್ದಿಯಲ್ಲಿ ಮನುಸ್ಮೃತಿ ಇಟ್ಟುಕೊಂಡಿದೆ ಎಂದು ಬಿಂಬಿಸುವ ಕಾರ್ಯದೊಂದಿಗೆ ಹಿಂದೂ ಸಮಾಜದ ಅವಹೇಳನ ಪ್ರಾರಂಭವಾಗುತ್ತದೆ. ಆದರೆ ಅವರ ಅವಹೇಳನಗಳಿಗೆ ಪುರಾವೆಯಾಗಿರುವ ವಿಷಯವೇ ಒಂದೊಮ್ಮೆ ಸುಳ್ಳಾಗಿದ್ದರೆ? ಇದನ್ನು ಅರ್ಥಮಾಡಿಕೊಳ್ಳಲು ಒಂದು ಉದಾಹರಣೆ ಸಹಿತವಾಗಿ ಮನುಸ್ಮೃತಿಯ ಸ್ಥಾನವನ್ನು ನೋಡೋಣ.
ಇತ್ತೀಚೆಗಷ್ಟೇ ಮುಳಬಾಗಿಲಿನ ಒಂದು ಪ್ರದೇಶದಲ್ಲಿ ಒಬ್ಬಾತ ಕುರಾನ್ ಅನ್ನು ಹರಿದು ಹಾಕಿದ್ದರಿಂದಾಗಿ ಜೀವಕಳೆದುಕೊಳ್ಳಬೇಕಾಯಿತು. ಈ ಘಟನೆಗೆ ಹಲವಾರು ಆಯಾಮಗಳಿವೆ. ಮಾನವ ಹಕ್ಕುಗಳ ಉಲ್ಲಂಘನೆ, ಧರ್ಮಗ್ರಂಥದ ಕುರಿತು ಗೌರವ ಹಾಗೂ ಅಸಭ್ಯ ವರ್ತನೆಗೆ ಜನರ ಪ್ರತಿಕ್ರಿಯೆ ಇವೆಲ್ಲವೂ ಚರ್ಚೆಗೆ ಒಳಗಾಗಬೇಕಾದ ವಿಷಯಗಳು ಎಂಬುದು ಸರಿಯಷ್ಟೆ. ಆದರೆ ಭಾರತೀಯ ಸಂಸ್ಕೃತಿಯಲ್ಲಿ ಬದುಕುತ್ತಿರುವ ನಮಗೆ ಮೇಲಿನ ಚರ್ಚಾಂಶಗಳಿಂದಾಚೆಗೆ ಆಸಕ್ತಿದಾಯಕವಾದ ಮತ್ತೊಂದು ಸಂಗತಿಯಿದೆ, ಅದರ ಕುರಿತು ನಾವು ಗಮನ ಹರಿಸಬೇಕಿದೆ. ಗ್ರಂಥಗಳನ್ನು ಹರಿದುಹಾಕಿದರೆ ಪ್ರತಿಯೊಂದು ಸಮುದಾಯದ ಪ್ರತಿಕ್ರಿಯೆ ಒಂದೇ ತೆರನಾಗಿ ಇರುತ್ತದೆಯೆ? ಪಾಶ್ಚಾತ್ಯ ರಾಷ್ಟ್ರದ ಇತಿಹಾಸವನ್ನು ತಿರುವಿ ಹಾಕಿದರೆ ಗೆಲಿಲಿಯೋ ಗೆಲಿಲಿ ಉದಾಹರಣೆಯು ಸ್ಪಷ್ಟವಾಗಿ ಕಂಡುಬರುತ್ತದೆ. ಬೈಬಲ್‌ನ ವಿಚಾರಧಾರೆಗೆ ತೀರಾ ವಿರುದ್ಧವಾಗಿ ವಿಜ್ಞಾನವನ್ನು ಬೆಳೆಸಿದ ಆತನೂ ಸಹ ಸಾವನ್ನಪ್ಪಬೇಕಾಯಿತು. ಇದು ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿಗಳ ಕಥೆ. ಇದಕ್ಕೆ ವಿರುದ್ಧವಾದ ಘಟನೆಯೊಂದು ಸುಮಾರು 6 ದಶಕಗಳ ಹಿಂದೆ ಭಾರತದಲ್ಲಿ ನಡೆಯಿತು. ಅದು ಮನುಸ್ಮೃತಿಯನ್ನುಸುಟ್ಟದ್ದು.
ಮನುಸ್ಮೃತಿ ಸುಟ್ಟಿದ್ದರ ಮತ್ತು ಕುರಾನ್‌ನ್ನು ಹರಿದುಹಾಕಿರುವುದರ ಉದ್ದೇಶಗಳಲ್ಲಿ ವ್ಯತ್ಯಾಸಗಳಿದ್ದಾಗ್ಯೂ ಇವೆರಡೂ ಘಟನೆಗಳು ಹುಟ್ಟುಹಾಕಿರುವ ಪ್ರತಿಕ್ರಿಯೆಗಳು ನಮ್ಮ ಆಸಕ್ತಿಯನ್ನು ಕೆರಳಿಸುತ್ತವೆ. ಡಾ.ಬಿ.ಆರ್. ಅಂಬೇಡ್ಕರ್‌ರವರು ಸಮಾಜ ಸುಧಾರಣೆಯ ಭಾಗವಾಗಿ, ಸಮಾನತೆಯ ಸಮಾಜವನ್ನು ಕಟ್ಟುವ ಉದ್ದೇಶದಿಂದ ಮನುಸ್ಮೃತಿಯನ್ನು ಸಾರ್ವಜನಿಕವಾಗಿ ಸುಟ್ಟುಹಾಕಿದರು. ಇಡೀ ಭಾರತೀಯ ಸಮಾಜದ ಕಾನೂನು ಗ್ರಂಥವೆಂದು ಹೇಳಲಾದ ಅದು ಶೋಷಣೆ ದಬ್ಬಾಳಿಕೆಗಳನ್ನು ಪೋಷಿಸುತ್ತಿದ್ದುದರಿಂದ ಅದನ್ನು ಸುಟ್ಟು ಹಾಕಿದ್ದಾಗಿ ಸಮರ್ಥನೆ ನೀಡಲಾಯಿತು. ಸಮಾಜ ಸುಧಾರಕರು ಒಂದಷ್ಟು ಜನ ಅದಕ್ಕೆ ಪೂರಕವಾಗಿ ನಿಂತಿದ್ದರೂ ಸಹ, ಇಡೀ ಸಮಾಜದ ಪ್ರತಿಕ್ರಿಯೆ ಮಾತ್ರ ಆಶ್ಚರ್ಯಕರವಾಗಿತ್ತು. ಮನುಸ್ಮೃತಿಯನ್ನು ಸುಟ್ಟದ್ದಕ್ಕಾಗಿ ಜನರಿಂದ ಯಾವುದೇ ಗಂಭೀರ ಪ್ರತಿಕ್ರಿಯೆ ಬರಲಿಲ್ಲ. ಅಂದಾಗಲಿ ಅಥವಾ ಇಂದಾಗಲಿ ಮನುಸ್ಮೃತಿಯನ್ನು ಸುಟ್ಟ ವಿಚಾರದ ಬಗ್ಗೆ ಯಾರೂ ಹೆಚ್ಚು ತಲೆಕೆಡಿಸಿಕೊಂಡಿಲ್ಲ ಅಥವಾ ಯೋಚಿಸುವುದೇ ಇಲ್ಲ. ಅದಕ್ಕೆ ಎರಡು ಕಾರಣಗಳನ್ನು ನೀಡಬಹುದು. 1. ಇಲ್ಲಿನ ಜನರು ಸಮಾಜ ಸುಧಾರಕರಿಂದ ಭಯಭೀತರಾಗಿದ್ದರು ಹಾಗಾಗಿ ವಿರೋಧಿಸಲಿಲ್ಲ. 2. ಮನುಸ್ಮೃತಿ ನಿಜವಾಗಿಯೂ ಅನ್ಯಾಯವನ್ನು ಬೆಳೆಸುತ್ತಿದ್ದ ಕಾರಣ ಅದು ಅನಗತ್ಯ ಎಂದು ಭಾವಿಸಿದರು. ಈ ಎರಡು ಕಾರಣಗಳು ಸಕಾರಣಗಳಾಗುವುದಿಲ್ಲ, ಏಕೆಂದರೆ ಸಮಾಜ ಸುಧಾರಕರಿಂದ ಜನರು ಭಯಭೀತರಾಗಿದ್ದರು ಎಂಬುದನ್ನು ಸಾಬೀತು ಪಡಿಸಲು ಸಾಧ್ಯವಿಲ್ಲ, ಅದಕ್ಕೆ ಯಾವುದೇ ಪುರಾವೆಗಳೂ ಇಲ್ಲ. ಹಾಗೆ ನೋಡಿದರೆ ಅಂಬೇಡ್ಕರ್‌ರವರ ಮೇಲೆಯೇ ಬೇರೆ ವಿಚಾರಗಳಿಗೆ ದಾಳಿ ನಡೆದಿದ್ದವು. ಇನ್ನು ಎರಡನೇ ಕಾರಣವೂ ಸಹ ಸಮಂಜಸವೆನಿಸುವುದಿಲ್ಲ. ಏಕೆಂದರೆ ಶತಮಾನಗಳಿಂದ ಕೇವಲ ಬ್ರಾಹ್ಮಣರು ಮಾತ್ರವೇ ಸಮಾಜದಲ್ಲಿ ಬದುಕುತ್ತಿಲ್ಲ, ಬದಲಿಗೆ ಹಲವಾರು ಸಮುದಾಯಗಳು ಬದುಕುತ್ತಿವೆ, ಮನುಸ್ಮೃತಿಅನ್ಯಾಯವನ್ನೇ ಪೋಷಿಸುತ್ತಿದ್ದರೆ ಅದನ್ನು ಯಾರೂ ಏಕೆ ವಿರೋಧಿಸಲಿಲ್ಲ? ಎನ್ನುವ ಉತ್ತರ ಸಿಗದ ಪ್ರಶ್ನೆ ಹಾಗೆಯೇ ಉಳಿದುಬಿಡುತ್ತದೆ. ಆದ್ದರಿಂದ ಅದನ್ನು ಸುಟ್ಟಾಗ ಜನರು ಏಕೆ ಸುಮ್ಮನಿದ್ದರು ಎಂಬುದಕ್ಕೆ ಉತ್ತರ ಅಗತ್ಯವಾಗಿದೆ.
ಇದಕ್ಕೆ ವ್ಯತಿರಿಕ್ತವಾಗಿ, ಇತ್ತೀಚೆಗೆ ಕುರಾನ್ ಅನ್ನು ಹರಿದು ಹಾಕಿದ್ದು ಉದ್ದೇಶಪೂರ್ವಕ ಕ್ರಿಯೆ ಅಲ್ಲ ಎಂಬುದನ್ನು ತೋರಿಸುತ್ತದೆ. ಈ ಘಟನೆಯಿಂದ ಜನರೇಕೆ ಉದ್ರಿಕ್ತರಾಗಿ ಒಬ್ಬ ವ್ಯಕ್ತಿಯನ್ನು ಕೊಲ್ಲುವ ಮಟ್ಟಕ್ಕೆ ಇಳಿದರು? ಅದೇ ಮನುಸ್ಮೃತಿಯನ್ನು ಸುಟ್ಟಾಗಲೂ ಜನರೇಕೆ ಸುಮ್ಮನಿದ್ದರು ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಂಡರೆ ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯ ಗೋಚರಿಸಬಹುದು.
ಕುರಾನ್ ಇಸ್ಲಾಂ ಧರ್ಮದ ಪವಿತ್ರಗ್ರಂಥ. ಧರ್ಮಗಳಿಗೆ ದೇವರು ನೀಡಿರುವ ಸಂದೇಶಗಳನ್ನು ಮೂರ್ತ ರೂಪಕ್ಕೆ ಇಳಿಸುವ ಕಾರ್ಯವನ್ನು ಧರ್ಮಗ್ರಂಥಗಳು ಮಾಡುತ್ತವೆ. ನಿಜ ಅರ್ಥದಲ್ಲಿ ಧರ್ಮಗಳಿಗೆ ಧರ್ಮಗ್ರಂಥಗಳೇ ಎಲ್ಲವೂ ಆಗಿರುತ್ತವೆ ಎಂದರೆ ಉತ್ಪ್ರೇಕ್ಷೆಯಾಗಲಾರದು. ಒಂದು  ಪಕ್ಷ ಅದಕ್ಕೆ ಯಾವುದೇ ರೀತಿಯ ಚ್ಯುತಿ ಬಂದರೆ ಆ ಧರ್ಮದ ಅನುಯಾಯಿಗಳು ಯಾವ ಮಾರ್ಗವನ್ನಾದರೂ ಅನುಸರಿಸಿ ಅದನ್ನು ರಕ್ಷಿಸಲು ಹವಣಿಸುತ್ತಾರೆ.
ಮನುಸ್ಮೃತಿಯನ್ನು ಸಾರ್ವಜನಿಕವಾಗಿ ಸುಟ್ಟಹಾಕಿದ ಹಲವು ದಶಕಗಳ ತರುವಾಯವೂ ಇಂದಿಗೂ ಅದನ್ನು ಸುಡಬೇಕು ಎಂದು ಬಹಿರಂಗವಾಗಿ ಹಲವಾರು ಚಿಂತಕರು ಬೊಬ್ಬೆಹಾಕುತ್ತಿರುವುದನ್ನು ನಾವು ಕೇಳುತ್ತಿರುತ್ತೇವೆ. ಹಿಂದುಗಳ ಈ ಧರ್ಮಗ್ರಂಥವನ್ನು ನಾಶಪಡಿಸಬೇಕೆಂದು ಹಲವರು ಹೇಳುತ್ತಿದ್ದರೂ ಅದು ತಮಗೆ ಸಂಬಂಧಪಡದ ಹೇಳಿಕೆ ಎಂಬಂತೆ ಜನಸಾಮಾನ್ಯರು ಇರುವುದು ನೋಡಿದರೆ ಇದು ಕುರಾನ್ ಅಥವಾ ಬೈಬಲ್‌ನಂತಹ ಗ್ರಂಥವಲ್ಲ ಎಂಬುದು ವೇದ್ಯವಾಗುತ್ತದೆ. ಬಾಲಗಂಗಾಧರ ತಿಲಕರು ಹಿಂದುತ್ವ ಧರ್ಮವಲ್ಲ ಮತ್ತು ಅಂತಹ ವಿದ್ಯಮಾನ ಅಸ್ತಿತ್ವದಲ್ಲಿಯೂ ಇಲ್ಲ ಎಂಬ ವಾದಕ್ಕೆ ಈ ವರ್ತನೆ ಮತ್ತಷ್ಟು ಪುಷ್ಠಿ ನೀಡುತ್ತದೆ ಎಂದರೆ ತಪ್ಪಾಗಲಾರದು.
ಆದರೂ ಮನುಸ್ಮೃತಿಯನ್ನು ಏಕೆ ಸುಡಲಾಯಿತು?
ಪಾಶ್ಚಾತ್ಯರು, ಅದರಲ್ಲಿಯೂ ವಿಲಿಯಂ ಜೋನ್ಸ್‌ಭಾರತದ ಕಾನೂನು ಗ್ರಂಥವನ್ನು ಕ್ರೋಢೀಕರಿಸುವ ಕಾರ್ಯವನ್ನು ಪ್ರಾರಂಭಿಸಿದರು. ಕ್ರೈಸ್ತ ಧರ್ಮದ ಮಡಿಲಲ್ಲಿ ಜನ್ಮತಾಳಿದ ಪಾಶ್ಚಾತ್ಯ ಸಂಸ್ಕೃತಿಯ ಜನರು ಇತರ ಸಂಸ್ಕೃತಿಗಳನ್ನು ಸಂಧಿಸಿದಾಗ ತಮ್ಮ ಕನ್ನಡಕದಲ್ಲಿಯೇ (ಹಿನ್ನೆಲೆಯಲ್ಲಿ) ಇತರರನ್ನು ನೋಡಿ ಅರ್ಥಮಾಡಿಕೊಂಡರು. ಹೀಗಾಗಿ ಪ್ರತಿಯೊಂದು ಸಮಾಜವೂ ಸಮುದಾಯವನ್ನು ನಿರ್ದೇಶಿಸುವ ಗ್ರಂಥವನ್ನು ಹೊಂದಿರುತ್ತದೆ ಎಂಬ ನಂಬಿಕೆಯಿಂದ ಭಾರತದಲ್ಲಿಯೂ ಅದರ ಶೋಧ ನಡೆಸಿದರು. ಅವರಿಗೆ ಏಕಸ್ಥವಾದ ಮತ್ತು ಒಂದೆಡೆ ದೊರಕಬಹುದಾದ ಗ್ರಂಥವು ಸಿಗಲಿಲ್ಲ. ಕೆಲವು ಭಾರತೀಯರು ವೇದಗಳನ್ನು ತೋರಿಸಿದರೆ ಮತ್ತೆ ಕೆಲವರು ರಾಮಾಯಣ, ಮಹಾಭಾರತ ಹಾಗೂ ಅವರಿಗೆ ತೋಚಿದ ಕೃತಿಗಳನ್ನು ಸೂಚಿಸಲು ಪ್ರಾರಂಭಿಸಿದರು. ಇದರಿಂದ ಬೇಸತ್ತ ಪಾಶ್ಚಾತ್ಯರು ಭಾರತದ ಕಾನೂನಿನ ಗ್ರಂಥವನ್ನು ತಾವೇ ಕ್ರೋಢೀಕರಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಇದರ ಪರಿಣಾಮವಾಗಿಯೇ ಮನುಸ್ಮೃತಿಯೆಂಬ ಅಪ್ಪಟ ಕ್ರೋಢೀಕೃತ ಕಾನೂನು ಗ್ರಂಥವನ್ನು ಬೆಳಕಿಗೆ ತರಲಾಯಿತು. ಆದರೆ ಅದು ನಿಜವಾಗಿಯೂ ಭಾರತೀಯರ ಪವಿತ್ರಗ್ರಂಥವೇ? ಅರ್ಥಾತ್ ಜನರ ಬದುಕನ್ನು ನಿರ್ದೇಶಿಸುವ ಗ್ರಂಥವೆ? ಈ ಪ್ರಶ್ನೆಗೆ ಇದುವರೆಗೂ ಯಾರೂ ಸಹ ಸಕಾರಾತ್ಮಕ ಉತ್ತರ ನೀಡಿಲ್ಲ.
ಹಿಂದೂಯಿಸಂ ಎಂಬುದು ಧರ್ಮವಲ್ಲ ಎಂದು ಭಾವಿಸಿದರೆ, ಮನುಸ್ಮೃತಿಯಾಗಲಿ ಅಥವಾ ಧರ್ಮಗ್ರಂಥಗಳು ಎಂದು ಪರಿಭಾವಿಸಲಾಗುವ ಕೃತಿಗಳಾಗಲಿ ಯಾವುದೇ ಅಸ್ತಿತ್ವನ್ನು ಪಡೆಯುವುದಿಲ್ಲ. ಏಕೆಂದರೆ ಧರ್ಮಕ್ಕೆ ಮಾತ್ರವೇ ದೈವವಾಣಿಯನ್ನು ಹಿಡಿದಿಟ್ಟಿರುವ ಮತ್ತು ಜನರನ್ನು ನಿಯಂತ್ರಿಸುವ ಪಠ್ಯ ಬೇಕಾಗುತ್ತದೆ. ಅಂತಹ ಕೆಲಸವನ್ನು ಬೈಬಲ್ ಮತ್ತು ಕುರಾನ್‌ಗಳು ಆಯಾ ಸಮುದಾಯಗಳಿಗೆ ಮಾಡುತ್ತಾ ಬಂದಿವೆ. ಮನುಸ್ಮೃತಿಯಂತಹ ಗ್ರಂಥಗಳಿದ್ದರೂ ಅವು ಜನರನ್ನು ನಿರ್ದೇಶಿಸುವ ಧರ್ಮಗ್ರಂಥವಾಗಿರಲಿಕ್ಕೆ ಸಾಧ್ಯವೇ ಇಲ್ಲ. ಆದ್ದರಿಂದಲೇ ಮನುಸ್ಮೃತಿಯನ್ನು ಸಾರ್ವಜನಿಕವಾಗಿ ದಹಿಸಿದರೂ ಸಹ ನಮ್ಮದಲ್ಲ ಎನ್ನುವಂತೆಯೇ ಜನರು ಅದನ್ನು ನೋಡಿದರು.
ಇನ್ನು ಮನುಸ್ಮೃಯನ್ನನ್ನುಸರಿಸಿ ಯಾವ ಸಮುದಾಯಗಳು ಜೀವನ ನಡೆಸುತ್ತವೆ? ಅದು ಯಾರಿಗೆ ಧರ್ಮಗ್ರಂಥ? ಅದು ಬ್ರಾಹ್ಮಣರಿಗೆ ಸಂಬಂಧಪಟ್ಟದ್ದು ಎಂದರೆ ತಪ್ಪಾಗುತ್ತದೆ. ಏಕೆಂದರೆ ಬಹುತೇಕ ಬ್ರಾಹ್ಮಣರು ಅದರ ಹೆಸರನ್ನೂ ಕೇಳಿಲ್ಲ, ಕೇಳಿದವರಿಗೂ ಅದರಲ್ಲೇನಿದೆ ಎಂಬುದು ತಿಳಿದಿಲ್ಲ. ಇದೆಲ್ಲವನ್ನೂ ಗಮನಿಸಿದಾಗ, ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಂ ಪಂಥಗಳು ಪವಿತ್ರಗ್ರಂಥದ ವಿಷಯ ಬಂದಾಗ ಅಷ್ಟು ಕಠೋರವಾದ ನಿರ್ಧಾರವನ್ನು ಹೇಗೆ ಕೈಗೊಳ್ಳುತ್ತವೆ ಎನ್ನುವುದು ಅರ್ಥವಾಗುತ್ತದೆ. 

- ಡಾ. ಸಂತೋಷ್‌ಕುಮಾರ್ ಪಿ.ಕೆ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶಿವಮೊಗ್ಗ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.