ಮೈಸೂರನ್ನು ಪ್ಯಾರಿಸ್ ಮಾಡಬೇಕೆಂದರೆ ಕಡೆಯಪಕ್ಷ ರು. 10 ಸಾವಿರ ಕೋಟಿ ತನ್ನಿ

ಮಾನ್ಯ ಸಂಸದ ಪ್ರತಾಪ್ ಸಿಂಹ ಅವರೇ, ಹೇಗಿದ್ದೀರಿ? ಕುಶಲವೇ? ಕ್ಷೇಮವೇ? ಎಲ್ಲಿದ್ದೀರಿ? ಪತ್ರಿಕೆಯ ಮೂಲಕ ತಾವು ನನ್ನನ್ನು ಲೇವಡಿ ಮಾಡಿದ್ದೀರಿ. ಹಾಗಾಗಿ ತಾವು ಪತ್ರಿಕೆಯಲ್ಲೇ ನನ್ನ ಬಹಿರಂಗ ಪತ್ರವನ್ನು ಓದಬೇಕು ಎಂಬುದು ನನ್ನ ಅಪೇಕ್ಷೆ. ನೋಡಿ, ಈ ಚುನಾವಣೆಯ ಫಲಿತಾಂಶದಿಂದ ನನ್ನ ಅಧಿಕಾರದ ವ್ಯಾಪ್ತಿಗೆ ಧಕ್ಕೆಯಾಯಿತೇ ವಿನಃ ನನ್ನ ವ್ಯಕ್ತಿತ್ವಕ್ಕೇನಲ್ಲ. ನನ್ನ ಹೆಸರಿನ ಹಿಂದಿನ ವಿಶೇಷತೆಯಾಗಿದ್ದ 'ಸಂಸದ', ಈಗ ಇನ್ನೂ ತೂಕ ಪಡೆದು 'ಮಾಜಿ ಸಂಸದ' ಆಗಿದೆ. ತಮಗೆ ತಿಳಿದ ಹಾಗೆ, ಇಂತಹ ಹಲವು ಸ್ಥಿತ್ಯಂತರಗಳನ್ನು ಹಾಯ್ದು ಬಂದವನು ನಾನು. ಕಳೆದ ನಾಲ್ಕು ದಶಕಗಳಲ್ಲಿ ನಾನು ಎದುರಿಸಿದ ಹತ್ತನೇ ಚುನಾವಣೆ ಇದು, ಮೊದಲನೆಯದ್ದೇನಲ್ಲ. ಗೆಲುವಿನ ಗರ್ವ, ಸೋಲಿನ ಸಂತಾಪ ಇವೆರಡನ್ನೂ ಆಸ್ವಾದಿಸುವ ಕಲೆ ನನಗೆ ಜನರಿಂದ ಸಿದ್ಧಿಯಾಗಿದೆ. ಸೋಲನ್ನು ಘನತೆಯಿಂದ, ಎದುರಾಳಿಯನ್ನು ಗೌರವದಿಂದ ಕಾಣುವುದನ್ನು ನಾನೀಗ ಹೊಸದಾಗಿ ಕಲಿಯಬೇಕಾಗಿಲ್ಲ. ಸೋಲಲಿ ಗೆಲ್ಲಲಿ ವಿಶ್ವನಾಥ ಸದ್ದಿಲ್ಲದೇ ಇರುವವನಲ್ಲ. ಇದು ನಿಮಗೂ ಗೊತ್ತು. ನಾನು ಮಾಡುವ ಕೆಲಸ ಜನರಿಗೆ ಗೊತ್ತಾಗಲೆಂದೇ ಸದ್ದು ಮಾಡುತ್ತೇನೆ. ಹಾಗೆಯೇ, ಕೆಲಸ ಮಾಡದೇ ಬರಿಯ ಸದ್ದುಗಳನ್ನೇ ಸತ್ಯ ಎಂದು ಮತದಾರರನ್ನು ವಂಚಿಸಲಾರೆ. ಕೆಲವರು ತಮ್ಮ ಸ್ವಾರ್ಥಗಳನ್ನು ಸಾಕಾರಗೊಳಿಸಲು ಸದ್ದು ಮಾಡದೇ ಇರಬೇಕಾಗುತ್ತದೆ. ನನಗಂತಹ ಜರೂರತ್ತಿಲ್ಲ ಬಿಡಿ.
ಕಳೆದ ಐದು ವರ್ಷಗಳಲ್ಲಿ ಮೈಸೂರಿನಿಂದ ದೇಶದ, ರಾಜ್ಯದ ವಿವಿಧ ಭಾಗಗಳಿಗೆ ಹದಿನಾಲ್ಕು ರೈಲುಗಳನ್ನು ಹಾಕಲಾಗಿದೆ. ಮೈಸೂರು-ವಾರಾಣಸಿ ರೈಲು ಸಹ ಹಿಂದಿನ ರೈಲು ಮಂತ್ರಿ ಮಲ್ಲಿಕಾರ್ಜುನ ಖರ್ಗೆಯವರ ಕೊಡುಗೆ. ಮೈಸೂರು-ಬೆಂಗಳೂರು ಜೋಡಿ ರೈಲು ರಸ್ತೆಗೆ ತಡೆಯಾಗಿದ್ದು ಶ್ರೀರಂಗಪಟ್ಟಣದ ಬಳಿಯ ಟಿಪ್ಪು ಶಸ್ತ್ರಾಗಾರವನ್ನು ಸ್ಥಳಾಂತರಿಸಲು ನ್ಯಾಷನಲ್ ಆರ್ಕಿಯಾಲಜಿಕಲ್ ಡಿಪಾರ್ಟ್ಮೆಂಟಿನಿಂದ ಕ್ಲಿಯರೆನ್ಸ್ ಕೊಡಿಸಿ ಆಗಿದೆ. ಈಗ ಜೋಡಿ ರಸ್ತೆ ಸುಗಮವಾಗಿ ಆಗುತ್ತದೆ. ಮೈಸೂರು -ಕುಶಾಲನಗರ ರೈಲಿಗಾಗಿ ಸಾಕಷ್ಟು ಶ್ರಮ ವಹಿಸಿ; ಸರ್ವೇ ಕಾರ್ಯ ಮತ್ತು ರಾಜ್ಯ ಸರ್ಕಾರದ ಆರ್ಥಿಕ ನೆರವಿನ ಒಪ್ಪಿಗೆ ಮುಂತಾಗಿ ಮುಗಿದಿದ್ದು ಆಖೈರು ಒಪ್ಪಿಗೆಗೆ ರೈಲ್ವೆ ಮಂಡಳಿಯ ಮುಂದಿದೆ.
ಬಜೆಟ್ನಲ್ಲಿ ಮೈಸೂರನ್ನೂ ಸೇರಿದಂತೆ ಇತರ ಒಟ್ಟು ಹನ್ನೆರಡು ನಗರಗಳನ್ನೊಳಗೊಂಡು ಟೆಕ್ಸ್ಟೈಲ್ಸ್ ಮೆಗಾ ಕ್ಲಸ್ಟರ್ಗೆ ಕೊಟ್ಟಿರುವ 200 ಕೋಟಿಯಲ್ಲಿ ನಮಗೆ ಸಿಗುವ ಹಣ ಬಹಳ ನಿರಾಶಾದಾಯಕವಾಗಿದೆ. ಹೇಳಿಕೊಳ್ಳುವಂಥದ್ದೇನಲ್ಲ.
ಯುಪಿಎ-1 ಮತ್ತು 2 ಮೈಸೂರು ನರ್ಮ್ ಯೋಜನೆಗೆ ಒಟ್ಟು 129612922588 ಕೋಟಿ ಕೊಟ್ಟಿದೆ. ಆದರೆ ಈಗ ನಿಮ್ಮ ಸರ್ಕಾರ ನಮ್ಮ ಯೋಜನೆಯನ್ನು ನಿರ್ಲಕ್ಷಿಸಿ ಕೇವಲ 70 ಕೋಟಿ ಹಣ ಮಾತ್ರ ಮೈಸೂರು ನಗರಕ್ಕೆ ಕೊಡಮಾಡುವ ಸುದ್ದಿಯಿದೆ. ಈ ಹಣ ನಮ್ಮ ನಗರಕ್ಕೆ ಡಸ್ಟ್ಬಿನ್ಗಳನ್ನು ಕೊಳ್ಳಲೂ ಸಹ ಸಾಕಾಗುವುದಿಲ್ಲ ಎಂಬ ಸತ್ಯ ನಿಮಗೂ ತಿಳಿದಿದೆ. ಇದಲ್ಲದೇ ಸಿದ್ದರಾಮಯ್ಯನವರ ಸರಕಾರ ಮೈಸೂರು ನಗರದ ಮೂಲಭೂತ ಸೌಲಭ್ಯಕ್ಕೆ ಮುನ್ನೂರು ಕೋಟಿ ಕೊಟ್ಟಿದೆ. ಈ ಹಿಂದೆಯೂ ಯಡಿಯೂರಪ್ಪನವರು ಸಹಕರಿಸಿದ್ದಾರೆ. ಮೈಸೂರು ನಗರದ ಕುಡಿಯುವ ನೀರಿಗೆ, ಐದುನೂರು ಸಾರಿಗೆ ಬಸ್ಸುಗಳಿಗೆ, ಕೊಳಚೆ ನಿರ್ಮೂಲನೆಗೆ, ಬಡವರ ಮನೆಗಳಿಗೆ, ಇಡೀ ನಗರವನ್ನು ಸೋಲಾರ್ ಸಿಟಿ ಮಾಡಲು, ಐತಿಹಾಸಿಕ ಮೈಸೂರು ವಿಶ್ವವಿದ್ಯಾಲಯದ ಪುನಶ್ಚೇತನಕ್ಕೆ, ಪ್ರವಾಸೋದ್ಯಮಕ್ಕೆ, ಬಡತನದ ನಿರ್ಮೂಲನಾ ಕಾರ್ಯಕ್ರಮಕ್ಕೆ, ನಗರದ ಮೂಲಭೂತ ಸೌಕರ್ಯಕ್ಕೆ, ಬಸ್ ಸ್ಟ್ಯಾಂಡ್ಗಳ ನಿರ್ಮಾಣಕ್ಕೆ ಮುಂತಾಗಿ ಸಾವಿರಾರು ಕೋಟಿ ರುಪಾಯಿಗಳನ್ನು ಹಿಂದಿನ ಯುಪಿಎ ಸರ್ಕಾರದಿಂದ ಬಿಡುಗಡೆಗೊಳಿಸಿದ್ದೇವೆ.
ಇಷ್ಟಾದರೂ ಮತದಾರರು ಯುಪಿಎ ಸರ್ಕಾರವನ್ನು ತಿರಸ್ಕರಿಸಿದರು. ಮೈಸೂರನ್ನು ಪ್ಯಾರಿಸ್ನಂತೆ ಅಭಿವೃದ್ಧಿಪಡಿಸಲು ಹೊರಟಿರುವ ತಮ್ಮ ಸರ್ಕಾರ ಕೇವಲ ಕೈಬೆರಳಿನ ಕೋಟಿಯಷ್ಟು ಕೊಟ್ಟಿದ್ದು ಹೇಗೆ?
ಇನ್ನು, ಸಂಸದರಾದ ನಂತರ ನೀವು ಬೆಳಗ್ಗೆ 10 ರಿಂದ ಐದರತನಕ... ಅಬ್ಬಬ್ಬಾ! ಇಷ್ಟು ದೀರ್ಘ ಗಂಟೆಗಳ ಸೇವೆಗೆ ಮುಂದಾಗಿದ್ದು ಸಂತೋಷ. ಆದರೆ ನಾನು ಹೀಗೆ ಮಾಡಿದವನಲ್ಲ. ಕಳೆದ ನಲವತ್ತು ವರ್ಷಗಳಿಂದ ಗಡಿಯಾರದ, ದಿನರಾತ್ರಿಗಳ ಹಂಗಿಲ್ಲದೇ ನನ್ನನ್ನು ನಾನೇ ಸಾರ್ವಜನಿಕ ಸೇವೆಗೆ ಒಡ್ಡಿಕೊಂಡಿರುವವನು.
ನನ್ನ ಮಗನಿಗೆ ಬುದ್ಧಿ ಹೇಳುವಂತೆ ತಾವು ಅಪ್ಪಣೆ ಕೊಡಿಸಿದ್ದೀರಿ. ಅದು ಸರಿ. ಮಗ ಮಾಡಿದ್ದೆಲ್ಲಾ ಸರಿ ಎಂದು ಹೇಳುವ ಬುದ್ಧಿಗೇಡಿ ನಾನಲ್ಲ. ಅವನು ತಪ್ಪು ಮಾಡಿದ್ದರೆ ಈ ನೆಲದ ಕಾನೂನು ಅವನನ್ನು ಶಿಕ್ಷಿಸಲು ಸಮರ್ಥವಾಗಿದೆ. ಇದರಲ್ಲಿ ನನ್ನ ಹಸ್ತಕ್ಷೇಪ ಇರುವುದಿಲ್ಲ.
ಇನ್ನು ನನ್ನ ಹೆಸರಿನ ವಿಚಾರ. ಎಲ್ಲರೂ ಅವರವರ ಹೆಸರಿನಂತಿರಲು ಸಾಧ್ಯವಿಲ್ಲ ಬಿಡಿ. ತಾವು ಹೇಳುವುದು ನಿಜ. ನಾನೆಂದೂ ಪ್ಯಾರಿಸ್ಗೆ ಹೋದವನಲ್ಲ. ಹಾಗಾಗಿ ನಾನು ಪ್ಯಾರಿಸ್ನ ಪೂರ್ತಿ ವಿವರಗಳನ್ನು ತಿಳಿಯದೇ ಹಾಗೆ ಹೇಳಿದ್ದು ತಪ್ಪೇನೋ? ನಾನು ಪ್ಯಾರಿಸ್ಗೆ ಭೇಟಿ ಕೊಟ್ಟಿಲ್ಲದ ಮೇಲೆ ಅಲ್ಲಿನ ಮೂಲ ಆದಾಯವನ್ನು ಹೆಚ್ಚಿಸಿಲ್ಲ ಎಂದು ನಿಮಗೀಗಾಗಲೇ ಮನವರಿಕೆಯಾಗಿರಬಹುದು. ಪ್ಯಾರಿಸ್ ಅಂದರೆ ಉತ್ಸಾಹ, ಪ್ಯಾಷನ್, ಫ್ರೆಂಚ್- ಕ್ರಾಂತಿ ಹೀಗೆ ಅದರ ಜೊತೆ ನಾನು ಅಲ್ಲಿನ ವೇಶ್ಯಾವೃತ್ತಿಯ ಬಗೆಗೂ ಕೇಳಲ್ಪಟ್ಟಿದ್ದೆ. ಫ್ರೆಂಚ್ ಸರ್ಕಾರ ಆ ವೃತ್ತಿಯನ್ನು ಕಾನೂನುಬದ್ಧಗೊಳಿಸಿದೆ. ಹಾಗಾಗಿ ಅಲ್ಲಿ ಇದು ಹೆಚ್ಚು ಅಂತ ಅಲ್ಲಿಗೆ ಹೋಗಿ ಬಂದವರು ಹೇಳಿದ್ದರು. ವೇಶ್ಯಾವಾಟಿಕೆಯ ಬಗ್ಗೆ ಮಾತನಾಡುವವರೆಲ್ಲ ಅದನ್ನೇ ಮಾಡುತ್ತಾರೆ, ಮಾತನಾಡದೆ ಇರುವವರೆಲ್ಲ ಸಭ್ಯರು ಅಂತ ನಾನು ಒಪ್ಪಲು ತಯಾರಿಲ್ಲ. ಎಲ್ಲೋ ಹಾಗೊಂದು ಇದೆ ಅಂತ ಅಂದೊಡನೆ ನೀವೂ ಅಲ್ಲಿಗೆ ಹೋಗಿದ್ದೀರಾ ಎಂದು ಕೇಳುವುದು ಮತ್ತು ಭಾವಿಸುವುದು ಅವಿವೇಕತನದ ಪರಮಾವಧಿ. ಇದು ಹೇಗಿದೆ ಎಂದರೆ "ಬೆತ್ತಲೆ ಜಗತ್ತು ಬರೆಯುವವರೆಲ್ಲಾ ಬೆತ್ತಲೆಯಾಗಿರುತ್ತಾರೆ" ಎಂಬಂತಿದೆ. ತಾವು ಬೇರೆ ಬೇರೆ ಖ್ಝಟಿ ್ಛ್ಝಡಿಣಗಳ ಬಗೆಗೆ ಬಹಳ ಆ್ಡಝಿಜಟಿಡ್ಝ್ಛಿ ಆಗಿ ಬರೆದಿದ್ದೀರಿ. ಬಹುಷಃ ಅತ್ತ ಮುಖ ಮಾಡುವವರಿಗೆ ಇವೆಲ್ಲಾ ಚಿರಪರಿಚಿತವಿರಬಹುದು. ನೀವು ಅಲ್ಲಿಗೆ ಹೋಗಿ ಅನುಭವ ಪಡೆದು ಬರೆದಿದ್ದೀರೋ ಅಥವಾ ಅವರಿವರು ಹೇಳಿದ್ದು ಕೇಳಿ ಬರೆದಿರೋ ನನಗೆ ಗೊತ್ತಿಲ್ಲ. ಹೀಗಾಗಿ, ನೀವು ಸಹ ಅಂತಹವರೇ ಎಂದು ಆರೋಪ ಮಾಡುವ ಕೀಳುಮಟ್ಟಕ್ಕೆ ನಾನು ಇಳಿಯಲಾರೆ. ಬರೆದ ಮಾತ್ರಕ್ಕೆ ನೀವೂ ಸಹ ಅಂತಹವರೇ ಎಂದು ಘೋಷಿಸಿ ಸಂತೋಷ ಪಡುವ ಮನಸ್ಸು ನನ್ನದಲ್ಲ.
ಇನ್ನೂ, ನಮ್ಮ ಪ್ರಧಾನಿಗೆ ಪಾಠ ಹೇಳುವ ಸಾಹಸ ನಾನು ಮಾಡಲಾರೆ. ಹಾಗೆ ಕೇವಲ ಇಪ್ಪತ್ತು ಕೋಟಿ ಮೈಸೂರಿಗೆ ತಂದು ಇದನ್ನು ಪ್ಯಾರಿಸ್ ಮಾಡಿಬಿಡುತ್ತೇವೆ ಎಂಬ ಭ್ರಮೆಯನ್ನೂ ಮೈಸೂರಿನವರಿಗೆ ಬಿತ್ತಬೇಡಿ. ಇಂತಹ ಭಂಡತನವನ್ನು ಜನ ನೋಡಿ ನಗುತ್ತಾರೆ.
ಏನೇ ಇರಲಿ, ನಾನು ತಪ್ಪು ಮಾಡಿದಾಗಲೆಲ್ಲಾ ಖಂಡಿತ ನನ್ನನ್ನು ಟೀಕಿಸಿ. ಆದರೆ ವೈಯಕ್ತಿಕ ನೆಲೆಯಲ್ಲಲ್ಲ. ಯೋಗ್ಯತೆಯ ಮಾನದಂಡಗಳು ಹಲವು. ನನ್ನ ಪ್ರಕಾರ, ನಾನು ವಿಷಯಗಳನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ನೇರವಾಗಿ ದಿಟ್ಟತನದಿಂದ ಮಾತನಾಡುತ್ತೇನೆಯೇ ಹೊರತು ಸುಳ್ಳಲ್ಲ. ಇದು ನನ್ನ ಯೋಗ್ಯತೆಗೆ ಪ್ರಮಾಣವಲ್ಲವೇ?
ತಾವು ದಯವಿಟ್ಟು ನೆಮ್ಮದಿಯಿಂದ ಕೆಲಸ ಮಾಡಿ. ನಾನೆಲ್ಲಿಗೆ ಹೋಗಿದ್ದೆ, ಯಾವಾಗ ಹೋಗಿದ್ದೆ? ಯಾರ ಆದಾಯ ಹೆಚ್ಚಿಸಿದೆ? ಎಂಬ ತಲೆ ಬಿಸಿ ನಿಮಗೆ ಬೇಡ. ಯಾರೂ ನಿಮ್ಮನ್ನು ಕೆಲಸ ಮಾಡದಂತೆ ನಿರ್ಬಂಧಿಸಿಲ್ಲ. ಐಟಿಜಿಛ್ಛಡಿ ಕೆಲಸ ಮಾಡಲಿ ಅಂತಲೇ ಜನ ನಿಮ್ಮನ್ನು ಆಯ್ಕೆ ಮಾಡಿದ್ದಾರೆ. ಆದರೆ ಬೇರೆಯವರು ಮಾಡಿದ ಕೆಲಸವನ್ನು ಹೈಜಾಕ್ ಮಾಡದೇ, ನಿಮ್ಮದೇ ಆದ ಸ್ವಂತಿಕೆಯ ಛಾಪು ಮೂಡಿಸುವ, ಜನ ನೆನಪಿಡುವ ಕೆಲಸ ಮಾಡಿ. ನಾನೂ ಸಹ ನಿಮ್ಮೊಡನಿರುತ್ತೇನೆ.
ನಿಜಕ್ಕೂ ಮೈಸೂರನ್ನು ಪ್ಯಾರಿಸ್ ನಗರದಂತೆ ಮಾಡಬೇಕೆಂದಿದ್ದರೆ ಪ್ರಧಾನಿಯ ಮನ ಒಲಿಸಿ ಕಡೆಯ ಪಕ್ಷ ಹತ್ತು ಸಾವಿರ ಕೋಟಿ ಹಣವನ್ನು ತನ್ನಿ.
- ಅಡಗೂರು. ಎಚ್. ವಿಶ್ವನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


