ನಮ್ಮ ಸಾಮಾಜಿಕ ಹಿನ್ನೆಲೆಯಲ್ಲಿಯೇ ರೂಪುಗೊಳ್ಳಲಿ ಲೈಂಗಿಕ ಶಿಕ್ಷಣ

ಬರ್ಟಂಡ್ ರಸಲ್ರಂಥ ಚಿಂತಕರು "ಮಕ್ಕಳಿಗೆ ಲೈಂಗಿಕತೆಯ ಬಗ್ಗೆ ಸರಿಯಾದ ಮಾಹಿತಿ ದೊರೆಯದಿದ್ದರೆ ಅಸಂಬದ್ಧವಾದ ಮಾಹಿತಿಯನ್ನೇ ಸರಿಯಾದುದು ಎಂದು ತಿಳಿಯುತ್ತಾರೆ" ಎಂದು ಎಚ್ಚರಿಸಿರುವುದನ್ನು ನೋಡಿದರೆ, ಲೈಂಗಿಕ ಶಿಕ್ಷಣದ ಮಹತ್ವದ ಅರಿವಾಗುತ್ತದೆ. ಸಿಗ್ಮಂಡ್ ಫ್ಯಾಯ್ಡ್ ಎನ್ನುವ ಮನೋವಿಜ್ಞಾನಿ ಲೈಂಗಿಕತೆ ಎನ್ನುವುದು ಸಣ್ಣ ಮಗುವಿನಲ್ಲಿಯೂ ಸ್ವಾಭಾವಿಕವಾಗಿ ಅಂತರ್ಜನ್ಯವಾಗಿರುತ್ತದೆ ಎನ್ನುವಾಗ ಅದನ್ನೊಂದು ಸಹಜ ಪ್ರವೃತ್ತಿಯೆಂಬ ನೆಲೆಯಲ್ಲಿ ಗುರುತಿಸಿರುವುದು ಕಂಡು ಬರುತ್ತದೆ. ಇಂಥ ಸಹಜ ಪ್ರವೃತ್ತಿಯ ಈಡೇರಿಕೆ ಪ್ರತಿಯೊಂದು ಸಮಾಜದಲ್ಲಿಯ ಕಟ್ಟಳೆಗಳನ್ನು ಅವಲಂಬಿಸಿದೆ. ಆ ದಿಶೆಯಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನು ನೀಡಲೇಬೇಕಾದ ಅಗತ್ಯವಿದೆ. ಸಾಮಾನ್ಯವಾಗಿ ಲೈಂಗಿಕತೆಯ ಬಗ್ಗೆ ಮಕ್ಕಳು ಮನೆಯಲ್ಲಿ ಏನಾದರೂ ಪ್ರಶ್ನೆಗಳನ್ನು ಎತ್ತಿದರೆ ಪಾಲಕರು ಆ ಬಗೆಯ ಪ್ರಶ್ನೆಗಳನ್ನು ಮರೆಮಾಚಲು ನೋಡುವುದೇ ಹೆಚ್ಚು. ಆ ಪ್ರಶ್ನೆಯ ಬದಲಾಗಿ "ಅದೆಲ್ಲಾ ಈಗೇಕೆ?" ಎನ್ನುವ ಮರುಪ್ರಶ್ನೆಯನ್ನು ಮಕ್ಕಳೆದುರು ಇವರೇ ಇಡುವ ಮೂಲಕ, ಆ ವಿಷಯದಲ್ಲಿ ತನಗೂ ವೈಜ್ಞಾನಿಕವಾಗಿ ಏನೂ ತಿಳಿದಿಲ್ಲ ಎಂದು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಾರೆ. ಶಾಲೆಯಲ್ಲಿ ಶಿಕ್ಷಕರಿಂದಲೂ ಮಕ್ಕಳ ಆ ಕುತೂಹಲದ ಪ್ರಶ್ನೆಗೆ ಉತ್ತರ ದೊರಕುವುದಿಲ್ಲ. ನಂತರ ಆ ಮಗು ತನ್ನ ಸಹಪಾಠಿಗಳಿಂದ ತನ್ನ ಕೌತುಕಕ್ಕೆ ಉತ್ತರವನ್ನು ಕಂಡುಕೊಳ್ಳುತ್ತದೆ. ಆದರೆ ಆ ಉತ್ತರ ಅತ್ಯಂತ ಅವೈಜ್ಞಾನಿಕವಾಗಿರುತ್ತದೆ. ಆ ಅಸಂಬದ್ಧ ತಿಳಿವಳಿಕೆ ಬದುಕಿನುದ್ದಕ್ಕೂ ಹಾಗೇ ಉಳಿಯುವ ಸಾಧ್ಯತೆಯು ಇಲ್ಲದಿಲ್ಲ.
ಕೆಲ ರಾಷ್ಟ್ರಗಳಲ್ಲಿ ಪ್ರಾಥಮಿಕ ಹಂತದಲ್ಲಿಯೇ ಲೈಂಗಿಕ ಶಿಕ್ಷಣವನ್ನು ನೀಡಲಾಗುತ್ತದೆ. ಆದರೆ ಅದು ತುಸು ಬೇಗನೇ ಆದಂತಾಯಿತು. ಹಾಗೆಯೇ ಕಾಲೇಜು ಹಂತದಲ್ಲಿ ಅದನ್ನು ಅಳವಡಿಸುವುದೂ ಸ್ವಲ್ಪ ತಡ ಆದಂತಾಗುವುದು. ಇವರೆಡರ ಮಧ್ಯೆ ಇರುವ ಮಾಧ್ಯಮಿಕ ಹಂತದ ಶಿಕ್ಷಣದಲ್ಲಿ ಲೈಂಗಿಕ ಶಿಕ್ಷಣವನ್ನು ಪರಿಚಯಿಸಬೇಕು. ಈ ಹಂತದಲ್ಲಿರುವ ಮಕ್ಕಳ ಜೈವಿಕ ಸಂಗತಿಗಳಲ್ಲಿ ವ್ಯತ್ಯಾಸಗಳು ಉಂಟಾಗಿ, ಶಾರೀರಿಕ ರಚನೆಯಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳತೊಡಗುತ್ತವೆ. ತನ್ನದೇ ಶರೀರದಲ್ಲಿ ಉಂಟಾಗುವ ಬದಲಾವಣೆಯ ಕಾರಣ ಆ ಮಗುವಿಗೆ ತಿಳಿದಿರುವುದಿಲ್ಲ. ತಿಳಿದುಕೊಳ್ಳುವ ಯತ್ನದಲ್ಲಿ ತಪ್ಪು ಮಾಹಿತಿಗಳೇ ಹೇರಳವಾಗಿ ಅವರಿಗೆ ದಕ್ಕಿರುತ್ತವೆ. ಆ ಕಾರಣದಿಂದಾಗಿ ಆ ಮಗುವಿನಲ್ಲಿ ಲೈಂಗಿಕ ವಿಷಯಗಳ ಬಗೆಗೆ ಒಂದು ಅಜ್ಞಾನದ ಭಾಗ ಮೆದುಳಲ್ಲಿ ಹಾಗೆಯೇ ಉಳಿದು ಬಿಡುತ್ತದೆ.
ಶರೀರ ರಚನೆ, ಸಂಭೋಗ ಕ್ರಿಯೆ, ಗರ್ಭಧಾರಣೆ, ಸುರಕ್ಷಿತ ಲೈಂಗಿಕ ಕ್ರಿಯೆ, ಜನನ ನಿಯಂತ್ರಣ ವಿಧಾನಗಳು, ಸಾಂಕ್ರಾಮಿಕ ಲೈಂಗಿಕ ರೋಗಗಳು ಮುಂತಾದವುಗಳ ಬಗ್ಗೆ ಅವಶ್ಯಕವಿರುವ ಕ್ರಮದಲ್ಲಿ ಶಿಕ್ಷಣವನ್ನು ನೀಡುವುದನ್ನು ಲೈಂಗಿಕ ಶಿಕ್ಷಣ ಎಂದು ಕರೆಯಲಾಗುತ್ತದೆ. ಇಂದು ಇಡೀ ವಿಶ್ವದಲ್ಲಿ ಲೈಂಗಿಕ ಶಿಕ್ಷಣ ಬೇಕೋ..ಬೇಡವೋ.. ಎನ್ನುವ ವಾದಗಳ ಮಧ್ಯೆಯೇ ಅಂಥ ಶಿಕ್ಷಣದ ಕೊರತೆ ಎಂಥಾ ಅನಾಹುತಗಳನ್ನು ಸೃಷ್ಟಿಸಬಲ್ಲದು ಎನ್ನುವುದನ್ನೂ ನಾವು ನೋಡುತ್ತಿದ್ದೇವೆ. ಇಂದು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಮಾಧ್ಯಮಿಕ ಶಾಲಾ ಹಂತದಲ್ಲಿಯೇ ಹುಡುಗಿಯರು ಗರ್ಭಿಣಿಯರಾಗುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ. ಭಾರತದಂತಹ ಸಾಂಪ್ರದಾಯಿಕ ಹಿನ್ನೆಲೆಯಿರುವ ರಾಷ್ಟಗಳಲ್ಲಿ ಈ ಬಗೆಯ ವಿಷಯವನ್ನಾಧರಿಸಿ ಸೆಮಿನಾರ್ಗಳು ನಡೆದಿರ್ವುದೂ ತೀರಾ ಕಡಿಮೆಯೇ..ಇನ್ನು ಶಿಕ್ಷಣದಲ್ಲಿ ಅಳವಡಿಕೆಯ ಮಾತು ದೂರವೇ ಉಳಿಯಿತು. ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ 12-19 ವರ್ಷ ವಯೋವಾನದ ಸುಮಾರು 34 ಪ್ರತಿಶತ ಮಕ್ಕಳು ಎಚ್ಐವಿ ಸೊಂಕು ಪೀಡಿತರು. ಅದಕ್ಕೆ ಕಾರಣ ಲೈಂಗಿಕ ಶಿಕ್ಷಣದ ಕೊರತೆಯೇ ಎನ್ನುವುದು ಅದರ ಅಭಿಮತ. 2003ರಲ್ಲಿ ದೆಹಲಿಯ ವಿದ್ಯಾಸಾಗರ ಸಂಸ್ಥೆಯವರು ಸಮೀಕ್ಷೆ ಮಾಡಿದಾಗ ಅನೇಕ ಶಾಲೆಗಳು ಈ ವಿಷಯವನ್ನು ಬಾಗಿಲು ತೆರೆದು ಸ್ವಾಗತ ಮಾಡಿಕೊಳ್ಳುವ ಸ್ಥಿತಿಯಲ್ಲಿಲ್ಲ ಎನ್ನುವ ವರದಿಯನ್ನು ಅದು ಹೊರಹಾಕಿತ್ತು. ನಂತರ ಆರೇಳು ವರ್ಷಗಳಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾವಣೆಯಾಗಿದೆ ಎಂದರ್ಥವಲ್ಲ.
ಎಲ್ಲ ರಾಷ್ಟ್ರಗಳ ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆ ಒಂದೇ ತೆರನಾಗಿರುವುದಿಲ್ಲ. ಭಾರತದಂತಹ ರಾಷ್ಟ್ರಗಳು ಪಠ್ಯಕ್ರಮದಲ್ಲಿ ಲೈಂಗಿಕ ಶಿಕ್ಷಣದ ಅಳವಡಿಕೆಯ ವಿಷಯವಾಗಿ ಇನ್ನೂ ಹಿಂದೇಟು ಹಾಕುತ್ತಿವೆ. ಅದಕ್ಕೆ ಈ ಕೆಳಗಿನ ಕೆಲವು ಪ್ರಮುಖ ಕಾರಣಗಳನ್ನು ನಾವು ಕೊಡಬಹುದು:
ಈ ಬಗೆಯ ಶಿಕ್ಷಣದಿಂದಾಗಿ ತಮ್ಮ ಮಕ್ಕಳು ಲೈಂಗಿಕ ವಿಷಯವಾಗಿ ಅಡ್ಡದಾರಿ ಹಿಡಿಯುವ ಅಪಾಯಗಳಿವೆ ಎನ್ನುವುದು ಪಾಲಕರ ಹೆದರಿಕೆ.
ಶಾಲಾ ಆಡಳಿತ ಮಂಡಳಿಗಳಿಗೆ ಇದರಿಂದಾಗಿ ಕೆಲವು ರಾಜಕೀಯ ಅಡ್ಡಪರಿಣಾಮಗಳು, ಕಿರಕಿರಿಗಳನ್ನು ಎದುರಿಸಬೇಕಾಗುತ್ತದೆ ಎನ್ನುವ ಹೆದರಿಕೆ.
= ಸ್ಕೂಲ್ ಕ್ಯಾಂಪಸ್ಗಳಲ್ಲಿ ಅಶ್ಲೀಲ ಎನ್ನಬಹುದಾದ ಸಂಗತಿಗಳು ಘಟಿಸುವ ಅಪಾಯವನ್ನು ನೆನೆದು ಲೈಂಗಿಕ ಶಿಕ್ಷಣ ಅಳವಡಿಕೆಯಲ್ಲಿ ಶಾಲಾ ಸಮಿತಿಗಳು ಹಿಂದೇಟು ಹಾಕುತ್ತವೆ.
ಲೈಂಗಿಕ ಶಿಕ್ಷಣವನ್ನು ಯಾರು ಬೋಧಿಸಬೇಕು... ಕಲಿಸುವವರು ಮುಕ್ತವಾಗಿ ಅದನ್ನು ಕಲಿಸಬಲ್ಲರೇ? ಎನ್ನುವ ಪ್ರಶ್ನೆಯೂ ಇದೆ.
ಈ ವಿಷಯವಾಗಿ ಹದಿ ಹರೆಯದ ಹುಡುಗ- ಹುಡುಗಿಯರಲ್ಲಿ ಅನೇಕ ಬಗೆಯ ಮನೋತುಮುಲಗಳಿರುತ್ತವೆ. ಒಬ್ಬರನ್ನೊಬ್ಬರು ಕೆಕ್ಕರಿಸಿ ತಿನ್ನುವಂತೆ ನೋಡುವುದು ಅಧ್ಯಯನದಲ್ಲಿ ಏಕಾಗ್ರತೆ ಹಾಳಾಗುವುದು, ಹಿಂದಿಂದೆ ಅಲೆಯುವುದು, ಅಶ್ಲೀಲ ಸಾಹಿತ್ಯ ಓದಿ ಹಾಳಾಗುವುದು...ಹೀಗೆ ಇಂಥ ಇನ್ನೂ ಅನೇಕ ಸಂಗತಿಗಳಿಗೆ ಲೈಂಗಿಕ ಶಿಕ್ಷಣದಿಂದ ಕಡಿವಾಣ ಬೀಳುತ್ತದೆ. ಅಮೆರಿಕೆಯಂಥ ರಾಷ್ಟ್ರಗಳಲ್ಲಿ ಆಗಾಗ್ಗೆ ಲೈಂಗಿಕ ತಿಳಿವಳಿಕೆ ಶಿಬಿರಗಳನ್ನು ಸಂಘಟಿಸಿ ಈ ಶಿಬಿರಗಳಿಂದ ಉಂಟಾದ ಪ್ರಯೋಜನಗಳನ್ನು ಅಧ್ಯಯನ ಮಾಡಲಾಗಿದೆ. ಲೈಂಗಿಕ ಸಂಯಮ, ಜನನ ನಿಯಂತ್ರಣ ವಿಧಾನಗಳ ಬಳಕೆ, ಏಡ್ಸ್ ರೋಗದ ಬಗೆಗೆ ತಿಳಿವಳಿಕೆ ಮುಂತಾದ ಅಂಶಗಳ ಬಗ್ಗೆ ಆ ಬಗೆಯ ಶಿಬಿರಗಳಲ್ಲಿ ಪಾಲ್ಗೊಂಡ ಯುವಕರಿಗೆ ಮನದಟ್ಟಾಗಿತ್ತು. ಅಮೆರಿಕ ಹಾಗೂ ಭಾರತದ ಸಾಮಾಜಿಕ ಪರಿಸರದ ಮಧ್ಯೆ ಅನೇಕ ವ್ಯತ್ಯಾಸಗಳಿವೆ. ಆಯಾ ಸಂಸ್ಕೃತಿಗೆ ತಕ್ಕುದಾದ ರೀತಿಯಲ್ಲಿಯೇ ಅಲ್ಲಿನ ಪಠ್ಯಕ್ರಮವನ್ನು ರೂಪಿಸಬೇಕು.
ಇನ್ನು, ಮಾಧ್ಯಮಿಕ ಶಾಲಾ ಹಂತದಲ್ಲಿ ಮಕ್ಕಳಿಗೆ ಲೈಂಗಿಕ ವಿಷಯಗಳ ಬಗ್ಗೆ ತಿಳಿವಳಿಕೆ ನೀಡುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾದುದು. ಲೈಂಗಿಕ ವಿಷಯವಾಗಿ ಪಾಲಕರಿಂದ ಸಿಕ್ಕ ಮೇಲ್ ಮೇಲಿನ ವಿವರಣೆಗಳಿಗೆ ಸಮಾಧಾನವಾಗದ ಮಕ್ಕಳು ಶಿಕ್ಷಕರನ್ನು ಆ ವಿಷಯವಾಗಿ ಪ್ರಶ್ನಿಸುವ ಸಾಧ್ಯತೆಯಿದೆ. ಆಗ ಶಿಕ್ಷಕರು ಪ್ರಾಂಜಲವಾಗಿ, ಸಮರ್ಪಕವಾಗಿ ಉತ್ತರಿಸುವವರಾಗಿರಬೇಕು. ವೀರ್ಯಸ್ಖಲನ, ಮುಷ್ಟಿ ಮೈಥುನದಂತಹ ಅನೇಕ ವಿಷಯಗಳ ಬಗೆಗೆ ಸಾಮಾನ್ಯವಾಗಿ ಮಕ್ಕಳಲ್ಲಿ ತಪ್ಪು ಗ್ರಹಿಕೆಗಳಿರುತ್ತವೆ. ಅವುಗಳನ್ನು ಸೂಕ್ಷ್ಮವಾಗಿ ತಿಳಿಸಿಕೊಡುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದುದು. ಈ ಬಗೆಯ ವಿಷಯಗಳನ್ನು ಮಕ್ಕಳೊಂದಿಗೆ ಚರ್ಚಿಸಲು ಹದಿ ಹರೆಯ ಅತ್ಯಂತ ಸೂಕ್ತ ಕಾಲ. ಸಾಧ್ಯವಾದರೆ ಆರಂಭದ ಹಂತದಲ್ಲಿ ಹುಡುಗರಿಗೆ ಪುರುಷ ಶಿಕ್ಷಕರು, ಹುಡುಗಿಯರಿಗೆ ಮಹಿಳಾ ಶಿಕ್ಷಕಿಯರಿಂದ ಈ ವಿಷಯವಾಗಿ ತಿಳಿವಳಿಕೆ ನೀಡಬೇಕು.
ಲೈಂಗಿಕತೆಯೆಡೆಗೆ ವಸ್ತುನಿಷ್ಟ ದೃಷ್ಟಿಕೋನ ಅವರಲ್ಲಿ ಬೆಳೆಸಲು ನೆರವಾಗಬೇಕು
ಲೈಂಗಿಕತೆ ಮತ್ತು ಮಾದಕ ದ್ರವ್ಯಗಳ ಬಗ್ಗೆ ಮಕ್ಕಳೊಂದಿಗೆ ಮಾತನಾಡಲು ಹಿಂಜರಿಯಬಾರದು. ಇನ್ನು ಆ ವಿಷಯದ ಬಗ್ಗೆ ಮಾತನಾಡುವಾಗ ಬೋಧಿಸುವವರು ಸಾಕಷ್ಟು ಮನೋನಿಗ್ರಹವನ್ನು ಹೊಂದಿರಬೇಕು. ತಪ್ಪಿಯೂ ಅಸಂಬದ್ಧವಾಗಿ, ವಿಚಲಿತರಾಗಿ ಬೋಧಿಸಕೂಡದು.
ಮಕ್ಕಳು ತಮ್ಮ ಪಾಲಕರಿಗಿಂತಲೂ ಶಿಕ್ಷಕರನ್ನು ಅತಿಯಾಗಿ ನಂಬುತ್ತಾರೆ, ಹಾಗಾಗಿ ಶಿಕ್ಷಕರು ನೀಡುವ ಮಾಹಿತಿ ವಸ್ತುನಿಷ್ಟವಾಗಿರಬೇಕು.
ಕೆಲ ಕರ್ಮಠರು ಲೈಂಗಿಕ ಶಿಕ್ಷಣ ಎನ್ನುವ ಪದ ಕಿವಿಗೆ ಬಿದ್ದದ್ದೇ ಅದರ ಪೂರ್ವಾಪರಗಳ ಪರಿವೆಯೇ ಇಲ್ಲದೆ ಅದು ಬೇಡವೇ ಬೇಡ ಎಂದು ಜಿದ್ದು ಹಿಡಿಯುತ್ತಾರೆ. ಇಂದಿಗೂ ನಮ್ಮಲ್ಲಿ ಲೈಂಗಿಕ ಶಿಕ್ಷಣ ಅಳವಡಿಕೆಯಾಗದಿರಲು ಈ ಬಗೆಯ ಪೂರ್ವಗ್ರಹ ಪೀಡಿತರ ಮನೋಭಾವವೇ ಕಾರಣ. ಇವರು ಲೈಂಗಿಕ ಶಿಕ್ಷಣವನ್ನು ವಿರೋಧಿಸುವಲ್ಲಿ ಇರುವ ಕೆಲ ಕಾರಣಗಳು:
ಮತ್ತಷ್ಟು ಲೈಂಗಿಕ ಅವಘಡಗಳು ಹೆಚ್ಚಾಗುತ್ತವೆ.
ಮಕ್ಕಳಿಗೆ ಎಲ್ಲ ಬಗೆಯ ತಿಳಿವಳಿಕೆಯನ್ನು ನೀಡಿದರೆ, ಅವರು ಇನ್ನಷ್ಟು ಸ್ವೇಚ್ಛೆಯಿಂದ ವರ್ತಿಸುತ್ತಾರೆ
ಲೈಂಗಿಕ ಶಿಕ್ಷಣ ಪರಿಣಾಮಕಾರಿಯಲ್ಲ
ಟೀನೇಜ್ ಹೆರಿಗೆಗಳು ಇನ್ನಷ್ಟು ಹೆಚ್ಚಾಗುತ್ತವೆ.
ಮೌಲ್ಯಗಳು ಕುಸಿಯುತ್ತವೆ.
ಮುಕ್ತ ಲೈಂಗಿಕ ವಾತಾವರಣ ಆರಂಭವಾಗಿ ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತದೆ
ಲೈಂಗಿಕ ಶಿಕ್ಷಣವನ್ನು ಮಾಧ್ಯಮಿಕ ಶಾಲಾ ಹಂತದಲ್ಲಿ ಅಳವಡಿಸಬೇಕು. ಅದರ ಅವಶ್ಯಕತೆ ಈಗ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಯಾವುದೋ ರಾಷ್ಟ್ರದ ಪಠ್ಯಕ್ರಮವನ್ನು ಆಧರಿಸಿ ಅದು ನಿರ್ಧಾರವಾಗುವಂತಿಲ್ಲ. ಇಲ್ಲಿನ ಸಾಂಸ್ಕೃತಿಕ, ಸಾಮಾಜಿಕ ಹಿನ್ನೆಲೆಯಲ್ಲಿ ಅದು ರೂಪಗೊಳ್ಳಬೇಕು. ರಾಜ್ಯ, ರಾಷ್ಟ್ರ, ಸಮಾಜ ಹಿತಕರ ಎನ್ನುವಷ್ಟನ್ನು ಮಾತ್ರ ಅಳವಡಿಸಬೇಕು. ಅದು ಬೇಡವೇ ಬೇಡ ಎನ್ನುವ ವಿತಂಡವಾದವಂತೂ ಸರಿಯಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


