ಅತ್ಯಾಚಾರ, ಏನಿದರ ಹಿಂದಿನ ಬರ್ಬರ ಮನೋವ್ಯಾಪಾರ?

ಜ್ವರ ವಿಪರೀತ ಸುಡುತ್ತಿದೆ. ಈಗ ಅದರ ವಿಶ್ಲೇಷಣೆ ಮಾಡುತ್ತಾ ಕೂರುವುದಕ್ಕೆ...
Updated on: 

ಜ್ವರ ವಿಪರೀತ ಸುಡುತ್ತಿದೆ. ಈಗ ಅದರ ವಿಶ್ಲೇಷಣೆ ಮಾಡುತ್ತಾ ಕೂರುವುದಕ್ಕೆ ಸಮಯವಿಲ್ಲ. ಹೈಡೋಸ್ ಔಷಧ ಕೊಡುವುದೊಂದೇ ದಾರಿ. ಹಾಗೆ ಮಾಡಿದರೆ ಅಡ್ಡ ಪರಿಣಾಮ ಏನಾದೀತೋ ಅಂತೆಲ್ಲ ಯೋಚನೆ ಮಾಡುತ್ತ ಕುಳಿತರೆ ಜ್ವರವನ್ನು ಅನುಭವಿಸುತ್ತಿರುವ ಜೀವವೇ ಉಳಿಯುವುದಿಲ್ಲ. ಪ್ರಾಣ ಉಳಿದುಕೊಂಡರೆ ನಂತರ ಪರಿಣಾಮಗಳ ಏರುಪೇರು ಸರಿ ಮಾಡಬಹುದಷ್ಟೆ.
ಅತ್ಯಾಚಾರಿಗಳಿಗೆ ಅತಿ ಘೋರ ಶಿಕ್ಷೆಯನ್ನು ವಿಧಿಸಬೇಕು, ಪುರುಷತ್ವ ಹರಣ ಮಾಡಬೇಕು, ಸಾಮಾಜಿಕವಾಗಿ ಅತ್ಯುಗ್ರವಾಗಿ ಅಪಮಾನಿಸಬೇಕು ಎಂಬುದೆಲ್ಲ ಈ ಕ್ಷಣದ ಸತ್ಯಗಳು. ಇವು ಸಮರ್ಥನೀಯ. ಏಕೆಂದರೆ, ವ್ಯಾಧಿ ಆ ಮಟ್ಟಿಗೆ ಹರಡಿ ಬಿಟ್ಟಿದೆ. ಶಾಲೆಗೆ ಹೋಗುವ ಬಾಲೆಯೂ ಸುರಕ್ಷಿತಳಲ್ಲ ಎನ್ನುವಷ್ಟರ ಮಟ್ಟಿಗೆ ಅತ್ಯಾಚಾರಿಗಳು ಮೆರೆಯುತ್ತಿರುವಾಗ 'ಇಂಥ ಕ್ರೂರಿಗಳನ್ನು ರಸ್ತೆ ಮಧ್ಯದಲ್ಲಿ ದಹಿಸಬೇಕು' ಎಂಬ ಉದ್ವೇಗದಿಂದ ಸಮಾಜವೇ ಎದ್ದು ನಿಲ್ಲುವ ದೃಶ್ಯ ಮಾತ್ರವೇ ಅಪರಾಧಿಗಳ ಎದೆಯಲ್ಲಿ ದಿಗಿಲು ಹುಟ್ಟಿಸಬಲ್ಲದು.
ಹೀಗೆ ಹೇಳುತ್ತಲೇ...
ಇದು ತುರ್ತು ಚಿಕಿತ್ಸೆಯ ಕಾಲದ ನಿಯಮ ಮಾತ್ರ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಆಕ್ರೋಶ ಮತ್ತು ಅದರಿಂದ ಹುಟ್ಟಬಹುದಾದ ಭಯ ಇವೆರಡೂ ತಾತ್ಕಾಲಿಕವೇ. ವ್ಯಾಧಿಗ್ರಸ್ತ ದೇಹಕ್ಕೆ ನೀಡುವ ಔಷಧದಂತೆ. ಹೀಗೊಂದು ಚಿಕಿತ್ಸೆ ನಂತರ ಸಹಜ ಸ್ಥಿತಿಗೆ ಮರಳುವುದಕ್ಕೆ ಅನುಸರಿಸಬೇಕಾದ ಪಥ್ಯ- ಸಂಯಮಗಳು ಸಾಕಷ್ಟಿವೆ. ಅತ್ಯಾಚಾರಿಗಳಿಗೆ ಗಲ್ಲು, ಅಂಥವರ ವಿಚಾರಣೆಗೆ ತ್ವರಿತ ನ್ಯಾಯಾಲಯಗಳು ಇವೆಲ್ಲ ಆಗಲೇಬೇಕಾದ ಅಂಶಗಳು. ಸುಡುವ ಜ್ವರ ಇದ್ದಾಗ ಮದ್ದು ತುಂಬ ಕಹಿಯೆಂದೇ, ಸೂಜಿಯ ಚುಚ್ಚುವಿಕೆ ನೋಡಿಯೇ ಯೋಚಿಸುವ ಪ್ರಮೇಯವಿರುವುದಿಲ್ಲ. ಏಕೆಂದರೆ ಈ ಕ್ಷುಲ್ಲಕ ನೋವುಗಳನ್ನು ಮೀರಿಸುವ ಕ್ರೂರ ಯಾತನೆಯೊಂದರಿಂದ ಮುಕ್ತಿ ಪಡೆಯಬೇಕಾದ ಜರೂರತ್ತೊಂದು ನಮಗಿರುತ್ತದೆ. ಆದರೆ ಆ ಎಲ್ಲ ಮಾರ್ಗಗಳಿಂದ ಜ್ವರ ಒಮ್ಮೆ ತಣಿದ ಮೇಲೆ ಇನ್ನೊಮ್ಮೆ ಅದು ಬರುವುದನ್ನು ಪ್ರತಿಬಂಧಿಸುವ ಸಾತ್ವಿಕ ಮಾರ್ಗಗಳು ಏನೆಲ್ಲ ಇವೆ ಅಂತ ಯೋಚಿಸಬೇಕಾಗುತ್ತದೆ. ಅದು ಬಿಟ್ಟು, ಮತ್ತೊಮ್ಮೆ ಜ್ವರ ಬಂದಾಗಲೂ ಹೈಡೋಸ್ ಔಷಧ ತೆಗೆದುಕೊಂಡರಾಯಿತು ಎಂದೆನ್ನುವುದು ಸ್ವಸ್ಥ ಮನಸ್ಸಿನ ಲಕ್ಷಣವಾಗುವುದಿಲ್ಲ.
ಅತ್ಯಾಚಾರ ಮಾಡುವವರ ಮರ್ಮಾಂಗವನ್ನೇ ಕತ್ತರಿಸಬೇಕು ಎಂಬ ಆಕ್ರೋಶದ ನುಡಿಗಳು ಸಹಜವೇ. ಆದರೆ ಅತ್ಯಾಚಾರ ಪ್ರಕರಣಗಳನ್ನು ಗಮನಿಸಿ ನೋಡಿ. ಅವುಗಳ ಪೈಕಿ ಯಾವೆಲ್ಲ ಕೇವಲ ಲೈಂಗಿಕ ಉನ್ಮಾದವನ್ನು ತಣಿಸಿಕೊಳ್ಳುವುದಕ್ಕಾಗಿ ನಡೆದಿವೆ? ಕಾಮತೃಷೆ ತೀರಿಸಿಕೊಳ್ಳುವುದಷ್ಟೇ ಎಲ್ಲ ಅತ್ಯಾಚಾರಗಳ ಉದ್ದೇಶವಾಗಿದೆಯೇ? ಮುಂದುವರಿದಿದೆ ಎನ್ನಲಾಗುವ ಅಮೆರಿಕದಲ್ಲೂ ಏಕೆ ಅತಿ ಹೆಚ್ಚು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ? ಹೀಗೆಲ್ಲ ಪ್ರಶ್ನೆಗಳನ್ನು ಹಾಕಿಕೊಂಡಾಗ ಅತ್ಯಾಚಾರವೆಂಬ ಕೃತ್ಯದ ಹಿಂದೆ ಹಲವು ಸಂಕೀರ್ಣಗಳನ್ನು ಹೊತ್ತ ಮನೋಲೋಕವೊಂದು ಇರುವುದು ಗೋಚರವಾಗುತ್ತದೆ. ಈ ಲೋಕವನ್ನು ರೂಪಿಸಿದ್ದು ಸಮಾಜವೇ. ಅತ್ಯಾಚಾರವೆಂಬುದು ಒಂದು ವಿಕೃತಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ವಿಕೃತಿಗೆ ಹಾರ್ಮೋನ್‌ಗಳ ಏರುಪೇರಿನಿಂದಾಗುವ ಕಾಮವೇ ಕಾರಣವಲ್ಲ. ಮನೆಯಲ್ಲಿ ಚಾನೆಲ್ ಬದಲಿಸುವಾಗ, ಬೀದಿ ಗೋಡೆಯಲ್ಲಿ ಅರೆನಗ್ನ ಪೋಸ್ಟರ್ ನೋಡಿದಾಗ ನಮ್ಮೆಲ್ಲರಲ್ಲೂ ಈ ಹಾರ್ಮೋನುಗಳು ಕುಣಿದಿರುತ್ತವೆ. ಆ ಉತ್ತೇಜನ ಅತ್ಯಾಚಾರವೆಂಬ ಅಮಾನವೀಯತೆಗೆ ಎಡೆ ಮಾಡುವುದಕ್ಕೆ ಆ ಜೈವಿಕ ಕ್ರಿಯೆಗೆ ಮೀರಿದ ಇನ್ಯಾವುದೋ 'ಮನೋವ್ಯಾಪಾರ' ಆಗಿರಬೇಕಲ್ಲವೇ? ನಾವು ಅದರ ಜಾಡು ಹಿಡಿಯಬೇಕಾಗುತ್ತದೆ.
--
ನಮ್ಮ ಮನೆಗಳಲ್ಲಿ, ಬಂಧುವರ್ಗದ ನಡುವೆ ಗಂಡು ಮಕ್ಕಳನ್ನು ಸಂಭಾಳಿಸುವ ಹಂತದಲ್ಲಿ ಹೀಗೊಂದು ಸಂಭಾಷಣೆ ಉದುರಿಯೇ ಇರುತ್ತದೆ. 'ಅದೇನೋ ಅದು. ಒಳ್ಳೆ ಹುಡುಗೀರ ಥರ ಅಳ್ತಿದ್ದೀಯಲ್ಲ?' 'ಅದೇನೋ, ಬಚ್ಚಲು ಮನೆಗೆ ಹೋಗೋದಕ್ಕೂ ಹೆದರ್ತೀಯಲ್ಲ, ಒಳ್ಳೇ ಹುಡುಗೀರ ಥರ' ಇಂಥವೇ ಹಲವು ಮಾದರಿಯ ಸಂಭಾಷಣೆಗಳು ನಾಟುತ್ತಿರುತ್ತವೆ. ಹುಡುಗೀರ ಥರ ನಾಚ್ಕೋತೀಯ, ಹುಡ್ಗೀರ ಥರ ಭಯ ಪಡ್ತೀಯಾ ಎಂಬ ವರಸೆಗಳೆಲ್ಲ ಮೂದಲಿಕೆ ಮಾದರಿಯಲ್ಲೇ ಬಳಕೆಯಾಗುತ್ತವೆ. ಇನ್ನೊಂಚೂರು ಮೇಲುಹಂತದ ಚರ್ಚೆಯಲ್ಲಿ 'ಅಳುವ ಗಂಡಸನ್ನೂ ನಗುವ ಹೆಂಗಸನ್ನೂ ನಂಬಬೇಡ' ಎಂಬಂತಹ ಮಾತುಗಳೆಲ್ಲ ಸುಳಿದಾಡುತ್ತವೆ. ಇವೆಲ್ಲದರ ಒಟ್ಟೂ ನಿರ್ಧಾರ ಇಷ್ಟೇ. ಅಳುವುದು- ಹೆದರುವುದು- ಹಿಂದಡಿ ಇಡುವುದು ಇವೆಲ್ಲವೂ ಹೆಣ್ಣಿನ ಲೋಕ! ಗಂಡೆಂದರೆ ನೀನು ಎಲ್ಲವನ್ನೂ ಗೆಲ್ಲಲಿಕ್ಕಾಗಿಯೇ ಇರುವವನು! ನೀನು ಅಳುವಂತಿಲ್ಲ, ನಾಚಿಕೊಳ್ಳುವಂತಿಲ್ಲ, ಸೋಲೊಪ್ಪಿಕೊಳ್ಳುವಂತಿಲ್ಲ. ಈ ಸಂವೇದನೆಗಳೆಲ್ಲ ಗಂಡಸಿನ ಜಾಯಮಾನವೇ ಅಲ್ಲ. ಎಂಥ ಅಪಾಯಕಾರಿ ಸಂದೇಶವಿದು!
ಸರಾಸರಿ ಹುಡುಗರಲ್ಲಿ ಹೀಗೊಂದು ಅಹಮಿಕೆಯ ಪರ್ವತವನ್ನು ಸೃಷ್ಟಿಸುವ ಕಾರ್ಯ ತಿಳಿದೋ ತಿಳಿಯದೆಯೋ ಹೆಚ್ಚಿನವರ ಮನೆ- ಸಾಮಾಜಿಕ ಪರಿಸರಗಳಲ್ಲೇ ನಡೆದುಬಿಡುತ್ತದೆ. ಆ ಇಗೋವನ್ನು ಅನುಕ್ಷಣವೂ ಪೋಷಿಸಬೇಕಾದ ದರ್ದಿಗೆ ಹುಡುಗ ಪಕ್ಕಾಗುತ್ತಾನೆ. ಜನಪ್ರಿಯ ಮಾಧ್ಯಮಗಳೂ ಪೌರುಷವನ್ನು ಇದೇ ಪಾಕದಲ್ಲಿ ಲಂಬಿಸುತ್ತವೆ. ಹತ್ತು ವಿಲನ್‌ಗಳನ್ನು ಚಚ್ಚಿ ಅಸಹಾಯಕ(?) ನಾಯಕಿಯನ್ನು ರಕ್ಷಿಸುವುದು ಮಾತ್ರ ಹಿರೋಗಿರಿಯೇ? ಮನೆಯಲ್ಲಿ ಚೆಂದದ ಹೂದೋಟವೊಂದನ್ನು ಸಲಹುತ್ತಿರುವವ, ಅದ್ಭುತ ಎಂಬಂತೆ ಅಡುಗೆ ಮಾಡಿ ತಂದು ತನ್ನ ಕೈಯಾರೇ ಕುಟುಂಬ ಸದಸ್ಯರಿಗೆಲ್ಲ ಬಡಿಸುವವ ಹೀರೋ ಅಲ್ಲವೇ? ಅಂಥ ಚಿತ್ರಣಗಳೇ ಬಂದಿಲ್ಲ ಎಂದಲ್ಲ. ಹುಡುಕಿ ನೋಡಿದರೆ ಸಿಗಬಹುದು. ಇವನ್ನೂ ಅಮ್ಮಾವ್ರ ಗಂಡ ಎಂಬಂತೆ ನಕಾರಾತ್ಮಕವಾಗಿಯೇ ಚಿತ್ರಿಸಿದ್ದಿದೆ. ಜಾಹೀರಾತುಗಳನ್ನು ಗಮನಿಸಿದರೆ ಹೆಚ್ಚಿನ ಉತ್ಪನ್ನಗಳು ಸಾರುತ್ತಿರುವುದೇನೆಂದರೆ- ತನ್ನನ್ನು ಬಳಸಿದರೆ ಹುಡುಗಿಯರನ್ನು ದಂಡು ದಂಡಾಗಿ ಆಕರ್ಷಿಸಬಹುದು ಅಂತಲೇ. ಹುಡುಗರ ಬದುಕಿಗೆ ಸುತ್ತ ಹತ್ತೆಂಟು ದಿಕ್ಕುಗಳಿಂದ ಸಿಗುತ್ತಿರುವ ಸಂದೇಶಗಳೆಲ್ಲ ಕೊನೆಗೂ ಹೇಳುತ್ತಿರುವುದು- 'ನೀನು ಹುಡುಗಿಗಿಂತ ಭಿನ್ನ ಹಾಗೂ ಅದನ್ನು ಹೇಗಾದರೂ ಸಾಬೀತು ಮಾಡುತ್ತಿರಬೇಕಾದ ಹೊಣೆ ನಿನ್ನ ಹೆಗಲಿಗಿದೆ.'  ಈಗ ಆತನಿಗೆ ತನ್ನ ಸೋಲುಗಳಿಗಿಂತ ಹುಡುಗಿಯ ಗೆಲವು- ಏರುಗತಿ ಇನ್ನಿಲ್ಲದ ಹತಾಶೆಯನ್ನು ಹುಟ್ಟುಹಾಕುತ್ತಿದೆ. ಇತ್ತೀಚಿನ ಯಾವುದೇ ಹತ್ತು- ಹದಿನೈದು ಅತ್ಯಾಚಾರ ಪ್ರಕರಣಗಳ ವಿವರಗಳನ್ನು ಪರಿಶೀಲಿಸಿ. ಅಲ್ಲೊಂದು ಪ್ಯಾಟರ್ನ್ ಸಿಗುತ್ತದೆ. ನಿರ್ಭಯಾ, ಮುಂಬೈ ಮಿಲ್ ಇತ್ಯಾದಿ ಪ್ರಕರಣಗಳಲ್ಲಿ ಅತ್ಯಾಚಾರ ಎಸಗಿದವರು ಬೀದಿಯ ನಿರುದ್ಯೋಗಿ ಪುಂಡರು. ಬಲಿಯಾದವರು, ಸಂತ್ರಸ್ತೆಯಾದವರು ಆರ್ಥಿಕ ಏಣಿಯಲ್ಲಿ ಮೇಲೇರುತ್ತಿದ್ದವರು. ಕೆಳಮಧ್ಯಮವರ್ಗದ ಹುಡುಗಿಯೊಬ್ಬಳು ವೈದ್ಯೆಯಾಗುವ ದಾರಿಯಲ್ಲಿದ್ದಾಳೆ. ತಮ್ಮದೇ ಬೀದಿಯಲ್ಲಿ ತಿರುಗಾಡಿಕೊಂಡಿದ್ದವಳು. ಈಗ ಅವಳ ಪ್ರಪಂಚ ಬೇರೆ. ಅವಳದೇ ವಲಯದ ಗೆಳೆಯನನ್ನು ಹುಡುಕಿಕೊಂಡಿದ್ದಾಳೆ. ಅವನೊಂದಿಗೆ ಫಿಲ್ಮ್‌ಗೆ ಹೋಗುತ್ತಿದ್ದಾಳೆ. ಅರೇ, ಹಾಗಾದರೆ ಅವಳ ದೃಷ್ಟಿಯಲ್ಲಿ ತಮಗೆಲ್ಲ ಐಡೆಂಟಿಟಿಯೇ ಇಲ್ಲವಾದಂತಾಯಿತಲ್ಲ? ಈ ದಿಗಿಲು ಅದೆಂಥ ಕ್ರೌರ್ಯವನ್ನು ಹುಟ್ಟುಹಾಕಿದೆ ಎಂಬುದರ ದುರಂತ ಉದಾಹರಣೆ ನಮ್ಮ ಮುಂದಿದೆ. ಬಿಹಾರ- ಉತ್ತರ ಪ್ರದೇಶಗಳಂಥ ರಾಜ್ಯಗಳಿಂದ ವರದಿಯಾಗುವ ಅತ್ಯಾಚಾರ- ಬೆತ್ತಲುಗೊಳಿಸಿ ಮೆರವಣಿಗೆ ಮಾಡುವ ಕ್ರೌರ್ಯಗಳಲ್ಲಿ ಈ ಪುರುಷ ಇಗೋದ ಜತೆ ಜಾತಿ ಇಗೋ ಬೆರೆತುಕೊಂಡಿದೆ. 'ಕೆಳಜಾತಿಗೆ ಸೇರಿದ ಹೆಣ್ಣು ನೀನು, ನಿನಗೆ ಸ್ಥಾನ ತೋರಿಸುವವನು ನಾನು' ಎಂಬ ಪೋಷಿತ ಅಹಮಿಕೆಯ ಕೆಟ್ಟ ಕುಣಿದಾಟ ಅದು.
ಹೆಣ್ಣು ಸಹಜೀವಿ ಅಂತಲ್ಲದೇ ದಕ್ಕಿಸಿಕೊಳ್ಳಬೇಕಿರುವ ಪದಾರ್ಥ, ತನ್ನ ವಿಜಯದ ಲಾಂಛನ, ತೋಟ- ಮನೆಮಾರುಗಳಂತೆ ಮಾಲಿಕತ್ವಕ್ಕೆ ಒಳಗೊಳ್ಳಬೇಕಾದ ವಸ್ತು ಎಂಬ ಗ್ರಹಿಕೆ ಸಮಾಜವನ್ನು ಎಷ್ಟು ಗಾಢವಾಗಿ ಆವರಿಸಿಕೊಳ್ಳುತ್ತ ಹೋಗುತ್ತದೆಯೋ ಅದೇ ಪ್ರಮಾಣದಲ್ಲಿ ಅತ್ಯಾಚಾರ- ಅನಾಚಾರಗಳು ಹೆಚ್ಚುತ್ತ ಹೋಗುತ್ತವೆ. ಆರ್ಥಿಕ ಕೆಳಸ್ತರದಲ್ಲಿರುವ ಹತಾಶ ಕಾಯವೊಂದು ತನ್ನದೇ ಪರಿಸರದಲ್ಲಿರುವ ಹೆಣ್ಣಿನ ಮೇಲೆ ಬೀಳುವುದು ಆಕೆಯ ಗಟ್ಟಿಗೊಳ್ಳುತ್ತಿರುವ ಐಡೆಂಟಿಟಿ ಒಪ್ಪಲಾಗದ ಉನ್ಮಾದವಿದೆ. ಕನಿಷ್ಠ ಬಟ್ಟೆಯಲ್ಲಿ ಜುಮ್ಮೆಂದು ಕಾರಿನಿಂದಿಳಿದು ಮಾಧ್ಯಮದ ಕೇಂದ್ರಬಿಂದುವಾಗುವ ಹೈಸೊಸೈಟಿ ಯುವತಿಯ ಐಡೆಂಟಿಟಿಯೂ ತಾನೇನೂ ಅಲ್ಲ ಎಂಬ ಕೀಳರಿಮೆಯವನಿಗೆ ತಿದಿ ಒತ್ತುತ್ತದೆ. ಆದರೆ ಆ ಹತಾಶೆಯ ಕುದಿಯನ್ನು ಅವಳ ಮೇಲೆ ಚೆಲ್ಲಿಬರುವುದು ಈತನಿಗೆ ಸಾಧ್ಯವಾಗದ ಮಾತು. ಹಾಗಂತ ಅದು ತಣ್ಣಗಾಗುವುದಿಲ್ಲ. ಬದಲಿಗೆ ಇಲ್ಲೆಲ್ಲೋ ಸಣ್ಣಮನೆಯಲ್ಲಿ ತನ್ನನ್ನೆಂದೂ 'ಕಮಾಡಿಟಿ'ಯಾಗಿ ಬಿಂಬಿಸಿಕೊಳ್ಳದೇ ಮರ್ಯಾದಾ ಸೀಮೆಯೊಳಗೇ ಇದ್ದವಳನ್ನು ಸುಟ್ಟುಹಾಕುತ್ತದೆ. ಕಾಮವನ್ನು ಸಮ್ಮತಿ- ಖರೀದಿಗಳ ಮೂಲಕ ಪೂರೈಸಿಕೊಳ್ಳಬಹುದಾದ ಧನಿಕನೊಬ್ಬ ತನ್ನ ಕಚೇರಿಯಲ್ಲಿ ಕೆಲಸ ಮಾಡುವವಳನ್ನು ಅಸಹಾಯಕಳನ್ನಾಗಿಸಿ ಅಂಥ ಕೃತ್ಯಕ್ಕಿಳಿಯುವುದು 'ತಾನು ಹೇಗೂ ದಕ್ಕಿಸಿಕೊಳ್ಳಬಲ್ಲೆ' ಎಂಬುದನ್ನು ಖಾತ್ರಿಪಡಿಸಿಕೊಳ್ಳುವ 'ವಿಜಯ'ಭಾವದಿಂದ.
ಕೊನೆಗೂ ಅತ್ಯಾಚಾರವೆಂಬುದು ಹೆಚ್ಚಿನ ಸಂದರ್ಭಗಳಲ್ಲಿ ಆ ಕ್ಷಣದ ಕಾಮವನ್ನು ಮೀರಿದ ಬರ್ಬರ ಮನೋವ್ಯಾಪಾರ. ಈ ಮನಸ್ಥಿತಿ ನೆಲೆಗೊಳ್ಳುವುದಕ್ಕೆ ಇಂಬು ಸಿಕ್ಕಿರುವುದು ಸಮಾಜದ ನೆಲೆಯಲ್ಲೇ. ಅದು ಬೆಳೆಸಿರುವ ಗ್ರಹಿಕೆಗಳಲ್ಲೇ. ಇದಕ್ಕೆ ಆಧುನಿಕತೆ- ಸಂಪ್ರದಾಯ ಎಲ್ಲದರ ಕೊಡುಗೆಯೂ ಇದೆ. ಭಾರೀ ಹಣ, ಚೆಂದದ ಮನೆ, ಚೆಂದದ ಹೆಂಡತಿ ಇವು ಮಾತ್ರವೇ ನಮಗೆ ಐಡೆಂಟಿಟಿ ತರಬಹುದಾದ ಸಂಗತಿಗಳು ಅಂತ ನಂಬಿಸಿ ಜಗತ್ತನ್ನು ಅವುಗಳ ಹಿಂದೆ ಓಡಲು ಬಿಡುತ್ತಿರುವ ಧೋರಣೆಗಳು ಕರಗಿದಾಗ ಮಾತ್ರವೇ ಅತ್ಯಾಚಾರ- ಅನಾಚಾರಗಳ ಸಂಖ್ಯೆಗಳು ಕ್ಷೀಣವಾಗುತ್ತವೆ.
ಮಾನವರಾಗುವ, ಮಾನವಂತರಾಗುವ ಹಾದಿ ನಾವು ತಿಳಿದುಕೊಂಡಷ್ಟು ಸುಲಭದ್ದಲ್ಲ.

-ಚೈತನ್ಯ ಹೆಗಡೆ
cchegde@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com