ಬೆಂಗಳೂರಿನ ಅರ್ಕಾವತಿ ಬಡಾವಣೆಗೆಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವಶಪಡಿಸಿಕೊಳ್ಳಬೇಕಾಗಿದ್ದ ಭೂಮಿಯಲ್ಲಿ ಈಚೆಗೆ 541 ಎಕರೆಗಳಷ್ಟು ಭೂಮಿಯನ್ನು ಹೊರತುಪಡಿಸುವ (ಡಿ-ನೋಟಿಫಿಕೇಷನ್) ಆದೇಶ ಕುರಿತು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸುವ ನಿರ್ಧಾರವನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆ ಅಧಿವೇಶನದ ಕಟ್ಟ ಕಡೆಯ ದಿನ, ಕೊನೆಯ ನಿಮಿಷದಲ್ಲಿ ಪ್ರಕಟಿಸಿದ್ದು, ಅವರ ಚಾಣಾಕ್ಷ ತಂತ್ರವೋ ಅಥವಾ ಅವರು ಸೆಲ್ಫ್ ಗೋಲ್ ಹೊಡೆದುಕೊಂಡಿದ್ದಾರೋ ಎನ್ನುವ ಚರ್ಚೆಗೆ ಅವಕಾಶವಾಗಿದೆ.
ವಿಧಾನಸಭೆಯಲ್ಲಿ ಇದ್ದಕ್ಕಿದ್ದಂತೆ, ಮಾಜಿ ಮುಖ್ಯಮಂತ್ರಿ, ಹಾಲಿ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್ ಅವರು ಭೂಮಿ ವಶಪಡಿಸಿಕೊಳ್ಳುವ ಕ್ರಮವನ್ನು ಉದ್ದೇಶ ಪೂರ್ವಕವಾಗಿ, ಹಣ ಗಳಿಸುವ ದೃಷ್ಟಿಯಿಂದ ಕೈಬಿಟ್ಟಿದ್ದೀರಿ, ಆ ವಿಚಾರದಲ್ಲಿ ಸಿಬಿಐ ತನಿಖೆ ನಡೆಸಿ ಎಂದು ಒತ್ತಾಯಪಡಿಸಿದಾಗ, ಸಿದ್ದರಾಮಯ್ಯ ಆರಂಭದಲ್ಲಿ ತಾವು ಒಂದು ಗುಂಟೆಯಷ್ಟು ಭೂಮಿಯನ್ನೂ ಕೈ ಬಿಟ್ಟಿಲ್ಲ ಎಂದು ಸಾರಿದರೂ, ಮರುದಿನ ಶೆಟ್ಟರ್ ಅಧಿಕೃತ ಪ್ರಕಟಣೆಯ ಪ್ರತಿಯನ್ನೇ ಪ್ರದರ್ಶಿಸಿ ಮತ್ತೆ ಮತ್ತೆ ಕಾಡಿದಾಗ ಮುಖ್ಯಮಂತ್ರಿ ಸಹಿ ಹಾಕಿದ್ದನ್ನು ಒಪ್ಪಿಕೊಂಡು, "ಆದರೆ ಅದು ನ್ಯಾಯಾಲಯದ ನಿಂದನೆ ಪ್ರಕರಣದ ಸಂಬಂಧದಲ್ಲಿ ಮಾಡಿದ್ದು" ಎನ್ನುವ ಸಮಾಧಾನ ನೀಡಿದರು.
ಸಂಘರ್ಷಕ್ಕೆ ಅಷ್ಟೇ ಸಾಕಾಯಿತು. ಸಿದ್ದರಾಮಯ್ಯ ಅವರು ತಾವೇನೂ ತಪ್ಪನ್ನೇ ಮಾಡಿಲ್ಲ ಎನ್ನುವ ಅತ್ಯುನ್ನತ ಮಟ್ಟದ ನಿಲವಿನ ಸ್ತರದಲ್ಲೇ ಬೇಕಿದ್ರೆ ಯಾವ ರೀತಿಯ ತನಿಖೆಗೂ ಸಿದ್ಧ ಎಂದಿದ್ದನ್ನು ಬದಲಾಯಿಸಿಕೊಂಡು ನ್ಯಾಯಾಂಗ ತನಿಖೆ, ಸದನ ಸಮಿತಿಯ ತನಿಖೆಗೆ ಸಿದ್ಧ. ಸಿಬಿಐ ಬೇಕಾಗಿಲ್ಲ ಎಂದಿದ್ದರು. ಅಲ್ಲಿಗೆ ಸಿದ್ದರಾಮಯ್ಯ - ಜಗದೀಶ ಶೆಟ್ಟರ್ ನಡುವಣ - ಸಂಘರ್ಷಕ್ಕೆ ಭೂಮಿಕೆ ಸಿದ್ಧವಾಯಿತು. ಅದಾದ ಅನಂತರ ಗೊಂದಲದಲ್ಲೇ ಸದನದ ಕಾರ್ಯಕಲಾಪ ಮುಗಿಯುವ ಹಂತದಲ್ಲಿ ಸಿದ್ದರಾಮಯ್ಯ ನ್ಯಾಯಾಂಗ ತನಿಖೆಯ ನಿರ್ಧಾರವನ್ನು ಪ್ರಕಟಿಸಿದ್ದು.
ನಿಜವಾಗಿಯೂ ಇದೊಂದು ಅಪರೂಪದಲ್ಲಿ ಅಪರೂಪದ ನಿರ್ಧಾರ. ಮುಖ್ಯಮಂತ್ರಿಯಾದವರು, ತಮ್ಮ ಆದೇಶದ ವಿಚಾರದಲ್ಲೇ ನ್ಯಾಯಾಂಗ ತನಿಖೆಗೆ ಆದೇಶ ನೀಡುವುದು ಸಾಮಾನ್ಯವಾದ ವಿಚಾರವಲ್ಲ. ಇದು ಸ್ಪಷ್ಟವಾಗಿ ತನ್ನ ಗರ್ಭದಲ್ಲಿ ರಾಜಕೀಯವನ್ನು ತುಂಬಿಕೊಂಡಿದೆ. ನ್ಯಾಯಾಂಗ ತನಿಖೆ ಎಂದರೆ, ಅದು ಸಾರ್ವಜನಿಕ ತನಿಖೆ. ಅಲ್ಲಿ ನ್ಯಾಯಾಲಯದ ವಾತಾವರಣವೇ ಇರುತ್ತದೆ. ಆದರೆ ಆರೋಪಿಗಳ ಕಟೆಕಟೆ ಇರುವುದಿಲ್ಲ. ಉಳಿದಂತೆ ನ್ಯಾಯಾಧೀಶರಿಗೆ ಉನ್ನತ ಪೀಠ ಎದುರಿಗೆ ವಿವಾದದಲ್ಲಿ ಪಾಲುಗೊಳ್ಳುವ ಜನ, ಸಾಕ್ಷಿಗಳ ವಿಚಾರಣೆ, ವಕೀಲರ ವಾದ-ವಿವಾದ ಎಲ್ಲವೂ ಮುಕ್ತ ಬಹಿರಂಗ.
ಆ ಕಾಲದಲ್ಲಿ ಪ್ರಕಟವಾಗುವ ಎಲ್ಲ ಬಗೆಯ ವಿಚಾರಗಳೂ (ಆರೋಪ - ನಿರಾಕರಣೆ ಇತ್ಯಾದಿ) ದೊಡ್ಡ ರೀತಿಯಲ್ಲೇ ಪ್ರಚಾರ ಪಡೆಯುತ್ತವೆ. ಸಾರ್ವಜನಿಕರ ಬಾಯಿಗೆ ಗ್ರಾಸವಾಗುತ್ತದೆ. ಮುಖ್ಯಮಂತ್ರಿಯ ಸ್ಥಾನದಲ್ಲಿದ್ದುಕೊಂಡು, ತಮಗಿರುವ ಅಧಿಕಾರವನ್ನು (ಈ ವಿಚಾರದಲ್ಲಿ ಅಂತಿಮ ಅಧಿಕಾರದ್ದೇ) ಕಾಯಿದೆ ಬದ್ಧವಾಗಿ ಚಲಾಯಿಸಿದ್ದನ್ನು ಯಾರು ಬೇಕಾದರೂ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಾದ ಅಧಿಕಾರ ಇದ್ದರೂ, ಅಂತಹ ಪರೀಕ್ಷೆಗೆ ಅವರೇ ವೇದಿಕೆಯನ್ನು ನಿರ್ಮಿಸಿ ಕೊಟ್ಟಿದ್ದು ಏಕೆ?
ಆಂದೋಲನ ದೊಡ್ಡದಾಗುತ್ತಿತ್ತು: ಒಂದು ವೇಳೆ ಸಿದ್ದರಾಮಯ್ಯ ಇಂತಹ ನಿರ್ಧಾರವನ್ನು ಪ್ರಕಟಿಸದೇ ಹೋಗಿದ್ದರೆ, ಭಾರತೀಯ ಜನತಾ ಪಾರ್ಟಿ (ಈಗ ಕೇಂದ್ರದಲ್ಲಿ ಆಳುವ ಪಕ್ಷ) ರಾಜ್ಯದ ಎಲ್ಲ ಕಡೆ ಆಂದೋಲನ ನಡೆಸುವ ಉತ್ಸಾಹಕ್ಕೆ ತಣ್ಣೀರೆರಚಿದಂತೆ ಆಗುತ್ತಿರಲಿಲ್ಲ. ದೊಡ್ಡ ಆಂದೋಲನವೇ ನಡೆಯುತ್ತಿತ್ತು. ಈಗಲೂ ನಡೆಯಬಹುದು. ಆದರೆ ಮುಖ್ಯಮಂತ್ರಿಯೇ ನ್ಯಾಯಾಂಗ ತನಿಖೆಗೆ ಆದೇಶ ನೀಡಿರುವಾಗ ಇನ್ಯಾಕೆ ಪ್ರದರ್ಶನ ಎಂದು ಕೇಳುವ ಹಕ್ಕನ್ನು ಆಳುವ ಪಕ್ಷ ಪಡೆಯಬಹುದು. ರಾಜ್ಯ ಸರ್ಕಾರದ ವಿರುದ್ಧದ ಆರೋಪಗಳು ಪ್ರಕಟವಾದರೆ, ಅದರ ತನಿಖೆ ನಡೆಸುವ ಅಧಿಕಾರವೂ ಕೇಂದ್ರಕ್ಕಿದೆ. ಸಿದ್ದರಾಮಯ್ಯ ಏನೂ ಮಾಡದೇ ಹೋಗಿದ್ದರೆ, ಕೇಂದ್ರ ಸರ್ಕಾರವೇ ನ್ಯಾಯಾಂಗ ತನಿಖೆಗೆ ವ್ಯವಸ್ಥೆ ಮಾಡಿದ್ದರೆ, ಆಗ ಅವರ ಪ್ರತಿಷ್ಠೆ ಮುಕ್ಕಾಗುತ್ತಿತ್ತೇನೋ. ಈಗ ಸಿದ್ದರಾಮಯ್ಯ ತಮ್ಮ ಹೆಸರನ್ನು ಉಳಿಸಿಕೊಂಡಿದ್ದಾರೆ.
ಆದರೆ ಅವರು ಇನ್ನೊಂದು ರೀತಿಯ ಅಪಾಯವನ್ನು ಆಹ್ವಾನಿಸಿಕೊಂಡಿರುವುದೂ ನಿಜ. ನ್ಯಾಯಾಂಗ ತನಿಖೆಯನ್ನು ಎದುರಿಸುತ್ತಿರುವ ವ್ಯಕ್ತಿ ಮುಖ್ಯಮಂತ್ರಿಯ ಕುರ್ಚಿಯಲ್ಲಿ ಕೂಡಬಹುದೇ ಎನ್ನುವುದು ಮುಂದಿನ ಪ್ರಶ್ನೆ. ಪ್ರತಿಪಕ್ಷಗಳು ಆ ಪ್ರಶ್ನೆಯನ್ನೆತ್ತಿಕೊಂಡು ಆಂದೋಲನ ನಡೆಸಲೂಬಹುದು. ಆ ಅಪಾಯದಿಂದ ಪಾರಾಗಲು ಸಿದ್ದರಾಮಯ್ಯ ಬಳಸಿರುವ ತಂತ್ರ ಇದು.
ಇಲ್ಲಿ ಸಿದ್ದರಾಮಯ್ಯ ಅವರ ಎದುರಾಳಿಗಳು ಕೇವಲ ಬಿಜೆಪಿ, ಜಗದೀಶ ಶೆಟ್ಟರ್ ಅವರಲ್ಲ, ಕಾಂಗ್ರೆಸ್ಸಿನಲ್ಲೂ ಅವರನ್ನು ವಿರೋಧಿಸುವ ಶಕ್ತಿಗಳೂ ಇವೆ, ವ್ಯಕ್ತಿಗಳೂ ಇದ್ದಾರೆ. ಅವರು ಕಾಂಗ್ರೆಸ್ಸಿನಲ್ಲೇ ಭೂಗತ ಆಂದೋಲನವನ್ನು ಆರಂಭಿಸುವುದಕ್ಕೂ ಅವಕಾಶವಿದೆ.
ಈಗಾಗಲೇ ಕಾಂಗ್ರೆಸ್ಸಿನ ಹಿರಿಯ ನಾಯಕರು ಎಂದು ಕರೆದುಕೊಳ್ಳುವ ಕೆಲವರು (ಅವರಲ್ಲಿ ಕೆಲವರು ಜನತಾ ಪರಿವಾರದ ಮೂಲದವರು - ಮಾಜಿ ಮಂತ್ರಿಗಳು) ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ಅಹಿಂದ (ಅಲ್ಪಸಂಖ್ಯಾತ ಹಿಂದುಳಿದವರ ದಲಿತರ) ಸಮಾಜದ ಪಕ್ಷಪಾತಿ. ಅದರಿಂದಾಗಿ ಪ್ರಬಲವಾದ ಜನಾಂಗಗಳು ಕಾಂಗ್ರೆಸ್ಸಿಗೆ ವಿರೋಧಿ ಶಕ್ತಿಯಾಗಿವೆ ಎನ್ನುವ ಪ್ರಚಾರವನ್ನು ದೊಡ್ಡ ರೀತಿಯಲ್ಲೇ ನಡೆಸಿದ್ದಾರೆ. ಅವರಿಗೂ ನ್ಯಾಯಾಂಗ ತನಿಖೆ ಸಿದ್ದರಾಮಯ್ಯ ವಿರುದ್ಧ ಒಂದು ಅಸ್ತ್ರವಾಗಲಿದೆ.
ಸದ್ಯಕ್ಕೆ ಮೇಲ್ನೋಟಕ್ಕೆ ಎಲ್ಲವೂ ಸರಿಯಾಗಿದೆ. ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ಸಿನ ವರಿಷ್ಠರ (ಸೋನಿಯಾ ಗಾಂಧಿ - ರಾಹುಲ ಗಾಂಧಿ) ಅವರ ಅಖಂಡ ಬೆಂಬಲವಿದೆ ಎನ್ನುವ ಭಾವನೆ ಇದ್ದರೂ ಮುಖ್ಯಮಂತ್ರಿಯ ವಿರುದ್ಧವೇ ನ್ಯಾಯಂಗ ತನಿಖೆ ನಡೆಯುವ ಸಮಯದಲ್ಲಿ ಯಾರ್ಯಾರು ಏನೇನು ಮಾಡುತ್ತಾರೋ ಯಾರಿಗೆ ಗೊತ್ತು?
ಹಿಂದಿನ ಉದಾಹರಣೆಗಳು: ಮುಖ್ಯಮಂತ್ರಿಯಾಗಿದ್ದಾಗಲೇ ತಮ್ಮ ವಿರುದ್ಧದ ಆರೋಪಗಳ ತನಿಖೆಯ ವ್ಯವಸ್ಥೆ ಮಾಡಿಕೊಂಡ ಎರಡು ಉದಾಹರಣೆಗಳು ಕರ್ನಾಟಕದಲ್ಲಿವೆ. ಮೊದಲನೆಯದು, ತಮ್ಮ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ತನಿಖೆಗೆ ಅಧಿಕಾರದ ಕೊನೆಯ ದಿನಗಳಲ್ಲಿ ದೇವರಾಜ ಅರಸು ಅವರು ಇಕ್ಬಾಲ್ ಹುಸೇನ್ ತನಿಖಾ ಆಯೋಗವನ್ನು ರಚಿಸಿಕೊಂಡಿದ್ದರು. ತಾಂತ್ರಿಕ ಕಾರಣಗಳಿಂದ ಇಕ್ಬಾಲ್ ಹುಸೇನ್ ಆಯೋಗ ಕೆಲಸ ಮಾಡಲಿಲ್ಲ. ಆ ಕ್ಷಣದಲ್ಲೇ ಕೇಂದ್ರ ಸರ್ಕಾರ ದಿಢೀರನೆ ಗ್ರೋವರ್ ಆಯೋಗವನ್ನು ರಚಿಸಿತ್ತು.
ಭ್ರಷ್ಟಾಚಾರದ ವಿಚಾರದ ಪ್ರಸ್ತಾಪ ಇಲ್ಲದಿದ್ದರೂ, ಬೇರೆ ಕಾರಣಗಳಿಗಾಗಿ ದೇವರಾಜ ಅರಸು ಸರ್ಕಾರವನ್ನೇ ಜನತಾ ಸರ್ಕಾರ ವಜಾ ಮಾಡಿತ್ತು. ಗ್ರೋವರ್ ಆಯೋಗ ತನ್ನ ಅಂತಿಮ ವರದಿಯಲ್ಲಿ ನಾಲ್ಕು ಅಂಶಗಳಲ್ಲಿ ಅರಸು ವಿರುದ್ಧ ಪಕ್ಷಪಾತದ ಆರೋಪ ಹೊರಿಸಲು ಅವಕಾಶವಿದೆ ಎಂದು ಹೇಳಿತ್ತು.
ಮುಂದೆ ನಡೆದ ಚುನಾವಣೆಯಲ್ಲಿ ದೇವರಾಜ ಅರಸು ನೇತೃತ್ವದ ವಿಧಾನಸಭೆಯಲ್ಲಿ ಭಾರಿ ಬಹುಮತ ಗಳಿಸಿದಾಗ ಎಲ್ಲ ತಣ್ಣಗಾಗಿದ್ದು ಬೇರೆ ಮಾತು.
ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ, ಎಇಜಿ-ಎನ್ಜಿಇಎಫ್ ಹಗರಣಗಳಲ್ಲಿ ನೂರು ಕೋಟಿ ರುಪಾಯಿಗಳ ಲಂಚದ ಪ್ರಸ್ತಾಪವಾಗಿತ್ತು. ಆಗ ಹೆಗಡೆ ಅವರು ಆ ಆರೋಪ ಪ್ರಕಟವಾದ ಒಂದು ಪತ್ರಿಕೆಯಲ್ಲಿರುವ ವಿವರಗಳನ್ನು ಕುರಿತು ತನಿಖೆ ನಡೆಸಲು ಆಗಿನ ಲೋಕಾಯುಕ್ತರನ್ನು (ಸುಷ್ಮಾ ಸ್ವರಾಜ್ ಅವರ ಮಾವ) ಕೇಳಿಕೊಂಡರು. ತನಿಖೆ ನಡೆಯಿತು. ಆರೋಪದಲ್ಲಿ ಹುರುಳಿಲ್ಲ ಎನ್ನುವ ಅಭಿಪ್ರಾಯ ಹೊರಬಿತ್ತು. ಆಗೇನೂ ಹೆಗಡೆ ರಾಜಿನಾಮೆ ನೀಡಿರಲಿಲ್ಲ. ಮುಂದೆ ಕೇಂದ್ರ ಸರ್ಕಾರ ನೇಮಿಸಿದ ಕುಲದೀಪ್ ಸಿಂಗ್ ಆಯೋಗ ಎರಡು ಪ್ರಕರಣಗಳಲ್ಲಿ ಹೆಗಡೆ ಅವರ ಪಕ್ಷಪಾತ ನೀತಿಯ ಆರೋಪದಲ್ಲಿ ಹುರುಳಿದೆ ಎಂದಿತ್ತು. ಆ ವಿಚಾರವನ್ನು ಅಲ್ಲಿಗೇ ಕೈ ಬಿಡಲಾಯಿತು. ಅನಂತರ ಹೆಗಡೆ ಮುಖ್ಯಮಂತ್ರಿಯಾಗಲಿಲ್ಲ.
ಇವೆಲ್ಲದರ ಪರಿಚಯವಿರುವ ಈಗಿನ ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ನ್ಯಾಯಾಂಗ ತನಿಖೆಗೆ ತಾವಾಗಿಯೇ (ಒತ್ತಾಯ ಇದ್ದಿರಬಹುದು) ತಲೆಒಡ್ಡುವ ಕ್ರಮವನ್ನು ಕೈಗೊಂಡಿದ್ದಾರೆ. ಅದು ಅವರ ಸ್ವಂತ ರಾಜಕೀಯ ನಿರ್ಧಾರ.
ನ್ಯಾಯಾಂಗ ತನಿಖೆ ಎಂದರೆ ಚಕಚಕನೆ ಕ್ಷಿಪ್ರವಾಗಿ ನಡೆಯುವಂತಹ ತನಿಖೆ ಅಲ್ಲ. ತನಿಖಾ ಪೀಠಕ್ಕೆ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಹುಡುಕುವುದು ಕಷ್ಟ. ತನಿಖಾ ಆಯೋಗದ ವಿಚಾರಣೆಯ ಸಮಯದಲ್ಲಿ ವಕೀಲರೂ ಇರುವುದರಿಂದ ಯಾವ ಒಂದು ವಿಷಯವೂ ಬಡಪೆಟ್ಟಿಗೆ ಮುಗಿಯುವಂತಹದ್ದಲ್ಲ. ಸಣ್ಣ ಪುಟ್ಟ ಅಂಶಗಳನ್ನು ಹಿಡಿದುಕೊಂಡು ಹಿಂಡುವ ಪ್ರವೃತ್ತಿಗೆ ಧಾರಾಳವಾದ ಅವಕಾಶ ಸಿಗುತ್ತದೆ.
ಅರ್ಕಾವತಿ ಬಡಾವಣೆಯ ವ್ಯವಹಾರ ಮೊದಲಿನಿಂದಲೂ ಗೊಂದಲದ ಗೋಜು. ಸರ್ಕಾರ ಯಾವ ರೀತಿ ಕೆಲಸ ಮಾಡಬಾರದು ಎನ್ನುವುದಕ್ಕೆ ಇದೊಂದು ಉದಾಹರಣೆ. ಯೋಜನೆಯ ಪ್ರಸ್ತಾಪ ಆರಂಭವಾಗಿ ದಶಕವೇ ಉರುಳಿದೆ. ಈಗಲೂ ಭೂಮಿಯನ್ನು ಸರ್ಕಾರ ವಶಪಡಿಸಿಕೊಳ್ಳುವುದರ ವಿರುದ್ಧ ಅನೇಕರು ಹೋರಾಡುತ್ತಿದ್ದಾರೆ. ಈಗ ವಿವಾದದಲ್ಲಿ ಸಿಕ್ಕಿಬಿದ್ದಿರುವ ಪ್ರಕರಣವೂ ಆ ಹೋರಾಟದ ಒಂದು ಅಂಶವೇ. ಈಗ್ಯಾಕೆ ಇಂತಹ ಕಾಳಜಿ?
ಅದಕ್ಕೆ ಬಲ್ಲವರು ಕೊಡುವ ಕಾರಣ ಒಂದೇ ಒಂದು; ಅರ್ಕಾವತಿ ಬಡಾವಣೆಯ ಪ್ರದೇಶದಲ್ಲಿ ಭೂಮಿಯ ಮೌಲ್ಯ ಯಾವುದಾದರೂ ಮಾರ್ಗದಿಂದ ಅಲ್ಲಿನ ಭೂಮಿಯ ಮೇಲೆ ಹಕ್ಕು ಸಾಧಿಸಿದವರು ರಾತ್ರಿ ಕಳೆದು ಬೆಳಗಾಗುವುದರೊಳಗೆ ಕೋಟ್ಯಧಿಪತಿಗಳಾಗಬಹುದು ಎನ್ನುವ ಕನಸು ಅನೇಕರಿಗೆ ಬಿದ್ದಿರುವುದೇ.
ಈ ಪ್ರಕರಣದಲ್ಲಿ ಸಿದ್ದರಾಮಯ್ಯ ನಿರ್ಧಾರ ಚಾಣಾಕ್ಷತನದ ತಂತ್ರವೋ ಅಥವಾ ಸೆಲ್ಫ್ ಗೋಲೋ ಎನ್ನುವುದಕ್ಕೆ ಉತ್ತರ ಭವಿಷ್ಯದ ಗರ್ಭದಲ್ಲಿ ಅಡಗಿದೆ.
ಕಿಡಿಗೇಡಿತನ: ವಿಧಾನಮಂಡಲ ಅಧಿವೇಶನದ ಕಾಲದಲ್ಲಿ ಸಹಚಿಂತನ - ಸಹ ಭೋಜನದ ಸುಖವನ್ನು ಅನುಭವಿಸಿದ್ದವರು ಕೊನೆಯ ಮೂರು ದಿನಗಳಲ್ಲಿ ಚಾಕು - ಚೂರಿಗಳನ್ನು ಹೊರಗೆ ತಂದಿದ್ದಕ್ಕೆ ಕಾರಣ ಯಾರಿಗೂ ಗೊತ್ತಿಲ್ಲ.
- ಸತ್ಯ
anisikeprabha@gmail.com