

Synthetic Biology ಅಥವಾ ಸಂಯೋಜಿತ ಅಥವಾ ಸಂಶ್ಲಿಷ್ಟ ತಂತ್ರಜ್ಞಾನ ಹದಿನಾಲ್ಕು ವರ್ಷಗಳ ಹಿಂದೆ ಜನ್ಮ ತಾಳಿತು. ಈ ತಂತ್ರಜ್ಞಾನಕ್ಕೆ ಚಿಕ್ಕದಾಗಿ-ಚೊಕ್ಕವಾಗಿ Synbio ಅಂತಲೂ ಕರೆಯುತ್ತಾರೆ. ಈ ತಂತ್ರಜ್ಞಾನ ಮೊದಲು ಅಮೆರಿಕದಲ್ಲಿ ರೂಪುಗೊಂಡಿತು. 2016ರ ವೇಳೆಗೆ ಇದರ ಸುತ್ತ 10.8 ಬಿಲಿಯನ್ ಡಾಲರ್ನಷ್ಟು ವಹಿವಾಟು ನಡೆಯಲಿದೆ ಎಂದು ಇತ್ತೀಚಿನ ವ್ಯಾಪಾರಿ ವರದಿಗಳು ಭರವಸೆ ಮೂಡಿಸಿವೆ. ಸದ್ಯಕ್ಕೆ ಈ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ದೇಶವೆಂದರೆ ಅಮೆರಿಕ. ಇನ್ನು ಎರಡನೆಯ ಸ್ಥಾನದಲ್ಲಿರುವುದು ಇಂಗ್ಲೆಂಡ್. ಚೀನಾ ಮುಂದಿನ ಹತ್ತು ವರ್ಷಗಳಲ್ಲಿ Synbio ಕ್ಷೇತ್ರದಲ್ಲಿ ಮುಂಚೂಣಿಗೆ ಬರುವ ಧ್ಯೇಯ ಹೊಂದಿದೆ.
Synbio ತಂತ್ರಜ್ಞಾನದಲ್ಲಿ ಜೀವಶಾಸ್ತ್ರ ವಿಜ್ಞಾನಿಗಳಿಗಿಂತಲೂ ಇಂಜಿನಿಯರುಗಳೇ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಅಮೆರಿಕದಲ್ಲಿ Synbio ಅಧ್ಯಯನ ಹೆಚ್ಚಾಗಿ ವಿಶ್ವವಿದ್ಯಾಲಯಗಳ ಎಂಜಿನಿಯರಿಂಗ್ ವಿಭಾಗಗಳಲ್ಲಿಯೇ ನಡೆಯುತ್ತಿವೆ. ಆದರೂ ಇಂಜಿನಿಯರುಗಳಿಗೆ ಜೀವಶಾಸ್ತ್ರಜ್ಞರ ಜೊತೆಯಲ್ಲಿ ಅಧ್ಯಯನ ಮಾಡದೇ ವಿಧಿ ಇಲ್ಲ. ಉಪಯುಕ್ತ ಉದ್ದೇಶಗಳಿಗಾಗಿ ಜೈವಿಕ ಸಾಧನಗಳು ಮತ್ತು ವ್ಯವಸ್ಥೆಗಳನ್ನು ವಿನ್ಯಾಸಗೊಳಿಸಿ ನಿರ್ಮಿಸುವುದೇ Synthetic Biology. ಅಂದರೆ ವಿನೂತನವಾಗಿ ಜೀವಕೋಶದ ಬಿಡಿ-ಭಾಗಗಳನ್ನು ರಚಿಸುವುದು ಹಾಗೂ ನೈಸರ್ಗಿಕವಾಗಿ ಸಿಗುವ ಜೀವಕೋಶದ ವ್ಯವಸ್ಥೆಯನ್ನು ಪುನಃ ನಿರ್ಮಾಣ ಮೂಡುವುದು. ಈ ತಂತ್ರಜ್ಞಾನದ ಮೂಲಕ ಮೊಟ್ಟ ಮೊದಲನೆಯದಾಗಿ 2004ರಲ್ಲಿ ಒಂದು ವೈರಾಣುವನ್ನು ನಿರ್ಮಿಸಲಾಯಿತು. ಏಕೆಂದರೆ ಜೀವಶಾಸ್ತ್ರದಲ್ಲಿ ಗೊತ್ತಿರುವ ಅತೀ ಸರಳವಾದ ಜೀವಕೋಶವೆಂದರೆ ವೈರಾಣು. ಹೀಗಾಗಿ, ಅದನ್ನು ಕೃತಕವಾಗಿ ನಿರ್ಮಿಸುವುದು ಅತಿ ಸುಲಭ. ಇದಕ್ಕೆ ''Proof of Concept''ಎಂದು ಕರೆಯುತ್ತಾರೆ. ಅಂದರೆ, ಈ ತರಹದ ನಿರ್ಮಾಣ ಕೆಲಸವನ್ನು ವಿಜ್ಞಾನಿಗಳು ಪ್ರಯೋಗ ಶಾಲೆಯಲ್ಲಿ ದೃಢವಾಗಿ ತಯಾರಿಸಿ ತೋರಿಸಬಹುದು. ಇದಾದ ಮೇಲೆ ಒಂದು ವಿಬ್ರಿಯೋ ಬ್ಯಾಕ್ಟೀರಿಯವನ್ನು ಕೃತಕವಾಗಿ ನಿರ್ಮಿಸಲಾಯಿತು. ಇತ್ತೀಚೆಗೆ Yeast ಎಂಬ ಕಿಣ್ವದ ಸಮಗ್ರ Chromosome ನು ಕೃತಕವಾಗಿ ನಿರ್ಮಿಸಲಾಗಿದೆ.
ಹಾಗೆ ನೋಡಿದರೆ, ಸಿಂಥೆಟಿಕ್ ಬಯಾಲಜಿ ನಿಜವಾಗಿಯೂ ಹೊಸದೇನಲ್ಲ. ಅರವತ್ತರ ದಶಕದಲ್ಲಿಯೇ ಭಾರತದ ಮೂಲದವರಾದ ನೊಬೆಲ್ ಪ್ರಶಸ್ತಿ ವಿಜೇತ ಹರ್ಗೋಬಿಂದ್ ಖುರಾನಾ ಅವರು ಡಿ-ಆಕ್ಸಿ ರೈಬೋ ನೂಕ್ಲಿಕ್ ಆಮ್ಲ (DNA)ದ ಸರಪಳಿಯನ್ನು ಕೃತಕವಾಗಿ ಪ್ರಯೋಗ ಶಾಲೆಯಲ್ಲಿ ನಿರ್ಮಿಸಿ, ಅದನ್ನು E.coli ಬ್ಯಾಕ್ಟೀರಿಯಾದಲ್ಲಿ ದ್ವಿಗುಣಗೊಳಿಸಬಹುದು ಎಂದು ತೋರಿಸಿ ನೊಬೆಲ್ ಪ್ರಶಸ್ತಿ ಪಡೆದಿದ್ದರು.
Synthetic Biology ಸಹ Synthetic chemistry ತರಹದ ಒಂದು ತಂತ್ರಜ್ಞಾನ. Synthetic chemistryಯುಲ್ಲಿ ಭಾರತದ ವಿಜ್ಞಾನಿಗಳು ಅತಿ ನಿಪುಣರೆಂದು ವಿಶ್ವದಲ್ಲೆಲ್ಲಾ ಪ್ರತೀತಿ. ಹಾಗಾಗಿ, ಭಾರತದ ಜೈವಿಕ ತಂತ್ರಜ್ಞರು Synthetic Biologyಯಲ್ಲಿಯೂ ವಿಶ್ವಮಾನ್ಯತೆ ಪಡೆಯಬಹುದು. ಸದ್ಯದಲ್ಲಿ ಭಾರತದಲ್ಲಿ ಒಂದೆರಡು ಪ್ರಯೋಗಶಾಲೆಗಳನ್ನು ಬಿಟ್ಟರೆ, ಬೇರೆಲ್ಲಿಯೂ Synthetic Biologyಯ ಅಧ್ಯಯನ ಅಥವಾ ಸಂಶೋಧನೆಗಳು ಕಂಡುಬರುತ್ತಿಲ್ಲ. ಆದರೆ, ಈ ವಿಷಯದಲ್ಲಿ ದುಃಖಪಡುವ ಅಗತ್ಯವಿಲ್ಲ. ಕೆಲವೇ ವರ್ಷಗಳಲ್ಲಿ ಪರಿಣತಿ ಹೊಂದಿ, ವಿಶ್ವಮಟ್ಟದಲ್ಲಿ ಸಂಶೋಧನೆಗಳು ಭಾರತದಲ್ಲೂ ನಡೆಯಬಹುದು. ಇದಕ್ಕಾಗಿ, ಕೇಂದ್ರ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ, ಅನುದಾನವನ್ನು ಬಿಡುಗಡೆ ಮಾಡುತ್ತಿದೆ.
ಇನ್ನು ಸದ್ಯದಲ್ಲಿ, ಅಮೆರಿಕದ ರಕ್ಷಣಾ ಇಲಾಖೆ 500 ಮಿಲಿಯನ್ ಡಾಲರ್ಗಳನ್ನು ಅನುದಾನದ ರೂಪದಲ್ಲಿ ನೀಡುತ್ತಿದೆ. ಒಟ್ಟಾರೆ, ಅಮೆರಿಕದಲ್ಲಿ ಒಂದು ಬಿಲಿಯನ್ ಡಾಲರ್ಗಳನ್ನು ಮೀರಿ Synthetic Biologyಯಲ್ಲಿ ತೊಡಗಿಸಲಾಗಿದೆ ಎಂದು ಅಂದಾಜು ಮಾಡಲಾಗಿದೆ. ಕ್ಯಾಲಿಫೋರ್ನಿಯಾ ವಿವಿ, ಬರ್ಕ್ಲಿ, ಹಾರ್ವರ್ಡ್, ಎಂಐಟಿ ಮತ್ತು ಸ್ಟ್ಯಾನ್ಫೋರ್ಡ್ ವಿವಿಗಳು ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪ್ರಮುಖ ವಿಶ್ವವಿದ್ಯಾಲಯಗಳು. ಅಷ್ಟೇ ಅಲ್ಲದೇ ಖಾಸಗಿ ಕಂಪನಿಗಳಾದ ಅಜಿಲೆಂಟ್ ಟೆಕ್ನಾಲಜೀಸ್, ಥರ್ಮೋ ಫಿಷರ್ ಸೈಂಟಿಫಿಕ್, ಬ್ರಿಟಿಷ್ ಪೆಟ್ರೋಲಿಯಂ, ಡೌ ಕೆಮಿಕಲ್ಸ್, ಎಕ್ಸಾನ್-ಮೋಬಿಲ್, ಗುಡ್ ಯಿಯರ್ ಟೈರ್ ಮತ್ತು ರಬ್ಬರ್ ಹಾಗೂ ಬಹುರಾಷ್ಟ್ರೀಯ ಔಷಧ ಕಂಪನಿಗಳಾದ ಗ್ಲಾಕ್ಸೋ-ಸ್ಮಿತ್ ಕ್ಲೈನ್, ನೋವಾರ್ಟಿಸ್, ಮೆರ್ಕ್, ಫೈಸರ್, ರೋಷ್, ಸಮೋಷಿ -ಅವೆಂಟಿಸ್ ಮತ್ತು L'Oreal ಗಳು Synthetic Biology ಸಂಶೋಧನೆಯಲ್ಲಿ ಹಣ ಹೂಡಿವೆ.
Synthetic Biology ಯು ಇನ್ನು ಹತ್ತು ವರ್ಷಗಳಲ್ಲಿ ಸರ್ವವ್ಯಾಪಿಯಾಗಿ, ಬೃಹದಾಕಾರದ ವ್ಯಾಪಾರವಾಗಿ ಬೆಳೆಯುವುದೆಂದು ಕಂಪನಿ ಪಂಡಿತರುಗಳು ಹೇಳುತ್ತಿದ್ದಾರೆ. ವ್ಯಾಪಾರ ಮತ್ತು ಉದ್ಯಮ ಅಂದ ತಕ್ಷಣ ಸರ್ಕಾರದ ತಂತ್ರಜ್ಞಾನ ನಿಯಂತ್ರಣಾಧಿಕಾರಿಗಳು ಮತ್ತು ಪರಿಸರವಾದಿಗಳ ಕಿವಿ ನಿಮಿರುತ್ತದೆ. ಈಗಾಗಲೇ ಪರಿಸರವಾದಿಗಳು Synthetic Biology ತಂತ್ರಜ್ಞಾನವನ್ನು ಅತ್ಯಂತ ಕಠಿಣವಾಗಿ ನಿಯಂತ್ರಣಕ್ಕೊಳಪಡಿಸಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಇನ್ನು ಕೆಲವರು Synthetic Biology ಎಂಬ ತಂತ್ರಜ್ಞಾನ ಪ್ರಪಂಚಕ್ಕೆ ಬೇಕಾಗೇ ಇಲ್ಲ, ಹಾಗಾಗಿ ಈ ತಂತ್ರಜ್ಞಾನದ ಮೇಲೆ ಸಂಪೂರ್ಣ ನಿಷೇಧ ಹೇರಬೇಕೆಂದು ಅಲವತ್ತುಕೊಳ್ಳುತ್ತಿದ್ದಾರೆ. ಸದ್ಯಕ್ಕಂತೂ Synthetic Biology ಕಾಯ್ದೆಗಳಿಲ್ಲ. ಈ ತಂತ್ರಜ್ಞಾನದ ಮೂಲಕ ನಿಸರ್ಗದಲ್ಲಿ ಎಂದೂ ಕಾಣದ ಜೀವರಾಶಿಗಳನ್ನು ಸೃಷ್ಟಿಸಬಹುದು. ಆದರೆ ಕುಲಾಂತರಿ ತಂತ್ರಜ್ಞಾನದಲ್ಲಿ ಜೀವರಾಶಿಗಳಲ್ಲಿನ ಗುಣಾಣುಗಳನ್ನಾಗಲೀ ಅಥವಾ ಸಮಗ್ರ ಜೀನೋಮ್ (ಒಂದು ಜೀವರಾಶಿಯ ಸಂಪೂರ್ಣ ಗುಣಾಣುಗಳನ್ನು) ಅನ್ನು ಮಾರ್ಪಾಡು ಮಾಡಿ, ನೈಸರ್ಗಿಕವಾಗಿ ಯಾವ ರೀತಿಯಲ್ಲಿ ಅವು ಜೀವಿಸುತ್ತವೋ ಹಾಗೆಯೇ ಜೀವಿಸುವಂತೆ ಮಾಡಲಾಗುತ್ತದೆ.
ಕೃತಕವಾಗಿ ನಿರ್ಮಿಸಿರುವ ಜೀವರಾಶಿ ಎಂದರೆ ಎಂಥವರಿಗೂ ತಲೆ ಕೆರೆಕೊಳ್ಳುವ ಚಿಂತನೆ ಬಂದೇ ಬರುತ್ತದೆ. Synbio ವಿಜ್ಞಾನಿಗಳು ಕುಲಾಂತರಿ ತಂತ್ರಜ್ಞಾನದಿಂದ ಕಲಿಯಬೇಕಾಗಿರುವುದೇನೆಂದರೆ, ತಾವೇ ಮುಂಚೂಣಿಗೆ ಬಂದು ಸಾಮಾನ್ಯ ಜನರಿಗೆ ಸರಳವಾಗಿ ಅರ್ಥವಾಗುವ ಹಾಗೆ ಈ ತಂತ್ರಜ್ಞಾನದ ಉಪಯೋಗದ ಬಗ್ಗೆ ವಿವರಿಸಿ, ಅವರಿಗೆ ಧೈರ್ಯತುಂಬಬೇಕಾದದ್ದು. ಕುಲಾಂತರಿ ತಂತ್ರಜ್ಞಾನದ ವಿಜ್ಞಾನಿಗಳ ಹಾಗೆ ಸುಮ್ಮನೆ ಕೈ ಕಟ್ಟಿ ಕುಳಿತುಬಿಟ್ಟರೆ, ತಂತ್ರಜ್ಞಾನ ವಿರೋಧಿಗಳು ಯಾವ ರೀತಿ ಕುಲಾಂತರಿ ತಂತ್ರಜ್ಞಾನವನ್ನು ಸಂಪೂರ್ಣವಾಗಿ ರಾಜಕೀಯಮಯವಾಗಿಸಿ ಅದ್ವಾನ ಮಾಡಿಟ್ಟಿದ್ದಾರೋ, ಅದೇ ಗತಿ Synthetic Biologyಗೂ ಬಂದೆರಗುವಂತೆ ಮಾಡುತ್ತಾರೆ. ತಂತ್ರಜ್ಞಾನ ವಿರೋಧಿಗಳು ಒಂದು ಉತ್ತಮ ತಂತ್ರಜ್ಞಾನದ ಬಗ್ಗೆ ಇಲ್ಲ-ಸಲ್ಲದ ಆತಂಕ ಸೃಷ್ಟಿಸಿ ಅದು ಮುಂದುವರಿಯದಂತೆ ಮಾಡಿಟ್ಟುಬಿಡುತ್ತಾರೆ. ಇಲ್ಲಿ ಸರ್ಕಾರ, ರಾಜಕಾರಣಿಗಳು, ರಾಜಕೀಯ ಪಕ್ಷಗಳು, ಸಂಸದರು ಮತ್ತು ವಿಧಾನಸಭೆಯ ಸದಸ್ಯರಿಗೆ, ವಿಜ್ಞಾನಿಗಳು ಸರಳವಾಗಿ Synthetic Biologyಅಂದರೇನು ಮತ್ತು ಅದರ ಸಾಧಕ-ಬಾಧಕಗಳೇನು ಎಂಬುದನ್ನೆಲ್ಲ ವಿವರವಾಗಿ ಅರ್ಥಮಾಡಿಸಬೇಕು. ವಿರೋಧಿಗಳು ಇವರಿಗಿಂತ ಮುಂಚೆಯೇ ಎದ್ದು ನಿಂತು ಜನರ ಮನಸ್ಸು ಕೆಡಿಸಿ ಬಿಟ್ಟರೆ, ಆಗುವ ಹಾನಿಯನ್ನು ಸರಿಪಡಿಸುವುದು ತ್ರಾಸಾಗುವ ಕೆಲಸ. ಮುಂಬರುವ ದಶಕಗಳಲ್ಲಿSynthetic Biology ಯು ಜೈವಿಕ ಆರ್ಥಿಕತೆಯಲ್ಲಿ ಅಗ್ರ ಸ್ಥಾನ ಪಡೆಯುವ ಲಕ್ಷಣಗಳು ಖಂಡಿತವಾಗಿಯೂ ಇದೆ.
-ಡಾ. ಶಾಂತು ಶಾಂತಾರಾಮ್
shanthus@iastate.edu
Advertisement