ಲೋಕಸಭೆ ಚುನಾವಣೆ ದೇಶದ ರಾಜಕೀಯ ಚಿತ್ರವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಆದರೆ ಆ ಚುನಾವಣೆಯ ಫಲಿತಾಂಶದ ವಿಶ್ಲೇಷಣೆ ಅಥವಾ ಆತ್ಮಾವಲೋಕನ ಯಾವ ಪ್ರಮುಖ ಪಕ್ಷಕ್ಕೂ ಅಗತ್ಯವೆಂದು ಕಂಡುಬಂದಿಲ್ಲ.
ಸದ್ಯಕ್ಕೆ ಬಿಜೆಪಿಗೆ ಅಂತಹ ಪರಿಸ್ಥಿತಿ ಇಲ್ಲ. ಚುನಾವಣೆಯಲ್ಲಿ ಪಕ್ಷ ಗಳಿಸಿದ ಪ್ರಚಂಡ ಜಯದ ಹಿನ್ನೆಲೆಯಲ್ಲಿ, ಚುನಾವಣೆ ಪೂರ್ವದಲ್ಲಿನ ಪಕ್ಷದ ನಾಯಕತ್ವ ಕೈಗೊಂಡ ಎಲ್ಲ ನಿರ್ಧಾರಗಳೂ ಸರಿಯಾಗಿತ್ತು ಎನ್ನುವ ಭಾವನೆ ಈಗ ಬಲವಾಗಿ ಬೇರೂರಿದೆ. ಚುನಾವಣೆಗೆ ಮುಂಚೆ, ನರೇಂದ್ರ ಮೋದಿ ಅವರನ್ನೇ ಪ್ರಧಾನಿ ಪೀಠದ ಅಭ್ಯರ್ಥಿ ಎಂದು ಪ್ರಕಟಿಸಿ, ಪಕ್ಷದ ಸಮಸ್ತ ವ್ಯವಹಾರವನ್ನು ಅವರಿಗೇ ಒಪ್ಪಿಸಿದ್ದು ಕೆಲವರ ದೃಷ್ಟಿಯಲ್ಲಿ ಸರಿಯಲ್ಲ ಎಂದು ಕಂಡುಬಂದರೂ, ಅವರೂ ಚುನಾವಣೆಯ ಸಮಯದಲ್ಲಿ ಏನನ್ನೂ ಹೇಳಲಿಲ್ಲ. ಫಲಿತಾಂಶ ಪ್ರಕಟವಾದ ಅನಂತರವೂ ಅವರು ಏನನ್ನೂ ಹೇಳುವ ಸ್ಥಿತಿಯಲ್ಲಿ ಇರಲಿಲ್ಲ.
ಆದರೂ ಬಿಜೆಪಿಯಲ್ಲೂ ಒಂದು ರೀತಿಯ ಆತ್ಮಾವಲೋಕನ ಅಗತ್ಯವೆನ್ನುವುದು ಕಂಡುಬಂದಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ನಿರೀಕ್ಷೆಗಿಂತಲೂ ಭಾರಿ ಜಯ ಗಳಿಸಿದ ಪಕ್ಷ ತಮಿಳುನಾಡು, ಪಶ್ಚಿಮ ಬಂಗಾಳ, ಓಡಿಶಾದಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಭಾವವನ್ನು ತಡೆಯಲಿಕ್ಕೆ ಆಗಲಿಲ್ಲ. ಅದಕ್ಕೆ ವಿಶಿಷ್ಟವಾದ ಕಾರಣಗಳಿರಬಹುದು. ಅದನ್ನಾದರೂ ಬಿಜೆಪಿ ಪತ್ತೆ ಹಚ್ಚಬೇಕಲ್ಲ. ಅದಕ್ಕೆ ಇನ್ನೂ ಸಮಯವಿದೆ. ಅಣ್ಣಾ ಡಿಎಂಕೆ, ಮಮತಾ ಬ್ಯಾನರ್ಜಿ ಹಾಗೂ ನವೀನ ಪಟ್ನಾಯಕ ಬಿಜೆಪಿಯ ಜತೆ ಸೇರಿ ರಾಷ್ಟ್ರೀಯ ಜನತಾಂತ್ರಿಕ ಕೂಟಕ್ಕೆ (ಎನ್‌ಡಿಎ) ಆನೆ ಬಲವನ್ನು ತಂದು ಕೊಟ್ಟಿದೆ. ಒಂದು ರೀತಿಯಲ್ಲಿ ಇಡೀ ದೇಶದಲ್ಲಿ ಆ ಕೂಟದ ಸಾರ್ವಭೌಮ ಅಧಿಕಾರದ ವ್ಯವಸ್ಥೆ ಜಾರಿಗೆ ಬರಬಹುದು. ಸದ್ಯಕ್ಕೆ ಆ ಸಂಭವವಿಲ್ಲ. ಈ ಮೂರೂ ಪಕ್ಷಗಳು ಬಿಜೆಪಿಯ ಸಹವಾಸದಿಂದ ದೂರವಿದ್ದರೂ, ಸದ್ಯಕ್ಕೆ ಅದನ್ನು ವಿರೋಧಿಸಿಲ್ಲ. ಅದೇ ಬಿಜೆಪಿಗೆ ದೊಡ್ಡ ರೀತಿಯ ಅನುಕೂಲಕರ ಸನ್ನಿವೇಶ.
ಬಿಜೆಪಿಗೆ ಈಗ ಅತ್ಮಾವಲೋಕನದ ತುರ್ತು ಅವಶ್ಯಕತೆ ಕಂಡು ಬರದೇ ಇರಬಹುದು. ಆದರೆ ಈ ಚುನಾವಣೆಯ ಸ್ಥಿತಿಯೇ ಶಾಶ್ವತ ಎಂದೇನೂ ಅಲ್ಲ. ಕಾಂಗ್ರೆಸ್‌ಗೆ ತಾನು ಇಡೀ ದೇಶದಲ್ಲಿ ಅಜೇಯವಲ್ಲ ಎಂದು ಗೊತ್ತಾಗಿದ್ದು ದೊಡ್ಡ ರೀತಿಯಲ್ಲಿ ಸೋತಾಗಲೇ. ಉದಾಹರಣೆಗೆ, ಬಿಜೆಪಿ, ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ, ರಾಜ್ಯ ಸರ್ಕಾರವನ್ನು ನಡೆಸುತ್ತಿರುವ ಮುಲಾಯಂ ಸಿಂಗ್ ಯಾದವ್ ಅವರ ಸಮಾಜವಾದಿ ಪಾರ್ಟಿ, ಹಿಂದೆ ಸರ್ಕಾರ ನಡೆಸಿದ್ದ ಮಾಯಾವತಿ ಅವರ ಬಹುಜನ ಸಮಾಜ ಪಾರ್ಟಿಯನ್ನು ಇಷ್ಟೊಂದು ಹೀನಾಯವಾಗಿ ಸೋಲಿಸುವ ಶಕ್ತಿ ಬಂದಿದ್ದು ಶಾಶ್ವತವೆಂದು ಭಾವಿಸಬಹುದೆ? ಮುಲಾಯಂ ಸಿಂಗ್ ಯಾದವ್ ಹಾಗೂ ಮಾಯಾವತಿ ಅವರು ದಶಕಗಳಿಂದ ಬೆಳೆಸಿಕೊಂಡು ಬಂದಿದ್ದ ಸಮುದಾಯ ನಾಯಕತ್ವ ಹೀಗೇ ಒಂದೇ ಬಾರಿಗೆ ಕರಗಿ ಹೋಗುವುದು ಸಾಧ್ಯವೇ? ಈಗಿನ ಚುನಾವಣೆ ಫಲಿತಾಂಶ ನಡೆದಿದ್ದು ಒಂದು ಅಸಾಮಾನ್ಯ ಪರಿಸ್ಥಿತಿಯಲ್ಲಿ. ನರೇಂದ್ರ ಮೋದಿ ಬೇಕು, ಅಥವಾ ಬೇಡ ಎನ್ನುವ ಆಯ್ಕೆಯಷ್ಟೇ ಮತದಾರರ ಮುಂದೆ ಇದ್ದದ್ದು. ಅಂತಹ ಸ್ಥಿತಿ ಬಹುಕಾಲ ಉಳಿಯುವುದಿಲ್ಲ. ಬಿಜೆಪಿ ತನ್ನ ಆತ್ಮಾವಲೋಕನದಲ್ಲಿ ಈ ಅಂಶವನ್ನು ಗಮನದಲ್ಲಿಡಬೇಕಾಗುತ್ತದೆ. ನಿಜ. ಅದೇನೂ ಪಕ್ಷದ ಪಾಲಿಗೆ ತುರ್ತು ಅಗತ್ಯವಿಲ್ಲ.
ಪ್ರಧಾನಿಯಾದ ಅನಂತರ ನರೇಂದ್ರ ಮೋದಿ ಅವರು ಸೂಕ್ತ ರೀತಿಯ ಮಾತುಗಳನ್ನೇ ಆಡುತ್ತಿದ್ದಾರೆ. ಸಚಿವ ಸಂಪುಟದ ಗಾತ್ರ ಹಾಗೂ ಸ್ವರೂಪ, ಸಚಿವರಿಗೆ ಸಿದ್ಧಪಡಿಸಿಕೊಟ್ಟಿರುವ ಬೇಕು - ಬೇಡಗಳ ಪಟ್ಟಿ ಎಲ್ಲವೂ ಸರಿಯಾಗಿದೆ. ಕೆಲವು ವಿಚಾರಗಳಲ್ಲಿ ಅಪಸ್ವರಕ್ಕೆ ಅವಕಾಶವಿದ್ದರೂ ಅದನ್ನು ದೊಡ್ಡದನ್ನಾಗಿ ಮಾಡಲಿಕ್ಕೆ ಯಾರೂ ಹೋಗಿಲ್ಲ.
ಕಾಂಗ್ರೆಸ್ಸಿಗೆ ಬೇಕಾಗಿದೆ ಆತ್ಮಾವಲೋಕನ: ಇತರ ಪಕ್ಷಗಳಲ್ಲಿ ವಿಪರೀತವಾಗಿ ತಲೆ ಕೆಡಿಸಿಕೊಳ್ಳಬೇಕಾಗಿರುವ ಪಕ್ಷ ಕಾಂಗ್ರೆಸ್- ಒಂದು ರೀತಿಯಲ್ಲಿ ಚುನಾವಣೆಯ ಫಲಿತಾಂಶ ಕಾಂಗ್ರೆಸ್ಸಿನ ಅಸ್ತಿತ್ವದ ಬುನಾದಿಯನ್ನೇ ಅಲ್ಲಾಡಿಸುವ ಶಕ್ತಿಯನ್ನು ಪಡೆದಿದೆ. ಉತ್ತರ ಪ್ರದೇಶದಂತಹ ರಾಜ್ಯದಲ್ಲಿ ಅಮ್ಮ-ಮಗ ಇಬ್ಬರೇ ಕಾಂಗ್ರೆಸ್ಸಿಗರು ಗೆದ್ದಿರುವುದು. ಕೆಲವು ರಾಜ್ಯಗಳಲ್ಲಿ ಪಕ್ಷದ ಸಾಧನೆ ಶೂನ್ಯ. ಲೋಕಸಭೆಯಲ್ಲಿ ಕಾಂಗ್ರೆಸ್ ಗೆದ್ದಿರುವ 44 ಸ್ಥಾನಗಳಲ್ಲಿ ಒಂಬತ್ತು ಸ್ಥಾನಗಳ ಕಾಣಿಕೆ ನೀಡಿದ ಕರ್ನಾಟಕಕ್ಕೇ ಮೊದಲ ಸ್ಥಾನ. ಐದೇ ವರ್ಷಗಳ ಹಿಂದೆ ಬಿಜೆಪಿಯನ್ನು ಕೆಡವಿದ್ದ ಆಂಧ್ರಪ್ರದೇಶದಲ್ಲಿ (ಆಂಧ್ರ ತೆಲಂಗಾಣ) ಈ ಬಾರಿ ಕಳಪೆ ಸಾಧನೆ. ಇನ್ನೊಂದು ದೊಡ್ಡ ರಾಜ್ಯವಾದ ಮಹಾರಾಷ್ಟ್ರದಲ್ಲೂ ಅದೇ ಗತಿ.
ಈ ಸ್ಥಿತಿಯಲ್ಲೂ ಕಾಂಗ್ರೆಸ್ ಆತ್ಮಾವಲೋಕನ ನಡೆಸದೇ ಹೋದರೆ, ಅದು ಒಂದು ರಾಜಕೀಯ ಪಕ್ಷವಾಗಿ ಉಳಿಯುವುದಕ್ಕೂ ಲಾಯಕ್ ಅಲ್ಲ. ಆದರೆ ಈಗಲೂ ಕಾಂಗ್ರೆಸ್ ನಡೆದುಕೊಂಡಿರುವ ರೀತಿಯನ್ನು ಗಮನಿಸಿದರೆ, ಪಕ್ಷದ ಅತ್ಯುನ್ನತ ಮಟ್ಟದ ನಾಯಕರಿಗೆ ರಾಜಕೀಯ ಮೌಲ್ಯಗಳ ಜನತಂತ್ರ, ಪಕ್ಷದ ಸ್ಥಾಪಿತ ಸಾಂಪ್ರದಾಯಿಕ ಪ್ರಾತಿನಿಧಿಕ ಸಮಿತಿಗಳು ಜೀವಂತವಾಗಿರಬೇಕು ಎನ್ನುವ ಆಸೆಯೇ ಇದ್ದಂತಿಲ್ಲ.ನಿಜ. ಈಗ ಕಾಂಗ್ರೆಸ್ಸಿಗೆ ಸೋನಿಯಾ ಗಾಂಧಿ, ಅವರ ಜತೆ ರಾಹುಲ ಗಾಂಧಿ ಅನಿವಾರ್ಯವಾಗಿ ನಾಯಕರಾಗಿ ಉಳಿಯಲೇ ಬೇಕಾದ ಸ್ಥಿತಿ ಇದೆ. ಅದನ್ನು ಬಿಟ್ಟು ಪಕ್ಷವನ್ನು ಉಳಿಸಿಕೊಳ್ಳುವುದು ಸಾಧ್ಯವಿಲ್ಲದ ಮಾತು. ಅದನ್ನು ಒಪ್ಪಿದ ಅನಂತರವೂ ಇದ್ದಿದ್ದರಲ್ಲಿ ಆಂತರಿಕ ಜನತಾಂತ್ರಿಕ ವ್ಯವಸ್ಥೆಯನ್ನು ಪ್ರತಿನಿಧಿಸುವ ಸಮಿತಿ-ಸಂಸ್ಥೆಗಳನ್ನಾದರೂ ಉಳಿಸಬೇಕಲ್ಲ. ರಾಜೀವ ಗಾಂಧಿ ಅವರನ್ನು ಪ್ರಧಾನಿಯನ್ನಾಗಿ ಆರಿಸಿದ್ದು ಸಂಸದೀಯ ಮಂಡಳಿ. ಅದರಲ್ಲೂ ಆ ಕ್ಷಣದಲ್ಲಿ ದೆಹಲಿಯಲ್ಲಿದ್ದ ಸದಸ್ಯರು ಮಾತ್ರ.
ಅಂತಹ ಉದಾಹರಣೆ ಇದ್ದರೂ ಕಾಂಗ್ರೆಸ್ ಈಗ ವರ್ತಿಸಿರುವುದು ಹೇಗೆ? ಲೋಕಸಭೆ (ಸಂಸದೀಯ ಅಲ್ಲ) ಕಾಂಗ್ರೆಸ್ ಪಕ್ಷದ ನಾಯಕರಾಗಿ ಕರ್ನಾಟಕದ ಹಿರಿಯ ಅನುಭವಿ, ಸಜ್ಜನ ಸಂಭಾವಿತ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆರಿಸಿದ್ದು ಯಾರು? ಹೇಗೆ? ಚುನಾವಣೆ ಪ್ರಚಾರ ಸಮರದಲ್ಲಿ, ಪಕ್ಷದ ಪ್ರಧಾನಿ ಪೀಠದ ಅಭ್ಯರ್ಥಿ ಎಂದು ಅಧಿಕೃತವಾಗಿ ಯಾರೂ ಹೇಳದೇ ಇದ್ದರೂ, ಎಲ್ಲರಿಗೂ ಗೊತ್ತಿದ್ದ ರಾಹುಲ ಗಾಂಧಿ ತಮಗೆ ಲೋಕಸಭೆ ಪಕ್ಷದ ನಾಯಕತ್ವ ಬೇಡ ಎಂದಾಗಲೇ ಖರ್ಗೆ ಹೆಸರು ಬಂದಿದ್ದು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಾಡಿದ ನಾಮಕರಣ ಅದು. ಖರ್ಗೆ ಅವರು ಈಗಿನ ಸ್ಥಿತಿಯಲ್ಲಿ ಆ ಸ್ಥಾನಕ್ಕೆ ಅತ್ಯಂತ ಅರ್ಹರಾದವರು. ಅದರಲ್ಲಿ ಎರಡು ಮಾತಿಲ್ಲ. ಆದರೆ ಅವರ ಆಯ್ಕೆ ಆದ ವಿಧಾನವನ್ನು ಅಂತರಂಗದಲ್ಲಿ ಅವರೂ ಒಪ್ಪಲಾರರು. ಕಾಂಗ್ರೆಸ್ ಬದಲಾಗಿಲ್ಲ, ಬದಲಾಗುವ ಸೂಚನೆಯೂ ಇಲ್ಲ.
ಕರ್ನಾಟಕದ ಜ್ವಲಂತ ಪ್ರಶ್ನೆ: ಸಿದ್ದರಾಮಯ್ಯ ಅವರು ಈಗ ರಾಜ್ಯದ ನೂತನ ಮುಖ್ಯಮಂತ್ರಿ ಅಲ್ಲ. ಆ ಕುರ್ಚಿಯಲ್ಲಿ ಅವರು ಕೂತು ವರ್ಷವಾಗಿದೆ. ಕಳೆದ ಒಂದು ವರ್ಷದಲ್ಲಿ, ವೈಯಕ್ತಿಕವಾಗಿ ಅವರ ಜನಪ್ರಿಯತೆ ಹಾಗೂ ಅವರ ಪಕ್ಷವಾದ ಕಾಂಗ್ರೆಸ್ಸಿನ ಶಕ್ತಿ ಹೆಚ್ಚಿದೆಯೇ? ಆ ಪ್ರಶ್ನೆಗೆ ಉತ್ತರ ಹೇಳಲು ಸಂಖ್ಯಾಶಾಸ್ತ್ರ, ಸಮೀಕ್ಷೆಗಳ ನೆರವು ಪಡೆಯಲು ಹೊರಟರೆ ಸಿದ್ದರಾಮಯ್ಯ ಕಾಂಗ್ರೆಸ್ ಪಾಲಿಗೆ ಆಘಾತವೇ ಕಂಡು ಬರುತ್ತದೆ. ಈಗ ನಡೆದಿದ್ದು ಲೋಕಸಭೆ ಚುನಾವಣೆ. ಆದ್ದರಿಂದ ಹಿಂದಿನ ಲೋಕಸಭೆ ಚುನಾವಣೆಯ ಲೆಕ್ಕವನ್ನೇ ಹಿಡಿಯಬೇಕಾದರೆ, 2009-2014 ರ ಅವಧಿಯಲ್ಲಿ ಕಾಂಗ್ರೆಸ್ಸಿಗೆ ಹೆಚ್ಚು ಸ್ಥಾನಗಳು ಬಂದಿರುವುದು ಎರಡೇ. ಮತಗಳ ಸಂಖ್ಯೆಯಲ್ಲೂ ಅದೇ ಚಿತ್ರ ಮೂಡಿ ಬರಬಹುದು.
ಆದರೆ ಈ ಐದು ವರ್ಷಗಳ ಅವಧಿಯಲ್ಲಿ ರಾಜ್ಯದ ಮತದಾರರಾಗಿ ತಮ್ಮ ಅಭಿಪ್ರಾಯವನ್ನು ಪ್ರಕಟಿಸಲು 2013ರಲ್ಲಿ ವಿಧಾನಸಭೆಯ ಚುನಾವಣೆ ಅವಕಾಶ ಸಿಕ್ಕಿತ್ತು. ಆ ಚುನಾವಣೆಯಲ್ಲಿ ಸಿದ್ದರಾಮಯ್ಯ ನಾಯಕತ್ವದ ಕಾಂಗ್ರೆಸ್ಸಿನ ಸಾಧನೆ ಬಲು ದೊಡ್ಡದು. ಬಿಜೆಪಿಯ ಮಗ್ಗುಲು ಮುರಿಯುವ ರೀತಿಯಲ್ಲಿ ಕಾಂಗ್ರೆಸ್ ಗೆದ್ದಿತ್ತು. ಅದರ ಅನಂತರದ ಒಂದೇ ಒಂದು ವರ್ಷದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸುಮಾರು ಐವತ್ತು ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿಗಿಂತ ಹಿಂದೆ ಬಿದ್ದಿದೆ. ಈ ಲೆಕ್ಕವನ್ನು ಸಹಜವಾಗಿಯೇ ಸಿದ್ದರಾಮಯ್ಯ ಅವರು ಒಪ್ಪುವುದಿಲ್ಲ. ರಾಜ್ಯದಲ್ಲಿ ಈಗಲೂ ಕಾಂಗ್ರೆಸ್ ಸೋತಿಲ್ಲ ಎಂದೇ ಅವರ ವಾದ. ಅದನ್ನು ಒಪ್ಪುವುದು ಬಿಡುವುದು ಜನರಿಗೇ ಸೇರಿದ್ದು. ಆದರೆ ಜನಪ್ರಿಯತೆಯನ್ನು ಗಳಿಸುವುದು ಕಷ್ಟ. ಒಮ್ಮೆ ಗಳಿಸಿದ ಮೇಲೆ ಅದನ್ನು ಉಳಿಸಿಕೊಳ್ಳುವುದು ಇನ್ನೂ ಕಷ್ಟ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ಸಿನ ಮುಂದಿರುವ ಈಗಿನ ಜ್ವಲಂತ ರಾಜಕೀಯ ಪ್ರಶ್ನೆ ಯಾವುದು? ಆ ಪ್ರಶ್ನೆಗೆ ಈಗಿನ ದೈನಿಕಗಳನ್ನು ತಿರುವಿ ಹಾಕಿದರೆ, ದಿಢೀರನೆ ಉತ್ತರ ಸಿಗುತ್ತದೆ. ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಮಾಧ್ಯಮ ಪ್ರಪಂಚದಲ್ಲಿ ಕೇಳಿಬರುತ್ತಿರುವ ಒತ್ತಡದ ಮಾತು ಎಂದರೆ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿರುವ ಡಾ. ಜಿ. ಪರಮೇಶ್ವರ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಲೇಬೇಕು ಎನ್ನುವುದು. ನಿಜ. ಸಂವಿಧಾನದಲ್ಲಿ ಪ್ರಸ್ತಾಪವೇ ಇಲ್ಲದ, ಯಾವುದೇ ರೀತಿಯ ವಿಶೇಷ ಅಧಿಕಾರ ಇಲ್ಲದ ಉಪಮುಖ್ಯಮಂತ್ರಿಯ ಸ್ಥಾನಕ್ಕೇಕೆ ಇಷ್ಟೊಂದು ಹಪಾಹಪಿ? ವಾಸ್ತವದಲ್ಲಿ ಅದೊಂದು ಪ್ರತಿಷ್ಠೆಯ ಪ್ರಶ್ನೆ. ಹಿಂದೆ ಜೆ.ಎಚ್. ಪಟೇಲರ ಕಾಲದಲ್ಲಿ ಸಿದ್ದರಾಮಯ್ಯ ಅವರೂ ಉಪ ಮುಖ್ಯಮಂತ್ರಿಯಾಗಿದ್ದರು. ಈಗಲೂ ಪರಮೇಶ್ವರ ಅವರಿಗೆ ಆ ಸ್ಥಾನವನ್ನು ಅಲಂಕರಿಸುವ ಅರ್ಹತೆ - ಸಾಮರ್ಥ್ಯ ಎರಡೂ ಇದೆ. ಆದರೆ ಅವರಿಗೇ ಆಗಲಿ, ಬೇರೆ ಯಾರಿಗೇ ಆಗಲಿ ಉಪ ಮುಖ್ಯಮಂತ್ರಿಯ ಸ್ಥಾನವನ್ನು ಕೊಡಿಸುವ ಉದ್ದೇಶ ಅಥವಾ ಸಂಕಲ್ಪ ಶಕ್ತಿ ಯಾರಲ್ಲಾದರೂ ಇದ್ದರೆ, ಅದು ಹಾದಿಬೀದಿಯ ಪ್ರದರ್ಶನಗಳು, ಸಭೆ, ಸಮಾರಂಭ, ಸಮಾವೇಶಗಳ ನಿರ್ಣಯಗಳ ಮೂಲಕ ಆಗುವ ಕೆಲಸವಲ್ಲ, ಎನ್ನುವುದು ಗೊತ್ತಿರಬೇಕು.
ಪ್ರದೇಶ ಕಾಂಗ್ರೆಸ್ಸಿನಲ್ಲಿ ಪ್ರಾಯಶಃ ಯಾರೂ ಡಾ. ಪರಮೇಶ್ವರ ಉಪಮುಖ್ಯಮಂತ್ರಿಯಾಗುವುದನ್ನು ವಿರೋಧಿಸಲಾರರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಅನೇಕ ಸಂದರ್ಭಗಳಲ್ಲಿ ಈ ಒತ್ತಾಯಕ್ಕೆ ತಮ್ಮದೇನೂ ಅಭ್ಯಂತರವಿಲ್ಲ ಎಂದು ಹೇಳಿದ್ದೂ ಆಗಿದೆ. ಈಗ ನಿರ್ಧಾರ ಪ್ರಕಟವಾಗಬೇಕಾಗಿರುವುದು ಅಖಿಲ ಭಾರತ ಕಾಂಗ್ರೆಸ್‌ನ ವರಿಷ್ಠರಿಂದ. ಪಾಪ ಅವರು ಈಗ ಇಡೀ ದೇಶದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಕರ್ನಾಟಕದಲ್ಲಿ ಉಪ ಮುಖ್ಯಮಂತ್ರಿಯ ನೇಮಕಕ್ಕೆ ಆದ್ಯತೆ ಸಿಗುವುದು ಕಷ್ಟ. ಅದನ್ನು ಪರಮೇಶ್ವರ ಅವರ ಹಿತೈಷಿಗಳು ಒಪ್ಪಿಕೊಂಡು ಸದ್ಯಕ್ಕೆ ಸುಮ್ಮನಿರುವುದು ಒಳ್ಳೆಯದು. ಒಳ್ಳೆಯ ದಿನಗಳು ಬರಲೇಬೇಕು.
ಕಿಡಿಗೇಡಿತನ: ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪ್ರಥಮ ವಾರ್ಷಿಕೋತ್ಸವದ ಆಚರಣೆಗೆ ಸರ್ಕಾರ ಹಾಗೂ ಇತರ ಆಸಕ್ತ ಹಿತಗಳು ಅದ್ದೂರಿಯಾದ ಸಿದ್ಧತೆಗಳನ್ನು ಮಾಡಿಕೊಂಡಿದ್ದು ನಿಜ.
ಆದರೆ ಲೋಕಸಭೆ ಚುನಾವಣೆಯ ಫಲಿತಾಂಶದ ಪ್ರಕಟಣೆಯ ಹಿನ್ನೆಲೆಯಲ್ಲಿ ಆ ಸಮಾರಂಭಗಳನ್ನೆಲ್ಲ ಮುಂದಕ್ಕೆ ಹಾಕಿದರೂ ನಾನಾ ಇಲಾಖೆಗಳ ಸಾಧನೆಗಳ ಪಟ್ಟಿ ಮಂತ್ರಿಗಳ ಫೋಟೋ ಸಮೇತ ಅಚ್ಚಾಗಿವೆ. ಈಗಲೂ ಮಂತ್ರಿಗಳು ಅನೇಕ ಕಾರ್ಯಕ್ರಮಗಳು ಸದ್ಯದಲ್ಲೇ ಆರಂಭವಾಗಲಿವೆ ಎನ್ನುವ ಹೇಳಿಕೆಗಳನ್ನು ಪ್ರಕಟಿಸುವುದನ್ನು ಬಿಟ್ಟಿಲ್ಲವಲ್ಲ ಯಾಕೆ? "ಸದ್ಯದಲ್ಲೇ" ಪದದ ಅರ್ಥವೇನು?
-ಸತ್ಯ
anisikeprabha@gmail.com