ನಮ್ಮ ದಾರಿಗಳೇಕೆ ಪರಲೋಕದ ರಹದಾರಿಗಳು?

ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಕೇವಲ 9 ದಿನಗಳಷ್ಟೇ ಉರುಳಿದ್ದವು. ತಮ್ಮ ಕುಟುಂಬ ಸದಸ್ಯನೋರ್ವ ಕೇಂದ್ರ ಮಂತ್ರಿ ಪದವಿ ಅಲಕಂರಿಸಿದ್ದಾರೆ ಎಂಬ ಖುಷಿಯ ಸಣ್ಣ ಲೇಪವನ್ನೂ ಉಳಿಸದಂತೆ ಹಿಂದಿನಿಂದ ಬಂದ ಇಂಡಿಕಾ ಕಾರೊಂದು ಕೊಂಡುಹೋಯಿತು. 'ಜಲ್ದಿ ಚಲೆಜಾವೂಂಗಾ..' ಎಂದು ಪಕ್ಷದ ಸದಸ್ಯರನ್ನು ಹುರಿದುಂಬಿಸುತ್ತಿದ್ದ ಗೋಪಿನಾಥ್ ಮುಂಡೆ ಮೇ 3ರಂದು ಅಪಘಾತದ ಆಘಾತದಲ್ಲಿ ಕೊನೆಯುಸಿರೆಳೆದರು.
ಮೂರರ ನಂಟು, ಅಪಘಾತದ ಹಿಂದೇನಾದರೂ ಸಂಚಿತ್ತೇ ಹೀಗೆಲ್ಲ ರೋಚಕವಾಗಿ ಯೋಚಿಸುವುದಕ್ಕೆ ವಿಷಯಗಳು ಸಿಗಬಹುದು. ಆದರೆ ಈ ಹೊತ್ತಿನಲ್ಲಿ ನಿಜಕ್ಕೂ ಚರ್ಚೆಯಾಗಬೇಕಿರುವುದು ರಸ್ತೆ ಸುರಕ್ಷತೆ ಕುರಿತು. ಬೇಜವಾಬ್ದಾರಿ ಅಥವಾ ಉನ್ಮಾದದ ಚಾಲನೆ ಜೀವವೊಂದಕ್ಕೆ ಎರವಾಗಿಬಿಡುತ್ತದೆ ಎಂಬ ಸಂವೇದನೆಯನ್ನು ಸಮಾಜ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಅಭಿಪ್ರಾಯ ರೂಪುಗೊಳ್ಳಬೇಕು.
ರಸ್ತೆ ಸಂಚಾರ ವೈವಸ್ಥೆಯ ಮೇಲೆ ತೀವ್ರ ನಿಗಾ ಇಡಲೇ ಬೇಕು ಎಂಬುದನ್ನು ಗೋಪಿನಾಥ್ ಅವರ ಸಾವು ಪುಷ್ಟೀಕರಿಸುತ್ತದೆ. ಮಾಜಿ ರಾಷ್ಟ್ರಪತಿ ಜೈಲ್ ಸಿಂಗ್ ಸಾವಿಗೀಡಾಗಿದ್ದು ರಸ್ತೆ ಅಪಘಾತದಲ್ಲಿ. ಮಾಜಿ ಕೇಂದ್ರ ಸಚಿವ ರಾಜೇಶ್ ಪೈಲಟ್ ಅವರ ಪ್ರಾಣವನ್ನು ಹರಣ ಮಾಡಿದ್ದು ರಸ್ತೆ ಅಪಘಾತ. ಪಂಜಾಬ್ನ ಮಾಜಿ ಹಣಕಾಸು ಸಚಿವ ಕಾನ್ವಾಲ್ಜಿತ್ ಸಿಂಗ್, ದೆಹಲಿ ಮಾಜಿ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮ ಮತ್ತು ತೆಲಗು ದೇಶಂ ಪಕ್ಷದ ಮುಖಂಡ ಯೆರ್ರಂ ನಾಯ್ಡು ಅವರಂತಹ ರಾಜಕೀಯ ಮುಖಂಡರ ಅಂತ್ಯವಾಗಿದ್ದೂ ರಸ್ತೆ ಅಪಘಾತದಿಂದಲೇ.
ಇವೆಲ್ಲ ಮಹನೀಯರ ದುರಂತಗಳಾದರೆ, ಒಂದು ಕ್ಷಣ ಯೋಚಿಸಿ. ವಾಹನದೊಂದಿಗೆ ರಸ್ತೆಗೆ ಇಳಿದ ಒಂದೇ ತಪ್ಪಿಗೆ ಅವೆಷ್ಟು ಮನೆಗಳ ಅನ್ನ ದುಡಿಯುವ ಜೀವಗಳು ಕಮರಿಹೋಗಿರಬಹುದು? ಕೇವಲ ಅಂಕಿ-ಸಂಖ್ಯೆಗಳಾಗಿಹೋಗಿರುವ ಅವರ ಕಣ್ಣೀರಿನ ಕತೆಗಳು ಅವೆಂಥದ್ದಿರಬಹುದು? ವಿಶ್ವ ಆರೋಗ್ಯ ಸಂಸ್ಥೆ ದೂರುವಂತೆ ಹೆಚ್ಚಿನ ರಸ್ತೆ ದುರಂತಗಳು ಸಂಭವಿಸುವುದು ಭಾರತದಲ್ಲಿ. ಚೀನಾ ಮತ್ತು ರಷ್ಯಾ ನಂತರದ ಸ್ಥಾನಗಳನ್ನು ಹಂಚಿಕೊಂಡಿವೆ. ವಿಶ್ವದಾದ್ಯಂತ ವರ್ಷವೊಂದರಲ್ಲೇ ಸುಮಾರು 1.4 ದಶ ಲಕ್ಷ ಮಂದಿ ರಸ್ತೆ ದುರಂತದಿಂದ ಸಾವಿಗೀಡಾಗುತ್ತಿದ್ದಾರೆ. ಈ ದುರಂತದಲ್ಲಿ ಭಾರತದ ಪಾಲು ಶೇ.11.
ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ವರದಿ ಮಾಡಿರುವಂತೆ ಹಿಂದಿನ ವರ್ಷಗಳಲ್ಲಿ ಪ್ರತಿದಿನ 461 ಜನ ಟ್ರಾಫಿಕ್ ಆ್ಯಕ್ಸಿಡೆಂಟ್ನಲ್ಲಿ ಸತ್ತಿದ್ದಾರೆ. ದಿನಕ್ಕೆ ಸರಾಸರಿ 1,301 ಜನ ಅಪಘಾತದಿಂದ ಗಾಯಗೊಂಡಿದ್ದಾರೆ. ಅಂದರೆ ಒಂದು ಗಂಟೆಗೆ 19 ಜನ ರೋಡ್ ಆ್ಯಕ್ಸಿಡೆಂಟ್ನಲ್ಲಿ ಸಾಯುತ್ತಾರೆ. ಕಳೆದ ದಶಕದಲ್ಲಿ ಸುಮಾರು 1.2 ದಶಲಕ್ಷ ಅಮಾಯಕ ಪ್ರಯಾಣಿಕರು ರಸ್ತೆಯಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿ ದಿನ ನೂರಾರು ಜನ ರಸ್ತೆಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದರೂ ಸಂಚಾರ ವ್ಯವಸ್ಥೆಯಲ್ಲಿ ಲೋಪವಿದೆ ಎಂಬುದನ್ನು ಈ ಹಿಂದಿನ ಸರ್ಕಾರಗಳು ಅರ್ಥ ಮಾಡಿಕೊಳ್ಳಲೇ ಇಲ್ಲ. ದಾಖಲೆಗೆ ಸಿಕ್ಕಿರುವಂತೆ 2003-2012ರಲ್ಲಿ ರಸ್ತೆ ಅಪಘಾತಗಳ ಪ್ರಮಾಣದಲ್ಲಿ ಸಾಕಷ್ಟು ಏರಿಕೆಯಾಗಿದೆ. ಕಳೆದ ದಶಕಕ್ಕಿಂತ ಶೇ.51.8ರಷ್ಟು ಹೆಚ್ಚು ಅಪಘಾತಗಳು ಘಟಿಸಿವೆ. 2003-2012ರಲ್ಲಿ ಜನಸಂಖ್ಯೆ ಹೆಚ್ಚಳದ ಪ್ರಮಾಣ ಶೇ.13.6 ಇದ್ದರೆ ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡವರ ಪ್ರಮಾಣ ಶೇ.34.2. ಕಳೆದ ವರ್ಷದ ಹಿಂದೆ ರೈಲ್ವೇ ಸಂಚಾರದಲ್ಲಿ ಅಪಘಾತಗಳಿಂದ ಸಾವಿಗೀಡಾದವರ ಪ್ರಮಾಣ ಶೇ.7.4. ಆದರೆ ರಸ್ತೆ ಅಪಘಾತದಲ್ಲಿ ಮಡಿದವರ ಪ್ರಮಾಣ ಶೇ.35.2.
2012ರಲ್ಲಿ 1,68,361 ಮಂದಿ ಟ್ರಾಫಿಕ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ರಸ್ತೆ ಅಪಘಾತದಲ್ಲಿ 1,39,039 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದೇಶದಲ್ಲಿ ಟ್ರಾಫಿಕ್ ಅಪಘಾತಗಳಿಂದ ವರ್ಷವೊಂದರಲ್ಲೇ ಸಾವಿಗೀಡಾದವರ ಸಂಖ್ಯೆ ಐಲ್ಯಾಂಡ್ ಮತ್ತು ಮಾಲ್ಡೀವ್ಸ್ಗಳಂತಹ ದೇಶಗಳ ಅರ್ಧ ಜನ ಸಂಖ್ಯೆಯಷ್ಟು. 'ಪ್ರಪಂಚದಲ್ಲಿ ರಸ್ತೆ ಅಪಘಾತದಿಂದ 10 ಜನ ಸತ್ತರು ಎಂದರೆ ಅದರಲ್ಲಿ ಒಬ್ಬ ಭಾರತೀಯನಿರುತ್ತಾನೆ!' ಎಂದು ಅತ್ಯಂತ ಸರಳವಾಗಿ ಮತ್ತು ಸುಲಭವಾಗಿ ಭಾರತದ ರಸ್ತೆಗಳು ಎಷ್ಟು ಅಪಾಯಕಾರಿ ಎಂಬುದನ್ನು ತಜ್ಞರು ವಿಶ್ಲೇಷಿಸುತ್ತಾರೆ. ಭಾರತದ ರಸ್ತೆಗಳು ಪ್ರಪಂಚದ ಅತ್ಯಂತ ಅಪಾಯಕಾರಿ ರಸ್ತೆಗಳು ಎಂಬ ಕುಖ್ಯಾತಿ ಎದುರಿಸುತ್ತಲೇ ಬಂದಿವೆ. ಭಾರದಲ್ಲಿ ಉತ್ತರಪ್ರದೇಶ ರಸ್ತೆ ಅಪಘಾತಗಳ ಪೈಕಿಯೂ ಅಗ್ರ ಸ್ಥಾನ ಪಡೆದುಕೊಂಡಿದೆ. ನಂತರ ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕ ಮೊದಲ ಐದು ಸ್ಥಾನಗಳನ್ನು ತುಂಬುತ್ತಿವೆ. ರಸ್ತೆ ಅಪಘಾತದಲ್ಲಿ ಸಾಯುತ್ತಿರುವವರಲ್ಲಿ ಶೇ.70ರಷ್ಟು ಮಂದಿ 30ರಿಂದ 59ವರ್ಷದೊಳಗಿನವರು.
ಕುಡಿದು ವಾಹನ ಚಾಲನೆ ಮಾಡುವುದೇ ರಸ್ತೆ ಅಪಘಾತಗಳಿಗೆ ಮುಖ್ಯ ಕಾರಣ ಎಂಬ ವಾದವಿತ್ತು. ಆದರೆ ಅಂತಹ ಸಂದರ್ಭಗಳಲ್ಲಿ ಘಟಿಸುವ ರಸ್ತೆ ಅಪಘಾತದ ಪ್ರಮಾಣ ಕೇವಲ ಎರಡರಿಂದ ಎಂಟು ಪರ್ಸೆಂಟ್! ಟ್ರಾಫಿಕ್ ನಿರ್ವಹಣೆ ಮಾಡಬೇಕಾದ ಬಹುತೇಕ ಪೊಲೀಸರು ಯಾರಿಂದ ದುಡ್ಡು ಕೀಳಬಹುದು ಎಂದಷ್ಟೇ ಆಲೋಚಿಸುತ್ತಿರುವುದೇ ಸಮಸ್ಯೆಯ ಮೂಲವೇ? ಡ್ರ್ಯಾಗ್ ರೇಸಿಂಗ್, ಅಡ್ಡಾದಿಡ್ಡಿ ವಾಹನ ಚಲಾವಣೆ ಇವುಗಳ ಮೇಲೆಲ್ಲ ನಿಯಂತ್ರಣ ವ್ಯವಸ್ಥೆ ನಿಗಾ ವಹಿಸಿರುವುದೆಷ್ಟು ಎಂದು ಪ್ರಶ್ನಿಸುವುದರ ಜತೆಯಲ್ಲೇ ರಸ್ತೆಯಲ್ಲಿ ನಮ್ಮ ಜನರ ಸಂವೇದನಾ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಏನಾದರೂ ಮಾಡಲು ಸಾಧ್ಯವೇ ಎಂಬ ಕುರಿತೂ ಚಿಂತನೆಗಳು ಆಗಬೇಕು.
ಗೋಪಿನಾಥ್ ಮುಂಡೆ ಅವರ ಸಾವಿಗೆ ಸಂತಾಪ ಸೂಚಕವಾಗಿ ನೂತನ ಎನ್ಡಿಎ ಸರ್ಕಾರ ಭಾರತದ ರಸ್ತೆ ಸಂಚಾರ ವ್ಯವಸ್ಥೆಯತ್ತ ಸೂಕ್ಷ್ಮ ಗಮನ ಹರಿಸಲೇಬೇಕಿದೆ. ರಸ್ತೆ ಅಪಘಾತಗಳ ಪ್ರಮಾಣ ತಗ್ಗುವಂತೆ ಪೂರಕ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಬೇಕಾದ ಹೊಣೆ ಮೋದಿ ಅವರಿಗಿದೆ. 'ಭಾರತದ ರಸ್ತೆಗಳು ಜಗತ್ತಿನ ಅತ್ಯಂತ ಅಪಾಯಕಾರಿ ರಸ್ತೆಗಳು' ಎಂಬ ಹಣೆಪಟ್ಟಿಯನ್ನು ಕಿತ್ತೊಗೆಯುವ ಕಾರ್ಯವೇ ಮುಂಡೆ ಅವರಿಗೆ ಹಾಗೂ ಅನಾಮಿಕವಾಗಿ ದುರ್ಮರಣಕ್ಕೆ ಒಳಗಾದ ಎಷ್ಟೋ ಜೀವಗಳಿಗೆ, ಇವರೆಲ್ಲರ ಶೂನ್ಯವನ್ನು ಭರಿಸುತ್ತಿರುವ ಅವರ ಕುಟುಂಬ ವರ್ಗದವರಿಗೆ ನೂತನ ಸರ್ಕಾರ ನೀಡಬಹುದಾದ ಅತ್ಯಮೂಲ್ಯ ಕೊಡುಗೆ.
- ಮಂಜುನಾಥ ಎಲ್. ಕೆ
ಕನ್ನಡಪ್ರಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


