ಅಂಕಣಗಳು

ಅಂಗಳದಲ್ಲಿ ಔಷಧಿಯಿರುವಾಗ ಇನ್ನೆಲ್ಲಿಯ ರೋಗ?

ಅಂಗಳದಲ್ಲಿ ಔಷಧಿಯಿರುವಾಗ ಇನ್ನೆಲ್ಲಿಯ ರೋಗ?
Published On :

ಇತ್ತೀಚಿನ ವರ್ಷಗಳಲ್ಲಿ ಜಗತ್ತಿನಾದ್ಯಂತ ಸಸ್ಯ ಮೂಲ ಔಷಧಿ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದಕ್ಕೆ ಕಾರಣ ಹೆಚ್ಚುತ್ತಿರುವ ಜನಸಂಖ್ಯೆ, ನಗರೀಕರಣ, ಉನ್ನತ ಜೀವನ ಮಟ್ಟ ಮತ್ತು ನವೀನ ವೈದ್ಯಕೀಯ ಚಿಕಿತ್ಸಾ ಕ್ರಮಗಳಲ್ಲಿ ಬಳಸುತ್ತಿರುವ ಕೃತಕ ರಾಸಾಯನಿಕ ವಸ್ತುಗಳಿಂದ ದೇಹದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳು ಎಂದು ಹೇಳಬಹುದು.
ಭಾರತದಲ್ಲಿ, ಔಷಧೀಯ ಸಸ್ಯಗಳ ಕೃಷಿ ಮಾಡುವ ಕೇಲವೇ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಅನೇಕ ಪ್ರಮುಖ ಔಷಧೀಯ ಸಸ್ಯಗಳನ್ನು ಬೆಳೆಯಲು ಅನುಕೂಲಕರವಾದ ಹವಾಮಾನ ನಮ್ಮ ರಾಜ್ಯದಲ್ಲಿದೆ. ಈ ಸಸ್ಯಗಳು ನಮ್ಮಲ್ಲಿ ನಿಸರ್ಗದತ್ತವಾಗಿ ಬಂದ ಬಳುವಳಿಯಾಗಿವೆ ಹಾಗೂ ಇವೆಲ್ಲವುಗಳನ್ನು ಸತತವಾಗಿ ನಮ್ಮ ಸಂಪದ್ಭರಿತ ಕಾಡುಗಳು ಪೂರೈಸುತ್ತಿವೆ. ನಿಸರ್ಗದಲ್ಲಿ ದೊರೆಯುವ ಈ ವನಸ್ಪತಿ ಸಂಪನ್ಮೂಲಗಳನ್ನು ವಿವೇಚನೆಯಿಲ್ಲದೆ ಕಿತ್ತು ಬಳಸುತ್ತಿರುವ ಕಾರಣ ಅವು ಸಂಪೂರ್ಣವಾಗಿ ಕಣ್ಮರೆಯಾಗುವ ಸಾಧ್ಯತೆಯಿದೆ. ಹೀಗಾಗಿ ಅವುಗಳನ್ನು ಹೆಚ್ಚು ಪ್ರಮಾಣದಲ್ಲಿ ಬೆಳೆಯುವುದು, ಅನಿವಾರ್ಯವಾಗಿರುತ್ತದೆ. ಇವುಗಳ ವಾಣಿಜ್ಯ ಕೃಷಿಯಿಂದ ಆಂತರಿಕ ಬಳಕೆಯ ಸಲುವಾಗಿ ಮತ್ತು ಹೊರ ದೇಶಗಳಿಗೆ ರಫ್ತುಮಾಡಿ ಆರ್ಥಿಕ ಪ್ರಗತಿ ಸಾಧಿಸಲು ಆಸ್ಪದವಿದೆ.  
ದೇವ ದೇವ ವನಕ್ಕೆ ನಾನು ಭೇಟಿ ಕೊಟ್ಟಾಗ ಅಲ್ಲಿ ಉದ್ದೇಶಪೂರ್ವಕವಾಗಿ ಬೆಳೆಸಿದ್ದ ನೂರಾರು ಉಪಯುಕ್ತ ಸಸ್ಯಗಳನ್ನು ಕಂಡೆ. ಪ್ರತಿಯೊಂದು ಸಸ್ಯಗಳ ಉಪಯುಕ್ತತೆಯನ್ನು ಅಲ್ಲಿನ ಸಿಬ್ಬಂದಿ ನನಗೆ ವಿವರಿಸಿ ಹೇಳಿದಾಗ ನಮ್ಮಲ್ಲಿರುವ ಅಮೂಲ್ಯ ಸಸ್ಯ ಸಂಪತ್ತನ್ನು ಕಂಡು ಮನ ತುಂಬಿ ಬಂದಿತು. ನಾನು ಕಂಡ ಸಸ್ಯಗಳ ಅದ್ಭುತ ಪ್ರಯೋಜನಗಳನ್ನು ನಿಮ್ಮ ಜೊತೆಗೆ ಹಂಚಿಕೊಳ್ಳಬೇಕೆಂಬ ಬಯಕೆ ನನ್ನದು. ಅದನ್ನು ಓದಿ ಬೆರಗಾಗುವ ಸರದಿ ನಿಮ್ಮದಾಗುತ್ತದೆ. ಒಂದು ಸಸ್ಯದಿಂದ ಹಲವಾರು ಪ್ರಯೋಜನಗಳಿವೆ. ಮುಖ್ಯವಾದವುಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಕೆಳಕಂಡಂತೆ ವಿಂಗಡಣೆ ಮಾಡಿದ್ದೇನೆ. ಮಕ್ಕಳಿರುವ ಮನೆಯಲ್ಲಿ ಈ ಕೆಳಕಂಡ ಸಸ್ಯಗಳನ್ನು ಬೆಳೆಸುವುದು ಒಳ್ಳೆಯದು.
ಜೇಷ್ಠ ಮಧು ಸಸ್ಯ: ಇದರ ಬೇರು, ಕಾಂಡಗಳನ್ನು ಟಾನಿಕ್ ಹಾಗೂ ಕೆಮ್ಮಿನ ಔಷಧಿ, ಲಘು ಮಲವಿರೇಚಕ ತಯಾರಿಕೆಯಲ್ಲಿ ಬಳಸುತ್ತಾರೆ.
ಬಜೆ: ಇದರ ಬೇರು ಕಫ, ದಮ್ಮು, ಉಬ್ಬಸರೋಗ, ಭೇದಿ, ಹಸಿವು, ಮೂರ್ಛೆರೋಗ ತಡೆಗಟ್ಟಲು ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಉಪಯೋಗಕ್ಕೆ ಬರುತ್ತದೆ.  
ಹಿಪ್ಪಲಿ: ಕಾಯಿಯನ್ನು ಹೊಟ್ಟೆ ನೋವು, ಭೇದಿ ನಿವಾರಣೆ, ಜಂತು ತಡೆ, ಹಸಿವು ಕಾರಕ, ಕೆಮ್ಮು ಗುಲ್ಮದ ಕಾಯಿಲೆ ಮತ್ತು ಗಡ್ಡೆಗಳನ್ನು ತಡೆಗಟ್ಟಲು ಉಪಯೋಗಿಸಲಾಗುತ್ತದೆ.
ಬೇವು: ಮಗು, ಬಾಣಂತಿಯರನ್ನು ಆಸ್ಪತ್ರೆಯಿಂದ ಮನೆಗೆ ಕರೆ ತಂದಾಗ ಬೇವಿನಸೊಪ್ಪನ್ನು ಬಿಸಿ ನೀರಿನಲ್ಲಿ ಹಾಕಿ ಸ್ನಾನ ಮಾಡಿಸುತ್ತಾರೆ. ಮಕ್ಕಳಿಗೆ ಅಮ್ಮ, ಧಢಾರ, ಮತ್ತಿತರ ಚರ್ಮದ ಖಾಯಿಲೆಗಳು ಬಂದಾಗ ಬೇವಿನ ಸೊಪ್ಪನ್ನು ಅರೆದು ಮೈಗೆ ಹಚ್ಚುತ್ತಾರೆ ಮತ್ತು ಬೇವಿನ ಸೊಪ್ಪಿನಿಂದ ಗಾಳಿಯನ್ನು ಬೀಸುತ್ತಾರೆ. ಈ ಮರವು ಗಡಸು  ಕೆಂಪುಚೇಗು, ಬಾಳಿಕೆಯುತ ಗೃಹ ನಿರ್ಮಾಣ ಪೀಠೋಪಕರಣ ಇನ್ನೂ ವಿವಧ ಕೆಲಸಗಳಿಗೆ ಬಳಸಲಾಗುತ್ತದೆ. ಇದರ ತೊಗಟೆಯಿಂದ ಬರುವ ಅಂಟು, ಹೂವು, ಎಲೆಗಳನ್ನು ಔಷಧಿಯಾಗಿ ಉಪಯೋಗಿಸಲಾಗುತ್ತದೆ. ಬೀಜದ ಎಣ್ಣೆ, ಔಷಧಿಗೆ (ಚರ್ಮದ ವ್ಯಾಧಿಗಳಿಗೆ), ಸೋಪು ತಯಾರಿಸಲು ಹಾಗೂ ದೀಪ ಉರಿಸಲು ಬರುವುದು. ಇದರ ಬೀಜದ ಹಿಂಡಿ ಉತೃಷ್ಟ ಗೊಬ್ಬರ. ಎಲೆಯ ಕಡ್ಡಿ, ಸಣ್ಣ ರೆಂಬೆಗಳು ದಂತ ಮಾರ್ಜನಕ್ಕಾಗಿ ಬಳಸಲಾಗುತ್ತದೆ. ಎಲೆಗಳನ್ನು ಗಾಯಕ್ಕೆ ಕುದಿಹಿಟ್ಟಿನಂತೆ ಕಟ್ಟಲಾಗುವುದು. ಒಣಗಿದ ಎಲೆಗಳನ್ನು ಆಲಮಾರುಗಳಲ್ಲಿ ಬಟ್ಟೆಗಳ ಮಡಿಕೆಗಳಲ್ಲಿ ಕೀಟಭಾದೆ ತಪ್ಪಿಸಲು ಇಡಲಾಗುವುದು.
ಗೊರವಿ: ಗಿಡವನ್ನು ನಾಯಿ ಕೆಮ್ಮಿನ ನಿವಾರಣೆಗೆ ಔಷಧಿಗಳಿಗೆ ಬಳಸುವುದುಂಟು. ಇದನ್ನು ಬೀಜ ಬಿತ್ತಿ ಬೆಳೆಸಬಹುದು.
ಈ ಕೆಳಕಂಡ ಸಸ್ಯಗಳನ್ನು ಸಕ್ಕರೆ ಖಾಯಿಲೆಯ ನಿಯಂತ್ರಣಕ್ಕೆ ಉಪಯೋಗಿಸುತ್ತಾರೆ.
ಕಾಶಿಕಣಗಲೆ ಸಸ್ಯ: ಮಧುಮೇಹ ರೋಗ, ಮೂತ್ರೋತ್ತೇಜಕ, ರಕ್ತಸ್ರಾವ ತಡೆ, ಮಲೇರಿಯಾ, ಭೇದಿ, ಚರ್ಮ ರೋಗ, ರಕ್ತದ ಅರ್ಬುದ ರೋಗ ನಿವಾರಣೆಯ ಔಷಧೀಯ ಗುಣಹೊಂದಿದೆ.  
ಅಮೃತಬಳ್ಳಿ: ಎಲೆ, ಕಾಂಡ ಮತ್ತು ಬೇರುಗಳಲ್ಲಿ ಚರ್ಮರೋಗ, ಅಸ್ತಮಾ, ಸಿಹಿ ಮೂತ್ರ ರೋಗ, ಮಲೇರಿಯಾ, ಪೈಲ್ಸ್, ಅಜೀರ್ಣ ನಿವಾರಣೆಯ ಗುಣಗಳಿವೆ.  
ಸ್ಟೀವಿಯಾ: ಇದರ ಎಲೆ ಗಂಟಲು ನೋವು ನಿವಾರಕವಾಗಿದೆ ಮತ್ತು ಸಕ್ಕರೆ ರೋಗದವರಿಗೆ ಉಪಯೋಗವಾಗುತ್ತದೆ.  
ಮಧುನಾಶಿನಿ: ಇದರ ಚಿಗರು ಕಾಂಡ ಮತ್ತು ಎಲೆ ಸಕ್ಕರೆ ಕಾಯಿಲೆ ನಿಯಂತ್ರಿಸುವ ಗುಣ ಹೊಂದಿದೆ.
ಈ ಕೆಳಕಂಡ ಸಸ್ಯಗಳನ್ನು ಹಲವಾರು ಔಷಧಿಗಳಲ್ಲಿ ಬಳಸುತ್ತಾರೆ.
ಲೋಳೆಸರ: ಯೌವ್ವನದಲ್ಲಿ ಮುಖದ ಮೇಲೆ ಗುಳ್ಳೆಗಳು ಬರುವುದನ್ನು ತಡೆಯಲು ಲೋಳೆಸರವನ್ನು ಪ್ರತಿನಿತ್ಯ ಮುಖಕ್ಕೆ ಹಚ್ಚುವುದು ಉತ್ತಮ. ಇದರ ಎಲೆ ಚರ್ಮದ ಕಾಂತಿ ವರ್ಧಕವಾಗಿದ್ದು, ಅಲ್ಲದೆ ಗಾಯ ಉಪಶಮನ ಹಾಗೂ ಚರ್ಮರೋಗ ನಿವಾರಣೆಗೆ ಉಪಯೋಗಿಸಲಾಗುತ್ತದೆ.  
ಅಶ್ವಗಂಧ: ಈ ಸಸ್ಯದ ಬೇರು, ಎಲೆ, ತೊಗಟೆ, ಹಣ್ಣು ಮತ್ತು ಬೀಜಗಳಲ್ಲಿ ಆಯುರ್ವೇದಿಕ್ ಹಾಗೂ ಯುನಾನಿ ಔಷಧಿಗಳಗಳ ತಯಾರಿಕೆಯಲ್ಲಿ ಬಳಸುತ್ತಾರೆ. ವಿವಿಧ ಸಮಸ್ಯೆಗಳ ಉಪಶಮನದ ಗುಣ ಅಶ್ವಗಂಧಕ್ಕಿದೆ.  
ದತ್ತೂರ: ಈ ಸಸ್ಯದ ಬೇರು, ಕಾಯಿ ಮತ್ತು ಬೀಜಗಳನ್ನು ಅಸ್ತಮಾ ಮತ್ತು ಪಾರ್ಕಿನ್ಸನ್ ರೋಗ ನಿವಾರಣೆಗೆ ಉಪಯೋಗಿಸಬಹುದು.  
ಒಂದೆಲಗ ಸಸ್ಯ: ಗ್ಲೂಕೋಸೈಡ್, ಕುಷ್ಠ ರೋಗ, ಕ್ಷಯ ಮತ್ತು ಇತರೆ ಚರ್ಮರೋಗ ನಿವಾರಣೆಗೆ ಬಳಸುತ್ತಾರೆ.  
ಕಾಶಿಬದನೆ ಕಾಯಿ: ಗರ್ಭನಿರೋಧಕ ಡಯೋಸ್ಜನಿನ್ ತಯಾರಿಕೆಯ ಮೂಲವಸ್ತುವಾಗಿದೆ.  
ಗಸಗಸೆ: ಎಳೆ ಸೊಪ್ಪು, ಕಾಯಿ ಮತ್ತು ಬೀಜಗಳನ್ನು ನೋವು ನಿವಾರಕ, ಕೆಮ್ಮು ಶಮನಕಾರಕವಾಗಿದ್ದು, ನಿದ್ರಾಹೀನತೆಗೆ ಬಳಸಲಾಗುತ್ತದೆ.
ಬಾವಂಚಿ: ಇದರ ಬೀಜಕ್ಕೆ ತೊನ್ನು, ಕುಷ್ಟರೋಗ ಮತ್ತು ಓರಿಯಾಸಿಸ್ ರೋಗಗಳ ನಿವಾರಣೆಯ ಗುಣವಿದೆ.  
ಮಾಕಂದಿ ಬೇರು: ಇದರ ಸಸ್ಯ, ಬೇರು  ಮತ್ತು ಗಡ್ಡೆಗಳು ಅಧಿಕ ರಕ್ತದೊತ್ತಡ, ಗ್ಲಾಕೋಮ, ಅಸ್ತಮಾ, ರಕ್ತ ಹೆಪ್ಪುಗಟ್ಟುವಿಕೆ, ಕ್ಯಾನ್ಸರ್ ಕಾಯಿಲೆಯ ಶಮನಕ್ಕಾಗಿ ಬಳಕೆಯಾಗುತ್ತವೆ.
ಸದಾ ಮಲ್ಲಿಗೆ: ಇದರ ಎಲೆ ಮತ್ತು ಬೇರುಗಳನ್ನು ಕ್ಯಾನ್ಸರ್ ನಿವಾರಕ ಔಷಧಿಗಳಲ್ಲಿ ಬಳಸುತ್ತಾರೆ.
ಸಫೇದ್ ಮಸ್ಲಿ: ಇದರ ಬೇರು ಟಾನಿಕ್ ಮತ್ತು ನೋವು ನಿವಾರಕ ಗುಣ ಹೊಂದಿದೆ.  
ಸೆನ್ನಾ: ಕಾಯಿಯನ್ನು ಭೇದಿ ನಿವಾರಣೆಗೆ ಉಪಯೋಗಿಸುತ್ತಾರೆ.  
ನೆಲನಲ್ಲಿ: ಎಲೆಯಲ್ಲಿ ಕಾಮಣಿ ನಿವಾರಕ ಗುಣವಿದೆ.  
ತುರುಚಿ ಅವರೆ: ಭೇದಿನಾಶಕ, ಮೂತ್ರವರ್ಧಕ ಹಾಗೂ ಶಕ್ತಿವರ್ಧಕ.  
ಡಯಾಸ್ಕೋರಿಯ: ಗಡ್ಡೆ ಸ್ಟೆರೈಡ್, ಲೈಂಗಿಕ ಪ್ರಚೋದಕ, ಗರ್ಭನಿರೋಧಕ ಮಾತ್ರೆಗಳನ್ನು ತಯಾರಿಸಲು ಬಳಸುತ್ತಾರೆ.
ಮಧುಗಿಡ: ಬೀಜವನ್ನು ತೊನ್ನುರೋಗ ನಿವಾರಣೆಗೆ ಬಳಸುತ್ತಾರೆ.  
ಬನ್ನಿ: ಇದರ ತೊಗಟೆ, ಚಿಗುರು ಒತ್ತಡ ನಿವಾರಕವಾಗಿದೆ, ತೊಗಟೆಯನ್ನು ಔಷಧಿಗೆ (ಬಂಧಕ) ಬಳಸುತ್ತಾರೆ.  
ಬಿಲ್ವಪತ್ರೆ ಮರ: ಈ ಮರವು ಹಿಂದುಗಳಿಗೆ ಪವಿತ್ರವಾದದ್ದು. ಇದರ ತ್ರಿಶೂಲಾಕಾರದ ಎಲೆಗಳು ಶಿವನಿಗೆ ಅರ್ಪಿತ, ಇದರ ಬೇರು, ತೊಗಟೆ, ಎಲೆಗಳು ಔಷಧೀಯ ಗುಣ ಹೊಂದಿವೆ. ಹಣ್ಣಿನ ತಿರುಳು ಆಮಶಂಕೆ ಹಾಗೂ ಅತಿಸಾರ ನಿವಾರಣೆಯಲ್ಲಿ ಪ್ರಸಿದ್ಧ. ಬಲಿತಕಾಯಿಯ ಸಿಪ್ಪೆಯನ್ನು ಉಪಯೋಗಿಸಿ, ಒಳಗಿನ ತಿರುಳನ್ನು ಕೊರೆದು ತೆಗೆದು, ಧಾರಕಗಳನ್ನು ಮಾಡುವುದು. ಚಾರುವು ಗಡುಸಾಗಿದ್ದು, ಹಳದಿ ಮಿಶ್ರ ಬಿಳಿ ಛಾಯೆ ಹೊಂದಿದ್ದು, ಕೃಷಿ ಉಪಕರಣಗಳಿಗೆ ಬಳಸಲಾಗುತ್ತದೆ. ಕಾಯಿಯ ತಿರುಳನ್ನು ಗಾರೆಗೆ ಬಲಕೊಡಲು ಉಪಯೋಗಿಸುವುದುಂಟು.  
ಬಿಳಿ ಜಾಲಿ: ಇದರ ತೊಗಟೆಯಿಂದ ಹೆಚ್ಚಿನ ಸೌದೆ ದೊರೆಯುತ್ತದೆ, ಇದರ ಅಂಟು, ಬಣ್ಣ, ನಾರು ಔಷಧಿಗಳ ತಯಾರಿಕೆಯಲ್ಲಿ ಬಳಸಲ್ಪಡುತ್ತವೆ.  ಇದರ ತೊಗಟೆಯನ್ನು ಸಾರಾಯಿ ಭಟ್ಟಿ ಇಳಿಸುವಾಗ ಬೆರಸುವುದುಂಟು.  ಈ ಕಾರಣಕ್ಕಾಗಿ ಇದಕ್ಕೆ ಸಾರಾಯಿ ಬೇಲ ಎಂಬ ಅಡ್ಡ ಹೆಸರೂ ಬಂದಿದೆ.  ಎಳೆಗಾಯಿಗಳು ಜಾನುವಾರುಗಳಿಗೆ ಹಾಗೂ ಎಲೆಗಳು ಮೇಕೆಗಳಿಗೆ ಬಹಳ ಇಷ್ಟ.  
ಕೆಂಪು ಜಾಲಿ: ಇದರಿಂದ ಕಾಚುವನ್ನು ಪಡೆಯಬಹುದು.  
ಮಂಜತ್ತಿ: ಇದರ ಬೀಜ ಮತ್ತು ಎಲೆಗಳಿಂದ ಔಷಧಿಯನ್ನು ತಯಾರಿಸುತ್ತಾರೆ.  
ಜಗಳಗಂಟಿ: ಇದರ ದಾರುವಿನ ಚೇಗು ಹಾಗೂ ತೊಗಟೆ ಔಷಧಿಗಳಲ್ಲಿ ಉಪಯೋಗಿಸಲ್ಪಡುತ್ತನೆ. ಇದರ ಹಣ್ಣನ್ನು ಮೀನಿನ ವಿಷವಾಗಿ ಬಳಸಲಾಗುತ್ತದೆ ಹಾಗೂ ದೂಲಗಳು ಹಾಗೂ ಸಣ್ಣ ಪೀಠೋಪಕರಣಗಳನ್ನು ಮಾಡಲಾಗುತ್ತದೆ. ಇದರಿಂದ ಉತ್ತಮ ಸೌದೆ ದೊರಕುತ್ತದೆ.   
ಸರ್ಪಗಂಧ: ಇದರ ಬೇರಿನಿಂದ ಬೇರ್ಪಡಿಸಿದ ರಿಸರ್ಪಿನ್ ಎಂಬ ಸಸ್ಯಕ್ಷಾರವು ರಕ್ತದ ಒತ್ತಡಕ್ಕೆ ಔಷಧಿಯಾಗಿ ಬಳಸಲ್ಪಡುತ್ತದೆ ಹಾಗೂ ಇದನ್ನು ಭ್ರಾಂತಿ, ಬುದ್ಧಿಭ್ರಮಣೆಗಳಿಗೆ ಶಾಮಕವಾಗಿ ಬಳಸಲಾಗುತ್ತದೆ. ಇದರ ಬೇರನ್ನು ಕುಟ್ಟಿ ವಿಷ ಜಂತುಗಳ ಕಡಿತಕ್ಕೆ ಶಮನಕಾರಿಯಾಗಿ ಲೇಪಿಸಲಾಗುತ್ತದೆ.
ಅಶೋಕ ವೃಕ್ಷ: ಇದರ ತೊಗಟೆಯ ಕಷಾಯ, ಗರ್ಭಾಶಯ ಸಂಬಂಧಿ ತೊಂದರೆಗಳಿಗೆ ಔಷಧಿ. ಹೂವನ್ನು ಕುಟ್ಟಿ ನೀರಿನಲ್ಲಿ ಕಲಸಿ ಆಮಶಂಕೆಗೆ ಉಪಯೋಗಿಸಬಹುದು.  
ಅರಳಿ: ಇದರ ಬೇರಿನ ತೊಗಟೆಯನ್ನು ಮೇಹರೋಗ, ಅಸ್ತಮಾ ಹಾಗೂ ಬಂಜೆತನದ ಔಷಧಿಯಾಗಿ ಬಳಸುತ್ತಾರೆ.    
ಮುಂದಿನ ವಾರ ಮತ್ತಷ್ಟು ಉಪಯುಕ್ತ ಸಸ್ಯಗಳ ಬಗ್ಗೆ ಮಾಹಿತಿ ಕೊಡುತ್ತೇನೆ.


-ಶಾಲಿನಿ ರಜನೀಶ್, ಐಎಎಸ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.