ಐಐಟಿ ವ್ಯಾಮೋಹಕ್ಕೆ ಹಾಲೆರೆಯುವ ಮುನ್ನ

ಎರಡು ವರ್ಷದ ಹಿಂದೆ ತಿರುಪತಿಯಿಂದ ಬೆಂಗಳೂರಿಗೆ ಬರುತ್ತಿದ್ದಾಗ ಶ್ರೀಕಾಂತ್ ಎಂಬ ಸಹಪ್ರಯಾಣಿಕ ಮಾತಿಗೆ ಸಿಕ್ಕಿದರು. ಬಿಹಾರದ ಪಾಟ್ನಾ ಐಐಟಿಯಲ್ಲಿ ಪ್ರೊಫೆಸರ್ ಆಗಿದ್ದ ಶ್ರೀಕಾಂತ್ ಅಲ್ಲಿ ರಾಜೀನಾಮೆ ಕೊಟ್ಟು ಸುರತ್ಕಲ್ನ ಇಂಜಿನಿಯರಿಂಗ್ ಕಾಲೇಜಿಗೆ ಸೇರಿದ್ದರು. 'ಐಐಟಿ ಬಿಟ್ಟು ಎನ್ಐಟಿಗೆ ಯಾಕೆ ಹೋಗುತ್ತೀರಿ ಎಂದೇ ಎಲ್ಲರೂ ಕೇಳುತ್ತಿದ್ದಾರೆ. ಆದರೆ, ನಾನು ಕೆಲಸ ಮಾಡುತ್ತಿದ್ದ ಪಾಟ್ನಾದ ಐಐಟಿ, ಬೆಂಗಳೂರಲ್ಲಿ ಲ್ಯಾಂಡ್ ಮಾಫಿಯಾದ ದುಡ್ಡಲ್ಲಿ ಒಂದಿಪ್ಪತ್ತು ಲಕ್ಷ ಎತ್ತಿಟ್ಟು ಲೋಕಲ್ ಫುಡಾರಿಗಳು ಶುರುಮಾಡುವ ಇಂಜಿನಿಯರಿಂಗ್ ಕಾಲೇಜಿಗಿಂತ ಯಾವುದೇ ರೀತಿಯಲ್ಲೂ ಉತ್ತಮವಾಗಿರಲಿಲ್ಲ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಅದು ನಡೆಯುತ್ತಿದ್ದದ್ದು ಹತ್ತುಎಕರೆ ಪ್ರದೇಶದಲ್ಲಿ ಹರಡಿದ್ದ ಒಂದು ಸರ್ಕಾರಿ ಕಾಲೇಜಿನ ಬಾಡಿಗೆ ಕಟ್ಟಡದಲ್ಲಿ. ಐಐಟಿಗೆ ಸ್ವಂತಕಟ್ಟಡವಾಗಲೀ, ಸುಸಜ್ಜಿತವಾದ ಲ್ಯಾಬ್ಗಳಾಗಲೀ ಇರಲಿಲ್ಲ. ತಮಾಷೆಯೆಂದರೆ, ಐಐಟಿಗೆ ಸೇರುವಷ್ಟು ಮಾರ್ಕು-ರ್ಯಾಂಕು ಸಿಕ್ಕಿದ ಹುಡುಗರು ಕೂಡ ಇದನ್ನು ಬಿಟ್ಟು ಬೇರೆ ಇಂಜಿನಿಯರಿಂಗ್ ಕಾಲೇಜು ಸೇರುತ್ತಿದ್ದರು. ಇಲ್ಲಿ ಏನನ್ನೇ ನಮಗಾಗಿ ಒದಗಿಸಿಕೊಳ್ಳಬೇಕಾದರೂ ಸರ್ಕಾರದ ಮರ್ಜಿ ಕಾಯಬೇಕು. ಕಡತಗಳ ವಿನಿಮಯ, ಸುತ್ತೋಲೆಗಳ ಗದ್ದಲ, ಸರ್ಕಾರಿ ಆದೇಶಗಳನ್ನು ಹೊತ್ತು ತರುವ ರೆಡ್ಟೇಪ್ ಬಾಬುಗಳ ದೌಲತ್ತು - ಇವೆಲ್ಲ ನೋಡಿ ಬೇಸತ್ತು ಐಐಟಿಯನ್ನು ಬಿಟ್ಟು ಹೊರಬಂದೆ' ಎಂದರು ಅವರು.
ಐಐಟಿಗಳು ಎಂದರೆ ಸ್ವರ್ಗದಿಂದ ನೇರವಾಗಿ ಭೂಮಿಗಿಳಿದ ದೇವರ ವರಪ್ರಸಾದ ಎನ್ನುವಂತೆ ನಾವು ಅವುಗಳನ್ನು ಭಯಭಕ್ತಿಯಿಂದ ಕಾಣುತ್ತೇವೆ. ಐಐಟಿಗೆ ಸೇರಲು ಬಯಸುವ ಹುಡುಗರು ತಮ್ಮ ಊಟ ನಿದ್ದೆ ಮೈಥುನಗಳನ್ನೆಲ್ಲ ಗಂಟುಕಟ್ಟಿ ಅಟ್ಟಕ್ಕೊಗೆದು ದಿನಕ್ಕೆ 25 ಗಂಟೆ ಅಧ್ಯಯನ ಮಾಡುತ್ತಾರೆ. ಅವರಲ್ಲಿ ಕೆಲವರಂತೂ ಸಿಟ್ಟೆದ್ದ ಪೂಜಾರಿ ಬಿರುಸಿಂದ ತೇದ ಗಂಧದ ಕಾಷ್ಠದಂತೆ ಕಾಣುತ್ತಾರೆ. ರಾಜಸ್ಥಾನದಲ್ಲಿ ಐಐಟಿಗೆ ಸೇರಲು ಟ್ಯೂಷನ್ ಕೊಡುವ ಉದ್ಯಮ ಹಲವಾರು ಕೋಟಿಗಳ ವಹಿವಾಟಾಗಿ ಬೆಳೆದಿದೆ. ದೇಶದ ಮೂಲೆಮೂಲೆಯಿಂದ ಬರುವ ಹತ್ತುಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಊಟವಸತಿ ನೋಡಿಕೊಳ್ಳುವ ಇಲ್ಲಿನ ಸ್ಥಳೀಯರು ಕೂಡ ಕೋಟ್ಯಧಿಪತಿಗಳಾಗಿದ್ದಾರೆ! ಬಿಹಾರದಲ್ಲಂತೂ ಒಂದೊಂದು ಮನೆಯೂ ಐಐಟಿ ವಿದ್ಯಾರ್ಥಿಗಳನ್ನು ತಯಾರು ಮಾಡುವ ಕಾರ್ಖಾನೆ! ಇಲ್ಲಿ ಜನ್ಮತಳೆದ ಸೂಪರ್30 ಜಗತ್ತಿನಾದ್ಯಂತ ಹೆಸರು ಮಾಡಿ 'ಟೈಮ್' ಪತ್ರಿಕೆಯಲ್ಲೂ ಕಾಣಿಸಿಕೊಂಡಿದೆ! ಇಷ್ಟೆಲ್ಲ ಒದ್ದಾಡಿ ಐಐಟಿಗಳಲ್ಲಿ ಕಲಿತು ಹೊರಬಂದ ಬಹುತೇಕ ಜನ ಕೂಡಲೇ ಕ್ಯಾಟ್ ಪರೀಕ್ಷೆ ಬರೆದು ಐಐಎಮ್ಗಳಿಗೆ ಸೇರಿಕೊಳ್ಳುತ್ತಾರೆ. ಅಲ್ಲಿ ಎರಡುವರ್ಷ ಕಲಿತು ಹೊರಬರುತ್ತಿದ್ದ ಹಾಗೆಯೇ ಅವರನ್ನು ನೀರಿಂದ ಜಿಗಿದ ಮೀನನ್ನು ತಟಕ್ಕನೆ ಹಿಡಿವ ಬಕಪಕ್ಷಿಯಂತೆ ಬಹುರಾಷ್ಟ್ರೀಯ ಕಂಪೆನಿಗಳು ನಾಮುಂದು ತಾಮುಂದು ಎಂದು ಒಲಿಸಿಕೊಂಡು ತಮ್ಮ ಬುಟ್ಟಿಗೆ ಹಾಕಿಕೊಳ್ಳುತ್ತವೆ. ಆಮೇಲೆ ಅವರು ಫಾರಿನ್ನಿಗೆ ಜಿಗಿದು ಕೈತುಂಬ ಸಂಪಾದಿಸಿ, ಪತಿಪತ್ನಿಸುತಾಲಯಗಳ ಚಕ್ರವನ್ನು ಬೇಗಬೇಗ ಮುಗಿಸಿಬಿಡುತ್ತಾರೆ.
ಇಂತಹ 'ಯಶಸ್ವಿ' ವ್ಯಕ್ತಿಗಳನ್ನು ತಯಾರು ಮಾಡುವುದೇ ಐಐಟಿಗಳ ಗುರಿ ಎಂಬಂತಾಗಿದೆ. ಯಶಸ್ಸನ್ನು ನಮ್ಮ ಕಾಲೇಜುಗಳು, ಪೋಷಕರು ಮತ್ತು ಮಕ್ಕಳು ದುಡ್ಡು ಮತ್ತು ಸಂಬಳದ ಆಧಾರದ ಮೇಲೆಯೇ ಅಳೆಯಲು ಹೋಗಿ ಆಗಿರುವ ದುರಂತ ಇದು. ಅರೇ ಶಿಕ್ಷಣದ ಉದ್ದೇಶವೇ ದುಡಿಮೆ ಕಂಡುಕೊಳ್ಳುವುದಲ್ಲವೇ ಅಂತ ನೀವು ಪ್ರಶ್ನಿಸುತ್ತೀರೇನೋ. ಆದರೆ ಇನ್ನೊಂದು ರೀತಿಯಲ್ಲೂ ಯೋಚಿಸಬೇಕಾಗಿದೆ. ಇವತ್ತು ಒಬ್ಬ ಹುಡುಗ ಐಐಟಿ ಅಥವಾ ಯಾವುದೇ ತತ್ಸಮಾನ ಡಿಗ್ರಿ ಮುಗಿಸಿ ಹೊರಬರಲು ಒಟ್ಟು ಹದಿನಾರು ವರ್ಷ ಬೇಕು. ಇಷ್ಟು ವರ್ಷ ಕಲಿತ ಮೇಲೆ, ಇಂಜಿನಿಯರಿಂಗ್ ಪದವಿ ಮುಗಿಸಿದ ಮೇಲೆ ಅವನು ಮ್ಯಾನೇಜೆಮೆಂಟ್ ಶಿಕ್ಷಣಕ್ಕೆ ಸೇರುತ್ತಾನಾದರೆ, ಅವನಿಗೆ ಇಂಜಿನಿಯರಿಂಗ್ ಶಿಕ್ಷಣ ಬೇಕಿತ್ತೇ? ಒಂದು ಡಿಗ್ರಿಕಾಲೇಜಿನಲ್ಲಿ ಬಿಕಾಂ ಪದವಿಗೆ ಸೇರಿದ್ದರೂ ಅವನಿಗೆ ಮುಂದೆ ಮ್ಯಾನೇಜ್ಮೆಂಟ್ನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಆಗುತ್ತಿರಲಿಲ್ಲವೆ? ಮ್ಯಾನೇಜ್ಮೆಂಟ್ ಡಿಗ್ರಿ ಪಡೆದ, ಐಐಎಮ್ ಅಥವಾ ತತ್ಸಮಾನ ಕಾಲೇಜುಗಳಿಂದ ಹೊರಬರುವ ಹೆಚ್ಚಿನವರು ತಮ್ಮ ಇಂಜಿನಿಯರಿಂಗ್ ಸಂಬಂಧಿತ ಉದ್ಯೋಗಗಳ ಕಡೆ ಕಣ್ಣೆತ್ತಿಯೂ ನೋಡುವುದಿಲ್ಲ. ಅವರ ದೃಷ್ಟಿಯೇನಿದ್ದರೂ ಮ್ಯಾನೇಜರ್ ಅಥವಾ ಸಿಇಓದಂತಹ ಹುದ್ದೆಗಳ ಕಡೆಯೇ ಇರುತ್ತದೆ. ಅದೇ ಹದಿನಾರು ವರ್ಷಗಳನ್ನು ಒಬ್ಬ ಹುಡುಗ ಒಂದು ನಿರ್ದಿಷ್ಟ ಉದ್ಯೋಗವನ್ನೇ ಕಲಿಯಲು ಮೀಸಲಾಗಿಟ್ಟಿದ್ದರೆ, ಅದರಲ್ಲಿ ಅವನು ಅಪ್ರತಿಮ ಪ್ರಾವೀಣ್ಯ ಪಡೆಯುತ್ತಿದ್ದನಲ್ಲ? ಹದಿನಾರು ವರ್ಷ ಕಸುಬು ಕಲಿತವನು ಒಬ್ಬ ಒಳ್ಳೆಯ ಪ್ರಕಾಶಕನೋ ಬಡಗಿಯೋ ಶೆಫ್ ಅಥವಾ ಟೈಲರ್ ಆಗುವುದೂ ಸಾಧ್ಯ ಇದೆಯಲ್ಲವೆ?
ಐಐಟಿ-ಐಐಎಮ್ಗಳಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಲಿತವರನ್ನು ಉಡಾಫೆ ಮಾಡುವುದು ಇಲ್ಲಿನ ಉದ್ದೇಶ ಅಲ್ಲ. ಆದರೆ, ನಮ್ಮ ಜನ, ಹೆತ್ತವರು, ಮಕ್ಕಳು, ಸರ್ಕಾರಗಳು ಇವರೆಲ್ಲ ಸೇರಿ ಐಐಟಿಗಳಿಗೆ ಕೊಡುವ ಮರ್ಯಾದೆಯ ನೆಪದಲ್ಲಿ ಉಳಿದದ್ದಕ್ಕೆ ಬೆಲೆ ಇಲ್ಲದಂತೆ ಮಾಡುತ್ತಿದ್ದಾರೆ. ಕೇಂದ್ರದ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವೆ ಕೂಡಲೇ 8 ಹೊಸ ಐಐಟಿಗಳನ್ನು ಶುರುಮಾಡುವ ಮಾತಾಡಿದ್ದಾರೆ. ಕೇರಳ, ಕರ್ನಾಟಕ, ಜಾರ್ಖಂಡ್, ಉತ್ತರಾಖಂಡ, ಗೋವಾ, ಸಿಕ್ಕಿಮ್ ಮತ್ತು ಚತ್ತೀಸಗಢಗಳಲ್ಲಿ ಐಐಟಿಗಳಿಲ್ಲ ಎನ್ನುವುದೇ ಈ ಹೊಸ ನಿರ್ಧಾರಕ್ಕೆ ಕಾರಣವಂತೆ. ಅಲ್ಲದೆ, ಇತ್ತೀಚೆಗಷ್ಟೇ ಹೊಸರಾಜ್ಯವಾಗಿ ಕಣ್ತೆರೆದ ಸೀಮಾಂಧ್ರಕ್ಕೂ ಒಂದು ಐಐಟಿ ಕೊಡುತ್ತೇನೆ ಎಂದವರು ಭರವಸೆ ಕೊಟ್ಟಿದ್ದಾರೆ. ಪ್ರತಿ ರಾಜ್ಯಕ್ಕೂ ಐಐಟಿ ಇರಲೇಬೇಕು ಎಂದು ಇವರಿಗೆ ಯಾರು ಹೇಳಿದರೋ! ಈಗ ನಡೆಯುತ್ತಿರುವ 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಬರೋಬ್ಬರಿ 12500 ಕೋಟಿ ರುಪಾಯಿಗಳನ್ನು ಈಗಾಗಲೇ ಅಸ್ತಿತ್ವದಲ್ಲಿರುವ ಐಐಟಿಗಳಿಗೆಂದು ಎತ್ತಿಟ್ಟಾಗಿದೆ. ಅದರಲ್ಲಿ 6000 ಕೋಟಿ ಚಿಲ್ಲರೆ ರುಪಾಯಿಯನ್ನು 2009ರಲ್ಲಿ ಪ್ರಾರಂಭವಾದ 8 ಐಐಟಿಗಳ ಶ್ರೇಯೋಭಿವೃದ್ಧಿಗೆಂದೇ ಮೀಸಲಿಟ್ಟಿದ್ದಾರೆ. ಈಗ ಮತ್ತೆ ಹೊಸ 8 ಐಐಟಿಗಳು ತಲೆಯೆತ್ತಿದರೆ ಅವುಗಳಿಗೆ ಇನ್ನೊಂದು ಪಂಚವಾಷರ್ಕಯೋಜನೆಯಲ್ಲಿ ಮತ್ತೆ ಸಾವಿರಾರು ಕೋಟಿ ರುಪಾಯಿಗಳನ್ನು ಮೀಸಲಿಡಬೇಕಾಗಬಹುದು. ಬಡವನ ಜೇಬಿಂದ ತೆರಿಗೆಯ ಹೆಸರಲ್ಲಿ ಕಿತ್ತ ದುಡ್ಡನ್ನು, ಕಲಿತೊಡನೆ ವಿದೇಶಕ್ಕೆ ಹಾರುವ ಅಥವಾ ಇಲ್ಲೇ ನೆಲೆಸಿದರೂ ಲಕ್ಷಾಂತರ ಸಂಬಳ ಎಣಿಸುವ ಕೆಲಸ ಗಿಟ್ಟಿಸುವ ಸಲುವಾಗಿಯೇ ಐಐಟಿ ಸೇರುವ ಪೀಳಿಗೆಗಾಗಿ ಸುರಿಯುವುದು ನ್ಯಾಯವೇ ಎಂದು ಸರ್ಕಾರ ಯೋಚಿಸಬೇಕು. ಈಗಾಗಲೇ ಇರುವ ಸಾವಿರಾರು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಮಳೆಬಿಸಿಲಿಗೆ ಲಡ್ಡಾಗುತ್ತಿವೆ. ಮತ್ತೆಮತ್ತೆ ಹೊಸ ಐಐಟಿಗಳನ್ನು ನಾಯಿಕೊಡೆಯಂತೆ ಚಿಗುರಿಸುವ ಬದಲು ಸರ್ಕಾರ ಈಗಾಗಲೇ ಇರುವ ಇಂತಹ ಕಾಲೇಜುಗಳನ್ನು ಗುರುತಿಸಿ ಉತ್ಥಾನ ಕಾರ್ಯಕ್ರಮ ಹಾಕಬೇಕು. ಶಿಕ್ಷಣ ಎಂದರೆ ಇಂಜಿನಿಯರಿಂಗ್ ಎನ್ನುವ ಭ್ರಮೆಯಿಂದ ಮುಖ್ಯವಾಗಿ ಈ ದೇಶದ ಕುರುಡುಜನತೆಯನ್ನು ಹೊರತಂದು, ಬೇರೆ ಬಗೆಯ ಶಿಕ್ಷಣಕ್ಕೂ ಮರ್ಯಾದೆ-ಗೌರವ ಇದೆ ಎನ್ನುವುದನ್ನು ಹೇಳಿಕೊಡಬೇಕು. ಎಷ್ಟೋ ಕಾಲೇಜುಗಳಲ್ಲಿ ಮೂಲವಿಜ್ಞಾನಕ್ಕೆ ವಿದ್ಯಾರ್ಥಿಗಳಿಲ್ಲದೆ, ಆಯಾ ವಿಭಾಗಗಳಿಗೆ ಬೀಗ ಬೀಳುತ್ತಿದೆ. ಇವನ್ನೆಲ್ಲ ಸರಿಮಾಡಿ ಹಳಿಗೆ ತರುವ ಕೆಲಸವನ್ನು ಎಚ್ಆರ್ಡಿ ಪ್ರಥಮಾದ್ಯತೆಯಾಗಿ ವಹಿಸಿಕೊಳ್ಳಬೇಕು. ಇಂಗ್ಲೀಷ್ ಮಾಧ್ಯಮದ ಶಾಲೆಗಳಿಗೆ ಸೆಡ್ಡು ಹೊಡೆಯುವಂತಹ ಗುಣಮಟ್ಟದ ಕನ್ನಡ-ತೆಲುಗು-ಸಿಂಧಿ-ಗುಜರಾತಿ ಶಾಲೆಗಳನ್ನು ತೆರೆದುತೋರಿಸುವ ಕೆಲಸವನ್ನು ಮಾನವ ಸಂಪನ್ಮೂಲ ಸಚಿವಾಲಯ ಮಾಡಬೇಕು. ಎಂಟು ಐಐಟಿಗಳನ್ನು ಹುಟ್ಟಿಸುವ ದುಡ್ಡಲ್ಲಿ ದೇಶಾದ್ಯಂತ ನೂರಾರು ವೃತ್ತಿಪರ ತರಬೇತಿ ಸಂಸ್ಥೆಗಳನ್ನು ಕಟ್ಟಿಸಿ ಸಾವಿರಾರು ಯುವಕರು ತಮ್ಮ ಬದುಕು ಕಟ್ಟಿಕೊಳ್ಳಲು ನೆರವಾಗುವುದು ಸಾರ್ಥಕ ಕೆಲಸ.
-ರೋಹಿತ ಚಕ್ರತೀರ್ಥ
rohithmath@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


