ಜಯ ತರದ ಸಚಿವರು ತಾವೇ ರಾಜೀನಾಮೆ ನೀಡಲಿ

ಕಾಂಗ್ರೆಸ್ನಲ್ಲಿ ನಾನು ಕಿಂಗ್ ಮೇಕರ್ ಎಂದೇ ಹೆಸರಾಗಿದ್ದೇನೆ. ನನಗೆ ಕಿಂಗ್ ಆಗಲು ಇಷ್ಟವಿಲ್ಲ. ನಾನು ಯಾರಿಗಾದರೂ ಮಾತು ಕೊಟ್ಟರೆ ಮುಗಿಯಿತು ಅದನ್ನು ಮಾಡ್ತೇನೆ. ನಾನು ಮಾತು ಕೊಡಲಿ ಎಂದು ಕಾಯುವ ದೊಡ್ಡ ವರ್ಗವೇ ಇದೆ. ಕಿಂಗ್ ಮೇಕರ್ ಆಗುವದರಲ್ಲೇ ನನಗೆ ಸಮಾಧಾನ. ಇದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ನುಡಿ.
-20 ಲೋಕಸಭಾ ಸ್ಥಾನಗಳಿಗೆ ಟಾರ್ಗೇಟ್ ಫಿಕ್ಸ್ ಮಾಡಿದ್ದಿರಿ ಆಗಿಲ್ಲ. ಮುಂದೇನು ?
ಹೌದು. ರಾಜ್ಯದಲ್ಲಿ ಕಾಂಗ್ರೆಸ್ 20 ಸ್ಥಾನ ಗೆದ್ದಿಲ್ಲ. ಹೈಕಮಾಂಡ್ ನಿರೀಕ್ಷೆ ಮಾಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಸಚಿವರಿಗೆ ಇಷ್ಟೇ ಗುರಿ ನಿಗದಿ ಮಾಡಿದ್ದರು. ಇದಕ್ಕೆ ನನ್ನ ಪ್ರಕಾರ ಸರ್ಕಾರದ ಸಚಿವರನ್ನೇ ಹೊಣೆಗಾರರನ್ನಾಗಿಸಬೇಕು. ಕೆಲ ಸಚಿವರ ಸ್ವಂತ ಕ್ಷೇತ್ರದಲ್ಲೂ ಕಾಂಗ್ರೆಸ್ಗೆ ಲೀಡ್ ಬಂದಿಲ್ಲ. ಹೀಗಾಗಿ ಚುನಾವಣೆಯಲ್ಲಿ ಗೆಲುವು ನೀಡದ ಸಚಿವರು ಸ್ವಯಂ ಪ್ರೇರಣೆಯಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
-ಹಾಗೆ ಮಾಡಿದರೆ ಮುಕ್ಕಾಲು ಪಾಲು ಸಂಪುಟವೇ ಖಾಲಿಯಾಗಿ ಬಿಡತ್ತಲ್ಲ ?
ಹ್ಹ ಹ್ಹ... ಇದು ನನ್ನ ಅಭಿಪ್ರಾಯ. ನೋಡಿ ಪಕ್ಷ ಈಗ ವಿಷಮ ಸ್ಥಿತಿಯಲ್ಲಿ ಇದೆ. ಅದಕ್ಕಾಗಿ ಅವರೆಲ್ಲ ಪಕ್ಷ ಸಂಘಟನೆ ಮಾಡಲಿ. ಪಕ್ಷಕ್ಕೆ ಗೆಲುವು ತಂದುಕೊಡಲಾಗದ ಸಚಿವರ ರಾಜೀನಾಮೆ ಪಡೆದುಕೊಳ್ಳಿ ಎಂದು ಒತ್ತಡ ಹೇರುತ್ತಿಲ್ಲ. ಅವರು ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಲಿ ಎಂದು ಹೇಳುತ್ತಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ತಮ್ಮ ಸ್ವಂತ ಕ್ಷೇತ್ರದಲ್ಲೂ ಪಕ್ಷಕ್ಕೆ ಲೀಡ್ ತಂದುಕೊಡಲು ಸಾಧ್ಯವಾಗಿಲ್ಲ ಎಂದರೆ ಹೇಗೆ? ನಾನು ಅಂಥವರ ಬಗ್ಗೆ ಹೇಳಿದ್ದು. ಎಲ್ಲದಕ್ಕಿಂತ ಮುಖ್ಯವಾಗಿ ಕೇಂದ್ರದಲ್ಲಿ ಪಕ್ಷ ಸೋತಾಗ ನಾವೆಲ್ಲರೂ ಸ್ವಯಂ ಪ್ರೇರಣೆಯಿಂದ ನಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದೆವು. ಸಚಿವರೂ ಇದೇ ಮಾರ್ಗ ತುಳಿಯಲಿ.
-ಈ ತತ್ವ ಪಾಲಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ರಾಜೀನಾಮೆ ಹಾದಿ ತುಳಿಯಬೇಕಾಗುತ್ತದೆ?
ಇಲ್ಲ. ಸಿದ್ದರಾಮಯ್ಯನವರ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತಿಲ್ಲ. ಚಾಮರಾಜನಗರದಲ್ಲಿ ಕಾಂಗ್ರೆಸ್ ಗೆದ್ದಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಸಿದ್ದರಾಮಯ್ಯನವರು ಈ ಚುನಾವಣೆಯಲ್ಲಿ ಪಕ್ಷದ ಸ್ಟಾರ್ ಪ್ರಚಾರಕರಾಗಿದ್ದರು. ರಾಜ್ಯದ ಎಲ್ಲ ಕ್ಷೇತ್ರಗಳ ಜವಾಬ್ದಾರಿ ಅವರ ಮೇಲಿತ್ತು. ಹೀಗಾಗಿ ಅವರನ್ನು ಒಂದು ಕ್ಷೇತ್ರಕ್ಕೆ ಸೀಮಿತಗೊಳಿಸಲು ಸಾಧ್ಯವಾಗುವುದಿಲ್ಲ. ಇನ್ನೊಂದು ವಿಚಾರ ನೆನಪಿಡಿ. ಸಿದ್ದರಾಮಯ್ಯನವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿನ ಸ್ಥಾನ ಹೆಚ್ಚಿಸುವ ಭರವಸೆ ನೀಡಿದ್ದರು. ಅವರ ಮಾತನ್ನು ಕಾಪಾಡಿಕೊಂಡಿದ್ದಾರೆ.
-ಹಾಗಾದರೆ ಮೈಸೂರಿನಲ್ಲಿ ವಿಶ್ವನಾಥ್ ಸೋಲಿಗೆ ಸಿದ್ದರಾಮಯ್ಯ ಜವಾಬ್ದಾರರಾಗುವುದಿಲ್ಲವೇ ?
ಇಲ್ಲ. ಮೈಸೂರಿನಲ್ಲಿ ಪಕ್ಷಕ್ಕೆ ಸೋಲಾಗುವುದಕ್ಕೆ ಬೇರೆ ಬೇರೆ ವಿಚಾರಗಳು ಕೆಲಸ ಮಾಡಿವೆ. ಅಲ್ಲಿ ಸೇಡಿನ ರಾಜಕಾರಣವೂ ಪ್ರಮುಖ ಪಾತ್ರ ವಹಿಸಿದೆ. ಎಚ್. ವಿಶ್ವನಾಥ್ ಅವರೂ ಈ ಮಾತನ್ನು ಪ್ರಸ್ತಾಪಿಸಿದ್ದಾರೆ. ವೈಯಕ್ತಿಕ ದ್ವೇಷಕ್ಕಾಗಿ ಜೆಡಿಎಸ್ನವರು ಬಿಜೆಪಿಯ ಜತೆ ಸೇರಿಕೊಂಡರು. ಕೆಲವೆಡೆ ಕ್ಷೇತ್ರದ ನಾಯಕರು, ಪ್ರಚಾಕರು ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ. ಇದಕ್ಕೆ ಸ್ಥಳೀಯ ಮುಖಂಡರು, ಸಚಿವರು ಜವಾಬ್ದಾರರು. ಅಷ್ಟಕ್ಕೂ ಮೈಸೂರಿನಲ್ಲಿ ಕಾಂಗ್ರೆಸ್ 30 ಸಾವಿರ ಮತಗಳ ಅಂತರದಿಂದ ಸೋತಿದೆ. ಜೆಡಿಎಸ್ನವರು ಬಿಜೆಪಿ ಜತೆ ಕೈ ಜೋಡಿಸದಿದ್ದರೆ ನಾವೇ ಗೆಲುವು ಸಾಧಿಸುತ್ತಿದ್ದೆವು.
-9 ವರ್ಷಗಳ ನಂತರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷ ತುಂಬಿದೆ. ಆದರೆ ಕೆಲ ಸಚಿವರ ಕಾರ್ಯವೈಖರಿ ಸರಿ ಇಲ್ಲ. ಸೋಮಾರಿಗಳಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆಯಲ್ಲ ?
ಹೌದು. ಇದು ನನ್ನ ಗಮನಕ್ಕೂ ಬಂದಿದೆ. ಈ ಹಿಂದೆ ರಾಜ್ಯಕ್ಕೆ ವಿಶ್ವಮಟ್ಟದಲ್ಲಿ ತನ್ನದೇ ಆದ ಗೌರವ ಇತ್ತು. ಆದರೆ ಬಿಜೆಪಿ ಸರ್ಕಾರದ ಐದು ವರ್ಷದ ಅವಧಿಯಲ್ಲಿ ಆ ಕೀರ್ತಿ ತೊಳೆದು ಹೋಯ್ತು. ಬಳ್ಳಾರಿ ರಿಪಬ್ಲಿಕ್ ರಾಜ್ಯವನ್ನಾಳುತ್ತಿದೆ ಎಂಬ ಮಾತಿತ್ತು. ಭ್ರಷ್ಟಾಚಾರ, ದುರಾಡಳಿತದಿಂದ ರಾಜ್ಯ ಘಾಸಿಗೊಂಡಿತ್ತು. ಇದನ್ನೆಲ್ಲ ಕೇವಲ ಒಂದು ವರ್ಷದಲ್ಲಿ ಸರಿ ಮಾಡುವುದಕ್ಕೆ ಆಗುವುದಿಲ್ಲ. ಸಿದ್ದರಾಮಯ್ಯನವರು ಆ ದಿಶೆಯಲ್ಲಿ ದೃಢವಾದ ಹೆಜ್ಜೆ ಇಡುತ್ತಿದ್ದಾರೆ. ಈಗ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಅಬ್ಬರವಿಲ್ಲ. ಆದರೆ ಭ್ರಷ್ಟಾಚಾರ, ಭೂ ಮಾಫಿಯಾ ಇನ್ನೂ ಇದೆ. ಅದನ್ನೆಲ್ಲ ತೊಡೆದು ಹಾಕಿ ಸುಭದ್ರ ಆಡಳಿತ ನೀಡುವ ಜವಾಬ್ದಾರಿ ಸಿದ್ದರಾಮಯ್ಯನವರ ಮೇಲಿದೆ. ಆದರೆ ಇದು ಅವರೊಬ್ಬರಿಂದ ಸಾಧ್ಯವಿಲ್ಲ. ಉಳಿದ ಮಂತ್ರಿಗಳ ಸಹಕಾರವೂ ಬೇಕು. ರಾಜಕೀಯ ಕಾರಣವೂ ಸೇರಿದಂತೆ ಹಲವು ಹಿನ್ನೆಲೆಯಲ್ಲಿ ಕೆಲವರನ್ನು ಮಂತ್ರಿ ಮಾಡಲಾಗಿದೆ. ಅವರು ಹೆಸರಿಗೆ ಮಾತ್ರ ಮಂತ್ರಿಯಾಗಿದ್ದಾರೋ ಅಥವಾ ಜನಸೇವೆ ಮಾಡುತ್ತಿದ್ದಾರೋ ಎಂಬ ಪರಾಮರ್ಶೆ ಮಾಡಿಕೊಳ್ಳಲಿ.
-ಅವರು ಕೆಲಸ ಮಾಡುತ್ತಿಲ್ಲ ಎಂಬ ನೇರ ಆರೋಪ ಇದೆ.
ಅದಕ್ಕೆ ನಾನು ಹೇಳುವುದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಂಥ ಸಚಿವರ ಪಟ್ಟಿ ಮಾಡಿಕೊಂಡು ಹೈಕಮಾಂಡ್ ಜತೆ ಚರ್ಚೆ ನಡೆಸಿ ಏನು ಮಾಡಬೇಕೋ ಅದನ್ನು ಮಾಡಲಿ.
-ಅಂದರೆ ರಾಜೀನಾಮೆ ಪಡೆಯಬೇಕೇ ?
ಅದನ್ನು ಮುಖ್ಯಮಂತ್ರಿಗಳು ನಿರ್ಧಾರ ಮಾಡಲಿ. ಪಕ್ಷ ಈಗ ವಿಷಮ ಸನ್ನಿವೇಶವನ್ನು ಎದುರಿಸುತ್ತಿದೆ. ಹೀಗಾಗಿ 24 ಗಂಟೆ ಪಕ್ಷ ಮತ್ತು ಸರ್ಕಾರದ ಕೆಲಸ ಮಾಡಬೇಕು. ಕೆಲಸ ಮಾಡದಿದ್ದರೆ ಕಷ್ಟ. ಅಂಥವರಿಗೆ ಏನು ಮಾಡಬೇಕು ಎಂಬುದನ್ನು ಸಿದ್ದರಾಮಯ್ಯನವರೇ ನಿರ್ಧಾರ ಮಾಡಲಿ.
-ಅದೇ ರೀತಿ ಸಿದ್ದರಾಮಯ್ಯನವರ ಮೇಲೂ ಅಲ್ಲಲ್ಲಿ ಸ್ವಜನ ಪಕ್ಷಪಾತದ ಆರೋಪ ಕೇಳಿ ಬರುತ್ತಿದೆಯಲ್ಲ ?
ನೋಡಿ ರಾಜ್ಯದಲ್ಲಿ ಯಾರೇ ಮುಖ್ಯಮಂತ್ರಿಯಾದರೂ ಇಂಥದೊಂದು ಆರೋಪ ಸಾಮಾನ್ಯ. ತಮ್ಮ ಬಂಧುಗಳಿಗೆ, ಸಮುದಾಯದವರಿಗೆ ಆದ್ಯತೆ ನೀಡುತ್ತಾರೆ ಎಂಬ ದೂರು ಸ್ವಾಭಾವಿಕ. ಸಿದ್ದರಾಮಯ್ಯನವರ ಬಗ್ಗೂ ಅಂಥ ಮಾತು ಕೇಳಿ ಬರುತ್ತಿದೆ. ಆದರೆ ಅವರು ಎಲ್ಲವನ್ನೂ ಸಮತೋಲನ ಮಾಡುತ್ತಾರೆ ಎಂಬ ವಿಶ್ವಾಸವಿದೆ.
-ಅಹಿಂದ ಹೋಗಿ ಕುಹಿಂದ ಆಗುತ್ತಿದೆ ಎಂಬ ವ್ಯಂಗ್ಯವೂ ಇದೆ.
ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ದಲಿತರ ಕಲ್ಯಾಣದ ಭರವಸೆಯನ್ನು ಸಿದ್ದರಾಮಯ್ಯನವರು ಅಧಿಕಾರಕ್ಕೆ ಬರುವುದಕ್ಕೆ ಮುನ್ನವೇ ನೀಡಿದ್ದರು. ಅದನ್ನು ಅವರು ಈಡೇರಿಸುತ್ತಿದ್ದಾರೆ. ಅಹಿಂದ, ಕುಹಿಂದವಾಗುವುದಿಲ್ಲ ಎಂಬ ಸಂಪೂರ್ಣ ವಿಶ್ವಾಸ ನನಗಿದೆ.
-ಲೋಕಸಭಾ ಚುನಾವಣೆ ನಂತರ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನದಲ್ಲಿ ಇರುವುದಿಲ್ಲ ಎಂಬ ಮಾತಿತ್ತು. ನಿಜವೇ ?
ಹ್ಹ ಹ್ಹ ಹ್ಹ... ನೋಡಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರ ಆಶೀರ್ವಾದ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಸಿದ್ದರಾಮಯ್ಯ ಈ ರಾಜ್ಯದ ಮುಖ್ಯಮಂತ್ರಿಯಾಗಿರುತ್ತಾರೆ.
-ಅಂದರೆ ಮುಂದಿನ ನಾಲ್ಕು ವರ್ಷ ಅವರ ಸ್ಥಾನ ಅಭಾದಿತ?
ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಆಶೀರ್ವಾದ ಇರುವವರೆಗೆ ಅವರು ಮುಖ್ಯಮಂತ್ರಿಯಾಗಿರುತ್ತಾರೆ.
-ರಾಜ್ಯ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯನವರನ್ನೂ ಒಳಗೊಂಡ ಹರಿಪ್ರಸಾದ್ ಬ್ರಿಗೇಡ್, ಖರ್ಗೆ ಬ್ರಿಗೇಡ್, ಕೃಷ್ಣ ಶಿಷ್ಯರ ಬ್ರಿಗೇಡ್ ಇದೆ. ಇವರಲ್ಲಿ ಎಲ್ಲವೂ ಸರಿ ಇಲ್ಲ ಅಂತಾರೆ.
ನೋಡಿ ನಾನು ಯಾರ ಬ್ರಿಗೇಡ್ನಲ್ಲೂ ಇಲ್ಲ. ಕೇಂದ್ರ ಮಟ್ಟದಲ್ಲಿ ನಾನು, ಆಸ್ಕರ್, ಮೊಯ್ಲಿ, ಖರ್ಗೆ ಇದ್ದೇವೆ. ಎಸ್.ಎಂ.ಕೃಷ್ಣ ಅವರಿದ್ದರು. ನನಗೆ ಕೇಂದ್ರದಲ್ಲಿ ಸೋನಿಯಾ ಗಾಂಧಿ ಹಾಗೂ ರಾಜ್ಯದಲ್ಲಿ ದಿ. ದೇವರಾಜ್ ಅರಸು ಅವರೇ ರೋಲ್ ಮಾಡೆಲ್. ನಾನು ಸೋನಿಯಾ ಗಾಂಧಿ ಅವರ ಬ್ರಿಗೇಡ್ ಹೊರತು ಇನ್ಯಾರ ಸೇನೆಯಲ್ಲೂ ನಾನಿಲ್ಲ. ರಾಜ್ಯದಲ್ಲಿ ದೇವರಾಜ್ ಅರಸು ಅವರ ಆಡಳಿತವೇ ನನಗೆ ಮಾದರಿ. ಸಿದ್ದರಾಮಯ್ಯನವರಿಂದ ಅಂಥದ್ದೇ ಆಡಳಿತ ನಿರೀಕ್ಷೆ ಮಾಡಿದ್ದರಿಂದ ಅವರ ಜತೆ ನಾವೆಲ್ಲ ಇದ್ದೇವೆ.
-ಎಸ್.ಎಂ.ಕೃಷ್ಣ ಇದ್ದರು ಅಂದ್ರಿ. ಈಗ ಅವರು ಕಾಂಗ್ರೆಸ್ನ ಪ್ರಬಲ ಪರಿಧಿಯಲ್ಲಿ ಇಲ್ಲವೇ ?
ನನ್ನ ಮಾತಿನ ಅರ್ಥ ಹಾಗಲ್ಲ. ಕೃಷ್ಣ ಅವರು ಕಾಂಗ್ರೆಸ್ನಲ್ಲಿ ಈಗಲೂ ಪ್ರಬಲರೇ. ಅವರು ನಮ್ಮ ಪಕ್ಷದ ಅತ್ಯುನ್ನತ ವೇದಿಕೆಯಾದ ಕಾರ್ಯಕಾರಿಣಿ ಸಮಿತಿ (ಸಿಡಬ್ಲ್ಯುಸಿ ) ಕಾಯಂ ಸದಸ್ಯರು. ಅಲ್ಲಿ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಬಹುದು. ಅವರ ಮಾತಿಗೆ ಯಾವತ್ತು ಗೌರವ ಇದೆ.
-ಇದರ ಜತೆಗೆ ಕೃಷ್ಣ ಅವರಿಗೆ ರಾಜ್ಯಸಭಾ ಟಿಕೆಟ್ ತಪ್ಪುವುದಕ್ಕೆ ನೀವೇ ನೇರ ಕಾರಣ ಎಂಬ ಆರೋಪವಿದೆಯಲ್ಲ ?
ಕೆಟ್ಟದಕ್ಕೆಲ್ಲ ಶನಿದೇವರು ಕಾರಣ ಎಂದ ಹಾಗೆ, ರಾಜ್ಯದಲ್ಲಿ ಯಾವುದಾದರೂ ಕಾಂಗ್ರೆಸ್ ನಾಯಕನಿಗೆ ತೊಂದರೆಯಾದರೆ ಅದಕ್ಕೆ ಹರಿಪ್ರಸಾದ್ ಕಾರಣ ಎಂದು ಆರೋಪಿಸುವ ದೊಡ್ಡ ವರ್ಗವೇ ನಮ್ಮಲ್ಲಿದೆ. ಪ್ರತಿಪಕ್ಷ ಮತ್ತು ಸ್ವಪಕ್ಷದಲ್ಲಿ ಇಂಥವರು ಇದ್ದಾರೆ. ನಾನು ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ರಾಜಕೀಯ ಏಳ್ಗೆಯನ್ನು ಸಹಿಸದವರು ಇಂಥ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ನನ್ನನ್ನು ಚುನಾವಣೆಯಲ್ಲಿ ಸೋಲಿಸಿ ರಾಜಕೀಯವಾಗಿ ಮುಗಿಸುವ ಸಂಚು ನಡೆಸಿದರು. ಹಿಂದೆ ದೈಹಿಕವಾಗಿ ಹಲ್ಲೆ ನಡೆಸುವ ಪ್ರಯತ್ನವೂ ನಡೆದಿತ್ತು. ಈಗ ಮಾನಸಿಕವಾಗಿ ನನ್ನನ್ನು ಕುಗ್ಗಿಸಲು ಇಂಥ ಮಾತುಗಳನ್ನು ಹಬ್ಬಿಸುತ್ತಿದ್ದಾರೆ. ನಾನು ರಾಜಕೀಯವಾಗಿ ಯಾವುದೇ ವ್ಯಕ್ತಿಯ ಪರವೂ ಅಲ್ಲ, ವಿರೋಧಿಯೂ ಅಲ್ಲ. ನಾನು ಕಾಂಗ್ರೆಸ್ ಪರ. ಆದರೆ ನನ್ನ ಅಭ್ಯುದಯವನ್ನು ಸಹಿಸದ ನಮ್ಮವರು ಅಸೂಯೆಯಿಂದ ಇಂಥ ಆರೋಪ ಮಾಡುತ್ತಿದ್ದಾರೆ.
-ಅದೆಲ್ಲ ಬಿಡಿ, ಸಿದ್ದರಾಮಯ್ಯನವರ ಸರ್ಕಾರವನ್ನು ರಕ್ಷಿಸುವ ಸೂತ್ರಧಾರ ನೀವು ಎಂಬ ಮಾತನ್ನಾದರೂ ಒಪ್ಪಿಕೊಳ್ಳುತ್ತೀರಾ ?
ನನ್ನ ಕೈಯಲ್ಲಿ ರಾಜ್ಯ ರಾಜಕಾರಣದ ಸೂತ್ರವೇ ಇಲ್ಲ. ಹೀಗಾಗಿ ಸೂತ್ರಧಾರ ಎಂಬ ಮಾತನ್ನು ಒಪ್ಪಿಕೊಳ್ಳಲಾರೆ. ನಾನು ಕಾಂಗ್ರೆಸ್ನ ಸೇವಕ. 17 ರಾಜ್ಯದ ಉಸ್ತುವಾರಿಯಾಗಿ ಪಕ್ಷದ ಕೆಲಸ ಮಾಡಿದ್ದೇನೆ ಎಂಬ ತೃಪ್ತಿ ಇದೆ.
-ಇಷ್ಟೆಲ್ಲ ಸಂಪರ್ಕ ಇರುವ ನೀವು ಕೇವಲ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ತೃಪ್ತರೇ ? ಬೇರೆ ಮಹತ್ವಾಕಾಂಕ್ಷೆ ಇಲ್ಲವೇ ? ಕಿಂಗ್ ಆಗುವುದು ಯಾವಾಗ ?
ನಾನು ಕಾಂಗ್ರೆಸ್ನ ಸೇವಕ. ಕಾಂಗ್ರೆಸ್ನ ಸೇವೆ ಮಾಡುವುದು, ಪಕ್ಷ ಕಟ್ಟುವುದೇ ನನ್ನ ಮಹತ್ವಾಕಾಂಕ್ಷೆ. ಬೇರೆ ಏನಿಲ್ಲ. ಕಾಂಗ್ರೆಸ್ನಲ್ಲಿ ನಾನು ಕಿಂಗ್ ಮೇಕರ್ ಎಂದೇ ಹೆಸರಾಗಿದ್ದೇನೆ. ನನಗೆ ಕಿಂಗ್ ಆಗಲು ಇಷ್ಟವಿಲ್ಲ. ನಾನು ಯಾರಾದರೊಬ್ಬರಿಗೆ ಮಾತು ಕೊಟ್ಟರೆ ಮುಗಿಯಿತು ಅದನ್ನು ಮಾಡ್ತೇನೆ. ನಾನು ಮಾತು ಕೊಡಲಿ ಎಂದು ಕಾಯುವ ದೊಡ್ಡ ವರ್ಗವೇ ಇದೆ. ಕಿಂಗ್ ಮೇಕರ್ ಆಗುವದರಲ್ಲೇ ನನಗೆ ಸಮಾಧಾನವಿದೆ. ನನ್ನ ಬೆಂಬಲದಿಂದಲೇ ಶಾಸಕರಾದವರು, ಮಂತ್ರಿಯಾದವರ ಪಟ್ಟಿ ಇದೆ. ಆದರೆ ಅವರು ಈಗ ಅದನ್ನು ನೆನಪು ಮಾಡಿಕೊಳ್ಳುವುದಿಲ್ಲ. ಅವರೆಲ್ಲ ಈಗ ಐದಾರು ಬಾರಿ ಗೆದ್ದಿದ್ದಾರೆ ಬಿಡಿ.
-ನಿಮ್ಮ ಸರ್ಕಾರ ಬಂದ ಮೇಲೂ ಬೆಂಗಳೂರಿನ ಕಸದ ಸಮಸ್ಯೆ ಪರಿಹಾರವಾಗಿಲ್ಲ.
ಬೆಂಗಳೂರಿನ ಕಸಕ್ಕೆ ಹಳ್ಳಿ ಕಸಕ್ಕಿಂತ ರುಚಿ ಜಾಸ್ತಿ. ತಂಗಳು-ಪಂಗಳು ಸೇರಿಸಿ ಹಾಕುತ್ತಾರೆ ಎಂಬ ಕಾರಣಕ್ಕೆ ಈ ರುಚಿ ಬಂದಿಲ್ಲ. ಕಸ ವಿಲೇವಾರಿ ಎಂಬುದು ರು. 600-700 ಕೋಟಿಗಳ ವ್ಯವಹಾರ. ಹೀಗಾಗಿ ಇದೊಂದು ಮಾಫಿಯಾವಾಗಿ ಪರಿಣಮಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಮಾಫಿಯಾವನ್ನು ಓಡಿಸಿ ವ್ಯವಸ್ಥೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾಗುತ್ತದೆ.
-ಪರಿಷತ್ ಚುನಾವಣೆ ವಿಚಾರದಲ್ಲೂ ಅಸಮಾಧಾನವಿದೆ.
ನಮ್ಮಲ್ಲಿ ಕೆಲವರಿಗೆ ಅಧಿಕಾರ ಸಿಕ್ಕಿಲ್ಲ ಎಂಬ ಡಿಸಪಾಯಿಂಟ್ಮೆಂಟ್ ಇದೆ. ಆದರೆ ಅದು ಡಿಪ್ರೆಶನ್ ಆಗಬಾರದು. ಅಧಿಕಾರ ಎಲ್ಲರಿಗೂ ಸಿಗುವುದಿಲ್ಲ. ಕೆಲವರು ಸರ್ಕಾರದಲ್ಲಿ ಇನ್ನು ಕೆಲವರು ಪಕ್ಷದಲ್ಲಿ ಕೆಲಸ ಮಾಡಬೇಕಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೊಡ್ಡ ಮನಸು ಮಾಡಿ ಅದನ್ನೆಲ್ಲ ನಿವಾರಣೆ ಮಾಡಲಿ.
-ರಾಘವೇಂದ್ರ ಭಟ್, ಕನ್ನಡಪ್ರಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


