ದುಷ್ಟ ಮನಸ್ಥಿತಿಗಳಿಗೆ ಹಾಕಲೇಬೇಕಿದೆ ಹೆದರಿಕೆಯ ಕಡಿವಾಣ
ಮಹಿಳೆಯರನ್ನು ಗೌರವದಿಂದ ಕಾಣುವ ಪರಂಪರೆ ನಮ್ಮ ಭಾರತದ್ದು. ಮಹಿಳೆ ತಾಳ್ಮೆ, ಕ್ಷಮಾಗುಣ, ಧೈರ್ಯ, ಸ್ನೇಹಪರತೆಯಿಂದ ಹಲವಾರು ಕ್ಲಿಷ್ಟ ಸಂದರ್ಭಗಳನ್ನು ನಿಭಾಯಿಸಬಲ್ಲಳು. ಈಗ ಎಲ್ಲಾ ಕ್ಷೇತ್ರಗಳಲ್ಲೂ ನಾವು ಹೆಣ್ಣಿನ ಸಾಧನೆಯನ್ನು ಕಾಣಬಹುದಾಗಿದೆ. ಆದರೆ ಇತ್ತೀಚೆಗಂತೂ ಪತ್ರಿಕೆಗಳಲ್ಲಿ, ನ್ಯೂಸ್ ಚಾನೆಲ್ಗಳಲ್ಲಿ ಮಹಿಳೆಯರ, ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರಗಳ ವರದಿಯನ್ನು ನೋಡುವಾಗ ನಿಜವಾಗಿಯೂ ನಾವು ಅಭಿವೃದ್ಧಿಯತ್ತ ಸಾಗುತ್ತಿರುವುದು ಸತ್ಯವಾ? ಎಂದೆನಿಸುತ್ತದೆ.
ಯಾವುದೇ ಧರ್ಮವಿರಲಿ, ಅದರ ಆಚಾರ-ವಿಚಾರ, ಸಂಪ್ರದಾಯ, ಮೌಲ್ಯಗಳನ್ನು ಎತ್ತಿ ಹಿಡಿಯಲು ಹೆಂಗಸರನ್ನೇ ಮುಂದಿಡುವ ಧರ್ಮದ ಮುಖಂಡರುಗಳು, ಅತ್ಯಾಚಾರದಂತಹ ಹೇಯ ಕೃತ್ಯ ನಡೆದಾಗ ಅದರ ಬಗ್ಗೆ ಚಕಾರವೆತ್ತಲು ಹೆದರುವುದೇಕೆ? ಇಂತಹ ಸಂದರ್ಭಗಳಲ್ಲಿ ಹೆಂಗಸರ ಡ್ರೆಸ್ಕೋಡ್ಗಳ ಬಗ್ಗೆ ವಿಮರ್ಶಿಸುವಾಗ ಭಾರತೀಯ ಸಂಸ್ಕೃತಿಯ ಬಗ್ಗೆ ಗಂಡಸರಿಗೇಕೆ ಉಪದೇಶಗಳನ್ನು ಕೊಡುವುದಿಲ್ಲ? ಅಮಾನುಷ ಕೃತ್ಯಗಳು ನಡೆದಾಗ ಮಹಿಳೆಯರ ತಪ್ಪುಗಳನ್ನು ಹುಡುಕಲು ಹೆಣಗಾಡುವ ಬದಲು ತಪ್ಪೆಸಗಿದ ಗಂಡಸನ್ನೇಕೆ ಗುರಿಯಾಗಿಸುವುದಿಲ್ಲ? ಯಾವುದೋ ಒಂದು ತಾಯಿಯ ಉದರದಿಂದ ಜನಿಸಿದ ಮಗನೇ ತಾನೆ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವುದು. ಆ ವ್ಯಕ್ತಿಯೇಕೆ ಹಾಗಾದ? ಅವನೆಸಗಿದ ಮೃಗೀಯ ವರ್ತನೆಗಳಿಗೆ ಕಾರಣಗಳೇನು? ಅವನ ಹದ್ದುಮೀರಿದ ವರ್ತನೆಗಳಿಗೆ ಸಿಕ್ಕಿದ ಸಲಿಗೆ ಎಲ್ಲಿಯದು? ಎಂಬ ಬಗ್ಗೆ ಯಾಕೆ ಚಿಂತನೆಗಳು ನಡೆಯುತ್ತಿಲ್ಲ ಎಂಬುದೇ ಯಕ್ಷಪ್ರಶ್ನೆ.
ಕೆಲವು ಮಂತ್ರಿಗಳ ಬೇಜವಾಬ್ದಾರಿ ಹೇಳಿಕೆಗಳನ್ನು ನೋಡುವಾಗ ಅವರ ಕ್ಷೇತ್ರದ ಮಹಿಳೆಯರು ನಿಜವಾಗಲೂ ಅವರಿಗೆ ಮತ ನೀಡಿರಬಹುದಾ ಎಂದು ಆಶ್ಚರ್ಯ ಆಗುತ್ತದೆ. ಕೆಲವು ದೊಡ್ಡ ದೊಡ್ಡ ಬರಹಗಾರರು ಮನಸ್ಸಿಗೆ ಬಂದ ಹೇಳಿಕೆಗಳು (ಹೆಂಗಸರ ಬಗ್ಗೆ) ಕೊಟ್ಟರೆ, ಸಮಾಜದಲ್ಲಿರುವ ಮೂರ್ಖ ಪುರುಷರಿಗೆ ಮನ ಬಂದಂತೆ ವರ್ತಿಸಲು ಕೊಟ್ಟ ಪರವಾನಗಿ ಎಂದು ಅಂದುಕೊಂಡರೆ, ಈ ಸಮಾಜದಲ್ಲಿ ಹೆಣ್ಮಕ್ಕಳು ನೆಮ್ಮದಿಯಾಗಿ ಬದುಕಲು ಹೇಗೆ ಸಾಧ್ಯ?
ನಮ್ಮ ದೇಶದಲ್ಲಿ ನಡೆಯುತ್ತಿರುವ ಹೀನ ಕೃತ್ಯಗಳಿಂದ ಪ್ರಪಂಚದೆದುರು ದೇಶಕ್ಕೆ ದೇಶವೇ ತಲೆತಗ್ಗಿಸಿ ನಿಲ್ಲುವ ಸ್ಥಿತಿಯಾಗಿದೆ. ಆದರೂ ಶೀಘ್ರ ತನಿಖೆಯಾಗಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವ ಲಕ್ಷಣಗಳೇನೂ ಕಾಣಿಸುತ್ತಿಲ್ಲ.
ಹೆಣ್ಣು ಎಷ್ಟೆಂದು ಸಹಿಸಿಯಾಳು? ಒಂದಿಲ್ಲೊಂದು ದಿನ ದುಷ್ಟಶಕ್ತಿಯ ದಮನವಾಗಲೇಬೇಕು. ಪುರಾಣ ಕತೆಗಳಲ್ಲೂ ಅಷ್ಟೆ, ರಾಕ್ಷಸ ಸಂಹಾರಕ್ಕೆ ತಾಯಿ ದುರ್ಗೆಯೇ ಅವತಾರ ತಾಳಬೇಕಾಯಿತು. ಅಂತೆಯೇ ಪ್ರತಿ ಮನೆಗಳಲ್ಲೂ ದುರ್ಗಾಶಕ್ತಿಯ ಉದಯವಾಗಬೇಕು. ಪ್ರತಿ ತಪ್ಪಿತಸ್ಥರ ಮನೆಯಲ್ಲಿಯೂ ತಾಯಿ, ಹೆಂಡತಿ, ಮಗಳು, ಸಹೋದರಿ ಇರಲಾರಳೆ? ಕರುಣೆ ತೋರದೆ ಸಾಕ್ಷಿ ಸಮೇತ ಅವರನ್ನು ಹಿಡಿದು ಕಾನೂನಿನ ಕೈಗೊಪ್ಪಿಸಿದರೆ ಸುಶಿಕ್ಷಿತ ಸಮಾಜದ ಕಡೆಗೆ ಅದೊಂದು ಮುನ್ನುಡಿಯಾಗಬಹುದು. ಕೆಟ್ಟ ಪುರುಷರ ಹದ್ದು ಮೀರಿದ ವರ್ತನೆ ಹತೋಟಿಗೆ ಬರಬಹುದು.
ಮನದಾಳದಿಂದ ಹೆಣ್ಣೆಂದೂ ಸ್ವಾರ್ಥಿಯಲ್ಲ, ಮತ್ಸರಿಯೂ ಅಲ್ಲ. ಹಾಗಿರುತ್ತಿದ್ದರೆ ಗಂಡಸರ ದುರ್ವತನೆ ಕಣ್ಣೀರಲ್ಲಿ ಕೈ ತೊಳೆಯುವ ಅಗತ್ಯ ಇರಲಿಲ್ಲ. ಹಾಗೆಂದು ಲೋಕದಲ್ಲಿರುವ ಗಂಡಸರೆಲ್ಲಾ ಕೆಟ್ಟವರಲ್ಲ. ಒಳ್ಳೆಯವರ ನಡುವೆ ಇರುವ ಕೆಲವು ಕೆಟ್ಟ ಕ್ರಿಮಿಗಳಿಂದ ಪುರುಷ ಸಮಾಜಕ್ಕೇ ಕೆಟ್ಟ ಹೆಸರು ಬಂದಂತಾಗಿದೆ.
ಇನ್ನಾದರೂ ಕುಕೃತ್ಯಗಳು ನಡೆದ ಬಗ್ಗೆ ಶೀಘ್ರ ತನಿಖೆಯಾಗಿ ಅಪರಾಧಿಗಳಿಗೆ ತಕ್ಕ ಶಿಕ್ಷೆ ವಿಧಿಸುವಲ್ಲಿ ಸರ್ಕಾರವು ಕ್ರಮ ಕೈಗೊಳ್ಳಬೇಕು. ಹಾಗಾದಾಗ ಮಾತ್ರ ಕೆಟ್ಟ ವ್ಯಕ್ತಿಗಳಿಗೆ ಹೆದರಿಕೆಯ ಕಡಿವಾಣ ತೊಡಿಸಿದಂತಾಗುತ್ತದೆ. ಸಮಾಜದಲ್ಲಿ ಅಂತಹವರಿಗೆ ಹೆಣ್ಮಕ್ಕಳನ್ನು ಗೌರವದಿಂದ ಕಾಣಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಹಾಗಾದಾಗ ಮಾತ್ರ ಅತ್ಯಾಚಾರಗಳು, ದೌರ್ಜನ್ಯಗಳು ನಡೆಯದೇ ಸುಶಿಕ್ಷಿತ, ಸುಸಂಸ್ಕೃತ ಸಮಾಜ ನಿರ್ಮಾಣವಾಗಬಹುದೆಂದು ಅನಿಸುತ್ತದೆ.
= ಸ್ಮಿತಾ ಶಂಕರ್, ಉಜಿರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

