ಅಂಕಣಗಳು

ರಾಜ್ಯಪಾಲರ ಬದಲಾವಣೆ ಸಾಂವಿಧಾನಿಕ ಅಧಿಕಾರ

ರಾಜ್ಯಪಾಲರ ಬದಲಾವಣೆ ಸಾಂವಿಧಾನಿಕ ಅಧಿಕಾರ
Published On :

ಪ್ರಸ್ತುತ ಕಾಲಘಟ್ಟದಲ್ಲಿ ಮಾಧ್ಯಮ ರಂಗದ ಕ್ರಿಯಾಶೀಲತೆಯಿಂದ ಬಹುಪಾಲು ಸಾಂವಿಧಾನಿಕ ಸವಲತ್ತುಗಳು ಹಾಗೂ ಜವಾಬ್ದಾರಿ ನಡಾವಳಿಗಳು ಚರ್ಚಿತ ಮೂಲಾಂಶಗಳಾಗಿ ಮಾರ್ಪಾಟಾಗುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಮಾಧ್ಯಮಗಳ ಸ್ವಯಂ ಅಭಿವೃದ್ಧಿಯ ಚಿಂತನೆಯ ಹೊರತಾಗಿಯೂ, ಪ್ರಜಾಪ್ರಭುತ್ವದ ಆಶಯಗಳ ಘನೀಕರಣಕ್ಕೆ ಇಂತಹ ನಡೆ ಪೂರಕವೇ ಹೌದು. ಮೋದಿಯವರ ನೇತೃತ್ವದ ಹೊಸ ಸರ್ಕಾರದ ಸಾಂಪ್ರದಾಯಿಕ ಪ್ರಕ್ರಿಯೆಯಾದ ರಾಜ್ಯಪಾಲರ ಬದಲಾವಣೆ, ಇಂದು ತೀವ್ರತರಹದ ವಿಮರ್ಶೆಗೆ ನಾಂದಿ ಹಾಡಿದೆ. ಭಾರತದಲ್ಲಿ ರಾಜಕೀಯ ಪಕ್ಷಗಳು ಶ್ರೇಷ್ಠ ಸಂವಿಧಾನದಲ್ಲಿನ ಮಿತಿಗಳ ಹಿನ್ನೆಲೆಯಲ್ಲಿ, ಹಲವು ಮೂಲಭೂತ ಕಾಯಿದೆಗಳನ್ನು ಉಲ್ಲಂಘಿಸುತ್ತಲೇ ಬಂದಿರುವುದು ವಾಸ್ತವ ಸಂಗತಿ. ಇದಕ್ಕೆ ಯಾವ ರಾಜಕೀಯ ಪಕ್ಷವೂ ಹೊರತಾಗಿಲ್ಲ ಎಂಬುದು ಸತ್ಯ. ಕೇರಳ ರಾಜ್ಯಪಾಲೆ ಶೀಲಾ ದೀಕ್ಷಿತ್ ಅವರು "ನನ್ನ ಕಾಲಾವಧಿಯ ನಂತರವೇ ನಾನು ರಾಜೀನಾಮೆ ನೀಡುತ್ತೇನೆ, ಇದು ಸಾಂವಿಧಾನಿಕ ಹಕ್ಕು, ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ" ಎಂದು ಉದ್ಗಾರ ಮಾಡುತ್ತಿದ್ದಾರೆ. ಆದರೆ ದೆಹಲಿಯ ಜನತೆ ತಿರಸ್ಕರಿಸಿದ ಹೊರತಾಗಿಯೂ ಮತ್ತೊಂದು ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾಗಿ  ನೇಮಕಗೊಳ್ಳುವುದು ಸಕ್ರಮವೇ? ಪ್ರಜಾ ತೀರ್ಪಿನ ವಿರುದ್ಧದ ಅಧಿಕಾರ ಪಡೆಯುವಾಗ ಮುಜುಗರವಾಗುವುದಿಲ್ಲವೇ? ಕಾಂಗ್ರೆಸ್ ಪಕ್ಷದ ಹುರಿಯಾಳುಗಳು ಸರ್ಕಾರದ ನಡೆ ಅಸಾಂವಿಧಾನಿಕ, ಅಸಂಬದ್ಧ, ದ್ವೇಷದ ರಾಜಕಾರಣ ಎಂದು ಬೊಬ್ಬೆ ಹೊಡೆಯುವಾಗ, ಜನತಾ ಸರ್ಕಾರ ಹಾಗೂ ಎನ್‌ಡಿಎ ನೇಮಕ ಮಾಡಿದ ರಾಜ್ಯಪಾಲರುಗಳನ್ನು ಅಧಿಕಾರದಿಂದ ಬಿಡುಗಡೆಗೊಳಿಸಿದ ತನ್ನ ಕೈಂಕರ್ಯವನ್ನು ಮರೆತಿದ್ದೇಕೆ?
 ಈ ಸಂಪ್ರದಾಯ ಹುಟ್ಟುಹಾಕಿದ್ದು 1978ರ ಜನತಾ ಸರ್ಕಾರ ಎಂದು ಬಿಂಬಿಸಹೊರಟ ನೀವು, ಆ ಸಂಪ್ರದಾಯವನ್ನು ಮುರಿಯಬಹುದಿತ್ತಲ್ಲವೇ? ಬಹಳ ಮುಖ್ಯವಾಗಿ 1978ಕ್ಕೂ ಮುಂಚಿತವಾಗಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತ ವಿರೋಧ ಪಕ್ಷ ಇಲ್ಲದ್ದರಿಂದ ಈ ನಡೆ ಸಾಧ್ಯವಿಲ್ಲ ಎಂಬ ಸತ್ಯವನ್ನು ನೀವು ಅರ್ಥೈಸಿಕೊಳ್ಳಬಹುದಲ್ಲವೇ? ಸಂವಿಧಾನದ 157ನೇ ವಿಧಿಯಲ್ಲಿ ರಾಜ್ಯಪಾಲರಾಗಿ ನೇಮಕಗೊಳ್ಳುವ ವ್ಯಕ್ತಿ ರಾಜಕೀಯೇತರರಾಗಿರಬೇಕು ಎಂಬ ನಿಯಮವಿದೆ. ಸಂಪ್ರದಾಯವಿರಲಿ, ಈ ನಿಯಮ ಮುರಿದದ್ದು ಯಾರು? ವಸ್ತುಸ್ಥಿತಿ ಹೀಗಿರುವಾಗ ಸರ್ಕಾರದ ನಿಲುವನ್ನು ಟೀಕಿಸುವ ನೈತಿಕ ಹಕ್ಕು ಉಳಿಯುವುದಿಲ್ಲ.
 ಸಂವಿಧಾನದಲ್ಲಿ ಬದಲಾವಣೆಗೆ ಅವಕಾಶ ಖಂಡಿತ ಇದೆ
1. ಸಂವಿಧಾನದ 156 ನೇ ವಿಧಿಯನ್ವಯ ರಾಜ್ಯಪಾಲರು ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ 5 ವರ್ಷಗಳ ಕಾಲ ಅಥವಾ ರಾಷ್ಟ್ರಪತಿಗಳು ಇಚ್ಛೆಪಡುವವರೆಗೆ ಅಧಿಕಾರದಲ್ಲಿ ಮುಂದುವರೆಯಬಹುದೆಂಬ ನಿಯಮವಿದೆ.
2. ಯಾವುದೇ ರಾಜ್ಯದ ರಾಜ್ಯಪಾಲರನ್ನು ಕೇಂದ್ರ ಸರ್ಕಾರ ಮಂತ್ರಿಮಂಡಲದ ನಿರ್ದೇಶನದೊಂದಿಗೆ ಅಧಿಕಾರದಿಂದ ಹಿಂದಕ್ಕೆ ಕರೆದುಕೊಳ್ಳುವಂತೆ ಕೋರಬಹುದು.
3. ಈ ಕೋರಿಕೆಯನ್ನು ರಾಷ್ಟ್ರಪತಿಗಳು ಮೊದಲ ಭಾರಿ ತಿರಸ್ಕರಿಸಬಹುದು.
4. ಸರ್ಕಾರ ಎರಡನೇ ಸಲ ಪ್ರಸ್ತಾವನೆ ಕೋರಿದರೆ ರಾಷ್ಟ್ರಪತಿಗಳು ಕಡ್ಡಾಯವಾಗಿ ಇದನ್ನು ಪುರಸ್ಕರಿಸಲೇಬೇಕು.  (74(2) ನೇ ವಿಧಿಯನ್ವಯ ಕಡ್ಡಾಯವಾಗಿ ರಾಷ್ಟ್ರಪತಿಗಳು ಮಂತ್ರಿಮಂಡಲದ ಸಲಹೆಗಳನ್ನು ಸ್ವೀಕರಿಸಿ ಅಧಿಕಾರ ಚಲಾಯಿಸಬೇಕೆಂಬ ನಿಯಮವಿದೆ.)
5. ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳವ ಪ್ರಕ್ರಿಯೆಯು ರಾಷ್ಟ್ರಪತಿಗಳ ವೀಟೋ ಅಧಿಕಾರದಡಿಯಲ್ಲಿ ಬರುವುದರಿಂದ ರಾಷ್ಟ್ರಪತಿಗಳನ್ನು ಈ ಪ್ರಸ್ತಾವನೆಯನ್ನು ತಡೆ ಹಿಡಿಯಲು ಸಾಧ್ಯವೇ ಇಲ್ಲ (111ನೇ ವಿಧಿಯನ್ವಯ ರಾಷ್ಟ್ರಪತಿಗಳಿಗೆ ವೀಟೋ ಅಧಿಕಾರವಿದೆ. ಅಂದರೆ ರಾಷ್ಟ್ರಪತಿ ಸಂಸತ್ತಿನಿಂದ ಅನುಮೋದನೆಗೊಂಡ ಮಸೂದೆಯನ್ನು ಅನಿರ್ದಿಷ್ಟಾವಧಿ ತನ್ನ ಬಳಿಯಲ್ಲಿ ಇರಿಸಿಕೊಳ್ಳುವ ಅಧಿಕಾರ)  ಆದ್ದರಿಂದ ಕೇಂದ್ರದ ಅಧಿಕಾರ ಶಾಸನ ಬದ್ಧ.
2010 ನೇ ಇಸವಿಯಲ್ಲಿ ಸರ್ವೋಚ್ಚ ನ್ಯಾಯಾಲಯವು ಅನಗತ್ಯವಾಗಿ ರಾಜಕೀಯ ಉದ್ದೇಶಕ್ಕಾಗಿ ರಾಜ್ಯಪಾಲರ ಬದಲಾವಣೆ ಮಾಡುವಂತಿಲ್ಲ. ಒಂದು ವೇಳೆ ಇದು ಅಸಂವಿಧಾನಿಕ ಎಂದು ಕಂಡುಬಂದರೆ ನಾವು ಮಧ್ಯ ಪ್ರವೇಶ ಮಾಡಬೇಕೆಂಬ ಎಚ್ಚರ ನೀಡಿದೆ.
  ರಾಜ್ಯಪಾಲರ ಬದಲಾವಣೆ  ಜನತಾ ಸರ್ಕಾರದ ಸಂಪ್ರದಾಯ ಎಂದು ಚೀರುತ್ತಿರುವ ಕಾಂಗ್ರೆಸ್ ಪಕ್ಷದ ಸೇವಕರು, ಈ ದೇಶದ ಇತಿಹಾಸ ಪುಟಗಳಲ್ಲಿ ಸಾಂವಿಧಾನಿಕ ನಿಯಮಗಳನ್ನು ಗಾಳಿಗೆ ತೂರುವುದನ್ನು ಕಲಿಸಿದ್ದು, ನ್ಯಾಯಾಲಯದ ಸ್ವಾತಂತ್ರ್ಯಗಳನ್ನು ಮೊಟಕುಗೊಳಿಸಿದ್ದು, ಪ್ರಜಾಹಕ್ಕುಗಳ ಮೇಲೆ ನಿರ್ಬಂಧ ಹೇರುವ ಸಂಪ್ರದಾಯಕ್ಕೆ ಮುನ್ನಡಿಯಿಟ್ಟಿದ್ದು  ಕಾಂಗ್ರೆಸ್ ಎಂಬುದನ್ನು ಮರೆತಂತಿದೆ. ಇದಕ್ಕೆ ಸ್ಪಷ್ಟ ಉದಾಹರಣೆ 1971 ರಲ್ಲಿ ಮೂಲಭೂತ ಹಕ್ಕುಗಳ ಬಗೆಗೆ ಮಾಡಿದ 24ನೇ ತಿದ್ದುಪಡಿ ಹಾಗೂ 1975ರ ತುರ್ತು ಪರಿಸ್ಥಿತಿಯೇ ಸಾಕ್ಷೀಭೂತವಾಗಿ ನಿಲ್ಲುತ್ತದೆ.
ಇಲ್ಲಿ ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸಹೊರಟರೆ ಬದಲಾವಣೆ ಔಚಿತ್ಯವೆನಿಸುತ್ತದೆ. ಕಾರಣ ರಾಜ್ಯಪಾಲರ ಹುದ್ದೆ ಸಾಂವಿಧಾನಿಕವಾಗಿ ಅತ್ಯಂತ ಶ್ರೇಷ್ಠ ಮತ್ತು ಬಲಿಷ್ಠ ಹುದ್ದೆ. ರಾಜ್ಯಪಾಲರನ್ನು ಕೇವಲ ನಾಮ ಮಾತ್ರ ಅಧಿಕಾರಿ ಎಂದು ಕರೆದರೂ ಕೂಡ, ವಾಸ್ತವವಾಗಿ ಇವರಿಗೆ ಮಹತ್ವಪೂರ್ಣವಾದ ವಿವೇಚನಾ ಅಧಿಕಾರವಿರುತ್ತದೆ. ಉದಾ-1: ವಿಧಾನಸಭೆಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಬಾರದ ಸಂದರ್ಭ ಮುಖ್ಯಮಂತ್ರಿ ನೇಮಕ
2. 160ನೇ ವಿಧಿಯನ್ವಯ ಆಕಸ್ಮಿಕ ಅಥವಾ ಅವಘಡಗಳ ಸಂದರ್ಭ ನಿರ್ಧಾರ ತೆಗೆದುಕೊಳ್ಳುವುದು
3. 161ನೇ ವಿಧಿಯನ್ವಯ ಕ್ಷಮಾದಾನದ ಅಧಿಕಾರ
4. 356 ನೇ ವಿಧಿಯನ್ವಯ ರಾಜ್ಯ  ತುರ್ತು ಪರಿಸ್ಥಿತಿ ಘೋಷಣೆಗೆ ಶಿಫಾರಸ್ಸು
5. 213 ನೇ ವಿಧಿಯನ್ವಯ ಸುಗ್ರೀವಾಜ್ಞೆ ಘೋಷಣೆ
6. 365 ನೇ ವಿಧಿಯನ್ವಯ ರಾಜ್ಯಗಳಿಗೆ ಸಂಬಂಧಿಸಿದಂತೆ ಕೇಂದ್ರದ ನಿರ್ದೇಶನ ಅಧಿಕಾರ ಸಂದರ್ಭ
7. 163(2) ನೇ ವಿಧಿಯನ್ವಯ ರಾಜ್ಯಪಾಲರ ವಿವೇಚನಾ ಅಧಿಕಾರವನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ.
 ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಅತ್ಯಂತ ಹೆಚ್ಚಿನ ಅಧಿಕಾರ ಹೊಂದಿದ್ದು ಹಿಂದಿನ ಸರ್ಕಾರದ ಅವಧಿಯಲ್ಲಿ ನೇಮಕವಾದ ರಾಜ್ಯಪಾಲರುಗಳು, ಬಹುಪಾಲು ರಾಜಕೀಯ ಪಾಲುದಾರರೇ ಆಗಿರುತ್ತಾರೆ. ಒಂದು ಪಕ್ಷಕ್ಕೆ ತನ್ನ ನಿಷ್ಠೆ ಪ್ರಾಮಾಣಿಕತೆಯನ್ನು ಮೆರೆದಿರುತ್ತಾರೆ. ಆ ಪಕ್ಷದ ಸಿದ್ಧಾಂತವನ್ನು ಒಪ್ಪಿ 20, 30 ವರ್ಷಗಳ ಕಾಲ ಪಕ್ಷದ ಚಟುವಟಿಕೆಗಳಲ್ಲಿ ಸಕ್ರೀಯರಾಗಿರುತ್ತಾರೆ. ಈ ಅಂಶ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಕರ್ನಾಟಕದ ರಾಜ್ಯಪಾಲರಾದ ಹಂಸರಾಜ್ ಭಾರದ್ವಾಜ್ ಅವರು ಮಾತ್ರ ತಮ್ಮದೆ ಪಕ್ಷದ ಸರ್ಕಾರದ ವಿರುದ್ಧ ಕೆಲವು ಸಂದರ್ಭಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. ಇದನ್ನೇ ಎಲ್ಲಾ ಸಂದರ್ಭಗಳಲ್ಲೂ ಎಲ್ಲಾ ರಾಜ್ಯಪಾಲರಿಂದ ನಿರೀಕ್ಷಿಸುವುದು ಅಸಾಧ್ಯದ ಮಾತು. ಮೋದಿಯವರ ನೇತೃತ್ವದ ಸರ್ಕಾರ ಜಾಗತೀಕರಣದ ವೇಗಕ್ಕೆ ಮತ್ತು ಅಗತ್ಯಕ್ಕೆ ತಕ್ಕಂತೆ ಕ್ರಿಯಾಶೀಲವಾಗಿ ಕ್ರಿಯಾ ಯೋಜನೆ ರೂಪಿಸುತ್ತಿದೆ. ಈ ದೃಷ್ಟಿಕೋನದಿಂದ ಪರಾಮರ್ಶಿಸುವುದಾದರೆ ರಾಜ್ಯಪಾಲರ ಬದಲಾವಣೆ ಅನಿವಾರ್ಯವೆನಿಸುತ್ತದೆ. ಆದಾಗಿಯೂ ಹೊಸ ರಾಜ್ಯಪಾಲರೆಲ್ಲ ಬಿಜೆಪಿಯ ಪಕ್ಷ ನಿಷ್ಟರೇ ಆಗುವುದು ಒಳಿತಲ್ಲ. ವಿವಿಧ ಕ್ಷೇತ್ರಗಳ ತಜ್ಞರನ್ನು, ಪ್ರಾಮಾಣಿಕರನ್ನು, ವಿವೇಕಶೀಲರನ್ನು, ಸಾಂವಿಧಾನಿಕ ಪಂಡಿತರನ್ನು ನೇಮಿಸಲಿ ಎಂಬುದು ದೇಶದ ಪ್ರಜ್ಞಾವಂತ ನಾಗರಿಕರ ಆಶಯ.


= ಸುಧಾಕರ ಹೊಸಳ್ಳಿ
ಪ್ರಾದೇಶಿಕ ನಿರ್ದೇಶಕರು
ಕರ್ನಾಟಕ ರಾಜ್ಯ ಮುಕ್ತ ವಿ.ವಿ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.