ಅಂಕಣಗಳು

ದೇಶಭಕ್ತಿಯ ಸಾಗರ ಹೊತ್ತು ಸಾಗಿದವರು ಎತ್ತ ಹೋದರು?

ದೇಶಭಕ್ತಿಯ ಸಾಗರ ಹೊತ್ತು ಸಾಗಿದವರು ಎತ್ತ ಹೋದರು?
Published On :

ಒಬ್ಬ ರಾಜಕಾರಣಿ ಅಥವಾ ಗ್ಲಾಮರ್ ತಾರೆಗಳ ಕೈ ಬೆರಳಿಗೆ ಚಿಕ್ಕ ಗಾಯವಾಯಿತೆಂದರೆ ಅಥವಾ ಅವರಿಹೆ ಅಲರ್ಜಿಯಾಯಿತೆಂದರೆ ಆ ಸುದ್ದಿ ಮರುದಿನ ಪತ್ರಿಕೆಗಳ ಮುಖಪುಟದಲ್ಲಿ ಕುಣಿದಾಡತೊಡಗುತ್ತದೆ. ಆದರೆ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ರಾಕೇಶ್ ಕುಮಾರ್ ಅಚಾನಕ್ಕಾಗಿ ಮೃತಪಟ್ಟದ್ದು ಮಾತ್ರ ಯಾವ ಪತ್ರಿಕೆಗಳಿಗೂ ಸುದ್ದಿಯೆನಿಸಲಿಲ್ಲ, ಯಾವ ಸುದ್ದಿ ವಾಹಿನಿಗಳಿಗೂ ಈ ಘಟನೆಯನ್ನು ಬಿತ್ತರಿಸಬೇಕೆಂಬ ಸಂವೇದನೆ ಹುಟ್ಟಲಿಲ್ಲ. ರಾಕೇಶ್ ಕುಮಾರ್ ಮತ್ತು ಭೀಕ್ ಸಿಂಗ್ ತಮ್ಮ ಇಡೀ ಜೀವನವನ್ನು ದೇಶದ ರಕ್ಷಣೆ ಮತ್ತು ಸಮಾಜದ ಸಂಘಟನೆಗಾಗಿ ಸವೆಸಿದವರು. ಅವರು ಪತ್ರಿಕೆಗಳಲ್ಲಿ ಸುದ್ದಿಯಾಗದಿದ್ದರೇನಂತೆ? ಹಿಂದುಸ್ತಾನದ ಆತ್ಮವನ್ನು ಅಳಿಸುವ ಹುತಾತ್ಮರಾದರು.
ರಾಕೇಶ್ ಕುಮಾರ್ ಅವರ ಪರಿಚಯ ನನಗಾದದ್ದು ಸುಮಾರು 20-25 ವರ್ಷಗಳ ಹಿಂದೆ, ಜಲಂಧರ್‌ನ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಾಲಯದಲ್ಲಿ. ತೀಕ್ಷ್ಣ ಧ್ವನಿ, ಚಂದ್ರಶೇಖರ್ ಆಜಾದ್‌ರಂಥ ಮೀಸೆ ಮತ್ತು ಕಬೀರದಾಸರಂಥ ಫಕೀರೀ ಬದುಕು ಅವರದ್ದಾಗಿತ್ತು. ದೇಶದ ರಕ್ಷಣೆಗಾಗಿ ಜೀವವನ್ನು ಕೈಯಲ್ಲಿ ಹಿಡಿದು ಅಲೆದಾಡಿದ ವ್ಯಕ್ತಿಯವರು. ಯುವಕರ ವಲಯದಲ್ಲಿ ಅತ್ಯಂತ ಪ್ರಿಯರಾಗಿದ್ದ, ಸ್ವಂತ ಪರಿವಾರದಿಂದ ದೂರವಿದ್ದು ಲಕ್ಷಾಂತರ ಪರಿವಾರಗಳ ಭಾಗವಾಗಿದ್ದರು ರಾಕೇಶ್. ಸರಳವಾಗಿ ಹೇಳಬೇಕೆಂದರೆ, ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿದ್ದರು. ಅಸಾಧಾರಣ ಪ್ರತಿಭೆ, ತೀಕ್ಷ್ಣ ಬುದ್ಧಿಮತ್ತೆ ಹೊಂದಿದ್ದ ರಾಕೇಶ್ ಎಂದಿಗೂ ತಮ್ಮ ಜ್ಞಾನವನ್ನು ಸ್ವಂತ ಕುಟುಂಬಕ್ಕಾಗಿ ಅಥವಾ ತಮ್ಮದೇ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವುದಕ್ಕಾಗಿ ಮೀಸಲಿಡುವುದಿಲ್ಲ ಎಂದು ನಿಶ್ಚಯಿಸಿಬಿಟ್ಟಿದ್ದರು.
ಸಾಹಸದ ಮಿತಿ ಎಲ್ಲಿಗೆ ಮುಗಿಯುತ್ತದೋ, ಅಲ್ಲಿಂದ ರಾಕೇಶ್ ಕುಮಾರ್ ಅವರ ಜೀವನ ಶುರುವಾಗುತ್ತದೆ. ಪಂಜಾಬ್‌ನಲ್ಲಿ ಆತಂಕವಾದ ಉತ್ತುಂಗದಲ್ಲಿದ್ದ ಸಮಯವದು. ಗುರುದಾಸಪುರ, ಅಮೃತಸರ, ಜಮ್ಮು-ಕಾಶ್ಮೀರದಂಥ ಪ್ರದೇಶಗಳೆಲ್ಲ ಶಾಪಗ್ರಸ್ತ ಪ್ರದೇಶಗಳಾಗಿ ಬದಲಾಗಿದ್ದವು. ಅಲ್ಲಿಗೆ ಕಾಲಿಡುವುದಕ್ಕೇ ಎಲ್ಲರು ಹೆದರುತ್ತಿದ್ದ ವೇಳೆ, ರಾಕೇಶ್ ಕುಮಾರ್ ಒಬ್ಬಂಟಿಯಾಗಿ ಆ ಪ್ರದೇಶಗಳಿಗೆಲ್ಲ ಹೋಗಿ ಭಯಭೀತ ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದರು.
ಸಂಘದ ಪ್ರಚಾರಕನ ಮಹತ್ವವನ್ನು ಅರ್ಥಮಾಡಿಕೊಳ್ಳುವುದು ಕಠಿಣ ಕೆಲಸ. ಅದರೂ ಈ ಮಿರಿಮಿರಿ ಮಿಂಚುವ ಗ್ಲಾಮರ್ ತುಂಬಿದ ರಾಜಕೀಯ, ರಾಜನೀತಿಯನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡ ಮಹಾನುಭಾವರು, ಅವರ ನೆರಳಿನಲ್ಲಿ ಐಷಾರಾಮಿ ಬದುಕು ನಡೆಸುವವರಿಗೆ ಈ ಮಹತ್ವ ಅರಿವಾಗುವುದಕ್ಕೆ ಸಾಧ್ಯವಿಲ್ಲ. ಮೊಂಬತ್ತಿಯ ಜ್ವಾಲೆಯ ಮೇಲೆಕೈಯಿಟ್ಟು ಹನಿಹನಿಯಾಗಿ ಸೋರುವ ರಕ್ತಮಯ ಚರ್ಮದ ನೋವನ್ನು ಸಹಿಸಿಕೊಳ್ಳಬಲ್ಲ, ಮನಸ್ಸನ್ನು ಮುರುಟಬಲ್ಲ ಛಾವಣಿಯಿಂದ ಬೀಳುವ ಒಂದೊಂದು ಹನಿಯ ಅನಿಶ್ಚಿತ ನಿಶ್ಚಿತತೆಯನ್ನು ಮರೆತು ಬೆಳಗ್ಗೆ 5 ಗಂಟೆಗೆ ಪ್ರಾರ್ಥನೆ ಸಲ್ಲಿಸಿ ಕೆಲಸಕ್ಕಿಳಿಯಬಲ್ಲ, ದೇಶದ ಪೀಡೆಯನ್ನು ತನ್ನ ರಕ್ತದಲ್ಲೊಂದಾಗಿಸಿಕೊಂಡು ಕಷ್ಟದಲ್ಲಿರುವವರಿಗೆ ಆಸೆ, ವಿಶ್ವಾಸ ಮತ್ತು ಶಕ್ತಿಯನ್ನು ತುಂಬಬಲ್ಲ ಗುಣ ಹೊಂದಿದ ವ್ಯಕ್ತಿಗಳಿಗೆ ಪ್ರಚಾರಕರೆನ್ನುತ್ತಾರೆ. ಇಂಥ ಗುಣವನ್ನು ನಾವು ಯಾದವ್ ರಾವ್ ಜೋಶಿ, ಹೊ.ವೆ. ಶೇಷಾದ್ರಿ ಮತ್ತು ಸೂರ್ಯನಾರಾಯಣ ರಾವ್‌ರಂಥ ಮಹಾನುಭಾವರಲ್ಲಿ ಕಂಡಿದ್ದೇವೆ. "ಎಲ್ಲವನ್ನೂ ಪಡೆದುಕೊಳ್ಳುವುದೆಂದರೆ ತಮ್ಮದಾಗಿರುವ ಎಲ್ಲವನ್ನೂ ಕಳೆದುಕೊಳ್ಳುವುದು" ಎಂದು ಬದುಕುತ್ತಿದ್ದ ಜನರಲ್ಲಿ ರಾಕೇಶ್ ಕುಮಾರ್ ಕೂಡ ಒಬ್ಬರು. ಅಹಂಕಾರಿ ನಾಯಕರು, ಸುಳ್ಳರು, ಕಳ್ಳರು, ಚಮಚಾಗಿರಿ ಮಾಡುವವರನ್ನು ಕಂಡರೆ ರಾಕೇಶ್ ಉರಿದುಬೀಳುತ್ತಿದ್ದರು.
ರಾಜಕಾರಣಿಗಳನ್ನು ಕಂಟ್ರೋಲ್ ಮಾಡುವ ಶೋಕಿ ಹೊಂದಿರುವವರು, ತಮಗೆ ಬೇಕಾದವರಿಗೆ ಟಿಕೆಟ್ ಕೊಡಿಸುವವರು, ಬೇಡದವರನ್ನು ಬೇರೆಡೆಗೆ ಪೋಸ್ಟಿಂಗ್ ಮಾಡಿಸುವವರು, ತಮ್ಮ ಸೇವೆಯ ಹಿನ್ನೆಲೆಯನ್ನು ಅಹಂಕಾರವಾಗಿ ಬದಲಿಸಿಕೊಂಡವರು, ತೋಳುಗಳಿಗೆ ಹತ್ತಿದ ಕೊಳೆಯನ್ನು ತೋರಿಸುತ್ತಾ ತಾವೆಷ್ಟು ಪರಿಶ್ರಮಿಗಳು ಎಂದು ತೋರಿಸುತ್ತಾ ತಿರುಗಾಡುವವರ ಸಂಖ್ಯೆಯೇನು ನಮ್ಮಲ್ಲಿ ಕಡಿಮೆಯೇ? ಆದರೆ ಅವರ ನಡುವೆಯೇ, ಪ್ಲಾಟ್‌ಫಾರ್ಮ್‌ನಲ್ಲಿ ಚಾದರ ಹಾಸಿಕೊಂಡು ನಿಶ್ಚಿಂತರಾಗಿ ಮಲಗಿಬಿಡುವ, ಎರಡು ದಿನ ರೊಟ್ಟಿ ಸಿಗದಿದ್ದರೂ ಮುಖದಿಂದ ಮುಗುಳ್ನಗೆಯನ್ನು ಕಳೆದುಕೊಳ್ಳದ, 48 ಡಿಗ್ರಿ ಬಿಸಿಲಲ್ಲಿ ಜೈಸಲ್ಮೇರ್‌ನ ಸುಡುವ ಮಣ್ಣಿನಲ್ಲಿ ಗಡಿ ರಕ್ಷಣೆಗಾಗಿ ನಡೆದುಬಿಡುವ ರಾಕೇಶ್ ಕುಮಾರ್ ಅಂಥವರೂ ಇರುತ್ತಾರೆ.
ಪಕ್ಕದ ಮನೆಯಲ್ಲಿ ಯಾರಾದರೂ ಅನಾರೋಗ್ಯಕ್ಕೀಡಾದರೆ ಅವರಿಗಾಗಿ ತುಸು ಸಮಯ ಮೀಸಲಿಡಲೂ ನಮಗೆ ಸಾಧ್ಯವಾಗುವುದಿಲ್ಲ. ಕೆಲಸಕ್ಕೆ ಹೋಗಬೇಕು, ಮಕ್ಕಳನ್ನು ಶಾಲೆಗೆ ಕಳುಹಿಸಬೇಕು, ಪರಿಚಿತರೊಬ್ಬರನ್ನು ಭೇಟಿಯಾಗಬೇಕು ಎನ್ನುವ ನೂರೆಂಟು ನೆಪಗಳ ನಡುವೆಯೇ ಕಳೆದುಹೋಗುತ್ತೇವೆ. 6 ತಿಂಗಳು ವೇತನ ವೃದ್ಧಿಯಾಗದಿದ್ದರೆ ನಮ್ಮ ನಿದ್ದೆ ಹಾರಿ ಹೋಗುತ್ತದೆ. ಊಟ ರುಚಿಯಾಗಿಲ್ಲದಿದ್ದರೆ ಹೆಂಡತಿಯನ್ನು ಥಳಿಸುವವರಿದ್ದಾರೆ. ಇಡೀ ಜೀವನ ಬಾಸ್‌ಗಳ ಮುಖಸ್ತುತಿ ಮಾಡುವುದರಲ್ಲಿ, ಚಮಚಾಗಿರಿ ಮಾಡುತ್ತಾ ಅವರನ್ನು ಸಂತುಷ್ಟಗೊಳಿಸುವಲ್ಲಿ ಕಳೆದುಹೋಗುತ್ತದೆ. ನಿಜಕ್ಕೂ ಆಪ್ತರಾಗಿ ಯಾರು ಇರಬೇಕೋ ಅವರನ್ನೇ ಕಡೆಗಣಿಸಿ, ಅವರ ಏಳಿಗೆಯನ್ನು ಕಂಡು ಹೊಟ್ಟೆಕಿಚ್ಚುಪಡುವುದು, ಸೇಡು ಬೆಳೆಸಿಕೊಳ್ಳುವುದೇ ಬದುಕಾಗಿಬಿಡುತ್ತದೆ. ಅದೇನೋ ಅನ್ನುತ್ತಾರಲ್ಲ, ಹಾಂ- "ಬುದ್ಧಿವಂತ ಹೂಡಿಕೆ" ಎಂದು. ಇಂದು ಜನರ ವಿದ್ಯೆ, ಬುದ್ಧಿಯೆಲ್ಲ ದೊಡ್ಡ ನಗರಗಳಲ್ಲಿ ಫ್ಲಾಟ್ ಖರೀದಿಸಬೇಕು-ಒಂದಾದ ನಂತರ ಒಂದರಂತೆ ಮನೆ ಕಟ್ಟಿಸಬೇಕು ಎನ್ನುವುದಕ್ಕಷ್ಟೇ ಸೀಮಿತವಾಗಿಬಿಟ್ಟಿದೆ. ಮಕ್ಕಳು ಚೆನ್ನಾಗಿ ಓದಿ ಹಣದ ಹೊಳೆ ಹರಿಸುವ ನೌಕರಿಗೆ ಸೇರಬೇಕು, ವಿದೇಶ ಪ್ರವಾಸ ಮಾಡಬೇಕು, ಮಕ್ಕಳಿಗೆ ಐಷಾರಾಮಿ ಮದುವೆ ಮಾಡಿ ಅದಕ್ಕೆ ಒಂದಿಷ್ಟು ರಾಜಕಾರಣಿಗಳನ್ನು ಕರೆದುಬಿಟ್ಟರೆ ಜೀವನ ಧನ್ಯವಾಯಿತು! ಇದಕ್ಕಿಂತ ಹೆಚ್ಚಿನದ್ದೇನಿದೆ ಜೀವನದಲ್ಲಿ ಎನ್ನುವ ಮನೋಭಾವವೇ ಎಲ್ಲೆಡೆ.
ರಾಕೇಶ್ ಕುಮಾರ್‌ರಂಥವರು ವಾರಾಂತ್ಯದಲ್ಲಿ ತುಸು ಬಿಡುವು ಮಾಡಿಕೊಂಡು ಸಮಾಜ ಸೇವೆ ಮಾಡಿದವರಲ್ಲ. ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನು, ಜ್ಞಾನದ ಒಂದೊಂದು ಪುಟವನ್ನು, ಹೃದಯದ ಒಂದೊಂದು ಬಡಿತವನ್ನು ಸಂಪೂರ್ಣವಾಗಿ ಇನ್ನೊಬ್ಬರ ಸೇವೆ ಮತ್ತು ರಕ್ಷಣೆಗಾಗಿ ಮೀಸಲಾಗಿಟ್ಟರು.
ತಮ್ಮ ಎದೆಯಲ್ಲಿ ದೇಶಭಕ್ತಿ ಮತ್ತು ಗಡಿ ಸುರಕ್ಷೆಯ ಸಮುದ್ರವನ್ನು ಹೊತ್ತು ಸಾಗಿದವರು ಮತ್ತು ಸಾಗುತ್ತಿರುವವ ಇಂಥವರೇ ಈ ದೇಶವನ್ನು ಜೀವಂತವಾಗಿಟ್ಟಿದ್ದಾರೆ. ಬಹುಶಃ ರಾಕೇಶ್ ಕುಮಾರ್ ಯಾವ ಊರಿನವರು, ಅವರ ಪರಿವಾರದಲ್ಲಿ ಯಾರ್ಯಾರಿದ್ದಾರೆ, ಅವರ ಅಮ್ಮ-ಅಪ್ಪ ಜೀವಂತವಾಗಿದ್ದಾರಾ, ಅವರ ಸಾವಿನ ಸುದ್ದಿ ಕೇಳಿ ಅವರ ಸಹೋದರಿ ಎಷ್ಟು ಕಣ್ಣೀರು ಹಾಕಿರಬಹುದು...ಊಹುಂ ಇದ್ಯಾವುದೂ ಯಾರಿಗೂ ತಿಳಿದೇ ಇಲ್ಲ. ಬಹುಶಃ ತಿಳಿಯುವುದೂ ಇಲ್ಲ. ಅವರ ಸಾವಿನ 13ನೇ ದಿನ ನಡೆಯುವ ಶ್ರದ್ಧಾಂಜಲಿ ಸಭೆ, ನಾವು 'ದೊಡ್ಡವರು' ಎಂದು ಕರೆಯುವವರ ಶೋಕಸಭೆಯಂತೆ ಇರುವುದಕ್ಕೆ ಸಾಧ್ಯವಿಲ್ಲ.
ರಾಕೇಶ್ ಕುಮಾರ್ ಜೈಸಲ್ಮೇರ್‌ನ ಗಡಿಭಾಗದಲ್ಲಿ ಪಯಣಿಸುತ್ತಿದ್ದಾಗ ವಾಹನ ತಿರುಗಿ ಬಿದ್ದು, ಅಕಾಲಮೃತ್ಯುವಿಗೀಡಾದರು. ಭಾರತ ಮಾತೆಯ ಹಿರಿಮೆಯನ್ನು ಎತ್ತರಕ್ಕೊಯ್ದ ಇಂಥ ನಿಸ್ವಾರ್ಥಿಗಳು ಸತ್ತಾಗ ಯಾರೂ ಗಮನಿಸದೇ ಇರಬಹುದು, ಆದರೆ ಭೂತಾಯಿಯ ನೇತ್ರಗಳು ಮಾತ್ರ ನಿಸ್ಸಂಶಯವಾಗಿಯೂ ತೇವವಾಗುತ್ತವೆ. ಇಂಥ ವ್ಯಕ್ತಿಗಳ ಸಂಖ್ಯೆ ಹೆಚ್ಚಾಗಲಿ ಎನ್ನುವುದು ನಮ್ಮ ಪ್ರಾರ್ಥನೆಯಾಗಬೇಕಿದೆ.

= ತರುಣ್ ವಿಜಯ್
tarunvijay2@yahoo.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.