ಆತಂಕವಿರುವುದು ಇರಾಕ್ನಲ್ಲಲ್ಲ, ಅಮೆರಿಕದಲ್ಲಿ!

ಇರಾಕ್ ಉಗ್ರವಾದದ ರುದ್ರನರ್ತನವನ್ನು ನೋಡುತ್ತಿದೆ. ಹೀಗೊಂದು ಸುದ್ದಿಸಾರ ನಾಲ್ಕಾರು ದಿನಗಳಲ್ಲಿ ಪತ್ರಿಕೆ ಗಮನಿಸಿದ ಎಲ್ಲರಿಗೂ ತಲುಪಿರುತ್ತದೆ. ಉಗ್ರರು ಅಪಹರಿಸಿರುವ ಜನರಲ್ಲಿ ಭಾರತೀಯರೂ ಸೇರಿದ್ದಾರೆ ಹಾಗೂ ಇರಾಕ್ನಲ್ಲಿ ಉಗ್ರ ಆಟ ಮೆರೆಯುತ್ತಿರುವ ಐಎಸ್ಐಎಸ್ ಸಂಘಟನೆಯ ಕೈ ಮೇಲಾಗಿದ್ದೇ ಆದರೆ ನಮ್ಮ ತೈಲ ವಹಿವಾಟಿನ ಹಿತಾಸಕ್ತಿಗೂ ಆಘಾತವಾಗುತ್ತದೆ ಎಂಬ ಕಾರಣಗಳಿಂದ ಕೇವಲ ರಾಷ್ಟ್ರೀಯ ವಾಹಿನಿಗಳಲ್ಲಿ ಮಾತ್ರವಲ್ಲದೇ ಸ್ಥಳೀಯ ಮಾಧ್ಯಮದಲ್ಲೂ ಇರಾಕ್ನ ತಲ್ಲಣಗಳು ಜಾಗ ಪಡೆದಿವೆ. ಹೆಚ್ಚಿನವರು ಈ ಸುದ್ದಿಗೆ ಹೀಗೆಲ್ಲ ಪ್ರತಿಕ್ರಿಯಿಸುತ್ತಾರೆ- 'ಅದೇನೋ ಸುನ್ನಿ- ಶಿಯಾ ಸಂಘರ್ಷವಂತೆ. ಮುಸ್ಲಿಂ ರಾಷ್ಟ್ರಗಳಲ್ಲಿ ಇರೋದೆ ಬಿಡ್ರಪ್ಪಾ ಇವೆಲ್ಲ. ಅವರಿಗೆ ಸುಮ್ಮನಿರೋಕೆ ಆಗಲ್ಲ. ಹೊಡೆದಾಟವೇ ಬದುಕು.' ಇನ್ನು ಕೆಲವರದ್ದು ಈ ಧ್ವನಿಗೆ ಮೀರಿದ ವಿಶ್ಲೇಷಣೆ- 'ಇರಾಕ್ ಉಗ್ರ ಸಂಘಟನೆ ಕೈಗೆ ಬೀಳೋಕೆ ಅಮೆರಿಕ ಬಿಡಲಿಕ್ಕಿಲ್ಲ ಬಿಡಿ. ಅಂಥ ಸ್ಥಿತಿ ಬಂದರೆ ಉಗ್ರರ ವಿರುದ್ಧ ಮತ್ತೆ ವಾಯುದಾಳಿ ಮಾಡಬಹುದು. ಅವರು ಇರಾಕ್ನಿಂದ ಸೇನೆ ಹಿಂತೆಗೆದುಕೊಂಡ ಮೇಲೆಯೇ ಹಿಂಗೆಲ್ಲ ಆಯಿತು ನೋಡಿ' ಎಂಬ ಮಾತುಗಳೂ ತೇಲಿಬರುತ್ತವೆ. ಅದೆಲ್ಲ ಹಾಗಿರಲಿ, ಸಿಕ್ಕಿಕೊಂಡ ಭಾರತೀಯರನ್ನು ಬಿಡಿಸುವುದಕ್ಕೆ ಏನು ಮಾಡಬೇಕು ಎಂಬ ಕುರಿತು ಯಾರಲ್ಲೂ ಉತ್ತರವಿಲ್ಲ.
ಈ ಎಲ್ಲ ಗೋಜಲುಗಳ ನಡುವೆ ಭಾರತ, ಅಮೆರಿಕ ಹಾಗೂ ಇರಾಕ್ನ ಮಗ್ಗುಲಿನಲ್ಲಿರುವ ಇರಾನ್ ಎಲ್ಲರದ್ದೂ ಈ ವಿಷಯದಲ್ಲಿ ಏಕಧ್ವನಿ. ಅದೆಂದರೆ- ಇರಾಕ್ ಸುನ್ನಿ ತೀವ್ರವಾದಿಗಳ ಕೈಗೆ ಸಿಲುಕುವುದು ಬೇಡ. ಈಗಿರುವ ಶಿಯಾ ಅಧಿಕಾರ ಕೇಂದ್ರವೇ ನಮಗೆಲ್ಲ ಉತ್ತಮದ್ದು ಅನ್ನೋದು. ಹೀಗೆ ಶಿಯಾ- ಸುನ್ನಿ ಪದಗುಚ್ಛಗಳನ್ನು ಇಟ್ಟುಕೊಂಡು ಏನೆಲ್ಲ ವಿಶ್ಲೇಷಣೆ ಮಾಡಬಹುದು. ತತ್ಕ್ಷಣಕ್ಕೆ ಅವೇ ನಿಜವಾದ ಕಾರಣಗಳೂ ಹೌದಾಗಿರಬಹುದು. ಆದರೆ ತತ್ಕಾಲದ ಕಾರಣ ಅರ್ಥ ಮಾಡಿಕೊಂಡು ಜಾಗತಿಕ ಸಮೂಹವು ಕೊಡಬಹುದಾದ ಯಾವುದೇ ಔಷಧವು ರೋಗವನ್ನು ಈ ಕ್ಷಣಕ್ಕೆ ಹತೋಟಿಯಲ್ಲಿ ಇಡುತ್ತದೆ ಅಷ್ಟೆ. ದೀರ್ಘಾವಧಿ ಪರಿಹಾರದ ಚಿತ್ರಣವನ್ನು ದೊರಕಿಸಿಕೊಳ್ಳಬೇಕು ಎಂದಾದರೆ ರೋಗದ ಮೂಲಕ್ಕೆ ಇಳಿಯಬೇಕು. ಅದಕ್ಕೆ ಚರಿತ್ರೆಯ ಬೇರುಗಳನ್ನು ತಡಕುವುದು ಅನಿವಾರ್ಯ. ಆ ಬೇರುಗಳು ಘೋರ ಸತ್ಯವೊಂದನ್ನು ಹೇಳುತ್ತಿವೆ. 'ಹೆಸರಷ್ಟೇ ಶಿಯಾ- ಸುನ್ನಿ, ಎಲ್ಲವಕ್ಕೂ ಮೂಲಕಾರಣ ಮನಿ ಮನಿ ಮನಿ...' ಇದು ತತ್ತ್ವಪದವಲ್ಲ. ಅಮೆರಿಕ ಸಾಮ್ರಾಜ್ಯಶಾಹಿ ಇತಿಹಾಸದ ಸತ್ಯ. ಮಧ್ಯಪ್ರಾಚ್ಯವೆಂಬುದು ಯಾವತ್ತೂ ಹೊಡೆದಾಡಿಕೊಂಡಿರುವ ಸೈತಾನರ ನೆಲ ಎಂದು ನಾವೆಲ್ಲ ಮುಖ ಸಿಂಡರಿಸಿಕೊಳ್ಳುವುದನ್ನು ನೋಡುತ್ತ ಅಮೆರಿಕ ಮೀಸೆ ಮರೆಯಲ್ಲಿ ನಗುತ್ತಿದೆ...
ಅವತ್ತು ಸದ್ದಾಂ ಪರವೇ ನಿಂತಿತ್ತು ಅಮೆರಿಕ!
ಇರಾಕ್ ಎಂದಕೂಡಲೇ ನಿಮಗೆ ನೆನಪಿಗೆ ಬರುವ ಮುಖ ಯಾವುದು? ಅಮೆರಿಕದಿಂದ ಬೆಂಡೆತ್ತಿಸಿಕೊಂಡು ನೇಣಿಗೇರಿದ ಸದ್ದಾಂ ಹುಸೇನ್ ಎಂಬ ಸರ್ವಾಧಿಕಾರಿಯದ್ದಲ್ಲವೇ? ತನ್ನ ನೆಲದ ಜನರನ್ನೇ ಅಮಾನವೀಯವಾಗಿ ನಡೆಸಿಕೊಂಡು ಮೆರೆದ ಆತನ ಬಗ್ಗೆ ಮೂಲಭೂತವಾದಿಗಳನ್ನು ಬಿಟ್ಟರೆ ಮತ್ಯಾರಿಗೂ ಅನುರಾಗವಿರಲು ಸಾಧ್ಯವಿಲ್ಲ ಬಿಡಿ. ಹಾಗಂತ ಅವನನ್ನು ಸಂಹರಿಸಿದ ಅಮೆರಿಕದ ಬಗ್ಗೆ ನಿಮಗೆ ಸಹಾನುಭೂತಿ ಇದೆ ಎಂದಾದರೆ ಅದರ ಮರು ವಿಮರ್ಶೆಯೂ ಅಗತ್ಯ. ಸದ್ದಾಂ ಹುಸೇನ್, ಸಮೂಹ ನಾಶಕ ಶಸ್ತ್ರಗಳನ್ನು ಹೊಂದಿದ್ದಾನೆ ಎಂಬ ಕಾರಣ ನೀಡಿಯೇ ಅಮೆರಿಕವು ಇರಾಕ್ನ ಮೇಲೆ ದಾಳಿ ಮಾಡಿತು. ಸದ್ದಾಂ ಸೆರೆಸಿಕ್ಕು ಸತ್ತರೂ ಯಾವ ಸಮೂಹನಾಶಕ ಶಸ್ತ್ರಗಳೂ ಸಿಗಲಿಲ್ಲ. ಅಮೆರಿಕ ಅಲ್ಲಿ ಹೋಗಿದ್ದು ತೈಲಕ್ಕೇ ಹೊರತೂ ಇನ್ಯಾವ ಲೋಕ ಕಲ್ಯಾಣಕ್ಕೂ ಅಲ್ಲ. 'ಪ್ರಜಾಪ್ರಭುತ್ವದ ಮೌಲ್ಯಗಳ ಸ್ಥಾಪನೆಗೆ' ಎಂದು ಹೇಳುತ್ತಲೇ ಅಮೆರಿಕ ತನ್ನೆಲ್ಲ ಯುದ್ಧವನ್ನೂ ಮಾಡಿದೆ. ಈ ಹೇಳಿಕೆಗಿಂತ ಕ್ರೂರ ಜೋಕ್ ಇನ್ಯಾವುದೂ ಇರಲಿಕ್ಕೆ ಸಾಧ್ಯವಿಲ್ಲ.
ತನ್ನ ಪಾಳೆಯದಲ್ಲಿ ಇಲ್ಲದ ಸಿರಿಯಾ, ಇರಾನ್ಗಳನ್ನೆಲ್ಲ ಮಣಿಸುವುದಕ್ಕೆ ಅಮೆರಿಕ ಯಾವ ಗುಮ್ಮನ ಕತೆ ಹೇಳುತ್ತಿದೆ ಅಂತ ನಮಗೆಲ್ಲ ಗೊತ್ತೇ ಇದೆ. 'ನೋಡಿ ಇರಾನ್ ಅಣ್ವಸ್ತ್ರ ಹೊಂದಿದರೆ ಜಗತ್ತಿಗೆ ಕಂಟಕವಾಗುತ್ತದೆ', 'ನಿಮಗೆ ಗೊತ್ತಾ, ಸಿರಿಯಾದ ಆಡಳಿತ ರಾಸಾಯನಿಕ ಅಸ್ತ್ರಗಳನ್ನು ತಯಾರಿಸುತ್ತಿದೆ'. ಈ ಹೇಳಿಕೆಗಳಲ್ಲಿ ನಿಜವೇ ಇಲ್ಲ ಅಂತೇನೂ ಇಲ್ಲ. ಆದರೆ ಹೀಗೆಲ್ಲ ಎಚ್ಚರಿಕೆ ಮೊಳಗಿಸುತ್ತಿರುವ ಅಮೆರಿಕವೇನು ಸಂತರಾಷ್ಟ್ರವೇ? ಕ್ರೂರ ಸರ್ವಾಧಿಕಾರಿಯಾಗಿ ಮೆರೆದ ಸದ್ದಾಂ ಹುಸೇನ್ನ ಕೈಗೆ ಇದೇ ಅಮೆರಿಕ ಹಾಗೂ ಪಾಶ್ಚಾತ್ಯ ರಾಷ್ಟ್ರಗಳೇ ಒಂದೊಮ್ಮೆ ಸಮೂಹನಾಶಕ ಶಸ್ತ್ರಗಳನ್ನು ಇರಿಸಿದ್ದವು! ಏಕೆಂದರೆ ಅವರಿಗೆ ತೈಲ ಸಂಪದ್ಭರಿತ ಇರಾನ್ನಲ್ಲಿ ತಮ್ಮ ಹುಕುಂ ಚಲಾಯಿಸುವುದು ಬೇಕಿತ್ತು. ಇವತ್ತು ಈ ರಾಷ್ಟ್ರಗಳು ನಮಗೆಲ್ಲ ಸುನ್ನಿ-ಶಿಯಾ ಕತೆ ಹೇಳುತ್ತಿವೆ. ಆದರೆ 1980-88ರ ಕಾಲಘಟ್ಟದಲ್ಲಿ ಸುನ್ನಿ ತೀವ್ರವಾದಿ ಸದ್ದಾಂ ಹುಸೇನನನ್ನು ಶಿಯಾ ಆಡಳಿತದ ಇರಾನಿನ ವಿರುದ್ಧ ಎತ್ತಿಕಟ್ಟಬೇಕಿದ್ದರೆ ಅಮೆರಿಕಕ್ಕೆ ಬಹಳ ಮಜ ಬಂದಿತ್ತಲ್ಲವೇ? 1980ರ ಸೆಪ್ಟೆಂಬರ್ನಲ್ಲಿ ಸದ್ದಾಂ ಹುಸೇನನ ಇರಾಕ್ ಪಡೆ ಇರಾನಿನ ಮೇಲೆ ಯುದ್ಧಕ್ಕೆ ಹೋಯಿತು. ಅಯತುಲ್ಲಾ ಖೊಮೇನಿ ನೇತೃತ್ವದಲ್ಲಿ ಆಗಷ್ಟೇ ಕ್ರಾಂತಿಯಲ್ಲಿ ಮಿಂದೆದ್ದಿತ್ತು ಇರಾನ್. ಆ ಕ್ರಾಂತಿಯ ಬಿಸಿ ತನ್ನ ರಾಷ್ಟ್ರಕ್ಕೂ ವ್ಯಾಪಿಸಿ ತಾನು ಈವರೆಗೆ ತುಳಿತದಲ್ಲಿಟ್ಟಿರುವ ಶಿಯಾ ಬಹುಸಂಖ್ಯಾತರು ಅಧಿಕಾರದಲ್ಲಿ ಪಾಲು ಕೇಳಬಹುದೆಂಬ ಭೀತಿ ಸದ್ದಾಂ ಹುಸೇನ್ ಎಂಬ ಸುನ್ನಿ ಉಗ್ರ ನಾಯಕನನ್ನು ಯುದ್ಧಕ್ಕೇ ಪ್ರೇರೇಪಿಸಿತ್ತು. ತೈಲದ ಆಸೆ, ಗಡಿ ಉದ್ವಿಗ್ನತೆ ಎಂಬ ಪೂರಕ ಕಾರಣಗಳು ಒಂದಷ್ಟಿದ್ದವು ಬಿಡಿ. ಆದರೆ ಅವತ್ತು ಈ ಬಿಸಿಯಲ್ಲಿ ಅಮೆರಿಕವು ತನ್ನ ಮೈ ಕಾಯಿಸಿಕೊಳ್ಳುವುದಕ್ಕೆ ಹೊರಟಿತ್ತು. ನೆರೆಹೊರೆ ದೇಶಗಳ ನಡುವೆ ಕದನಕ್ಕೆ ಸಾವಿರ ಕಾರಣಗಳಿದ್ದಿರಬಹುದು. ಹಾಗೆಂದು ಇರಾನ್ನ ಮೇಲೆ ಇರಾಕ್ ಅಪ್ರಚೋದಿತವಾಗಿ ದಂಡೆತ್ತಿ ಹೋಗುವುದನ್ನು 'ಮಹಾನ್ ಪ್ರಜಾಪ್ರಭುತ್ವವಾದಿ' ಅಮೆರಿಕವು ಏಕೆ ಬೆಂಬಲಿಸಬೇಕಿತ್ತು? ಅವತ್ತು ಇರಾನ್ನ ಜತೆ ನಿಂತ ಸಿರಿಯಾ, ಕಿರ್ಕುಕ್-ಬನಿಯಾಸ್ ಪೈಪ್ಲೈನ್ ಬಂದ್ ಮಾಡಿ ಇರಾಕ್ನ ಬಹುಮುಖ್ಯ ತೈಲಪೂರೈಕೆಯ ಜಾಲವನ್ನೇ ತಪ್ಪಿಸಿತ್ತು. ಇರಾಕ್ ಯುದ್ಧ ಮುಂದುವರಿಸುವುದು ಹಾಗಿರಲಿ, ಆರ್ಥಿಕವಾಗಿ ಅಡ್ಡಡ್ಡ ಮಲುಗಿಯೇಬಿಟ್ಟಿತು ಅಂತಲೇ ಜಗತ್ತು ಅಂದುಕೊಂಡಿತ್ತು. ಆಗಲೇ ಅಮೆರಿಕದ ದೋಸ್ತಿಗಳಾದ ಸೌದಿ ಅರೇಬಿಯಾ, ಕುವೈತ್ ಹಾಗೂ ಗಲ್ಫ್ರಾಷ್ಟ್ರಗಳೆಲ್ಲ ಇರಾಕ್ನ ಬೆನ್ನಿಗೆ ನಿಂತು ಹಣದ ಹೊಳೆಯನ್ನೇ ಹರಿಸಿ ಗಟ್ಟಿ ಮಾಡಿದವು. ಇರಾನಿನ ಮೇಲೆ ದಾಳಿ ಮಾಡುವುದಕ್ಕೆ ಗುಪ್ತಚರ ಮಾಹಿತಿ ಕಲೆಹಾಕಬೇಕಿತ್ತಲ್ಲ? ಅವೆಲ್ಲ ಸಹಾಯಗಳು ಇರಾಕಿಗೆ ಅಮೆರಿಕದ ಉಪಗ್ರಹ ಸೇವೆಯಿಂದಲೇ ದೊರೆತವು. ಅಮೆರಿಕ ಮತ್ತು ಯುರೋಪಿಯನ್ ರಾಷ್ಟ್ರಗಳಿಂದ ಇರಾಕಿಗೆ ಯುದ್ಧ ಸಾಮಗ್ರಿ, ಹಣದ ನೆರವುಗಳೆಲ್ಲ ಬೇಕು ಬೇಕಾದಂತೆ ಸಿಕ್ಕಿತು. 1982ರಲ್ಲಿ ಇರಾಕ್ ಅನ್ನು 'ಭಯೋತ್ಪಾದಕರಿಗೆ ಸಹಕರಿಸುತ್ತಿರುವ ದೇಶಗಳು' ಎಂಬ ಪಟ್ಟಿಯಿಂದ ಏಕಾಏಕಿ ಕೈಬಿಟ್ಟ ಅಮೆರಿಕ ಅಧ್ಯಕ್ಷ ರೋನಾಲ್ಡ್ ರೇಗನ್ - 'ಇರಾನ್ ವಿರುದ್ಧ ಇರಾಕ್ ಸೋಲುವುದಕ್ಕೆ ನಾವು ಬಿಡೆವು' ಎಂದು ಹೇಳುತ್ತಾರೆ. ಜೋರ್ಡಾನ್ ಮತ್ತು ಇಸ್ರೇಲ್ ಮಾರ್ಗವಾಗಿ ಅವತ್ತು ಸದ್ದಾಂ ಹುಸೇನನ ಯುದ್ಧೋತ್ಸಾಹಿ ಸಾಮ್ರಾಜ್ಯಕ್ಕೆ ಅಮೆರಿಕದಿಂದ ಹೂವಿಟ್ಜರ್ ರೈಫಲ್ಗಳು, ಹೆಲಿಕಾಫ್ಟರ್ಗಳು, ಮಿರಾಜ್ ಎಫ್1 ಫೈಟರ್ಗಳು, ಕ್ಷಿಪಣಿಗಳೆಲ್ಲ ಪೂರೈಕೆಯಾದವು. ಇವತ್ತಿಗೆ ಬಹಳ ಸುಭಗನಂತೆ, ಜಗದೋದ್ಧಾರಕನಂತೆ ಸಮೂಹನಾಶಕ ಶಸ್ತ್ರಗಳ ಬಗ್ಗೆ ಜಗತ್ತನ್ನು ಎಚ್ಚರಿಸುತ್ತಿರುವ ಅಮೆರಿಕವು ಅವತ್ತಿಗೆ ಪಶ್ಚಿಮ ಜರ್ಮನಿಯೊಂದಿಗೆ ಸೇರಿಕೊಂಡು ಇರಾಕ್ಗೆ ರಾಸಾಯನಿಕ ಅಸ್ತ್ರಗಳನ್ನು ತಯಾರಿಸಲು ಅನುಕೂಲವಾಗುವಂತೆ ಕ್ರಿಮಿನಾಶಕ ಮತ್ತು ವಿಷಗಳನ್ನು ಪೂರೈಸಿತ್ತು!
ಅಮೆರಿಕದ ವಿರೋಧಿ ಪಾಳೆಯದ ಸೋವಿಯತ್ ಯೂನಿಯನ್ ಹಾಗೂ ಚೀನಾ ಸಹ ಆಗ ಇರಾನ್ ಜತೆ ಮುನಿಸಿಕೊಂಡಿದ್ದವಾದ್ದರಿಂದ ಅವುಗಳ ಅಲ್ಪ ಸಹಾಯವೂ ದೊರೆತಿದ್ದು ಇರಾಕಿಗೇ. ಹೀಗೆ ಇಡೀ ಜಗತ್ತೇ ಅಮೆರಿಕದ ನೇತೃತ್ವದಲ್ಲಿ ಸದ್ದಾಂ ಹುಸೇನನ ಬೆನ್ನಿಗೆ ನಿಂತಿದ್ದರೂ ಯುದ್ಧ ಗೆದ್ದಿದ್ದು ಯಾರು ಗೊತ್ತಾ? ಇರಾನ್!
ನಂತರ ಎಂದಿನಂತೆ ವಿಶ್ವಸಂಸ್ಥೆ ಮಧ್ಯಸ್ಥಿಕೆಯಲ್ಲಿ ಸಂಧಾನವಾಗಿ ಇರಾನ್ ತಾನು ಗೆದ್ದ ಭಾಗಗಳಿಂದ ಹಿಂತೆಗೆಯಿತು. ಅವತ್ತು ಹಾಗೆ ಮೋಹಿಸಿದ್ದ ಸದ್ದಾಂ ಹುಸೇನನನ್ನು ನಂತರ ಅಮೆರಿಕ ಹಣಿಯಿತೇಕೆ ಎಂಬ ಪ್ರಶ್ನೆಗೆ ಉತ್ತರ ಹುಡುಕುವುದಕ್ಕೆ ಮೊದಲು, ಇರಾನ್ ವಿರುದ್ಧ ಅಮೆರಿಕ ಕೆಂಡಕಾರುತ್ತಿರುವುದೇಕೆ ಅಂತ ತಿಳಿದುಕೊಳ್ಳೋಣ. ಪ್ರಜಾಪ್ರಭುತ್ವದ ಕೊಲೆಗೆ ಅಮೆರಿಕದ ಸುಪಾರಿ
1951ರಿಂದ 1953ರ ಅವಧಿಗೆ ಇರಾನ್ನ ಪ್ರಧಾನಿ ಆಗಿದ್ದವರು ಮೊಹಮದ್ ಮೊಸಾದ್ದೇಗ್. ಜನರಿಂದಲೇ ಚುನಾಯಿಸಿ ಬಂದಿದ್ದ ಅವರು ಜನಾನುರಾಗಿ ಆಡಳಿತಗಾರರೂ ಆಗಿದ್ದರು. ಸಾಮಾಜಿಕ ಭದ್ರತೆ, ಭೂ ಸುಧಾರಣೆಗಳನ್ನು ಪರಿಚಯಿಸಿದವರು ಅವರು. ಅಷ್ಟಾಗಿದ್ದರೆ ಹಾಗೆಯೇ ಉಳಿದುಕೊಳ್ಳುತ್ತಿದ್ದರೇನೋ? ಆದರೆ ಅವರು ಇರಾನ್ನ ಮಣ್ಣಿನ ಮಗನಾಗಿ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡರು. ಅದೆಂದರೆ ಇರಾನ್ನ ತೈಲ ಸಂಪನ್ಮೂಲ ಉದ್ದಿಮೆಗಳ ರಾಷ್ಟ್ರೀಕರಣ! ಅವೆಲ್ಲವೂ ಆಂಗ್ಲೋ- ಪರ್ಷಿಯನ್ ಆಯಿಲ್ ಕಂಪನಿ ಹಾಗೂ ನಂತರದಲ್ಲಿ ಬ್ರಿಟಿಷ್ ಪೆಟ್ರೋಲಿಯಂ ಕಂಪನಿ ಮೂಲಕ 1913ರಿಂದಲೂ ಬ್ರಿಟಿಷರ ತೆಕ್ಕೆಯಲ್ಲೇ ಇದ್ದವು. ತಮ್ಮ ಬುಡಕ್ಕೆ ಬೆಂಕಿ ಬಿದ್ದಾಗ ಪಾಶ್ಚಾತ್ಯ ಶಕ್ತಿಗಳು ಸುಮ್ಮನಿರುತ್ತಾವೆಯೇ? ಪ್ರಜಾಪ್ರಭುತ್ವ, ದೇಶವೊಂದರ ಸಾರ್ವಭೌಮತೆ ಇವೆಲ್ಲ ಪುರಸೊತ್ತು ಸಿಕ್ಕಾಗ ಉಪದೇಶ ಕೊಡುವುದಕ್ಕೆ ಇಟ್ಟುಕೊಳ್ಳೋಣ ಎನ್ನುತ್ತಲೇ ಬ್ರಿಟನ್ನ ಬೇಡಿಕೆಯ ಮೇರೆಗೆ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ, ಇರಾನ್ನಲ್ಲೊಂದು ಕ್ಷಿಪ್ರಕ್ರಾಂತಿಯನ್ನು ನಡೆಸಿಬಿಟ್ಟಿತು. ಇರಾನ್ ಸೇನೆಯ ಜನರಲ್ನನ್ನು ಉಪಯೋಗಿಸಿಕೊಂಡು ಮೊಸಾದ್ದೇಗ್ರನ್ನು ಕೆಳಗಿಳಿಸಿ ಬಂಧನದಲ್ಲಿರಿಸಿತು. ಮೊಸಾದ್ದೇಗ್ನಂಥ ಪ್ರಜಾಪ್ರಭುತ್ವದ ನಾಯಕ ಗೃಹಬಂಧನದಲ್ಲೇ ಕೊನೆಯುಸಿರು ಎಳೆಯಬೇಕಾಯಿತು. ಜನರಲ್ಲಿ ಜಾಗೃತಿ ಮೂಡಿಬಿಡುವುದೆಂಬ ಕಾರಣಕ್ಕೆ ಅವರ ಶವವನ್ನೂ ಹೊರತರದೇ ಅವರಿದ್ದ ಮನೆಯಲ್ಲೇ ಹೂತುಹಾಕಲಾಯಿತು. ಬಹಳ ವರ್ಷಗಳವರೆಗೂ ಸಿಐಎ ಇದರಲ್ಲಿ ತನ್ನದೇನೂ ಪಾತ್ರವಿಲ್ಲ ಎಂದು ಹೇಳುತ್ತ ಬಂದಿತಾದರೂ ಕೊನೆಗೊಮ್ಮೆ ಸತ್ಯ ಒಪ್ಪಿಕೊಳ್ಳಬೇಕಾಯಿತು.
ಈ ನಡುವೆ ಅಮೆರಿಕವು ತನ್ನ ಮಾತು ಕೇಳಿಕೊಂಡಿರುವ ಮೊಹಮ್ಮದ್ ರೇಜಾ ಶಾ ಎಂಬ ರಾಜಮನೆತನದವನನ್ನು ಇರಾನ್ನ ಗದ್ದುಗೆಯಲ್ಲಿ ಕೂರಿಸಿ ತಾನು ತೈಲ ದೋಚುವುದರಲ್ಲಿ ನಿರತವಾಯಿತು. ತೈಲ ಸಂಪನ್ನ ಇರಾನ್ನ ಜನ ಹಣದುಬ್ಬರ, ಬಡತನಗಳಲ್ಲಿ ಬೆಂದು ಹೋಗುತ್ತಿದ್ದರೆ ಶಾ ಮೋಜಿನಲ್ಲಿ ಮೈಮರೆತ. ಅಷ್ಟು ಸಾಲದೆಂಬಂತೆ ತನ್ನದೇ ಪರಂಪರೆ-ಸಂಸ್ಕೃತಿ ಹೊಂದಿದ್ದ ಇರಾನನ್ನು 'ಪಾಶ್ಚಾತ್ಯೀಕರಣ'ಗೊಳಿಸುವುದಾಗಿ ಹೇಳತೊಡಗಿದ. ಇವೆಲ್ಲ ಜನರನ್ನು ಇನ್ನಿಲ್ಲದಂತೆ ರೊಚ್ಚಿಗೆಬ್ಬಿಸಿದವು. ಇರಾನ್ನ ಬಹುಸಂಖ್ಯಾತ ಶಿಯಾ ಜನಸಂಖ್ಯೆ ತನ್ನ ಅನಾಥ ಭಾವವನ್ನು ಹೊಗಲಾಡಿಸಿಕೊಳ್ಳಲು ಧರ್ಮದಲ್ಲಿ ಐಡೆಂಟಿಟಿ ಗಟ್ಟಿಮಾಡಿಕೊಳ್ಳತೊಡಗಿತು. ಅಂಥ ಜನಸಮೂಹಕ್ಕೆ ಬಹುದೊಡ್ಡ ಧ್ವನಿಯಾಗಿ ಒದಗಿಬಂದವರೇ ಶಿಯಾ ಧರ್ಮಗುರು ಅಯತುಲ್ಲಾ ಖೊಮೆನಿ. ಅವರ ನಾಯಕತ್ವದಲ್ಲಿ 1979ರಲ್ಲಿ ನಡೆದ 'ಇಸ್ಲಾಮಿಕ್ ರೆವಲ್ಯೂಷನ್', ಇರಾನ್ಗೆ ಮರಳಿ ಸಾರ್ವಭೌಮತೆಯನ್ನು ತಂದುಕೊಟ್ಟಿತು. ಭಾರತದಲ್ಲಿ ಕುಳಿತವರಿಗೆ ಖೊಮೆನಿ ಮತ್ತು ಅಹಮದಿನೇಜಾದ್ರಂಥವರು ಜಗಳಕ್ಕೆ ಸನ್ನದ್ಧರಾಗಿರುವ ಕಟ್ಟರ್ಪಂಥೀಯರಂತೆ ಕಾಣಬಹುದು. ಆದರೆ ಇವತ್ತಿಗೂ ಇರಾನ್ನ ಬಲವನ್ನು ಹೇಗಾದರೂ ಕುಗ್ಗಿಸಿ ತೈಲ ಸಂಪನ್ಮೂಲದ ಮೇಲೆ ಮತ್ತೆ ತನ್ನ ಅಧಿಪತ್ಯ ಸ್ಥಾಪಿಸುವುದಕ್ಕೆ ತಹತಹಿಸುತ್ತಿರುವ ಅಮೆರಿಕದಂಥ ದೈತ್ಯ ಶಕ್ತಿಯನ್ನು ಸಂಭಾಳಿಸಬೇಕಾದರೆ ಇರಾನಿಯರಿಗೆ ಕಾಠಿಣ್ಯವಲ್ಲದೇ ಇನ್ಯಾವ ಆಯ್ಕೆಯಿದೆ? ಇರಾನ್ ಬೆಳೆದುಬಿಟ್ಟರೆ ವಿಶ್ವಶಾಂತಿಗೆ ಆತಂಕ ಅಂತೆಲ್ಲ ಅಮೆರಿಕ, ಇಸ್ರೇಲ್ ಮತ್ತು ಪಾಶ್ಚಾತ್ಯ ದೋಸ್ತಿಗಳೆಲ್ಲ ದಿನಕ್ಕೊಂದು ಕತೆ ಕಟ್ಟುತ್ತಿರುವುದನ್ನು ಲೋಕಕಲ್ಯಾಣದ ಕಾಳಜಿ ಅಂದುಕೊಂಡರೆ ಅಂಥ ದಡ್ಡರು ಇನ್ಯಾರೂ ಇರರು.
ಮತ್ತೆ ಇರಾಕ್ಗೆ ಬರೋಣ, ಸದ್ದಾಂ ಬಿದ್ದಿದ್ದೇಕೆ?
ಪುನರಾವರ್ತನೆ ಎನಿಸಿದರೂ ಪರವಾಗಿಲ್ಲ, ಮತ್ತೆ ಅದೇ ಮಾತನ್ನು ಹೇಳಬೇಕಾಗುತ್ತದೆ. 'ಪ್ರಜಾಪ್ರಭುತ್ವದ ಮೌಲ್ಯಗಳಿಗಾಗಿ ಹೋರಾಟ' ಎಂಬ ಆಣಿಮುತ್ತು ಅಮೆರಿಕದ ಬಾಯಿಂದ ಯಾವತ್ತೇ ಉದುರಿದರೂ ಅದನ್ನೊಂದು ಕ್ರೂರ ವ್ಯಂಗ್ಯ ಎಂದೇ ಅರ್ಥಮಾಡಿಕೊಳ್ಳಬೇಕು. ಸಮೂಹ ನಾಶಕ ಶಸ್ತ್ರಗಳ ಶಂಕೆ ಎಂಬುದು ಅಮೆರಿಕ ಪಾಲಿನ ಫೆವರೀಟ್ ಕತೆ. ಸದ್ದಾಂ ವಿಷಯದಲ್ಲಿ ಉಪಯೋಗಿಸಿದ್ದೂ ಆ ವಾದವನ್ನೇ. ಇದೀಗ ಮಧ್ಯಪ್ರಾಚ್ಯದಲ್ಲಿ ತಮ್ಮ ಸಾಮ್ರಾಜ್ಯವನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಿರಿಯಾ ಮತ್ತು ಇರಾನ್ಗಳ ಬಗ್ಗೆ ಅಮೆರಿಕ ತೇಲಿಬಿಡುತ್ತಿರುವ ಶಂಕೆಯೂ ಅದೇ ಆಗಿದೆ. ಹಾಗಂತ ಮನುಕುಲದೊಂದಿಗೆ ಗುರುತಿಸಿಕೊಳ್ಳುವ ಇಚ್ಛೆಯುಳ್ಳ ಯಾವ ಆತ್ಮವೂ ಸರ್ವಾಧಿಕಾರಿ ಸದ್ದಾಂ ಹುಸೇನ್ ಅಂತ್ಯಕ್ಕೆ ಮರುಗಬೇಕಿಲ್ಲ. ಆದರೆ ಸದ್ದಾಂ ಹುಸೇನನ ಮೇಲೆ ಅಮೆರಿಕ ಮುಗಿಬೀಳುವುದಕ್ಕೆ ಪ್ರೇರೇಪಿಸಿದ್ದು ಆತನ ಸರ್ವಾಧಿಕಾರಿ ನೀತಿ ಹಾಗೂ ಅದರಿಂದ ಸೃಷ್ಟಿಯಾದ ಆತಂಕಗಳೇ? ಖಂಡಿತ ಅಲ್ಲ. ಅಮೆರಿಕವು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುವುದಕ್ಕೆ ಕಂಡುಕೊಂಡ ನೆಪ ಅದಾಗಿತ್ತೇ ಹೊರತು ಮತ್ತೇನಿಲ್ಲ. ಅಮೆರಿಕದ ಕಾಳಜಿ ಅದುವೇ ಎಂದಾಗಿದ್ದರೆ ಇವರೇಕೆ ಇನ್ನೂ ಸೌದಿ ಅರೇಬಿಯಾದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗೆ ಮನಸ್ಸು ಮಾಡಿಲ್ಲ? ಜಗತ್ತಿನ ಬಹಳಷ್ಟು ಉಗ್ರ ಚಟುವಟಿಕೆಗಳು ಸೌದಿಯಿಂದ ಹಣ ಪಡೆದಿರುವುದು ಬೆಳಕಿಗೆ ಬರುತ್ತಿದ್ದರೂ ಅಮೆರಿಕ ಆಕ್ರೋಶಗೊಳ್ಳುತ್ತಿಲ್ಲ ಏಕೆ? ಇರಾನ್ನ ಚುನಾಯಿತ ನಾಯಕನನ್ನು ಕ್ಷಿಪ್ರಕ್ರಾಂತಿ ಮೂಲಕ ಕೆಳಗಿಳಿಸಿದ್ದು ಏಕೆ? ಚರಿತ್ರೆ ಕಂಡ ಅತಿಘೋರ ಸರ್ವಾಧಿಕಾರಿ ಇದಿ ಅಮೀನ್ ಸಹಸ್ರಾರು ಮಂದಿಯನ್ನು ಕೊಂದ ಕುಖ್ಯಾತಿಯಿದ್ದವ. 1979ರಲ್ಲಿ ಸೌದಿ ಅರೇಬಿಯಾವೇ ಆತನಿಗೆ ಆಶ್ರಯ ನೀಡಿತು. ದಾಖಲೆಗೆ ಇರಲಿ ಎಂದು ಅಮೆರಿಕ ಈ ಬಗ್ಗೆ ಅಸಮ್ಮತಿ ಸೂಚಿಸಿತಾದರೂ ತನ್ನ ಪರಮ ಸ್ನೇಹಿತ ಸೌದಿಗೆ ಬಿಸಿ ಮುಟ್ಟಿಸಲೇ ಇಲ್ಲ.
ಹಾಗಾದರೆ ಸದ್ದಾಂ ಹುಸೇನನ ನೆಲದಲ್ಲಿ ಯುದ್ಧ ಸಾರಿ ಆತನನ್ನು ಹುಡುಕಿ ಹೊರಗೆಳೆದು ನೇಣಿಗೇರಿಸಿದ್ದೇಕೆ? 'ಕನ್ಫೆಷನ್ ಆಫ್ ಆ್ಯನ್ ಇಕನಾಮಿಕ್ ಹಿಟ್ಮ್ಯಾನ್' ಪುಸ್ತಕದಲ್ಲಿ ಅಮೆರಿಕನ್ ಲೇಖಕ ಜಾನ್ ಪರ್ಕಿನ್ಸ್ ಅಮೆರಿಕದ ಸಾಮ್ರಾಜ್ಯಶಾಹಿ ಮಾದರಿಯನ್ನು ತೆರೆದಿರಿಸುತ್ತಾರೆ. ಇರಾನ್ನಲ್ಲಿ ಅಮೆರಿಕ ನಡೆಸಿದ ಕ್ಷಿಪ್ರಕ್ರಾಂತಿ ಹೆಚ್ಚುಕಾಲ ಬಾಳಲಿಲ್ಲವಲ್ಲ? ಅಲ್ಲದೇ ಈ ಮಾದರಿಯಲ್ಲಿ ಅಮೆರಿಕ ಸರ್ಕಾರವು ಮುಜುಗರದ ಪ್ರಶ್ನೆಗಳನ್ನು ಎದುರಿಸಬೇಕಾಗಿ ಬಂತು. ಆಗ ಅದು ಕಂಡುಕೊಂಡ ಉಪಾಯವೇ 'ಇಕನಾಮಿಕ್ ಹಿಟ್ಮ್ಯಾನ್' ಪರಿಕಲ್ಪನೆ. ಇಲ್ಲಿ ಸೈನಿಕರು ಅಮೆರಿಕದ ಪರವಾಗಿ ಅನ್ಯದೇಶಗಳ ಮೇಲೆ ಎರಗುವುದಿಲ್ಲ. ಬದಲಿಗೆ ವಿಶ್ವಮಾನ್ಯ ಹಣಕಾಸು ಸಂಸ್ಥೆಗಳ 'ಆರ್ಥಿಕ ಪರಿಣತರು' ಸಂಪನ್ಮೂಲ ಸಮೃದ್ಧ ದೇಶಗಳಿಗೆ ಹೋಗಿ ಕನಸುಗಳನ್ನು ಬಿತ್ತಲು ಶುರು ಮಾಡಿದರು. ಮಧ್ಯಪ್ರಾಚ್ಯ, ಲ್ಯಾಟಿನ್ ಅಮೆರಿಕ ದೇಶಗಳಿಗೆ ಸಾಗುತ್ತಿದ್ದ ಈ ಅರ್ಥಪರಿಣತರು ಆ ದೇಶಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ ಅಭಿವೃದ್ಧಿಗೆ ಅಪಾರ ಪ್ರಮಾಣದ ಸಾಲ ನೀಡುವುದಾಗಿ ಪುಸಲಾಯಿಸುತ್ತಿದ್ದರು. ಇವನ್ನು ಒಪ್ಪಿಕೊಳ್ಳುವವರಿಗೆ ವಿಧಿಸುತ್ತಿದ್ದ ಷರತ್ತೆಂದರೆ ಆ ಹಣದಲ್ಲಿ ಕೈಗೊಳ್ಳುವ ಕಾಮಗಾರಿಗಳನ್ನೆಲ್ಲ ಅಮೆರಿಕನ್ ಕಂಪನಿಗಳಿಗೇ ಗುತ್ತಿಗೆ ಕೊಡಬೇಕೆಂಬುದು. ಈ ಕಂಪನಿಗಳು ಅಂಥ ದೇಶಗಳಿಗೆ ಹೋಗಿ ವಿಮಾನ ನಿಲ್ದಾಣ, ಹೆದ್ದಾರಿ, ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಿ ದುಡ್ಡು ಎಣಿಸಿಕೊಂಡುಬಂದವು. ಹೀಗೆ ಅಮೆರಿಕದಿಂದ ಹೋದ ಹಣ ಅಲ್ಲಿಗೇ ಬಂದು ಜಮೆಯಾದರೆ ಆ ರಾಷ್ಟ್ರಗಳ ಪಾಲಿಗೆ ಉಳಿದಿದ್ದು ಸಾಲವಷ್ಟೆ. ಈ ಔದಾರ್ಯದ ಕುಣಿಕೆಯನ್ನೇ ಬಿಗಿಮಾಡಿಕೊಂಡು ಅಲ್ಲಿನ ಸಂಪನ್ಮೂಲಗಳ ಮೇಲೆ ಅಮೆರಿಕನ್ ಸಾಮ್ರಾಜ್ಯಶಾಹಿ ತನ್ನ ಹಿಡಿತ ಸಾಧಿಸಿತು. ಹೀಗೆ 'ಅರ್ಥ ಪರಿಣತರು' ಯಶ ಸಾಧಿಸಲಿಕ್ಕೆ ಆಗದ ಕಡೆಗಳಲ್ಲಿ ಸಿಐಎ ರಂಗಕ್ಕೆ ಇಳಿದು ದೇಶದ ಮುಖ್ಯಸ್ಥನನ್ನೇ ಹತ್ಯೆ ಮಾಡುತ್ತಿತ್ತು ಇಲ್ಲವೇ ಕೆಳಗಿಳಿಸುತ್ತಿತ್ತು. ಈ ಎರಡನೇ ಹಂತದಲ್ಲೂ ವೈಫಲ್ಯ ಎದುರಾದರೆ ಯುದ್ಧದ ಮೂಲಕ ಸಾಮ್ರಾಜ್ಯ ಸ್ಥಾಪನೆ. ಸೌದಿ ಅರೇಬಿಯಾದ ರಾಜಮನೆತನ ಬಹಳ ಸುಲಭಕ್ಕೆ ಅರ್ಥ ಪರಿಣತರಿಗೆ ಮರುಳಾಯಿತು. ಇಂಥದೇ ಸಂಧಾನವನ್ನು ಸದ್ದಾಂ ಜತೆ ಮಾಡಿಕೊಳ್ಳುವುದಕ್ಕೆ ಇಕನಾಮಿಕ್ ಹಿಟ್ಮೆನ್ ವಿಫಲರಾದರು. ಅಂಗರಕ್ಷಕರ ಸಮರ್ಥ ಪಡೆ, ತನ್ನದೇ ನಕಲಿ ರೂಪಗಳ ಸೃಷ್ಟಿ ಎಲ್ಲ ಇರಿಸಿಕೊಂಡಿದ್ದ ಸದ್ದಾಮ್ನನ್ನು ಗುಪ್ತಚರರ ಮೂಲಕ ಕೊಲ್ಲಿಸುವುದೂ ಅಮೆರಿಕಕ್ಕೆ ಸಾಧ್ಯವಾಗಲಿಲ್ಲ. ಇರಾಕ್ನಂಥ ತೈಲ ಸಮೃದ್ಧ ರಾಷ್ಟ್ರವನ್ನು ಹಾಗೆಯೇ ಬಿಡುವುದುಂಟೇ? ನೆಪ ಹುಡುಕಿ ಕದನಕ್ಕಿಳಿದ ಅಮೆರಿಕ ಸದ್ದಾಮ್ನನ್ನು ಹಣಿಯಿತು. ಅಷ್ಟೇ!
ಈ ಸಾಮ್ರಾಜ್ಯ ನೆತ್ತರನ್ನೇ ಹೊದ್ದಿದೆ
ಒಮರ್ ತೊರಿಜೋಸ್ 1968- 1981ರ ಅವಧಿಯಲ್ಲಿ ಪನಾಮಾವನ್ನು ಸರ್ವಾಧಿಕಾರಿಯಾಗಿ ಆಳಿದ ವ್ಯಕ್ತಿ. ಸರ್ವಾಧಿಕಾರಿ ಎಂದಕೂಡಲೇ ಕ್ರೂರ ಚಿತ್ರಣವೇ ಕಣ್ಣಿಗೆ ಬರಬೇಕಿಲ್ಲ. ಬಡವರು- ಕೆಳ ಮಧ್ಯಮವರ್ಗದವರ ಕಷ್ಟಗಳಿಗೆ ಕಿವಿಯಾದ ವಿನಮ್ರ ತೊರಿಜೋಸ್. ತನ್ನ ದೇಶದ ಹಿತಾಸಕ್ತಿಯನ್ನು ಕಾಪಾಡುವುದಕ್ಕೆ ಕೊನೆಯವರೆಗೆ ಶ್ರಮಿಸಿದವ. ಆತನ ಕೆಲ ಹೇಳಿಕೆಗಳು ಸ್ಲೋಗನ್ಗಳಂತೆ ಸೆಳೆಯುತ್ತವೆ. ಅವುಗಳಲ್ಲೇ ಈತ ನಂಬಿದ್ದ ಸಿದ್ಧಾಂತವೂ ಬಿಂಬಿತವಾಗುತ್ತದೆ. 'ನಾನು ಕಮ್ಯುನಿಸಮ್ ಅನ್ನು ಇಷ್ಟಪಡುವುದಿಲ್ಲ. ಏಕೆಂದರೆ ಅದು ರೇಷನ್ ಪುಸ್ತಕದಲ್ಲಿ ಸಂಪತ್ತನ್ನು ಹಂಚುತ್ತದೆ.', 'ಅಮೆರಿಕದೊಂದಿಗೆ ಮಾತುಕತೆಯಾಡುವಾಗ ಒಂದು ಮಾತನ್ನು ನೆನಪಿನಲ್ಲಿಡೋಣ. ಎದುರಿಸಿ ನಿಲ್ಲೋಣ ಇಲ್ಲವೇ ಸಾಯೋಣ. ಆದರೆ ಮೊಣಕಾಲೂರುವುದು ಬೇಡ.' 'ನಾನೇನಾದರೂ ಮಣ್ಣಿಗೆ ಬಿದ್ದರೆ ನನ್ನ ಕೈಲಿರುವ ಧ್ವಜ ಸೆಳೆದುಕೊಳ್ಳಿ. ಅದಕ್ಕೆ ಮುತ್ತು ಕೊಡಿ ಹಾಗೂ ಮುಂದುವರಿಯಿರಿ!'
ಇಂಥ ದೇಶಭಕ್ತ ಸರ್ವಾಧಿಕಾರಿಯೊಂದಿಗೆ ಪನಾಮಾ ಕಾಲುವೆಯ ಹಕ್ಕುದಾರಿಕೆ ವಿಷಯದಲ್ಲಿ ಅಮೆರಿಕ ಚೌಕಾಶಿಗೆ ಇಳಿಯಿತು. ಆ ಬಗ್ಗೆ ತೊರಿಜೋಸ್ನೊಂದಿಗೆ ಆಗಿನ ಅಮೆರಿಕ ಅಧ್ಯಕ್ಷ ಕಾರ್ಟರ್ ಒಪ್ಪಂದವನ್ನೂ ಮಾಡಿಕೊಂಡರು. ಪನಾಮಾದಲ್ಲಿ ಸಮುದ್ರ ಮಟ್ಟದ ಕಾಲುವೆ ನಿರ್ಮಾಣಕ್ಕೆ ತೊರಿಜೋಸ್ ಜಪಾನಿಯರೊಂದಿಗೆ ಒಪ್ಪಂದ ಮಾಡಿಕೊಂಡರು. ಇದು ಅಮೆರಿಕದ ದೈತ್ಯ ಎಂಜನಿಯರಿಂಗ್ ಕಂಪನಿ ಬೆಶೆಲ್ ಕಾರ್ಪೋರೇಷನ್ ಕಣ್ಣನ್ನು ಕೆಂಪಾಗಿಸಿತು. ಅಮೆರಿಕ ಚುನಾವಣೆಯಲ್ಲಿ ಕಾರ್ಟರ್ ಸೋತು ರೇಗನ್ ಅಧ್ಯಕ್ಷರಾಗಿ ಬರುತ್ತಲೇ ಅವರ ಜತೆ ಇದೇ ಬೆಶೆಲ್ನ ಇಬ್ಬರು ಪ್ರಮುಖರು ಸಚಿವರಾದರು. ಜಪಾನಿನ ಜತೆಗಿನ ಒಪ್ಪಂದ ಮುರಿದು ತಮಗೇ ಆ ಗುತ್ತಿಗೆ ಕೊಡಬೇಕೆಂದು ಅವರು ತೊರಿಜೋಸ್ ಮೇಲೆ ಒತ್ತಡ ತಂದರು. ನಿಮ್ಮ ವ್ಯಾಪಾರಿ ಹಿತಾಸಕ್ತಿಗೆ ನಾನೇಕೆ ಮಣಿಯಲಿ ಅಂದ ತೊರಿಜೋಸ್. 1981ರಲ್ಲಿ ಆತ ಏರ್ಕ್ರಾಫ್ಟ್ನಲ್ಲಿ ಪಯಣಿಸುತ್ತಿದ್ದಾಗ ಸುಟ್ಟು ಭಸ್ಮವಾದ. ಇದು ಅಮೆರಿಕದ ಸಿಐಎ ಕೆಲಸ ಎನ್ನುತ್ತಾರೆ ಬಲ್ಲವರು. ಈ ಕುರಿತ ವಿಚಾರಣೆಯನ್ನೇ ಮಸುಕು ಮಾಡಿದ ಅಮೆರಿಕ, ಇವರ ಕುಟುಂಬದವರ ಆರೋಪಕ್ಕಂತೂ ಉತ್ತರಿಸುವುದಕ್ಕೂ ಹೋಗಲಿಲ್ಲ.
ಜಕೊಬೊ ಅರ್ಬೆಂಜ್ 1951-1954ರ ಅವಧಿಗೆ ಲ್ಯಾಟಿನ್ ಅಮೆರಿಕ ದೇಶವಾದ ಗ್ವಾಟೆಮಾಲಾದ ಚುನಾಯಿತ ಅಧ್ಯಕ್ಷರಾಗಿದ್ದವರು. ಅಧ್ಯಕ್ಷನಾಗುವುದಕ್ಕೂ ಮೊದಲು ಅರ್ಬೆಂಜ್ ರಕ್ಷಣಾ ಸಚಿವನಾಗಿ ಕೆಲಸ ಮಾಡಿದ್ದ. ಅದಕ್ಕೂ ಮೊದಲು ಅಲ್ಲಿದ್ದದ್ದು ಮಿಲಿಟರಿ ಆಡಳಿತ. ಜಾರ್ಜ್ ಯುಬಿಕೊ ಎಂಬ ಮಿಲಿಟರಿ ಸರ್ವಾಧಿಕಾರಿ ಕೃಷಿಯನ್ನೇ ಆಧರಿಸಿದ್ದ ಜನರ ಬದುಕನ್ನೇ ದುಸ್ತರವಾಗಿಸಿದ್ದ. ಅವನಿಗೆ ಅಮೆರಿಕದ ಬೆಂಬಲವಿತ್ತು. ಕೊನೆಗೊಮ್ಮೆ ಜನ ಬಂಡೆದ್ದಿದ್ದರಿಂದ ಚುನಾವಣೆಗಳು ನಡೆದು, ಅರ್ಬೆಂಜ್ಗೆ ಅಧಿಕಾರ ಒಲಿಯಿತು. ಅರ್ಬೆಂಜ್ ಅಧ್ಯಕ್ಷನಾಗುತ್ತಲೇ ಸಾಮಾಜಿಕ ಸುಧಾರಣೆಗೆ ಮುಂದಾದ. ದೇಶದ ಬಡಜನರಿಗೆ ಜಮೀನು ಕೊಟ್ಟ. ಆವರೆಗೆ ಅಲ್ಲಿನ ಜನರನ್ನು ಗುಲಾಮರಂತೆ ದುಡಿಸಿಕೊಂಡು ಅವರ ಉತ್ಪನ್ನಗಳಿಂದ ತಾನು ಲಾಭ ಮಾಡಿಕೊಳ್ಳುತ್ತಿದ್ದ 'ಯುನೈಟೆಡ್ ಫ್ರೂಟ್ ಕಂಪನಿ'ಗೆ ಜಂಘಾಬಲವೇ ಉಡುಗಿಹೋಯಿತು. ಆ ಕಂಪನಿಯ ಪರವಾಗಿ ಅಮೆರಿಕದ ಸಿಐಎ ಕಣಕ್ಕಿಳಿಯಿತು. ಅರ್ಬೆಂಜ್ ಕಮ್ಯುನಿಸ್ಟ್ ದೇಶಗಳತ್ತ ವಾಲುತ್ತಿದ್ದಾನೆ ಎಂಬ ಪುಕಾರು ಹಬ್ಬಿಸಲಾಯಿತು. ವ್ಯಾಪಾರ ಒಕ್ಕೂಟಗಳಿಗೆ ಬಂಡೇಳುವಂತೆ ಹಣ ಸಂದಾಯವಾಯಿತು. ಗ್ವಾಟೆಮಾಲಾದ ಮಿಲಿಟರಿ ಜನರಲ್ನನ್ನು ಎತ್ತಿಕಟ್ಟಿ ಚುನಾಯಿತ ಅರ್ಬೆಂಜ್ನನ್ನು ದೇಶಭ್ರಷ್ಟವಾಗಿ ಹೋಗುವಂತೆ ನೋಡಿಕೊಂಡಿತು ಅಮೆರಿಕ! 1971ರಲ್ಲಿ ತನ್ನದಲ್ಲದ ಮೆಕ್ಸಿಕೊ ನೆಲದಲ್ಲಿ ಇಹಲೋಕಯಾತ್ರೆ ಮುಗಿಸಿದ ಅರ್ಬೆಂಜ್.
1970-73ರ ಅವಧಿಗೆ ಚಿಲಿ ದೇಶವನ್ನು ಚುನಾಯಿತ ಅಧ್ಯಕ್ಷನಾಗಿ ಆಳಿದ್ದ ಸಲ್ವಡಾರ್ ಅಲ್ಲೆಂಡೆಗೆ ಒದಗಿದ್ದೂ ಇದೇ ವ್ಯಥೆಯೇ. ಸಲ್ವಡಾರ್ ಮೇಲೆ ಅಮೆರಿಕ ಸಿಟ್ಟುಗೊಳ್ಳುವುದಕ್ಕೆ ಕಾರಣ ಆತ ಅಧ್ಯಕ್ಷನಾಗುತ್ತಲೇ ಕೈಗಾರಿಕಾ ವಲಯವನ್ನು ರಾಷ್ಟ್ರೀಕರಣಗೊಳಿಸಿದ. ಮುಖ್ಯವಾಗಿ ತಾಮ್ರದ ಗಣಿಗಾರಿಕೆ ರಾಷ್ಟ್ರೀಕರಣವು ಅಮೆರಿಕನ್ ಕಂಪನಿಗಳಿಗೆ ಆಘಾತ ತಂದಿತ್ತು. ತಡವೇಕೆ? ಅವರ ಪರ ಫೀಲ್ಡಿಗೆ ಇಳಿದೇಬಿಟ್ಟಿತು ಅಮೆರಿಕದ ಸಿಐಎ. ಯೂನಿಯನ್ಗಳ ಮೂಲಕ ದೇಶದಲ್ಲಿ ದಂಗೆ, ನಂತರದಲ್ಲಿ ಮಿಲಿಟರಿ ಮೂಲಕ ಪ್ರಜಾಪ್ರಭುತ್ವದ ದಮನ- ಇದುವೇ ಅಮೆರಿಕ ಅನುಸರಿಸಿದ ನೀತಿ. ತಾನು ರಾಜಿನಾಮೆ ನೀಡಲಾರೆ ಅಂತ ಸಲ್ವಡಾರ್ ಭಾಷಣ ಮಾಡುತ್ತಿದ್ದಾಗ ಆ ಭವನವನ್ನು ಮಿಲಿಟರಿ ಸುತ್ತುವರಿಯಿತು. ಗುಂಡೇಟಿನಿಂದ ಸತ್ತ ಸಲ್ವಡಾರ್ದು ಆತ್ಮಹತ್ಯೆಯೋ, ಕೊಲೆಯೋ ಬಗೆಹರಿಯಲಿಲ್ಲ. ಆದರೆ ಸಲ್ವಡಾರ್ರನ್ನು ಸಾವಿಗೆ ನೂಕಿದ್ದು ಅಮೆರಿಕ ಅಂತ ತುಸು ಬುದ್ಧಿ ಇರುವ ಯಾರಾದರೂ ಹೇಳಬಹುದು.
-
ಇವತ್ತು ಇರಾಕ್. ನಾಳೆ ಇನ್ಯಾವುದೋ ದೇಶ. ಹೊತ್ತಿ ಉರಿಯುತ್ತಲೇ ಇರುತ್ತದೆ ಜಗತ್ತು ಅಮೆರಿಕದಂಥ ಸಾಮ್ರಾಜ್ಯಶಾಹಿ ಮನಸ್ಥಿತಿ ಬದುಕಿರುವವರೆಗೆ. ಎಲ್ಲ ಸಂಘರ್ಷಗಳ ಮೇಲ್ನೋಟದ ಕಾರಣಗಳಷ್ಟೇ ನಮಗೆ ಕಾಣುತ್ತವೆ. ನಿಜಕ್ಕೂ ಜಗತ್ತನ್ನು ಗೋಜಲಿಗೆ ತಳ್ಳಿರುವುದು ಅಮೆರಿಕ ಪೋಷಿತ ಸಾಮ್ರಾಜ್ಯದ ಸಂಪತ್ತಿನ ದಾಹ. ಇದನ್ನು ಹೆಚ್ಚು ಹೆಚ್ಚು ಜನ ಅರ್ಥ ಮಾಡಿಕೊಂಡು ಇಂಥದೊಂದು ವ್ಯವಸ್ಥೆಯ ವಿರುದ್ಧ ನೈತಿಕ ಸ್ಥೈರ್ಯ ಒಗ್ಗೂಡಿಸಿಕೊಳ್ಳುವವರೆಗೂ ಇಂಥ ಕ್ರೂರ ಆಟಗಳು ಮುಂದುವರಿದೇ ಇರುತ್ತವೆ. ಕೊನೆಗೊಮ್ಮೆ ಆಟ ಆರಂಭಿಸಿದವನ ಅಂಕೆಯಲ್ಲೂ ಇಲ್ಲದಂತೆ ವಿಧ್ವಂಸಗಳು ಶುರುವಾಗುತ್ತವೆ. ಇಲ್ಲಿ ಅಮೆರಿಕ ಅಂತಂದರೆ ಇಡೀ ದೇಶ ಅಂತಲ್ಲ. ಅಲ್ಲಿನ ಬೆರಳೆಣಿಕೆಯ ಶ್ರೀಮಂತರು ಎಷ್ಟೋ ಕಾಲದಿಂದ ಆಡಿಕೊಂಡು ಬರುತ್ತಿರುವ ಆಟವಿದು.
ನರೇಂದ್ರ ಮೋದಿಯಂಥ ನಿರ್ಣಾಯಕ ನಾಯಕ ಸಿಕ್ಕಿದ್ದಾನೆ ಎಂಬ ಸಂಭ್ರಮದಲ್ಲಿರುವ ಭಾರತ ದೂರ ಭವಿಷ್ಯದಲ್ಲಾದರೂ ಇಂಥ ಬಿಸಿಗಳನ್ನು ತಗ್ಗಿಸುವ ಹೊಣೆ ಹೊರಬೇಕಾಗುತ್ತದೆ. ಏಕೆಂದರೆ ಕರೆನ್ಸಿಯ ಕೆಟ್ಟ ನಾಟ್ಯದ ಜಾಗದಲ್ಲಿ ಎಥಿಕ್ಸ್ನ ಗಾಂಭಿರ್ಯವನ್ನು ತಂದಿಡುವುದು ಯಾವುದಾದರೂ ರಾಷ್ಟ್ರಕ್ಕೆ ಸಾಧ್ಯವಿದ್ದರೆ ಅದು ಭಾರತಕ್ಕೆ ಮಾತ್ರ. ತನ್ನ ನೆಲೆಯಲ್ಲಿ ಗಟ್ಟಿನಿಂತ ಭಾರತ, ನಾವು ನಮ್ಮ ವ್ಯವಹಾರಗಳನ್ನು ಡಾಲರ್ಸ್ನಲ್ಲಿ ಕೋಟ್ ಮಾಡುವ ಬದಲು ಯುರೋನಲ್ಲೋ, ಜಪಾನಿ ಯೆನ್ನಲ್ಲೋ ಕೋಟ್ ಮಾಡಲಿದ್ದೇವೆ ಅಂತ ಹೇಳಿದ ದಿನ ಜಗತ್ತಿನ ಅರ್ಥ ವ್ಯವಸ್ಥೆಯೇ ಬದಲಾಗಿಬಿಡಬಲ್ಲುದು. ಅಂಥ ಶಕ್ತಿ ನಮಗೊಲಿದು ಜಗತ್ತಿಗೆ ಸನ್ಮಂಗಳವಾಗಲಿ ಎಂಬುದೊಂದು ಉತ್ಕಟ ಆಶಯ.
= ಚೈತನ್ಯ ಹೆಗಡೆ
ಕನ್ನಡಪ್ರಭ
cchegde@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


