ಎತ್ತಿನಹೊಳೆ ಯೋಜನೆ ದಡ ಸೇರಿಲ್ಲವೇಕೆ?
ಬಯಲುಸೀಮೆಯ ಐದು ಜಿಲ್ಲೆಗಳಿಗೆ ಪಶ್ಚಿಮಘಟ್ಟದ ಹೊಳೆ-ತೊರೆಗಳ ಮೂಲಕ ನೀರು ತರುವುದೇ ಎತ್ತಿನಹೊಳೆ ಯೋಜನೆ. ದ.ಕ.ದಲ್ಲಿ ಇದಕ್ಕೆ ವಿರೋಧವಿದೆ. ಆದರೆ ಡಿ.ವಿ. ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಎತ್ತಿನಹೊಳೆ ಯೋಜನೆಯಿಂದ ನೀರೇ ಬರುವುದಿಲ್ಲ ಎನ್ನುತ್ತಾರೆ. ಈ ಹಿನ್ನೆಲೆಯಲ್ಲಿ, ಎತ್ತಿನಹೊಳೆಯ ಬಗ್ಗೆ ಇಬ್ಬರು ಮಾಜಿ ಮುಖ್ಯಮಂತ್ರಿಗಳು 'ಬುಲೆಟ್' ಸಂದರ್ಶನಕ್ಕೆ ಎದುರಾಗಿದ್ದಾರೆ.
- ಎತ್ತಿನಹೊಳೆ ಯೋಜನೆ ಬಗ್ಗೆ ಏನು ಹೇಳುತ್ತೀರಿ?
ಈ ಪ್ರಾಜೆಕ್ಟ್ ಟೇಕ್ ಆಫ್ ಆಗಲ್ಲ. ಇದು ಚುನಾವಣೆಯಲ್ಲಿ ವೋಟ್ ಗಿಟ್ಟಿಸಿಕೊಳ್ಳಲು ಅಷ್ಟೇ. ಅವರು ಗೆಲ್ಲಬೇಕು. ಚುನಾವಣೆಗೆ ಕಮಿಷನ್ ಹೊಡೆಯಬೇಕು ಈಗ. ಅದಕ್ಕಷ್ಟೇ ಸೀಮಿತ. ಹನಿ ನೀರನ್ನೂ ಇವರು ಕೊಡಲ್ಲ. ಒಂದೂವರೆ ವರ್ಷದಲ್ಲಿ ಮುಗಿಸುತ್ತೇವೆ ಎನ್ನುವುದು ಬೋಗಸ್. ಬಯಲುಸೀಮೆ ಪ್ರದೇಶದ ಜನರೊಂದಿಗೆ ಕರಾವಳಿ ಭಾಗದ ಜನಪ್ರತಿನಿಧಿಗಳು ಆಟ ಆಡುತ್ತಿದ್ದಾರೆ. ಇಲ್ಲಿ ಬಂದು ಎತ್ತಿನಹೊಳೆ ಯೋಜನೆ ಶೀಘ್ರ ಅನುಷ್ಠಾನ ಮಾಡುತ್ತೇವೆ ಎಂದು ಕಾರ್ಯಕ್ರಮ ಮಾಡುತ್ತಾರೆ. ಅಲ್ಲಿ ಹೋಗಿ, ಯೋಜನೆ ಅನುಷ್ಠಾನಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಚುನಾವಣೆಯಲ್ಲಿ ವೋಟು ಸೆಳೆಯಬೇಕು ಅಷ್ಟೇ. ಅದಕ್ಕೇ ಶಂಕುಸ್ಥಾಪನೆಯನ್ನೂ ಅಲ್ಲಿ ಮಾಡುತ್ತಿಲ್ಲ. ಇಲ್ಲಿ ಮಾಡುತ್ತಾರಂತೆ! ಚಿಕ್ಕಬಳ್ಳಾಪುರದಲ್ಲಿ ಶಂಕುಸ್ಥಾಪನೆ ಮಾಡಲು ಬಿಡುವುದಿಲ್ಲ.
- ಕರಾವಳಿ ಜನರ ವಿರೋಧ ಅಂದರೆ ಯಾರದ್ದು?
ಮುಖ್ಯಮಂತ್ರಿಯಾಗಿದ್ದಾಗ ಡಿ.ವಿ. ಸದಾನಂದಗೌಡ ಅತಿ ಶೀಘ್ರ ಜಾರಿ ಎಂದಿದ್ದರು. ಒಂದೂವರೆ ವರ್ಷದಲ್ಲಿ ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಿ ನಂತರ ಜಿ.ಎಸ್. ಪರಮಶಿವಯ್ಯ ವರದಿ ಅನುಷ್ಠಾನಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರೂ ಹೇಳಿದ್ದಾರೆ. ಇದು ಹೇಳಿದ್ದು 2012ರ ಜನವರಿಯಲ್ಲಿ. ಅಂದರೆ ಇದೀಗ ಎರಡು ವರ್ಷ ಆಯಿತು. ಇನ್ನೂ ಎಲ್ಲಿ ಪ್ರೊಸಸ್ಸು? ಸದಾನಂದಗೌಡರು ಅಧಿವೇಶನದಲ್ಲೇ ಹೇಳಿದ್ದಾರೆ- ಎತ್ತಿನಹೊಳೆ ಯೋಜನೆ ಮಾಡಲು ಸಾಧ್ಯ ಇಲ್ಲ ಅಂತ. ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆ ಅತಿ ಶೀಘ್ರವಾಗಿ ಅನುಷ್ಠಾನ ಎಂದು ಘೋಷಣೆ ಮಾಡುತ್ತಾರೆ. ಈಗ ಮಾಜಿ ಮುಖ್ಯಮಂತ್ರಿಯಾಗಿ ಯೋಜನೆ ಜಾರಿ ಮಾಡುವುದಕ್ಕೆ ಆಗಲ್ಲ ಅಂತಾರೆ. ವೀರಪ್ಪ ಮೊಯಿಲಿಗೆ ರಾಜಕೀಯ ಪುನರ್ಜನ್ಮ ಕೊಟ್ಟ ಚಿಕ್ಕಬಳ್ಳಾಪುರ ಕ್ಷೇತ್ರದ ಜನತೆಗೆ ಅವರು ಹಿಂದೆ ಸುಳ್ಳು ಹೇಳಿದ್ದು ಸಾಕು. ಜನರನ್ನು ತಾತ್ಕಾಲಿಕವಾಗಿ ಖುಷಿ ಗೊಳಿಸುವುದೇ ಇವರ ಗುರಿ.
- 24 ಟಿಎಂಸಿ ನೀರು ತರುತ್ತಾರಂತಲ್ಲಾ, ಅನುಕೂಲ ಅಲ್ಲವೇ?
ನನ್ನ ಪಾಯಿಂಟ್ ಏನೆಂದರೆ, ಡಿಪಿಆರ್ ಇಲ್ಲದೆ ಟೆಂಡರ್ ಕರೆಯುವ ಹಾಗೇ ಇಲ್ಲ. ಹೀಗಾಗಿ ಇದು ಎಷ್ಟು ಬೋಗಸ್ ಎಂಬುದು ಅರಿವಾಗುತ್ತದೆ. ಅಷ್ಟೇ ಅಲ್ಲ, ಮೊನ್ನೆ ನೀರಾವರಿ ನಿಗಮದವರು ಮೀಟಿಂಗ್ ಮಾಡಿ ಎತ್ತಿನಹೊಳೆ ಯೋಜನೆ 8 ಸಾವಿರ ಕೋಟಿಯಿಂದ 12 ಸಾವಿರ ಕೋಟಿಗೆ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಎರಡು ಸಾವಿರ ಕೋಟಿಗೆ ಕರೆದಿದ್ದ ಟೆಂಡರ್ ಅನ್ನು ಕ್ಯಾನ್ಸಲ್ ಮಾಡಿ 3269.50 ಕೋಟಿಗೆ ಟೆಂಡರ್ ಕರೆದಿದ್ದಾರೆ. ಅದನ್ನೂ ಆಗಲೇ 3418 ಕೋಟಿಗಳಿಗೆ ಹೆಚ್ಚಿಸಿಕೊಂಡಿದ್ದಾರೆ. ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ ಒಟ್ಟಾರೆ ಅಚ್ಚುಕಟ್ಟು 24,530 ಚ.ಕಿಮೀ. ಇದರಿಂದ 2000 ಟಿಎಂಸಿ ನೀರು ಲಭ್ಯವಿದೆ. ಇದರಲ್ಲಿ ನಾವು 176.74 ಚ.ಕಿಮೀ ಪ್ರದೇಶವನ್ನು ಮಾತ್ರ ಬಳಸಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ. ಅಂದರೆ, ಅವರದ್ದೇ ಈ ಲೆಕ್ಕಾಚಾರದಲ್ಲಿ 14 ಟಿಎಂಸಿ ನೀರು ಸಿಗುತ್ತದೆ. ಮತ್ತೆ ಇವರು ಎಲ್ಲಿಂದ ತರುತ್ತಾರೆ 24 ಟಿಎಂಸಿ ನೀರು?
- ಅಂದರೆ, 24ಟಿಎಂಸಿ ನೀರು ಸಿಗುವುದಿಲ್ಲವೇ?
ಮಳೆಯ ಸ್ಪಷ್ಟ ಚಿತ್ರಣ ಯಾರಿಗೂ ಇಲ್ಲ, ಎಲ್ಲೂ ಮಳೆ ಗೇಜ್ ಮಾಡಿಲ್ಲ. ಅಲ್ಲದೆ ಎಂಟು ಬ್ಯಾರೇಜ್ ಕಟ್ಟುತ್ತೇನೆ ಅನ್ನುತ್ತಿದ್ದಾರೆ. ಈ ಬ್ಯಾರೇಜ್ ಸಣ್ಣ ಸಣ್ಣವು. ಅಂದರೆ ಯಾವ ಪ್ರಮಾಣದಲ್ಲಿ ನೀರು ಸಂಗ್ರಹ ಮಾಡುತ್ತೇವೆ ಎಂಬ ಮಾಹಿತಿಯೂ ಇವರಲ್ಲಿ ಇಲ್ಲ. 19 ಹೆಕ್ಟೇರ್ ಅರಣ್ಯದಲ್ಲಿ ಈ ಬ್ಯಾರೇಜ್ ನಿರ್ಮಿಸಲಾಗುತ್ತದೆ ಎನ್ನುತ್ತಾರೆ. ಇವು ಎಷ್ಟು ಸಣ್ಣವು ಎಂಬುದು ಇದರಿಂದ ಗೊತ್ತಾಗುತ್ತದೆ. ಅಲ್ಲದೆ ಇದಕ್ಕೆ 350 ಮೆಗಾವ್ಯಾಟ್ ವಿದ್ಯುತ್ ಬೇಕು. ಎಲ್ಲಿಂದ ತರುತ್ತಾರೆ. ಈ ಬ್ಯಾರೇಜ್ಗಳಿಂದ ನೀರು ಹೇಗೆ ಎತ್ತುತ್ತಾರೆ? ಎಲ್ಲ ಬೋಗಸ್ ಅಷ್ಟೇ.
- ಎತ್ತಿನಹೊಳೆಯಿಂದ ನೀರು ಬರುವುದಿಲ್ಲವೇ?
ಈಗ ಐದು ಪ್ಯಾಕೇಜ್ಗೆ ಟೆಂಡರ್ ಕರೆದಿದ್ದಾರೆ. ಇವರ ಟೆಂಡರ್ ಷರತ್ತು ಪ್ರಕಾರ, ಗುತ್ತಿಗೆದಾರನೇ ಸರ್ವೆ ಮಾಡಬೇಕು. ನೀರು ಎಷ್ಟು ಸಿಗುತ್ತದೆ ಎಂಬುದನ್ನು ಅವನೇ ಹೇಳಬೇಕು. ಅವನಿಗೆ ಮೊದಲೇ ದುಡ್ಡು ಕೊಟ್ಟುಬಿಡುತ್ತಾರೆ. ನೀರು ಸಿಗಲಿಲ್ಲ ಅಂದರೆ ಹಣ ವಾಪಸ್ ಪಡೆಯುತ್ತೀರಾ? ಇದೆಲ್ಲ ಸುಮ್ಮನೆ ಟೆಂಡರ್ ಕರೆದು ಕಮೀಷನ್ ಹೊಡೆಯುವ ತಂತ್ರ. 3418 ಕೋಟಿಗೆ ಟೆಂಡರ್ ಕರೆದು 10 ಪರ್ಸೆಂಟ್ ಕಮಿಷನ್ ಹೊಡೆಯುವುದಷ್ಟೇ ಈ ಸರ್ಕಾರದ ಉದ್ದೇಶ.
- ನಿಮ್ಮಿಂದ ನೀರು ಕೊಡಲು ಸಾಧ್ಯವೇ?
ಪರಮಶಿವಯ್ಯ ವರದಿ, ಎತ್ತಿನಹೊಳೆ ಯೋಜನೆ ಎಲ್ಲ ಆಗಲ್ಲ ಅಂತಾ ಗೊತ್ತಿತ್ತು. ಅದಕ್ಕೇ ನಾನು ಭದ್ರಾ ಮೇಲ್ದಂಡೆ ಯೋಜನೆ ಪ್ರಾರಂಭಿಸಿದೆ. ಕೆ.ಸಿ. ರೆಡ್ಡಿ ಸಮಿತಿಯ ವರದಿಯಂತೆ ತುಂಗಾ ನದಿಯಿಂದ 15 ಹಾಗೂ ಭದ್ರಾ ಜಲಾಶಯದಿಂದ 21.50 ಟಿಎಂಸಿ ನೀರು ತರುವ 4150 ಕೋಟಿ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಈಗಾಗಲೇ 763 ಕೋಟಿ ವೆಚ್ಚವಾಗಿದೆ. ಆದರೆ ಕೆಲಸ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಏಕೆಂದರೆ ಸರ್ಕಾರಕ್ಕೆ ಬದ್ಧತೆಯೇ ಇಲ್ಲ. ಈ ಬಯಲುಸೀಮೆ ಜನರಿಗೆ ನೀರು ಕೊಡುವ ಯೋಜನೆ ಇದೆ. 12 ತಿಂಗಳಲ್ಲಿ ಅವರಿಗೆ ನೀರು ಕೊಡಬಹುದು. ಅದಾಗಬೇಕಾದರೆ ಕೋಲಾರ-ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಮ್ಮನ್ನು ಗೆಲ್ಲಿಸಲಿ. ಅಲ್ಲಿ ಯಾವುದೇ ಸರ್ಕಾರ ಇರಲಿ. ನೀರು ಕೊಡಿಸುವ ಕೆಲಸ ನಾನು ಮಾಡ್ತೀನಿ. 12 ತಿಂಗಳಲ್ಲಿ ನೀರು ಕೊಡಿಸಲು ಆಗಲಿಲ್ಲ ಅಂದರೆ ಎಲ್ಲರಿಂದಲೂ ರಾಜಿನಾಮೆ ಕೊಡಿಸುತ್ತೇನೆ. ನಾನೂ ರಾಜಕೀಯ ನಿವೃತ್ತಿ ಹೊಂದುತ್ತೇನೆ.
- ಎತ್ತಿನಹೊಳೆ ಯೋಜನೆಗೆ ಸಮ್ಮತಿ ಇದೆಯೇ?
ಎತ್ತಿನಹೊಳೆ ಯೋಜನೆಗೆ ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಿನದಾಗಿ ದಕ್ಷಿಣ ಕನ್ನಡದಲ್ಲಿ ಹೆಚ್ಚು ಆತಂಕ ಸೃಷ್ಟಿ ಮಾಡಿದೆ. ನಾನು ಇಲ್ಲಿ ಒಂದನ್ನು ಸ್ಪಷ್ಟಪಡಿಸುತ್ತೇನೆ, ಕರಾವಳಿ ಭಾಗದ ಪಶ್ಚಿಮಘಟ್ಟಕ್ಕಾಗಲೀ, ಮೀನುಗಾರರಿಗಾಗಲಿ, ಜನರಿಗಾಗಲೀ ಯಾವುದೇ ರೀತಿಯ ತೊಂದರೆ ಆಗುವ ಯೋಜನೆಗೆ ನನ್ನ ಪೂರ್ತಿ ವಿರೋಧ ಇದೆ. ಅದರಲ್ಲಿ ಎರಡು ಮಾತಿಲ್ಲ. ನಾನು ಅದೇ ಊರಿನವ. ಅಲ್ಲೇ ಹುಟ್ಟಿದವ, ಅಲ್ಲೇ ಸಾಯುವವ. ನಾವು ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಈ ಯೋಜನೆ ಕೈಗೆತ್ತಿಕೊಂಡಿದ್ದೇವೆ. ನಾನೇ ಇದಕ್ಕೆ ಅನುಮೋದನೆ ನೀಡಿದ್ದು, ಎತ್ತಿನ ಹೊಳೆ ಯೋಜನೆಗೆ ನಾನು ಬದ್ಧ.
- ನೇತ್ರಾವತಿ ನದಿ ತಿರುವು ಮಾಡಿದರೆ ತೊಂದರೆ ಇಲ್ಲವೇ?
ಪರಮಶಿವಯ್ಯ ಅವರ ವರದಿಯ ನೇತ್ರಾವತಿ ತಿರುವು ಹಾಗೂ ಎತ್ತಿನಹೊಳೆ ಯೋಜನೆಗೆ ಯಾವುದೇ ಸಂಬಂಧ ಇಲ್ಲ. ನೇತ್ರಾವತಿ ನದಿ ತಿರುವು ಅವೈಜ್ಞಾನಿಕ ಎಂಬುದು ಮುಖ್ಯಮಂತ್ರಿಯಾಗಿ ತಜ್ಞರ ಜತೆ ಸಮಾಲೋಚನೆ ಮಾಡಿದಾಗ ತಿಳಿದುಬಂದಿದೆ. ಆದರೆ, ಎತ್ತಿನಹೊಳೆ ಯೋಜನೆಯಿಂದ ದಕ್ಷಿಣ ಕನ್ನಡದ ಜಿಲ್ಲೆಯ ಜನತೆ ಅಥವಾ ಪಶ್ಚಿಮಘಟ್ಟಕ್ಕೆ ಯಾವುದೇ ತೊಂದರೆಯಾಗದು. ಎತ್ತಿನಹೊಳೆ ಯೋಜನೆ ಸಮುದ್ರ ಮಟ್ಟದಿಂದ ಸುಮಾರು 800 ಮೀ.ಮೇಲೆ ಬೀಳುವ ಮಳೆಯನ್ನು ತೊರೆಗಳ ಮೂಲಕ ಸಂಗ್ರಹ ಮಾಡಿ, ಮಳೆಗಾಲದ 100 ದಿನಗಳಲ್ಲಿ ಸಂಗ್ರಹವಾಗುವ ನೀರಿನಲ್ಲಿ 24 ಟಿಎಂಸಿ ನೀರು ಸರಬರಾಜು ಮಾಡುವುದು ಉದ್ದೇಶ. ಸಕಲೇಶಪುರದಿಂದ ನೀರು ಸರಬರಾಜು ಮಾಡಿ ಬೆಂ. ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳನ್ನೂ ತುಂಬಿಸುವ ಉದ್ದೇಶವಿದೆ. ಇದು ಕುಡಿಯುವ ನೀರು ಕೊಡುವುದಕ್ಕಷ್ಟೇ.
- ಪಶ್ಚಿಮಘಟ್ಟಕ್ಕೆ ತೊಂದರೆ ಇಲ್ಲವೇ?
ಕಳೆದ ವರ್ಷ ಸುಮಾರು 3000 ಟಿಎಂಸಿ ನೀರು ದಕ್ಷಿಣ ಕನ್ನಡದಲ್ಲಿ ಸಮುದ್ರಕ್ಕೆ ಹರಿದುಹೋಗಿದೆ. ಇದರಲ್ಲಿ ನಾವು ಕೇವಲ 24 ಟಿಎಂಸಿ ನೀರನ್ನು ಅದೂ ಮಳೆಗಾಲದಲ್ಲಿ ತರಲಾಗುತ್ತದೆ. ಜತೆಗೆ ನೆರೆಯನ್ನೂ ಕಡಿಮೆ ಮಾಡಬಹುದು. ಪಂಪಿಂಗ್ ಹೇಗೆ? ಪಶ್ಚಿಮಘಟ್ಟದಲ್ಲಿ ಅರಣ್ಯ ನಾಶ ಎಷ್ಟಾಗುತ್ತದೆ ಎಂಬ ಸಂಶಯ ಇದೆ. 24 ಟಿಎಂಸಿ ನೀರು ತಂದರೆ ಸಮುದ್ರ ಸೇರುವ ಪ್ರದೇಶದಲ್ಲಿ ಮೀನು ಮೊಟ್ಟೆ ಇಡಲು ತೊಂದರೆಯಾಗುತ್ತದೆ ಎಂಬ ಅನುಮಾನವಿದೆ. ಆದರೂ ಈ ಮೂರೂ ವಿಶೇಷ ಪ್ರಶ್ನೆಗಳಿಗೂ ಯಾವುದೇ ತೊಂದರೆ ಇಲ್ಲ ಎಂಬುದೇ ಉತ್ತರ.
- ರಾಜಕಾರಣಿಗಳಿಂದ ಯೋಜನೆಗೆ ಹಿನ್ನಡೆಯಾಗಿದೆಯೇ?
ಪಶ್ಚಿಮ ಘಟ್ಟದ ಸಕಲೇಶಪುರ ಭಾಗದ ತೊರೆಗಳಲ್ಲಿ ಸೇರಿಕೊಳ್ಳುವ ನೀರು ತರಲಾಗುತ್ತದೆ. ಸಂಶಯಗಳಿದ್ದರೆ ಈ ತೊರೆಗಳನ್ನು ಬಂದು ನೋಡಬಹುದು. ಎತ್ತಿನಹೊಳೆ ಯೋಜನೆ ಎಂದರೆ ಐದು ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಸಿಗಬೇಕು ಎಂಬುದು. ಎಲ್ಲರಿಗೂ ಗೊತ್ತಿದೆ, ಕೋಲಾರ-ಚಿಕ್ಕಬಳ್ಳಾಪುರದಲ್ಲಿ 1000-1500 ಅಡಿ ಕೊರೆದರೂ ನೀರು ಸಿಗುವುದಿಲ್ಲ. 800 ಅಡಿಗೂ ಕೆಳಗೆ ಹೋದರೆ ನೀರು ಕುಡಿಯಲು ಉತ್ತಮ ಅಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯ ಶೇ.65 ಪ್ರದೇಶದಲ್ಲಿ ಕುಡಿಯುವ ನೀರು ಇಂದು ಕಲುಷಿತ. ಆದ ಕಾರಣ, ರಾಜ್ಯದ ಜನತೆಯ ಹಿತಾಸಕ್ತಿ ಕಾಪಾಡಿಕೊಳ್ಳುವ ಸಲುವಾಗಿ, ಬೇರೆ ಭಾಗದ ಜನರಿಗೆ ತೊಂದರೆಯಾಗದೆ ಅವರಿಗೆ ಕುಡಿಯುವ ನೀರನ್ನು ಕೊಡುವುದು ಜನಪ್ರತಿನಿಧಿಗಳ ಕರ್ತವ್ಯ.
- ಯೋಜನೆಗೆ ವೀರಪ್ಪ ಮೊಯಿಲಿ ಅವರೇ ಕಾರಣವಂತೆ?
ಎತ್ತಿನಹೊಳೆ ಇಷ್ಟೊಂದು ದೊಡ್ಡ ಸಂಶಯದ ಗೂಡಾಗಲು ಕಾರಣ ಇದರ ಸಮಗ್ರ ಅಧ್ಯಯನದ ಅರಿವಿಲ್ಲ. ವಿರೋಧ ಮಾಡುತ್ತಿರುವವರಿಗೆ ಈ ಯೋಜನೆ ಬಗ್ಗೆ ಅರಿವಿಲ್ಲದಿರುವುದು. ಜಿಲ್ಲಾ ಪಂಚಾಯಿತಿಗೆ ನಾನು ಮಾಹಿತಿ ನೀಡಿ, ಅಲ್ಲಿ ರೆಸಲ್ಯೂಷನ್ ಕೂಡ ಆಗಿದೆ. ಆದರೆ ಯೋಜನೆಗೆ 'ಪೊಲಿಟಿಕಲ್ ಕಲರ್' ಬಂದಿದೆ. ಈ ಭಾಗದಲ್ಲಿ ಬಂದರೆ ವೀರಪ್ಪ ಮೊಯಿಲಿ, ಏಜೆನ್ಸಿ ಫಿಕ್ಸ್ ಆಗದೆ ಕಲ್ಲು ಹಾಕಲು ಮುಂದಾಗಿದ್ದಾರೆ. ಅಲ್ಲಿ ಹೋದರೆ, ಅದು ಸದಾನಂದಗೌಡರ ಕಾಲದಲ್ಲಿ ಆಗಿದ್ದು ಎನ್ನುತ್ತಾರೆ. ಈ ಬಣ್ಣ ಸರಿಯಲ್ಲ. ವೀರಪ್ಪ ಮೊಯಿಲಿ ಅವರು ಡೋಂಗಿತನ ಮಾಡುವುದನ್ನು ನಿಲ್ಲಿಸಬೇಕು.
- ನೀವು ಆತುರಾತುರವಾಗಿ ಅನುಮೋದನೆ ಕೊಟ್ಟಿರಿ ಅಲ್ಲವೇ?
ನಾನು ಐದು ಜಿಲ್ಲೆಗಳ ಜನರಿಗೆ ನೀರು ಕೊಡಬೇಕು ಎಂಬ ಉದ್ದೇಶದಿಂದ ಸಿಎಂ ಕುರ್ಚಿಯಿಂದ ಇಳಿಯುವ ಸಂದರ್ಭದಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿ. ನಂತರ ನಮ್ಮ ಜಗದೀಶ್ ಶೆಟ್ಟರು, ವಿಸ್ತೃತವಾಗಿ ಪರಿಶೀಲಿಸಿದರು. ನಾನು 400 ಕೋಟಿ ಪ್ರಾರಂಭಿಕವಾಗಿ ಕೊಟ್ಟಿದ್ದೆ. ಅವರು 800 ಕೋಟಿಗೆ ವಿಸ್ತರಿಸಿದರು. ಅಲ್ಲಿಗೆ ಒಂದು ಹಂತ ಮುಗಿದಿತ್ತು. ಹೊಸ ಸರ್ಕಾರ ಬಂದು 8 ತಿಂಗಳಾಯಿತು. ಯೋಜನೆ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದ ವಿಳಂಬವಾಗಿದೆ.
- ಟೆಂಡರ್ ಫೈನಲ್ ಆಗದೆ, ಯೋಜನೆ ಕಾಮಗಾರಿ ಪ್ರಾರಂಭ ಸಾಧ್ಯವೇ?
ಟೆಂಡರ್ ಕರೆಯುವ ಮುನ್ನವೇ 'ಇನ್ ಡೀಟೇಲ್' ವರದಿ ತಯಾರಿಸಿದ್ದಾರೆ. ಇದಕ್ಕೆ ಆಡಳಿತಾತ್ಮಕ ಸಮ್ಮತಿ ನೀಡುವ ಮುನ್ನ ತಾಂತ್ರಿಕ ಸಲಹೆ-ಅನುಮತಿ ಪಡೆಯಲಾಗಿದೆ. ಡಿಪಿಆರ್ ಆಗದೆ ಈ ಹಂತಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಇದು ಕುಡಿಯುವ ನೀರಿನ ಯೋಜನೆಯಾಗಿದ್ದರಿಂದ ಅರಣ್ಯ ಇಲಾಖೆ ಸಮ್ಮತಿ ಅಗತ್ಯವಿಲ್ಲ. ಇದರ ಒಟ್ಟಾರೆ ವೆಚ್ಚದ ಬಗ್ಗೆ ಅಂದಾಜು ಮಾಡಿ,ಅದನ್ನು ಮುಂದೆ ಪರಿಷ್ಕರಿಸಿಕೊಳ್ಳುವ ಅನುಕೂಲದ ಜತೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಟೆಂಡರ್ ಕರೆದು ಡಿಪಿಆರ್ ಅನ್ನೂ ಕಾಮಗಾರಿ ನಡೆಯುವ ಏಜೆನ್ಸಿಯೇ ಒದಗಿಸಬೇಕು. ಇದು 2009ರ ನಂತರದ ಪ್ರಕ್ರಿಯೆ.
- ಕೆರೆ ಮಂಜುನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

