

ಇದು 2005ರ ಮಾತು. ನಾನಾಗ 'ವಿಜಯ ಕರ್ನಾಟಕ'ದಲ್ಲಿದ್ದೆ. ಅದೊಂದು ಮಧ್ಯಾಹ್ನ ಸಂಪಾದಕರಿಂದ ಕರೆ ಬಂತು. ಛೇಂಬರಿನಲ್ಲಿ ನಟ ಸಿ.ಆರ್. ಸಿಂಹ ಇದ್ದರು. ಆಗ, ಸಂಪಾದಕರಾಗಿದ್ದ ವಿಶ್ವೇಶ್ವರಭಟ್ ಹೇಳಿದರು:'ಕಳೆದ ವಾರ ಪ್ರಕಟವಾಗಿರುವ ನಿಮ್ಮ ಬರಹ ಸಿಂಹನಿಗೆ ಬಹಳ ಇಷ್ಟವಾಯ್ತಂತೆ. ನಿಮಗೆ ಅಭಿನಂದನೆ ಹೇಳಿಹೋಗಲು ಬಂದಿದ್ದಾರೆ!'
ನಾನು, ಥ್ಯಾಂಕ್ಯು ಸರ್ ಎಂದು ಕೈ ಮುಗಿಯುತ್ತಿದ್ದಂತೆಯೇ ಸಿಂಹ ಎದ್ದು ನಿಂತರು. ತುಂಬಾ ಚೆನ್ನಾಗಿ ಬರೀತೀರ, ಭೇಷ್ ಅಂದರು. ನಂತರ ಒಂದು ಪಾರ್ಕರ್ ಪೆನ್ ಕೊಟ್ಟು-'ಈ ಪುಟ್ಟ ಉಡುಗೊರೆ ನಿಮಗೆ' ಅಂದರು. ಬೀಳ್ಕೊಡುವ ಮುನ್ನ, ತಮ್ಮ ನಂಬರ್ ಕೊಟ್ಟು- 'ಮನೆಗೆ ಹೋದ ಮೇಲೆ ನಿಮ್ಮ ಶ್ರೀಮತಿಯಿಂದ ಫೋನ್ ಮಾಡಿಸಿ' ಅಂದರು. ಮರುದಿನವೇ ಫೋನ್ ಮಾಡಿದರೆ ನನ್ನ ಹೆಂಡತಿಗೆ ಸಿಂಹ ಹೇಳಿದ್ದು: 'ನೋಡಮ್ಮಾ ಮಣಿಕಾಂತ ಎಂಬ ಹೆಸರು ನಿಮ್ಮ ಯಜಮಾನರಿಗೆ ಅಷ್ಟಾಗಿ ಹೊಂದಿಕೆಯಾಗಲ್ಲ! ಆ ಹೆಸರು ನನಗೆ ಕರೆಕ್ಟಾಗಿ ಹೊಂದಿಕೆಯಾಗುತ್ತೆ!' ಅವರು ಏನು ಹೇಳುತ್ತಿದ್ದಾರೆಂದೇ ತಿಳಿಯದೆ ನಾವೆಲ್ಲ ಕಕ್ಕಾಬಿಕ್ಕಿಯಾಗಿದ್ದಾಗಲೇ ಸಿಂಹ ಹೇಳಿದರು: 'ಕಾಂತ ಎಂದರೆ ಗಂಡ/ಯಜಮಾನ ಎಂದು ಅರ್ಥವಿದೆ. ನನ್ನ ಹೆಂಡತಿಯ ಹೆಸರು ಶಾರದಾಮಣಿ. ಕುಟುಂಬದವರೆಲ್ಲ ಆಕೆಯನ್ನು ಶಾರ್ಟ್ ಆಗಿ ಮಣಿ ಅಂತಾನೇ ಕರೆಯೋದು. ಶಾರದಾ ಮಣಿಯ ಗಂಡ ಸಿಂಹ ಆಗಿರುವುದರಿಂದ ಮಣಿಕಾಂತ ಎಂಬ ಹೆಸರು ಹೆಚ್ಚಾಗಿ ನನಗೇ ತಾನೇ ಸೂಟ್ ಆಗೋದು?'
ನಟ ಸಿ.ಆರ್.ಸಿಂಹ ಅವರು, ನಮ್ಮ ಮನೆ ಮತ್ತು ಮನಸ್ಸಿಗೆ ಹತ್ತಿರವಾದದ್ದು ಹೀಗೆ.
ಆನಂತರದ ದಿನಗಳಲ್ಲಿ, ಬಹುಬೇಗನೆ ಪರಮಾಪ್ತರಾಗಿಬಿಟ್ಟರು ಸಿಂಹ. ಕೆಲವೊಮ್ಮೆ,ಅಂಕಣ ತಲುಪಿಸುವ ಉದ್ದೇಶದಿಂದ 'ವಿಜಯ ಕರ್ನಾಟಕ'ಕ್ಕೆ ಬರುತ್ತಿದ್ದರು. ಆಫೀಸಿನ ಹೊರಗೆ ಬಂದು ಮಾತಿಗೆ ನಿಂತರೆ, ಗಂಟೆಗಳು ಕಳೆದದ್ದೇ ಗೊತ್ತಾಗುತ್ತಿರಲಿಲ್ಲ. ನಾಟಕ, ಸಿನಿಮಾ, ಸಾಹಿತ್ಯ, ವಿಜ್ಞಾನ, ಸಂಗೀತ... ಈ ಎಲ್ಲ ಕ್ಷೇತ್ರದ ವಿಷಯಗಳ ಬಗ್ಗೆ ಪಾಂಡಿತ್ಯಪೂರ್ಣವಾಗಿ ಮಾತಾಡುವ ಕಲೆ ಸಿಂಹ ಅವರಿಗೆ ಸಿದ್ಧಿಸಿತ್ತು. ತಮ್ಮ ಸಮಕಾಲೀನರು ಹಾಗೂ ತಾವು ನೋಡಿದ ಹಿರಿಯರ ಬಗ್ಗೆ ಮಾತಾಡಲು ಶುರು ಮಾಡಿದರಂತೂ, ಅವರಂತೆಯೇ ಅಭಿನಯಿಸುತ್ತಲೇ ಇಡೀ ಸಂದರ್ಭವನ್ನು ತುಂಬಾ ಆಪ್ತವಾಗಿ ಸಿಂಹ ಕಟ್ಟಿ ಕೊಡುತ್ತಿದ್ದರು.
ಅದು ವಿಶ್ವಕಪ್ ಫುಟ್‌ಬಾಲ್ ಪಂದ್ಯಗಳು ಆರಂಭವಾಗಿದ್ದ ಸಂದರ್ಭ. ಆಗಲೇ, ನನ್ನೂರು ನಾಗಮಂಗಲಕ್ಕೆ, ಅಲ್ಲಿನ ಕನ್ನಡ ಸಂಘದ ಕಾರ್ಯಕ್ರಮಕ್ಕೆ ಸಿಂಹ ಅವರೊಂದಿಗೆ ಹೋಗಬೇಕಾಗಿ ಬಂತು. ಹೊರಡುವ ಮೊದಲೇ ಸಿಂಹ ಹೇಳಿದರು: 'ರಾತ್ರಿ ಹತ್ತೂವರೆಗೆ ಬೆಂಗಳೂರಿಗೆ ವಾಪಸ್ ಆಗಲೇಬೇಕು. ಹನ್ನೊಂದು ಗಂಟೆಯಿಂದ ಫುಟ್‌ಬಾಲ್ ಮ್ಯಾಚ್ ಶುರುವಾಗುತ್ತೆ. ನನ್ನ ಮಗ ಋತ್ವಿಕ್ ಜೊತೆ ಬೆಟ್ ಕಟ್ಟಿದ್ದೀನಿ. ಊಟ ತಪ್ಪಿಸಿದ್ರೂ ಪರವಾಗಿಲ್ಲ. ಮ್ಯಾಚ್ ತಪ್ಪಿಸ್ಕೋಬಾರದು...' ಕಾರು ನೆಲಮಂಗಲ ದಾಟುತ್ತಿದ್ದಂತೆಯೇ ಕೇಳಿಕೊಂಡೆ: 'ಸಾರ್, ತಕ್ಷಣಕ್ಕೆ ನೆನಪಾಗುವ ಸ್ವಾರಸ್ಯಕರ ಘಟನೆಗಳನ್ನು ನೆನಪಿಸಿಕೊಂಡು ಹೇಳಿ. ಪ್ರಯಾಣ ಬೋರ್ ಆಗದಿರುವಂತೆ ಮಾಡಲು ಅದರಿಂದ ಸಹಾಯ ಆಗುತ್ತೆ...' ಆಗ, ಸಿಂಹ ಹೇಳಿದ್ದ ಪ್ರಸಂಗಗಳ ವಿವರವನ್ನು ಅವರದೇ ಮಾತುಗಳಲ್ಲಿ ಕೇಳಿಸಿಕೊಳ್ಳಿ:
ಮೈಸೂರಿನಲ್ಲಿ ರಸಋಷಿ ಕುವೆಂಪು ನಾಟಕ ಪ್ರದರ್ಶನವಿದ್ದ ಸಂದರ್ಭ. ಅದೇ ಕಾರ್ಯಕ್ರಮಕ್ಕೆ ವರನಟ ಡಾ. ರಾಜ್‌ಕುಮಾರ್ ಕೂಡ ಬರುವವರಿದ್ದರು. ಸಂಘಟಕರು, ರಾಜ್ ಅವರ ಬಳಿ ಹೋಗಿ-'ಸಾರ್, ನೀವು ಸಿಂಹ ಅವರನ್ನು ಸನ್ಮಾನಿಸಬೇಕು' ಅಂದರಂತೆ. ಅದಕ್ಕೆ ರಾಜ್, ನಾಟಕ ಆರಂಭವಾದ ನಂತರ ಸಿಂಹ ಅವರು ಕುವೆಂಪುನೇ ಆಗಿಬಿಟ್ಟಿರುತ್ತಾರೆ. ಆಗ ಸನ್ಮಾನಿಸುವುದು ಬೇಡ. ಪ್ರದರ್ಶನ ಶುರುವಾಗುವ ಮೊದಲೇ ಸನ್ಮಾನಿಸೋಣ' ಅಂದರಂತೆ. ಸಂಜೆ, ಮತ್ತೇನೋ ಕಾರಣದಿಂದ ರಾಜ್‌ಕುಮಾರ್ ಅವರು ಬರುವುದು ತಡವಾಗಿದೆ. ಬಹುಶಃ ಅಣ್ಣಾವ್ರು ಬರುವುದಿಲ್ಲ ಎಂದುಕೊಂಡೇ ನಾನು ಮೇಕಪ್‌ಗೆ ಕೂತುಬಿಟ್ಟೆ. ಅದು ಮುಗಿಯುತ್ತಿದ್ದಂತೆಯೇ ಗದ್ದಲ ಶುರುವಾಯಿತು. ಯೆಸ್. ಅಣ್ಣಾವ್ರು ಬಂದಿದ್ದರು. ಕಾರ್ಯಕ್ರಮ ನಿರೂಪಕರು ಘೋಷಿಸಿ ಬಿಟ್ಟರು: 'ಈಗ ಸಿಂಹ ಅವರಿಗೆ ಸನ್ಮಾನ!' ಮೇಕಪ್ ಆಗಿ ಹೋಗಿದೆ. ಈಗ ಸನ್ಮಾನ ಬೇಡ. ನಾಟಕ ಶುರು ಮಾಡೋಣ. ಹಾಗಂತ ಅನೌನ್ಸ್ ಮಾಡಿ ಎಂದೆಲ್ಲಾ ಗ್ರೀನ್ ರೂಮ್‌ನಲ್ಲಿ ನಿಂತುಕೊಂಡೇ ಕಾರ್ಯಕ್ರಮ ನಿರೂಪಕರಿಗೆ ತಿಳಿಸಿದ್ದಾಯ್ತು. ಅವರಿಗೆ ಏನೂ ಅರ್ಥವಾಗಲಿಲ್ಲ. ಅಣ್ಣಾವ್ರು ವೇದಿಕೆಯ ಮೇಲೆ ಹಾರ ಹಿಡಿದುಕೊಂಡು ನಿಂತಿದ್ದರೂ ಸಿಂಹ ಯಾಕೆ ಬರುತ್ತಿಲ್ಲ ಎಂಬ ಧಾವಂತ ಅವರದು. ಅದೇ ಅವಸರದಲ್ಲಿ ಅವರು ಮತ್ತೆ ಮತ್ತೆ ಘೋಷಿಸಿದರು: 'ಈಗ ಸನ್ಮಾನ ಕಾರ್ಯಕ್ರಮ. ಸಿಂಹ ಅವರು ದಯವಿಟ್ಟು ವೇದಿಕೆಗೆ ಬರಬೇಕು...'
ಆ ವೇಳೆಗೆ ನಾನು ಕುವೆಂಪು ಅವರ ವೇಷದಲ್ಲಿದ್ದೆನಷ್ಟೇ; ಹಾಗಾಗಿ, ಒಂದೊಂದೇ ಹೆಜ್ಜೆಯಿಡುತ್ತಾ ನಿಧಾನವಾಗಿ ವೇದಿಕೆಗೆ ಬಂದೆ. ರಾಜ್, ಕ್ಷಣಕಾಲ ಮೂಕವಿಸ್ಮಿತರಾದರು. ಕೊರಳಿಗೆ ಹಾರಬೇಕಿದ್ದ ಹಾರವನ್ನು, ಸುಮ್ಮನೇ ನನ್ನ ಕೈಗಿಟ್ಟು ನಮಸ್ಕರಿಸಿ ನಿಂತು ಬಿಟ್ಟರು. ಆನಂತರದಲ್ಲಿ ಅವರು ಉದ್ಘರಿಸಿದ್ದು: 'ಮಹಾಕವಿ ಕುವೆಂಪು ಅವರನ್ನು ಸನ್ಮಾನಿಸಲು ನಾನೆಷ್ಟರವನು?'
ಜಿ.ವಿ. ಅಯ್ಯರ್ ನಿರ್ದೇಶನದ 'ಭಗವದ್ಗೀತೆ' ಸಿನಿಮಾ ಆಗಷ್ಟೇ ಬಿಡುಗಡೆಯಾಗಿತ್ತು. ಚಿತ್ರ ಪ್ರದರ್ಶನದ ನಂತರ ಪ್ರಶ್ನೋತ್ತರ ಕಾರ್ಯಕ್ರಮವೂ ಇತ್ತು. ಆಗ ಒಬ್ಬಾತ ಹೇಳಿಯೇ ಬಿಟ್ಟ: 'ಸ್ವಾಮೀ, ನಿಮ್ಮ ಸಿನಿಮಾ ನನಗೆ ಏನೇನೂ ಅರ್ಥವಾಗಲಿಲ್ಲ...' ಅದಕ್ಕೆ ಅಯ್ಯರ್ ಉತ್ತರಿಸಿದ್ದು ಹೀಗೆ: 'ಭಗವದ್ಗೀತೇನ ಕೃಷ್ಣ ಪರಮಾತ್ಮ ಬೋಧಿಸಿದ್ದು 5000 ವರ್ಷಗಳ ಹಿಂದೆ. ಈ ಐದು ಸಾವಿರ ವರ್ಷದಲ್ಲಿ ಅದನ್ನು ಒಬ್ಬನೂ ಅರ್ಥಮಾಡಿಕೊಳ್ಳಲಿಲ್ಲ. ದೇವರು ಹೇಳಿದಾಗಲೇ ಅರ್ಥ ಆಗದೇ ಇರೋದು ನಾನು ಹೇಳಿದಾಗ ನಿನಗೆ ಅರ್ಥ ಆಗೋಕೆ ಹೇಗಯ್ಯ ಸಾಧ್ಯ?'
ಅದೊಮ್ಮೆ ಮುಂಬಯಿಯ ಮಾತುಂಗಾದಲ್ಲಿರುವ ಕನ್ನಡ ಸಂಘದಿಂದ ತುಘಲಕ್ ನಾಟಕ ಪ್ರದರ್ಶನಕ್ಕೆ ಕರೆ ಬಂತು. ಇನ್ನೇನು ನಾಟಕ ಆರಂಭಿಸಬೇಕು ಅನ್ನುವಷ್ಟರಲ್ಲಿಯೇ ಗ್ರೀನ್ ರೂಮಿಗೆ ಬಂದರು ಧಾರವಾಡದ ಹಿರಿಯಜ್ಜ ಜಿ.ಬಿ.ಜೋಶಿ. ಇದೇನ್ಸಾರ್ ನೀವಿಲ್ಲಿ? ಯಾವಾಗ ಬಂದಿರಿ ಅಂದರೆ, ಬೆಳಗ್ಗೆ ಬಂದೆ. ನಿನ್ನ ನಾಟಕ ನೋಡೋದಕ್ಕೆ ಬಂದೆ ಕಣೋ ಅಂದರು! ಅಯ್ಯೋ, ಆಗಲೇ ನೋಡಿದ್ದೀರಲ್ಲಾ ಸಾರ್?' ಅಂದರೆ- ಹೌದು ಹನ್ನೆರಡು ಸರ್ತಿ ನೋಡಿದ್ದೀನಿ. ಹದಿಮೂರನೇ ಬಾರಿ ನೋಡಬೇಕು ಅನ್ನಿಸ್ತು. ಧಾರವಾಡದಿಂದ ಹೊರಟು ಬಂದೆ' ಅಂದರು!
ಮೇಲೆ ವಿವರಿಸಿದ ಒಂದೊಂದು ಪ್ರಸಂಗ ವಿವರಿಸುವಾಗಲೂ ಸಿಂಹ ಭಾವಪರವಶರಾಗುತ್ತಿದ್ದರು. ತರಾತುರಿಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದಾಗ ಕೇಳಿದೆ: 'ಸಾರ್, ಚಿತ್ರನಟ ಆಗುವುದಕ್ಕೂ ಮೊದಲು ಸರ್ಕಾರಿ ನೌಕರ ಆಗಿದ್ದವರು ನೀವು. ಆ ಸಂದರ್ಭದ ಒಂದೆರಡು ಸ್ವಾರಸ್ಯಕರ ಮಾಹಿತಿ ಹೇಳಿ...' ಈ ಮಾತು ಕೇಳಿದ್ದೇ ಸಿಂಹರ ಕಂಗಳು ಮಿನುಗಿದವು. ಅವರು ಹೇಳಿದರು: 'ವಾರ್ತಾ ಇಲಾಖೆಯ ಸಂಗೀತ ನಾಟಕ ವಿಭಾಗದಲ್ಲಿ ನನಗೆ ನೌಕರಿಯಿತ್ತು. ನನ್ನ ಸೀನಿಯರ್ ಕೊಲೀಗ್ ಯಾರು ಗೊತ್ತಾ? ನಟ ಲೋಕೇಶ್. ಅವರ ಮನೆ ಶಿವಾಜಿನಗರದ ಸಮೀಪವಿತ್ತು. ಅಲ್ಲಿಂದ ನಮ್ಮ ಆಫೀಸಿಗೆ ಹತ್ತು ನಿಮಿಷದ ಪಯಣ. ಲೋಕೇಶ್, ನನ್ನ ಪಾಲಿಗೆ ಹೋಗೋ, ಬಾರೋ ಫ್ರೆಂಡು. ಅವನೊಟ್ಟಿಗೆ ಆಫೀಸಿಗೆ ಹೋಗೋಣ ಎಂಬ ಆಸೆಯಿಂದ ಬೆಳಿಗ್ಗೆ ಹತ್ತು ಗಂಟೆಗೆ ಅವರ ಮನೆಗೆ ಹೋದರೆ, ಪುಣ್ಯಾತ್ಮ ಸುಖ ನಿದ್ರೆಯಲ್ಲಿರುತ್ತಿದ್ದ. ಅವರ ಮನೆಯವರು- 'ಲೋಕೂ, ಸಿಂಹ ಬಂದಿದ್ದಾನೆ ನೋಡಪ್ಪಾ' ಎಂದರೆ ಅವನು ಕಣ್ಣುಜ್ಜಿಕೊಂಡು ಬಂದು- 'ಏನೋಲೋ, ಬೆಳಗ್ಗೆ ಬೆಳಗ್ಗೇನೇ ಬಂದು ಬಿಟ್ಟಿದೀಯಲ್ಲ, ಏನ್ಸಮಾಚಾರ?' ಅನ್ನೋನು. ಮಹರಾಯಾ, ಹತ್ತೂವರೆಗೆ ಆಫೀಸಿದೆ ಕಣೋ. ಹೊರಡೋ ಅಂದರೆ -'ನಿಂದೊಳ್ಳೇ ಕಾಟ ಆಯ್ತಲ್ಲೋ' ಎಂದು ಗೊಣಗುತ್ತಲೇ ರೆಡಿ ಆಗುತ್ತಿದ್ದ...
ಮತ್ತೊಂದು ಪ್ರಸಂಗದ ವಿವರ ಹೀಗೆ: ಆ ದಿನಗಳಲ್ಲಿ ವಾರ್ತಾ ಇಲಾಖೆಯ ಸಹಕಾರದಲ್ಲಿ ನೃತ್ಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು. ಅಂಥ ಸಂದರ್ಭಗಳಲ್ಲಿ ಕಾರ್ಯಕ್ರಮ ನಿರೂಪಣೆಯ ಹೊಣೆ ನನ್ನ ಹೆಗಲಿಗೆ ಬೀಳುತ್ತಿತ್ತು. ಪ್ರದರ್ಶನಕ್ಕೂ ಮುಂಚೆ ಒಂದೆರಡು ನಿಮಿಷ ಮಾತಾಡುವುದಷ್ಟೇ ನನ್ನ ಕೆಲಸ. ಅದೊಮ್ಮೆ ಡ್ರೀಂ ಗರ್ಲ್ ಹೇಮಾಮಾಲಿನಿಯ ನೃತ್ಯ ಕಾರ್ಯಕ್ರಮ ಏರ್ಪಾಟಾಗಿತ್ತು. ಇಡೀ ಕಾರ್ಯಕ್ರಮಕ್ಕೆ ಕಪ್ಪು ಚುಕ್ಕೆಯಂತಿದ್ದುದು ಹೇಮಾಮಾಲಿನಿಯ ತಂದೆ. ಮಗಳ ಪ್ರದರ್ಶನಕ್ಕೂ ಮುಂಚೆ, ಈತ ಭಾಷಣ ಮಾಡಲು ನಿಂತು ಬಿಡೋದೆ? ಐದು ನಿಮಿಷ ಕಳೆದರೂ ಈತನ ಭಾಷಣ ನಿಲ್ಲಲಿಲ್ಲ. ಜನ ಸಿಟ್ಟಿಗೆದ್ದರು. 'ಮಾತು ನಿಲ್ಸೋ. ನೀನು ಒಳಗೆ ಹೋಗೋ. ಮಗಳನ್ನು ಕಳಿಸೋ' ಎಂದು ರೇಗಿಸಲು ಶುರು ಮಾಡಿದರು. ಈ ಪುಣ್ಯಾತ್ಮ ಆಗಲೂ ಮಾತು ನಿಲ್ಲಿಸಲಿಲ್ಲ. ಬದಲಿಗೆ ಬಯ್ಯಲು ನಿಂತ. ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ವೇದಿಕೆಗೆ ಎಸೆಯಲು ಒಂದಿಬ್ಬರು ಕುರ್ಚಿಗಳನ್ನು ಎತ್ತಿಕೊಂಡಿದ್ದು ಕಾಣಿಸಿತು. ಈಗಲೂ ಸುಮ್ಮನಿದ್ದರೆ ಅಪಾಯ ಅಂದುಕೊಂಡು-ತಕ್ಷಣವೇ ವೇದಿಕೆಗೆ ಪ್ರವೇಶಿಸುವಂತೆ ಹೇಮಾಮಾಲಿನಿಗೆ ಸೂಚನೆ ನೀಡಿದೆ. ಆಕೆ, ಥೇಟ್ ಗಂಧರ್ವ ಕನ್ಯೆಯಂತೆ ನಾಚುತ್ತಾ, ಬಾಗಿ, ಬಳುಕಿ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತಾ ಬಂದಳು ನೋಡಿ- ಜನ ಉಸಿರಾಡುವುದನ್ನೂ ಮರೆತವರಂತೆ ಕೂತುಬಿಟ್ಟರು. ಸದ್ಯ, ಎಲ್ಲಾ ಸರಿಯಾಯ್ತು ಅಂದುಕೊಂಡು ಸೈಡ್‌ವಿಂಗ್‌ಗೆ ಬಂದರೆ ಅಲ್ಲಿ ನಿಂತಿದ್ದ ಹೇಮಾಮಾಲಿನಿಯ ಅಪ್ಪ ಹೇಳಿದ: 'ಸಿಂಹಾ, ನೋಡಿದೆಯಾ ಹೇಗಿದೆ? ನಾನು ಅವಾಜ್ ಹಾಕ್ದೆ ನೋಡು, ಜನ ಹೆದರಿಬಿಟ್ರು. ಗಡಗಡ ನಡುಗಿಬಿಟ್ರು. ಮಾತೇ ಹೊರಡದೇ ಕೂತುಬಿಟ್ರು...'
ಯಾವುದೇ ವಿಷಯವಿರಲಿ, ಅದಕ್ಕೆ ಸ್ವಲ್ಪ ತಮಾಷೆಯ ಲೇಪ ಹಾಕಿ ಹೇಳುವುದೆಂದರೆ ಸಿಂಹ. ಅವರಿಗೆ ವಿಪರೀತ ಖುಷಿಯಾಗುತ್ತಿತ್ತು. ಅವರೊಮ್ಮೆ ಕೇಳಿದರು: 'ವನವಾಸಕ್ಕೆ ಹೋಗು ಎಂದು ಸೀತೆಗೆ ಯಾರೂ ಹೇಳಲಿಲ್ಲ. ಆದರೂ ಆಕೆ ಹೊರಟು ನಿಂತಳು. ಇದಕ್ಕೆ ಕಾರಣ ಏನಿರಬಹುದು? ಸ್ವಲ್ಪ ಜಾಣತನದ ಉತ್ತರ ಕೊಡಿ...' ಇಂಥವೆಲ್ಲಾ ನನಗೆ ಹೊಳೆಯೋದಿಲ್ಲ ಸಾರ್. ದಯವಿಟ್ಟು ನೀವೇ ಹೇಳಿ ಅಂದಾಗ, ತುಟಿಯಂಚಿನಲ್ಲಿ ನಗೆ ತುಳುಕಿಸಿ, ಒಮ್ಮೆ ಕಣ್ಣು ಮಿಟುಕಿಸಿದ ಸಿಂಹ ಹೀಗೆಂದರು: ಮದುವೆ ಆಯ್ತಲ್ಲ. ಆಗ ಸೀತೆ ಸೂಕ್ಷ್ಮವಾಗಿ ಗಮನಿಸ್ತಾಳೆ. ಆ ಮನೇಲಿದ್ದುದು ಮೂವರು ಅತ್ತೆಯರು. ಎಲ್ಲರಿಗೂ ಪ್ರತ್ಯೇಕ ಆಪ್ತ ಸಖಿಯರು. ರಾಮನಿಗೆ 14 ವರ್ಷ ವನವಾಸ ಎಂಬ ಸುದ್ದಿ ಕಿವಿಗೆ ಬಿದ್ದಾಗ ಸೀತೆ ಯೋಚಿಸ್ತಾಳೆ: ಈ ಅರಮನೇಲಿದ್ದು ಮೂವರು ಅತ್ತೆಯರ, ಅವರ ಸಖಿಯರ ಕಾಟ ಸಹಿಸುವುದಕ್ಕಿಂತ, ಕಾಡಲ್ಲಿ ಗೆಡ್ಡೆ ಗೆಣಸು ತಿಂದುಕೊಂಡು ರಾಮನ ಜೊತೆ ಆರಾಮಾಗಿ ಇರುವುದೇ ಮೇಲು...' ಈ ವಿವರಣೆ ಕೇಳಿ ಹೌದಲ್ಲವಾ? ಸೀತೆ ಹೀಗೆ ಯೋಚಿಸಬಹುದಲ್ಲವಾ ಅಂದುಕೊಳ್ಳುತ್ತಿದ್ದಾಗಲೇ ಮತ್ತೊಂದು ಸ್ವಾರಸ್ಯಕರ ಸಂಗತಿಯನ್ನು ಸಿಂಹ ಹೇಳಿದರು: 'ಇದೂ ರಾಮಾಯಣದ ಪ್ರಸಂಗವೇ.ಅಜ್ಜಿಯೊಬ್ಬಳ ಆಶ್ರಮಕ್ಕೆ ಇಬ್ಬರು ತೇಜಸ್ವೀ ಯುವಕರು ಬರುತ್ತಾರೆ. ಆ ಪೈಕಿ ಹಿರಿಯವನಿಗೆ ಜ್ವರ. ಅಜ್ಜಿ, ತನಗೆ ತಿಳಿದಂತೆ ಉಪಚರಿಸುತ್ತಾಳೆ. ಮಾರ್ಗಾಯಾಸದ ಕಾರಣ, ಇಬ್ಬರು ಯುವಕರಿಗೂ ಬೇಗ ನಿದ್ರೆ ಆವರಿಸಿಕೊಳ್ಳುತ್ತದೆ. ನಡುರಾತ್ರಿಯಲ್ಲಿ, ಜ್ವರವಿದ್ದ ಯುವಕ- 'ಸೀತೆ ಸೀತೆ' ಎಂದು ಕನವರಿಸಿದನಂತೆ. ಅದನ್ನು ಕೇಳಿದ ಅಜ್ಜಿಗೆ ಓಹ್, ಇವನೇ ರಾಮ ಎಂದು ಗೊತ್ತಾಯಿತಂತೆ! ಆ ಅಜ್ಜಿ ಬೇರೆ ಯಾರೂ ಅಲ್ಲ. ಅವಳೇ ಶಬರಿ!
ತಮ್ಮ ಮನೆ 'ಗುಹೆ'ಯ ಮುಂದೆ ನಿಂತುಕೊಂಡು ಯಾವುದೋ ಲಹರಿಯಲ್ಲಿ ಹೀಗೆ ಒಂದೊಂದೇ ಕಥೆ ಹೇಳುತ್ತಿದ್ದರು ಸಿಂಹ. ಆಗಲೇ ಮುಖ್ಯ ರಸ್ತೆಯಲ್ಲಿ ಒಂದರ ಹಿಂದೆ ಒಂದರಂತೆ ಐದಾರು ಬೈಕ್‌ಗಳು 'ಸುಂಯ್' ಎಂದು ಶಬ್ದ ಮಾಡುತ್ತಾ ಹೋಗಿ ಬಿಟ್ಟವು. ಪ್ರತಿ ಬೈಕ್‌ನಲ್ಲೂ ಹುಡುಗ-ಹುಡುಗಿಯ ಜೋಡಿ ಇದ್ದುದನ್ನು ಗಮನಿಸಿದ ಸಿಂಹ ಹೇಳಿದರು: 'ಈ ಬೈಕ್‌ಗಳಿಂದ ಪ್ರೇಮಿಗಳಿಗೆ ಏನು ಸುಖವೋ ಕಾಣೆ. ರೊಯ್ಯನೆ ಹೋಗ್ತಾರೆ ನಿಜ. ಆದರೆ ಒಬ್ಬರ ಮುಖ ಒಬ್ಬರಿಗೆ ಕಾಣುವುದಿಲ್ಲ! ಆದರೆ ನಮ್ಮ ಕಾಲದ ಮಜವೇ ಮಜಾ. ಆಗೆಲ್ಲಾ ಸೈಕಲ್‌ಗಳಿದ್ದವು. ಪ್ರೇಮದ ಹುಡುಗಿ ಬಾರ್‌ನ ಮೇಲೆ ಕೂರುತ್ತಿದ್ದಳು. ಅವಳ ತೋಳನ್ನು ಬಳಸಿಯೇ ಹುಡುಗ ಹ್ಯಾಂಡಲ್ ಹಿಡಿಯುತ್ತಿದ್ದ. ಕೇವಲ ಆರು ಇಂಚುಗಳಷ್ಟು ಹತ್ತಿರದಿಂದ ಅವಳನ್ನು ನೋಡಬಹುದಿತ್ತು. ಪಿಸುಮಾತು, ಲಲ್ಲೆ ಮಾತುಗಳನ್ನೂ ಅವಳ ಕಿವಿಯಲ್ಲೇ ಉಸುರುವ ಅನುಕೂಲವಿತ್ತು. ಹುಡುಗಿಗೂ ಅಷ್ಟೆ: ಜಾರಿ ಬಿದ್ದೇನೆಂಬ ಭಯವಿರಲಿಲ್ಲ. ಸಂತೋಷ ಹೆಚ್ಚಾದರೆ, ಸೈಕಲ್ ಸವಾರಿಯ ಸಂದರ್ಭದಲ್ಲೇ ತನ್ನ ಎಡಗೈಯಿಂದ ಹುಡುಗನ ಕ್ರಾಪಿನಲ್ಲಿ ಬೆರಳಾಡಿಸಿ ನೇವರಿಸಲಿಕ್ಕೆ ಅವಕಾಶವಿತ್ತು. ಒಟ್ಟಾರೆಯಾಗಿ, ಸೈಕಲ್ ಸವಾರಿ ಅನುರಾಗಪೂರ್ಣವಾಗಿ ಇರುತ್ತಿತ್ತು. ಆದರೆ ಬೈಕ್‌ನಲ್ಲಿ ಹೋಗುವವರಿಗೆ ಇಂಥ ರೊಮ್ಯಾಂಟಿಕ್ ಅನುಭವ ಎಂದಾದರೂ ಸಿಗುವುದುಂಟಾ?'
ಮತ್ತೊಂದು ಸಂದರ್ಭದಲ್ಲಿ ಸಿಂಹ ಮಂಕಾಗಿದ್ದರು. 'ಸರ್, ಯಾಕೋ ಡಲ್ ಆಗಿದ್ದೀರಾ... ಅಂದಿದ್ದಕ್ಕೆ, ಈ ಸುದ್ದಿ ನೋಡಿ ಅಂದರು. ಹಣಕಾಸಿನ ಸಮಸ್ಯೆಯಿಂದ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದ ಪತ್ರಿಕಾ ವರದಿಯಾಗಿತ್ತದು. ಒಂದು ನಿಮಿಷ ಮೌನವಾಗಿದ್ದ ಸಿಂಹ, ನಂತರ ಹೇಳಿದರು: ನೀವು ಇರುವೇನ ನೋಡಿದ್ದೀರಲ್ಲ, ಬೆರಳಲ್ಲಿ ಮೆಲ್ಲಗೆ ಅದುಮಿದರೆ ಸತ್ತು ಹೋಗುವಂಥ ಜೀವಿ ಅದು. ಅದು ಏನ್ಮಾಡುತ್ತೆ ಹೇಳಿ: ಎಷ್ಟೋ ದೂರ ಹೋಗಿ ಆಹಾರ ಸಂಗ್ರಹಿಸುತ್ತೆ. ಶತ್ರು ಎದುರಾದರೆ ತಕ್ಷಣ ಕಚ್ಚಿ 'ಹಾ' ಅನ್ನುವಂತೆ ಮಾಡುತ್ತೆ. ಅಷ್ಟೇ ಅಲ್ಲ, ಆಯುಷ್ಯ ಪೂರ್ತಿ ಬದುಕಿ ತೋರಿಸುತ್ತೆ. ಬದುಕಲಿಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಇರುವೆಯ ಕಥೇನ ನಾವ್ಯಾರೂ ಓದಲಿಲ್ಲ. ವಿಷಯ ಹೀಗಿರುವಾಗ, ಇರುವೆಗಿಂತ ಸಾವಿರವಲ್ಲ, ಲಕ್ಷಪಟ್ಟು ಶಕ್ತಿ ಹೊಂದಿರುವ ಮನುಷ್ಯ ಸಣ್ಣ ಪುಟ್ಟ ಸೋಲುಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ತಾನಲ್ಲ; ಇದಕ್ಕೆ ಏನಂತ ಕರೀಬೇಕು?
ವರ್ತಮಾನದ ತಲ್ಲಣಗಳಿಗೆ ಸಿಂಹ ಸ್ಪಂದಿಸುತ್ತಿದ್ದುದು ಹೀಗೆ.
ಉಹುಂ, ಸಿಂಹನಿಗೆ ಯಾವ ವಿಷಯದಲ್ಲೂ ತಕರಾರುಗಳಿರಲಿಲ್ಲ. ಯಾರ ಮೇಲೂ ಅಸಮಾಧಾನವಿರಲಿಲ್ಲ, ದ್ವೇಷವಿರಲಿಲ್ಲ. ಅವರಿಗೆ ಶತ್ರುಗಳೇ ಇರಲಿಲ್ಲ. ಎಲ್ಲ ಅರ್ಥದಲ್ಲೂ ಆತ down to earth person. ಭೂಮಿ ತೂಕದ ಮನುಷ್ಯ. ಅವರನ್ನು ನೆನಪಿಸಿಕೊಂಡಾಗಲೆಲ್ಲಾ, ಕುವೆಂಪು ಪಾತ್ರವಾಗಿ ಹಾಡಿದ, ತುಘಲಕ್‌ನಾಗಿ ಅಬ್ಬರಿಸಿದ, ಕೈಲಾಸಂ ಪಾತ್ರದಲ್ಲಿ ಕಾಡಿದ ಅಪರೂಪದ ಚಿತ್ರವೊಂದು 'ಗುಹೆ'ಯ ಮುಂದೆ ನಿಂತು- ಪ್ಲೀಸ್ ವೆಲ್‌ಕಮ್ ಎಂದಂತೆ ಭಾಸವಾಗುತ್ತದೆ. ಆ ಮಾತನ್ನೇ ಅನುಸರಿಸಿಕೊಂಡು ಒಳಗೆ ಹೋದರೆ-ಶ್ರೀಮತಿ ಶಾರದಾ ಮಣಿಯವರ ಕಣ್ಣ ಹನಿಯಾಗಿ, ಋತ್ವಿಕ್ ಸಿಂಹನ ಮಮತೆಯ ಮಾತಾಗಿ, ಸೊಸೆ ಜಸ್ಲೀನ್ ಅವರ ಔದಾರ್ಯದ ನಡೆಯಾಗಿ, ಮನೆಯೊಳಗಿರುವ ಹಿತೈಷಿ ಚಾರ್ಲಿ ಚಾಪ್ಲಿನ್‌ನ ಮೋಹಕ ನಗುವಾಗಿ, ಮನೆಯೆದುರಿನ ಕಣಿಗಲೆ ಮರದ ಸುಗಂಧ ಪರಿಮಳವಾಗಿ ಪ್ರತಿ ಹೆಜ್ಜೆಗೂ ಎರಡೆರಡು ಬಾರಿ ಕೈ ಜಗ್ಗುತ್ತಾರೆ ಸಿಂಹ. ಮನದಲ್ಲಿ ಅಚ್ಚಳಿಯದೇ ಉಳಿದಿರುವ, ಒಂದು ನಕ್ಷತ್ರವಾಗಿ ಮಿಂಚುತ್ತಿರುವ ಈ ಹಿರಿಯನಿಗೆ ಗುಡ್ ಬೈ ಹೇಳುವುದು ಹೇಗೆ?
- ಎ.ಆರ್. ಮಣಿಕಾಂತ್
armanikanth@gmail.com