ಅಂಕಣಗಳು

ಅವನತಿಯ ಹಾದಿಯಲ್ಲಿ ಸೋನಿಯಾ ಸಾಮ್ರಾಜ್ಯ

ಅವನತಿಯ ಹಾದಿಯಲ್ಲಿ ಸೋನಿಯಾ ಸಾಮ್ರಾಜ್ಯ
Published On :

ಅದು ಅಕ್ಟೋಬರ್ 2010. ಬಿಜೆಪಿಯಿಂದ ಬಂಡಾಯವೆದ್ದ ಸುಮಾರು 1 ಡಜನ್‌ಗೂ ಹೆಚ್ಚಿನ ಶಾಸಕರು, ಗೋವಾ ರೆಸಾರ್ಟ್‌ನಲ್ಲಿ ಠಿಕಾಣಿ ಹೂಡಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಕಾಂಗ್ರೆಸ್ ಜೆಡಿಎಸ್‌ನೊಂದಿಗೆ ಕೈಜೋಡಿಸಿ ಸರ್ಕಾರವನ್ನು ಸ್ಥಾಪಿಸುವ ಸಾಧ್ಯತೆಯ ಜಾಡು ಹಿಡಿದು ಹೊರಟಿತು. ಸಿದ್ದರಾಮಯ್ಯ ನೇತೃತ್ವದ ನಿಯೋಗವೊಂದು ನವ ದೆಹಲಿಗೆ ತೆರಳಿ, ಹೈ ಕಮಾಂಡ್‌ನ ಅಪ್ಪಣೆ ಪಡೆಯಲು ನಿರ್ಧರಿಸಿತು.  
ಅತ್ಯುತ್ಸಾಹದಲ್ಲಿದ್ದ ಕೆಲವು ನಾಯಕರನ್ನು ಕಟ್ಟಿಕೊಂಡು, ಸಿದ್ದರಾಮಯ್ಯನವರು ಸೋನಿಯಾ ಗಾಂಧಿಯವರ ಬಳಿ ತೆರಳಿದರು. ಸೋನಿಯಾ ಮೇಡಂಗೆ ಹೊಸ ಸರ್ಕಾರ ರಚನೆ, ಜೆಡಿಎಸ್‌ನೊಂದಿಗೆ ಒಪ್ಪಂದ ಮತ್ತು ಬಂಡಾಯವೆದ್ದ ಬಿಜೆಪಿ ಶಾಸಕರ ಬಗ್ಗೆ ಮಾಹಿತಿ ನೀಡುವ ಕೆಲಸವನ್ನು ಇಂಗ್ಲಿಷ್ ಭಾಷೆಯ ಮೇಲೆ ಹಿಡಿತವಿದ್ದ ಇಬ್ಬರು ಹಿರಿಯ ನಾಯಕರಿಗೆ ವಹಿಸಲಾಯಿತು. ಕರ್ನಾಟಕ ಕಾಂಗ್ರೆಸ್ ನಾಯಕರ ಮಾತನ್ನು ಸುಮಾರು 45 ನಿಮಿಷಗಳವರೆಗೆ ಮೌನವಾಗಿ ಆಲಿಸಿದ ಸೋನಿಯಾ ಕೊನೆಗೆ, "ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರಲು ಏಕೆ ಬಯಸುತ್ತೀರಿ?" ಎಂದು ಕೇಳಿಬಿಟ್ಟರು!
ಸೋನಿಯಾ ತಮ್ಮ ಬೆನ್ನು ಚಪ್ಪರಿಸುತ್ತಾರೆ ಎಂದು ಭಾವಿಸಿದ್ದ ಸಿದ್ದರಾಮಯ್ಯ ಮತ್ತು ಸಂಗಡಿಗರಿಗೆ ಈ ಪ್ರಶ್ನೆಯಿಂದ ಆಘಾತವಾಯಿತು. ಹೇಗೆ ಕೋಮುವಾದಿ ಬಿಜೆಪಿ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಮತ್ತು ಕೂಡಲೇ ಅದನ್ನು ತಡೆಯದಿದ್ದರೆ ಕರ್ನಾಟಕ ಮತ್ತೊಂದು ಗುಜರಾತ್ ಆಗಬಹುದು ಎನ್ನುವುದನ್ನೆಲ್ಲ ವಿವರಿಸಲು ಆ ತಂಡ ಪ್ರಯತ್ನಿಸಿತು. ಆಗ ಸೋನಿಯಾ ಗಾಂಧಿ, "ನೀವು ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬನ್ನಿ, ಈ ರೀತಿಯಲ್ಲ!" ಎಂದು ಚುರುಕಾಗಿ ಉತ್ತರಿಸಿಬಿಟ್ಟರು.
ಬಹುಶಃ ಇದನ್ನೆಲ್ಲ ಕೇಳಿ ಕೆಲವರಿಗೆ ಆಘಾತವಾಗಬಹುದೇನೋ! ಬಿಜೆಪಿಯಂಥ ಪ್ರಬಲ ವಿರೋಧಿಯಿಂದ ಅಧಿಕಾರ ಕಸಿದುಕೊಳ್ಳಬೇಕೆಂಬ ತಮ್ಮ ಪಕ್ಷದ ಪ್ರಯತ್ನವನ್ನೇಕೆ ಕಾಂಗ್ರೆಸ್ ಮುಖ್ಯಸ್ಥೆ ಬೇಡವೆನ್ನುತ್ತಾರೆ? ಅಧಿಕಾರದಾಹಿ ಸೋನಿಯಾ ಗಾಂಧಿ ಈ ರೀತಿ ಮಾಡಿದರಾ ಎಂದು ಕೆಲವರು ಹುಬ್ಬೇರಿಸಬಹುದು. ಆದರೆ ಬಹಳಷ್ಟು ಮಂದಿಗೆ ಗೊತ್ತಿಲ್ಲ, ರಾಜೀವ್ ಗಾಂಧಿಯವರ ಹತ್ಯೆಯ ನಂತರ ಸುಮಾರು 7 ವರ್ಷಗಳ ವರೆಗೆ ಸೋನಿಯಾ ಅಧಿಕಾರ ವಲಯಕ್ಕೆ ಕಾಲಿಡುವ ಕೆಲಸಕ್ಕೆ ಮುಂದಾಗಿರಲಿಲ್ಲ. ಆ ಸಮಯದಲ್ಲಿ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್. ಒಂದು ವೇಳೆ ಸೋನಿಯಾ ಅದನ್ನು ಬಯಸಿದ್ದರೆ, ಸುಲಭವಾಗಿ ಪಡೆಯಬಹುದಿತ್ತು.
ಹಾಗಿದ್ದರೆ ಸೋನಿಯಾ ಗಾಂಧಿಯವರ ಮಿಸ್ಟರಿಯನ್ನು ಸರಿಯಾಗಿ ವಿವರಿಸುವುದು ಯಾವುದು? ಉತ್ತರ ಬಹಳ ಸರಳವಾಗಿದೆ- "ಅಸಾಮರ್ಥ್ಯ"! ಉದಾಹರಣೆಗೆ, ಹೇಗೆ ಆ ಘಟನೆಯ ನಂತರ, ಅಂದರೆ, 2010ರ ನಂತರ ಕರ್ನಾಟಕದಲ್ಲಿ ಬಿಕ್ಕಟ್ಟುಗಳ ಬುತ್ತಿ ಬಿಚ್ಚಿಕೊಳ್ಳುತ್ತಾ ಹೋಯಿತೋ ನೋಡೋಣ. ಸೋನಿಯಾ ಬುದ್ಧಿವಾದದ ಹೊರತಾಗಿಯೂ ದೆಹಲಿಯಿಂದ ಮರಳಿದ ನಿಯೋಗ, ಪಕ್ಷದ ಎಲ್ಲಾ ಶಾಸಕರನ್ನು ಬೆಂಗಳೂರಿನ ಹೊರವಲಯದಲ್ಲಿರುವ ರೆಸಾರ್ಟ್ ಒಂದಕ್ಕೆ ಕರೆದುಕೊಂಡು ಹೋಯಿತು.  ರಾಜ್ಯಪಾಲರ ಉತ್ತೇಜನ(ಹಂಸರಾಜ ಭಾರದ್ವಾಜ್) ಮತ್ತು ಕೆಲವು ಕುಖ್ಯಾತ ಹಣವಂತ ನಾಯಕರ ಸಹಕಾರದಿಂದ, ಕಾಂಗ್ರೆಸ್, ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸವನ್ನು ಮುಂದುವರಿಸಿತು. ಬಿಜೆಪಿ ಕೊನೆಗೆ ಅಸ್ತವ್ಯಸ್ತ ವಿಶ್ವಾಸಮತ ಗಳಿಸುವವರೆಗೂ ಇದು ನಡೆಯಿತು. ಗಾಂಧಿ ಕುಟುಂಬಕ್ಕೆ ಮತ್ತು ಸೋನಿಯಾ ಗಾಂಧಿಯವರಿಗೆ ಪಕ್ಷದ ಮೇಲಿರುವ ಹಿಡಿತವಿದು!
ದೀರ್ಘಕಾಲದಿಂದ 'ನಾಯಕತ್ವದ ಅಸಾಮರ್ಥ್ಯವೇ' ಸೋನಿಯಾ ಗಾಂಧಿಯವರ ಲ್ಯಾಂಡ್‌ಮಾರ್ಕ್ ಆಗಿಬಿಟ್ಟಿದೆ. ಪಕ್ಷದ ಮೇಲೆ ಅವರು ನಿಯಂತ್ರಣವಂತೂ ಹೊಂದಿದ್ದಾರೆ. ಆದರೆ ಕೇಂದ್ರ ಕೂಟದ ಮೂಲಕ ಎಲ್ಲಾ ಬಣಗಳನ್ನೂ ಖುಷಿಯಾಗಿಟ್ಟು ಅಷ್ಟೆ. ಈ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಕಾಂಗ್ರೆಸ್ ನಾಯಕನೂ ತನ್ನದೇ ಕಾನೂನು ರೂಪಿಸಿಕೊಂಡು, ಚಿಕ್ಕ-ಭ್ರಷ್ಟ ಸಾಮ್ರಾಜ್ಯಗಳನ್ನು ಸ್ಥಾಪಿಸಿಬಿಟ್ಟಿದ್ದಾನೆ. ಈ ವ್ಯವಸ್ಥೆಯನ್ನು ರಾಜ್ಯ ಮತ್ತು ಕೇಂದ್ರದ ಕಾಂಗ್ರೆಸ್ ನಾಯಕರಲ್ಲೂ ನೋಡಬಹುದು. ವೈ.ಎಸ್. ರಾಜಶೇಖರ ರೆಡ್ಡಿ ಆಂಧ್ರ ಕಾಂಗ್ರೆಸ್ ಅನ್ನು ನಿರ್ಲಜ್ಜವಾಗಿ ಮುನ್ನಡೆಸಿದ್ದು ಅಥವಾ ವಿಲಾಸ್ ರಾವ್ ದೇಶಮುಖ್ ಸೋನಿಯಾಇಷ್ಟಕ್ಕೆ ವಿರುದ್ಧವಾಗಿ
ಮಹಾರಾಷ್ಟ್ರದ ಮುಖ್ಯಮಂತ್ರಿ ಹುದ್ದೆಗೆ ಮರಳಿದ್ದು ಅಥವಾ ಕಾಲಕಾಲಕ್ಕೆ ಕೇಂದ್ರ ಸರ್ಕಾರವನ್ನು ಹೂಡಾ, ತಿರಸ್ಕಾರದಿಂದ ನೋಡಿ ಮಧ್ಯದ ಬೆರಳನ್ನು ತೋರಿಸುತ್ತಿರುವುದು...ಇವೆಲ್ಲ ನಾಯಕತ್ವದ ಅಸಾಮರ್ಥ್ಯದ ಫಲಗಳೇ. ಅದಾಗ್ಯೂ ಇಂಥವರು ವಾದ್ರಾ ಭೂ ವ್ಯವಹಾರದ ಮೂಲಕವೋ ಅಥವಾ ಇಟಾಲಿಯನ್ ಚಾಪರ್ ಒಪ್ಪಂದದ ಮಾರ್ಗವಾಗಿಯೋ ದೆಹಲಿ ಸಾಮ್ರಾಜ್ಯಕ್ಕೆ ಆಗಾಗ ತಮ್ಮ ತೆರಿಗೆಯನ್ನು ಕಟ್ಟುತ್ತಿರುತ್ತಾರೆ ಬಿಡಿ.
1707ರಲ್ಲಿ ಔರಂಗಜೇಬನ ಸಾವಿನ ನಂತರ ನಾಮ್‌ಕಾವಾಸ್ತೆಯಾಗಿ ಉಳಿದಿದ್ದ ಮೋಘಲರ ಸಾಮ್ರಾಜ್ಯದಲ್ಲಿ ಇದೇ ರೀತಿಯ ಪರಸ್ಪರ ಲಾಭದಾಯಕ ಪರಿಸರವೇ ಇತ್ತು. ಹೇಗೆ ಮೋಘಲರು ಪ್ರತ್ಯೇಕ ಚೂರುಗಳಾಗುತ್ತಾ ಮತ್ತು ಇನ್ನೊಂದೆಡೆ ಪ್ರಾದೇಶಿಕ ಪ್ರಭುಗಳಾದ ನಿಜಾಮ್ ಮತ್ತು ಶಾಹ್‌ಗಳು ಸ್ವತಂತ್ರ ಶಕ್ತಿಗಳಾಗಿ ಹೊರಹೊಮ್ಮತೊಡಗಿದರೋ, ಅದೇ ರೀತಿಯಲ್ಲಿ ಈಗ ಕಾಂಗ್ರೆಸ್ ಎನ್ನುವುದು ಪ್ರಾದೇಶಿಕ ಶಕ್ತಿಕೇಂದ್ರಗಳಾದ ಪವಾರ್‌ಗಳು, ಮಮತಾ ಬ್ಯಾನರ್ಜಿಗಳು ಮತ್ತು ಜಗನ್ ರೆಡ್ಡಿಯಂಥವರ ಚೂರುಗಳಾಗಿ ಬದಲಾಗಿದೆ.
ಇಂದಿರಾ ಮತ್ತು ಸೋನಿಯಾ ಗಾಂಧಿ ಮಧ್ಯೆ ಇರುವ ವ್ಯತ್ಯಾಸವೇ ಇದು. ಇಂದಿರಾಗೆ ಪಕ್ಷ ಮತ್ತು ಮತದಾರರ ಮೇಲೆ ಸಂಪೂರ್ಣ ಹಿಡಿತವಿತ್ತು, ಆದರೆ ಸೋನಿಯಾರದ್ದು ಕೇವಲ ಸಾಂಕೇತಿಕ ಶಕ್ತಿಯಷ್ಟೆ. ನಿಜಲಿಂಗಪ್ಪ, ಕಾಮರಾಜ್ ಮತ್ತು ಅತುಲ್ಯ ಘೋಷ್‌ರಂಥ ಬಲಿಷ್ಠ ನಾಯಕರೇ ಇಂದಿರಾರನ್ನು ಎದುರು ಹಾಕಿಕೊಂಡು ರಾಜಕೀಯ ವಿಸ್ಮೃತಿಗೆ ಸರಿದುಹೋದರು. ಆದರೆ ಇಂದು ಸೋನಿಯಾ ವಿರುದ್ಧ ಬಹಿರಂಗವಾಗಿಯೇ ಮಾತನಾಡುತ್ತಿರುವ ಮಮತಾ ಬ್ಯಾನರ್ಜಿ ಬಂಗಾಳದಲ್ಲಿ ಬೆಳೆಯುತ್ತಿದ್ದರೆ, ಜಗನ್ ರೆಡ್ಡಿ ಸೀಮಾಂಧ್ರದ ಸಿಎಂ ಆಗುವ ಸಾಧ್ಯತೆಯಲ್ಲಿದ್ದಾರೆ.
ಬಹುಶಃ ಸೋನಿಯಾ ತಮ್ಮ ರಾಜಕೀಯ ಕ್ರಿಯಾಶಕ್ತಿಯ ಮಿತಿಯನ್ನು ಅರಿತ ನಂತರ(90ರ ಮಧ್ಯಭಾಗದಲ್ಲಿ ಪವಾರ್‌ರಿಂದ ಬಂಡಾಯವೆದುರಿಸಿದಾಗ), ಕಾಂಗ್ರೆಸ್ ಮಂದಿಗೆ ತಾವೇ ಚಿಕ್ಕ ಗುಂಪುಗಳಾಗಿ ಪಕ್ಷವನ್ನು ಆಳುವ ಶಕ್ತಿ ಕೊಟ್ಟು ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಇದು ಕಾಂಗ್ರೆಸ್‌ನ ಕೃತಕ ತೇಲುವಿಕೆಗೆ ಕಾರಣವಾಗಿ, ಪ್ರಾದೇಶಿಕ ಮತ್ತು ಉಪ-ಪ್ರಾದೇಶಿಕ ನಾಯಕರು ಬೆಳೆಯುತ್ತಿದ್ದಾರಷ್ಟೆ. ಈ ಮಾದರಿಗೆ ಒಂದು ಮಿತಿಯಿದೆ. ಏಕೆಂದರೆ, ದೆಹಲಿಯಲ್ಲಿ ದುರ್ಬಲ ವಿರೋಧ ಪಕ್ಷಗಳಿರುವವರೆಗಷ್ಟೇ ಇದು ಸಫಲವಾಗುಳಿಯಲಿದೆ. ಇನ್ನು ಕಾಂಗ್ರೆಸ್ ಅನ್ನು ಉಳಿಸಿದ ಮತ್ತೊಂದು ಅಂಶವೆಂದರೆ ಅದರ ಜಾತ್ಯತೀತ ಬೋಗಿಗಳು! ಅದರಿಂದಾಗಿ ಅನೇಕ ರಾಜಕೀಯ ಸಮುದಾಯಗಳು ಅದಕ್ಕೆ ಅಧೀನವಾಗಿ ಉಳಿದುಕೊಂಡವು.
  ಈ ಸಂತೋಷಕರ ರಾಜಕೀಯ ಸಹಬಾಳ್ವೆಯ ನಡುವೆಯೇ ಭಾರತ ಹಿಂದೆಂದಿಗಿಂತಲೂ ಭಿನ್ನವಾಗಿ ಬದಲಾಯಿತು. ಆದರೆ ಅದು ದೆಹಲಿಯಲ್ಲಿರುವವರ ಗಮನಕ್ಕೆ ಬರಲೇ ಇಲ್ಲ. 'ಸಾಂಕೇತಿಕತೆ' ಇದುವರೆಗೂ ಸೋನಿಯಾಗಾಂಧಿಯವರನ್ನು ಬಲಿಷ್ಠ ನಾಯಕಿಯನ್ನಾಗಿ ಬೆಳೆಸುತ್ತಾ ಬಂದಿತ್ತು. ಆದರೆ ಭಾರತ ಬದಲಾಯಿತು. ಅದಕ್ಕೆ ಸಮಗ್ರ ಬೆಳವಣಿಗೆಯ ಅವಶ್ಯಕತೆಯಿತ್ತೇ ಹೊರತು ಕೇವಲ ನರೇಗಾ, ಆರ್‌ಟಿಐ ಮತ್ತು ಜಾತ್ಯತೀತತೆಯಲ್ಲಲ್ಲ. ಉದಾಹರಣೆಗೆ, 24/7 ವಿದ್ಯುತ್ ಸರಬರಾಜು ಎನ್ನುವ ಅಂಥದ್ದೊಂದು ಸಾಂಕೇತಿಕತೆಯಲ್ಲಿ  ಕಾಂಗ್ರೆಸ್ ಮತ್ತು ಬಿಜೆಪಿಯೇತರ ಸರ್ಕಾರಗಳು ಸೋಲನುಭವಿಸಿದ್ದು. ಇದಕ್ಕೆ ಕಾರಣ, ಸೋನಿಯಾ ಗಾಂಧಿಯವರ ನೇತೃತ್ವದಡಿಯಲ್ಲಿ ನಿರ್ಮಾಣವಾದ 'ಪರಸ್ಪರ ಅನುಕೂಲಕರ ವಾತಾವರಣ'ದಲ್ಲಿ ಆ ರೀತಿ 24 ಗಂಟೆಯೂ ವಿದ್ಯುತ್ ಪೂರೈಕೆ ಮಾಡುವುದು ಅಸಾಧ್ಯವಾಗಿತ್ತು. ಹಾಗಾಗೇ ಕಾಂಗ್ರೆಸ್ 60 ವರ್ಷದ ಆಡಳಿತದಲ್ಲಿ ತನ್ನ ಅವನತಿಯ 3ನೇ ಹಂತವನ್ನು ತಲುಪಿದೆ. ಸೋನಿಯಾ ಗಾಂಧಿ ಈ ಸಾಮ್ರಾಜ್ಯದ ಕೊನೆಯ ಮೊಘಲ್.
ಕಾಂಗ್ರೆಸ್‌ನ ಮೊದಲನೇ ಹಂತದ ಅವನತಿ ಶುರುವಾಗಿದ್ದು ತುರ್ತು ಪರಿಸ್ಥಿತಿಯ ನಂತರದಲ್ಲಿ, ಅಂದರೆ 1977ರಲ್ಲಿ. ಆದರೆ ಇಂದಿರಾ ಗಾಂಧಿಯವರ ಹತ್ಯೆ 1984ರ ಚುನಾವಣಾ ಲೆಕ್ಕಾಚಾರವನ್ನೇ ಸಂಪೂರ್ಣವಾಗಿ ಬದಲಿಸಿಬಿಟ್ಟಿತು. ಹಾಗಾಗೇ ಪ್ರಾಕ್ಟಿಕಲ್ ಲೆಕ್ಕಾಚಾರವನ್ನು ಮುಂದಿಟ್ಟುಕೊಂಡು ನೋಡಿದಾಗ, ಅದರ ಮೊದಲ ಹಂತದ ಅವನತಿ 1989ರಲ್ಲಾಯಿತು ಎನ್ನಬೇಕು. ಇದಕ್ಕೆ ಮೂರು ಕಾರಣಗಳಿದ್ದವು. 1) ವಿರೋಧಿಗಳಲ್ಲಿ ಏಕತೆಯ ಹೆಚ್ಚಳ 2) ಅದುವರೆಗೂ ನಿರ್ಲಕ್ಷಕ್ಕೊಳಗಾಗಿದ್ದ ಬಹುಸಂಖ್ಯೆಯ ಇತರೆ ಹಿಂದುಳಿದ ವರ್ಗಗಳ ಹೊರಹೊಮ್ಮುವಿಕೆ 3) ಹಿಂದೂ ರಾಷ್ಟ್ರೀಯತೆಯ ಉದಯ. ಈ ಮೊದಲ ಹಂತ ಕೇವಲ ಅರ್ಧ ದಶಕದ ವರೆಗೆ ಮಾತ್ರ ಉಳಿದಿತ್ತು. ಅದಾಗ್ಯೂ ಕಾಂಗ್ರೆಸ್ ಕೂಡ ಭಾರತದ ಏಕೈಕ ಪ್ರಬಲ ರಾಜಕೀಯ ಪಕ್ಷವೆಂಬ ತನ್ನ ಗರಿಮೆಯನ್ನು ಕಳೆದುಕೊಂಡಿತು.
ಕಾಂಗ್ರೆಸ್ ಅವನತಿಯ ಎರಡನೆಯ ಹಂತ ಶುರುವಾಗಿದ್ದು 90ರ ದಶಕದ ಮಧ್ಯಭಾಗದಲ್ಲಿ ಅಂದರೆ,  ರಾಷ್ಟ್ರೀಯ ಮತಗಳಲ್ಲಿ ಅದರ ಪಾಲು ಕೇವಲ 30 ಪ್ರತಿಶತಕ್ಕೆ ಇಳಿದಾಗ. ಈ ಹಂತವನ್ನೂ ನಾವು ಮೂರು ಕಾರಣಗಳ ಅಡಿಪಾಯದ ಮೇಲೆ ನೋಡಬಹುದು. 1) ಕಾಂಗ್ರೆಸ್‌ನ ದುರ್ಬಲ ನಾಯಕತ್ವ 2) ಹಿಂದೂ ರಾಷ್ಟ್ರೀಯತೆಯ ಬೆಳವಣಿಗೆ ಮತ್ತು 3) ಭಾರತೀಯ ರಾಜಕೀಯ ವ್ಯವಸ್ಥೆ ಮಂಡಲೀಕರಣದ ಆಳ ಸುಳಿಗೆ ಸಿಲುಕಿದ್ದು. ಕಾಂಗ್ರೆಸ್‌ನ ಕುಸಿತದ ಈ ಎರಡು ಹಂತಗಳ ನಡುವಿನ ಸಾಮ್ಯತೆಯೆಂದರೆ, ವರ್ಗ ಹೋರಾಟ ಮತ್ತು 'ಗುರುತುಗಳ' ಬಲವರ್ಧನೆ. ಸೋನಿಯಾ ಗಾಂಧಿ ಕಾಂಗ್ರೆಸ್‌ಗೆ ಹೊಸ ದಾರಿಯನ್ನು ತೋರಿಸಲೇ ಇಲ್ಲ, ಅವರು ತಾತ್ಕಾಲಿಕವಾಗಿ ಪಕ್ಷದ ಅವನತಿಯನ್ನು ತಡೆದರಷ್ಟೆ. ಈ ತಾತ್ಕಾಲಿಕ ಹಂತವನ್ನೇ ದೆಹಲಿಯಲ್ಲಿ ಕುಳಿತ ರಾಜಕೀಯ ಪಂಡಿತರು ಕಾಂಗ್ರೆಸ್‌ನ ಮರು ಬೆಳವಣಿಗೆ ಎಂದು ತಪ್ಪಾಗಿ ಬಣ್ಣಿಸಿದರು.  ಈಗ ಕಾಂಗ್ರೆಸ್ ತನ್ನ ಮೂರನೇ ಹಂತದ ಅವನತಿ ಮಾರ್ಗವನ್ನು ಹಿಡಿದಿದೆ. ಇದು ಆ ಅವನತಿಯ ನಿರ್ಣಾಯಕ ಘಟ್ಟವೂ ಹೌದು. ಪ್ರತಿಯೊಂದು ಅವನತಿಯ ಹಂತದಲ್ಲೂ ಕಾಂಗ್ರೆಸ್‌ನ ಓಟ್ ಶೇರ್ ಕುಸಿಯುತ್ತಲೇ ಬಂದಿದೆ. ಉದಾ- 80ರ ದಶಕದಲ್ಲಿ 40 ಪ್ರತಿಶತ, 90ರ ಮಧ್ಯಭಾಗದಲ್ಲಿ 30 ಪ್ರತಿಶತ, ಈಗ ಅದು 20 ಪ್ರತಿಶತಕ್ಕೆ ಬಂದು ತಲುಪುವ ಸಾಧ್ಯತೆ ಇದೆ. ಈ 20 ಪ್ರತಿಶತ ವೋಟ್ ಶೇರ್ ಏಕೆ ಕಾಂಗ್ರೆಸ್‌ಗೆ ಪ್ರಾಣಾಂತಿಕ ಪ್ರಹಾರ ಮಾಡಲಿದೆ ಎನ್ನುವುದನ್ನು ನಾವು ಗಮನಿಸಬೇಕು:
-ಬಿಹಾರ, ಸೀಮಾಂಧ್ರ, ತಮಿಳುನಾಡು, ಜಾರ್ಖಂಡ್ ಮತ್ತು ದೆಹಲಿಗಳಲ್ಲಿ ಕಾಂಗ್ರೆಸ್ ಎರಡಂಕಿಯ ಸ್ಥಾನಗಳನ್ನು ಗಳಿಸಿದರೂ ಅದು ಯಾವುದೇ ಸ್ಥಾನಗಳನ್ನು ಗೆಲ್ಲದೇ ಇರಬಹುದು. ತನ್ನ ಮತಗಳ ಪಾಲು ತೆಳುವಾಗಿ ಹರಡಿದ್ದರೆ ಪಕ್ಷವೊಂದು ಅನುಭವಿಸುವ ಸಂಕಷ್ಟವಿದು.
-ನಮ್ಮ ಇತ್ತೀಚಿನ ಎರಡು ಸಮೀಕ್ಷೆಗಳ ಪ್ರಕಾರ, ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂದು ಬಯಸುವ 3ನೇ ಒಂದು ಭಾಗದಷ್ಟು ವರ್ಗ ಅಲ್ಪಸಂಖ್ಯಾತರದ್ದು. ಹೇಗೆ ಕಾಂಗ್ರೆಸ್ ಉಳಿದ ಸಮುದಾಯಗಳಿಂದ ವಿಮುಖವಾಗುತ್ತಿದೆ ಎನ್ನುವುದನ್ನು ಈ ಅಂಕಿ ಅಂಶಗಳು ತೋರಿಸುತ್ತವೆ. ಕೇವಲ ಮುಸ್ಲಿಂ ಮತಗಳೊಂದರಿಂದಲೇ ಸ್ಥಾನಗಳನ್ನು ಗೆಲ್ಲಲಾಗುವುದಿಲ್ಲ ಎನ್ನುವುದನ್ನು ಕಾಂಗ್ರೆಸ್‌ನ ವಿಷಯದಲ್ಲಿ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಇತ್ತೀಚೆಗಷ್ಟೇ ನೋಡಿದ್ದೇವೆ.   
ಸುಮಾರು 68 ವರ್ಷಗಳ ಹಿಂದೆ, ಅಂದರೆ 1946ರಲ್ಲಿ ಬ್ರಿಟಿಷ್ ಹಿಡಿತದಲ್ಲಿದ್ದ ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದಿದ್ದವು. ಹಿಂದು ಮತಗಳೆಲ್ಲ ಕಾಂಗ್ರೆಸ್‌ನ ಪಾಲಾದರೆ, ಮುಸ್ಲಿಂ ಮತಗಳೆಲ್ಲ ಮುಸ್ಲಿಂ ಲೀಗ್‌ಗೆ ಮೀಸಲಾಗಿದ್ದವು. ಕುತೂಹಲಕರ ಸಂಗತಿಯೆಂದರೆ, 6 ವರ್ಷಗಳ ತರುವಾಯ, ಸ್ವತಂತ್ರ ಭಾರತದಲ್ಲಿ ನಡೆದ ಮೊದಲ ಚುನಾವಣೆಗಳಲ್ಲಿ(1952ರಲ್ಲಿ), ಬಹುತೇಕ ಮುಸ್ಲಿಂ ಮತಗಳು ಕಾಂಗ್ರೆಸ್‌ನತ್ತ ಸಾಗಿ ಬಂದವು. ಇನ್ನೊಂದೆಡೆ ಮುಸ್ಲಿಂ ಲೀಗ್‌ನ ನಿರ್ಗಮನವಾಯಿತು. ಈಗಲೂ ಕೂಡ ಮೋದಿ ನೇತೃತ್ವದ ಬಿಜೆಪಿ ಎಲ್ಲಾ ವರ್ಗಗಳ ಹಿಂದು ಮತದಾರರತ್ತ ತನ್ನ ಗಮನ ಹರಿಸಿದೆ. ಇನ್ನೊಂದೆಡೆ ಕಾಂಗ್ರೆಸ್ ಬಹುತೇಕ ಮುಸ್ಲಿಂ ಮತದಾರರನ್ನೇ ನಂಬಿಕೊಂಡು ಕುಳಿತಿದೆ. 2019ರ ವೇಳೆಗೆ ಇತಿಹಾಸ ಅತ್ಯಂತ ವಿಜೃಂಭಣೆಯಿಂದ ಮರುಕಳಿಸಬಹುದು!
  ಏಪ್ರಿಲ್ 7ರಿಂದ ಶುರುವಾಗಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತರ, ಪಶ್ಚಿಮ ಮತ್ತು ಈಶಾನ್ಯ ರಾಜ್ಯಗಳಲ್ಲಿ ಕರಗಿಹೋಗಬಹುದು. ಈ ಕಾರಣಕ್ಕಾಗಿಯೇ ಅದು ದಕ್ಷಿಣ ಪ್ರಸ್ಥಭೂಮಿಯತ್ತ ಆಸೆಯ ಕಂಗಳಿಂದ ನೋಡುತ್ತಿದೆ. ಆದರೆ ಅಲ್ಲಿ ಅದು 113ರಲ್ಲಿ ಸುಮಾರು 50ಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಗೆಲ್ಲಲೇಬೇಕಿದೆ. ಕಾಂಗ್ರೆಸ್‌ಗೆ ಎದುರಾಗಿರುವ ಸಮಸ್ಯೆಯೆಂದರೆ, ಅದರ ಮೂರನೇ ಹಂತದ ಅವನತಿಗೆ ಕಾರಣವಾದ ಅಂಶಗಳು 'ಗುರುತು' ಅಥವಾ ವರ್ಗ ಸಂಘರ್ಷಕ್ಕೆ ಸಂಬಂಧಿಸಿದ್ದಲ್ಲ. ಬದಲಾಗಿ ಅದು ಸಂಪೂರ್ಣವಾಗಿ 'ಆಡಳಿತಕ್ಕೆ' ಸಂಬಂಧಪಟ್ಟುದಾಗಿದೆ.  1) ಉತ್ತಮ ಆಡಳಿತ ಮಾದರಿಯ ಅವಶ್ಯಕತೆ 2) ಯುಪಿಎ ಸರ್ಕಾರದಲ್ಲಿ ನಡೆದ ಬೃಹತ್ ಹಗರಣಗಳು ಮತ್ತು 3) ವಿಭಜಿತ ಮತಗಳ ಬದಲಾಗಿ ಸಂಘಟಿತ ರಾಷ್ಟ್ರೀಯ ಮತದಾನ. ಈ ಮೂರೂ ಅಂಶಗಳೇ ಈ ಬಾರಿಯ ಚುನಾವಣೆಯಲ್ಲಿನ ಚರ್ಚೆಯ ವಿಷಯ. pseudo secularism, crony socialism ಮತ್ತು ¡ convenient capitalism  ಎನ್ನುವ ಮೂರು ಅಸ್ತ್ರಗಳನ್ನು ಬಳಸಿಕೊಂಡು ಇದುವರೆಗೂ ಸೋನಿಯಾ ಮತ್ತು ರಾಹುಲ್ ದೇಶವನ್ನು ಆಳುತ್ತಾ ಬಂದಿದ್ದಾರೆ. ಆದರೆ ಈಗ ಈ ಮೂರೂ ಅಸ್ತ್ರಗಳು ರಿಪೇರಿಯಾಗದಷ್ಟು ನೆಗ್ಗಿ ಹೋಗಿವೆ. ಕಾಂಗ್ರೆಸ್‌ನ ಅಂತ್ಯಹತ್ತಿರದಲ್ಲೇ ಇದೆ!

-ಡಾ. ಪ್ರವೀಣ್ ಪಾಟೀಲ್
www. 5forty3.in


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.