ಬಾರು ತುಂಬಿಸುವ ಮೊದಲು ಭರ್ತಿಯಾಗಬೇಕಲ್ಲವೇ ಪೊಲೀಸ್ ಪಡೆ?

ಅವಧಿಗೆ ಮುನ್ನವೇ ಭೂಮಿ ಚುಂಬಿಸಿದ ಮುಂಗಾರು ಹನಿಗಳ ಸಾಲು ಬಿಸಿಲ ಬೇಗೆ..
ಬಾರು ತುಂಬಿಸುವ ಮೊದಲು ಭರ್ತಿಯಾಗಬೇಕಲ್ಲವೇ ಪೊಲೀಸ್ ಪಡೆ?
Updated on: 

ವರ್ಷದ ಹಿಂದಿನ ಮಾತು.
ಅವಧಿಗೆ ಮುನ್ನವೇ ಭೂಮಿ ಚುಂಬಿಸಿದ ಮುಂಗಾರು ಹನಿಗಳ ಸಾಲು ಬಿಸಿಲ ಬೇಗೆಯಲ್ಲಿ ಬೇಯುತ್ತಿದ್ದ ಬೆಂಗಳೂರಿಗರ ಎದೆಯಲ್ಲಿ ಮೇಘ ಮಲಾರ್ ರಾಗದ ಆಲಾಪ ಆರಂಭಿಸಿತ್ತು. ಹಿಂದೆಂದೂ ಕಾಣದಷ್ಟು ಬಿಸಿಲನ್ನು ಉಂಡು ಬಸವಳಿದಿದ್ದ 'ಬೆಂಗಳೂರಿಯನ್ಸ್‌'ಗಳ ಒಂದು ವರ್ಗಕ್ಕೆ ಅದು ಚಿಲ್ ಆಗುವ ಕಾಲ. ಇಳಿ ರಾತ್ರಿಯವರೆಗೂ ಕುಡಿಯೋಣ ಅಂದರೆ ಬಾರ್ ಮುಚ್ಚುವುದಕ್ಕೆ ರಾತ್ರಿ 11 ಡೆಡ್‌ಲೈನ್. ಇದೆಲ್ಲದಕ್ಕೂ ಬೆಂಗಳೂರು ಪೊಲೀಸರ ಅತಿಯಾದ ಕಟ್ಟುಪಾಡೇ ಕಾರಣ ಎಂದು ಶಪಿಸುತ್ತಾ 'ಆ ವರ್ಗ'ದ ಮಂದಿ ಎಂಜಿ ರಸ್ತೆಯ ಯಾವುದೋ ಕಾರ್ನರ್‌ನಲ್ಲಿ ಕರಗಿ ಹೋಗುತ್ತಿತ್ತು.
ಆದರೆ ಅದೇ ಮಳೆ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ಟೇಬಲ್ ಮುಂದೆ ಕುಳಿತು ವಾಕಿಟಾಕಿಯಲ್ಲಿ ಅನಿರೀಕ್ಷಿತವಾಗಿ ಬರುವ ಸಂದೇಶಕ್ಕಾಗಿ ಕಾಯುತ್ತಿದ್ದ ಕಾನ್‌ಸ್ಟೇಬಲ್ ತಲೆಯಲ್ಲಿ ಬೇರೆಯದೇ ಆದ ಚಿಂತೆಯನ್ನು ಬಿತ್ತುತ್ತಿದ್ದವು !
ಸ್ವಲ್ಪ ದಿನ ಕಳೆದರೆ ಶಾಲೆಗಳು ಆರಂಭವಾಗುತ್ತವೆ. ಮಗಳನ್ನು ಶಾಲೆಗೆ ಸೇರಿಸಬೇಕು. ಸಂಬಳ ಮಾತ್ರ ನಂಬಿರುವ ಕಾನ್‌ಸ್ಟೇಬಲ್ ಮಗಳನ್ನು ಅದ್ಯಾವ ಹೈಟೆಕ್ ಶಾಲೆಯವರು ಕರೆದು ಸೇರಿಸಿಕೊಂಡಾರು? ನಗರದ ಹೊರವಲಯದ ಶಾಲೆಯಲ್ಲಾದರೂ ಡೊನೇಷನ್ ಇಲ್ಲದೇ ಪ್ರವೇಶ ಕೊಡುತ್ತಾರೆಯೇ? ಉಹುಂ... ಇಲ್ಲವೇ ಇಲ್ಲ.
ಸರಿ, ಹಂಗೋ-ಹಿಂಗೋ ಹೆಂಗೋ.. ಅವರಿವರ ಬಳಿ ಸಾಲ ಕೇಳಿ ಹಣ ಹೊಂದಿಸಿದ್ದಾಯ್ತು. ಆದರೆ ಮಗಳನ್ನು ಶಾಲೆಗೆ ಕರೆದೊಯ್ದು ಅಡ್ಮಿಷನ್ ಮಾಡಿಸೋಣ ಅಂದ್ರೆ ಸಮಯವೇ ದೊಡ್ಡ ಸವಾಲು. ಏಕೆಂದರೆ ವಾರೆಂಟ್ ಜಾರಿಗೊಳಿಸುವುದಕ್ಕೆ ಸಹೋದ್ಯೋಗಿಯ ಜತೆ ಚಿಕ್ಕಮಗಳೂರಿಗೆ ಹೋಗುವಂತೆ ಆ ಕಾನ್ಸ್‌ಟೇಬಲ್‌ಗೆ ಸಾಹೇಬರ ಆದೇಶವಾಗಿತ್ತು. ಈ ಚಿಂತೆಯಲ್ಲೇ ಬಸವಳಿದು ಹೋಗುತ್ತಿದ್ದಾಗ ಕಂಟ್ರೋಲ್ ರೂಂನಿಂದ ಬಂದ ಎರಡು ಸಂದೇಶ ಆತನ ಜಂಘಾಬಲವನ್ನೇ ಇನ್ನಷ್ಟು ಉಡುಗಿಸಿತ್ತು. ಭಾರೀ ಮಳೆಗೆ ಕಬ್ಬನ್ ರಸ್ತೆಯಲ್ಲಿ ಮರ ಬಿದ್ದು ನಾಗರಿಕರು ಪರದಾಡುತ್ತಿದ್ದರೆ, ಎಂಜಿ ರಸ್ತೆ ಬಳಿ ಯುವತಿಯೊಬ್ಬಳನ್ನು ಕುಡುಕ ಚುಡಾಯಿಸಿದ್ದರಿಂದ ಜನ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದರು. ಅಧಿಕಾರಿಗಳ ಜತೆ ಸ್ಥಳಕ್ಕೆ ಧಾವಿಸಿದ ಕಾನ್ಸ್‌ಟೇಬಲ್ ಮನದಲ್ಲಿ ಒಂದೆಡೆ ಕರ್ತವ್ಯ ಮತ್ತೊಂದೆಡೆ ಮಗಳ ಅಡ್ಮಿಷನ್ ವಿಷಯಗಳ ನಡುವೆ ಯುದ್ಧ ನಡೆದಿತ್ತು.
ಮೇಲ್ನೋಟಕ್ಕೆ ಇದೊಂದು ಕಾಲ್ಪನಿಕ ಕತೆಯಂತೆ ಕಾಣಬಹುದು. ಆದರೆ ಇದು ಪೊಲೀಸರ ಬದುಕಿನ ನೈಜಸ್ಥಿತಿ. ಒಂದೆಡೆ ಕರ್ತವ್ಯದ ಒತ್ತಡಕ್ಕೆ ಸಿಬ್ಬಂದಿ ಕೊರತೆ ಕಾರಣವಾದರೆ, ಇನ್ನೊಂದೆಡೆ ಬದುಕಿನ ಜಂಜಡಕ್ಕೆ ವೇತನದ ಕೊರತೆ ಕಾರಣ. ಆದರೆ ಸದಾ ಪೊಲೀಸರನ್ನು ಅನುಮಾನದ ಕಣ್ಣುಗಳಿಂದಲೇ ನೋಡುವವರಿಗೆ ಇದು ಅರ್ಥವಾಗುವುದೇ ಇಲ್ಲ. ಅದಕ್ಕಿಂತ ಮಿಗಿಲಾಗಿ ಯಾರೂ ಅರ್ಥ ಮಾಡಿಕೊಳ್ಳಲೂ ಹೋಗುವುದಿಲ್ಲ.
ಇಂಥ ಸನ್ನಿವೇಶದಲ್ಲೇ ಬೆಂಗಳೂರು ಪೊಲೀಸರ ಮೇಲೆ 'ನೈಟ್‌ಲೈಫ್‌' ಎಂಬ 'ನೈಟ್‌ಮೇರ್‌' (ದುಸ್ವಪ್ನ) ಬಂದೆರಗಿದೆ. ನಿಧಾನವಾಗಿ ಇದು ರಾಜ್ಯದ ಇತರ ಪ್ರಮುಖ ನಗರಗಳಿಗೂ ವಿಸ್ತರಣೆ ಆಗುವ ಆತಂಕವಿದೆ.
ಹೌದು, ಒಂಬತ್ತು ವರ್ಷಗಳ ನಂತರ ಬೆಂಗಳೂರಿಲ್ಲಿ ಮತ್ತೆ 'ನೈಟ್‌ಲೈಫ್‌' ಆರಂಭಿಸುವುದಕ್ಕೆ ರಾಜ್ಯ ಸರ್ಕಾರ ಪ್ರಾಯೋಗಿಕ ಅನುಮತಿ ನೀಡಿದೆ. ಇದರೊಂದಿಗೆ ಖಾಕಿಧಾರಿಗಳ ಕತೆ-ವ್ಯಥೆ ಬಿಚ್ಚಿಕೊಂಡಿದೆ. ಜತೆಜತೆಗೆ ಚರ್ಚೆ, ಆಕ್ಷೇಪ, ಆತಂಕ ಆರಂಭವಾಗಿದೆ. ರಾತ್ರಿ ಬದುಕಿನ ಅವಧಿ ವಿಸ್ತರಣೆಗೆ ಪಟ್ಟು ಹಿಡಿದು ಕುಳಿತಿದ್ದ ನಗರದ ಸೋಕಾಲ್ಡ್ ಎಲೈಟ್ ವರ್ಗದ ಜನರ ಒತ್ತಾಸೆಗೆ ಮಣಿದಿರುವ ಸರ್ಕಾರಕ್ಕೆ ಮಾತ್ರ ಇದಾವುದರ ಪರಿವೆಯೇ ಇಲ್ಲ. ಬದಲಿಗೆ ದಿನದ 24 ಗಂಟೆಯೂ ಭದ್ರತೆ ಒದಗಿಸುವುದು ಪೊಲೀಸರ ಕರ್ತವ್ಯ, ಈ ಬಗ್ಗೆ ದೂಸ್ರಾ ಮಾತಾಡುವಂತಿಲ್ಲ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದೆ. ಆ ಮೂಲಕ ಪೊಲೀಸ್ ಪಡೆಯ ಆತ್ಮವಿಶ್ವಾಸದ ಮೇಲೊಂದು ಗೀರುಗಾಯ ಮಾಡಿದೆ.
ರಾಜ್ಯ ಪೊಲೀಸ್ ಇಲಾಖೆ ಅದರಲ್ಲೂ ವಿಶೇಷವಾಗಿ ಬೆಂಗಳೂರು ಪೊಲೀಸ್ ಘಟಕ ಹಲವು ರಚನಾತ್ಮಕ ಬದಲಾವಣೆ ನಿರೀಕ್ಷಿಸಿದೆ. ಬದಲಾದ ಕಾಲಘಟ್ಟದಲ್ಲಿ ಅದರ ಆದ್ಯತೆಗಳೂ ಬದಲಾಗಿವೆ. ಆದರೆ ಹೊಸ ಸವಾಲುಗಳನ್ನು ಎದುರಿಸಲು ಇರುವ ಸಂಖ್ಯಾಬಲ ಯಾತಕ್ಕೂ ಸಾಲದು. ಓವರ್‌ಟೈಂ ಕೆಲಸ, ಒತ್ತಡ, ಕಡಿಮೆ ವೇತನದಿಂದ ಕಂಗೆಟ್ಟಿರುವ ಕೆಳಹಂತದ ಸಿಬ್ಬಂದಿಯಲ್ಲಿ ಆತ್ಮವಿಶ್ವಾಸ ತುಂಬಲು ಹಿರಿಯ ಅಧಿಕಾರಿಗಳು ಹೆಣಗಾಡುತ್ತಿದ್ದಾರೆ. ಸ್ಥಾನಮಾನ, ಸಂಬಳ ಬಿಟ್ಟರೆ ಇವರ ಪರಿಸ್ಥಿತಿಯೂ ಕೆಳಹಂತದ ಸಿಬ್ಬಂದಿಗಿಂತ ಭಿನ್ನವಾಗೇನೂ ಇಲ್ಲ. ಆದರೆ ಇದ್ಯಾವುದರ ಕಡೆಗೂ ಗಮನ ನೀಡದ ರಾಜ್ಯ ಸರ್ಕಾರ ಪೊಲೀಸರ ಮೇಲೆ ಇನ್ನೊಂದು ಹೊರೆ ಇರಿಸಿದೆ.
ಕಾನೂನು-ಸುವ್ಯವಸ್ಥೆ ಸಮಸ್ಯೆ ಹಿನ್ನೆಲೆಯಲ್ಲಿ ಒಂಬತ್ತು ವರ್ಷಗಳ ಹಿಂದೆ 'ಮದ್ಯರಾತ್ರಿ' ಅವಧಿಯನ್ನು ಮೊಟಕುಗೊಳಿಸಲಾಗಿತ್ತು. ಇದೀಗ ಮತ್ತೆ ಅವಧಿಯನ್ನು ವಾರದ ಎರಡು ದಿನ ಮಧ್ಯರಾತ್ರಿ 1 ಗಂಟೆಯವರೆಗೆ ವಿಸ್ತರಿಸಲಾಗಿದೆ. ಈ ವ್ಯವಸ್ಥೆ ಮೂರು ತಿಂಗಳ ಕಾಲ ಪ್ರಾಯೋಗಿಕವಾಗಿ ಜಾರಿಯಲ್ಲಿರಲಿದೆ. ಕಾನೂನು-ಸುವ್ಯವಸ್ಥೆಗೆ ಧಕ್ಕೆಯಾಗದೇ ಇದ್ದರೆ ಎಂದಿನಂತೆ ಮುಂದುವರಿಸುವುದು ಸರ್ಕಾರದ ಇರಾದೆ. ಬೆಂಗಳೂರು ಅಂತಾರಾಷ್ಟ್ರೀಯ ನಗರವಾದ್ದರಿಂದ ಇಲ್ಲಿಗೆ ದೇಶ-ವಿದೇಶದ ಜನರು ಬರುತ್ತಾರೆ. ಹೀಗಾಗಿ ರಾತ್ರಿ ಊಟ ಮತ್ತು 'ಇತರೆ ವ್ಯವಸ್ಥೆ'ಗಳಿಗೆ ಸಮಸ್ಯೆಯಾಗುವುದರಿಂದ ಬಾರ್ ಅಂಡ್ ರೆಸ್ಟೋರೆಂಟ್‌ಗಳ ಅವಧಿಯನ್ನು ಮಧ್ಯರಾತ್ರಿಯವರೆಗೂ ವಿಸ್ತರಿಸಿ ಎಂದು ಸಮಾಜದ ಹೈಪ್ರೊಫೈಲ್ ವರ್ಗದ ಮಂದಿ ಎನಿಸಿಕೊಂಡವರು ಒತ್ತಡ ಹಾಕುತ್ತಿದ್ದರು. ಅವರ ಒತ್ತಡಕ್ಕೆ ಮಣಿಯುವಾಗ ರಾಜ್ಯ ಸರ್ಕಾರ ಭದ್ರತೆಯ ಮತ್ತೊಂದು ಮಗ್ಗುಲನ್ನು ಅವಲೋಕಿಸದೇ ಹೋಗಿರುವುದು ಮಾತ್ರ ವಿಷಾದನೀಯ.
ರಾಜ್ಯ ಸರಕಾರದ ಕ್ರಮ ಸಾರಾಸಗಟಾಗಿ ಪೊಲೀಸರಲ್ಲಿ ಇರುಸು-ಮುರುಸಿನ ಜತೆಗೆ ಮುನಿಸೂ ಮೂಡಿಸಿದೆ. ಏಕೆಂದರೆ ನೈಟ್‌ಲೈಫ್ ಅವಧಿ ವಿಸ್ತರಣೆಗೆ ಅವಕಾಶ ನೀಡಲೇಬಾರದು. ಇದರಿಂದ ಕಾನೂನು-ಸುವ್ಯವಸ್ಥೆಗೆ ಧಕ್ಕೆಯಾಗುವುದು ಮಾತ್ರವಲ್ಲ, ಕರ್ತವ್ಯ ನಿರ್ವಹಣೆಯ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ ಎಂಬುದು ಅವರ ಒಮ್ಮತದ ಅಭಿಪ್ರಾಯ. ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಈ ಬಗ್ಗೆ ಸಂವಾದ ಕಾರ್ಯಕ್ರಮವೊಂದರಲ್ಲಿ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೂ ಸರ್ಕಾರ ಇದಕ್ಕೆ ಅವಕಾಶ ನೀಡಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ.
ವಾಸ್ತವವಾಗಿ ಅಂಕಿ-ಸಂಖ್ಯೆಯ ಲೆಕ್ಕಾಚಾರದಲ್ಲಿ ಬೆಂಗಳೂರು ಪೊಲೀಸ್ ಇಲಾಖೆ ಸ್ಥಿತಿಯೇ ಚಿಂತಾಜನಕವಾಗಿದೆ. ದೇಶದ ಅತ್ಯಂತ ಶ್ರೇಷ್ಠ ಪೊಲೀಸ್ ಘಟಕಗಳಲ್ಲಿ ಒಂದು ಎಂದು ಹೆಸರಾಗಿದ್ದರೂ ಸಂಖ್ಯಾಬಲ ಮಾತ್ರ ಅಂತಾರಾಷ್ಟ್ರೀಯ ಮಾನದಂಡದ ಪ್ರಕಾರ ತೀರಾ ಕಡಿಮೆ ಇದೆ. ಇದು ಇಂದು, ನಿನ್ನೆಯ ಸಮಸ್ಯೆಯಲ್ಲ. ಹತ್ತಾರು ವರ್ಷಗಳಿಂದ ನಗರ ಪೊಲೀಸ್ ಆಯುಕ್ತರ ಹುದ್ದೆಗೇರಿದ ಐಪಿಎಸ್ ಅಧಿಕಾರಿಗಳೆಲ್ಲರೂ ಈ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತಲೇ ಬಂದಿದ್ದಾರೆ. ಆದರೆ ಇದು ಸರಕಾರದ ಕಣ್ಣಿಗೂ ಬೀಳುತ್ತಿಲ್ಲ, ಕಿವಿಗೂ ಕೇಳಿಸುತ್ತಿಲ್ಲ. ಹಿಂದೆ ನಗರದಲ್ಲಿ ಲೈವ್‌ಬ್ಯಾಂಡ್ ಹಾವಳಿ ಮಿತಿಮೀರಿದಾಗ ಕಾನೂನು-ಸುವ್ಯವಸ್ಥೆ ಹದೆಗೆಡುವುದಕ್ಕೆ ಕಾರಣವಾಗಿದ್ದು ಪೊಲೀಸರ ಅದಕ್ಷತೆಯಲ್ಲ, ಬದಲಿಗೆ ಸಂಖ್ಯಾ ಬಲದ ಕೊರತೆ. ಆದರೆ ಇದನ್ನು ಒಪ್ಪಲು ಯಾರೂ ಸಿದ್ಧರಿಲ್ಲ. ಹಗಲು-ರಾತ್ರಿ ಎನ್ನದೇ, ಸಂಸಾರದ ಪರಿವೇ ಇಲ್ಲದೆ, ಪರಿವೇ ಇದ್ದರೂ ಏನೂ ಮಾಡಲಾಗದೆ ಮೌನವಾಗಿ ರೋದಿಸುತ್ತಿರುವ ಪೊಲೀಸರ ಬವಣೆ ಮಾತ್ರ ಯಾರಿಗೂ ಅರ್ಥವಾಗುತ್ತಿಲ್ಲ.
ದೇಶದ ಐಟಿ ಸಿಟಿ, ಜ್ಞಾನನಗರಿ ಎಂದು ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ಪೊಲೀಸ್ ಘಟಕಕ್ಕೆ ಮಂಜೂರಾದ 9585 ಹುದ್ದೆಗಳ ಪೈಕಿ ಇನ್ನೂ 2393 ರಷ್ಟು ಖಾಲಿ ಇದೆ. ಸಿಬ್ಬಂದಿ ಕೊರತೆಯಿಂದ ಪಾಸ್‌ಪೋರ್ಟ್ ಪರಿಶೀಲನಾ ಕಾರ್ಯವೇ ನಿಗದಿತ ಸಮಯದಲ್ಲಿ ಮುಕ್ತಾಯಗೊಳ್ಳುತ್ತಿಲ್ಲ. ಹೀಗಿರುವಾಗ ಇರುವ ಸಿಬ್ಬಂದಿಯನ್ನು ಮಧ್ಯರಾತ್ರಿವರೆಗೂ ಬಾರ್ ಅಂಡ್ ರೆಸ್ಟೋರೆಂಟ್ ಬಾಗಿಲು ಕಾಯುವುದಕ್ಕೆ ನಿಯೋಜಿಸಿದರೆ ಕಾನೂನು-ಸುವ್ಯವಸ್ಥೆ, ಅಪರಾಧ ಪತ್ತೆ ಹಾಗೂ ದೈನಂದಿನ ಪೊಲೀಸ್ ವ್ಯವಹಾರದ ಕತೆ ಏನಾಗಬೇಡ? ಏನಾದರೂ ಅಪರಾಧ ಪ್ರಕರಣ ಘಟಿಸಿದರೆ, ಇಡೀ ಸಮಾಜ ಪೊಲೀಸರನ್ನು ವಿಲನ್‌ಗಳಂತೆ ನೋಡುತ್ತದೆ. ಆದರೆ ತಾನೇ ಇಂಥದ್ದೊಂದು ಸನ್ನಿವೇಶಕ್ಕೆ ಪ್ರೇರಕ ಆಗಬಾರದು ಎನ್ನುವುದನ್ನು ಮರೆಯುತ್ತದೆ. ನೈಟ್‌ಲೈಫ್ ಇಲ್ಲದಿದ್ದರೆ ಬೆಂಗಳೂರೇನು ಮುಳುಗಿ ಹೋಗುತ್ತದೆಯೇ? ನೈಟ್‌ಲೈಫ್ ಬೇಕು ಎನ್ನುವವರು ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಾರೆಯೇ? ಯಾಕಾಗಿ ಸರಕಾರ ಇಂಥಹ ಒತ್ತಡಗಳಿಗೆ ಮಣಿಯಬೇಕು? ಅದೇನು ಶಾಲೆಯೇ, ಆಸ್ಪತ್ರೆಯೇ, ಸಾರಿಗೆ ಸೌಲಭ್ಯವೇ ಬೇಕೇ ಬೇಕು ಎನ್ನಲು. ಹಿಂದೆ-ಮುಂದೆ ನೋಡದೆ ಅದನ್ನು ಕಲ್ಪಿಸಲು. ಯಾವುದೇ ಒಂದು ವ್ಯವಸ್ಥೆ ಜಾರಿಗೆ ತರುವ ಮುನ್ನ ಅದರ ಸಾಧಕ-ಬಾಧಕಗಳ ಪರಿಶೀಲನೆ ಮುಖ್ಯ. ಅದಕ್ಕಿಂತ ಮಿಗಿಲಾಗಿ ಸಾಧಕ-ಬಾಧಕಗಳ ಪರಿಶೀಲನೆಗೆ ಒಳಪಡಲು ಈ ವಿಷಯ ಅರ್ಹವೇ ಎಂಬುದನ್ನು ನೋಡಬೇಕು. ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುವ ಉಸಾಬರಿ ಸರಕಾರಕ್ಕಾದರೂ ಏಕೆ ಬೇಕು?
ಬೆಂಗಳೂರಿನ ಜನಸಾಂದ್ರತೆಗೆ ಅನುಗುಣವಾಗಿ ಪೊಲೀಸ್ ಸಂಖ್ಯೆಯನ್ನು ಹೆಚ್ಚಿಸಿ ಎಂದು ಮೊಟ್ಟಮೊದಲ ಬಾರಿಗೆ ಧ್ವನಿ ಎತ್ತಿದವರು ದಕ್ಷ ಮತ್ತು ಪ್ರಾಮಾಣಿಕ ಐಪಿಎಸ್ ಅಧಿಕಾರಿಯೆಂದೇ ಹೆಸರಾದ ಡಾ.ಅಜಯ್‌ಕುಮಾರ್ ಸಿಂಗ್. ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಸಂದರ್ಭದಲ್ಲಿ ವಿವಿಧ ಮಹಾನಗರಗಳ ಪೊಲೀಸ್ ಸಂಖ್ಯಾ ಬಲ ಹಾಗೂ ಜನಸಾಂದ್ರತೆಯನ್ನು ಅಧ್ಯಯನ ಮಾಡಿದ ಅವರು 2006 ರಲ್ಲಿ ಸರ್ಕಾರಕ್ಕೆ ಈ ಬಗ್ಗೆ ವರದಿ ಸಲ್ಲಿಸಿದ್ದರು. ಸಿಬ್ಬಂದಿ ನೇಮಕದ ಭರವಸೆ ನೀಡಿದ ಸರ್ಕಾರ ಆ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಮುಂದೆ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದವರೆಲ್ಲರೂ ಮತ್ತೆ ಮತ್ತೆ ಇದೇ ವಿಚಾರ ಪ್ರಸ್ತಾಪಿಸಿದರೂ ಪ್ರಯೋಜನವಾಗಲಿಲ್ಲ. ಬರೀ ವಿಷಯ ಪ್ರಸ್ತಾಪನೆಗಷ್ಟೇ ಅದು ಸೀಮಿತವಾಯಿತು. ಆದರೆ ಅದೇ ಕಾಲಕ್ಕೆ ಪೊಲೀಸರ ಮೇಲಿನ ಕರ್ತವ್ಯದ ಒತ್ತಡ ಮಾತ್ರ ದಿನೇ ದಿನೇ ಹೆಚ್ಚುತ್ತಲೇ ಇದೆ. ಈಗ ಆಗಲೋ-ಈಗಲೋ ಮನೆ-ಮಠ, ಸಂಸಾರ ನೆನೆಸಿಕೊಳ್ಳುವ ಪೊಲೀಸರು ಇದೀಗ ಶಾಶ್ವತವಾಗಿ 'ನೈಟ್‌ಲೈಫ್‌' ಮರೆಯುವ ಸ್ಥಿತಿ ತಲುಪಲಿದ್ದಾರೆ.
ರಾಷ್ಟ್ರೀಯ ಅಪರಾಧ ದಾಖಲೆ ಘಟಕ (ಎನ್‌ಸಿಆರ್‌ಬಿ ) ವರದಿ ಪ್ರಕಾರ ದೇಶದ ಉಳಿದ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲೇ ಅತಿ ಕಡಿಮೆ ಪೊಲೀಸರಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ 600 ಪೊಲೀಸರು ಇದ್ದಾರೆ. ಮುಂಬಯಿಯಲ್ಲಿ ಈ ಸಂಖ್ಯೆ 450, ಹೈದ್ರಾಬಾದ್‌ನಲ್ಲಿ 350, ಚೆನ್ನೈನಲ್ಲಿ 400. ಆದರೆ ಬೆಂಗಳೂರಿನಲ್ಲಿ ಪ್ರತಿ ಲಕ್ಷ ಮಂದಿಗೆ ಇರುವುದು ಕೇವಲ 140 ಪೊಲೀಸ್ ಸಿಬ್ಬಂದಿ!
ಈ ಪಡೆಯನ್ನು ಅಪರಾಧ ಪತ್ತೆ, ಕಾನೂನು-ಸುವ್ಯವಸ್ಥೆ, ಎಸ್ಕಾರ್ಟ್, ವಿವಿಐಪಿ ಭದ್ರತೆ ಜತೆಗೆ ಹಿರಿಯ ಅಧಿಕಾರಿಗಳ ಮನೆ ಚಾಕರಿಗೂ ಬಳಸಿಕೊಳ್ಳಲಾಗುತ್ತಿದೆ. ಹಾಲು, ತರಕಾರಿ ತರುವುದರಿಂದ ಹಿಡಿದು ಪಾತ್ರೆ-ಪಗಡ ತೊಳೆಯಲೂ ಅವರನ್ನು ಬಳಸಿಕೊಳ್ಳಲಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ರಾಜ್ಯ ಸರ್ಕಾರ ನೈಟ್‌ಲೈಫ್ ವಿಸ್ತರಣೆ ನೆಪದಲ್ಲಿ ಅವರನ್ನು ಇನ್ನಷ್ಟು ಶೋಷಣೆಗೆ ಗುರಿಪಡಿಸಲು ಮುಂದಾಗಿರುವುದು ಎಷ್ಟರಮಟ್ಟಿಗೆ ಸರಿ?
ಸರ್ಕಾರದ ಈ ತೀರ್ಮಾನದ ಹಿಂದೆ ರಾಜಕೀಯ ಲೆಕ್ಕಾಚಾರದ ಜತೆಗೆ ಅಬಕಾರಿ ಲಾಬಿ ಕೂಡ ಕೆಲಸ ಮಾಡಿದೆ. ಅಬಕಾರಿ ವಲಯದಿಂದಲೇ ಹೆಚ್ಚು ರಾಜಸ್ವ ನಿರೀಕ್ಷೆ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪೊಲೀಸರ ಕಷ್ಟ-ಕಾರ್ಪಣ್ಯ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಸಲಹೆ-ಅಭಿಪ್ರಾಯಗಳು ಹೇಗೆ ತಾನೇ ಪಥ್ಯವಾಗಲು ಸಾಧ್ಯ?!
ರಾಜಕೀಯದ ನಡೆಗಳು ಯಾವತ್ತೂ ಮೇಲ್ನೋಟದ ಮೆರುಗು. ಇವರು ಸ್ವಾತಂತ್ರ್ಯ, ಸಮಾಜವಾದ, ಸಂವಿಧಾನ ಎಂಬ ಪದಪುಂಜಗಳನ್ನು ಮುಂದುಮಾಡಿ ತಮ್ಮನ್ನು ಸಮರ್ಥಿಸಿಕೊಳ್ಳುತ್ತಾರೆ. ಈ ಭರದಲ್ಲಿ ಆದ್ಯತೆಗಳನ್ನೇ ತುಳಿಯುತ್ತಾರೆ. ಹಿಂದುಳಿದವರಿಗೆ, ಬಡವರಿಗೆ ಸಹಾಯ ಮಾಡುವುದು ಸರಿ. ಆದರೆ ಆ ಬಗ್ಗೆ ನಿಜ ಕಾಳಜಿ ಇದ್ದರೆ ಪುಕ್ಕಟೆ ಯೋಜನೆಗಳನ್ನು ಘೋಷಿಸುವುದಕ್ಕೂ ಮೊದಲು ಖಾಲಿ ಬಿದ್ದಿರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬುವ ಕೆಲಸವಾಗಬೇಕಿತ್ತು. ಇದರಿಂದ ಅವೆಷ್ಟೋ ಹಿಂದುಳಿದವರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುತ್ತಿದ್ದರು. ಅಂಥ ದೂರಗಾಮಿ ಹೆಜ್ಜೆಗಳು ಆಳುವವರಿಗೆ ಬೇಕಿಲ್ಲ. ಬೆಂಗಳೂರಿನಂಥ ಮಹಾನಗರದಲ್ಲಿ ರಾತ್ರಿ ಬದುಕು ಸಂಚಲನ ಕಳೆದುಕೊಂಡರೆ ಹೇಗೆ ಎಂದು ವಾದಿಸುವವರಿಗೆ ಬಿಸಿಲಲ್ಲಿ ಬೆಂಡಾಗುವ ಪೇದೆಗಳ ಶ್ರಮ ಹಾಗೂ ಸಂಖ್ಯಾಬಲದ ಕೊರತೆಯಿಂದ ಬಳಲಿರುವ ಪೊಲೀಸ್ ವ್ಯವಸ್ಥೆ ಕಣ್ಣಿಗೇ ಕಾಣುವುದಿಲ್ಲ.
ಲಗೋರಿ: ನಮ್ಮ ಸ್ವಾತಂತ್ರ್ಯ ಇತರರ ಆತಂಕಕ್ಕೆ ಕಾರಣವಾಗಬಾರದು.

-ಪಿ. ತ್ಯಾಗರಾಜ್
thyagarjun@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com