

ಅಷ್ಟಕ್ಕೂ ನಾವು ನೋಡದ ಮರವಾ ಅದು? ಬಹರೇನ್ನಂಥ ಮರಳುಗಾಡಿನಲ್ಲಿ ಇನ್ನೆಂಥ ಮರ ಇರಲು ಸಾಧ್ಯ? ಪ್ರಶ್ನೆಗಳು ಸಹಜ. ಕನ್ನಡಿಗ ಗೆಳೆಯರು ಅಲ್ಲಿಗೆ ಭೇಟಿ ಕೊಡಲೇಬೇಕು ಎಂದು ಒತ್ತಾಯಿಸಿದಾಗ ಶುರುವಿನಲ್ಲಿ ನನಗೂ ಹಾಗನ್ನಿಸಿದ್ದು ಸತ್ಯ. ಅದರ ಸನ್ನಿಧಿಯಲ್ಲೇ ನೀರ ಮಾತಿಗೆ ಹೊರಟು ನಿಂತ ಅನಿವಾರ್ಯತೆಯಲ್ಲಿ ಅದನ್ನೂ ಒಮ್ಮೆ ನೋಡಿ ಬರೋಣ ಎಂದುಕೊಂಡೆ. ಬಹರೇನ್ ನಗರದ ಗಡಿ ದಾಟಿದೆವು ನೋಡಿ, ಆಗ ಸಣ್ಣದೊಂದು ಕುತೂಹಲ ನನ್ನಲ್ಲಿಯೂ ಬಲಿಯಲಾರಂಭಿಸಿತು.
ಅಷ್ಟಕ್ಕೂ ಅದರ ಹೆಸರೇ 'ಜೀವ ವೃಕ್ಷ'. ಒಂದಷ್ಟು ಅಚ್ಚರಿ, ಬಹಳಷ್ಟು ಕುತೂಹಲ. ಇನ್ನಷ್ಟು ತವಕ... ಹೀಗೆ ನಾನಾ ಭಾವಗಳೊಂದಿಗೆ ನಾನಲ್ಲಿಗೆ ಹೊರಟು ನಿಂತಿದ್ದೆ. ಸುತ್ತಲೂ ಕಣ್ಣು ಹಾಸಿದ ಉದ್ದಕ್ಕೂ ಇರುವುದು ಮರಳಿನ ರಾಶಿಯೇ. ಬಟಾನು ಬಯಲದು. ಹೇಳಿ ಕೇಳಿ ಅದು ಮರಳುಗಾಡು. ಅಲ್ಲಿ ಇನ್ನೇನು ಇರಲು ಸಾಧ್ಯ? ಮೇಲೆ ಕಾಯುವ ಬಿಸಲು. ಸುಯ್ಯನೆ ಸುಳಿಯುವ ಶೀತಗಾಳಿ, ಕೆಳಗೆ ಕಾಯಲು ಸಿದ್ಧವಾಗಿದ್ದ ನೆಲ. ಅದು ಬಿಟ್ಟರೆ ಅಲ್ಲಿ ನಿಂತದ್ದು ಬೋಳು ಬಸವನ ರೀತಿಯ ಆ ಮರವಷ್ಟೆ. ತಕ್ಷಣಕ್ಕೆ ಕೀರ್ತನೆ ನೆನಪಾಗದಿರಲಿಕ್ಕೆ ಸಾಧ್ಯವೇ ಇಲ್ಲ- ಅಡಿಗಡಿಗೆ ಆಹಾರವನಿತ್ತು... ಪಕ್ಕಾ ಹಾಗೆಯೇ. ಅಲ್ಲಿ ಆ ಮರವ ನೆಟ್ಟವರಾರೋ? ನೀರೆರೆದವರಾರೋ? ಕಾಪಿಟ್ಟವರಾರೋ? ಮೂಗಿನ ಮೇಲೆ ಬೆರಳು ತನ್ನಿಂದ ತಾನೇ ಹೋಗುತ್ತದೆ.
ನಮ್ಮ ಬನವಾಸಿ ಬಳಿಯ ಜಡೆಯಲ್ಲಿ ಭತ್ತದ ಗದ್ದೆಯಲ್ಲಿ ವಿಶಾಲವಾಗಿ ಹರಡಿ ನಿಂತ ವೃಕ್ಷವೊಂದು ಜನರ ಆಕರ್ಷಣೆಯ ಕೇಂದ್ರಬಿಂದುವಾಗಿರುವುದನ್ನು ಓದಿದ್ದೀರಿ. ಬೆಂಗಳೂರು ಸಮೀಪದ ದೊಡ್ಡಾಲದ ಮರ ಗೊತ್ತೇ ಇದೆ. ಹೀಗೆ ಹಲವಿರಬಹುದು. ಆದರೆ ಇತ್ತೀಚೆಗೆ ಬಹರೇನ್ ಪ್ರವಾಸ ಕೈಗೊಂಡಿದ್ದಾಗ ಅಲ್ಲಿ ಕಂಡ 'ಜೀವವೃಕ್ಷ' ನಿಜಕ್ಕೂ ವಿಶೇಷವೇ. ತಕ್ಷಣಕ್ಕೆ ಎಂಥವರಿಗೂ ಅನಿಸುವುದು ಇದೂ ಒಂದು ಮರವಷ್ಟೆ. ನನಗೂ ಇಂಥದ್ದೇ ಅನುಭವ ಆಯಿತು. ಅದರೆ ಈ 'ಟ್ರೀ ಆಫ್ ಲೈಫ್' ಹೆಗ್ಗಳಿಕೆ ಅಷ್ಟಕ್ಕೆ ನಿಲ್ಲುವುದಿಲ್ಲ. ಬಹರೇನ್ನಿಂದ ಜೆಬೆಲ್ ಖಾನ್ ಹಾದಿಯಲ್ಲಿ ಕೇವಲ ಎರಡೂವರೆ ಕಿ.ಮೀ. ದೂರದಲ್ಲಿರುವ ಈ ವೃಕ್ಷ ಅಲ್ಲಿನ ಪ್ರಮುಖ ಪ್ರವಾಸಿ ತಾಣ. ವರ್ಷಕ್ಕೆ 50 ಸಾವಿರ ಜನರನ್ನು ತನ್ನತ್ತ ಸೆಳೆಯುತ್ತಿದ್ದರೆ ಅದಕ್ಕೆ ಕಾರಣಗಳಿಲ್ಲದಿಲ್ಲ.
ಅಷ್ಟಕ್ಕೂ ನಾವು ನೋಡದ ಮರವಾ ಅದು? ಬಹರೇನ್ನಂಥ ಮರಳುಗಾಡಿನಲ್ಲಿ ಇನ್ನೆಂಥ ಮರ ಇರಲು ಸಾಧ್ಯ? ಪ್ರಶ್ನೆಗಳು ಸಹಜ.
ಕನ್ನಡಿಗ ಗೆಳೆಯರು ಅಲ್ಲಿಗೆ ಭೇಟಿ ಕೊಡಲೇಬೇಕು ಎಂದು ಒತ್ತಾಯಿಸಿದಾಗ ಶುರುವಿನಲ್ಲಿ ನನಗೂ ಹಾಗನ್ನಿಸಿದ್ದು ಸತ್ಯ. ಅದರ ಸನ್ನಿಧಿಯಲ್ಲೇ ನೀರ ಮಾತಿಗೆ ಹೊರಟು ನಿಂತ ಅನಿವಾರ್ಯತೆಯಲ್ಲಿ ಅದನ್ನೂ ಒಮ್ಮೆ ನೋಡಿ ಬರೋಣ ಎಂದುಕೊಂಡೆ. ಬಹರೇನ್ ನಗರದ ಗಡಿ ದಾಟಿದೆವು ನೋಡಿ, ಆಗ ಸಣ್ಣದೊಂದು ಕುತೂಹಲ ನನ್ನಲ್ಲಿಯೂ ಬಲಿಯಲಾರಂಭಿಸಿತು. ರಸ್ತೆ ಅಕ್ಕಪಕ್ಕ ಎಲ್ಲಿಯೂ ಪುಟ್ಟದೊಂದು ಹುಲ್ಲೂ ಇಲ್ಲ. ಕಣ್ಣು ಹಾಯಿಸಿದಷ್ಟು ದೂರವೂ ಬರಡು, ಬರಡು... ಮರಳು... ಇಂಥ ಮರಳುಗಾಡಿನಲ್ಲಿ ಒಂಟಿ ಜಟಕನಂತೆ ಎತ್ತರಕ್ಕೆ ಬೆಳೆದು ನಿಂತಿರುವ ಮರ ಕ್ಷಣಕ್ಷಣಕ್ಕೂ ನನ್ನ ಆಸಕ್ತಿ ಗರಿಗೆದರುತ್ತ ಹೋಗಲು ಕಾರಣವಾದದ್ದು ಇದೊಂದೇ ಸಂಗತಿ. 'ಅದೋ ನೋಡಿ, ಅಲ್ಲಿ ಕಾಣುತ್ತಿದೆಯಲ್ಲ. ಅದೇ ಟ್ರೀ ಆಫ್ ಲೈಫ್' ಎಂದು ತೋರಿಸಿದ್ದರು ಗೆಳೆಯರಾದ ಕಿರಣ್ ಉಪಾಧ್ಯಾಯ, ರಮೇಶ್ ಮಂಜೇಶ್ವರ್, ಅರುಣ್ ಐರೋಡಿ ಮತ್ತಿತರರು. 'ವಾಪಸ್ ಹೋಗೋಣವಲ್ಲ' ಎಂದು ಛೇಡಿಸಿದರು. ಒಂದು ಕಿ.ಮೀ.ಗೂ ಹೆಚ್ಚು ದೂರ ಕ್ರಮಿಸಿದ ನಂತರ ಸಿಕ್ಕಿತು ನೋಡಿ 25 ಅಡಿ ಎತ್ತರದ ಮರಳು ದಿಬ್ಬದ ಮೇಲೆ ಬೆಳೆದು ನಿಂತಿರುವ ಮಹಾವೃಕ್ಷ! ಸುತ್ತಮುತ್ತ ಸನಿಹದಲ್ಲಿ ಮತ್ತೆಲ್ಲೂ ಹಸಿರ ಸುಳಿವಿಲ್ಲ. ಸುತ್ತಮುತ್ತಲಿನ ಕಿ.ಮೀ.ಗಟ್ಟಲೆ ಸುತ್ತಳತೆಯಲ್ಲಿ ಇದೊಂದೇ ವೃಕ್ಷ!! ಹಚ್ಚ ಹಸಿರಿನಿಂದ ಕೂಡಿದ ತಾಜಾ ಎಲೆಗಳಿಂದ ನಳನಳಿಸುತ್ತಿದೆ. ಮರದ ಸನಿಹ ಹೋಗುತ್ತಿದ್ದಂತೆ ಆ ಮರುಭೂಮಿಯಲ್ಲೂ ಘಮ್ಮೆನ್ನುವ, ಆಹ್ಲಾದಕರ ಪರಿಮಳ ನಮ್ಮನ್ನು ಸೋಕಿ ಮನಕ್ಕೆ ಮುದ ನೀಡುವ ತಣ್ಣನೆಯ ಗಾಳಿ.
ಆ ಮರ ಇರುವ ಸ್ಥಳ ಬಹರೇನಿಯನ್ನರಿಗೆ ಪೂಜನೀಯ ತಾಣ. ದೇವರೇ ಆ ವೃಕ್ಷವನ್ನು ಭುವಿಗೆ ಕಳಿಸಿದ್ದಾನೆ ಎನ್ನುವ ನಂಬಿಕೆ. ಆ ಮರದ ಮೇಲೆ ಹೆಸರು ಬರೆದರೆ ಒಳ್ಳೆಯದಾಗುತ್ತದೆ ಎನ್ನುವ ಭಾವನೆ. 32 ಅಡಿಯಷ್ಟು ಎತ್ತರ ಇರುವ ಟ್ರೀ ಆಫ್ ಲೈಫ್ನ ಆಯುಸ್ಸು 500 ವರ್ಷ ಅಷ್ಟೆ. ಅದರ ಬೇರುಗಳು ನೆಲದ ಆಳದಲ್ಲಿ 53 ಮೀಟರ್ವರೆಗೆ ಹರಡಿಕೊಂಡಿವೆ. 1583ರಲ್ಲಿ ಇದನ್ನು ನೆಡಲಾಗಿದೆ ಎನ್ನುವುದು ಸ್ಥಳೀಯರ ಭಾವನೆ. 'ಟ್ರೀ ಆಫ್ ಲೈಫ್' ಬಹರೇನ್ನ ಪುರಾತನ ನಾಗರಿಕತೆಯಾದ ದಿಲ್ಮನ್ ನಾಗರಿಕತೆಯಲ್ಲಿ ನೆಟ್ಟ ಮರ ಎನ್ನುವುದು ಪ್ರಾಚ್ಯವಸ್ತು ಶಾಸ್ತ್ರಜ್ಞರ ಅಭಿಮತ.
ಸುತ್ತಮುತ್ತ ಎಲ್ಲಿಯೂ ದೊಡ್ಡ ಮರಗಳಿಲ್ಲದಿದ್ದರೂ ಈ ಮರ ಮಾತ್ರ ಅದು ಹೇಗೆ ಬದುಕಿದೆ? ಅದಕ್ಕೆ ಅಗತ್ಯವಿರುವ ನೀರು ಎಲ್ಲಿಂದ ಸಿಗುತ್ತದೆ? ಇಲ್ಲಿನ ವಾತಾವರಣದಲ್ಲಿ ಇಷ್ಟು ತೇವಾಂಶ ಹೇಗೆ ಸಾಧ್ಯವಾಗಿದೆ? ನಮ್ಮಂತೆಯೇ ಟ್ರೀ ಆಫ್ ಲೈಫ್ ಅನ್ನು ನೋಡಲು ಬಂದಿದ್ದ ಹೆಚ್ಚಿನವರ ಮನದಲ್ಲಿ ಮೂಡಿದ ಪ್ರಶ್ನೆಗಳಿವು. 'ಈ ಜೀವವೃಕ್ಷ ಸಮುದ್ರ ಮಟ್ಟದಿಂದ ಸುಮಾರು 12 ಮೀಟರ್ ಎತ್ತರದಲ್ಲಿದೆ. ಮರ ಇರುವ ಜಾಗದಲ್ಲಿ ಅಂತರ್ಜಲ ಸಮುದ್ರ ಮಟ್ಟಕ್ಕಿಂತ ಆಳದಲ್ಲಿದೆ. ಮಿಗಿಲಾಗಿ ಇದರ ಬೇರುಗಳು 53 ಮೀಟರ್ವರೆಗೆ ಹರಡಿಕೊಂಡಿರುವುದರಿಂದ ನೀರನ್ನು ಸುಲಭವಾಗಿ ಎಳೆದುಕೊಳ್ಳುತ್ತದೆ. ಭೂಮಿಯ ಆಳದಿಂದಲೇ ನೀರು ವಿಫುಲವಾಗಿ ಸಿಗುವುದರಿಂದ ಮರ ಸದಾ ಹಸಿರಾಗಿದೆ, ವಾತಾವರಣದಲ್ಲಿ ತೇವಾಂಶ ಕಾಪಾಡಿಕೊಳ್ಳುವುದು ಸಾಧ್ಯವಾಗಿದೆ' ಎನ್ನುವ ವಿವರಣೆಯನ್ನು ಗೆಳೆಯರು ನೀಡಿದರು.
ನನ್ನ ಕುತೂಹಲ ತಣಿದಿರಲಿಲ್ಲ. ಪಕ್ಕದಲ್ಲೇ ಪುಟ್ಟದೊಂದು ಮ್ಯೂಸಿಯಂ ಅನ್ನು ಬಹರೇನ್ ರಾಜಾಡಳಿತ ಕಟ್ಟಿ ನಿಲ್ಲಿಸಿದೆ. ಅದರೊಳಕ್ಕೆ ಹೊಕ್ಕೆ. ಸುತ್ತಮುತ್ತಲೂ ಪುಟ್ಟ ಕಾಂಪೌಂಡ್ ಕಟ್ಟಿ ಮರದ ಸಂರಕ್ಷಣೆಗೂ ಒಂದಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ ಬಹರೇನ್ ಆಡಳಿತ. ಮ್ಯೂಸಿಯಂ ಸಹ ಇನ್ನೂ ಪೂರ್ಣ ಅಭಿವೃದ್ಧಿಗೊಳ್ಳಬೇಕಿದೆ. ಆದರೆ ಪ್ರಾಥಮಿಕ ಮಾಹಿತಿಗಳಿಗೆ ಅಲ್ಲಿ ಕೊರತೆ ಇರಲಿಲ್ಲ. ಅಲ್ಲಿದ್ದ ಒಂದು ಮಾಹಿತಿ ನನ್ನನ್ನು ಬಹುವಾಗಿ ಸೆಳೆಯಿತು. ಅದೆಂದರೆ- ಗತಿಸಿದ ಕೃಷಿ ನಾಗರಿಕತೆಯ ಕುರುಹಾಗಿ ಟ್ರೀ ಆಫ್ ಲೈಫ್ ಉಳಿದುಕೊಂಡಿದೆ ಎನ್ನುವುದು. ದಿಲ್ಮನ್ ನಾಗರಿಕತೆ ಕಾಲದಲ್ಲಿ ಅಂದರೆ ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ ಬಹರೇನ್ ಹಸಿರಿನಿಂದ ಸಮೃದ್ಧವಾಗಿತ್ತು. ಎಲ್ಲೆಲ್ಲೂ ಶುದ್ಧ ನೀರು ಸಿಗುತ್ತಿತ್ತು. ಅಲ್ಲಲ್ಲಿ ನದಿ, ತೊರೆಗಳಿದ್ದವು. ಕೃಷಿ ಪ್ರಧಾನ ಬದುಕು ಈ ನಾಗರಿಕತೆಯದಾಗಿತ್ತು. ಆಗಿನ ಬಹರೇನ್ಗೂ, ಈಗಿನ ಬಹರೇನ್ಗೂ ಅಜಗಜಾಂತರ. ಗಿಡಮರಗಳಿಂದ ಕೂಡಿದ್ದ ಅಂದಿನ ಬಹರೇನ್ ಎಲ್ಲಿ ಜೀವ ಕಳೆದುಕೊಂಡು ಮರಳುಗಾಡಾಗಿರುವ ಇಂದಿನ ಬಹರೇನ್ ಎಲ್ಲಿ ಹಲವಾರು ಸ್ಥಿತ್ಯಂತರಗಳಿಂದ ಕೃಷಿ ನಾಶವಾದದ್ದೇ ಸಮುದ್ರ ಮಟ್ಟ ಹಂತಹಂತವಾಗಿ ಹೆಚ್ಚಲು, ಶುದ್ಧ ನೀರಿನ ಮೂಲಗಳು ಸಮುದ್ರದ ಒಡಲು ಸೇರಿಕೊಳ್ಳಲು ಕಾರಣವಾಯಿತು. ಇವತ್ತು ಬಹರೇನ್ ಒಂಬ ಮುಷ್ಟಿ ಗಾತ್ರದ ದೇಶ ಸುತ್ತಲೂ ಸಮುದ್ರಕ್ಕೆ ಮಣ್ಣು ತುಂಬಿಕೊಂಡು ತನ್ನ ಹೊರಮೈ ವಿಸ್ತರಿಸಿಕೊಳ್ಳುತ್ತಿದೆ. ನೆಲ ದಾಟಿ ಸಮುದ್ರಕ್ಕೆ ಕಾಲಿಟ್ಟರೆ ಅಲ್ಲಿ ಮೊಣಕಾಲುದ್ದದ ನೀರೂ ಇಲ್ಲ. ನಮ್ಮಲ್ಲಿನ ಸಮುದ್ರದ ಭೀಕರತೆ, ಆಳ, ಅಲೆಗಳ ಅಬ್ಬರ ಯಾವುದೂ ಇಲ್ಲ. ಸಮುದ್ರದ ಒಳಗೆ ಕಿಲೋಮೀಟರ್ಗಳ ವರೆಗೆ ನೀವು ಸಲೀಸಾಗಿ ನಡೆದೇ ಹೋಗಬಹುದು. ಅಷ್ಟು ಮೇಲ್ಮಟ್ಟದಲ್ಲಿದೆ ನೆಲ ಎನ್ನುವುದಕ್ಕಿಂತ, ಸಮುದ್ರ ನೆಲದತ್ತ ನುಗ್ಗಿ ಬಂದಿದೆ, ದ್ವೀಪವನ್ನು ಮುಳುಗಿಸಿದೆ ಎನ್ನಬಹುದೇನೋ? ನಾಗರಿಕತೆ ಬೆಳೆದಂತೆಲ್ಲ ಕೃಷಿ ಹೊರತಾದ ಉದ್ಯೋಗಗಳು ಸೃಷ್ಟಿಯಾದವು. ಕೃಷಿ ನಿರ್ಲಕ್ಷ್ಯಕ್ಕೆ ಒಳಗಾಯಿತು. ಆಧುನಿಕತೆ, ನಗರೀಕರಣಗಳ ಪ್ರಭಾವದಿಂದ ಭೂಮಿಯನ್ನು ಉತ್ತಿ, ಬಿತ್ತಿ, ಬೇಸಾಯ ಮಾಡುವವರು ಇಲ್ಲವೇ ಇಲ್ಲ ಎಂಬಂತಾಯಿತು. ಅರಣ್ಯ ನಾಶ, ಜೀವ ಸಂಕುಲಗಳ ನಿರ್ಲಕ್ಷ್ಯ ತನ್ನ ವಿಷಫಲವನ್ನು ಕೊಡಲಾರಂಭಿಸಿತ್ತು. ಇದರಿಂದಾಗಿ ಮಣ್ಣು ಜೀವ ಕಳೆದುಕೊಳ್ಳುತ್ತ, ಸತ್ವಹೀನವಾಗುತ್ತ ಬಂತು. ಕೊನೆಗೊಮ್ಮೆ ಬೆಂಗಾಡೇ ಆಗಿ ಹೋಯಿತು. ಟ್ರೀ ಆಫ್ ಲೈಫ್ ಬೇಸಾಯದ ಬದುಕು, ಕೃಷಿ ಪರಂಪರೆಯನ್ನು ಕಡೆಗಣಿಸುತ್ತಿರುವ ನಮಗೆ ಎಚ್ಚರಿಕೆಯ ಪಾಠವೂ ಹೌದು.
ಈ ವೃಕ್ಷದ ವಂಶಾವಳಿ ಬಗ್ಗೆ ಸ್ವಲ್ಪ ಹೇಳಬೇಕು. ಫೆಬಾಸಿಯೆ ಪಂಗಡದ ಪ್ರಾಸಪಿಸ್ ಸಿನರೇರಿಯಾ ಪ್ರಭೇದಕ್ಕೆ ಸೇರಿದೆ. ಟ್ರೀ ಆಫ್ ಲೈಫ್ನ ಸಸ್ಯಶಾಸ್ತ್ರೀಯ ಹೆಸರು ಮೆಕ್ಸಿಕನ್ ಪ್ರಾಸೊಪ್ಸಿಸ್ ಜುಲಿಫ್ಲೋರಾ. ಪ್ರಾಸಪಿಸ್ ಸಿನರೇರಿಯಾ ಪ್ರಭೇದದ ಸಸ್ಯಗಳು ಮರಳುಗಾಡಿನಲ್ಲಿ ಹಾಗೂ ವಾರ್ಷಿಕ 150 ಮಿ.ಮೀ.ಗಿಂತ ಕಡಿಮೆ ಮಳೆಯಾಗುವ ಪ್ರದೇಶಗಳಲ್ಲಿ ಬೆಳೆಯುತ್ತವೆ. ಸಾಮಾನ್ಯವಾಗಿ ಇವುಗಳ ಎತ್ತರ 3ರಿಂದ 5 ಮೀಟರ್. ಟೊಂಗೆಗಳು ಮುಳ್ಳುಗಳಿಂದ ಕೂಡಿರುತ್ತವೆ. ಕಂದುಹಳದಿ ಬಣ್ಣದ ಚಿಕ್ಕಚಿಕ್ಕ ಹೂವುಗಳನ್ನು ಬಿಡುತ್ತವೆ.
ಅಷ್ಟೆಲ್ಲ ದೂರ ಹೋಗುವುದು ಏಕೆ ಸ್ವಾಮಿ? ನಮಗೆ ಈ ಸಸ್ಯಜಾತಿ ಹೊಸತು ಅಲ್ಲವೇ ಅಲ್ಲ. ನಾವುನೀವೆಲ್ಲ ದಸರಾ ಹಬ್ಬದಂದು ಪೂಜಿಸುವ ಬನ್ನಿ ಅಥವಾ ಶಮಿ ಮರ ಇಲ್ಲವೆ, ಅದೇ ಇದು. ಪ್ರಾಸಪಿಸ್ ಮೂಲಬೇರುಗಳು ಇರುವುದೇ ನಮ್ಮಲ್ಲಿ. ಅಮೆರಿಕ ಹಾಗೂ ಭಾರತ, ಪಾಕಿಸ್ತಾನ, ಆಫಘಾನಿಸ್ತಾನ, ಇರಾನ್, ಒಮನ್, ಸೌದಿ ಅರೇಬಿಯಾ, ಯೆಮನ್, ಯುಎಇಗಳು ಈ ಸಸ್ಯದ ಮೂಲ ಎಂದು ಗುರುತಿಸಲಾಗಿದೆ. ಆಯಾ ದೇಶಗಳಲ್ಲಿ ಒಂದೊಂದು ಹೆಸರು. ಅದು ಬಿಡಿ. ಭಾರತದಲ್ಲೇ ಒಂದೊಂದು ರಾಜ್ಯದಲ್ಲಿ ಒಂದೊಂದು ಹೆಸರು. ರಾಜ್ಯವೃಕ್ಷ ಎಂದು ಘೋಷಿಸಿಕೊಂಡಿರುವ ರಾಜಸ್ಥಾನೀಯರು 'ಲೂಂಗ್ ಟ್ರೀ' ಎಂದು ಕರೆದರೆ, ಪಂಜಾಬಿನವರು 'ಜಾಂಟಿ' ಎಂದು ಕರೆಯುತ್ತಾರೆ. ತಮಿಳರಿಗೆ 'ವನ್ನಿ', ತೆಲುಗರಿಗೆ 'ಜಾಮ್ಮಿ', ಸಂಸ್ಕೃತದಲ್ಲಿ 'ಶಮಿ', ನಮಗೆ 'ಬನ್ನಿ'.
ಶಮಿ ವೃಕ್ಷ ಇದೆ ಎಂದಾದರೆ ಅಲ್ಲಿ ನೀರಿನ ಸೆಲೆ ಚೆನ್ನಾಗಿದೆ, ಅಲ್ಲಿ ಅಂತರ್ಜಲ ಇದೆ ಎನ್ನುವ ನಂಬಿಕೆ ನಮ್ಮಲ್ಲಿದೆ. ಅದೇನೂ ಕುರುಡು ನಂಬಿಕೆಯಲ್ಲ. ಅದಕ್ಕೊಂದು ವೈಜ್ಞಾನಿಕ ಹಿನ್ನೆಲೆ ಇದೆ. ಇದರ ಬೇರುಗಳು ನೆಲದ ಆಳದಲ್ಲಿ ಹುದುಗಿಕೊಂಡಿದ್ದು, ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿವೆ. ಸಾರಜನಕದಿಂದ ಸಮೃದ್ಧವಾಗಿರುವ ಬನ್ನಿ, ಅದನ್ನು ಭೂಮಿಗೂ ನೀಡಿ ಭೂಮಾತೆಯ ಫಲವತ್ತತೆಯನ್ನು ಹೆಚ್ಚಿಸುತ್ತವೆ. ಅಂತರ್ಜಲ ಪಾತಾಳ ಕಂಡಿರುವ ಬಯಲು ಸೀಮೆಯ ಹೊಲದ ಬದುಗಳಲ್ಲಿ ಶಮಿ ಮರಗಳನ್ನು ನೆಟ್ಟರೆ ನೀರನ್ನು ಹಿಡಿದಿಟ್ಟುಕೊಳ್ಳುವುದು ಸುಲಭ. ಸ್ವಲ್ಪ ಮಳೆಯಾದರೂ ಇದರ ಬೇರುಗಳು ನೀರನ್ನು ಎಳೆದುಕೊಳ್ಳುವುದರಿಂದ ಅಂತರ್ಜಲವನ್ನೂ ಸುಲಭವಾಗಿ ಹೆಚ್ಚಿಸಬಹುದು. ಮರದ ಬಗ್ಗೆ ವಿವರಗಳನ್ನು ಕೆದಕುತ್ತಾ ಹೋದಂತೆಲ್ಲ ಅದು ತನ್ನ ಗರಿಬಿಚ್ಚಿಕೊಳ್ಳುತ್ತಲೇ ಸಾಗಿತ್ತು. ಅಷ್ಟು ಮಹತ್ವದ ತಾಣದ ಬಗ್ಗೆ ಇಷ್ಟು ಪುಟ್ಟ ಜಾಗದಲ್ಲಿ ಎಲ್ಲವನ್ನೂ ಹೇಳಿಬಿಡಲು ಹೇಗೆ ಸಾಧ್ಯ? ಹೇಳುವುದು ಇನ್ನೂ ಬಹಳಷ್ಟಿದೆ. ಮುಂದಿನ ವಾರ ಮತ್ತೆ ಈ ಬಗ್ಗೆಯೇ ಹಂಚಿಕೊಳ್ಳುತ್ತೇನೆ.
- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in