ಮಹಾತ್ಮ ಮಾಡಿದ್ದು ಸರಿಯಲ್ಲ ಎಂದ ಮೊಮ್ಮಗ

ನನ್ನ ಬ್ಲಾಗ್ ಬರಹಗಳ 2ನೇ ಸಂಗ್ರಹ, 'ಮೈ ಟೇಕ್' ಎಂಬ ಶೀರ್ಷಿಕೆ ಹೊತ್ತು ಕಳೆದ ಡಿಸೆಂಬರ್ನಲ್ಲಿ ಬಿಡುಗಡೆಯಾಯಿತು. ಅದರಲ್ಲಿ ಸರ್ದಾರ್ ಪಟೇಲರ ಬಗ್ಗೆ ಕೆಲವು ಲೇಖನಗಳಿವೆ. ಅವರು ರಾಜಾಡಳಿತ ಪ್ರಾಂತ್ಯಗಳನ್ನು ಭಾರತದ ಅಂಗವಾಗಿಸಿದ ರೀತಿ ಅತ್ಯುದ್ಭುತವಾದದ್ದು. ಅಲ್ಲದೆ ಭಾರತ ಒಕ್ಕೂಟದ ಭಾಗವಾಗಲು ನಿರಾಕರಿಸಿದ ಹೈದ್ರಾಬಾದ್ ನಿಜಾಮನನ್ನು ಬಗ್ಗುಬಡಿದ ಪರಿಯೂ ಗಮನಾರ್ಹ.
ನಿಜಾಮನ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸುವ ವಿಚಾರಕ್ಕೆ ಪಂಡಿತ್ ನೆಹರು ಅವರ ಸಮ್ಮತಿಯಿರಲಿಲ್ಲ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಅಲ್ಲದೆ ಜಮ್ಮು-ಕಾಶ್ಮೀರದಂತೆ ಹೈದ್ರಾಬಾದ್ ಸಮಸ್ಯೆಯನ್ನೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯೆದುರು ಒಯ್ಯಬೇಕು ಎಂದು ನೆಹರು ಬಯಸಿದ್ದರು!
ಒಂದು ವೇಳೆ ಗಾಂಧೀಜಿ ಭಾರತವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೆಹರು ಬದಲು ಪಟೇಲರಿಗೆ ವಹಿಸಿದ್ದರೆ, ಸ್ವತಂತ್ರ ಭಾರತದ ಆರಂಭಿಕ ವರ್ಷಗಳು ಭಿನ್ನವಾಗಿರುತ್ತಿದ್ದವು ಎಂದು ಇತಿಹಾಸವನ್ನು ವಿಶ್ಲೇಷಿಸುವ ಯಾರಿಗೇ ಆದರೂ ಅನಿಸದಿರದು.
ರಾಜಮೋಹನ್ ಗಾಂಧಿ(ಮಹಾತ್ಮ ಗಾಂಧೀಜಿಯ ಮೊಮ್ಮಗ) ಬರೆದ ಪಟೇಲರ ಜೀವನಚರಿತ್ರೆಯನ್ನು ಕೆಲವು ದಿನಗಳಿಂದ ಓದುತ್ತಿದ್ದೇನೆ. ಪಟೇಲರನ್ನು ಸರ್ಕಾರ ನಡೆಸಿಕೊಂಡ ರೀತಿಗೆ ಅಸಮಾಧಾನ ವ್ಯಕ್ತಪಡಿಸಿದ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರ ಮಾತುಗಳನ್ನು ತಮ್ಮ ಪುಸ್ತಕದ ಮುನ್ನುಡಿಯಲ್ಲಿ ಉಲ್ಲೇಖಿಸಿರುವ ರಾಜಮೋಹನ್, ಆ ಕುರಿತು ಹೀಗೆ ಹೇಳುತ್ತಾರೆ:
ಸ್ವತಂತ್ರ ಭಾರತದ ವ್ಯವಸ್ಥೆಗೆ ಅಧಿಕಾರ ತಂದುಕೊಟ್ಟ ತ್ರಿಮೂರ್ತಿಗಳೆಂದರೆ ಗಾಂಧಿ, ನೆಹರು ಮತ್ತು ಪಟೇಲ್. ಆದರೆ ಆ ಶ್ರೇಯಸ್ಸನ್ನೆಲ್ಲ ನೆಹರು ಮತ್ತು ಗಾಂಧಿಗಷ್ಟೇ ಅರ್ಪಿಸಿ, ಪಟೇಲರನ್ನು ಕಡೆಗಣಿಸಲಾಗುತ್ತದೆ.
ಈ ಬಗ್ಗೆ 1959ರಲ್ಲಿ ತಮ್ಮ ಡೈರಿಯಲ್ಲಿ ರಾಜೇಂದ್ರ ಪ್ರಸಾದ್ ಬರೆಯುತ್ತಾರೆ, "ಇಂದು ಭಾರತ ಈ ಮಟ್ಟಕ್ಕೆ ತಲುಪಿದೆಯೆಂದರೆ ಅದಕ್ಕೆ ಪಟೇಲರ ಶಾಸನ ಕಲೆ ಮತ್ತು ದೃಢ ಆಡಳಿತವೇ ಕಾರಣ. ಆದರೂ ನಾವು ಅವರನ್ನು ಕಡೆಗಣಿಸುತ್ತಿದ್ದೇವೆ". 1989ರಲ್ಲಿ ನೆಹರು ಅವರ ಜನ್ಮಶತಮಾನೋತ್ಸವ ಎದುರಾಯಿತು. ಸಾವಿರಾರು ಬಿಲ್ಬೋರ್ಡುಗಳ ಮೇಲೆ, ಸ್ಮರಣಾರ್ಥ ಟಿ.ವಿ. ಕಾರ್ಯಕ್ರಮಗಳಲ್ಲಿ, ಸರ್ಕಾರಿ ಉತ್ಸವಗಳಲ್ಲಿ ಮತ್ತು ಇನ್ನೂ ಅನೇಕ ವೇದಿಕೆಗಳಲ್ಲಿ ನೆಹರು ರಾರಾಜಿಸಿದರು. ತುರ್ತುಪರಿಸ್ಥಿತಿ ಹೇರಿಕೆಯಾದ ನಾಲ್ಕು ತಿಂಗಳ ನಂತರ ಪಟೇಲರ ಜನ್ಮಶತಮಾನೋತ್ಸವವೂ ಎದುರಾಯಿತು. ಆದರೆ ಅದನ್ನು ಆಡಳಿತಾರೂಢ ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿತು. ಅಂದಿನಿಂದ ಇಂದಿನವರೆಗೂ ಆಧುನಿಕ ಭಾರತದ ಅತ್ಯದ್ಭುತ ವ್ಯಕ್ತಿಯ ಜೀವನದ ಮೇಲೆ ಇಳಿಬಿಟ್ಟ ಪರದೆಯನ್ನು ಅಪರೂಪಕ್ಕೊಮ್ಮೆ, ಭಾಗಶಃ ತೆಗೆಯಲಾಗುತ್ತದೆ. ಆ ಪರದೆಯನ್ನು ಸಂಪೂರ್ಣವಾಗಿ ಸರಿಸಿ ಇಂದಿನ ಪೀಳಿಗೆಗೆ ವಲ್ಲಭಭಾಯ್ ಪಟೇಲರ ಜೀವನವನ್ನು ತೋರಿಸುವುದು ನನ್ನ ಸುಯೋಗವೆಂದು ಭಾವಿಸಿದ್ದೇನೆ. ಅದು ಪರಿಪೂರ್ಣ ವ್ಯಕ್ತಿಯೊಬ್ಬನ ಜೀವನವೇನಲ್ಲ. ಪಟೇಲರ ದೌರ್ಬಲ್ಯಗಳನ್ನು ಮುಚ್ಚಿಡುವ ಪ್ರಯತ್ನವನ್ನು ನಾನು ಮಾಡಿಲ್ಲ, ಹಾಗೆ ಮಾಡುವ ಮನಸ್ಸೂ ನನಗಿಲ್ಲ. ಆದರೆ ಅವರ ಬಗ್ಗೆ ತಿಳಿದುಕೊಂಡನಂತರವಾದರೂ ಕೆಲವರಿಗೆ, ಪಟೇಲರದ್ದು ಸ್ಮರಣಾರ್ಹ ವ್ಯಕ್ತಿತ್ವ ಎಂದೆನಿಸಬಹುದು. ಕುಸಿದು ಕುಳಿತಿದ್ದ ಭಾರತವನ್ನು ಹಿಡಿದೆತ್ತಿ ನಿಲ್ಲಿಸಿದ ಶಕ್ತಿ ಆ ವ್ಯಕ್ತಿ ಎನ್ನುವುದು ಅರ್ಥವಾಗಬಹುದು.
ಗಾಂಧೀಜಿ, ಸ್ವತಂತ್ರ ಭಾರತದ ಮೊದಲ ಪ್ರಧಾನಿಯನ್ನು ಆಯ್ಕೆ ಮಾಡುವಾಗ ಪಟೇಲರಿಗೆ ಅನ್ಯಾಯ ಮಾಡಿದರೇ, ಇಲ್ಲವೇ ಎನ್ನುವ ಪ್ರಶ್ನೆ ಆಗಾಗ ಏಳುವುದುಂಟು. ನಾನು ನಡೆಸಿದ ತನಿಖೆಯಿಂದ ಸಿಕ್ಕ ಉತ್ತರ ಈ ಪುಸ್ತಕದ ಪುಟಗಳಲ್ಲಿದೆ. ಆದರೆ ಗಾಂಧೀಜಿ ಪಟೇಲರ ವಿಚಾರದಲ್ಲಿ ನಡೆದುಕೊಂಡ ರೀತಿ ಸರಿಯಾಗಿರಲಿಲ್ಲ ಎನ್ನುವ ಕೆಲವರ ಅಭಿಪ್ರಾಯವೇ ನನಗೆ ಈ ಪುಸ್ತಕ ಬರೆಯುವ ನಿರ್ಧಾರ ತೆಗೆದುಕೊಳ್ಳಲು ಕಾರಣವಾಯಿತು. ಒಂದು ವೇಳೆ ಗಾಂಧೀಜಿಯಿಂದ ತಪ್ಪಾಗಿದ್ದರೆ, ಆ ತಪ್ಪನ್ನು ತುಸು ಸರಿಪಡಿಸುವ ಕೆಲಸವಾದರೂ ಗಾಂಧೀಜಿಯ ಮೊಮ್ಮಕ್ಕಳಲ್ಲಿ ಒಬ್ಬನಾದ ನನ್ನಿಂದ ಆಗಬೇಕು ಎಂದು ಭಾವಿಸುತ್ತೇನೆ.
ಇಲ್ಲೊಂದು ವೈಯಕ್ತಿಕ ವಿಷಯವನ್ನು ಹಂಚಿಕೊಳ್ಳಲು ಬಯಸುತ್ತೇನೆ. ನಾನು 14 ವರ್ಷದವನಿದ್ದಾಗ ನಡೆದ ಚಿಕ್ಕ ಘಟನೆಯಿದು. 1949ರಲ್ಲಿ ನಾನು ನನ್ನ ಕುಟುಂಬದೊಡನೆ ದೆಹಲಿಯಲ್ಲಿದ್ದ ಪಟೇಲರ ಮನೆಗೆ ಹೋಗಿದ್ದೆ. ಅದ್ಹೇಗೋ ನಾನೊಬ್ಬನೇ ಪಟೇಲರೊಡನೆ ಕೆಲವು ಕ್ಷಣಗಳನ್ನು ಕಳೆಯಬೇಕಾಗಿ ಬಂತು. ಕುರ್ಚಿಯ ಮೇಲೆ ಎದುರುಬದುರು ಕುಳಿತಿದ್ದೆವು. ಅವರು ನನ್ನನ್ನು ನೋಡುತ್ತಾ ನಗುತ್ತಾ ಕುಳಿತಿದ್ದರು. ಅವರ ತುಟಿ ಮತ್ತು ಕಣ್ಣುಗಳು ನನ್ನನ್ನು ಅಳೆದು ಅಣುಕಿಸುತ್ತಿವೆ ಎಂದನ್ನಿಸಿತು. ಮುಜುಗರವಾಗಿ ಬೇರೆಡೆ ದೃಷ್ಟಿ ನೆಡಬೇಕು ಎಂದನಿಸಿತಾದರೂ, ಹಾಗೆ ಮಾಡಲು ನನ್ನ ಗರ್ವ ಅಡ್ಡ ಬಂದಿತು. ನಾನು ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ. ಆಗ ಆ ಕಣ್ಣುಗಳಲ್ಲಿ ನನಗೆ ಕಂಡದ್ದು ಪ್ರೀತಿ! ಆಗಲೇ ನನಗೆ ಗೊತ್ತಾಯಿತು- ಉಕ್ಕಿನ ಮನುಷ್ಯನಲ್ಲಿ ಬೆಚ್ಚಗಿನ ಹೃದಯವಿದೆ ಎಂದು.
ಗಾಂಧೀಜಿಯ ಮೊಮ್ಮಗನಾದ ರಾಜಮೋಹನ್, ತಮ್ಮ ಅಜ್ಜ ಪ್ರಧಾನಿ ಆಯ್ಕೆಯಲ್ಲಿ ಸರಿಯಾದ ಹೆಜ್ಜೆಯಿಡಲಿಲ್ಲ ಮತ್ತು ತಮ್ಮ ಮೇಲೆ ತಪ್ಪು ಸರಿಪಡಿಸುವ ಹೊಣೆಗಾರಿಕೆಯಿದೆ ಎಂದು ಬಹಿರಂಗವಾಗಿ ಹೇಳುತ್ತಾರೆಂದರೆ, ಅದರಲ್ಲಿ ರಾಜಮೋಹನ್ ಅವರ ದೊಡ್ಡ ವ್ಯಕ್ತಿತ್ವದ ಪರಿಚಯವಾಗುತ್ತದೆ. ಅಲ್ಲದೆ ಸರ್ದಾರ್ ಪಟೇಲರೇ ದೇಶವನ್ನು ಮುನ್ನಡೆಸಲು ಸೂಕ್ತ ವ್ಯಕ್ತಿಯಾಗಿದ್ದರು ಎನ್ನುವ ಜನರ ಭಾವನೆಯನ್ನೂ ಅವರು ಪುಷ್ಠೀಕರಿಸುತ್ತಾರೆ ಎನ್ನುವುದೂ ಕೂಡ.
ಮುಗಿಸುವ ಮುನ್ನ: ಮಹಾತ್ಮ ಗಾಂಧಿಯವರ ಹತ್ಯೆಯ ವಿಷಯವನ್ನಿಟ್ಟುಕೊಂಡ ಆರ್ಎಸ್ಎಸ್ ವಿರುದ್ಧ ಅಪನಿಂದೆಗಿಳಿದ ಕಾಂಗ್ರೆಸ್ಗೆ ರಾಜಮೋಹನ್ರ ಈ ಪುಸ್ತಕ ಚಾಟಿಯೇಟು ನೀಡಿದೆ.
ದಿನಾಂಕ 27.02.1948ರಲ್ಲಿ ಸರ್ದಾರ್ ಪಟೇಲರು ಜವಾಹರ್ ಲಾಲ್ ನೆಹರು ಅವರಿಗೆ ಬರೆದಿದ್ದ ಪತ್ರವನ್ನು
ಈ ಪುಸ್ತಕದ ಪುಟ 472ರಲ್ಲಿ ಉಲ್ಲೇಖಿಸಲಾಗಿದೆ. ಆ ಪತ್ರದಲ್ಲಿ ಪಟೇಲರು ಹೇಳುತ್ತಾರೆ: "ಗಾಂಧೀಜಿಯವರ ಹತ್ಯೆಯ ತನಿಖೆಯ ಬಗ್ಗೆ ನಾನು ದಿನವೂ ಮಾಹಿತಿ ಪಡೆಯುತ್ತಿದ್ದೇನೆ. ಸಂಜೆಯ ಬಹುಪಾಲು ಸಮಯವನ್ನು ಸಂಜೀವಿ(ದೆಹಲಿಯ ಅಂದಿನ ಗುಪ್ತಚರ ದಳದ ಮುಖ್ಯಸ್ಥ ಮತ್ತು ಐ.ಜಿ)ಯೊಟ್ಟಿಗೆ ಚರ್ಚೆಗೆ ಮೀಸಲಿಡುತ್ತಿದ್ದೇನೆ. ನನಗೆ ಗೋಚರವಾದ ಅಂಶಗಳನ್ನು ಅವರ ಗಮನಕ್ಕೆ ತರುತ್ತಿದ್ದೇನೆ. ಎಲ್ಲಾ ಆರೋಪಿಗಳೂ ಸುದೀರ್ಘ ಮತ್ತು ವಿವರವಾದ ಹೇಳಿಕೆಗಳನ್ನು ನೀಡಿದ್ದಾರೆ. ಈ ಹೇಳಿಕೆಗಳನ್ನು ಗಮನಿಸಿದಾಗ, ಆ ಘಟನೆಯಲ್ಲಿ ಆರ್ಎಸ್ಎಸ್ನ ಕೈವಾಡವಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.
- ಎಲ್.ಕೆ. ಆಡ್ವಾಣಿ
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


