ದೇಶ ಸೇವೆಯನ್ನು ಮಾಡುವುದಕ್ಕೆ ನಮ್ಮ ರಾಜಕಾರಣಿಗಳು ಎಷ್ಟೊಂದು ಅನುರಕ್ತರಾಗಿದ್ದಾರೆ ನೋಡಿ! ಟಿಕೆಟ್ಗಾಗಿ ನಡೆಯುವ ಕಿತ್ತಾಟಗಳೇ ಯಾವಾಗಲೂ ಚುನಾವಣೆಯ ಲಕ್ಷಣಗಳಾಗಿವೆ. ಸಂಸತ್ತಿಗೆ ಪ್ರವೇಶ ಪಡೆಯಲು ಈಗ ನಡೆದಿರುವ ಈ ರೀತಿಯ ಗುಂಪುಗಾರಿಕೆ, ಕೋಲಾಹಲದ ಮತ್ತು ಕಲಸುಮೇಲೋಗರದ ಸ್ಥಿತಿಯನ್ನು ಈ ಹಿಂದೆ ನಾವು ಕಂಡಿದ್ದಿಲ್ಲ. ಯಾರಿಗೇ ಆಗಲಿ ಒಂದು ಪಕ್ಷ ಮುಕ್ತವಾಗಿದೆ ಎಂಬಂಥ, ಒಬ್ಬನು ಯಾವ ಪಕ್ಷದಿಂದಲಾದರೂ ಟಿಕೆಟ್ ಪಡೆದುಕೊಳ್ಳುವುದು ಸಾಧ್ಯ ಎನ್ನುವಂಥ ಸ್ಥಿತಿ ತೀರ ಸಾಮಾನ್ಯವಾಗಿದೆ. ಯಾರೊಬ್ಬರಲ್ಲೂ ಗುರುತಿಸಿ ಹೇಳುವಂಥ ತಾತ್ವಿಕತೆಯಾಗಲಿ ಸಿದ್ಧಾಂತವಾಗಲಿ ಇಲ್ಲ. ಎಲ್ಲರೂ ಒಂದೇ ಒಂದು ಎಳೆಯಿಂದ ಬಂಧಿಸಲ್ಪಟ್ಟಿದ್ದಾರೆ: ಅದು ಅಧಿಕಾರದ ಲಾಲಸೆ. ಎಲ್ಲರೂ ಬೂಟಾಟಿಕೆಯ ಪರಮಾನಂದವನ್ನು ಅನುಭವಿಸುತ್ತಿದ್ದಾರೆ. ಎಲ್ಲ ಪಕ್ಷಗಳೂ ಹೇಳುತ್ತಿವೆ, ನಾವು ಭ್ರಷ್ಟಾಚಾರವನ್ನು ತೊಡೆದುಹಾಕುತ್ತೇವೆ ಎಂದು. ಆದರೆ ಅವರ ಅಭ್ಯರ್ಥಿಗಳಲ್ಲೇ ಭಾರೀ ಭ್ರಷ್ಟಾಚಾರಿಗಳೆಂಬ ಕಳಂಕ ಹೊತ್ತವರಿದ್ದಾರೆ. ಜಗತ್ತಿನಲ್ಲೇ ನಮ್ಮದು ಎರಡು ಮುಖದ ಪ್ರಜಾಪ್ರಭುತ್ವವಾಗಿದೆ.
ಪಕ್ಷದ ಅಭ್ಯರ್ಥಿಗಳಾಗಲು ಬಯಸುತ್ತಿರುವ ನಾಯಕರಲ್ಲಿ ಈ ವಾಸ್ತವ ಭಿನ್ನವಾಗಿಲ್ಲ. ಅವರು ತಮ್ಮತಮ್ಮೊಳಗೇ ಬಡಿದಾಡಿಕೊಳ್ಳುತ್ತಾರೆ, ಬೆದರಿಕೆ ಹಾಕುತ್ತಾರೆ ಮತ್ತು ಪುಸಲಾಯಿಸುತ್ತಾರೆ, ರಾಜಿನಾಮೆ ನೀಡುತ್ತಾರೆ, ಪ್ರತಿಪಕ್ಷವನ್ನು ಸೇರುತ್ತಾರೆ, ಹೊಸ ಘಟಬಂಧನವನ್ನು ಕಟ್ಟಿಕೊಳ್ಳುತ್ತಾರೆ, ಅಪರಾಧ ಎನ್ನುವಂಥ ಬೆದರಿಕೆಯನ್ನೂ ಹಾಕುತ್ತಾರೆ. ಅತಿ ಚಿಕ್ಕ ಪಕ್ಷಗಳೂ, ಅದೇ ರೀತಿ ಬೃಹತ್ ಪಕ್ಷಗಳೂ ಟಿಕೆಟ್ ನಿರಾಕರಣೆ ಸಂಬಂಧದಲ್ಲಿ ಬಂಡಾಯವನ್ನು ಎದುರಿಸುತ್ತಿವೆ. ದೊಡ್ಡ ನಾಯಕರಿಗೆ ಆದ್ಯತೆ ದೊರೆತಿದೆ, ಉಳಿದವರು ಅಸಮಾಧಾನಗೊಂಡಿದ್ದಾರೆ. ಆಂತರಿಕ ಕಿತ್ತಾಟದ ಕಾರಣದಿಂದಾಗಿಯೇ ಹಲವು ದಿನಗಳಿಂದ ತನ್ನ ಪ್ರಮುಖ ಅಭ್ಯರ್ಥಿಗಳಿಗೆ ಕ್ಷೇತ್ರಗಳನ್ನು ಪ್ರಕಟಿಸುವುದು ಬಿಜೆಪಿಗೆ ಸಾಧ್ಯವಾಗಿಲ್ಲ. ಹಿರಿಯ ಶ್ರೇಣಿಯ ನಾಯಕರಾದ ಮುರಳಿಮನೋಹರ ಜೋಶಿ ಮತ್ತು ಲಾಲಜಿ ಟಂಡನ್ ಪಕ್ಷದ ಅಧ್ಯಕ್ಷ ರಾಜನಾಥ ಸಿಂಗ್ಗೆ ಲಖನೌದಲ್ಲಿ ಮತ್ತು ನರೇಂದ್ರ ಮೋದಿಗೆ ವಾರಾಣಸಿಯಲ್ಲಿ ಸ್ಥಾನ ತೆರವು ಮಾಡಲು ಕೋರಿದಾಗ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಕೇರಳದಲ್ಲಿ ಸರ್ವಾಧಿಕಾರದಂತೆ ತೋರುವ ಸಿಪಿಎಂ ನಾಯಕತ್ವವು ಕೊಲ್ಲಂ ಕ್ಷೇತ್ರಕ್ಕೆ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿತು. ಅವರು ಉತ್ತಮ ಅಭ್ಯರ್ಥಿಯೇ ಆಗಿದ್ದರು. ಹೀಗೆ ಆಯ್ಕೆ ಮಾಡುವಾಗ ತನ್ನ ಎಡ ಪ್ರಜಾಪ್ರಭುತ್ವ ರಂಗದ (ಎಲ್ಡಿಎಫ್) ಮಿತ್ರರ ಸಲಹೆಯನ್ನು ಕೇಳಲೇ ಇಲ್ಲ. ಕೊಲ್ಲಂನಲ್ಲಿ ಗಟ್ಟಿ ಬೇರುಗಳನ್ನು ಹೊಂದಿರುವ ಕ್ರಾಂತಿಕಾರಿ ಸಮಾಜವಾದಿ ಪಕ್ಷ (ಆರ್ಎಸ್ಪಿ) ಇದರಿಂದ ಅಸಮಾಧಾನಗೊಂಡು ವಿರೋಧಿ ರಂಗವಾದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸೇರಿತು. ಲಾಲೂಪ್ರಸಾದ್ ಯಾದವ ಅವರು ಚುನಾವಣೆಗೆ ಸ್ಪರ್ಧಿಸಲು ತುಂಬಾ ಕಳಂಕಿತರಾಗಿದ್ದಾರೆ. ಹೀಗಾಗಿ ಅವರು ತಮ್ಮ ಪತ್ನಿ ಮತ್ತು ಪುತ್ರಿಗೆ ಟಿಕೆಟ್ ನೀಡಿದ್ದಾರೆ. ಭಿನ್ನಮತವನ್ನು ತಳೆದ ರಾಮ್ಕೃಪಾಲ್ ಯಾದವ ಲಾಲೂ ಪಕ್ಷಕ್ಕೆ ರಾಜಿನಾಮೆ ನೀಡಿ ಬಿಜೆಪಿಯನ್ನು ಸೇರಿದ್ದಾರೆ.
ಗೆಲ್ಲುವ ಸಾಮರ್ಥ್ಯ ಎಂಬ ಹೆಸರಿನಲ್ಲಿ ಪಾಪಗಳನ್ನೆಲ್ಲ ನಿರ್ಲಕ್ಷಿಸಿದ್ದು ಅತ್ಯಂತ ಕೆಟ್ಟದ್ದು. ಬಿಜೆಪಿಯು ಬಿ.ಎಸ್.ಯಡಿಯೂರಪ್ಪ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಂಡಿರುವುದಕ್ಕೆ ಅವರ ಸಮುದಾಯದವರಲ್ಲಿ ಅವರ ಗೆಲ್ಲುವ ಸಾಮರ್ಥ್ಯ. ಈ ಅವಕಾಶವನ್ನು ಅವರು ತಮ್ಮ ಪ್ರೀತಿಪಾತ್ರರಾದ ಹಲವರನ್ನು ಮುಂದಕ್ಕೆ ತರುವುದಕ್ಕೆ ಕಾರಣವಾಯಿತು. ಇದು ಪಕ್ಷದಲ್ಲಿ ಗಂಭೀರ ಒಡಕಿಗೆ ಕಾರಣವಾಯಿತು. ಅಪಕೀರ್ತಿಗೆ ಒಳಗಾದ ಬಳ್ಳಾರಿಯ ಮಾಫಿಯಾಕ್ಕೂ ಮನ್ನಣೆಯನ್ನು ನೀಡಬೇಕಾದ ಒತ್ತಡಕ್ಕೆ ಬಿಜೆಪಿ ಸಿಲುಕಿತು. ಭ್ರಷ್ಟಾಚಾರದ ಸಂಕೇತದಂತಿರುವ ಸುರೇಶ್ ಕಲ್ಮಾಡಿಯವರನ್ನು ಕೊನೆಯ ಕ್ಷಣದವರೆಗೂ ಕಾಂಗ್ರೆಸ್ ಪಕ್ಷವು ಮುಂಚೂಣಿಯಲ್ಲೇ ಇಟ್ಟುಕೊಂಡಿದೆ. ಪವನ್ ಬನ್ಸಲ್ ಅವರ ಕೈಗಳನ್ನು ಅದು ಇನ್ನೂ ತೊಳೆದಿಲ್ಲ. ರಾಜಕಾರಣಿಯಾಗಿ ಬದಲಾದ ಬಿಹಾರದ ಕುಖ್ಯಾತ ವ್ಯಕ್ತಿ ಪಪ್ಪು ಯಾದವ ಚುನಾವಣೆ ಕಣಕ್ಕೆ ಇಳಿದಿರುವ ವಿಷಯದಲ್ಲೂ ಅದರದು ಅದೇ ಮನಸ್ಥಿತಿ.
ಅಪರಾಧಿ ರಾಜಕಾರಣಿಗಳಿಂದ ಮುಕ್ತಿ ಹೊಂದುವ ಆಶಾವಾದವನ್ನು ಸುಪ್ರೀಂಕೋರ್ಟ್ ನಮಗೆ ಒದಗಿಸಿದೆ. ಇವು ಆಶಾವಾದಕ್ಕಿಂತ ಹೆಚ್ಚಿನವೆ? ಸುಪ್ರೀಂಕೋರ್ಟ್ ತನ್ನ ಇತ್ತೀಚಿನ ತೀರ್ಪಿನಲ್ಲಿ ಆರೋಪಪಟ್ಟಿಯನ್ನು ಹೊರಿಸಲಾಗಿರುವ ಜನಪ್ರತಿನಿಧಿಗಳ ವಿಚಾರಣೆಯನ್ನು ಒಂದು ವರ್ಷದೊಳಗೆ ಮುಗಿಸಬೇಕೆಂದು ಹೇಳಿದೆ. ಇದೀಗ ಮುಕ್ತಾಯಗೊಂಡ ಲೋಕಸಭೆಯಲ್ಲಿ 50 ಸದಸ್ಯರು 136 ಪ್ರಕರಣಗಳ ವಿಚಾರಣೆಯನ್ನು ಕಳೆದ ಒಂದು ದಶಕಕ್ಕಿಂತಲೂ ಹೆಚ್ಚಿನ ಅವಧಿಯಿಂದ ಎದುರಿಸುತ್ತಿದ್ದಾರೆ ಎಂಬುದನ್ನು ಅರಿತಾಗ ಈ ತೀರ್ಪಿನ ಮಹತ್ವ ನಮಗೆ ಅರಿವಾಗುತ್ತದೆ. ಉಜ್ಜೈನಿಯ ಕಾಂಗ್ರೆಸ್ ಸಂಸದನ ವಿರುದ್ಧ ಕೊಲೆ ಪ್ರಕರಣವೊಂದರ ವಿಚಾರಣೆಯು 29 ವರ್ಷಗಳಿಂದ ನಡೆಯುತ್ತಿದೆ. ಉತ್ತರಪ್ರದೇಶದ ಅಝಂಗಡದ ಬಿಜೆಪಿ ಸಂಸದನ ವಿರುದ್ಧದ ಕೊಲೆ ಪ್ರಕರಣದ ವಿಚಾರಣೆಯು 25 ವರ್ಷಗಳಿಂದ ನಡೆಯುತ್ತಿದೆ. ಎಷ್ಟು ಕಾಲದವರೆಗೆ ಪ್ರಕರಣದ ವಿಚಾರಣೆಯು ಬಾಕಿ ಉಳಿಯುತ್ತದೆಯೋ ಅಲ್ಲಿಯವರೆಗೂ ಆತ ಸಂಸದನ ಹಕ್ಕುಬಾಧ್ಯತೆಗಳು ಮತ್ತು ರಕ್ಷಣೆಯನ್ನು ಪಡೆದಿರುತ್ತಾನೆ. ಕಾಯಿದೆಗಳನ್ನು ಮಾಡುವ ಅಧಿಕಾರ ಅವರ ಬಳಿ ಇದೆ. ಹೀಗಾಗಿ ಈ ಹಿಂದೆ ಮಾಡಿದಂತೆ ಇತ್ತೀಚಿನ ಸುಪ್ರೀಂಕೋರ್ಟ್ನ ತೀರ್ಪನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬಹುದು.
ನಮ್ಮ ಶಾಸನ ಸಭೆಗಳಲ್ಲಿ ಅಪರಾಧಿ ವರ್ಗವು ಎದ್ದುಕಾಣುವುದು ಮುಂದುವರಿದಿರುವುದೇ ಆಮ್ಆದ್ಮಿಯ ಪ್ರಯೋಗವು ಏಕೆ ಜನಪ್ರಿಯ ಕಲ್ಪನೆಯಾಯಿತು ಎಂಬುದನ್ನು ವಿವರಿಸುತ್ತದೆ. ಅವರು ಡೆಲ್ಲಿಯಲ್ಲಿ ಅಧಿಕಾರದಲ್ಲಿದ್ದಾಗ ಕ್ಷುಲ್ಲಕ ತಪ್ಪುಗಳನ್ನು ಮಾಡಿದರು. ಅವರಲ್ಲಿ ಕೆಲವರು ಅಪ್ರಬುದ್ಧ ನಾಯಕರಿದ್ದಾರೆ. ಆಫ್ರಿಕದವರ ಮನೆಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿ ಮತ್ತು ದಕ್ಷಿಣ ಭಾರತದ ನರ್ಸುಗಳ ವಿಷಯದಲ್ಲಿ ಜನಾಂಗೀಯ ಟೀಕೆಗಳನ್ನು ಮಾಡಿ ಜುಗುಪ್ಸೆಯನ್ನು ತಾವೇ ಆಹ್ವಾನಿಸಿಕೊಂಡರು. ಇದಕ್ಕೆ ಕಳಸವಿಟ್ಟಂತೆ ಟೀವಿ ಚಾನೆಲ್ಗಳು ಆಪ್ ಮತ್ತು ಅದರ ನಾಯಕರ ವಿಶ್ವಾಸಾರ್ಹತೆಯನ್ನು ತೊಡೆದುಹಾಕುವ ಪ್ರಯತ್ನಕ್ಕಿಳಿದಂತೆ ತೋರಿತು. ಇವೆಲ್ಲವುಗಳ ಹೊರತಾಗಿ ಆ ಪಕ್ಷವು ಜನಮತ ಸಮೀಕ್ಷೆಯಲ್ಲಿ ಅಂಕಗಳನ್ನು ಗಳಿಸಿಕೊಂಡಿದೆ. ಗಣ್ಯಮಾನ್ಯ ವೃತ್ತಿವಂತರನ್ನು ಅದು ಆಕರ್ಷಿಸಿದೆ. ಕೊಳ್ಳೆಹೊಡೆಯುವುದನ್ನು ಮತ್ತು ದೇಶಭಕ್ತಿಯನ್ನು ಸರಿಸಮಾನವೆಂದು ಪರಿಗಣಿಸುವ ರಾಜಕಾರಣಿಗಳು, ಆಪ್ ಅದೇನೆ ಇರಲಿ ಅವರಿಗೆ ಒಂದು ಅವಕಾಶ ಕೊಟ್ಟು ನೋಡೋಣ ಎಂದು ಚಿಂತಿಸುವಷ್ಟು ಜನರು ಹತಾಶರಾಗುವಂತೆ ಮಾಡಿದ್ದಾರೆ. ಲೂಟಿಕೋರರಿಗೆ ಮತ್ತು ವಾಗ್ಝರಿಯನ್ನು ಹರಿಸುವ ಟೀವಿ ಚಾನೆಲ್ಗಳಿಗೆ, ನೀವು ಜನರ ಭಾವನೆಗಳನ್ನು ಹತ್ತಿಕ್ಕುವುದು ಸಾಧ್ಯವಿಲ್ಲ ಎಂಬ ಸಂದೇಶ ಇಲ್ಲಿದೆ.
-ಟಿ.ಜೆ.ಎಸ್ ಜಾರ್ಜ್