ಅಂಕಣಗಳು

ಮಾಹಿತಿ ಯುಗದಲ್ಲಿ ಮಾಹಿತಿಗೇ ಬರ!

ಮಾಹಿತಿ ಯುಗದಲ್ಲಿ ಮಾಹಿತಿಗೇ ಬರ!
Published On :

ಹೇಗೆ ಜನರು ಆಸ್ಪತ್ರೆಗೆ ಹೋಗಿ ತಮ್ಮ ಸಮಸ್ಯೆ ಏನೆಂಬುದನ್ನು ಡಾಕ್ಟರ್ ಎದುರು ಹೇಳಿದಾಗ, ಆತ ಆ ಸಮಸ್ಯೆಗೆ ಯಾವ ಮಾತ್ರೆ ಪಡೆಯಬೇಕು, ಅದು ಎಲ್ಲಿ ಸಿಗುತ್ತದೆ ಎಂಬ ವಿವರ ನೀಡುತ್ತಾನೋ ಹಾಗೆಯೇ, ರಾಜಕಾರಣಿಗಳಾದ ನಾವು ಈ ಸರ್ಕಾರಿ ಯೋಜನೆಗಳ ಬಗ್ಗೆ ಜನತೆಗೆ ಸರಿಯಾದ ಮಾಹಿತಿ ನೀಡಿ, ಪರಿಹಾರ ಸಿಗುವಂತೆ ಮಾಡಬೇಕು.

ಸಂಸತ್ ಸದಸ್ಯ ಆದಾಗಿನ ಶುರುವಿನ ದಿನಗಳವು. ನೀರೇ ನೋಡದವನು ಸಮುದ್ರಕ್ಕೆ ಹಾರಿದ ಹಾಗಾಗಿತ್ತು. ರಾಜಕೀಯವನ್ನೇ ನೋಡದಿದ್ದ ನನ್ನನ್ನು ಜನ ಪ್ರೀತಿಯಿಂದ ಆಶೀರ್ವದಿಸಿ ಕಳಿಸಿದ್ದರು. ಗುರು-ಹಿರಿಯರ ಹಾರೈಕೆ, ಪಕ್ಷದ ಮುಖಂಡರ ಮುಂದಾಳತ್ವ, ಕಾರ್ಯಕರ್ತರ ಕಾರ್ಯಕ್ಷಮತೆ, ಹೀಗೆ ಹಲವು ವಿಚಾರಗಳು ಒಟ್ಟುಗೂಡಿ ಚಿತ್ರದುರ್ಗದ ಮಹಾ ಜನತೆ ಜವಾಬ್ದಾರಿಯುತ ಸ್ಥಾನವನ್ನು ನೀಡಿದ್ದರು. ಅಷ್ಟೇ ಅಪಾರ ಕಳಕಳಿಯೊಂದಿಗೆ ಎಲ್ಲಾ ಸಮಸ್ಯೆಗಳಿಗೆ, ಪ್ರತಿಯೊಂದು ಹಂತದಲ್ಲೂ ಸಾಧ್ಯವಾದಷ್ಟು ಪರಿಹಾರ ನೀಡಬೇಕೆಂದು ನಿಶ್ಚಯ ಮಾಡಿದೆ.
ಆಯ್ಕೆಯಾದ ತಕ್ಷಣವೇ ಕ್ಷೇತ್ರದ ಅನೇಕ ಜನರು ತಮ್ಮ ಅಹವಾಲುಗಳನ್ನು ಹಿಡಿದು ಭೇಟಿ ಮಾಡಲು ಬರುತ್ತಿದ್ದರು. ಬರುವವರ ಸಮಸ್ಯೆಗಳನ್ನು ಆಲಿಸಿ, ಅವರಿಗೆ ಯಾವ ರೀತಿಯಲ್ಲಿ ಪರಿಹಾರ ನೀಡಬಹುದು ಎಂಬುದನ್ನು ಅರ್ಥಮಾಡಿಕೊಂಡು ಅವರಿಗೆ ಸಹಾಯ ಮಾಡಬೇಕಿತ್ತು. ಆದರೆ ಅದೆಷ್ಟೋ ಬಾರಿ ಸಮಸ್ಯೆಗಳಿಗೆ ಯಾವ ರೀತಿಯಲ್ಲಿ ಪರಿಹಾರ ನೀಡಬೇಕು ಎನ್ನುವುದನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿತ್ತು. "ಇದು  ಯಾವ ಇಲಾಖೆಗೆ ಸಂಬಂಧಪಟ್ಟಿದ್ದು? ಯಾವ ಯೋಜನೆಯಡಿ ಬರುತ್ತದೆ? ಕೇಂದ್ರ ಸರ್ಕಾರದ ಜವಾಬ್ದಾರಿಯೋ ಅಥವಾ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೋ? ಜಿಲ್ಲಾ ಪಂಚಾಯಿತಿ/ ತಾಲೂಕು ಪಂಚಾಯತಿ ಅಥವಾ ಗ್ರಾಮ ಪಂಚಾಯಿತಿಗೆ ಒಳಪಡುತ್ತದೋ?"
ಹೀಗೆ ಹಲವು ಗೊಂದಲಗಳು. ಈ ಬಗ್ಗೆ ಪ್ರಶ್ನಿಸಿದಾಗ ಅಧಿಕಾರಿಗಳ ಬಳಿಯೂ ಅಲ್ಪ-ಸ್ವಲ್ಪ ಮಾಹಿತಿ! ಸರ್ಕಾರದಲ್ಲಿ 30ಕ್ಕಿಂತ ಹೆಚ್ಚು ಮಂತ್ರಿಗಳು, ಒಬ್ಬೊಬ್ಬ ಮಂತ್ರಿಗೆ ಒಂದಕ್ಕಿಂತ ಹೆಚ್ಚು ಖಾತೆಗಳು. ಒಂದೊಂದು ಖಾತೆಯಲ್ಲಿ ಹತ್ತಾರು ಯೋಜನೆಗಳು! ಅಲ್ಲಿಗೆ ರಾಜ್ಯ ಸರ್ಕಾರದಿಂದ ಮತ್ತು ಕೇಂದ್ರ ಸರ್ಕಾರದಿಂದ ನೂರಾರು, ಅಲ್ಲಲ್ಲ ಸಾವಿರಾರು ಯೋಜನೆಗಳೇ ಆಗಬಹುದು... ಈ ಮಂತ್ರಿಗಳ ಮತ್ತು ಖಾತೆಗಳ ಜೊತೆಗೆ, ಹಲವಾರು ನಿಗಮಗಳು, ಹಾಗೆಯೇ ಮತ್ತಷ್ಟು ಮಂಡಳಿಗಳು. ಈ ತರಹದವು ಇನ್ನು ಎಷ್ಟಿವೆಯೋ ಎನ್ನುವ ಪ್ರಶ್ನೆ. ಹೀಗಾಗಿ ಯಾವುದಾದರೊಂದು ಸಮಸ್ಯೆಗೆ ಯಾವ ಅಧಿಕಾರಿಗೆ ಕೇಳಿದರೂ "ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಸಾರ್.." ಎಂಬ ಉತ್ತರ. ಯಾರ ವ್ಯಾಪ್ತಿಗೆ ಬರುತ್ತದೆ ಎಂಬುದಕ್ಕೂ ಮಾಹಿತಿ ಇಲ್ಲ. ಹಿರಿಯ ಅಧಿಕಾರಿಗಳಿಗೆ ಕೇಳಿದರೂ "ನೋಡಿ ಹೇಳುತ್ತೇನೆ ಸಾರ್‌" ಎನ್ನುವವರೇ. ಇತರೆ ರಾಜಕಾರಣಿಗಳಿಗೆ ಕೇಳಿದರೆ, "ಗೊತ್ತಿಲ್ಲ ಗುರು, ನಿನ್ನ ಪಿ.ಎ.ಗೆ ಕೇಳಿ ನೋಡು' ಎಂಬ ಸಲಹೆ. ಹೀಗೆ ಎಲ್ಲಿಯೂ ನಿಖರವಾದ ಮಾಹಿತಿಯೇ ಸಿಗುತ್ತಿರಲಿಲ್ಲ. ನನಗೇ ಇಷ್ಟು ಕಷ್ಟವಾಗುತ್ತದೆ ಎಂದರೆ, ಇನ್ನು ಜನ ಸಾಮಾನ್ಯರಿಗೆ ಎಷ್ಟು ಕಷ್ಟವಾಗುತ್ತಿರಬಹುದು ಎಂಬ ಪ್ರಶ್ನೆ ಕಾಡುತ್ತಿತ್ತು.
ಒಂದು ಕಡೆ ಸರ್ಕಾರಗಳು ಜನರಿಗೆ ಅನುಕೂಲವಾಗಲೆಂದು ಹಲವಾರು ಯೋಜನೆಗಳನ್ನು ರೂಪಿಸುತ್ತಾ ಬಂದಿವೆ. ಇನ್ನೊಂದೆಡೆ ಯಾವ ಸಮಸ್ಯೆಗೆ ಯಾವ ರೀತಿಯ ಪರಿಹಾರ ಎಂಬುದು ತಿಳಿಯದ ಜನ ಸಾಮಾನ್ಯರು. ಇದು ಹೇಗಿದೆಯೆಂದರೆ, ಅನೇಕ ರೀತಿಯ ಔಷಧಗಳನ್ನು ಮೆಡಿಕಲ್ ಸ್ಟೋರ್‌ನಲ್ಲಿಟ್ಟು ಔಷಧಿಕೊಳ್ಳಲು ಹೋದವನಿಗೆ, ಅವನೇ ತನ್ನ ಸಮಸ್ಯೆಗೆ ಸೂಕ್ತವಾದ ಔಷಧ ಹುಡುಕುವ ಪರಿಸ್ಥಿತಿ ಸೃಷ್ಟಿ ಮಾಡಿದ ಹಾಗೆ! ಆವಾಗ ಅನ್ನಿಸಿತು- "ಹೇಗೆ ಜನರು ಆಸ್ಪತ್ರೆಗೆ ಹೋಗಿ ತಮ್ಮ ಸಮಸ್ಯೆ ಏನೆಂಬುದನ್ನು ಡಾಕ್ಟರ್ ಎದುರು ಹೇಳಿದಾಗ, ಆತ ಆ ಸಮಸ್ಯೆಗೆ ಏನು ಪರಿಹಾರ, ಯಾವ ಮಾತ್ರೆ ಪಡೆಯಬೇಕು, ಯಾವ ಬ್ರಾಂಡ್‌ನದ್ದು, ಅದು ಎಲ್ಲಿ ಸಿಗುತ್ತದೆ ಎಂಬ ವಿವರ ನೀಡುತ್ತಾನೋ ಹಾಗೆಯೇ, ರಾಜಕಾರಣಿಗಳಾದ ನಾವು ಈ ಸರ್ಕಾರಿ ಯೋಜನೆಗಳ ಬಗ್ಗೆ ಜನತೆಗೆ ಸರಿಯಾದ ಮಾಹಿತಿ ನೀಡಿ, ಪರಿಹಾರ ಸಿಗುವಂತೆ ಮಾಡಬೇಕು" ಎಂದು.
ಅಂದರೆ, ಯಾರಿಗೇ ಆಗಲಿ ಯಾವುದೇ ಸರ್ಕಾರಿ ಯೋಜನೆಗಳ ಬಗ್ಗೆ, ಯೋಜನೆಯ ವ್ಯಾಪ್ತಿ, ಉಪಯೋಗದ ವಿಧಾನಗಳು, ಅನುಸರಿಸಬೇಕಾದ ನಿಯಮಗಳು, ಹೀಗೆ ಎಲ್ಲದರ ಬಗ್ಗೆ ನಿಖರ ಮಾಹಿತಿ(ತಜ್ಞನೊಬ್ಬನ ಮೂಲಕ) ಒದಗಿಸುವಂಥ ಕೇಂದ್ರ ಸ್ಥಾಪಿಸಿದರೆ ಹೇಗೆ ಎಂಬ ಯೋಚನೆ ಬಂತು.  ಹಲವು ವಾರಗಳ ಕಾಲ ನನ್ನನ್ನು ಭೇಟಿ ಮಾಡಲು ಬಂದಂಥ ಸಾವಿರಾರು ಸಾರ್ವಜನಿಕರಿರೊಂದಿಗೆ ನನ್ನ ಯೋಚನೆಯ ಬಗ್ಗೆ ಮಾತನಾಡಿದಾಗ ಎಲ್ಲರೂ "ಅಂಥ ಕೆಲಸ ಮಾಡಿ ಪುಣ್ಯ ಕಟ್ಕೊಳ್ಳೀ ಸಾರ್‌" ಎಂದು ಕೇಳಿಕೊಂಡರು.
ನನಗೂ ಮತ್ತು ಇತರೆ ಜನಪ್ರತಿನಿಧಿಗಳಿಗೂ ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಈ ನಡೆ ಹೆಚ್ಚು ಸಹಾಯಕವಾಗಲಿದೆ ಮತ್ತು ಸಾಮಾನ್ಯ ಜನ ಮಾಹಿತಿಗೋಸ್ಕರ ಕಚೇರಿಯಿಂದ ಕಚೇರಿಗೆ, ಅಧಿಕಾರಿಯಿಂದ ಅಧಿಕಾರಿಗೆ ಅಲೆಯುವುದನ್ನು ತಪ್ಪಿಸಿದಂತಾಗುತ್ತದೆ ಎಂದು ತಡಮಾಡದೇ ಮಾಹಿತಿ ಕೇಂದ್ರದ ರೂಪುರೇಷೆಯನ್ನು ಸಿದ್ಧಪಡಿಸಲಾಯಿತು. ಅಂದಿನ ಜಿಲ್ಲಾಧಿಕಾರಿ ಆದಿತ್ಯ ಬಿಸ್ವಾಸ್ ಮತ್ತು ಜಿಲ್ಲಾಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಂಗೇಗೌಡರ ಸಹಾಯದಿಂದ ಲೋಕಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನ ಬಳಸಿ ಚಿತ್ರದುರ್ಗ ನಗರದಲ್ಲಿ ಒಂದು ಸುಸಜ್ಜಿತ ಮಾಹಿತಿ ಕೇಂದ್ರ ಸ್ಥಾಪನೆ ಮಾಡಿದೆವು. 26 ಆಗಸ್ಟ್ 2010ರಂದು ನಡೆದ ಕಾರ್ಯಕ್ರಮದಲ್ಲಿ ಮಾಹಿತಿ ಕೇಂದ್ರದ ಉದ್ಘಾಟನೆಯಾಯಿತು. ಹಿಂದೆ ಅಮೆರಿಕದಲ್ಲಿ ನಾನು ಅನೇಕ ವರ್ಷ ಕೆಲಸ ಮಾಡಿದ್ದ "ಸನ್ ಮೈಕ್ರೋಸಿಸ್ಟಮ್ಸ್‌" ಎಂಬ ಉನ್ನತ ಮಟ್ಟದ ಕಂಪ್ಯೂಟರ್‌ಗಳನ್ನು ತಯಾರು ಮಾಡುತ್ತಿದ್ದ ಪ್ರತಿಷ್ಠಿತ ಕಂಪೆನಿಯು ಅಗತ್ಯವಿದ್ದ ಕಂಪ್ಯೂಟರ್‌ಗಳನ್ನು ಉಚಿತವಾಗಿ ಮಾಹಿತಿ ಕೇಂದ್ರದ ಬಳಕೆಗೆ ದಾನವಾಗಿ ನೀಡಿತ್ತು. ಹೀಗೆ ಒಂದು ಒಳ್ಳೆಯ ಕೆಲಸಕ್ಕೆ ಅನೇಕರು ಕೈಜೋಡಿಸದಂತಾಯಿತು.
ಮಾಹಿತಿ ಕೇಂದ್ರದಲ್ಲಿ ಮುಖ್ಯ ಮಾಹಿತಿ ಅಧಿಕಾರಿ ಮಂಜುನಾಥ್ ಅವರ ನೇತೃತ್ವದಲ್ಲಿ ಅನೇಕ ಅಧಿಕಾರಿಗಳು ಅನೇಕ ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದಾರೆ. ಅವರಿಗೆ ಸಹಾಯ ಮಾಡಲು ಅಲ್ಲಿ ಅಗತ್ಯವಿರುವ ಕಂಪ್ಯೂಟರ್‌ಗಳನ್ನು, ಇಂಟರ್‌ನೆಟ್ ಸಂಪರ್ಕ, ಪ್ರಿಂಟರ್, ಫೋಟೋಕಾಪಿ (ಜೆರಾಕ್ಸ್) ಯಂತ್ರ, ಹೀಗೆ ಹಲವು ವ್ಯವಸ್ಥೆಗಳು ಲಭ್ಯ. ಇವುಗಳನ್ನು ಕೇವಲ ಅಧಿಕಾರಿಗಳಷ್ಟೇ ಅಲ್ಲದೆ ಸಾರ್ವಜನಿಕರೂ ನೇರವಾಗಿ ಸೂಕ್ತ ಸಂದರ್ಭಗಳಲ್ಲಿ ಉಪಯೋಗ ಮಾಡಿಕೊಳ್ಳಬಹುದು.
ಅಂದಿನಿಂದ ಇಂದಿನವರೆಗೆ ಮಾಹಿತಿ ಕೇಂದ್ರ ಸಾವಿರಾರು ಸಾರ್ವಜನಿಕರಿಗೆ ಉಪಯೋಗವಾಗುತ್ತಾ ಬಂದಿದೆ. 30 ಜನವರಿ 2014 ರವರೆಗೆ ಸುಮಾರು 25 ಸಾವಿರಕ್ಕೂ ಹೆಚ್ಚು ಜನ ಈ ಕೇಂದ್ರಕ್ಕೆ ಭೇಟಿ ನೀಡಿರುವ ದಾಖಲೆಯಿದೆ. ಇನ್ನೂ ಹತ್ತಾರು ಸಾವಿರ ಜನರು ಭೇಟಿ ನೀಡಿದ್ದರೂ ಅವರು ಮಾಹಿತಿ ಕೇಂದ್ರದಲ್ಲಿ ತಮ್ಮ ಹೆಸರನ್ನು ನಮೂದಿಸಿಲ್ಲ. ಇದುವರೆಗೆ ಸುಮಾರು 40 ಸಾವಿರಕ್ಕಿಂತಲೂ ಹೆಚ್ಚು ಜನ ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿರುವುದು ಅದರಿಂದ ಅನೇಕ ವಿಷಯಗಳ ಬಗ್ಗೆ ಮಾಹಿತಿ ಪಡೆದು ಉಪಯೋಗ ಮಾಡಿಕೊಂಡಿರುವುದು ಇದರ ಮೂಲ ಅಗತ್ಯಕ್ಕೆ ಸಾಕ್ಷಿ. ನಾವು ಸಂಗ್ರಹಿಸಿದ ಮಾಹಿತಿ ಪ್ರಕಾರ ಸುಮಾರು 60 ಪ್ರತಿಶತದಷ್ಟು ಜನಸಾಮಾನ್ಯರು ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ಪಡೆಯಲು ಭೇಟಿ ನೀಡಿದ್ದಾರೆ. ಹಾಗೆಯೇ ಸುಮಾರು 25ಪ್ರತಿಶತ ಜನ ವಿದ್ಯಾಭ್ಯಾಸದ ವಿಷಯಗಳಿಗೆ ಮಾಹಿತಿ ಬಯಸಿ ಭೇಟಿ ನೀಡಿದ್ದಾರೆ. ಇನ್ನು 15 ಪ್ರತಿಶತ ಮಂದಿ ಗ್ರಾಮೀಣಾಭಿವೃದ್ಧಿ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕೃಷಿ, ತೋಟಗಾರಿಕೆ, ಹೀಗೆ ಹಲವು ವಿಷಯಗಳನ್ನೊಳಗೊಂಡಂತೆ ಮಾಹಿತಿ ಪಡೆಯಲು ಬಂದಿದ್ದಾರೆ.  
ಈ ಕೇಂದ್ರ ವಿವಿಧ ವಿದ್ಯಾರ್ಥಿ ವೇತನಗಳನ್ನು ಪರಿಚಯಿಸಿದೆ. ಇದು ಆನ್‌ಲೈನ್ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಟ್ಟಿದೆ, ಕೃಷಿಕರಿಗೆ ವಿವಿಧ ಬ್ಯಾಂಕ್ ಸಾಲಗಳು, ಕುರಿ ಸಾಕಣೆ, ಹೈನುಗಾರಿಕೆ, ಮೀನು ಸಾಕಣೆ, ಜೇನು ಸಾಕಣೆ, ರೇಷ್ಮೆ ಕೃಷಿ, ಸಾಲ ಪಡೆಯುವ ಬಗೆ, ಹೀಗೆ ಹಲವು ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದೆ.
ಒಟ್ಟಾರೆ ಇದೊಂದು ನೂತನ ಪ್ರಯೋಗ. ಎಲ್ಲಾ ಹೊಸ ಪ್ರಯೋಗಗಳಿದ್ದ ಹಾಗೆ ಇಲ್ಲೂ ಅಡೆತಡೆಗಳಿರಲಿಲ್ಲವೆಂದಲ್ಲ. ಸಿಬ್ಬಂದಿಯನ್ನು ಯಾವ ಯೋಜನೆಯಲ್ಲಿ ನೇಮಿಸಬೇಕು, ಅವರಿಗೆ ಯಾವ ಇಲಾಖೆ ಸಂಬಳ ನೀಡಬೇಕು, ಅವರಿಗೆ ಹೇಗೆ ತರಬೇತಿ ನೀಡಬೇಕು, ಮಾಹಿತಿ ಕೇಂದ್ರ ನಡೆಸಲು ಬೇಕಾಗುವ ದೈನಂದಿನ ಖರ್ಚು-ವೆಚ್ಚಗಳನ್ನು ಹೇಗೆ ಭರಿಸಬೇಕು, ಜಿಲ್ಲಾ ಕೇಂದ್ರದಲ್ಲಿ ಒಂದು ಮಾಹಿತಿ ಕೇಂದ್ರ ಸಾಕೆ, ಪ್ರತಿ ತಾಲೂಕಿನಲ್ಲಿ ವಿಸ್ತರಿದರೆ ಹೇಗೆ? ಇವೆಲ್ಲವನ್ನು ಯಾರು ನಿಭಾಯಿಸಬೇಕು? ಎಂಬ ವಿಷಯಗಳಲ್ಲಿ  ಸಹಾಯ ಬೇಕಾಗುತ್ತದೆ. ಸದ್ಯಕ್ಕೆ, ಮಾಹಿತಿ ಕೇಂದ್ರ ತನ್ನ ಕೆಲಸವನ್ನು ಎಲ್ಲರ ಸಹಕಾರದಿಂದ ನಮ್ಮ ವಿದ್ಯಾರ್ಥಿಗಳಿಗೆ, ಉದೋಗಾಕಾಂಕ್ಷಿಗಳಿಗೆ, ರೈತರಿಗೆ, ಗ್ರಾಮೀಣ ಜನತೆಗೆ ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಒಂದು ಪ್ರಾಥಮಿಕ ತಾಣವಾಗಿ ಕೆಲಸ ಮಾಡುತ್ತಿದೆ. ಸರ್ಕಾರಿ ಸೇವೆಯಲ್ಲಿದ್ದರೂ ಪ್ರಾಮಾಣಿಕವಾಗಿ ಕಳಕಳಿಯಿಂದ ಕೆಲಸ ಮಾಡುತ್ತಿರುವ ಅಲ್ಲಿನ ಸಿಬ್ಬಂದಿಯ ಉತ್ಸಾಹ ಬತ್ತದಿರಲಿ ಎಂಬುದಷ್ಟೇ ಆಶಯ.

- ಜನಾರ್ದನ ಸ್ವಾಮಿ ಸಂಸತ್ ಸದಸ್ಯರು
jswamy@jswamy.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.