

ಎಂದೆಂದಿಗೂ ಅನ್ವಯವಾಗಬಲ್ಲ ಜಲ ಸಂರಕ್ಷಣಾ ಶಾಸ್ತ್ರವೊಂದು ಅಳಿಸಿಹೋಗದಂಥ ಅಕ್ಷರಗಳಲ್ಲಿ ಬಹರೇನ್ನಲ್ಲಿ ಉಳಿದಿದೆ. ಭಾರತದಲ್ಲಿ ಇಂಥ ಭಾವಖನಿಗಳನ್ನು ಎಷ್ಟು ನಿರ್ಭಾವುಕವಾಗಿ ನಾವು ಉಸಿರುಗಟ್ಟಿಸಿ ಕೊಲ್ಲುತ್ತಿದ್ದೇವೆಂದರೆ ಆಧುನಿಕತೆಯ ಕುಳಿರ್ಗಾಳಿಗೆ ಸಿಲುಕಿ ಮನಸುಗಳು, ಅದರೊಳಗಣ ವಿವೇಚನೆ, ಪ್ರಜ್ಞೆ, ಪ್ರಯತ್ನಶೀಲತೆಗಳು ಅದೆಷ್ಟು ಮರಗಟ್ಟಿಹೋಗಿದ್ದಿರಬಹುದು?
ಮರಳು ದಿಬ್ಬದ ಮೇಲೆ ಏಕಾಂಗಿಯಾಗಿ ನಿಂತಿದ್ದ 'ಜೀವ ವೃಕ್ಷ'ವನ್ನು ಕಣ್ತುಂಬಿಕೊಂಡವನ ಮನದಲ್ಲಿ ಹತ್ತಾರು ಪ್ರಶ್ನೆಗಳು. ಅದನ್ನು ಅರಿತವರಂತೆ ಜತೆಗಿದ್ದ ಬಹರೇನ್ ಗೆಳೆಯರು, 'ಮರ ನೋಡಿ ಆಯ್ತಲ್ಲ, ಇಲ್ಲೇ ಸಣ್ಣದೊಂದು ಮ್ಯೂಸಿಯಂ ಇದೆ. ನೋಡಿ ಬರೋಣ ಬನ್ನಿ' ಎಂದು ಒತ್ತಾಯಿಸಿದರು. 'ಇಂಥ ಮರುಭೂಮಿಯಲ್ಲಿ ಮ್ಯೂಸಿಯಮ್ಮಾ?' ಎಂದವನಿಗೆ, 'ಅಲ್ಲಿಗೆ ಹೋಗದಿದ್ದರೆ ಈ ಭೇಟಿಯೇ ವ್ಯರ್ಥ' ಎಂದು ಕೊಂಚ ಒಗ್ಗರಣೆ ಬೇರೆ ಹಾಕಿದರು. ಮ್ಯೂಸಿಯಂ ಒಳಕ್ಕೆ ಕಾಲಿಡುವಾಗ ಕೊಂಚ ಅಚ್ಚರಿ, ಜತೆಗಿಷ್ಟು ಕುತೂಹಲ. ಮ್ಯೂಸಿಯಂ 'ಟ್ರೀ ಆಫ್ ಲೈಫ್' ಕುರಿತಾಗಿಯೇ ಇರಬಹುದು ಎನ್ನುವ ಪುಟ್ಟ ಅನುಮಾನ ಇದ್ದೇ ಇತ್ತು. ಗೆಳೆಯರು ಹೇಳಿದ್ದರಲ್ಲಿ ಸತ್ಯವಿತ್ತು. ಮರ ನೋಡಿ ಬಂದವರು ಸನಿಹದ ಮ್ಯೂಸಿಯಂಗೆ ಭೇಟಿ ಕೊಡದಿದ್ದರೆ ಕಾಶಿಗೆ ಹೋದವರು ವಿಶ್ವನಾಥನ ದರ್ಶನ ಮಾಡದೇ ವಾಪಸಾದಂತೆ!
'ಜೀವ ವೃಕ್ಷ'ದ ಕುರಿತಾಗಿ ನಮ್ಮ ಮನದಲ್ಲಿ ಮೂಡಬಹುದಾದ ಎಲ್ಲ ಪ್ರಶ್ನೆಗಳಿಗೂ ಅಲ್ಲಿ ಉತ್ತರವಿದೆ. ಮರಕ್ಕೆ ಸಂಬಂಧಿಸಿದ ವಿವರಗಳನ್ನು ಅರೇಬಿಕ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪುಟ್ಟದಾಗಿ, ಆದರೆ ಸಮಗ್ರವಾಗಿ ವಿವರಿಸುವ ಫಲಕಗಳು ಅದರೊಳಗಡೆ ಇವೆ. ಇಂಥ ಜೀವವೃಕ್ಷಗಳು ಬಹರೇನ್ನಲ್ಲಿ ಮಾತ್ರವೇ ಇಲ್ಲ, ಜಗತ್ತಿನ 19 ಕಡೆಗಳಲ್ಲಿ ಇವೆ. ಅವು ಎಲ್ಲೆಲ್ಲಿವೆ ಮತ್ತು ಬಹರೇನ್ನ ಜೀವ ವೃಕ್ಷದಿಂದ ಯಾವ ದಿಕ್ಕಿನಲ್ಲಿ, ಎಷ್ಟು ಅಂತರದಲ್ಲಿವೆ ಎನ್ನುವ ಫಲಕಗಳನ್ನೂ ಹಾಕಲಾಗಿದೆ. ಅಲ್ಲಿನ ಭೌಗೋಳಿಕ ಸನ್ನಿವೇಶಗಳ ಕುರಿತಾಗಿಯೂ ವಿವರಣೆ ಇದೆ. ಜಗತ್ತಿನಾದ್ಯಂತ ಜೀವವೃಕ್ಷದ ಸಹೋದರಿಯರು ಬೇರು ಬಿಟ್ಟಿದ್ದಾರೆ. ಆ ವಂಶಾವಳಿಯನ್ನು ನೀವಿಲ್ಲಿ ನೋಡಬಹುದು.
ಮ್ಯೂಸಿಯಂಗೆ ಕಾಲಿಟ್ಟರೂ ಬಹರೇನಿಯನ್ನರ ಮೂಲವಾದ ದಿಲ್ಮನ್ ನಾಗರಿಕತೆಯೊಂದಿಗೆ 'ಜೀವವೃಕ್ಷ' ಹೇಗೆ ತಳಕು ಹಾಕಿಕೊಂಡಿದೆ ಎಂಬುದೇ ಯೋಚನೆ. ದಿಲ್ಮನ್ ನಾಗರಿಕತೆ ಕಾಲದಲ್ಲಿ ಈ ಪ್ರದೇಶ ಸೇನಾತಾಣವಾಗಿತ್ತು ಎನ್ನುವುದಕ್ಕೆ ಮರವಿರುವ ಪ್ರದೇಶದಿಂದ ಕಿ.ಮೀ.ಗಳಷ್ಟು ದೂರದಲ್ಲಿ ಪಿರಂಗಿ ತೋಪು ಪತ್ತೆಯಾಗಿರುವುದೇ ಸಾಕ್ಷಿ. ಕೋಟೆಯನ್ನು ಎಷ್ಟು ಜಾಣತನದಿಂದ ನಿರ್ಮಿಸಿದ್ದರು ಎಂದರೆ ಇಡೀ ಬಹರೇನ್ನಲ್ಲಿ ಎಲ್ಲಿ ಮಳೆಯಾದರೂ ಅದರ ನೀರು ಕೋಟೆ ಸುತ್ತ ಕಂದಕ ಸೇರುವ ವ್ಯವಸ್ಥೆ! ಆ ಸೆಲೆಯೇ 'ಜೀವವೃಕ್ಷ'ಕ್ಕೆ ಇಂದಿಗೂ ಆಧಾರ ಎನ್ನುವುದು ನಿರ್ವಿವಾದ.
ಕೋಟೆ ಸುತ್ತ ಹಳ್ಳಿಗಳು ಇದ್ದವು ಮತ್ತು ಅವು ತಮ್ಮದೇ ಆದ ನೀರಿನ ಮೂಲಗಳನ್ನು ಹೊಂದಿದ್ದವು ಎನ್ನುವುದು ಕೆಲವು ಇತಿಹಾಸಕಾರರ ವಾದ. ಈ ಪ್ರದೇಶದ ಸುತ್ತಮುತ್ತ ಜನಜೀವನ ಇತ್ತು ಎನ್ನುವುದನ್ನು ನಿರೂಪಿಸುವ ಹಲವು ವಸ್ತುಗಳು, ಜಲಮೂಲವಿತ್ತು ಎನ್ನುವುದನ್ನು ತೋರಿಸುವ ದೋಣಿಗಳೂ ಪತ್ತೆಯಾಗಿವೆ. ತಮ್ಮ ದೋಣಿಗಳನ್ನು ಜಲ(ಬರ)ನಿರೋಧಕವಾಗಿಸಿಕೊಳ್ಳುವ ಜಾಣ್ಮೆಯನ್ನೂ ದಿಲ್ಮನ್ಗಳು ತೋರಿದ್ದರು. ಪುರಾತನ ಪರಿಕರಗಳನ್ನೆಲ್ಲ ಅತ್ಯಂತ ಜತನದಿಂದ ಕಾಪಿಡಲಾಗಿದೆ. ಕುತೂಹಲ ಎಂದರೆ ಸಮೀಪದ ಜಬೆಲ್-ಅದ್-ದಖಾನ್ನಲ್ಲಿಯೂ ಇಂಥದ್ದೇ ವಸ್ತುಗಳು ಪತ್ತೆಯಾಗಿರುವುದು.
ಒಂದಾನೊಂದು ಕಾಲದಲ್ಲಿ ಇಲ್ಲಿ ಜನವಸತಿ ಇತ್ತು ಎನ್ನುವ ಅನುಮಾನ ಸಂಶೋಧಕರನ್ನು ಕಾಡುತ್ತಿತ್ತು. ಅದರ ಸತ್ಯಾಸತ್ಯತೆ ತಿಳಿಯಲು ಸರ್ಕಾರದ ಸಂಸ್ಕೃತಿ ಸಚಿವಾಲಯದ ಪ್ರಾಚ್ಯವಸ್ತು ಮತ್ತು ಪರಂಪರೆ ಇಲಾಖೆ ಈ ಮರದ ಆಜುಬಾಜು ಉತ್ಖನನ ನಡೆಸಲು 2010ರಲ್ಲಿ ಅನುಮತಿ ನೀಡಿತು. ಆಗಲೇ ಇಷ್ಟೆಲ್ಲ ರೋಚಕ ಸಂಗತಿಗಳು ಬೆಳಕಿಗೆ ಬಂದಿದ್ದು. ಉತ್ಖನನಕ್ಕೆ ಮುಂದಾದವರಿಗೆ ಸಿಕ್ಕಿದ್ದು ಮರಳುದಿಬ್ಬದ ಅಡಿಯಲ್ಲಿ ಕಟ್ಟಡಗಳ ಅವಶೇಷಗಳು. ಮೇಲ್ಭಾಗದಲ್ಲಿ ವಾಹನಗಳ ಓಡಾಟ, ಅವೈಜ್ಞಾನಿಕವಾದ ಮರಳು ಗಣಿಗಾರಿಕೆ ಇತ್ಯಾದಿಗಳಿಂದ ಆ ಪುರಾತನ ನಿರ್ಮಾಣಗಳಿಗೆ ಹಾನಿಯಾಗಿದೆ ಎನ್ನುವುದು ಸಂಶೋಧಕರ ಅಭಿಮತ.
ಶತಮಾನಗಳಿಂದ ನಲುಗದೇ ನಿಂತಿರುವ ಜೀವವೃಕ್ಷ, ಬಹರೇನ್ ಕೋಟೆಯನ್ನು ಕಂಡಾಗ ನಮ್ಮಲ್ಲಿನ ಪುರಾತನ ಅತ್ಯಪೂರ್ವ ಜಲನಿಧಿಗಳು ಕಣ್ಮುಂದೆ ಹಾದುಹೋದವು. ಅವುಗಳ ಬಗೆಗಿನ ನಮ್ಮ ದಿವ್ಯ ನಿರ್ಲಕ್ಷ್ಯವೂ ನೆನಪಾಯಿತು.
ದಿಲ್ಮನ್ ಕೋಟೆ, ಅದರ ಸುತ್ತಲಿನ ನೀರುಗಾಲುವೆ ಹಾಗೂ ಜೀವವೃಕ್ಷ ನಿಜಕ್ಕೂ ಐತಿಹಾಸಿಕ. ಕೋಟೆಯ ಕಾಲುವೆಯಿಂದಲೇ ಇಡೀ ನಗರಕ್ಕೆ ನೀರು ಪೂರೈಕೆಯಾಗುತ್ತಿತ್ತು. ದಿಲ್ಮನ್ ಅರಸರ ದೂರದೃಷ್ಟಿ ಹಾಗೂ ಕ್ರಿಯಾಶೀಲತೆಗೆ ಇದು ಮಾದರಿ. ಒಂದು ಕಾಲದಲ್ಲಿ ತಿಳಿ ನೀರ ಕೊಳವಾಗಿ ಥಳಥಳಿಸುತ್ತಿದ್ದ ಕಾಲುವೆ ಇಂದು ಬತ್ತಿದೆ, ನಿಜ. ಶತಮಾನಗಳ ಜೀವಂತಿಕೆಯ ಸಂಕೇತವಾಗಿ ಹೆಮ್ಮೆಯಿಂದ ಬೀಗುತ್ತಿದ್ದ ನಿರ್ಮಾಣದಲ್ಲಿಂದ ಬಿಸಿಯುಸಿರು. ವಾಸ್ತುಶಿಲ್ಪದ ದೃಷ್ಟಿಯಿಂದ ಅತ್ಯಂತ ಮಹತ್ವವೆನಿಸುವ ಕೋಟೆ ಅದೊಂದೇ ಕಾರಣಕ್ಕೆ ಸಂರಕ್ಷಣೀಯ ಎನಿಸಿಕೊಳ್ಳುವುದಿಲ್ಲ. ಒಂದಿಡೀ ಆಡಳಿತಾವಧಿಯಲ್ಲಿನ ನೀರಾವರಿ ವ್ಯವಸ್ಥೆ, ಯಾವಜ್ಜೀವ ಜಲ ಸಂರಕ್ಷಣಾ ಪಾಠವಾಗಿ ಅವು ನಿಂತಿವೆ. ಎಲ್ಲಿ ಬಿದ್ದ ನೀರು ಎಲ್ಲಿಗೆ ಹರಿದು ಹೋದೀತು; ಎಲ್ಲಿ ಅದನ್ನು ಹಿಡಿದಿಟ್ಟುಕೊಂಡರೆ ಜೀವವ ಪೊರೆದೀತು? ಎಲ್ಲಿಂದೆಲ್ಲಿಗೆ ನೀರ ಸಂಪರ್ಕವನ್ನು ಕಲ್ಪಿಸಿದರೆ ಸುಸ್ಥಿರ ವ್ಯವಸ್ಥೆಯಾಗಿ ಉಳಿದೀತು ಎಂಬಿತ್ಯಾದಿ ಅತಿ ಸೂಕ್ಷ್ಮ ತಂತ್ರಜ್ಞಾನವನ್ನು ಆಗಿನ ಅರಸರು ಈ ಮೂಲಕ ಕಟ್ಟಿ ಕೊಟ್ಟಿದ್ದರು. ಅಂದು- ಇಂದಿನ ಪ್ರಶ್ನೆಯಲ್ಲ, ಎಂದೆಂದಿಗೂ ಅನ್ವಯವಾಗಬಲ್ಲ ಜಲ ಸಂರಕ್ಷಣಾ ಶಾಸ್ತ್ರವೊಂದು ಅಳಿಸಿಹೋಗದಂಥ ಅಕ್ಷರಗಳಲ್ಲಿ ಬಹರೇನ್ನಲ್ಲಿ ಉಳಿದಿದೆ. ಭಾರತದಲ್ಲಿ ಇಂಥ ಭಾವಖನಿಗಳನ್ನು ಎಷ್ಟು ನಿರ್ಭಾವುಕವಾಗಿ ನಾವು ಉಸಿರುಗಟ್ಟಿಸಿ ಕೊಲ್ಲುತ್ತಿದ್ದೇವೆಂದರೆ ಆಧುನಿಕತೆಯ ಕುಳಿರ್ಗಾಳಿಗೆ ಸಿಲುಕಿ ಮನಸುಗಳು, ಅದರೊಳಗಣ ವಿವೇಚನೆ, ಪ್ರಜ್ಞೆ, ಪ್ರಯತ್ನಶೀಲತೆಗಳು ಅದೆಷ್ಟು ಮರಗಟ್ಟಿಹೋಗಿದ್ದಿರಬಹುದು?
ಇನ್ನೊಂದು ವಾದವೂ ಇದೆ. 16-17ನೇ ಶತಮಾನದಲ್ಲಿ ಈ ಮರವನ್ನು ನೆಟ್ಟಿರಬಹುದು, ಆಗ ಅದು ಪುಟ್ಟ ಪೊದೆಯೇ ಆಗಿದ್ದಿರಬಹುದು. ಕಾಲಾನಂತರ ಈ ಪ್ರದೇಶ ಮರುಭೂಮಿಯಾಗಿ ಮಾರ್ಪಟ್ಟಿರಬಹುದು. ಬೇರುಗಳು 50-60 ಮೀಟರ್ ಆಳಕ್ಕೆ ಇಳಿದಿದ್ದರಿಂದ ಕೋಟೆ ಸುತ್ತಲಿನ ಕಂದಕನ ನೀರಿನ ಸೆಲೆಯನ್ನು ಸೆಳೆದುಕೊಂಡು ಮರವಾಗಿ ಬೆಳೆದಿರಬಹುದು ಎನ್ನುವುದು. ಇದಕ್ಕೆ ಪೂರಕವಾಗಿ ಅವರು ನೀಡುವ ಆಧಾರ ಎಂದರೆ ಅಲ್ಲಿ ಪತ್ತೆಯಾದ ಕುರುಹುಗಳು ಕ್ರಿ.ಶ.1440-1460ನೇ ಶತಮಾನಕ್ಕೆ ಸೇರಿದ್ದು ಎನ್ನುವುದು. ಈ ಮರದ ಪ್ರಾಯ 500 ವರ್ಷ ಎನ್ನುವುದನ್ನು ಖಚಿತವಾಗಿ ಹೇಳಲೂ ಅದುವೇ ಆಧಾರ.
ದಕ್ಷಿಣ ಮರುಭೂಮಿಯ ಮಧ್ಯಭಾಗದಲ್ಲಿ ಪುಟ್ಟ ದಿಬ್ಬದ ಮೇಲೆ ನಿಂತಿರುವ ಈ ವೃಕ್ಷದ ಸುತ್ತಮುತ್ತ ಬೇರಾವುದೇ ಹಸಿರು ಗಿಡ-ಮರಗಳು ಇಲ್ಲದಿರುವುದರಿಂದಲೇ 'ಜೀವ ವೃಕ್ಷ' ಆಕರ್ಷಣೆಯ ಕೇಂದ್ರಬಿಂದು. ಸಂಶೋಧಕರು, ಇತಿಹಾಸದಲ್ಲಿ ಆಸಕ್ತಿ ಉಳ್ಳವರಿಗೆ ಮೊಗೆದಷ್ಟೂ ಮಾಹಿತಿ ನೀಡುವ ಕಣಜ. ವಿವರಗಳನ್ನು ಕೆದಕಿದಾಗ ಈ ಮರವನ್ನು ಉದ್ದೇಶಪೂರ್ವಕವಾಗಿ ನೆಡಲಾಗಿತ್ತೇ ಎನ್ನುವ ಅನುಮಾನವೂ ಮೂಡದಿರದು. ಜನವಸತಿ ಇದ್ದಾಗಲೂ ಅತ್ಯಂತ ಸುರಕ್ಷಿತ ಪ್ರದೇಶದಲ್ಲಿ. ಯಾವ ರೀತಿಯಿಂದಲೂ ಬೇರುಗಳಿಗೆ ಧಕ್ಕೆಯಾಗದ ಹಾಗೆ ಆಗಲೇ ಮುಂಜಾಗ್ರತೆ ವಹಿಸಲಾಗಿತ್ತು. ಮರದ ಬುಡದಲ್ಲಿ ಗೋಡೆ ರೀತಿಯ ರಚನೆಗಳನ್ನು ನೀರಿಂಗಿಸುವ ಸಲುವಾಗಿಯೇ ಮಾಡಲಾಗಿತ್ತೆ? ಅಂತರ್ಜಲ ಹೆಚ್ಚಿಸುವ ತಂತ್ರಗಳು ಆಗಲೇ ಬಳಕೆಯಲ್ಲಿದ್ದವೆ? ನಾಲ್ಕು ಶತಮಾನಗಳ ಬಳಿಕವೂ ಮರದಲ್ಲಿ ನೀರು ಜಿನುಗುವುದನ್ನು ಗಮನಿಸಿದರೆ, ಅದರ ಬಿಳಿಲುಗಳು ಹರಡಿಕೊಂಡ ಜಾಗದಲ್ಲೆಲ್ಲ ತಂಪಿನ ಸೆಲೆ ಇರುವುದನ್ನು ನೋಡಿದರೆ ಇಂಥ ಪ್ರಶ್ನೆಗಳು ಹುಟ್ಟದಿರವು. ಈ ಜಾತಿಯ ಗಿಡಗಳಲ್ಲಿ ಎಲೆಗಳು ಚಿಕ್ಕದಾಗಿರುವುದರಿಂದ ಬಾಷ್ಪೀಕರಣ ಪ್ರಕ್ರಿಯೆಯಿಂದ ನೀರು ವಾತಾವರಣಕ್ಕೆ ಸೇರುವುದನ್ನು ಕಡಿಮೆ ಮಾಡುತ್ತದೆ. ಬೇರುಗಳು ಬಹಳ ಆಳಕ್ಕೆ ಇಳಿಯುವುದರಿಂದಲೇ ನೂರಾರು ವರ್ಷ ಬಾಳಿ ಬದುಕುತ್ತಿರುವುದು.
ಖುಷಿಯಾಗುವುದು ಕಿಂಗ್ಡಮ್ ಆಫ್ ಬಹರೇನ್ನಲ್ಲಿನ ಆಡಳಿತ ಈ ವೃಕ್ಷದ ಬಗ್ಗೆ ತೋರುತ್ತಿರುವ ಕಾಳಜಿಯಿಂದ. ನೈಸರ್ಗಿಕ ಸ್ಮಾರಕವಾಗಿಯೇ ಇದನ್ನು ಸಂರಕ್ಷಿಸಲು ಮತ್ತು ಈ ವೃಕ್ಷದ ಮಹತ್ವವನ್ನು ಪ್ರವಾಸಿಗರಿಗೆ ತಿಳಿಸಿಕೊಡುವ ಕಾರ್ಯವನ್ನು ಅತ್ಯಂತ ಮುತುವರ್ಜಿಯಿಂದ ಅಲ್ಲಿನ ಸರ್ಕಾರ ಮಾಡುತ್ತಿದೆ. ಮರವನ್ನು ಬಲುದೂರದಿಂದ ನೋಡುವ ನಿರ್ಬಂಧವಿಲ್ಲ. ಮರದ ಸುತ್ತ ನಿರ್ಮಿಸಿರುವ ಕಿರುದಾರಿಗಳಲ್ಲಿ ನಡೆದಾಡಿ ತಣ್ಣನೆಯ ಅನುಭೂತಿ ದಕ್ಕಿಸಿಕೊಳ್ಳಬಹುದು. ಮರದ ಬಗ್ಗೆ ಅರಿಯುತ್ತಲೇ ಬಹರೇನಿಯನ್ನರ ಇತಿಹಾಸ ಅರಿಯಬಹುದು. ಪ್ರವಾಸಿ ತಾಣ ಹೇಗಿರಬೇಕು ಎನ್ನುವುದಕ್ಕೂ ಇದು ಮಾದರಿಯಾಗಿ ನಿಲ್ಲಬಲ್ಲದು.
- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in