ಫಲ ನೀಡದ ಆಡ್ವಾಣಿ ಸಾಹಸ ಮೋದಿ ವಿರುದ್ಧ ಸಿಟ್ಟು ತಿರುಗುಬಾಣವಾಯಿತೇ?

ಆಡ್ವಾಣಿಯವರು ತಾವು ಗಾಂಧಿನಗರದ ಬದಲು ಭೋಪಾಲ್ನಲ್ಲಿ ಸ್ಪರ್ಧಿಸುವುದಾಗಿ ಕ್ಯಾತೆ ತೆಗೆದಿದ್ದು, ನಂತರ ಆರೆಸ್ಸೆಸ್ ಮತ್ತು ಪಕ್ಷದ ಒತ್ತಡಕ್ಕೆ ಮಣಿದು ಗಾಂಧಿನಗರದಲ್ಲೇ ನಿಂತಿದ್ದು ವಿಶ್ಲೇಷಕರ ವಿಮರ್ಶೆಗೆ ವಸ್ತುವಾಗಿದೆ.
ಫಸ್ಟ್ಪೋಸ್ಟ್ ಜಾಲತಾಣದ ಸಂಪಾದಕ ಆರ್. ಜಗನ್ನಾಥನ್ ತುಂಬ ಕಟುವಾಗಿಯೇ, 'ಲೋಕಸಭೆ ಟಿಕೆಟ್ ಹಾಗಿರಲಿ, ಸನ್ಯಾಸ ತೆಗೆದುಕೊಳ್ಳುವುದರ ಬಗ್ಗೆ ಆಡ್ವಾಣಿ ಯೋಚಿಸಬೇಕು' ಎಂದು ಬರೆದಿದ್ದಾರೆ.
ಅನರು ಬರೆಯುತ್ತಾರೆ- 'ನಮ್ಮ ನೇತಾರರು ಅಹಮಿಕೆಯಲ್ಲೇ ಹೂತುಹೋಗಿದ್ದಾರೆ. ತ್ಯಾಗದ ಬಗ್ಗೆ ಮಾತನಾಡುತ್ತ ಅಧಿಕಾರಕ್ಕಾಗಿ ಹಪಾಹಪಿಸುವುದು ಮಾಮೂಲಾಗಿ ಹೋಗಿದೆ. ತಮ್ಮ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸುವುದಕ್ಕೆ ನೋಡಿದ ಲಾಲ್ಕೃಷ್ಣ ಆಡ್ವಾಣಿಯವರೂ ಕಟ್ಟಿದ್ದು ಇಂಥದ್ದೇ ಆಟವನ್ನು.'
86ರ ಪ್ರಾಯದಲ್ಲೂ ಆಡ್ವಾಣಿಯವರೇಕೆ ಸನ್ಯಾಸವನ್ನು ತೆಗೆದುಕೊಂಡು ನೇಪಥ್ಯಕ್ಕೆ ಸರಿಯುವುದಕ್ಕೆ ಇಚ್ಛಿಸುತ್ತಿಲ್ಲ ಎಂದು ಪ್ರಶ್ನಿಸಿರುವ ಅವರು, ಈ ಜಾಯಮಾನ ಅವರೊಬ್ಬರದ್ದೇ ಏನಲ್ಲ ಎಂದು ಉದಾಹರಣೆಗಳನ್ನು ಪಟ್ಟಿ ಮಾಡಿದ್ದಾರೆ. '82 ವರ್ಷವಾದರೂ ಪ್ರಧಾನಿ ಮನಮೋಹನ ಸಿಂಗ್ ಗಾದಿಗೆ ಅಂಟಿಕೊಂಡಿದ್ದಾರೆ. 86ರ ಇಳಿವಯಸ್ಸಿನಲ್ಲೂ ಪ್ರಕಾಶ್ ಸಿಂಗ್ ಬಾದಲ್ ಸಿಂಹಾಸನವನ್ನು ಬಿಡುತ್ತಿಲ್ಲ. ದೇವೇಗೌಡರಿಗೆ 81ರ ವಯಸ್ಸಿನಲ್ಲೂ ಲೋಕಸಭೆ ಚುನಾವಣೆಗೆ ನಿಲ್ಲಬೇಕು. ಈ ವರ್ಷ 90ನೇ ವರ್ಷಕ್ಕೆ ಕಾಲಿಡುವ ಕರುಣಾನಿಧಿಯವರು ಈ ಹಿಂದಿನ ಚುನಾವಣೆಯಲ್ಲಿ ಸೋಲು ಕಾಣದಿದ್ದರೆ ಹೊರಬೀಳುತ್ತಿರಲಿಲ್ಲವೇನೋ. 80ನೇ ವಯಸ್ಸಿನಲ್ಲಿ ಕೇರಳದ ಮುಖ್ಯಮಂತ್ರಿಯಾದ ಅಚ್ಯುತಾನಂದನ್ ಈಗ 90ರ ಪ್ರಾಯದಲ್ಲಿದ್ದಾರೆ. ಅವರನ್ನು ಆಮ್ಆದ್ಮಿ ಪಕ್ಷ ಕರೆಯುತ್ತಿದೆ. 86ರ ಪ್ರಾಯದವರೆಗೂ ಜ್ಯೋತಿಬಸು ಅಧಿಕಾರದಿಂದ ಹೊಂದಾಡಲಿಲ್ಲ.'
ಹಾಗಾದರೆ ಯುವಭಾರತ ವಯಸ್ಸಾದವರ ಬಗ್ಗೆ ಗೌರವ ಕಳೆದುಕೊಂಡಿದೆಯೇ ಎಂಬ ಪ್ರಶ್ನೆ ಕೇಳಿಕೊಳ್ಳುವ ಅಂಕಣಕಾರರು, ಹಾಗೇನೂ ಇಲ್ಲ ಎನ್ನುತ್ತ ಸಮಸ್ಯೆಯ ಮೂಲವನ್ನು ಗುರುತಿಸಿದ್ದಾರೆ. 'ಸುಮಾರು ಶೇ. 95ರಷ್ಟು ಜನಸಂಖ್ಯೆ ಸ್ವಾತಂತ್ರ್ಯದ ನಂತರ ಹುಟ್ಟಿರುವಂಥದ್ದು. ನಮ್ಮ ನೇತಾರರಲ್ಲಿ ಹೆಚ್ಚಿನವರೆಲ್ಲ ಸ್ವಾತಂತ್ರ್ಯಪೂರ್ವದವರು. ಅವರ ಮನೋಧೋರಣೆ ಸಮಸ್ಯೆಯನ್ನು ಸೃಷ್ಟಿಸುತ್ತಿದೆ.' ಈ ನಿಟ್ಟಿನಲ್ಲಿ ಅವರು ಕೆಲ ಅಂಶಗಳನ್ನು ಮುಂದಿರಿಸಿದ್ದಾರೆ.
-ಹಿರಿಯರೆಂಬುದು ಸರಿ. ಆದರೆ ವಯಸ್ಸಿಗಿಂತ ಸಾಮರ್ಥ್ಯ ಮತ್ತು ಧೋರಣೆಗೆ ಗೌರವ ನೀಡಬೇಕಾಗುತ್ತದೆ. ಮೆಟ್ರೋ ರುವಾರಿ ಇ. ಶ್ರೀಧರನ್ ಅವರ ಕಾರ್ಯಕ್ಷಮತೆ ಇನ್ನೂ ಕುಂದಿಲ್ಲ. ಎರಡು ಮಹಾ ಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿನತ್ತ ಕೊಂಡೊಯ್ದ ಆಡ್ವಾಣಿ ಸಾಮರ್ಥ್ಯದ ಕುರಿತೂ ಈ ಮಾತು ಹೇಳಲಾದೀತೇ?
-ವಯಸ್ಸಿಗೆ ಗೌರವ ಕೊಡೋಣ. ಹಾಗೆಂದು ಸಾಮರ್ಥ್ಯ ಇಲ್ಲದವರನ್ನು ವಯಸ್ಸಿನ ಕಾರಣಕ್ಕೇಕೆ ಹುದ್ದೆಯಲ್ಲಿ ಕೂರಿಸುವುದು? ಮನಮೋಹನ ಸಿಂಗ್, ಎ. ಕೆ. ಆ್ಯಂಟನಿ ಇವರದ್ದೆಲ್ಲ ಇದೇ ಕತೆ. ಇಲ್ಲಿ, ಹಿರಿಯರಾಗಿದ್ದು ಸಾಮರ್ಥ್ಯ ಇದ್ದ ಚಿದಂಬರಂ, ಪ್ರಣಬ್ ಮುಖರ್ಜಿ ಬಿಟ್ಟುಹೋದರು. 'ಹಳೆ ತಲೆಮಾರಿಗೆ ಹೋಲಿಸಿದರೆ ಯುವಭಾರತವು ವಯಸ್ಸಿನ ವಿಷಯದಲ್ಲಿ ಗೌರವ ತಗ್ಗಿಸಿಕೊಂಡಿರಬಹುದು. ಅದು ಒಳ್ಳೆಯದೇ' ಅನ್ನೋದು ಜಗನ್ನಾಥನ್ ಉಪಸಂಹಾರ.
***
ಆಡ್ವಾಣಿಯವರದ್ದು ಅಗತ್ಯವಿರದ ದುಸ್ಸಾಹಸ ಪ್ರದರ್ಶನ ಎಂದೇ ಅಂಕಣಕಾರ ಅಶೋಕ್ ಮಲಿಕ್ ಅಭಿಪ್ರಾಯಪಟ್ಟಿದ್ದಾರೆ. 'ನರೇಂದ್ರ ಮೋದಿಯವರನ್ನು ಪ್ರಧಾನಿ ಹುದ್ದೆಯ ಅಭ್ಯರ್ಥಿಯಾಗಿ ಸೂಚಿಸುವುದನ್ನು ವಿರೋಧಿಸಿದ ನಂತರ ಆಡ್ವಾಣಿ ತಾವು ಮೋದಿಯಿಂದ ಸುರಕ್ಷಿತ ಅಂತರ ಕಾಪಾಡಿಕೊಳ್ಳುತ್ತಿರುವ ಇಮೇಜ್ ನಿರ್ಮಿತಿಗೆ ಒದ್ದಾಡುತ್ತಿದ್ದಾರೆ. ಚುನಾವಣೆಯ ನಂತರ, ಬಿಜೆಪಿಗೆ ಅಗತ್ಯ ಸ್ಥಾನಬಲವಿಲ್ಲದಿದ್ದರೆ ಮೋದಿಗೆ ತಾವೇ ಪರ್ಯಾಯ ಎಂದು ಅವರು ನಂಬಿಕೊಂಡಿದ್ದಾರೆ' ಎಂಬುದು ಮಲಿಕ್ ವಿಶ್ಲೇಷಣೆ. 'ವಾಸ್ತವದಲ್ಲಿ ಆಡ್ವಾಣಿ ಹಿಂದಿದ್ದವರೂ ಈಗ ಮೋದಿ ಪಾಳಯ ಸೇರಿಬಿಟ್ಟಿದ್ದಾರೆ. ಅದನ್ನು ಗುರುತಿಸುವಲ್ಲಿ ಆಡ್ವಾಣಿ ಎಡವುತ್ತಿದ್ದಾರೆ. 2010ರ ಐಪಿಎಲ್ ಪಂದ್ಯವೇ ಗಂಗೂಲಿಗೆ ಕೊನೆಯದ್ದಾಗಬೇಕಿತ್ತು. ನಂತರ ಮಾರ್ಗದರ್ಶಕನ ಜಾಗದಲ್ಲಿ ಅವರು ಕೂರಲಿ ಎಂದು ಬಯಸಿತ್ತು ಕೋಲ್ಕತಾ ನೈಟ್ ರೈಡರ್ಸ್. ಆದರೆ ನಾಯಕತ್ವದಲ್ಲೇ ಮುಂದುವರಿಯುವ ಹಪಾಹಪಿಗೆ ಬಿದ್ದರು ಗಂಗೂಲಿ. ಪರಿಣಾಮ, ತಂಡದಿಂದಲೇ ಅವರನ್ನು ಕೈ ಬಿಡಲಾಯಿತು. 2009ರ ಮಹಾಚುನಾವಣೆಯಲ್ಲಿ ಮುಗ್ಗರಿಸಿದಾಗಲೇ ಆಡ್ವಾಣಿ ತಮ್ಮ ಕಾಲ ಮುಗಿಯಿತೆಂದು ಮನಗಾಣಬೇಕಿತ್ತು. ದುರದೃಷ್ಟ, ಅವರೂ ಗಂಗೂಲಿಯಂತೆ ಯೋಚಿಸಿದರು' ಎಂಬುದು ಮಲಿಕ್ ಪಂಚ್ಲೈನ್.
***
'ಇಕನಾಮಿಕ್ ಟೈಮ್ಸ್'ನಲ್ಲಿ ರಾಜೇಶ್ ರಾಮಚಂದ್ರನ್ ಅಭಿಪ್ರಾಯ- 'ಗುಂಪುಗಾರಿಕೆ ರಾಜಕೀಯದ ನಾಯಕನಾಗಿದ್ದ ಆಡ್ವಾಣಿ ಈಗ ಏಕಾಂಗಿ'. ಆಡ್ವಾಣಿಯವರದ್ದು ಗುಂಪುಗಾರಿಕೆ ರಾಜಕೀಯ ಎಂದು ವ್ಯಾಖ್ಯಾನಿಸುವುದಕ್ಕೆ ಅವರು ಕೊಡುವ ಆಧಾರವೆಂದರೆ- 'ಈ ಹಿಂದೆ ಕಿರಿಯ ನಾಯಕರನ್ನು ಆಡ್ವಾಣಿ ಪಕ್ಷದಲ್ಲೇ ಎತ್ತಿಕಟ್ಟುತ್ತಿದ್ದರು. ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಗುಜರಾತ್ನಲ್ಲಿ ನರೇಂದ್ರ ಮೋದಿ ಅವರನ್ನು ಪದಚ್ಯುತಗೊಳಿಸುವ ಪ್ರಸ್ತಾಪ ಇಟ್ಟಾಗ ತಮ್ಮ ಹಿಂದುತ್ವದ ಇಮೇಜ್ ವೃದ್ಧಿಸಿಕೊಳ್ಳುವುದಕ್ಕಾಗಿ ಮೋದಿ ಬೆಂಬಲಿಸಿದರು. ಇಂಥವುಗಳ ಮೂಲಕ ವಾಜಪೇಯಿಯವರಿಗೆ ಸಮಾನಾಂತರವಾಗಿ ತಮ್ಮ ಅನುಯಾಯಿಗಳ ತಂಡ ಕಟ್ಟಿಕೊಂಡು ನಾಯಕರಾಗುವುದು ಅವರ ಪ್ರಯತ್ನವಾಗಿತ್ತು. ಉಮಾ ಭಾರತಿ, ಕಲ್ಯಾಣ್ ಸಿಂಗ್, ಗೋವಿಂದಾಚಾರ್ಯ ಹೀಗೆ ಅವರು ಬೆಳೆಸಿದ್ದ ನಾಯಕರೇ ಅವರ ಸಾಮರ್ಥ್ಯವಾಗಿದ್ದರು. ಈ ಸಾಮರ್ಥ್ಯದಲ್ಲೇ ಅವರು ತಮ್ಮನ್ನು ಉಪ ಪ್ರಧಾನಿ ಪದವಿಗೆ ಆರೆಸ್ಸೆಸ್ ತರುವಂತೆ ನೋಡಿಕೊಂಡರು. ಕೊನೆಗೆ ಈ ನಾಯಕರೇ ಅವರಿಂದ ಭ್ರಮನಿರಸನಗೊಂಡರು. ಮೋದಿ ಆಗಮನದೊಂದಿಗೆ ಎಲ್ಲವೂ ಬದಲಾಗಿದೆ' ವ್ಯಾಖ್ಯಾನ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


