ಅಂಕಣಗಳು

ನೀಲೇಕಣಿಯವರು ನಿಂತಿರುವುದು ಲೋಕಸಭೆ ಚುನಾವಣೆಗೋ ಸ್ಥಳೀಯ ಸಂಸ್ಥೆ ಹುದ್ದೆಗೋ?

ನೀಲೇಕಣಿಯವರು ನಿಂತಿರುವುದು ಲೋಕಸಭೆ ಚುನಾವಣೆಗೋ ಸ್ಥಳೀಯ ಸಂಸ್ಥೆ ಹುದ್ದೆಗೋ?
Published On :

ಯಾವುದೇ ಚುನಾವಣೆಯಲ್ಲಿ ಹೊಸಮುಖಗಳ ಆಗಮನ ಕುತೂಹಲವೊಂದನ್ನು ಕಟ್ಟಿಕೊಡುತ್ತದೆ. ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ನಂದನ್ ನಿಲೇಕಣಿಯವರ ಉಮೇದುವಾರಿಕೆಯನ್ನು ಹೇಗೆ ವಿಶ್ಲೇಷಿಸಬಹುದು?
ರಾಜಕೀಯ ಅಖಾಡಕ್ಕೆ ನಂದನ್ ನೀಲೇಕಣಿ ಅವರ ಆಗಮನವನ್ನು ಸ್ವಾಗತಾರ್ಹ ವಿದ್ಯಮಾನವನ್ನಾಗಿ ನೋಡಬೇಕು. ಇದು ಬೇರೆ ಬೇರೆ ವೃತ್ತಿಗಳಲ್ಲಿರುವವರಿಗೆ ರಾಜಕೀಯವನ್ನು ಪ್ರವೇಶಿಸುವುದಕ್ಕೆ ಸ್ಫೂರ್ತಿಯನ್ನು ಒದಗಿಸಿವಂತಾಗಲಿ. ಭಾರತದ ರಾಜಕೀಯ ಸಂಸ್ಕೃತಿ ಭಿನ್ನ ಪ್ರತಿಭಾವಂತರ ಆಗಮನದ ನಿರೀಕ್ಷೆಯಲ್ಲಿದೆ. ಈ ಮನ್ವಂತರದ ಸಂದರ್ಭದಲ್ಲಿ ನಂದನ್ ನೀಲೇಕಣಿ ಅಂಥವರು ತಮ್ಮ ಜ್ಞಾನವನ್ನು ಸಾರ್ವಜನಿಕ ಬದುಕಿಗೆ ಧಾರೆ ಎರೆಯಬೇಕಾದ ಅವಶ್ಯಕತೆ ಇದೆ. ತಮ್ಮ ಸ್ವಂತ ಬಲದಲ್ಲಿ 7,700 ಕೋಟಿ ರುಪಾಯಿಗಳ ಆಸ್ತಿ ಮಾಡಿರುವುದು ಹಲವರ ಪ್ರಶಂಸೆಗೆ, ಬಹಳಷ್ಟು ಮಂದಿಯ ಹೊಟ್ಟೆಉರಿಗೆ ಈಗಾಗಲೇ ಕಾರಣವಾಗಿದೆ. ಆದರೆ ಈ ಬಗ್ಗೆ ಯಾರಿಗೂ ಆಕ್ರೋಶವೇನಿಲ್ಲ. ಉದ್ದಿಮೆ ಮತ್ತು ರಾಜಕಾರಣದ ನಡುವಿನ ಸಂಗಮದ ಬಗ್ಗೆ ಹುಬ್ಬೇರಿಸುವಂತೆ ಮಾಡುವ, ಆ ಬಗ್ಗೆ ಜನಸಾಮಾನ್ಯನಲ್ಲಿ ಆಕ್ರೋಶ ಹುಟ್ಟಿಸುವಂಥ ಯಾವ ಸಂಗತಿಗಳೂ ಈ ಆಸ್ತಿ ಗಳಿಕೆಯಲ್ಲಿ ಕಾಣುತ್ತಿಲ್ಲವಾದ್ದರಿಂದ ಅದು ಅಪ್ರಸ್ತುತ. ಇದೀಗ ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯವಾದಿಗಳು ಮಾತ್ರವೇ ವಲಸೆ ಹೋಗುತ್ತಿರುವ ರಾಜಕೀಯದ ಅಂಗಳವು ನಿಲೇಕಣಿಯಂಥವರಿಂದಲೂ ಭರ್ತಿಯಾಗಿ ವೈವಿಧ್ಯ ರೂಪುಗೊಳ್ಳಲಿ.
ಇವೆಲ್ಲದರ ಹೊರತಾಗಿ, ನೀಲೇಕಣಿ ಅವರು ತಮ್ಮ ರಾಜಕೀಯ ಅಭಿಯಾನವನ್ನು ಮಾಡುತ್ತಿರುವ ರೀತಿ ಯಾವುದು ಎಂಬುದಷ್ಟೇ ಬಹಳ ಮುಖ್ಯವಾಗುತ್ತದೆ. ಅದು ಇನ್ಫೊಸಿಸ್‌ನಲ್ಲಿ ಇರುವಾಗಿನ ಅವರ ದೃಷ್ಟಿಕೋನಕ್ಕೆ ಸಂಪೂರ್ಣ ಬೇರೆಯದೇ ದಿಕ್ಕಿನಲ್ಲಿರುವುದು ಸ್ಪಷ್ಟ. ಆಗ ಅವರು ಭಾರತೀಯ ಕಂಪನಿಯೊಂದನ್ನು ವಿಶ್ವಮಟ್ಟದಲ್ಲಿ ಎತ್ತರಿಸುವ ಕಾರ್ಯಭಾರಕ್ಕೆ ಕೈಹಾಕಿದ್ದರು. ಇದೀಗ ರಾಜಕಾರಣವನ್ನು ಪ್ರವೇಶಿಸುತ್ತಿದ್ದಂತೆ ಅವರು ಆ ಜಾಯಮಾನಕ್ಕೆ ತಕ್ಕಂತೆ ಸಂಕುಚಿತ ಚೌಕಟ್ಟಿನಲ್ಲಿ ತಮ್ಮ ವಿಚಾರಗಳನ್ನು ಇರಿಸುತ್ತಿರುವುದು ಆತಂಕಕಾರಿ. ರಾಜಕಾರಣದಲ್ಲಿ ಸ್ಥಳೀಯತೆಗೆ ಪ್ರಾಮುಖ್ಯವಿರಬೇಕು ಎಂಬುದು ಸರಿ. ಆದರೆ, ನೀಲೇಕಣಿ ಅವರು ತಮ್ಮ ಪ್ರಚಾರಾಂದೋಲನದಲ್ಲಿ ಮುಖ್ಯವಾಗಿ ಬಿಂಬಿಸುತ್ತಿರುವ ವಿಷಯಗಳೇನು ಎಂಬುದನ್ನು ಗಮನಿಸಿ. ನೀರು, ರಸ್ತೆ, ಸಂಚಾರ ಸುಧಾರಣೆ, ಕಸ ಸಮಸ್ಯೆ ನಿವಾರಣೆ ಹಾಗೂ ಅವಕಾಶಗಳ ಸೃಷ್ಟಿಯೇ ಅವರ ಆದ್ಯತೆ. ಖಂಡಿತ ಅವರು ಹೇಳುತ್ತಿರುವ ಸಮಸ್ಯೆಗಳೆಲ್ಲ ಬೃಹದಾಕಾರದವೇ. ಈ ನಾಗರಿಕ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವವರು ಬೇಕಾಗಿದ್ದಾರೆ ಎಂಬುದೂ ನಿಜ. ಆದರೆ ನೀಲೇಕಣಿಯವರಿಗೆ ತಾವು ನಿಂತಿರುವುದು ಲೋಕಸಭೆ ಚುನಾವಣೆಗೆ ಎಂಬುದೇನಾದರೂ ಮರೆತುಹೋಯಿತೇ? ಮೇಲೆ ಉದಾಹರಿಸಿದ ಸಮಸ್ಯೆಗಳನ್ನು ಪರಿಹರಿಸುವ ಅಗಾಧ ಕೌಶಲಗಳು ನೀಲೇಕಣಿಯವರಲ್ಲಿ ಇದ್ದಿರಬಹುದು. ಆದರೆ ಸಂಸದನ ಸ್ಥಾನದಲ್ಲಿ ಕುಳಿತು ಅವನ್ನೆಲ್ಲ ಪ್ರದರ್ಶಿಸುವ ಅವಕಾಶ ಅವರಿಗೆ ಎಷ್ಟರಮಟ್ಟಿಗೆ ಸಿಗುತ್ತದೆ? 1996-97ರಲ್ಲಿ ದೇಶದ ಪ್ರಧಾನಿಯಾಗಿದ್ದ ಎಚ್.ಡಿ. ದೇವೇಗೌಡರನ್ನು 'ಪ್ರೈಮ್‌ಮಿನಿಸ್ಟರ್ ಆಫ್ ಕರ್ನಾಟಕ' ಅಂತ ತಮಾಷೆ ಮಾಡಲಾಗುತ್ತಿತ್ತು. ಏಕೆಂದರೆ ಸ್ಥಳೀಯತೆಯನ್ನು ಮೀರಿದ ದೃಷ್ಟಿಕೋನ ಅಲ್ಲಿರಲಿಲ್ಲ. ನೀಲೇಕಣಿಯವರೇನಾದರೂ ಗೌಡರ ಮಾರ್ಗದಲ್ಲಿ ನಡೆಯಬೇಕೆಂದು ಯೋಚಿಸಿದಂತಿದೆಯೇ? ಏಕೆಂದರೆ ಅವರು ಬದಲಾವಣೆ ಬಯಸಿರುವ ವಿಷಯಗಳೆಲ್ಲ ರಾಜ್ಯ ಸರ್ಕಾರ ಮತ್ತು ಮುನ್ಸಿಪಲ್ ಕಾರ್ಪೋರೇಷನ್‌ಗಳ ವ್ಯಾಪ್ತಿಗೆ ಬರುತ್ತವೆ! ಇವರು ಸಂಸದರಾಗಿ ವಿಧಾನಸೌಧದಲ್ಲಿ ಕುಳಿತುಕೊಳ್ಳೋಣ ಎಂದೇನೂ ಬಯಸುತ್ತಿಲ್ಲವಷ್ಟೆ?
ಹಾಗಾದರೆ ನೀಲೇಕಣಿ ಅವರು ರಾಜಕೀಯವಾಗಿ ನುರಿತವರಲ್ಲವಾದ್ದರಿಂದ ಈ ಬಗೆಯ ಕಾರ್ಯಸೂಚಿಗಳನ್ನು ನಂಬಿಕೊಂಡಿದ್ದಾರೆ ಎನ್ನೋಣವೇ? ಇಲ್ಲ. ಅವರ ರಾಜಕೀಯ ಪದಾರ್ಪಣೆ ಈಗಿನದ್ದಿರಬಹುದು. ಆದರೆ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರದ ಮುಖ್ಯಸ್ಥರಾಗಿರುವಾಗಲೇ ಅವರು ರಾಜಕಾರಣದ ಪಾಠಗಳನ್ನು ಕಲಿತಿದ್ದಾರೆ. ಇದನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳುವುದಕ್ಕೆ ಅವರಿಗೆ ಕಷ್ಟವಾಗಬಹುದಷ್ಟೆ. ಬಹಳ ಬುದ್ಧಿವಂತಿಕೆಯಿಂದಲೇ ಅವರು ಸ್ಥಳೀಯ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆ ಎಂದಲ್ಲ, ಕಾಂಗ್ರೆಸ್‌ನ ಯಾವುದೇ ರಾಷ್ಟ್ರೀಯ ನಾಯಕರಿಗೆ ದೇಶವನ್ನು ಕಾಡುತ್ತಿರುವ ವಿಷಯಗಳ ಬಗ್ಗೆ ಮಾತನಾಡಿ ಮತ ಕೇಳುವ ಸ್ಥಿತಿಯೇ ಇಲ್ಲವಾಗಿದೆ. ಹಾಗೆ ಮಾಡಿದರೆ ಅವರಿಗೇ ತಿರುಗುಬಾಣವಾಗುವುದು ನಿಶ್ಚಿತ.
ಕಾಂಗ್ರೆಸ್‌ನ ದಕ್ಷಿಣ ಭಾರತದ ರಾಜಕಾರಣಿಗಳು ಯಾವತ್ತೂ ಮಾಡಿಕೊಂಡು ಬಂದಿದ್ದೇನಾಗಿತ್ತು? ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ನಾಯಕರ, ಇಂದಿರಮ್ಮನವರ ಹೆಸರು ಹೇಳಿಯೇ ಅಲ್ಲವೇ ಮತ ಕೇಳಿದ್ದು? ಆದರೆ ಯುಪಿಎ ಸರ್ಕಾರದ ಭರ್ಜರಿ ವೈಫಲ್ಯಗಳನ್ನು ಎದುರಿಗಿಟ್ಟುಕೊಂಡು ರಾಷ್ಟ್ರೀಯ ನಾಯಕರ ಹೆಸರಲ್ಲಿ ಈ ಬಾರಿ ಮತ ಕೇಳುವುದಾದರೂ ಹೇಗೆ? ಇದು ಕೇವಲ ನೀಲೇಕಣಿ ಅವರ ಗೊಂದಲ ಮಾತ್ರವೇ ಅಲ್ಲ. ಕಾಂಗ್ರೆಸ್‌ನ ನೇತಾರರೆಲ್ಲರಿಗೂ ಹುಟ್ಟಿಕೊಂಡಿರುವ ಪೀಕಲಾಟ. ಖುದ್ದು ಅಗ್ರಶ್ರೇಣಿಯ ನಾಯಕರ ಸಾಲಿನಲ್ಲಿರುವವರ ಸ್ಥಿತಿ ಏನು? ಅದೂ ಸ್ಪಷ್ಟ. ಅವರು ಚುನಾವಣೆಯಲ್ಲಿ ನಿಲ್ಲುವುದಕ್ಕೇ ಹಿಂದೆ ಮುಂದೆ ನೋಡುತ್ತಿದ್ದಾರೆ. ಮನೀಶ್ ತಿವಾರಿ, ಚಿದಂಬರಂ ಅಂಥವರು ಸ್ಪರ್ಧೆಯೇ ಬೇಡ ಎನ್ನುತ್ತಿದ್ದರೆ, ಪುರಂದರೇಶ್ವರಿಯಂಥವರು ಪಕ್ಷಾಂತರ ಮಾಡಬಿಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ 'ಇಮ್ಯಾಜಿನಿಂಗ್ ಇಂಡಿಯಾ' ಎಂದ ನೀಲೇಕಣಿಯವರು ಬೆಂಗಳೂರಿನ ಕಸ-ನೀರಿನ ಸಮಸ್ಯೆಗಳ ಪರಿಹಾರಕ್ಕೆ ತಮ್ಮ ಭರವಸೆ ಸೀಮಿತಗೊಳಿಸಿದ್ದಾರೆ. ಅದನ್ನು ಬಿಟ್ಟು ಭಾರತದ ಬಗ್ಗೆ ಮಾತನಾಡಬೇಕಾದರೆ ಅವರು ತಮ್ಮ ನಾಯಕರ ಸಾಮರ್ಥ್ಯದ ಕುರಿತೂ ಮನದಟ್ಟು ಮಾಡುವ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ. ರಾಹುಲ್ ಗಾಂಧಿ ಅವರನ್ನು ಯುವ ಭಾರತದ ಪ್ರವರ್ತಕ ಎಂದು ಮಹಾಯುದ್ಧ ಘೋಷಣೆಯಾಗುವ ಹೊಸ್ತಿಲಿನಲ್ಲಿ ಬಿಂಬಿಸಲು ಪ್ರಯತ್ನಿಸಲಾಯಿತು. ಆದರೆ ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲೇ ಅವರು ತಮ್ಮನ್ನು ಗೇಲಿಗೆ ಒಡ್ಡಿಕೊಳ್ಳುವ ರೀತಿಯಲ್ಲಿ ಉತ್ತರಿಸುವ ಮೂಲಕ ಫ್ಲಾಪ್ ಆಗಿಬಿಟ್ಟರು. ನರೇಂದ್ರ ಮೋದಿಯವರನ್ನು ವಿರೋಧಿಸುವ ಮನಸ್ಥಿತಿಗಳನ್ನು ತಮ್ಮತ್ತ ಸೆಳೆಯೋಣ, ಆ ನಿಟ್ಟಿನಲ್ಲಿ ಮಾತನಾಡೋಣ ಎಂದರೆ ಅಲ್ಲಿ ಇವರಿಗಿಂತ ಅರವಿಂದ ಕೇಜ್ರಿವಾಲರ ಆಪ್ ಸಕ್ರಿಯವಾಗಿಬಿಟ್ಟಿದೆ.
ನೀಲೇಕಣಿಯವರು ಸ್ಥಳೀಯ ಅಂಶಗಳ ಆಧಾರದಲ್ಲೇ ಯುದ್ಧಕಣಕ್ಕಿಳಿದಿರುವುದು ಒಟ್ಟಾರೆ ಕಾಂಗ್ರೆಸ್ ಮನೋಭೂಮಿಕೆಯಲ್ಲಿ ನಡೆಯುತ್ತಿರುವುದೇನು ಎಂಬುದನ್ನು ಬಿಡಿಸಿ ಹೇಳುತ್ತಿದೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಬರುವುದು ಕಷ್ಟದ ಸಾಧ್ಯತೆ ಎಂದು ಎಲ್ಲರಿಗೂ ಅರಿವಾಗಿರುವುದರಿಂದ ಚುನಾವಣೆ ಕಣದಲ್ಲಿರುವವರು ಲೋಕಲ್ ವಿಷಯಗಳನ್ನಷ್ಟೇ ಪ್ರಸ್ತಾಪಿಸಿ ತಮ್ಮ ಸ್ಥಾನವನ್ನು ಹೇಗಾದರೂ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.
ನೀಲೇಕಣಿಯವರು ಸ್ಪರ್ಧಿಸುತ್ತಿರುವುದು ಸ್ಥಳೀಯ ಸಂಸ್ಥೆ ಚುನಾವಣೆಗಲ್ಲ. ಲೋಕಸಭೆ ಕಣದಲ್ಲಿ ನಿಂತು ಅವರು ಪ್ರಸ್ತಾಪಿಸುತ್ತಿರುವ ವಿಷಯಗಳು ಎಷ್ಟು ಪ್ರಸ್ತುತವಾಗಿವೆ ಅಂತಂದ್ರೆ, ಜೆಎನ್‌ಯುದ ವಿದ್ಯಾರ್ಥಿ ಚುನಾವಣೆಯಲ್ಲಿ ಭಾಗವಹಿಸುವ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು, ಇಸ್ರೇಲ್ ವಿರುದ್ಧ ಪ್ಯಾಲೆಸ್ತೀನ್ ಒಗ್ಗೂಡಬೇಕೆಂಬ ಆಶಯದಲ್ಲಿ ತಮ್ಮ ಬೆಂಬಲವಿದೆ ಎನ್ನುತ್ತ ಮತ ಕೇಳಿದಂತಿದೆ.

- ಸ್ವಪನ್‌ದಾಸ್ ಗುಪ್ತ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.