ಅಂಕಣಗಳು

ಮೊಟಕಾಗದಿರಲಿ ಕುಟುಕು ಕಾರ್ಯಾಚರಣೆಯ ಗಾಂಭೀರ್ಯ

ಮೊಟಕಾಗದಿರಲಿ ಕುಟುಕು ಕಾರ್ಯಾಚರಣೆಯ ಗಾಂಭೀರ್ಯ
Published On :

ಅಪರಾಧ ಜಗತ್ತು ನಮ್ಮ ನಡುವೆಯೇ ಇದ್ದರೂ ಅರಿವಿಗೆ ಬಂದಿರುವುದಿಲ್ಲ. ಅಪರಾಧಿಗಳು ಕಣ್ಣಮುಂದೆಯೇ ಓಡಾಡುತ್ತಿರುತ್ತಾರೆ, ನಾವು ಗುರುತಿಸಿರುವುದಿಲ್ಲ. ಅವರಿಗೆ ನಾವು ಬಲಿಯಾಗುತ್ತಿದ್ದರೂ ನಮಗರಿವಿರುವುದಿಲ್ಲ. ವಾಣಿಜ್ಯ, ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ವ್ಯವಸ್ಥೆಯಲ್ಲಿ ಸೇರಿಕೊಂಡು ಸಭ್ಯ ಸಮಾಜದ ಮುಖವಾಡ ಧರಿಸಿರುತ್ತಾರೆ. ಒಬ್ಬರಿಗೊಬ್ಬರು ಷಾಮೀಲಾಗಿ ರಾಜಾರೋಷವಾಗಿ ಸಾರ್ವಜನಿಕರ ಆಸ್ತಿಪಾಸ್ತಿಗಳನ್ನು ಲೂಟಿ ಹೊಡೆಯುತ್ತಿದ್ದರೂ ನಮ್ಮ ಕಣ್ಣು ಮುಚ್ಚಿರುತ್ತದೆ. ಜಾಗೃತಗೊಳ್ಳುವುದಿಲ್ಲ. ಅಂಥ ಒಂದು ಅಪರಾಧಿ ಜಗತ್ತನ್ನು ಬೆತ್ತಲೆಗೊಳಿಸಿ, ಸಾಮಾನ್ಯ ಜನರನ್ನು ಜಾಗೃತಗೊಳಿಸಲು, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ನಡೆಸುವ ಚಾಣಾಕ್ಷ ಕ್ರಿಯೆಯೇ ಸ್ಟಿಂಗ್ ಆಪರೇಷನ್ ಅಥವಾ ಕುಟುಕು ಕಾರ್ಯಾಚರಣೆ.
ಇಲ್ಲಿ ರಹಸ್ಯ ಕ್ಯಾಮರಾಗಳ ಮೂಲಕ ದಂಧೆಕೋರರನ್ನು ಹಾಗೂ ಅವರು ಮಾಡುವ ದಂಧೆಗಳನ್ನು ನೇರವಾಗಿಯೇ ಚಿತ್ರೀಕರಿಸಿ, ಅವರಿಗರಿವಿಲ್ಲದಂತೆ ಅವರೇ ಅದರ ಬಗ್ಗೆ ಬಾಯಿಬಿಡುವಂತೆ ಮಾಡಿ ಮಾಧ್ಯಮಗಳ ಮೂಲಕ ಅವರ ನಿಜಬಣ್ಣ ಬಯಲು ಮಾಡಲಾಗುತ್ತದೆ. ಇದರಿಂದ ಕಾನೂನು ಕ್ರಮ ಜರುಗಿಸಲು ಹಾಗೂ ಜನಜಾಗೃತಿಗೆ ಅನುಕೂಲವಾಗುತ್ತದೆ. ಇದಕ್ಕೆ ಧೈರ್ಯ ಬೇಕು. ಏಕೆಂದರೆ ನಿರ್ದಿಷ್ಟ ಜಾಗಗಳಲ್ಲಿ ನಿರ್ದಿಷ್ಟ ವೇಳೆಗಳಲ್ಲಿ ನಡೆಯುವ ದಂಧೆಗಳಾದರೆ ಪೂರ್ವಭಾವಿಯಾಗಿಯೇ ಕ್ಯಾಮರಾಗಳನ್ನು ಅಡಗಿಸಿಟ್ಟು ಸೆರೆಹಿಡಿಯಬಹುದು. ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವಂಥ ಟ್ರಾಫಿಕ್ ಪೊಲಿಸ್ಗಳ ಲಂಚ ಸ್ವೀಕಾರ, ಹಫ್ತಾ ವಸೂಲಿಗಳಂಥ ಸಾಮಾನ್ಯ ದಂಧೆಗಳಾದರೆ ಮರೆಯಲ್ಲಿ ನಿಂತು ಸೆರೆಹಿಡಿಯಬಹುದು. ಹೀಗೆ ಮಾಡುವವರ ಸುಳಿವು ದಂಧೆಕೋರರಿಗೆ ಸಿಗುವುದಿಲ್ಲವಾದ ಕಾರಣ ಅವರ ಮೇಲೆ ವೈಯಕ್ತಿಕ ಸೇಡು ದಾಳಿ  ಅಸಾಧ್ಯ. ಆದರೆ...,
ಅತ್ಯಂತ ಪ್ರಭಾವೀ ವಲಯಗಳಲ್ಲಿ ನಡೆಯುವ ಭ್ರಷ್ಟಾಚಾರಗಳನ್ನು ಬಯಲಿಗೆಳೆಯಬೇಕಾದರೆ ಕೆಚ್ಚೆದೆಯೇ ಬೇಕು. ಸೂಕ್ಷ್ಮಗಾತ್ರದ ಕ್ಯಾಮರಾಗಳನ್ನು ತಾವೇ ಅಡಗಿಸಿಟ್ಟುಕೊಂಡು ದಂಧೆಯ ಸ್ವರೂಪಕ್ಕನುಸಾರವಾಗಿ ವೇಷ ಧರಿಸಿ, ಗ್ರಾಹಕರ ಸೋಗಿನಲ್ಲಿ ದಂಧೆಕೋರರ ಸಾಮ್ರಾಜ್ಯಕ್ಕೆ ನುಗ್ಗಬೇಕು. ಅಲ್ಲಿ ರಹಸ್ಯ ಭೇದಿಸುವುದು ತಮ್ಮ ಜೀವದೊಂದಿಗೆ ತಾವೇ ಚೆಲ್ಲಾಟವಾಡಿದಂತೆ. ಸ್ವಲ್ಪ ಎಚ್ಚರ ತಪ್ಪಿದರೂ ಹಲ್ಲೆ ನಿಶ್ಚಿತ. ರಹಸ್ಯ ಕಾರ್ಯಾಚರಣೆ ಮಾಡಿದವರ ಮುಖಪರಿಚಯ ದಂಧೆಕೋರರಿಗೆ ಸಿಗುವುದರಿಂದ ಮುಂದೆಯೂ ಅಪಾಯ ಕಟ್ಟಿಟ್ಟ ಬುತ್ತಿ. ಜಗತ್ತಿನಾದ್ಯಂತ ಇಂಥಾ ಕಾರ್ಯಾಚರಣೆಗಳನ್ನು ಅಪರಾಧ ಶೋಧಕ್ಕೆಂದು ಕಾನೂನು ಜಾರಿ ನಿರ್ದೇಶನಾಲಯವು ಕೈಗೊಳ್ಳುತ್ತಿತ್ತು. ಆದರೆ ಇತ್ತೀಚೆಗೆ ಸಾಮಾಜಿಕ ಕಳಕಳಿಯ ಹೆಸರಿನಲ್ಲಿ ಖಾಸಗಿ ವ್ಯಕ್ತಿಗಳು, ಖಾಸಗಿ ಸಂಘಸಂಸ್ಥೆಗಳು, ಸುದ್ದಿಮಾಧ್ಯಮಗಳು ಕೈಗೊಳ್ಳುತ್ತಿರುವುದರಿಂದ ಇದರ ಜನಪ್ರಿಯತೆ ಜಾಸ್ತಿಯಾಗಿದೆ. ಜತೆಗೆ ವಿವಾದಗಳೂ ಇವುಗಳ ಬೆನ್ನು ಹತ್ತಿವೆ. ಹಾಗಾಗಿ ಇಂಥ ಕಾರ್ಯಾಚರಣೆಗಳ ಬಗ್ಗೆ ಗಮನಹರಿಸಬೇಕಾದದ್ದು ಇಂದಿನ ಅಗತ್ಯ.
ಮಧ್ಯಪ್ರದೇಶದ ಇಂದೋರ್ನ ಕ್ಷಿಪ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ನವರು ಹಫ್ತಾವಸೂಲಿ ಮಾಡುತ್ತಿದ್ದುದನ್ನು ಹಳ್ಳಿಜನರು ತಮ್ಮ ಮೊಬೈಲ್ ಕ್ಯಾಮರಾ ಬಳಸಿ ಚಿತ್ರೀಕರಿಸಿ ಬಿತ್ತರಿಸಿ ಜನಜಾಗೃತಿ ಉಂಟುಮಾಡಿದ್ದಾರೆ.
ಬಿಹಾರ್ ರಾಜ್ಯದ ಸೌಮ್ಯ ಪ್ರತೀಕ್ ಎಂಬ ಮಹಿಳೆ ಸಾಮಾಜಿಕ ಹೋರಾಟಗಾರರಾದ ರಚೇಲ್ ಮೋರ್ಗನ್, ಮನೀಷ್ ಸ್ವರ್ಣಕರ್ ಅವರ ಜತೆಗೂಡಿ ಇಂಥ ರಹಸ್ಯ ಕಾರ್ಯಾಚರಣೆ ಮಾಡುವ ಮೂಲಕ ಅಮಾಯಕ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಜಾಲವನ್ನು ಬಯಲು ಮಾಡಿ ಪೊಲೀಸ್ನವರು ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮಾಡಿದ್ದಾರೆ.
ಚಿತ್ರರಂಗದಲ್ಲಿ ಅವಕಾಶ ಗಿಟ್ಟಿಸಲು ಹರಸಾಹಸ ಪಡುವ ಅಮಾಯಕ ಹೆಣ್ಣು ಮಕ್ಕಳನ್ನು ತಮ್ಮ ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದ ಬಾಲಿವುಡ್ ನಟರಾದ ಶಕ್ತಿಕಪೂರ್, ಅಮನ್ವರ್ಮ ಅಂಥವರನ್ನು ಸ್ಟಿಂಗ್ ಮೂಲಕ ಬಯಲಿಗೆಳೆದ ಇಂಡಿಯಾ ಟಿ.ವಿ ಭರ್ಜರಿ ಸದ್ದನ್ನೇ ಮಾಡಿತು.
1991ರ ಜನವರಿ 10ರಂದು ನೌಕಾಪಡೆಯ ಮಾಜಿ ಮುಖ್ಯಸ್ಥ ಸುರೇಶ್ ನಂದ ಅವರ ಪುತ್ರ ಸಂಜೀವ್ ನಂದ ಅವರು ಕುಡಿದ ಅಮಲಿನಲ್ಲಿ ಕಾರ್ ಚಾಲನೆ ಮಾಡಿ ಪೊಲೀಸ್ ಚೆಕ್ ಪಾಯಿಂಟ್ ಒಂದರ ಮೇಲೆ ನುಗ್ಗಿಸಿ ಮೂರು ಪೊಲೀಸ್ ಸಿಬ್ಬಂದಿ ಸೇರಿ ಒಟ್ಟು ಆರು ಮಂದಿಯ ದುರ್ಮರಣಕ್ಕೆ ಕಾರಣರಾಗಿದ್ದರು. ಪ್ರಭಾವ ಬೀರಿ ಸಾಕ್ಷ್ಯಗಳನ್ನು ತಿರುಚಿ ಖುಲಾಸೆಯಾಗುವುದರಲ್ಲಿದ್ದರು. ಆದರೆ ಸಂಜೀವ್ ನಂದ ಅವರ ಪರ ನ್ಯಾಯವಾದಿ ಆರ್.ಕೆ ಆನಂದ್ ಪ್ರಮುಖ ಸಾಕ್ಷಿಯನ್ನು ತಮ್ಮ ಹೇಳಿಕೆ ಬದಲಿಸಲು ಹೇಗೆ ಪುಸಲಾಯಿಸಿದರು ಎಂಬುದನ್ನು ಸ್ಟಿಂಗ್ ಮಾಡಿದ ಎನ್ಡಿಟಿವಿ ಸತ್ಯ ಹೊರಗೆ ತಂದಿತು. ಜತೆಗೆ ಅಪರಾಧಿಯನ್ನು ಶಿಕ್ಷೆಯಿಂದ ತಪ್ಪಿಸಿಕೊಳ್ಳಲಾಗದಂತೆ ಮಾಡಿತು. ರೂಪದರ್ಶಿ ಜಸ್ಸಿಕಾಲಾಲ್ ಪ್ರಕರಣದಲ್ಲಂತೂ ಸಾಕ್ಷ್ಯ ತಿರುಚಿ ಖುಲಾಸೆಗೊಂಡಿದ್ದ ಮನುಶರ್ಮ ಅವರನ್ನು ರಹಸ್ಯ ಕಾರ್ಯಾಚರಣೆ ಮೂಲಕ ಸತ್ಯಶೋಧಿಸಿ ಮರು ವಿಚಾರಣೆಯಾಗುವಂತೆ ಮಾಡಿ ಶಿಕ್ಷೆಯಾಗುವಂತೆ ಮಾಡಿದ ಕೀರ್ತಿ ಸ್ಟಾರ್ ಟಿವಿಗೆ ಸಲ್ಲುತ್ತದೆ.
ಇನ್ನು ಹೆದ್ದಾರಿಗಳಲ್ಲಿ ನಡೆಯುವ ಪೊಲೀಸ್ ಕಲೆಕ್ಷನ್ಗಳು, ನಗರಗಳಲ್ಲಿ ನಡೆಯುವ ಮಾಂಸ ದಂಧೆಗಳು, ಪೆಟ್ರೋಲ್ ಬಂಕ್ಗಳಲ್ಲಿ ನಡೆಯುವ ಮೋಸಗಳು ಇಂಥವನ್ನು ಆಯಾ ಲೋಕಲ್ ಚಾನೆಲ್ಗಳು ಕಾರ್ಯಾಚರಣೆಯ ಮೂಲಕ ಬಯಲು ಮಾಡುತ್ತಲೇ ಇವೆ. ಹೀಗೆ ಭ್ರಷ್ಟಾಚಾರಿಗಳನ್ನು ಬಯಲು ಮಾಡುತ್ತಾ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಂಥ ಕಾರ್ಯಾಚರಣೆಗಳು ಬೇಕೇ, ಬೇಡವೇ ಎಂದು ಪ್ರಶ್ನೆ ಮಾಡಿದರೆ ಚಿತ್ತಸ್ವಾಸ್ಥ್ಯ ಸರಿಯಿರುವ ಯಾರೇ ಆಗಲಿ ಹೇಳುವ ಉತ್ತರ ಒಂದೇ- ಇದು ಅತ್ಯಗತ್ಯ.
ಸುಪ್ರೀಂ ಕೋರ್ಟ್ ಕೂಡಾ ಇದನ್ನು ಮಾನ್ಯ ಮಾಡಿರುವುದು ಇದೇ ದೃಷ್ಟಿಯಿಂದಲೇ. ಆದರೆ ಇದೇ ಕಾರ್ಯಾಚರಣೆಗಳು ದಿಕ್ಕುತಪ್ಪಿ ಹೊಸ ರೀತಿಯ ಭ್ರಷ್ಟಾಚಾರಕ್ಕೆ ನಾಂದಿ ಹಾಡಿಬಿಟ್ಟರೆ? ಭ್ರಷ್ಟಾಚಾರದ ವಿರುದ್ಧ ಸಮರ ಎಂಬ ಹೆಸರಿನಲ್ಲಿ ದಾಖಲೆಗಳನ್ನು ಸಂಗ್ರಹಿಸಿ ಅದೇ ದಾಖಲೆಗಳನ್ನಿಟ್ಟುಕೊಂಡು ಅದೇ  ಭ್ರಷ್ಟಾಚಾರಿಗಳನ್ನು ಬ್ಲಾಕ್ ಮೇಲ್ ಮಾಡುವ ಮೂಲಕ ಇವರೇ ವಸೂಲಿ ಮಾಡಲು ಶುರುವಿಟ್ಟುಕೊಂಡರೆ? ಟಿವಿ ಚಾನಲ್ಗಳು ರಾತ್ರೋರಾತ್ರಿ ಜನಪ್ರಿಯವಾಗಲು, ಟಿಆರ್ಪಿ ಎಂಬ ಪೈಪೋಟಿಯನ್ನೆದುರಿಸಲು ಪ್ರತಿಷ್ಠಿತರನ್ನು ಗುರಿಯನ್ನಾಗಿಸಿ ಭ್ರಷ್ಟಾಚಾರ ಬಯಲಿಗಿಂತಲೂ ಅವರ ಚಾರಿತ್ರ್ಯಹರಣದತ್ತಲೇ ಗಮನ ಹರಿಸಿಬಿಟ್ಟರೆ?
ರಾಜಕೀಯ ಪಕ್ಷಗಳು, ರಾಜಕಾರಣಿಗಳು ತಮ್ಮ ಎದುರಾಳಿಗಳನ್ನು ಮಣಿಸಲು ಇಂಥ ಕಾರ್ಯಾಚರಣೆ ಮಾಡುವಂಥವರನ್ನು ಉಪಯೋಗಿಸಿಕೊಂಡರೆ? ವೈಯಕ್ತಿಕ ಸೇಡು ಹಾಗೂ ಕ್ಲೀಷೆಗಳಿಗೆ ಇದು ಪ್ರಮುಖ ಅಸ್ತ್ರವಾಗಿಬಿಟ್ಟರೆ? ಈ ರೀತಿಯ ಅನುಮಾನಗಳು ಇಂದು ಕಾಡತೊಡಗಿದೆ.
ಇಂಥ ಸಂದೇಹಗಳನ್ನು ಅಸಂಬದ್ಧ ಎಂದು ಸಾರಾಸಗಟಾಗಿ ತಳ್ಳಿಹಾಕುವಂತಿಲ್ಲ. ಈಗಾಗಲೇ ಜಿಂದಾಲ್ ಗ್ರೂಪ್ನವರು ನಡೆಸಿದ ಇಂಥದೇ ಕಾರ್ಯಾಚರಣೆಯಿಂದ ಜೀ ವಾಹಿನಿಯ ಸಂಪಾದಕ ವರ್ಗ ಸಿಕ್ಕಿಹಾಕಿಕೊಂಡಿತ್ತು. ಜಿಂದಾಲ್ ಗ್ರೂಪ್ ಕಲ್ಲಿದ್ದಲು ಹಗರಣದಲ್ಲಿ ಭಾಗಿಯಾಗಿರುವುದರ ಬಗ್ಗೆ ಸ್ಟಿಂಗ್ ಮಾಡಿ ಮಾಹಿತಿ ಸಂಗ್ರಹಿಸಿದ ಜೀ ವಾಹಿನಿಯ ಸಂಪಾದಕರಿಬ್ಬರು ಅದನ್ನು ಪ್ರಸಾರ ಮಾಡದೇ ಇರುವುದಕ್ಕಾಗಿ ನೂರು ಕೋಟಿ ರುಪಾಯಿ ಬೇಡಿಕೆ ಇಟ್ಟರೆಂಬ ಪ್ರಸಂಗವನ್ನು ತಾನು ಸ್ಟಿಂಗ್ ಮಾಡಿರುವುದಾಗಿ ಹೇಳಿಕೊಂಡ ಜಿಂದಾಲ್ ಆಡಳಿತ ಮಂಡಳಿ ಆ ವಾಹಿನಿಯ ಇಬ್ಬರು ಸಂಪಾದಕರ ಬಂಧನಕ್ಕೂ ಕಾರಣವಾಗಿದೆ.
ರಹಸ್ಯ ಕಾರ್ಯಾಚರಣೆಗಳಿಂದ ಇನ್ನೊಬ್ಬರ ದೂರ್ತತನವನ್ನು ಬಯಲಿಗೆಳೆಯುವ ವ್ಯಕ್ತಿಗಳಲ್ಲಿ, ಕೆಲವರು, ತಾವೆಷ್ಟು ದೂರ್ತರಾಗಿರುತ್ತಾರೆ ಎಂಬುದನ್ನು ಸ್ಟಿಂಗ್ ಆಪರೇಷನ್ ಪಿತಾಮಹ ತರುಣ್ ತೇಜ್ಪಾಲ್ ಜೈಲುಪಾಲಾಗುವ ಮೂಲಕ ನಿರೂಪಿಸಿದ್ದಾರೆ.
ಇನ್ನು ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತವನ್ನು ವಿಶ್ವಚಾಂಪಿಯನ್ ಪಟ್ಟಕ್ಕೇರಿಸಿ ದೇಶಕ್ಕೆ ಪ್ರತಿಷ್ಠೆ  ತಂದುಕೊಟ್ಟ ರಾಷ್ಟ್ರಪ್ರೇಮಿ ಕಪಿಲ್ದೇವ್ ಅಂಥವರನ್ನು ಹಾಗೂ ದೇಶದ ಗಡಿಕಾಯುವ ಸೈನಿಕರ ಕಷ್ಟ ಅರಿಯಲು ಮೈನಸ್ ಡಿಗ್ರಿ ಹವಾಮಾನದ ಸಿಯಾಚಿನ್ ಗ್ಲೇಷಿಯರ್ಗೆ ಭೇಟಿಕೊಟ್ಟು ಸೈನಿಕರೊಂದಿಗೆ ಅಲ್ಲಿ ರಾತ್ರಿಗಳನ್ನು ಕಳೆದ ಮೊದಲ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ರಂಥ ಅಪ್ಪಟ ದೇಶಪ್ರೇಮಿಯನ್ನು ಇಂಥಾ ಸ್ಟಿಂಗ್ಗಳು ಹೇಗೆಲ್ಲ ಚಿತ್ರಿಸಿದವು? ಇನ್ನು ನರೇಂದ್ರಮೋದಿಯವರ ಚಾರಿತ್ರ್ಯಹರಣಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಭಯೋತ್ಪಾದನಾ ಸಂಘಟನೆ ಎನ್ನಿಸಲು ಹೇಗೆಲ್ಲ ರಹಸ್ಯ ಕಾರ್ಯಾಚರಣೆಗಳು ನಡೆಯುತ್ತಿವೆ ಎಂಬುದನ್ನು ಗಮನಿಸಿದಾಗ ಇಂಥ ಸ್ಟಿಂಗ್ಗಳಲ್ಲಿ ದೇಶದ ಹಿತಾಸಕ್ತಿ ಇರಬೇಕೆಂದೇನಿಲ್ಲ. ಸ್ವಹಿತಾಸಕ್ತಿಗಳೂ ಅಡಗಿರಬಹುದು ಎಂಬುದನ್ನು ಸಾರಿ ಹೇಳುತ್ತವೆ.
ಈಗ ನಡೆಯುತ್ತಿರುವ ಬಹುತೇಕ ಕುಟುಕು ಕಾರ್ಯಾಚರಣೆಗಳ ಬಹುದೊಡ್ಡ ಲೋಪವೆಂದರೆ ಮೂರನೇ ವ್ಯಕ್ತಿಗಳ ಹೇಳಿಕೆ ಆಧರಿಸಿ ಒಬ್ಬ ವ್ಯಕ್ತಿಗೆ ಭ್ರಷ್ಟ ಎಂಬ ಹಣೆಪಟ್ಟಿ ಕಟ್ಟಿ ಆತನ ಚಾರಿತ್ರ್ಯ ಹರಣ ಮಾಡುವುದು. ಮೇಲೆ ಹೇಳಿರುವ ಕಪಿಲ್, ಫರ್ನಾಂಡಿಸ್, ಮೋದಿ, ಆರೆಸ್ಸೆಸ್ ಘಟನೆಗಳೇ ಇದಕ್ಕೆ ಉದಾಹರಣೆ. ಮಾಧ್ಯಮಗಳು ಇವರ್ಯಾರನ್ನೂ ನೇರವಾಗಿ ಸ್ಟಿಂಗ್ ಮಾಡಿಲ್ಲ. ಮೂರನೆಯವರಿಂದ ದೋಷಿಗಳಾಗಿ ಬಿಂಬಿಸಿವೆ.
ಇನ್ನೊಂದು ದೊಡ್ಡ ಲೋಪವೆಂದರೆ ಕಪೋಲಕಲ್ಪಿತ ವ್ಯವಹಾರದ ಮೇಲೆ ಒಬ್ಬ ವ್ಯಕ್ತಿಯನ್ನು ಲಂಚಕೋರ ಅಥವ ಭ್ರಷ್ಟಾಚಾರಿ ಎಂದು ತೀರ್ಮಾನಿಸುವುದು. ಒಂದು ಕೃತಕ ಸನ್ನಿವೇಶ ಸೃಷ್ಟಿಸಿ ತಾವು ಗುರಿಯಾಗಿಸಿಕೊಂಡಿರುವ ವ್ಯಕ್ತಿ ಲಂಚ ಸ್ವೀಕಾರ ಮಾಡುತ್ತಾನೋ ಇಲ್ಲವೋ ಎಂದು ಪರೀಕ್ಷಿಸುವುದಾಗಿರುತ್ತದೆ. ಆತ ಹಣ ಸ್ವೀಕಾರ ಮಾಡಿದನೆಂದರೆ ಮುಗಿಯಿತು. ಅವನು ಎಲ್ಲ ವ್ಯವಹಾರಗಳಲ್ಲೂ ಹೀಗೇ ಹಣ ಪಡೆಯುತ್ತಾನೆ ಎಂದೇ ತೀರ್ಮಾನಿಸಲಾಗುತ್ತದೆ. ಒಬ್ಬ ವ್ಯಕ್ತಿಯ ಒಂದು ಘಳಿಗೆಯ ನಡವಳಿಕೆಯಿಂದ ಅವನ ಇಡೀ ಜೀವಮಾನದ ಕ್ಯಾರೆಕ್ಟರ್ ಸರ್ಟಿಫಿಕೆಟ್ ನೀಡಲಾದೀತೇ?
ಇನ್ನು ಸ್ಟಿಂಗ್ ಮಾಡುವವರ ಉದ್ದೇಶವೇ ಅವನನ್ನು ಸಿಕ್ಕಿಸುವುದಾಗಿಬಿಟ್ಟರೆ, ಇವರು ಏನು ಹೇಳುತ್ತಾರೋ, ಅವನು ಯಾವ ಕಾರಣಕ್ಕೆ ಆ ಹಣವನ್ನು ಕೈಯ್ಯಲ್ಲಿ ಮುಟ್ಟುತ್ತಾನೋ ಒಟ್ಟಿನಲ್ಲಿ ಅವನು ಹಣ ತೆಗೆದುಕೊಳ್ಳುವುದು ರಹಸ್ಯ ಕ್ಯಾಮರಾದಲ್ಲಂತೂ ಸೆರೆಯಾಗಿಬಿಡುತ್ತದೆ. ಮಿಕ್ಕ ಕಾಮೆಂಟರಿಯೆಲ್ಲಾ ಇವರ ಮರ್ಜಿಗೆ ತಕ್ಕಂತೆ. ದಿನವೆಲ್ಲ ಅದೇ ಸುದ್ದಿ, ಅದರ ಮೇಲೆಯೇ ಚರ್ಚೆ. ಕೆಲವೊಮ್ಮೆ ಬಂಗಾರು ಲಕ್ಷ್ಮಣ್ ಥರ ಜೈಲುಪಾಲಾಗುವ ಸಂಭವವೂ ಇದೆ. ನಂತರ ಅದು ನ್ಯಾಯಾಲಯದ ಮೆಟ್ಟಿಲೇರಿ ಅವನು ದೋಷಮುಕ್ತನಾಗುವ ಹೊತ್ತಿಗೆ ಅವನ ಅರ್ಧ ಆಯಸ್ಸು ಕಳೆದಿರುತ್ತದೆ. ಜನರ ದೃಷ್ಟಿಯಲ್ಲಿ ಆತ ಭ್ರಷ್ಟನಾಗಿರುತ್ತಾನೆ. ಆತ ಅಲ್ಲಿವರೆಗೆ ಮಾಡಿದ ಸಾಧನೆ, ಸಂಪಾದಿಸಿದ ಘನತೆ ಗೌರವ ಮಣ್ಣುಪಾಲಾಗುತ್ತದೆ. ಇವನನ್ನು ವೃಥಾ ಭ್ರಷ್ಟನೆನಿಸಿದ ನಿಜವಾದ ಭ್ರಷ್ಠನ ಗುರಿ ಈಡೇರಿಬಿಟ್ಟಿರುತ್ತದೆ.
ಒಂದು ಸಮಯ ಇವರು ನೀಡಿದ ಹಣವನ್ನು ಆತ ಗೊತ್ತಿದ್ದೋ ಗೊತ್ತಿಲ್ಲದೆಯೋ ಸ್ವೀಕರಿಸದೆ ನೀವು ಹಣ ಕೊಡುವ ಅಗತ್ಯವೇನಿಲ್ಲ. ನಿಮ್ಮ ಕೆಲಸವನ್ನು ಹಾಗೇ ಮಾಡಿಕೊಡುತ್ತೇನೆ. ಅದು ನನ್ನ ಕರ್ತವ್ಯ ಎಂದು ಹೇಳುತ್ತಾನೆ ಎಂದಿಟ್ಟುಕೊಳ್ಳೋಣ, ಅದು ಕ್ಯಾಮರಾದಲ್ಲಿ ಸೆರೆಯಾದರೂ, ಅದನ್ನು ಚಾನಲ್ಗಳಲ್ಲಿ ತೋರಿಸಿ ಈ ಕಾಲದಲ್ಲೂ ಒಬ್ಬ ಸಚ್ಚ್ಯಾರಿತ್ರದ ರಾಜಕಾರಣಿಯಿದ್ದಾನೆಂದು ಮಾತ್ರ ಬಿತ್ತರಿಸುವುದಿಲ್ಲ. ಬದಲಾಗಿ ತಾವು ಸ್ಟಿಂಗ್ ಮಾಡುತ್ತಿರುವ ವಿಷಯ ಹೇಗೋ ಗೊತ್ತಾಗಿಹೋಗಿದೆ, ಅದಕ್ಕೇ ನಾಟಕ ಆಡುತ್ತಿದ್ದಾನೆ ಎಂದೇ ಪ್ರಚಾರ ಮಾಡಲಾಗುತ್ತದೆ. ಇಲ್ಲೇ ಇವರ ನಿಜವಾದ ಉದ್ದೇಶ ಬಹಿರಂಗವಾಗುವುದು.
ಇನ್ನು ತಮಗೆ ಸಿಕ್ಕ ಮಾಹಿತಿಗಳನ್ನು ಪ್ರಸಾರ ಮಾಡುವುದರಲ್ಲಿಯೂ ಮಾಧ್ಯಮಗಳು ಹೇಗೆ ಸೆಲೆಕ್ಟಿವ್ ಆಗಿರುತ್ತದೆ ಎಂಬುದಕ್ಕೆ ಯುಪಿಎ ಸರ್ಕಾರದ ವಿಶ್ವಾಸಮತಯಾಚನೆಯ ಸಂದರ್ಭದಲ್ಲಿ ನಡೆದ ಓಟಿಗಾಗಿ ನೋಟು ಪ್ರಕರಣವೇ ಸಾಕ್ಷಿ. ಸರ್ಕಾರದ ಪರವಾಗಿ ಮತ ಚಲಾಯಿಸಲು ಸರ್ಕಾರದ ಏಜೆಂಟರೊಬ್ಬರು ತಮಗೆ ಲಂಚ ಕೊಡಲು ಬರುತ್ತಿದ್ದಾರೆ, ಅದನ್ನು ಸ್ಟಿಂಗ್ ಮಾಡಬನ್ನಿ ಎಂದು ಸಂಸತ್ತಿನ ಕೆಲ ಬಿಜೆಪಿ ಸದಸ್ಯರು ಒಂದು ಜನಪ್ರಿಯ ಚಾನಲ್ನವರಿಗೆ ಸುದ್ದಿ ಮುಟ್ಟಿಸುತ್ತಾರೆ. ಅದರಂತೆ ಅವರೂ ಬಂದು ಆ ಸದಸ್ಯರ ಮನೆಯಲ್ಲಿ ರಹಸ್ಯ ಕ್ಯಾಮರಾಗಳನ್ನು ಅಳವಡಿಸುತ್ತಾರೆ. ಲಂಚ ಕೊಡುವ-ತೆಗೆದುಕೊಳ್ಳುವ ಪ್ರಕ್ರಿಯೆ ಚಿತ್ರಿತವೂ ಆಗುತ್ತದೆ. ಸದನದಲ್ಲಿ ವಿಶ್ವಾಸಮತದ ಮೇಲಿನ ಚರ್ಚೆ ಆರಂಭವಾಗುವ ಮುನ್ನವೇ ಈ ವಿಷಯ ದೇಶದಾದ್ಯಂತ ಸ್ಫೋಟಗೊಳ್ಳಲಿದೆ ಎಂದೇ ಬಿಜೆಪಿ ಸದಸ್ಯರು ಭಾವಿಸಿರುತ್ತಾರೆ. ಆದರೆ ಅದು ಪ್ರಸಾರವಾಗುವುದೇ ಇಲ್ಲ. ಚಾನಲ್ನವರು ಚಿತ್ರಣ ಮಾಡಿದ ಆ ಟೇಪನ್ನು ಸ್ಪೀಕರ್ ಅವರ ಸುಪರ್ದಿಗೆ ಒಪ್ಪಿಸಿಬಿಡುತ್ತಾರೆ. ಕಡೆಗೆ ಅವರೇ ನೋಟುಗಳನ್ನು ಸದನಕ್ಕೇ ಕೊಂಡೊಯ್ದು ಪ್ರದರ್ಶಿಸಬೇಕಾಗುತ್ತದೆ. ಆಮೇಲೆ ಅದು ಸುದ್ದಿಯಾಗುತ್ತದೆ. ಅಲ್ಲಿಯವರೆಗೂ ಯಾವುದೇ ಸ್ಟಿಂಗಿನ ವಿಶ್ವಾಸಾರ್ಹತೆಯನ್ನೂ ಪ್ರಶ್ನಿಸದೆ ಸಾರಾಸಗಟಾಗಿ ಪ್ರಸಾರ ಮಾಡುತ್ತಿದ್ದ ಆ ಚಾನಲ್ ಅಂದು ಮಾತ್ರ ಆ ನೀತಿ ಏಕೆ ಅನುಸರಿಸಿತು ಎಂಬುದೇ ಯಕ್ಷಪ್ರಶ್ನೆ.
ತನಿಖಾ ಪತ್ರಿಕೋದ್ಯಮ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಕುಟುಕನ್ನು ನಿಯಂತ್ರಿಸದೆ, ಸಾರಾಸಗಟಾಗಿ ಮಾನ್ಯತೆ ನೀಡುವುದು ವ್ಯವಸ್ಥೆಯ ಲೋಪವಾದೀತು. ಹಾಗಾಗಿ ಈ ರೀತಿಯ ಸ್ಟಿಂಗ್ ಕಾರ್ಯಾಚರಣೆ ನಡೆಸುವವರಿಗೆ ರೀತಿನೀತಿಗಳನ್ನು, ಶಿಸ್ತು ಸಂಯಮಗಳನ್ನು ರೂಪಿಸುವುದು ಇಂದಿನ ಅಗತ್ಯ.

- ಫಣಿ ರಾಮಚಂದ್ರ
paniramachandra.hs@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.