ನಿಯಮಗಳಿರುವುದೇ ಮುರಿಯಲಿಕ್ಕೆ...

ಈಗ ನಡೆಯುತ್ತಿರುವ ಲೋಕಸಭೆ ಚುನಾವಣೆ ಯಾವ ದೃಷ್ಟಿಯಿಂದ ನೋಡಿದರೂ ಒಂದು...
Updated on: 

ಈಗ ನಡೆಯುತ್ತಿರುವ ಲೋಕಸಭೆ ಚುನಾವಣೆ ಯಾವ ದೃಷ್ಟಿಯಿಂದ ನೋಡಿದರೂ ಒಂದು ವಿಶಿಷ್ಟ ಚುನಾವಣೆಯೇ. ಈ ಚುನಾವಣೆಯ ಅನಂತರ ರಾಷ್ಟ್ರೀಯ ರಾಜಕಾರಣದಲ್ಲಿ ಕಂಡುಬರಬಹುದಾದ ಬದಲಾವಣೆ, ಅದರ ಹಿಂದೆಯೇ ರಾಜ್ಯದಲ್ಲಿನ ಪಕ್ಷಗಳ ಸ್ವರೂಪದಲ್ಲಿ ಆಗಬಹುದಾದ ಪಲ್ಲಟಗಳನ್ನು ಈಗಲೇ ಚಿತ್ರಿಸಿಕೊಳ್ಳುವುದು ಕಡುಕಷ್ಟ.
ಚುನಾವಣೆಯಲ್ಲಿ ಪ್ರಮುಖ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯ ಪ್ರಕ್ರಿಯೆಯನ್ನು ನಿರ್ವಹಿಸುತ್ತಿರುವ ರೀತಿ-ನೀತಿ ವಿಧಾನಗಳನ್ನು, ಅದಕ್ಕೆ ಪ್ರಕಟವಾಗುತ್ತಿರುವ ಪ್ರತಿಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಚುನಾವಣೆಯ ಅನಂತರ, ಫಲಿತಾಂಶ ಏನಾದರೂ ಆಗಲಿ ರಾಜಕೀಯದಲ್ಲಿನ ಆಟಗಾರರ ವಯಸ್ಸು, ವೇಷಭೂಷಣ ಚಿಂತನೆ ಹಾಗೂ ತಂತ್ರಗಾರಿಕೆ, ಈಗಿನ ಸ್ವರೂಪದಲ್ಲಿ ಇರುವುದೇ ಇಲ್ಲ ಎನ್ನುವುದಂತೂ ಸ್ಪಷ್ಟ.
ದಶಕಗಳಿಂದಲೂ ಸಂಖ್ಯಾಬಲದ ದೃಷ್ಟಿಯಿಂದ ಅಲ್ಲದಿದ್ದರೂ ವಿಭಿನ್ನ ಚಿಂತನೆ, ಕಾರ್ಯಕ್ರಮಗಳ ಮೂಲಕ ರಾಜಕೀಯ ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತಿದ್ದ ವ್ಯಕ್ತಿಗಳು-ಶಕ್ತಿಗಳು ಕಣ್ಮರೆಯಾಗುವ ಲಕ್ಷಣಗಳು ಕಂಡುಬರುತ್ತಿವೆ. ಅದೇನೂ ದೊಡ್ಡ ವಿಷಯವಲ್ಲ. ನಿಸರ್ಗದ ನಿಯಮ ಅದು. ಆದರೆ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಅಸ್ತಿತ್ವದ ಪ್ರತಿಪಾದನೆಗೆ ರಚಿಸಿಕೊಂಡ ಸಂಘಟನೆಯ ಅಂಗಗಳನ್ನು, ಕೈ ಬೆರಳ ಎಣಿಕೆಗೇ ಸಿಗುವಷ್ಟು ನಾಯಕರ ಕೂಟಗಳು ನಿಯಂತ್ರಿಸುವ ಸ್ಥಿತಿಯನ್ನು ಮುಟ್ಟಿರುವಾಗ, ಪಕ್ಷದ ಎಲ್ಲ ನೀತಿ ನಿಯಮಗಳನ್ನೂ ರಾಜಕೀಯ ಅನುಕೂಲತೆಯ ದೃಷ್ಟಿಯಿಂದ ಮೀರುವುದು ಈಗಲೂ ಸಾಧ್ಯವಾಗುತ್ತಿದೆ. ಹಾಗಿದ್ರೆ? ಪಕ್ಷದ ಸಮಿತಿಗಳೇಕಿರಬೇಕು?
  ದೇಶದ ಪ್ರಧಾನ ಪಕ್ಷಗಳಾದ ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಾರ್ಟಿಗಳಲ್ಲಿ ನವನಾಯಕತ್ವದ ಅಧಿಕಾರದ ಯುಗ ಆರಂಭವಾಗಿರುವುದು ಸ್ಪಷ್ಟವಾಗಿ ಗೋಚರವಾಗಿದೆ. ಕಾಂಗ್ರೆಸ್ಸಿನಲ್ಲಿ ನೆಹರೂ ಮನೆತನದ ತಲೆಮಾರಿನ ರಾಹುಲ ಗಾಂಧಿ ಅವರು ಬಹಿರಂಗ ರ್ಯಾಲಿಗಳಲ್ಲಿ ಏನನ್ನಾದರೂ ಹೇಳಿಕೊಳ್ಳಲಿ ಅಂತರಂಗದಲ್ಲಿ ಅವರೇ ಆರಿಸಿಕೊಂಡಿರುವ ವ್ಯಕ್ತಿಗಳ ಮೂಲಕ ತಮ್ಮ ಅಧಿಕಾರವನ್ನು ಚಲಾಯಿಸುವುದನ್ನು ಆರಂಭಿಸಿದ್ದಾರೆ.
ಈಗಾಗಲೇ ಪಕ್ಷದ ಹಲವು ನಾಯಕರಿಗೆ ಈ ಹೊಸ ಸಂಪ್ರದಾಯದ ಆಚರಣೆಯ ಬಿಸಿ ಮುಟ್ಟಿರುವಂತಿದೆ. ಇತ್ತೀಚಿನ ದಿನಗಳಲ್ಲಿ ಮಾತಿನಲ್ಲಿ ರಾಹುಲ್ ಅವರ ಜನಹಿತದ ಆಸಕ್ತಿ ಕೆಲವು ಸಂದರ್ಭಗಳಲ್ಲಿ ಪ್ರಕಟವಾದರೂ, ಅವರ ನಿಜವಾದ ಆಸಕ್ತಿಗಳು ಪ್ರಕಟವಾಗುತ್ತಿರುವುದು ಸರ್ಕಾರದಲ್ಲಿ ಯಾವುದೇ ಅಧಿಕಾರಸ್ಥ ಸ್ಥಾನ-ಮಾನ ಇಲ್ಲದೇ ಹೋದರೂ ಅವರ ನಿರ್ಧಾರಗಳನ್ನು ಹೇರುತ್ತಿರುವುದರ ಮೂಲಕ ಈ ನಿರ್ಧಾರಗಳ ಹೊರೆಯನ್ನು ಮುಂದೆ ಜನರೇ ಹೊರಬೇಕು.
ಕಾಂಗ್ರೆಸ್ಸಿನಲ್ಲಿ ಈಗ ಅನೇಕರು ರಾಹುಲಗಾಂಧಿ ಅವರ ತಂತ್ರಗಳು, ಮಾತು ಜನರನ್ನು ಮುಟ್ಟುತ್ತಿಲ್ಲ. ಸೋನಿಯಾ ಗಾಂಧಿ ಅವರೇ ರ್ಯಾಲಿಗಳನ್ನು ನಡೆಸಬೇಕೆಂದು ಗೊಣಗುವ ಸ್ಥಿತಿಯನ್ನು ತಲುಪಿದ್ದಾರೆ. ಅದು ಚುನಾವಣೆ ಪ್ರಚಾರ ಸಮರದ ಕಾಲದಲ್ಲಿ ಗೋಚರವಾಗಬಹುದು. ಜನಾರ್ದನ ದ್ವಿವೇದಿ. ಅಹಮದ್ ಪಟೇಲ್, ಅಂಬಿಕಾ ಸೋನಿ ಅವರಂತಹವರ ಕಾಲ ಮುಗಿಯಿತೇನೋ ಎನ್ನುವ ಅನುಮಾನ ಮೂಡುತ್ತಿದೆ.
ಕಾಂಗ್ರೆಸ್ಸಿಗೆ ಈಗ ಹೊಸ ಸಂಗಾತಿ ಪಕ್ಷಗಳು ಬೆಂಬಲ ನೀಡಲು ಮುಂದೆ ಬರುತ್ತಿಲ್ಲ. ಹಳೆಯ ಸಂಯುಕ್ತ ಪ್ರಗತಿಪರ ಕೂಟ ತನ್ನ ಅಸ್ತಿತ್ವವನ್ನೇ ಕಳೆದು ಕೊಂಡಿರುವಂತಿದೆ. ಸದ್ಯದಲ್ಲಿ ಕಾಂಗ್ರೆಸ್ಸಿನಲ್ಲಿ ಎಷ್ಟೇ ಅತೃಪ್ತಿ ಇದ್ದರೂ ಬಂಡಾಯದ ಅಪಾಯವಿಲ್ಲ. ಬಂಡಾಯಕ್ಕೂ ಪರಾಕ್ರಮ ಬೇಕು. ಪರಾಕ್ರಮಿಗಳು ಈಗ ಕಾಂಗ್ರೆಸ್ಸಿನಲ್ಲಿ ಇಲ್ಲ.
ವಾಜಪೇಯಿ ಇನ್ನೂ ಇದ್ದಾರೆ: ಭಾರತೀಯ ಜನತಾ ಪಾರ್ಟಿಯಲ್ಲಿ ನಡೆದಿರುವ ಘಟನೆಗಳನ್ನು ಗಮನಿಸಿದರೆ ಪಕ್ಷದ ಶೃಂಗ ಮಟ್ಟದಲ್ಲೇ ಬದಲಾವಣೆಗಳಾಗಿರುವುದು ಸ್ಪಷ್ಟವಾಗಿ ಪ್ರಕಟವಾಗಿದೆ. ಈಗಾಗಲೇ ಹಲವಾರು ಬಾರಿ ಪ್ರಸ್ತಾಪಿಸಿರುವಂತೆ, ವಾಜಪೇಯಿ ಹಾಸಿಗೆ ಹಿಡಿದ ಅನಂತರ, ಹಿಂದಿನ ನಂಬರ್ ಟೂ ನಾಯಕ ಆಡ್ವಾಣಿ ಅವರ ಪ್ರತಿಷ್ಠೆ ಕುಗ್ಗಿರುವುದು ನಿಜ. ಅದರ ಜತೆಯಲ್ಲೇ ವಾಚಾಳಿತನಕ್ಕೆ ಹೆಸರುವಾಸಿಯಾದ ಸುಷ್ಮಾ ಸ್ವರಾಜ್ ಅವರ ವಿಜೃಂಭಣೆಯೂ ಮುಗಿದಂತೆಯೇ. ಅವರ ಸಂಗಡಿಗರೆಲ್ಲರೂ ಮೂಲೆ ಗುಂಪಾಗುವ ಕಾಲ ಬಹುದೂರವಿಲ್ಲ. ನರೇಂದ್ರ ಮೋದಿ, ರಾಜನಾಥ್‌ಸಿಂಗ್, ಅರುಣ್ ಜೇಟ್ಲಿ ಅವರೇ ಈಗ ಮೊದಲ ಮೂರು ಸ್ಥಾನಗಳಲ್ಲಿರುವುದು. ಆ ಸ್ಥಾನವನ್ನು ಬಿಟ್ಟುಕೊಡಲು ಅವರಲ್ಲಿ ಯಾರೂ ಸಿದ್ಧರಿಲ್ಲ, ಮುಂದೆ ಚುನಾವಣೆಯ ಅನಂತರವೂ ಸಿದ್ಧರಾಗುವಂತಿಲ್ಲ.
ನರೇಂದ್ರಮೋದಿ ಅವರೇನೋ ಗುಜರಾತ್ ರಾಜ್ಯದಲ್ಲಿ ಭದ್ರವಾದ ಹಿಡಿತವನ್ನು ಸ್ಥಾಪಿಸಿರಬಹುದು. ಆದರೆ ರಾಜನಾಥಸಿಂಗ್ ಅವರಿಗೆ ಅವರ ಸ್ವಂತ ರಾಜ್ಯದಲ್ಲಿ ಹೇಳಿಕೊಳ್ಳುವಂತಹ ವೈಯಕ್ತಿಕ ರಾಜಕೀಯ ಶಕ್ತಿ ಇಲ್ಲ. ಅದಕ್ಕೇ ಚುನಾವಣೆಯ ಕ್ಷೇತ್ರವನ್ನು ಬದಲಾಯಿಸಿರುವುದು. ಅರುಣ್‌ಜೈಟ್ಲಿ ಅವರ ಮನೆತನದ ಮೂಲ ಬೇರುಗಳು ಪಂಜಾಬಿನಲ್ಲಿದ್ದರೂ ಕಾಲೇಜು ದಿನಗಳಿಂದಲೂ ಅವರು ದುಡಿದಿದ್ದು, ದೆಹಲಿಯಲ್ಲೇ. ಅದೂ  ಭಾಷಣಕಾರರಾಗಿ, ವಕೀಲರಾಗಿ. ಹೊಸ ಬಿಜೆಪಿ ತ್ರಿಮೂರ್ತಿಗಳು ಯುವಕರೇನೂ ಅಲ್ಲ. ಹೊಸ ಬಗೆಯ ರಾಷ್ಟ್ರೀಯತೆಯ ಚಿಂತನೆ ಕಂಡುಬಂದಿಲ್ಲ. ಆದರೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬೆಂಬಲದಿಂದಲೇ ಅವರ ನಾಯಕತ್ವ ಉಳಿಯಬೇಕು. ಬಿಜೆಪಿ ಪ್ರಬಲವಾಗಿರುವ ರಾಜ್ಯಗಳಲ್ಲಿ (ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡ) ಅಲ್ಲಿನ ಪ್ರಾದೇಶಿಕ ನಾಯಕರೇ ನಿರ್ಣಾಯಕವಾದ ನಿರ್ಧಾರಗಳನ್ನು ಪ್ರಕಟಿಸಿರುವುದು. ಜಸವಂತಸಿಂಗ್‌ಅವರಿಗೆ ರಾಜಸ್ಥಾನದಲ್ಲಿ ಸ್ಪರ್ಧಿಸಲು ಅವರು ಕೇಳಿದ ಕ್ಷೇತ್ರ ಸಿಗದಿರಲು ಅದೇ ಕಾರಣ. ಸದ್ಯದಲ್ಲಿ ಎಲ್ಲರೂ ನರೇಂದ್ರ ಮೋದಿ ಅವರಿಂದ ಆಕರ್ಷಿತರಾದಂತೆ ಕಂಡುಬಂದರೂ, ಆಕರ್ಷಣೆಗೆ ಇರುವ ಆಧಾರ ಎಷ್ಟು ಗಟ್ಟಿ ಎನ್ನುವುದು ಯಾರ ಅಳತೆಗೂ ಸಿಗುವಂತಿಲ್ಲ.
ಈಚಿನ ದಿನಗಳಲ್ಲಿ ಪ್ರಕಟವಾಗುತ್ತಿರುವ ಕೆಲವು ಹೇಳಿಕೆಗಳನ್ನು ಗಮನಿಸಿದರೆ, ಕಾಂಗ್ರೆಸ್ಸಿಗೂ, ಬಿಜೆಪಿಗೂ ಭ್ರಷ್ಟಾಚಾರ, ಜಾತೀಯತೆಗಳಿಗೆ ಸಂಬಂಧಿಸಿದಂತೆ, ವಿಚಾರದಲ್ಲಿ-ಆಚಾರದಲ್ಲಿ ಹೆಚ್ಚಿನ  ವ್ಯತ್ಯಾಸಗಳು ಕಾಣಿಸುತ್ತಿಲ್ಲ.
ಆದರೆ ಎರಡೂ ಪಕ್ಷಗಳಲ್ಲಿ ಅದನ್ನು ಒಪ್ಪುವವರ ಸಂಖ್ಯೆ ಕಡಿಮೆ. ಈಗ ನಡೆದಿರುವ ಪಕ್ಷಾಂತರ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಅಂಶ ಸ್ಪಷ್ಟವಾಗುತ್ತಿದೆ. ಚುನಾವಣೆಯ ಸಮಯದಲ್ಲಿ ಯಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಹುದು, ಯಾರನ್ನು ದೂರವಿಡಬೇಕು ಎನ್ನುವ ಯೋಚನೆಯೇ ಪಕ್ಷದ ನಾಯಕರಿಗೆ ಇದ್ದಂತಿಲ್ಲ. ಚುನಾವಣೆಯ ಅನಂತರ? ಯಾರು ಎಲ್ಲಿದ್ದರೇನಂತೆ? ಸಂಸದರು, ಶಾಸಕರು, ಪಕ್ಷಾಂತರ ನಿಷೇಧ ಕಾಯಿದೆಯ ವ್ಯಾಪ್ತಿಯನ್ನು ಒಪ್ಪಲೇಬೇಕು ಇತರರು ಎಲ್ಲಿದ್ದರೂ ಒಂದೇ.
ಕರ್ನಾಟಕದ ಕತೆ: ಕರ್ನಾಟಕ ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ, ನಾಮಪತ್ರಗಳ ಸಲ್ಲಿಕೆಯ ಪ್ರಕ್ರಿಯೆ ಬುಧವಾರಕ್ಕೇ ಮುಗಿಯಿತು. ಮುಂದೆ ಈ ಸಂಬಂಧದ ರಾಜಕೀಯ ತಂತ್ರಗಾರಿಕೆಗೆ ಅವಕಾಶ ನಾಮಪತ್ರಗಳನ್ನು ಹಿಂದಕ್ಕೆ ಪಡೆಯುವ ಹಂತದಲ್ಲೂ ಇದೆ. ಇದನ್ನು ಮೀರಿದರೆ ಮುಕ್ತ ಹೇಳಿಕೆಗಳ ಮೂಲಕ ಅಭ್ಯರ್ಥಿಗಳು ನಿವೃತ್ತರಾಗಲೂಬಹುದು.
  ಕಾಂಗ್ರೆಸ್-ಬಿಜೆಪಿಗಳಲ್ಲಿ ಕೆಲವರ ಉಗ್ರ ಹೇಳಿಕೆಗಳ ಮೂಲಕ ಬಂಡಾಯದ ಬಿರುಗಾಳಿಯನ್ನು ಮೂಡಿಸುವ ಪ್ರಯತ್ನಗಳು ನಡೆದಿದ್ದರೆ, ಅದನ್ನು ಚುನಾವಣೆಯ ನಿರ್ವಹಣೆಯ ತಂತ್ರಗಳನ್ನು ಬಲ್ಲವರು ಮಾಡಬೇಕಾದ್ದನ್ನೆಲ್ಲ ಮಾಡಿ ನಿಭಾಯಿಸಿದ್ದಾರೆ. ಚುನಾವಣೆಗಳ ಪ್ರಕ್ರಿಯೆಯನ್ನು ಹೊರಗಿನಿಂದ ನೋಡಿದ್ದವರಿಗೂ ಇದೇನೂ ಹೊಸದಲ್ಲ ಎನಿಸಿತ್ತು.   ನಿಜ. ಈಗಲೂ ಕೆಲವು ಕಡೆಗಳಲ್ಲಿ ತಮ್ಮ ಪಕ್ಷಗಳ ಟಿಕೆಟ್ ಪಡೆಯುವುದರಲ್ಲಿ ವಿಫಲರಾದವರು ತಮ್ಮ ರಾಜಕೀಯ ಅಸ್ತಿತ್ವದ ಪ್ರದರ್ಶನಕ್ಕಾಗಿ ಕಣದಲ್ಲಿ ಪಕ್ಷೇತರರಾಗಿಯೇ ಉಳಿದಿರಬಹುದು. ಅವರ ಸಂಖ್ಯೆ ಕಡಿಮೆ. ಈಗಿನ ಚಿತ್ರವನ್ನು ಗಮನಿಸಿದರೆ, 28 ಕ್ಷೇತ್ರಗಳಲ್ಲಿ ಎಲ್ಲೂ ಇಂತಹ ಸ್ಪರ್ಧಿಗಳು ಗೆಲ್ಲುವ ಸಂಭವವಿಲ್ಲ. ಅವರ ಸ್ಪರ್ಧೆಗೆ ಮುಖ್ಯವಾಗುವುದು ಅವರು ಯಾರ ಮತಗಳನ್ನು ಕಸಿಯುತ್ತಾರೆ ಎನ್ನುವುದಕ್ಕೆ ಮಾತ್ರ.
ಜಾತ್ಯತೀತ ಜನತಾದಳದ ನಾಯಕರು ಹಾಗೂ ಬೆಂಬಲಿಗರ ಪ್ರಕಾರವೇ ಅವರ ನಿರೀಕ್ಷೆಗಳು ನಿಜವಾಗಿಲ್ಲ. ದೇವೇಗೌಡರ ರಾಷ್ಟ್ರೀಯ ರಾಜಕೀಯ ಚಿಂತನೆ ದೇಶದ ಜನರನ್ನು ತಲುಪಬೇಕಾದರೆ, ಅವರ ಪಕ್ಷ ಕನಿಷ್ಠ ಹತ್ತು ಸ್ಥಾನಗಳಲ್ಲಾದರೂ ಗೆಲ್ಲಬೇಕು. ನಿಷ್ಪಕ್ಷಪಾತ ವಿಶ್ಲೇಷಕರಿಗೆ ಅಂತಹ ಸಂಭವ ಕಂಡುಬರುತ್ತಿಲ್ಲ. ಕೆಲವು ಕ್ಷೇತ್ರಗಳಲ್ಲಿ ಆ ಪಕ್ಷಕ್ಕೆ ನಿಜವಾದ ಅರ್ಥದಲ್ಲಿ ಅಭ್ಯರ್ಥಿಗಳೇ ಇರಲಿಲ್ಲ. ಕಾಂಗ್ರೆಸ್ ಪಕ್ಷದ ಹಿರಿಯ (ಎಂಭತ್ತರ ಗಡಿ) ಸಿ.ಕೆ. ಜಾಫರ್ ಷರೀಫ್ ಅವರಿಗೆ ಅವರು ಕೇಳಿದ್ದ ಸೆಂಟ್ರಲ್ ಬೆಂಗಳೂರು ಕ್ಷೇತ್ರವನ್ನು ನಿರಾಕರಿಸಿದಾಗ, ದೇವೇಗೌಡರ ಪಾಳಯದಲ್ಲಿ ಸ್ವಲ್ಪ ಉತ್ಸಾಹ ಮೂಡಿದ್ದು ನಿಜ. ಜಾಫರ್ ಷರೀಫ್‌ರನ್ನು ಮೈಸೂರಿನಲ್ಲಿ ಅಭ್ಯರ್ಥಿಯನ್ನಾಗಿ ಮಾಡುವುದರ ಮೂಲಕ ತಮ್ಮ ಪಕ್ಷಕ್ಕೆ ಮುಸ್ಲಿಮರ ಬೆಂಬಲವನ್ನು ರಾಜ್ಯದ ಇತರ ಭಾಗಗಳಲ್ಲೂ ಪಡೆಯುವ ಆಸೆ ಜೆಡಿಎಸ್‌ನಲ್ಲಿ ಮೂಡಿತ್ತು.
ಅದೇ ಸಮಯದಲ್ಲೇ ಜಾಫರ್ ಷರೀಫ್‌ರನ್ನು ಹೇಗೆ ಸಮಾಧಾನ ಪಡಿಸಬಹುದೆನ್ನುವುದು ಕಾಂಗ್ರೆಸ್ಸಿನಲ್ಲಿ ಇನ್ನೂ ಉಳಿದಿರುವ ಕೆಲವು ಹಿರಿಯರಿಗೂ ಗೊತ್ತಿತ್ತು. ಈಗ ಜಾಫರ್ ಷರೀಫ್ ಎಂದಿನಂತೆ ತಟಸ್ಥರಾಗಿದ್ದಾರೆ. (ಇನ್ನೇನೂ ಮಾಡಲಿಕ್ಕೆ ಸಾಧ್ಯ?) ಜಾಫರ್ ಷರೀಫ್ ಅವರ ರೀತಿಯಲ್ಲೇ ಶಿವಮೊಗ್ಗದಲ್ಲಿ ಆವುಟ ಮಾಡಿದ್ದ ಮಾಜಿ ಮಂತ್ರಿ ಬಂಗಾರಪ್ಪ ಪುತ್ರ ಕುಮಾರ ಬಂಗಾರಪ್ಪ ಅವರೂ ಕಾಂಗ್ರೆಸ್ ದಾರಿಗೇ ಬಂದಿದ್ದಾರೆ. ಅದೂ ನಿರೀಕ್ಷಿತವೇ. ಕೊನೆಗೂ ದೇವೇಗೌಡರ ಪುತ್ರ, ಮಾಜಿ ಮುಖ್ಯಮಂತ್ರಿ, ಹಾಲಿ ಜಾತ್ಯತೀತ ಜನತಾದಳದ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ, ಚಿಕ್ಕಬಳ್ಳಾಪುರದಲ್ಲಿ ಕೇಂದ್ರ ಮಂತ್ರಿ ವೀರಪ್ಪ ಮೊಯಿಲಿ ವಿರುದ್ಧ ಕಣಕ್ಕಿಳಿದು ಅಲ್ಲಿನ ಚುನಾವಣೆಗೆ ರಂಗೇರಿಸಿದ್ದಾರೆ.
ಕಿಡಿಗೇಡಿತನ: ಚುನಾವಣೆಗೆ ಮುನ್ನ, ಕಾಂಗ್ರೆಸ್-ಬಿಜೆಪಿಗಳೆರಡೂ ಕಳಂಕಿತರಿಗೆ ಟಿಕೆಟ್ ಇಲ್ಲ ಎನ್ನುವ ಮಾತನ್ನಾಡಿದ್ದವು. ಈಗಿನ ಸ್ಥಿತಿಯನ್ನು ಗಮನಿಸಿದರೆ, "ಕಳಂಕಿತರು" ಪದಕ್ಕೆ ನಿಖರವಾದ ಅರ್ಥವನ್ನು ರಾಜಕೀಯ ನಿಘಂಟುಗಳನ್ನು ಸಿದ್ಧಪಡಿಸುವವರು ಹುಡುಕುವುದಕ್ಕೆ ಮುಂದಿನ ವಿಧಾನಸಭೆ ಚುನಾವಣೆವರೆಗೂ ಕಾಯಬೇಕು.

-ಸತ್ಯ
anisikeprabha@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com