ಅಂಕಣಗಳು

ಮುಗ್ಗರಿಸಿದ ಒಂದು ಮುಷ್ಕರದ ನೆನಪು

Published On :

ಚುನಾವಣೆಯ ಸಮಯದಲ್ಲಿ ಮಾತ್ರ ರಾಜಕಾರಣಿಗಳು ನಮ್ಮ ಬಳಿ ಬರುತ್ತಾರೆ ಎಂದು ಬಯ್ಯುತ್ತೇವೆ. ಆ ವರ್ಗದ ಬಹುಕೋಟಿ ಹಗರಣಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತೇವೆ. ಆದರೆ, ಸರ್ಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸಬೇಕಾದ ಅಧಿಕಾರಿ ವರ್ಗದಲ್ಲಿ ನೆಲೆಗೊಂಡಿರುವ ಜಡತೆ, ಲಂಚದ ಮನೋಭಾವವಾದರೂ ಎಂಥಾದ್ದು? ಅವರೊಂದಿಗೆ ಏಗಬೇಕಾದ ಸಾಮಾನ್ಯನ ಪಾಡೇನು? ಇಲ್ಲಿನ ಎರಡು ಸ್ವ ಅನುಭವದ ನಿರೂಪಣೆಗಳು ಇಂಥ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಜನಸಾಮಾನ್ಯನ ಅಸಹಾಯಕತೆಯನ್ನು ವ್ಯಂಗ್ಯದ ಚೌಕಟ್ಟಿನಲ್ಲಿ ಕಟ್ಟಿಕೊಟ್ಟ 'ಪೀಪ್ಲಿ ಲೈವ್‌' ಎಂಬ ಹಿಂದಿ ಚಿತ್ರವನ್ನು ಕೆಲವರು ನೋಡಿರಬಹುದು. ಇದೊಂಥರ 'ಬ್ಯೂರೋಕ್ರಸಿ ಲೈವ್‌'!


2014 ಮಾರ್ಚ್ 30ರ ನನ್ನ ಮುಷ್ಕರದ ಕಥೆ..                    
ಈ ವರ್ಷ ಜನವರಿಯಲ್ಲೋ ಫೆಬ್ರವರಿಯ ಆದಿಯಲ್ಲೋ ಒಂದು ದಿನ, ನಮ್ಮ ಮನೆಯ ಪಕ್ಕದ ರಸ್ತೆಯಲ್ಲಿ  ನಗರ ಸಭೆಯ ನೀರು ಸರಬರಾಜಿನ ಕೊಳವೆಯೊಂದರಿಂದ ಸೋರಿಕೆಯಾಗುತ್ತಿರುವುದು ನನ್ನ ಗಮನಕ್ಕೆ ಬಂತು. ನೀರು ಬಿಟ್ಟಾಗೆಲ್ಲಾ ಸಾಕಷ್ಟು ಪ್ರಮಾಣದ ನೀರು ಸೋರಿ ಚರಂಡಿಯ ಪಾಲಾಗುತ್ತಿತ್ತು. ನಗರ ಸಭೆಯ ಸಿಬ್ಬಂದಿ ಯಾರಾದರೂ ಬಂದು  ದುರಸ್ತಿ ಮಾಡಬಹುದೇನೋ ಎಂದು ಹಲವು ದಿನಗಳವರೆಗೆ ಕಾದೆ.  ಹಾಗೇನೂ ಆಗದ್ದರಿಂದ ನಗರ ಸಭೆಯ ಸಹಾಯವಾಣಿಗೆ ಕರೆಮಾಡಿ ದೂರನ್ನೂ ದಾಖಲಿಸಿ,  ಆಗಲಾದರೂ ಯಾರಾದರೂ ಬರಬಹುದೇನೋ ಎಂದು ಮತ್ತೆ ಕಾದೆ.
ದಿನಗಳೆಷ್ಟೋ ಉರುಳಿದರೂ ನನ್ನ ದೂರು ಫಲ ಕೊಡಲೇ ಇಲ್ಲ. ಕೊಳವೆಯ ದುರಸ್ತಿ ನಗರ ಸಭೆಯಲ್ಲಿ ಯಾರಿಗೂ ಬೇಡವಾಗಿದೆಯೇನೋ ಎಂಬ ಅನುಮಾನವೂ ಶುರುವಾಯ್ತು. ಇನ್ನು ಸುಮ್ಮನಿರಬಾರದು ಎಂದು ನಗರ ಸಭೆಗೇ ಹೋಗಿ, ನನ್ನ ದೂರಿನ ಗತಿ ಏನಾಗಿದೆಯೆಂದು ನೋಡಿದಾಗ, ದೂರಿನ ದಾಖಲೆಯ ಪುಸ್ತಕದಲ್ಲಿ ನಾನು ನೋಡಿದ್ದನ್ನು ನಂಬಲೇ ಕಷ್ಟವಾಯಿತು. ದಾಖಲಾಗಿದ್ದ ದೂರಿನ ಮುಂದೆ 'ಸರಿಪಡಿಸಲಾಗಿದೆ' ಎಂದು ಬರೆದು ಯಾರೋ ಸಹಿ ಮಾಡಿದ್ದರು. ಎಂಥಾ ವಂಚನೆ ಅನ್ನಿಸಿ ಮತ್ತೊಮ್ಮೆ ದೂರನ್ನು ದಾಖಲಿಸಿ ಬಂದೆ.
ನಂತರವೂ ಅದೆಷ್ಟೋ ದಿನಗಳ ಕಾಯುವಿಕೆಯಲ್ಲಿ ನಾನು ಮತ್ತಷ್ಟು ಮುದುಕನಾದೆ. ಯಾರೂ ಬರಲೂ ಇಲ್ಲ. ದುರಸ್ತಿಯ ಕೆಲಸ ಆಗಲೂ ಇಲ್ಲ. ಚರಂಡಿಯನ್ನು ಸೇರುವ ನೀರು ನಿಲ್ಲಲೂ ಇಲ್ಲ.  ಸುಮ್ಮನಿದ್ದರೆ ಕೆಲಸ ಆಗದು ಎಂದು ಮತ್ತೆ ನಗರ ಸಭೆಗೆ ದೌಡಾಯಿಸಿದೆ. ಸಹಾಯವಾಣಿ ಕೇಂದ್ರದ  ಸಹಾಯಕಿ 'ರೀ ನಿಮ್ಮ ಕೆಲಸ ಯಾವಾಗಲೋ ಆಗಿದೆಯಲ್ಲಾ, ಮತ್ತೇನು ಸಮಸ್ಯೆ' ಎಂದರು. ಎರಡನೆಯ ಬಾರಿಗೆ ನಾನೇ ಖುದ್ದಾಗಿ ಹೇಳಿ ಸಹಾಯವಾಣಿಯ ಪುಸ್ತಕದಲ್ಲಿ ಬರೆಸಿದ್ದ ದೂರಿನ ಮುಂದೆಯೂ 'ಸರಿಪಡಿಸಲಾಗಿದೆ' ಎಂದು ಸ್ಫುಟವಾಗಿ ಬರೆದು ಯಾರೋ ಸಹಿಮಾಡಿದ್ದರು! ಅವರು  ಎಲ್ಲಿ ಯಾವಾಗ ಏನು ಸರಿಪಡಿಸಿದರು ಎಂಬುದು ತಿಳಿಯದೆ ಕಂಗಾಲಾದೆ.  
ಸಾಗರ ನಗರ ಸಭೆಗೆ ಹೊಸ ಅಧ್ಯಕ್ಷರ ಆಯ್ಕೆಯಾಯಿತೆಂಬ ಸುದ್ದಿ ಗೊತ್ತಾಗಿ ಮಾರ್ಚ್ 12ರಂದು ಅವರಿಗೆ ಒಂದು ಅಭಿನಂದನಾ ಪತ್ರವನ್ನು ಬರೆದು ಅದರಲ್ಲಿಯೇ ಈ ನೀರಿನ ಸೋರಿಕೆಯನ್ನು ಕುರಿತ ದೂರನ್ನೂ ಸೇರಿಸಿ, ಸೂಕ್ತ ಕ್ರಮಕ್ಕಾಗಿ ಕೋರಿಕೆಯನ್ನೂ ಸಲ್ಲಿಸಿದೆ. ಅಧ್ಯಕ್ಷರೂ ಸ್ಪಂದಿಸದೇ ಇದ್ದಾಗ ಮಾರ್ಚ್ 24ರವರೆಗೂ  ಸೋರಿಕೆ ಸಾಗಿಯೇ ಇದ್ದುದನ್ನು ನೋಡಿ, ಇನ್ನೂ ಒಂದು ಪ್ರಯತ್ನವನ್ನು ಮಾಡೋಣ ಎಂದು 24ರಂದು ಪೌರಾಯುಕ್ತರಿಗೇ ಪತ್ರವೊಂದನ್ನು ಬರೆದು, ಅದರಲ್ಲಿ ನಾನು ಅಧ್ಯಕ್ಷರಿಗೆ ಬರೆದ ಪತ್ರದ ಪ್ರತಿಯನ್ನೂ ಸೇರಿಸಿ, ನನ್ನ ಮುಂದಿನ ಕ್ರಮದ ಬಗ್ಗೆಯೂ ತಿಳಿಸಿದೆ. ಆ ಪತ್ರದ ಪ್ರಕಾರ, ದಿನಾಂಕ  29ರ ಮೊದಲು ಆಗಬೇಕಾಗಿದ್ದ ದುರಸ್ತಿ ಕೆಲಸವು ಆಗದೇ ಇದ್ದ ಪಕ್ಷದಲ್ಲಿ, 30ರಂದು ಬೆಳಿಗ್ಗೆ ಹತ್ತು ಗಂಟೆಯಿಂದ ಸಂಜೆ ಆರರವರೆಗೆ ನಗರ ಸಭೆಯ ಮುಂದೆ ಧರಣಿ ಮುಷ್ಕರವನ್ನು ಹೂಡುವ ನನ್ನ ನಿರ್ಧಾರವನ್ನು ವ್ಯಕ್ತಪಡಿಸಿದ್ದೆ. ನಾನು ನನ್ನ ಈ ಮುಷ್ಕರಕ್ಕೆ ಭಾನುವಾರವನ್ನೇ ಏಕೆ ಆಯ್ಕೆ ಮಾಡಿಕೊಂಡಿದ್ದೆ ಎಂಬುದನ್ನೂ ಆ ಪತ್ರದಲ್ಲಿ ಸ್ಪಷ್ಟಪಡಿಸಿದ್ದೆ. ನನ್ನದು ಶಾಂತಿಯುತವಾದ ಒಂದು ಸಾತ್ವಿಕ ಮುಷ್ಕರ. ಅದನ್ನು ನಗರ ಸಭೆಯ ವಿರುದ್ಧವಾಗಿಯಾಗಲೀ, ಸಾರ್ವಜನಿಕರ ನೆಮ್ಮದಿಯನ್ನು ಕದಡುವ ಸಲುವಾಗಿಯಾಗಲೀ ಯಾರೂ ಬಳಸಿಕೊಳ್ಳುವುದು ನನಗೆ ಬೇಕಾಗಿರಲಿಲ್ಲ.  
ನೀರಿನ ಸೋರಿಕೆ ನಿಲ್ಲುವಂತಾಗುತ್ತೇನೋ, ನನ್ನ ಮುಷ್ಕರದ ಅಗತ್ಯ ಇಲ್ಲದಂತಾಗುತ್ತೇನೋ ಎಂದು  ಮತ್ತೂ ಮೂರು ದಿನಗಳನ್ನು ಕಳೆದರೂ ಅಂಥಾ ಯಾವ ಬೆಳವಣಿಗೆಯೂ  ಕಂಡುಬರಲಿಲ್ಲ. ಉದ್ದೇಶಿತ ಧರಣಿ ಮುಷ್ಕರವನ್ನು ಆರಂಭಿಸುವ ಮೊದಲು ಅಂದರೆ ಮಾರ್ಚ್ 30 ಭಾನುವಾರ ಬೆಳಿಗ್ಗೆ ಹತ್ತು ಗಂಟೆಯ ಮೊದಲು ದುರಸ್ತಿ ಕಾರ್ಯವನ್ನು ನಗರಸಭೆ ಪ್ರಾರಂಭಿಸದೇ ಇದ್ದರೆ ನನ್ನ ಮುಷ್ಕರ ಆರಂಭಗೊಳ್ಳಲಿದೆ ಎಂಬ ತಿದ್ದುಪಡಿ ಒಳಗೊಂಡ ಪತ್ರವನ್ನು ಖುದ್ದಾಗಿ ತಲುಪಿಸಬೇಕೆಂದು 27ರ ಸಾಯಂಕಾಲ ನಗರ ಸಭಾ ಕಚೇರಿಗೆ ಹೋದವನು, ಅಲ್ಲಿಯ ಪ್ರಬಂಧಕರನ್ನು ಭೆಟ್ಟಿಯಾಗಿ, ನಾನು ಅಧ್ಯಕ್ಷರಿಗೂ, ಪೌರಾಯುಕ್ತರಿಗೂ ಬರೆದ ಪತ್ರಗಳ ಪ್ರತಿಗಳನ್ನು ತೋರಿಸಿ, ನಗರ ಸಭೆ ತೆಗೆದುಕೊಂಡ ಕ್ರಮಗಳೇನು ಎಂದು ಕೇಳಿದೆ. ಅದುವರೆಗೆ ನನ್ನ ಪತ್ರಗಳನ್ನು ಗಮನಿಸಿರದ ಅವರು ಹೇಳಿದರು, 'ಕೃಷ್ಣಮೂರ್ತಿಯವರೇ ನೀವು ಹೇಳುತ್ತಿರುವುದೆಲ್ಲಾ ಸರಿಯೇ. ಆದರೆ, ಏನಾಗಿದೆ ಗೊತ್ತಾ,  ನೀವು ಹೇಳ್ತಾ ಇರೋ  ಸಮಸ್ಯೆಗಿಂತಲೂ  ಸಾವಿರಾರು ಪಟ್ಟು ದೊಡ್ಡದೇ ಈಗ ನಮ್ಮ ಮುಂದಿದೆ. ವರದಶ್ರೀ ಹತ್ತಿರ ಭಾರೀ ಕೊಳವೆಯೇ ಎರೆಡೆರಡು ಬಾರಿ ಒಡೆದು ಹೋಯ್ತು. ನಮ್ಮವರೆಲ್ಲಾ ಅಲ್ಲೇ ಇದ್ದಾರೆ. ನಾಲ್ಕು ದಿವಸದಿಂದ ಎಷ್ಟೋ ಕಡೆ ನೀರು ಬಿಟ್ಟಿಲ್ಲ. ಟ್ರಾಕ್ಟರಿನಲ್ಲಿ ನೀರು ಕೊಡ್ತಾ ಇದ್ದೇವೆ. ಈಗ ಯಾವ ಕೆಲಸ ಮೊದಲು  ಮಾಡಬೇಕು ಹೇಳಿ. ಮುಷ್ಕರದ  ಮಾತು ಸದ್ಯಕ್ಕೆ  ಬೇಡ, ಬಿಡಿ. ಮೊದಲು ಈ ಕೆಲಸ ಆಗಲಿ.' ನಾನು ನೀಡಿದ್ದ ಗಡವಿನ ವಿಚಾರವನ್ನು ಹೇಳಿ ಮೂವತ್ತನೇ ತಾರೀಖು ಬೆಳಿಗ್ಗೆ ಹತ್ತು ಗಂಟೆಯವರೆಗೂ ಕಾಯುತ್ತೇನೆ, ಎಂದು ನನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಅಲ್ಲಿಂದ ಹೊರಡುವ ಮೊದಲು ಅವರು ಪೌರಾಯುಕ್ತರ ದೂರವಾಣಿ ಸಂಖ್ಯೆಯನ್ನು ಕೊಟ್ಟು ಮಾತಾಡುವಂತೆ ಹೇಳಿದರು. ಅಂದು ರಾತ್ರಿಯೇ ಪೌರಾಯುಕ್ತರಿಗೆ ಸಂದೇಶವೊಂದನ್ನು ರವಾನಿಸಿ ನನ್ನ 24 ಮತ್ತು 27ರ ಪತ್ರಗಳನ್ನು ಓದುವಂತೆ ಕೋರಿಕೊಂಡೆ. ಕೆಲವೇ ನಿಮಿಷಗಳಲ್ಲಿ ನನ್ನನ್ನು ಸಂಪರ್ಕಿಸಿದ ಪೌರಾಯುಕ್ತರ ಮಾತುಗಳಲ್ಲಿ ನನ್ನ ಪತ್ರಗಳನ್ನು ಅವರು ಓದಿದ್ದ ಸುಳಿವು ನನಗೆ ದೊರೆಯಲಿಲ್ಲ. ಹಾಗಾಗಿ, ನನ್ನ ಎರಡು ಪತ್ರಗಳನ್ನೂ  28ನೇ ತಾರೀಖು ವಿ-ಅಂಚೆಯ ಮೂಲಕ  ಅವರಿಗೆ ಮರುರವಾನಿಸಿದೆ.
ದಿನಾಂಕ 30ರ ಬೆಳಗ್ಗೆ ಒಂಬತ್ತೂಮುಕ್ಕಾಲು ಗಂಟೆಯವರೆಗೂ ಮನೆಯಲ್ಲೇ ಇದ್ದು ನಗರ ಸಭೆಯ ಕೆಲಸಗಾರರು ಬಂದಾರೇನೋ, ಕೆಲಸವನ್ನು ಶುರುಮಾಡಿಯಾರೇನೋ ಎಂದು ಉತ್ಕಟನಾಗಿ ಕಾದೆ. ಯಾರೂ ಬರಲೇ ಇಲ್ಲ. ಹೀಗಾಗಿ ಮುಷ್ಕರಕ್ಕೆಂದು ತೆರಳಿದೆ. ನಗರ ಸಭೆಯ ಆವರಣ ಶಾಂತವಾಗಿತ್ತು.  ಭಾನುವಾರವೂ ಕೆಲಸ ಮಾಡಬೇಕಾಗಿದ್ದ ಐದಾರು ಜನ ಕೆಲಸಗಾರರು ಅತ್ತಿತ್ತ ಓಡಾಡುತ್ತಿದ್ದರು. ನನ್ನ ಮುಷ್ಕರದ ವಿಚಾರ ಅವರಾರಿಗೂ ತಿಳಿದಿರಲಿಲ್ಲ. ಕಟ್ಟಡದ ಮುಂಭಾಗದಲ್ಲಿ ನೆರಳು ಹೊಂದಿದ್ದ ವಿಶಾಲ ಕಟ್ಟೆಯ ಒಂದು ಭಾಗದಲ್ಲಿ ಕರವಸ್ತ್ರ ಹಾಸಿಕೊಂಡು ಕೂರಲು ಮುಂದಾದೆ. ಅದಕ್ಕೆ ಮೊದಲು ಪೌರಾಯುಕ್ತರನ್ನು ದೂರವಾಣಿಯ ಮೂಲಕ ಸಂಪರ್ಕಿಸಿ, ನಾನು ನಗರ ಸಭೆಯ ಆವರಣದಲ್ಲಿರುವ ವಿಚಾರವನ್ನು ಅವರಿಗೆ ತಿಳಿಸಿದೆ. 'ಒಂದೈದು ನಿಮಿಷ ಇರ್ತೀರಾ, ಅಲ್ಲಿಗೇ ಬರ್ತೇನೆ' ಎಂದರು. 'ಸಂಜೆ ಆರರವರೆಗೂ ಇರ್ತೇನೆ, ನಿಧಾನವಾಗಿ ಬನ್ನಿ, ಚಿಂತೆ ಬೇಡ' ಎಂದೆ.
ಮುಷ್ಕರ ಆರಂಭಗೊಂಡ ಸುಮಾರು ಇಪ್ಪತ್ತು ನಿಮಿಷಗಳಲ್ಲಿ ಪೌರಾಯುಕ್ತರ ಆಗಮನವೂ ಆಯ್ತು. ನನ್ನ ಬಳಿ ಬಂದವರಿಗೆ ವಂದಿಸಿ ಕುಳಿತುಕೊಳ್ಳುವಂತೆ ಕೇಳಿಕೊಂಡೆ. ನಗರ ಸಭೆಯ ಮುಖ್ಯಾಧಿಕಾರಿಯಾದ ತಾವು ಮುಷ್ಕರನಿರತನಾದ ಸಾಮಾನ್ಯ ನಾಗರಿಕನೊಬ್ಬನ ಮುಂದೆ ಕೂರುವುದೇ ಎಂಬ ಯಾವ ಬಿಗುಮಾನವನ್ನೂ ತೋರದೆ ಸೌಜನ್ಯದಿಂದಲೇ ನನ್ನ ಮುಂದೆ ಕುಳಿತು ಮಾತಾಡತೊಡಗಿದರು. ಆಗ ನಮ್ಮ ಎದುರು ಅವರ ಜೊತೆಯಲ್ಲೇ ಬಂದ ಹಲವರು ನಿಂತೇ ಇದ್ದರು. ಪೌರಾಯುಕ್ತರ ಮಾತಿನ ನಡುವೆಯೇ ನಾನು ಏನೋ ಮುಖ್ಯವಾದ ವಿಚಾರವೊಂದನ್ನು ಹೇಳಲು ಯತ್ನಿಸಿದಾಗ, 'ಮೊದಲು ನಾನು ಹೇಳುವುದನ್ನು ಕೇಳಿ' ಎಂದು ನುಡಿದು, ತಾವು ಸಾಗರದಲ್ಲಿ ಪೌರಾಯುಕ್ತರಾಗಿ ಅಧಿಕಾರವನ್ನು ವಹಿಸಿಕೊಂಡ ಕೆಲವೇ ತಿಂಗಳುಗಳಲ್ಲಿ ಏನೇನು ಸುಧಾರಣೆಗಳನ್ನು ತಂದಿದ್ದೇವೆ, ಸಾಧನೆಗಳನ್ನು ಮಾಡಿದ್ದೇವೆ, ಕಂದಾಯ ವಸೂಲಾತಿ ಹೇಗೆ ಹೆಚ್ಚಿದೆ, ಕುಡಿಯುವ ನೀರಿನ ಜ್ವಲಂತ ಸಮಸ್ಯೆಯ ನಿವಾರಣೆಗಾಗಿ ಕೈಗೊಳ್ಳಲಾಗುತ್ತಿರುವ ಶರಾವತಿ ನೀರು ಸರಬರಾಜಿನ ಯೋಜನೆ ಯಾವ ಹಂತದಲ್ಲಿದೆ ಮುಂತಾದ ಹಲವು ವಿಚಾರಗಳನ್ನು ಮನನೀಯವಾಗಿ ಮಂಡಿಸುತ್ತಾ ಸ್ವಲ್ಪ ಹೊತ್ತು ಕಳೆದರು. ನಂತರ ಒಮ್ಮೆಲೇ, 'ನಿಮ್ಮ ಸಾಗರದವರು ಎಂಥಾ ಜನಾರೀ, ಪೈಪ್ ಹಾಕಿ ನಲವತ್ತೈದು ವರ್ಷದ ಮೇಲಾಗಿದೆ. ಆದರೂ ಸುಮ್ಮನಿದ್ದೀರಲ್ರೀ' ಎಂದು ರೋಷವನ್ನು ವ್ಯಕ್ತಪಡಿಸಿದರು. ಅವರ ಧ್ವನಿಯಲ್ಲಿ ಸಾಗರದ ನೀರು ಸರಬರಾಜು ವ್ಯವಸ್ಥೆ ಸರಿಯಿಲ್ಲದುದರ ಬಗ್ಗೆ ಆತಂಕ ಮತ್ತು ಸುಧಾರಣೆಯ ಬಗ್ಗೆ  ಕಾಳಜಿ ಇರುವುದು ಎದ್ದು ತೋರುತ್ತಿತ್ತು. ನೀರಿನ ಸೋರಿಕೆಯಾಗುತ್ತಿರುವ ಜಾಗದ ಬಗ್ಗೆ ನನ್ನಿಂದ ಮಾಹಿತಿಯನ್ನು ಪಡೆದು, ತಮ್ಮ ಸಿಬ್ಬಂದಿಯ ಪೈಕಿ ಒಬ್ಬರನ್ನು ಕರೆದು, ಸರಿಪಡಿಸಿ ಬರುವಂತೆ ಆಜ್ಞಾಪಿಸಿದರು. ನನಗೂ ಒಳಗೆ ಬರುವಂತೆ ಕರೆದು ತಮ್ಮ ಕೊಠಡಿಯತ್ತ ನಡೆದರು. ನಾನು ಏಳಲಿಲ್ಲ. ಮುಷ್ಕರ ಅಲ್ಲೇ ಮುಂದುವರೆಯಿತು.
ಅದೇ ಸಂದರ್ಭದಲ್ಲಿ ಅಲ್ಲಿಗೆ ಬಂದ ನಮ್ಮ ಪ್ರದೇಶದ ನಗರ ಸಭಾ ಸದಸ್ಯರು, ನಾನು ಮುಷ್ಕರವನ್ನು ಮುಂದುವರೆಸುವ ಅಗತ್ಯವಿಲ್ಲವೆಂದೂ, ಸಮಸ್ಯೆಯನ್ನು ಬಗೆಹರಿಸಲು ತಾವು ಎಲ್ಲಾ ಪ್ರಯತ್ನಗಳನ್ನೂ ಮಾಡುವುದಾಗಿಯೂ ಹೇಳಿದರು. ಬನ್ನಿ ಸರ್, ಮನೆಗೆ ಬಿಟ್ಟು ಕೊಡ್ತೇನೆ ಎಂದು ಒತ್ತಾಯಿಸಿದ್ದಲ್ಲದೇ ಈ ಹಿಂದೆ ತಾವು ಹಲವು ಸಮಸ್ಯೆಗಳನ್ನು ಬಗೆಹರಿಸಿದ್ದಾಗಿ ಕತೆ ಹೇಳಿದರು.                     
ಸ್ವಲ್ಪ ಸಮಯದ ನಂತರ, ಸೋರಿಕೆಯ ಸಮಸ್ಯೆಯಿದ್ದ ಜಾಗಕ್ಕೆ ತೆರಳಿದ್ದ ಸಿಬ್ಬಂದಿ ಹಿಂದಿರುಗಿ ಬಂದು ಪೌರಾಯುಕ್ತರಿಗೆ ಏನು ಹೇಳಿದರೋ, ಅವರು ನನ್ನ ಬಳಿ ಬಂದು, ಸಮಸ್ಯೆ ನಾನು ಭಾವಿಸಿದ್ದಂತೆ ಕೊಳವೆ ಒಡೆದದ್ದರಿಂದ ಉಂಟಾದದ್ದಲ್ಲವೆಂದು ಹೇಳಿ, ಸಮಸ್ಯೆಯ ಮತ್ತೊಂದು ಕಾರಣವನ್ನೂ ವಿವರಿಸಿ, ಅಷ್ಟು  ಪ್ರಮಾಣದ ಸೋರಿಕೆಯನ್ನು ಪೂರ್ಣ ತಡೆಗಟ್ಟಿದರೆ ಬೇರೆ ಎಲ್ಲಾದರೂ ಕೊಳವೆ ಒಡೆಯುವ ಸಂಭವವಿದೆಯೆಂದೂ, ಸಾಧ್ಯವಾದಷ್ಟು ಸರಿಪಡಿಸುವುದಾಗಿಯೂ ಹೇಳಿ, ನಾನು ಮುಷ್ಕರವನ್ನು ನಿಲ್ಲಿಸಬಹುದೇನೋ ಎಂಬ ಇಂಗಿತವನ್ನು ವ್ಯಕ್ತಪಡಿಸಿದರು.  
ಗಂಟೆ ಆರಾಗಲು ಇನ್ನೊಂದೇ ನಿಮಿಷ ಉಳಿದಿದೆ ಎನ್ನುವಾಗ ಮುಷ್ಕರದ ಮುಕ್ತಾಯದ ಬಗ್ಗೆ ಪೌರಾಯುಕ್ತರಿಗೆ ಸಂದೇಶವೊಂದನ್ನು ರವಾನಿಸಿ, ಅವರ ಸಹಕಾರಕ್ಕಾಗಿ ಧನ್ಯವಾದಗಳನ್ನೂ ಅರ್ಪಿಸಿದೆನಲ್ಲದೆ, ಯುಗಾದಿಯ ಹಾರ್ದಿಕ ಶುಭಾಶಯಗಳನ್ನೂ ಹೇಳಿದೆ. ಅವರಿಂದಲೂ ಪ್ರತಿ ಸಂದೇಶದ ಮೂಲಕ ಧನ್ಯವಾದಗಳೂ ಶುಭಾಶಯಗಳೂ ದೊರೆತವು. ಆ ದಿನದ ಕತೆ ಅಲ್ಲಿಗೆ ಮುಗಿಯಿತು.  
ಮರುದಿನ ಬೆಳಿಗ್ಗೆ ರಸ್ತೆಯಲ್ಲಿ ನೀರು ಸೋರಿಕೆಯಾಗುತ್ತಿದ್ದ ಜಾಗಕ್ಕೆ ಹೋಗಿ ನೋಡಿದೆ. ಅಲ್ಲಿ, ಸಮೀಪದಲ್ಲಿ ಕೊಳವೆ ಸಾಗಿದ್ದ ಮಾರ್ಗದಲ್ಲಿ ಎಲ್ಲೂ ನೆಲವನ್ನು ಅಗೆದು ಪರಿಶೀಲಿಸಿದ ಯಾವ ಕುರುಹೂ ಕಾಣಿಸಲಿಲ್ಲ.  ಅಂದು ನೀರು ಬಿಡುವ ಸರದಿ ಇಲ್ಲದಿದ್ದರೂ, ಯುಗಾದಿ ಹಬ್ಬವೆಂದು ಬೆಳಿಗ್ಗೆ ಆರರಿಂದ ಏಳು ಗಂಟೆಯವರೆಗೆ ನೀರನ್ನು ಬಿಟ್ಟಿದ್ದರು. ಹಾಗಾಗಿ ಸಾಕಷ್ಟು ನೀರು ಸೋರಿ ಹೋಗಿರುವುದೂ ಚೆನ್ನಾಗಿಯೇ ಗೊತ್ತಾಗುತ್ತಿತ್ತು. 'ನಿನ್ನೆ ಬೆಳಿಗ್ಗೆ ಇಲ್ಲಿಗೆ ನೀರಿನ ಕೊಳವೆ ಸರಿಮಾಡುವವರು ಯಾರಾದರೂ ಬಂದಿದ್ದರಾ, ಏನಾದರೂ ಕೆಲಸ ಮಾಡಿದರಾ' ಎಂದು  ರಸ್ತೆಯ ಮತ್ತೊಂದು ಭಾಗದಲ್ಲಿ ವಾಸವಾಗಿರುವವರನ್ನು ಕೇಳಿದೆ. ಅವರು ಒಂದು ಕ್ಷಣ ಯೋಚಿಸಿ 'ಯಾರೋ ಬಂದು ನೋಡಿಕೊಂಡು ಹೋದ ಹಾಗಿತ್ತು ಅಷ್ಟೇ' ಎಂದರು. ಹಾಗೆ ಬಂದವರು  ಅಲ್ಲಿ ನೆಲವನ್ನು ಅಗೆದು ನೋಡದೇ,  ಮೂರರಿಂದ ನಾಲ್ಕು ಅಡಿ ಕೆಳಗೆ ಇರುವ ಕೊಳವೆ ಒಡೆದಿಲ್ಲ ಎಂಬ ನಿರ್ಧಾರಕ್ಕೆ ಹೇಗೆ ಬಂದರೋ ಗೊತ್ತಾಗಲಿಲ್ಲ.  
'ಏಕಾಂಗಿ ಹೋರಾಟಕ್ಕೆ ಮಣಿದ ನಗರಸಭೆ' ಎಂಬ ಶೀರ್ಷಿಕೆಯನ್ನು ಹೊತ್ತು ಪತ್ರಿಕೆಯೊಂದರಲ್ಲಿ ಪ್ರಕಟವಾದ ನನ್ನ ಮುಷ್ಕರದ ಸುದ್ದಿಯನ್ನು ಓದಿ, ನಾನೇನೋ ಸಾಧನೆಯನ್ನು ಮಾಡಿ ಗೆದ್ದಿದ್ದೇನೆ ಎಂಬಂತೆ ಭಾವಿಸಿದ ನನ್ನ ಅನೇಕ ಆಪ್ತರಿಂದ ಒಂದಷ್ಟು ಅಭಿನಂದನೆಯ ಸಂದೇಶಗಳೂ ಬಂದವು. ಆದರೆ ಆದದ್ದೇನು? ನನ್ನ ಮುಷ್ಕರದ ನೆಪದಲ್ಲಿ ಪೌರಾಯುಕ್ತರು ತಮ್ಮ ಸಾಧನೆಗಳ ಬಗ್ಗೆ ಮಾತಿನ ಹೊಳೆ ಹರಿಸಿದರಷ್ಟೆ. ಮಂಡಿನೋವು, ಬೆನ್ನು ನೋವುಗಳ ಜತೆಗೆ ನನ್ನದೊಂದಿಷ್ಟು ಬೆವರು ಹರಿಯಿತಷ್ಟೆ.
ನೀರಿನ ಸೋರಿಕೆ ಮುಷ್ಕರದ ಮೊದಲು ಹೇಗಿತ್ತೋ ಈಗಲೂ ಹಾಗೆಯೇ ಇದೆ, ನಿಂತಿಲ್ಲ.
-ಬೊ.ನಾ. ಕೃಷ್ಣಮೂರ್ತಿ, ಸಾಗರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.