ಗಾಂಧಿ ನಾಮದ ಬಲವೊಂದಿದ್ದರೆ ಸಾಕೆಮಗೆ
ಒಟ್ಟಿನಲ್ಲಿ ಚುನಾವಣೆ ಮುಗಿದರೆ ಸ್ವಲ್ಪ ದಣಿವಾರಿಸಿಕೊಳ್ಳಬಹುದು. ಏನು ಮಾಡೋದು. ಐದು ವರ್ಷಕ್ಕೊಮ್ಮೆಯಾದರೂ ಹೀಗೆ ಬಿಸಿಲಲ್ಲಿ ಅಮೇಠಿ ಮತ್ತು ರಾಯ್ಬರೇಲಿಗಳಲ್ಲಿ ಓಡಾಡಬೇಕಾಗುತ್ತದೆ. ಹಾಗೆ ಮಾಡಿದರೆ ನಂತರ ಐದು ವರ್ಷ ನಮ್ಮ ಹವಾನಿಯಂತ್ರಿತ ಬಂಗಲೆಗಳಲ್ಲಿ ಆರಾಮಾಗಿ ಇರಬಹುದಲ್ಲ? ಇದು ಕೇವಲ ನನ್ನ ಪ್ರಶ್ನೆಯಲ್ಲ, ಕುಟುಂಬದ್ದು. ಈ ಮಾದರಿ ಕೇವಲ ನನ್ನದಲ್ಲ, ಕುಟುಂಬದ್ದು.
ನನಗೆ ಕುಟುಂಬದ ಹೆಸರೇ ಜೀವ. ಅದಿಲ್ಲದಿದ್ದರೆ ನನ್ನ ಅಸ್ತಿತ್ವವಿಲ್ಲ. ಹೀಗಾಗಿಯೇ, ಉಳಿದೆಲ್ಲ ಸಂದರ್ಭಗಳಲ್ಲಿ ನಾನು ನನ್ನ ಪತಿ ಶೋಮ್ಯಾನ್ ವಾದ್ರಾ ಜತೆ ಜಿಂಗಿಚಕ ಮಾಡರ್ನ್ ದಿರಿಸಿನಲ್ಲೇ ಕಾಣಿಸಿಕೊಂಡರೂ ಈ ಪ್ರಚಾರ ಸಂದರ್ಭದಲ್ಲೆಲ್ಲ ಅಜ್ಜಿ ಇಂದಿರಾ ಗಾಂಧಿಯವರನ್ನು ನೆನಪಿಸುವ ರೀತಿಯಲ್ಲಿ ಸೀರೆಯನ್ನೇ ಉಡುತ್ತೇನೆ. ಆರಾಮಾಗಿ ಓಡಾಡುವುದಕ್ಕೆ ಅಕ್ಕಪಕ್ಕ ಮುಕ್ತ ಜಾಗವಿದ್ದರೂ ಇಟ್ಟಂಗಿ ಗುಡ್ಡೆಯ ಮೇಲೆ ಜಿಗಿಯಬೇಕಾಗುತ್ತದೆ. ಹಾಗಾದಾಗ ಮಾತ್ರ ಟಿವಿ ಚಾನೆಲ್ಗಳಲ್ಲಿ, ಪತ್ರಿಕೆಗಳಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡು ಹವಾ ಸೃಷ್ಟಿಸುವುದಕ್ಕೆ ಸಾಧ್ಯ. ವಿಶೇಷ ಭದ್ರತೆಯನ್ನು ತೊರೆದು ಪ್ರಿಯಾಂಕಾ ಬೇರೆಡೆ ನುಗ್ಗಿದರು ಎಂಬ ಸುದ್ದಿ ಬಂದರಷ್ಟೇ ಅಲ್ಲವೇ ಗಾಂಧಿ ಕುಟುಂಬಕ್ಕೆ ಜನರ ಬಗ್ಗೆ, ಅವರನ್ನು ಭೇಟಿಯಾಗುವ ಬಗ್ಗೆ ಅಪಾರ ಕಾಳಜಿ ಇದೆ ಎಂದು ಗೊತ್ತಾಗುವುದು?
ನಾನು ಪ್ರಚಾರದ ಪ್ರತಿ ಸೆಕೆಂಡಿನಲ್ಲೂ ಕುಟುಂಬವನ್ನು ನೆನಪಿಸಿಕೊಳ್ಳುತ್ತೇನೆ. ಏಕೆಂದರೆ ಅದನ್ನು ಬಿಟ್ಟು ನಮ್ಮ ಬಳಿ ಸಾಧನೆ ಅಂತ ಹೇಳಿಕೊಳ್ಳುವುದಕ್ಕೆ ಇನ್ನೇನೂ ಇಲ್ಲ. ಅದಕ್ಕೇ ಕುಟುಂಬ, ಮತ್ತದರ ಗತವೈಭವ, ಅಪ್ಪ-ಅಜ್ಜಿ ಹತ್ಯೆಯಾಗಿದ್ದು ಇವನ್ನೆಲ್ಲ ಮತ್ತೆ ಮತ್ತೆ ನೆನಪು ಮಾಡಿ, ದೇಶವನ್ನು ಭಾವನಾತ್ಮಕ ಕಂಪನಕ್ಕೆ ಸಿಲುಕಿಸುವುದಕ್ಕೆ ಅನುಕ್ಷಣವೂ ಪ್ರಯತ್ನಿಸುತ್ತಿರುತ್ತೇವೆ. ದೂರದರ್ಶನದ ಸಂದರ್ಶನದಲ್ಲಿ ಮೋದಿ ಹೇಳದೇ ಇದ್ದ ಮಾತೊಂದು ವರದಿಯಾದಾಗ ಅದಕ್ಕೆ ತಕ್ಷಣ ಪ್ರತಿಕ್ರಿಯಿಸಿದೆ. 'ಪ್ರಿಯಾಂಕಾ ಮಗಳಿದ್ದಂತೆ' ಎಂದು ಮೋದಿ ಹೇಳಿದರಂತೆ ಅಂತ ಸುಳ್ಳು ಸುದ್ದಿಯಾಗಿತ್ತು. 'ನಾನು ರಾಜೀವ್ ಗಾಂಧಿ ಮಗಳು' ಅಂತ ಕೂಗಿಕೊಂಡೆ. ಮಾಧ್ಯಮ 'ಪ್ರಿಯಾಂಕಾ ತಿರುಗೇಟು' ಅಂತ ಸಂಭ್ರಮದಿಂದ ವರದಿ ಮಾಡಿತು. ಒಂದೊಮ್ಮೆ ಮೋದಿ ಹಾಗೆ ಹೇಳಿದ್ದರೂ ಅಂತ ಪ್ರತಿಕ್ರಿಯೆಯ ಅಗತ್ಯವೇನಿತ್ತು? ಅವರೇನೂ ನೀವು ರಾಜೀವ್ ಮಗಳಲ್ಲ ಎಂದೇನೂ ಹೇಳಿಲ್ಲವಲ್ಲ ಅಂತ ಒಬ್ಬನೂ ಪ್ರಶ್ನಿಸಲಿಲ್ಲ. ನಮ್ಮ ಕರಿಸ್ಮಾದಲ್ಲಿ ತರ್ಕಗಳನ್ನು ಮರೆಸಿಬಿಡುವುದೇ ನನ್ನ ತಾಕತ್ತು. ಇಷ್ಟಕ್ಕೂ ನನಗೆ ಗಲಿಬಿಲಿ ಆಗಿದ್ದು ಏಕೆಂದರೆ, 'ಗಾಂಧಿ' ನಾಮಬಲವೇ ನಮ್ಮ ಕುಟುಂಬದ ಶಕ್ತಿ. ಬೇರೆ ಯಾರ ಮಗಳಾಗಿದ್ದರೂ ಸಮಾಜದಲ್ಲಿ ಪುಕ್ಕಟೆಯಾಗಿ ಈ ಸ್ಥಾನ ಸಿಗುತ್ತಿತ್ತಾ? ಅದಕ್ಕೆ ಎಷ್ಟೆಲ್ಲ ಬೆವರು ಹರಿಸಬೇಕಿತ್ತು? ಅಬ್ಬಬ್ಬಾ ಅಂದರೆ ಒಬ್ಬ ರೂಪದರ್ಶಿ ಆಗಬಹುದಿತ್ತೇನೋ? ಈ ಪ್ರಚಾರ ಸಿಗುತ್ತಿತ್ತೇ? ಹೀಗಾಗಿಯೇ ನನಗೆ ನಾನು ಖಾತ್ರಿ ಮಾಡಿಕೊಳ್ಳಲೋ ಎಂಬಂತೆ 'ನಾನು ರಾಜೀವ್ ಮಗಳು' ಎನ್ನುತ್ತಿರುತ್ತೇನೆ.
ನನಗಾಗಲೀ, ರಾಹುಲ್ಗಾಗಲೀ, ಇನ್ನು ಮುಂದೆ ಬರುವ ಯಾರಿಗೇ ಆಗಲಿ ಈ 'ಗಾಂಧಿ' ನಾಮಬಲ ಬೇಕೆ ಬೇಕು. ಅಮೇಠಿಯಲ್ಲಾಗಲೀ, ರಾಯ್ಬರೇಲಿಯಲ್ಲಾಗಲೀ 'ನಿಮ್ಮ ಅಭಿವೃದ್ಧಿ ಸಾಧನೆಗೆ ಮೆಚ್ಚಿ ಮತ ಹಾಕುತ್ತೇವೆ' ಅನ್ನೋರು ಯಾರೂ ಸಿಗಲ್ಲ. ಏಕೆಂದರೆ ನಾವು ಅಂಥದ್ದೇನನ್ನೂ ಮಾಡಿಯೇ ಇಲ್ಲ. ರಾಯ್ಬರೇಲಿಗೆ ಅಮ್ಮನ ಕೃಪೆಯಿಂದ ಕಾರ್ಖಾನೆಗಳೆಲ್ಲ ಬಂದಿವೆ ಅಂತ ಪ್ರಚಾರದಲ್ಲಿ ಹೇಳುತ್ತೇವೆ. ಅವುಗಳಲ್ಲಿ ಹೆಚ್ಚಿನವು ಬಾಗಿಲು ಮುಚ್ಚಿವೆಯಲ್ಲ ಅಂತ ಯಾರೂ ನಮ್ಮನ್ನು ಪ್ರತಿಯಾಗಿ ಪ್ರಶ್ನಿಸುವುದಿಲ್ಲ. ನಮ್ಮ ಜನದ ಮುಗ್ಧತೆಯೇ ಗೆಲವಿಗೆ ಶ್ರೀರಕ್ಷೆ. ನಾವು ಮಹಾತ್ಮ ಗಾಂಧಿ ವಂಶಸ್ಥರು ಅಂತ ನಂಬಿಕೊಂಡವರು ಇನ್ನೂ ಬಹಳಷ್ಟು ಮಂದಿ ಇದ್ದಾರೆ ಅನ್ನೋದು ಖುಷಿ ಕೊಡುವ ಸಂಗತಿ. 'ಇಂದಿರಮ್ಮ- ರಾಜೀವ್ರನ್ನು ಸೋಲ್ಸೋಕಾಗ್ತದಾ' ಅಂತಲೇ ಇಲ್ಲಿನವರು ನಮಗೆ ಮತ ಕೊಡುತ್ತಾರೆ. ರಾಜಪ್ರಭುತ್ವ, ವಸಾಹತುಶಾಹಿಗಳಿಗೆ ಒಳಪಟ್ಟಿದ್ದ ಭಾರತದ ಚರಿತ್ರೆಗೆ ನಾವು ಥ್ಯಾಂಕ್ಸ್ ಹೇಳುತ್ತೇವೆ. ರಾಜಮನೆತನದಂತೆ ಇರುವವರನ್ನು ಸೋಲಿಸಬಾರದು ಎಂಬ ವಿಚಿತ್ರ ಧೋರಣೆಯೇ ನಮಗೆ ಅಭಯಹಸ್ತ. ಇವರಿಗೆಲ್ಲ ಉದ್ಯೋಗ-ಶಿಕ್ಷಣದ ಮೂಲಕ ತಿಳಿವಳಿಕೆ ಬಂದ ದಿನ ನಮ್ಮನ್ನು ಪ್ರಶ್ನೆ ಮಾಡಿಬಿಡುತ್ತಾರೆ. ಅದಕ್ಕೆ ನಮಗೆ ಅಭಿವೃದ್ಧಿ ಅಂದರೆ ಹೆದರಿಕೆ. ರೈತನ ಮಗನೂ ವಿಮಾನ ಹತ್ತುವಂತಾಗಬೇಕು ಎಂಬ ಕನಸನ್ನಷ್ಟೇ ನಾವು ಮಾರುವುದು. ಅದನ್ನು ತಲುಪುವ ಮಾರ್ಗವನ್ನಲ್ಲ. ಈ ಬಾರಿ ಈ ಮೋದಿ ಅಬ್ಬರದಲ್ಲಿ ರಾಹುಲ್ಗೆ ಅಮೇಠಿಯಲ್ಲಿ ಗೆಲವಿನ ಮಾರ್ಜಿನ್ ಕಡಿಮೆಯಾಗಿಬಿಟ್ಟರೂ ಅದು ಕುಟುಂಬ ಪತನದ ಮುನ್ನುಡಿ. ಅದನ್ನು ತಪ್ಪಿಸುವುದಕ್ಕೆ ನನ್ನ ಪ್ರಯತ್ನ ಜೋರಾಗಿದೆ.
- ಅಶ್ವಹೃದಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

