ಮೋದಿ ಮುಗಿಸಲು ನಡೆದಿದೆಯೇ ತಯಾರಿ?

ಬೆಂಗಳೂರು-ಗುವಾಹಟಿ ಎಕ್ಸಪ್ರೆಸ್ ಸ್ಫೋಟದ ಗುರಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯೇ ಆಗಿದ್ದರು ಎನ್ನುವ ಶಂಕೆ ಈಗ ಹೆಚ್ಚುತ್ತಿದೆ. ಈ ಶಂಕೆ ಸುಳ್ಳಾಗಿರಲಿಕ್ಕಿಲ್ಲ ಎನ್ನುವುದಕ್ಕೆ ಹಲವಾರು ವಿದ್ಯಮಾನಗಳೂ ಸಾಕ್ಷಿ ಹೇಳುತ್ತಿವೆ. ಮೋದಿಯನ್ನು ಮುಗಿಸಿ ಹಾಕುವುದಕ್ಕೆ ಉಗ್ರರ ವಲಯದಲ್ಲಿ ಎಷ್ಟೊಂದು ಒದ್ದಾಟ ನಡೆದಿದೆ ಎನ್ನುವುದರತ್ತ ಬೆಳಕು ಚೆಲ್ಲುತ್ತದೆ "ಓಪನ್" ನಿಯತಕಾಲಿಕದಲ್ಲಿ ಪ್ರಕಟವಾದ ಲೇಖನ. ಅದರ ಮುಖ್ಯಾಂಶ.
ಕಳೆದ ವರ್ಷ ಯಾಸೀನ್ ಭಟ್ಕಳ್, ತನ್ನ ಹಿಟ್ ಲಿಸ್ಟ್ನಲ್ಲಿರುವ ಹತ್ತು ಜನರ ಹೆಸರನ್ನು ಹೊರಗೆಡವಿದ. ಆ ಹತ್ತೂ ಹೆಸರುಗಳು ನರೇಂದ್ರ ಮೋದಿಯೇ ಆಗಿದ್ದವು! ಇಂಡಿಯನ್ ಮುಜಾಹಿದ್ದೀನ್ ಉಗ್ರನ ಪಟ್ಟಿಯಲ್ಲಿ ಬೇರೆ ಯಾವ ಹೆಸರೂ ಇರಲಿಲ್ಲ. "ನಾವು ಮೋದಿಯನ್ನು ಮುಗಿಸೇ ತೀರುತ್ತೇವೆ, ಅದಕ್ಕಾಗಿ ಯಾವ ಬೆಲೆಯಾದರೂ ತೆರಲು ಸಿದ್ಧ" ಎಂದು ಬಿಹಾರದ ಪೊಲೀಸರ ಮುಂದೆ ಯಾಸೀನ್ ಕಳೆದ ಆಗಸ್ಟ್ನಲ್ಲಿ ಗಟ್ಟಿಯಾಗಿಯೇ ಹೇಳಿದ್ದ.
ಭಟ್ಕಳ್ನ ಮಾತನ್ನು ಕೇಳಿ ಕೇಂದ್ರ ಮತ್ತು ನಿತೀಶ್ ಕುಮಾರ್ ಸರ್ಕಾರ ಉಗುರು ಕಚ್ಚುತ್ತಾ ಚಿಂತಿಸಬೇಕಾಗಿತ್ತು. ಆದರೆ ಅವು ನಿಶ್ಚಿಂತವಾಗಿದ್ದವು. ಭಟ್ಕಳ್ ಎಚ್ಚರಿಕೆ ನೀಡಿದ ಕೆಲವೇ ತಿಂಗಳಲ್ಲಿ ಇಂಡಿಯನ್ ಮುಜಾಹಿದ್ದೀನ್ ಪಟ್ನಾದಲ್ಲಿನ ಮೋದಿ ರ್ಯಾಲಿಯನ್ನು ಗುರಿಯಾಗಿಟ್ಟುಕೊಂಡು ಬಾಂಬ್ ದಾಳಿ ನಡೆಸಿತು! ಸಿಕ್ಕಿಬಿದ್ದ ಉಗ್ರವಾದಿಯೊಬ್ಬ, ತಾವು ಕಾನ್ಪುರ್ ಅಲಹಾಬಾದ್ ಸೇರಿದಂತೆ ಭಾರತದಾದ್ಯಂತ ಮೋದಿ ರ್ಯಾಲಿ ನಡೆಸಲಿರುವ ಪ್ರದೇಶಗಳ ಬಗ್ಗೆ ಬಹಳಷ್ಟು ಮಾಹಿತಿ ಕಲೆಹಾಕಿದ್ದಾಗಿಯೂ, ಮೋದಿಯನ್ನು ಮುಗಿಸೇ ತೀರಬೇಕೆಂದು ಪ್ರಯತ್ನಿಸುತ್ತಿರುವುದಾಗಿಯೂ ಪೊಲೀಸರ ಮುಂದೆ ಬಾಯಿಬಿಟ್ಟ.
ಈ ಘಟನೆಯ ನಂತರ ಕೇಂದ್ರ ಸರ್ಕಾರ ಕೊನೆಗೂ ತನ್ನ ಜಡತ್ವದಿಂದ ಹೊರಬಂದಿತು. ಈಗ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯ ಭದ್ರತೆಯನ್ನು ಬಲಿಷ್ಠಗೊಳಿಸಲಾಗಿರುವುದಂತೂ ನಿಜ. ಆದರೆ ಗುಪ್ತಚರ ಮಾಹಿತಿಗಳು "ಮೋದಿ ಜೀವಕ್ಕೆ ನಾವು ಭಾವಿಸಿರುವುದಕ್ಕಿಂತಲೂ ಅತಿ ಹೆಚ್ಚು ಅಪಾಯವಿದೆ" ಎಂದು ಈಗಲೂ ಹೇಳುತ್ತಿವೆ.
ಕೇಂದ್ರ ಭದ್ರತಾ ಸಂಸ್ಥೆಗಳ ಪ್ರಕಾರ ಇಂದು ಭಾರತದ ಮತ್ತು ಹೊರಗಿನ ಇಸ್ಲಾಮಿಕ್ ಶಕ್ತಿಗಳ ನಂಬರ್ ಒನ್ ಟಾರ್ಗೆಟ್ ಮೋದಿಯೇ. "ಮೋದಿಗೆ ಕೇವಲ ಇಂಡಿಯನ್ ಮುಜಾಹಿದ್ದಿನ್ ಅಷ್ಟೇ ಅಲ್ಲದೆ, ಇಂಥ ಸಂಘಟನೆಗಳೊಂದಿಗೆ ಕೈಜೋಡಿಸುವ ಲಷ್ಕರ್- ಎ-ತಯ್ಬಾ, ಜೈಶ್ ಎ ಮೊಹಮದ್, ಹರ್ಕತ್ ಉಲ್ ಮುಜಾಹಿದ್ದೀನ್, ಹರ್ಕತ್ ಉಲ್ ಜಿಹಾದ್ ಇಸ್ಲಾಮಿ, ತೆಹ್ರೀಕ್ ಎ ತಾಲಿಬಾನ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಳಿಂದಲೂ ಭಾರೀ ಅಪಾಯವಿದೆ" ಎಂದು ಸರ್ಕಾರಿ ದಾಖಲೆಯೊಂದು ಹೇಳುತ್ತಿದೆ.
ಈ ದಾಖಲೆಯನ್ನು ಸಮರ್ಥಿಸುವಂತಿರುವ ಗುಪ್ತಚರ ಮಾಹಿತಿಗಳು, ನರೇಂದ್ರ ಮೋದಿಯನ್ನು ಮುಗಿಸಲು ನಡೆಯುತ್ತಿರುವ ಪ್ರಯತ್ನಗಳ ಮೇಲೆ ಬೆಳಕು ಚೆಲ್ಲುತ್ತಿವೆ:
* ಪಾಕಿಸ್ತಾನದ ಬಾಹ್ಯ ಗುಪ್ತಚರ ದಳದ ಅಧಿಕಾರಿಗಳು(ಐಎಸ್ಐ) 26 ಅಕ್ಟೋಬರ್ 2013ರಂದು ಲಾಹೋರ್ನಲ್ಲಿನ, ಡಿಎಚ್ಎ ಏರಿಯಾದಲ್ಲಿರುವ ಭಾರತೀಯ ಸಿಖ್ ತೀವ್ರಗಾಮಿಗಳೊಂದಿಗೆ ಮಾತುಕತೆ ನಡೆಸಿವೆ. ಲಖಬೀರ್ ಸಿಂಗ್ ರೋಡೆ ಮತ್ತು ಜಗ್ತರ್ ಸಿಂಗ್ತಾರಾ ಅವರ ಜೊತೆ ಚರ್ಚಿಸಿದ ಐಎಸ್ಐ, ಮೋದಿ ರ್ಯಾಲಿಗಳಲ್ಲಿ ವಿಧ್ವಂಸವೆಸಗುವುದಕ್ಕೆ ಸ್ಫೋಟಕಗಳನ್ನು ಭಾರತದೊಳಗೆ ಸಾಗಿಸಲು ಈ ಸಿಖ್ ಮೂಲಭೂತವಾದಿಗಳನ್ನು ಹುರಿದುಂಬಿಸಿದೆ.
* ನಿಷೇಧಿತ ಸಿಮಿ ಸಂಘಟನೆ ಕೆಲವು ತಿಂಗಳ ಹಿಂದೆ ನೆಪಾಳದ ಬಿರಾಟ್ನಗರದಲ್ಲಿನ ಇಸ್ಲಾಮಿಕ್ ಸಂಘದ ಕಚೇರಿಯಲ್ಲಿ ಗುಪ್ತ ಚರ್ಚೆಯೊಂದನ್ನು ನಡೆಸಿತ್ತು. ಸಿಮಿಯ ಇಸ್ಲಾಮಿಕ್ ಮುಖಂಡರು "ನಮಗಿಂದು ಮೋದಿಯನ್ನು ಕೊಂದುಹಾಕಲು ಸಿದ್ಧರಿರುವ ನಿಷ್ಠಾವಂತ ಯುವಕರು ಅಗತ್ಯವಿದೆ" ಎಂದು ಹೇಳಿದ್ದರು.
* ದಾವೂದ್ ಇಬ್ರಾಹಿಮ್ಗಾಗಿ ಕೆಲಸ ಮಾಡುವ ಮುನ್ನಾ ಜಹಾಂಗೀರ್ ಎನ್ನುವ ಡ್ರಗ್ ಮಾಫಿಯಾ ಇತ್ತೀಚೆಗೆ ಥಾಯ್ಲ್ಯಾಂಡ್ನಲ್ಲಿ ಡ್ರಗ್ ಡೀಲಿಂಗ್ ಮಾಡುವಾಗ ಸಿಕ್ಕಿಬಿದ್ದಿದ್ದಾನೆ. ತಾನು ಜೈಲಿನಿಂದ ಹೊರಬರುತ್ತಿದ್ದಂತೆಯೇ ಮೋದಿಯನ್ನು ಮುಗಿಸಲಿದ್ದೇನೆ ಎಂದು ಪಾಕಿಸ್ತಾನದಲ್ಲಿನ ತನ್ನ ಸಹಚರನಿಗೆ ತಿಳಿಸಿದ್ದಾನೆ.
* ಒಂದು ವೇಳೆ ಮೋದಿ ಪ್ರಧಾನಿಯಾದರೆ ಕೂಡಲೇ ಅವರನ್ನು ಕೊಲ್ಲಲಾಗುತ್ತದೆ ಎಂದು ಜೈಶ್ ಎ ಮೊಹಮ್ಮದ್ನ ಮೌಲಾನಾ ಮಸೂದ್ ಅಝರ್ ಘೋಷಿಸಿದ್ದಾನೆ.
* ಕರಾಚಿಯಲ್ಲಿರುವ ಇಂಡಿಯನ್ ಮುಜಾಹಿದ್ದೀನ್ ನಾಯಕರು, ಮೋದಿ ಮೇಲೆ ಫಿದಾಯಿನ್ ದಾಳಿ ನಡೆಸಲು ತರಬೇತಿ ಪಡೆದ ಜಿಹಾದಿಗಳನ್ನು ಭಾರತಕ್ಕೆ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ.
* ಢಾಕಾದಿಂದ ಹಿಡಿದು ತರಲಾಗಿರುವ ಇಂಡಿಯನ್ ಮುಜಾಹಿದ್ದೀನ್ನ ಮತ್ತೊಬ್ಬ ಉಗ್ರ ಝಿಯಾ ಉರ್ ರೆಹಮಾನ್, "ಭಟ್ಕಳ್ ಮತ್ತು ಅಸಾದುಲ್ಲಾ ಅಖ್ತರ್" ಮೋದಿ ಮೇಲೆ ದಾಳಿ ಮಾಡಲು ತಂತ್ರ ರಚಿಸಿದ್ದರು ಎಂದು ವಿಚಾರಣೆಯ ವೇಳೆ ಬಾಯಿಬಿಟ್ಟಿದ್ದಾನೆ.
***
ಜಿಹಾದ್ ವಾಚ್ ಎನ್ನುವ ಜಾಲತಾಣದ ಸ್ಥಾಪಕ ಮತ್ತು ಪ್ರಪಂಚದ ಅನೇಕ ಜಿಹಾದಿ ಚಟುವಟಿಕೆಗಳನ್ನು ಬೆತ್ತಲೆಗೊಳಿಳಿಸಿದರಾಬರ್ಟ್ ಸ್ಪೆನ್ಸರ್, ಓಪನ್ ಮ್ಯಾಗಜೀನ್ನೊಂದಿಗೆ ಮಾತನಾಡುತ್ತಾ "ಸರಿಯಾಗಿ ವಿಚಾರಣೆ ನಡೆಸಿದ್ದರೆ ಮೋದಿ ಮೇಲಿನ ಸಂಭಾವ್ಯ ದಾಳಿಗಳ ಬಗ್ಗೆ ಭಟ್ಕಳ್ನಿಂದ ಇನ್ನಷ್ಟು ಮಾಹಿತಿ ಪಡೆಯಬಹುದು" ಎಂದಿದ್ದಾರೆ.
ಆದರೆ ದುರ್ದೈವವಶಾತ್ ಭಟ್ಕಳ್ನ ಬಾಯಿಬಿಡಿಸುವುದು ಕಷ್ಟವಾಗುತ್ತಲೇ ಸಾಗುತ್ತಿದೆ. ಇದಕ್ಕೆ ಕಾರಣವೂ ಇಲ್ಲವೆಂದಲ್ಲ. ಒಬ್ಬ ಉಗ್ರವಾದಿ ಸಿಕ್ಕಿಬಿದ್ದಾಗ, ಮೊದಲ ಎರಡು ಮೂರು ದಿನಗಳು ಆತ ಎಷ್ಟು ಭಯಗೊಂಡಿರುತ್ತಾನೆಂದರೆ, ಬಹಳಷ್ಟು ಮಾಹಿತಿಯನ್ನು ಆ ಸಮಯದಲ್ಲೇ ಬಾಯಿಬಿಡುತ್ತಾನೆ. ಆದರೆ ಒಮ್ಮೆ ಕೋರ್ಟಿನಲ್ಲಿ ಆತನ ಕೇಸು ಹೋಯಿತೆಂದರೆ ಇಲ್ಲದ ಧೈರ್ಯ ಆತನಿಗೆ ಬಂದುಬಿಡುತ್ತದೆ.
ಗುಪ್ತಚರ ದಳದ ಅಧಿಕಾರಿಗಳು ಮೋತಿಹಾರಿ ಪೊಲೀಸ್ ಅಧಿಕಾರಿಯೊಂದಿಗೆ ನೆಪಾಳಕ್ಕೆ ತೆರಳಿ ಭಟ್ಕಳ್ನನ್ನು ಭಾರತಕ್ಕೆ ಹಿಡಿದು ತಂದು, ಭಟ್ಕಳ್ನನ್ನು ಕೋರ್ಟಿಗೆ ಕರೆದೊಯ್ಯುವ ಮುನ್ನ ಎಷ್ಟು ಸಾಧ್ಯವಾಗುತ್ತದೋ ಅಷ್ಟು ಮಾಹಿತಿ ಹೊರಗೆಳೆಯಬೇಕೆಂದು ನಿರ್ಧರಿಸಿದ್ದರು. ಆದರೆ ಭಟ್ಕಳ್ನನ್ನು ಬಂಧಿಸಲೇಬೇಡಿ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಹಾರ ಪೊಲೀಸರಿಗೆ ಆಜ್ಞೆ ಮಾಡಿಬಿಟ್ಟರು! ಅನ್ಯ ಮಾರ್ಗವಿಲ್ಲದೇ, ಗುಪ್ತಚರ ದಳದ ಅಧಿಕಾರಿಗಳು ಪಶ್ಚಿಮ ಬಂಗಾಳದಿಂದ ರಾಷ್ಟ್ರೀಯ ತನಿಖಾ ದಳವನ್ನು ಕರೆಸಿ ಭಟ್ಕಳ್ನನ್ನು ಬಂಧಿಸುವಂತೆ ಮಾಡಿದರು. ಎನ್ಐಎದ ಅಧಿಕಾರಿಯೊಬ್ಬರಿಂದ ಈ ಸುದ್ದಿ ಮಾಧ್ಯಮಗಳಿಗೆ ದೊರೆಕಿಬಿಟ್ಟಿತು. ಮಾಧ್ಯಮಗಳಲ್ಲಿ ಭಟ್ಕಳ್ನ ಬಂಧನದ ಸುದ್ದಿ ಬರುತ್ತಿದ್ದಂತೆಯೇ ಭಟ್ಕಳ್ನನ್ನು ಮ್ಯಾಜಿಸ್ಟ್ರೇಟರ ಎದುರು ಕರೆದೊಯ್ಯಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು! ಈಗ ಆತನನ್ನು ಪೊಲೀಸರು ಪ್ರಶ್ನಿಸಲು ಹೋದಾಗಲೆಲ್ಲ, "ನಾನು ನಮಾಜು ಮಾಡಬೇಕು", "ನನಗೆ ಹುಷಾರಿಲ್ಲ" ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾನೆ.
ಪಾಟ್ನಾ ರ್ಯಾಲಿಯಲ್ಲಿ ಇಂಡಿಯನ್ ಮುಜಾಹಿದ್ದೀನ್ ಬಾಂಬ್ ಸಿಡಿಸುವವರೆಗೂ ನಿತೀಶ್ ಕುಮಾರ್ ಮತ್ತು ಕೇಂದ್ರ ಸರ್ಕಾರಕ್ಕೆ ಎಚ್ಚರವಾಗಲೇ ಇಲ್ಲ. ಈಗ ಕೇಂದ್ರ ಸರ್ಕಾರ ಮೋದಿಯವರಿಗೆ ಸ್ಪೆಷಲ್ ಪ್ರೊಟೆಕ್ಷನ್ ಟೀಂನಿಂದ ಭದ್ರತೆ ಒದಗಿಸಿದೆ. ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಮತ್ತು ರಾಷ್ಟ್ರಪತಿಗಳು ಭೇಟಿ ಕೊಡುವ ಸ್ಥಳಗಳಲ್ಲಿ ಪಾಲಿಸಲಾಗುವ ಎಎಸ್ಎಲ್(ಅಡ್ವಾನ್ಸ್ ಸೆಕ್ಯುಟಿರಿ ಲಯೇಶನ್) ಎನ್ನುವ ಭದ್ರತಾ ನಿಯಮಾವಳಿಯನ್ನು ಈಗ ಮೋದಿಯವರ ರ್ಯಾಲಿಗಳಲ್ಲೂ ಪಾಲಿಸಲಾಗುತ್ತಿದೆ.
ಇದೇನೇ ಇದ್ದರೂ ಬಾಂಬ್ ಸಿಡಿದ ಮೇಲೆಯೇ ಬುದ್ಧಿಕಲಿಯುವ ಪರಿಪಾಠ ಭಾರತ ಬೆಳೆಸಿಕೊಂಡಿದೆ ಎನ್ನುವುದಂತೂ ಸತ್ಯ. ಮಹಾತ್ಮಾ ಗಾಂಧಿಯಿಂದ ಹಿಡಿದು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರೆಗೆ ಇಂಥ ಘಟನೆಗಳನ್ನು ನಾವು ನೋಡಿದ್ದೇವೆ. ಎಲ್ಟಿಟಿಇಯಿಂದ ದಾಳಿಯ ಸಾಧ್ಯತೆಯಿದೆ ಎನ್ನುವ ಗುಪ್ತಚರ ದಳದ ಮಾಹಿತಿ ಮತ್ತು ವಿಶೇಷ ರಕ್ಷಣಾ ತಂಡದ ಎಚ್ಚರಿಕೆಯನ್ನೆಲ್ಲ ನಿರ್ಲಕ್ಷಿಸಿದ ರಾಜೀವ್ ಗಾಂಧಿ ಶ್ರೀಪೆಂರಬದೂರಿನಲ್ಲಿ ಬಾಂಬ್ ದಾಳಿಗೆ ಬಲಿಯಾದರು. ಇದರಂತೆಯೇ ಬುಲೆಟ್ಪ್ರೂಫ್ ಮೇಲಂಗಿ ಧರಿಸದೇ ಸಾವಿಗೀಡಾದ ಇಂದಿರಾ ಗಾಂಧಿಯವರ ಉದಾಹರಣೆಯೂ ಇದೆ.
"ವಿಐಪಿಗಳು ಕೆಲವೊಮ್ಮೆ ಭದ್ರತಾ ಎಚ್ಚರಿಕೆಗಳನ್ನು ಕಡೆಗಣಿಸಿ ತೊಂದರೆಗಳನ್ನು ಆಹ್ವಾನಿಸಿಕೊಳ್ಳುತ್ತಾರೆ ಎನ್ನುವುದು ನಿಜ. ಹಾಗಂತ ಅವರ ರಕ್ಷಣೆಯ ಜವಾಬ್ದಾರಿಯೇನೂ ಆಡಳಿತದಿಂದ ಸರಿದುಹೋಗುವುದಿಲ್ಲ. ಅವರನ್ನು ಸರ್ಕಾರ ಮತ್ತು ಅಧಿಕಾರ ವರ್ಗ ರಕ್ಷಿಸುವ ಜವಾಬ್ದಾರಿ ಹೊರಲೇಬೇಕಾಗುತ್ತದೆ" ಎಂದು 'ರಾ'ನ ಮಾಜಿ ಮುಖ್ಯಸ್ಥ, ರಕ್ಷಣಾ ಪರಿಣತ ದಿ. ಬಿ. ರಾಮನ್ ಹೇಳಿದ್ದರು.
ಅನೇಕ ಅಂತಾರಾಷ್ಟ್ರೀಯ ಪರಿಣತರು ಮೋದಿ ಮೇಲೆ ಮುಂಬರುವ ವರ್ಷಗಳಲ್ಲಿ ಇಸ್ಲಾಮಿಕ್ ದಾಳಿಗಳಾಗುವ ಸಾಧ್ಯತೆಗಳು ನಿಸ್ಸಂಶಯವಾಗಿಯೂ ಹೆಚ್ಚಲಿವೆ ಎನ್ನುತ್ತಿದ್ದಾರೆ. ಮಿಲಿಟರಿ ಇತಿಹಾಸಕಾರ ಎಡ್ವರ್ಡ್ ಲುಟ್ವಾಕ್ ಅವರ ಪ್ರಕಾರ, "ಪಾಕಿಸ್ತಾನ ತನ್ನ ತಲೆಯನ್ನು ಉಪಯೋಗಿಸಿದರೆ, ದಾರುಲ್ ಉಲ್ ಇಸ್ಲಾಮ್, ಐಎಮ್ನಂಥ ಸಂಘಟನೆಗಳು ಭಾರತದಲ್ಲಿನ ಜನರನ್ನು ಉಪಯೋಗಿಸಿ ಮೋದಿಯ ಮೇಲಿನ ದಾಳಿಯ ಪ್ರಯತ್ನಗಳನ್ನು ಇನ್ನಷ್ಟು ತೀಕ್ಷ್ಣ ಗೊಳಿಸಲಿವೆ" ಎಂದು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


